Pages

Sunday, October 17, 2010

ವೇದಪಾಠ ಪೀಠಿಕೆ

ನಿಮ್ಮೆಲ್ಲರಿಗೂ ವಿಜಯ ದಶಮಿಯ ಶುಭಾಶಯಗಳು.
ನಿಮ್ಮೆಲ್ಲರಿಗೂ ತಿಳಿದಿರುವಂತೆ  ವೇದಸುಧೆಯು ಮನರಂಜನೆಯ ತಾಣವೇನೂ ಅಲ್ಲ. ಆದರೂ ಕಳೆದ ಎಂಟು ತಿಂಗಳುಗಳಲ್ಲಿ ಇಲ್ಲಿ ಇಣುಕಿರುವವರ ಸಂಖ್ಯೆ ಹದಿಮೂರು ಸಹಸ್ರವನ್ನು ದಾಟಿದೆ.  ವೇದಸುಧೆಗೆ ನಿತ್ಯವೂ ಹಲವು ಭಾರಿ ಇಣುಕುವವರ ಸಂಖ್ಯೆಯೂ ಹೆಚ್ಚು ಇರುವುದರಿಂದ  ಇಲ್ಲಿ ಬಂದು ಹೋಗುವವರ ನಿಖರ ಸಂಖ್ಯೆಯು ಗೊತ್ತಾಗುವುದಿಲ್ಲ. ಎಲ್ಲಾ ತಾಣಗಳಲ್ಲೂ ಅಷ್ಟೆ. ಅಂತೂ ವೇದಸುಧೆಯು ಹಲವರಿಗೆ ಪ್ರಿಯವಾಗಿದೆ ಎಂಬ ಸಮಾಧಾನವಂತೂ ಅದನ್ನು ಮುಂದುವರೆಸಲು ಪ್ರೇರಕವಾಗಿದೆ.ಕಳೆದ ನಾಲ್ಕು ದಿನಗಳಿಂದ ವೇದಾಧ್ಯಾಯೀ ಸುಧಾಕರ ಶರ್ಮರು ಹಾಸನದಲ್ಲಿ ನಡೆಸಿದ ಪ್ರವಚನವು ನಮ್ಮೆಲ್ಲರಿಗೂ ವೇದಪಾಠದ ತರಗತಿಯಂತೆಯೇ ಇತ್ತು. ಸುಮಾರು ಅರವತ್ತು ಜನ  ಜಿಜ್ಞಾಸುಗಳು ನಾಲ್ಕೂ ದಿನಗಳು ಸಂಜೆ ೬.೦೦ ರಿಂದ ೮.೩೦ ರವರಗೆ  ನಿಶ್ಶಬ್ಧವಾಗಿ ಶರ್ಮರ ಪಾಠವನ್ನು ಆಲಿಸುತ್ತಿದ ಪರಿಯು  ಕಾರ್ಯಕ್ರಮವನ್ನು ಯೋಜಿಸಿದವರಿಗೆ ಸಾರ್ಥಕವಾಯ್ತೆಂಬ ಭಾವನೆಗೆ ಕಾರಣವಾಯ್ತು.ನಾಲ್ಕೂ ದಿನಗಳ ಪಾಠವನ್ನು ಆಡಿಯೋ/ವೀಡಿಯೋ ರೆಕಾರ್ಡ್ ಮಾಡಲಾಗಿದೆ. ಸುಮಾರು ಎಂಟು ಗಂಟೆಗಳ  ಈ ಪಾಠವನ್ನು ಹಲವು ಕಂತುಗಳಲ್ಲಿ ವೇದಸುಧೆಯಲ್ಲಿ ಪ್ರಕಟಿಸ ಬೇಕೆಂಬ ಉದ್ಧೇಶದಿಂದಲೇ ರೆಕಾರ್ಡ್ ಮಾಡಲಾಗಿದೆ. ಇಲ್ಲಿ ಒಂದು ವಿಚಾರವನ್ನು ಬಹಳ ಗಂಭೀರವಾಗಿ ಗಮನಿಸಬೇಕಾಗುತ್ತದೆ. ವೇದಪಾಠವೆಂದರೆ  ವೇದಮ೦ತ್ರಗಳನ್ನು ಕೇವಲ ಪಠಿಸಲು ಕಲಿಯುವ ಕ್ರಮವೇ?  ಖಂಡಿತವಾಗಲೂ ಶರ್ಮರ ವೇದಪಾಠವು ಹಾಗಿರಲಿಲ್ಲ. ಕೇವಲ ಎರಡು  ಮಂತ್ರಗಳನ್ನು ಅರ್ಥ ಮಾಡಿಸಲು ನಾಲ್ಕು ದಿನಗಳ ಪಾಠವನ್ನು ಮಾಡಿದ್ದಾರೆಂದರೆ ಅದರ ಆಳ -ಅಗಲವು ಅರ್ಥವಾಗಿರಬಹುದು. ಈ ಪಾಠವನ್ನು ಹತ್ತು ಹಲವು ಭಾರಿ ಪುನ:ಸ್ಮರಣೆ ಮಾಡಿಕೊಂಡಾಗ   ಶರ್ಮರು ಮಾಡಿದ ಪಾಠದಲ್ಲಿ ಅಲ್ಪ-ಸ್ವಲ್ಪ ವಾದರೂ ನಮಲ್ಲಿ ಉಳಿದು ನಮ್ಮ ಜೀವನದ  ಸಾರ್ಥಕತೆಗೆ  ನೆರವಾಗಬಲ್ಲದೆಂಬ ಭರವಸೆಯು ಪಾಠವನ್ನು ಕೇಳುವಾಗಲೇ ಮೂಡಿದೆ. ಈ ಎಂಟುಗಂಟೆಯ ಪಾಠವನ್ನು  ೩-೪ ತಿಂಗಳು ಮತ್ತೆ ಮತ್ತೆ ಓದಿ, ಆಡಿಯೋ ಕೇಳಿ ನಂತರ ವೇದಸುಧೆಯಲ್ಲಿ ಪ್ರಕಟಿಸಬೇಕೆಂಬ ಉದ್ಧೇಶವಿತ್ತು. ಆದರೆ ಇಂದು ವಿಜಯ ದಶಮಿ. ಇಂದೇ ಶರ್ಮರು ಮಾಡಿದ ವೇದಪಾಠವು ನಮ್ಮ ವೇದಸುಧೆಯ ಬಳಗಕ್ಕೂ ತಲುಪಲೆಂಬ  ಉದ್ಧೇಶದಿಂದ ಪಾಠದ ಮೊದಲ ಕಂತಿನ ಶುಭಾರಂಭ ಇಂದಿನಿಂದಲೇ ಆಗಿದೆ. ಈಗಾಗಲೇ ವೇದೋಕ್ತ ಜೀವನ ಪಥ ಉಪನ್ಯಾಸ ಮಾಲಿಕೆಯ ಹತ್ತು ಕಂತುಗಳು ಪ್ರಕಟವಾಗಿವೆ. ಪ್ರಕಟಿಸಬೇಕಾದುದು ಇನ್ನೂ ಬಾಕಿ ಇದೆ. ಅಷ್ಟರಲ್ಲಿ   ವೇದವನ್ನು ನೇರವಾಗಿ ಕಲಿಯಲು ಇಂದಿನಿಂದ ಪಾಠದ ಆರಂಭವಾಗಿದೆ. ಇಲ್ಲೊಂದು ಸೂಚನೆಯನ್ನು ಗಮನಿಸುವುದು ಸೂಕ್ತ. ವೇದವಿವರಣೆಯ ಪಾಠದ ಎಲ್ಲಾ ಕಂತುಗಳನ್ನೂ ಹಲವು ಭಾರಿ ಮತ್ತೆ ಮತ್ತೆ ಕೇಳಿದಾಗ  ಅರ್ಥವಾಗುತ್ತಾ ಹೋಗುತ್ತದೆ. ಸಂದೇಹ ಉಂಟಾದರೆ  ಪ್ರತಿಕ್ರಿಯೆ ಕಾಲಮ್ ನಲ್ಲಿ ನಿಮ್ಮ ಸಂದೇಹವನ್ನು ತಿಳಿಸಿ. ಅದಕ್ಕೆ ಶರ್ಮರು ಉತ್ತರಿಸುತ್ತಾರೆ. ಮುಂದೊಮ್ಮೆ  ಪಾಠದ ಬರಹ ರೂಪವನ್ನೂ ಪ್ರಕಟಿಸಲಾಗುವುದು.ಎಂದಿನಂತೆ ಸಹಕಾರವನ್ನು ಕೋರುತ್ತಾ....
-ಹರಿಹರಪುರ ಶ್ರೀಧರ್
ಸಂಪಾದಕ