Pages

Friday, February 24, 2012

ಸ್ವಂತ ತಾಣ


ವೇದಸುಧೆಯ ಅಭಿಮಾನಿಗಳಲ್ಲಿ ವಿನಂತಿ. ಈಗಾಗಲೇ ವೇದಸುಧೆಯ ಮತ್ತೊಂದು ಸ್ವಂತ ತಾಣ www.vedasudhe.com ಆರಂಭವಾಗಿರುವುದು ತಮಗೆಲ್ಲರಿಗೂ ತಿಳಿದಿರುವ ವಿಷಯವೇ ಆಗಿದೆ. "ಎಲ್ಲರಿಗಾಗಿವೇದ" ಎಂಬ ಉದ್ಧೇಶದಿಂದ ಆರಂಭವಾದ ಈ ಬ್ಲಾಗಿನಲ್ಲಿ "ಶರ್ಮರ ಪುಟದಲ್ಲಿ" ಹಲವು ಉಪನ್ಯಾಸಗಳ ಆಡಿಯೋ ಸಂಗ್ರಹವಿದೆ. ಈ ವರಗೆ ಹೊರಗಿನ ತಾಣಗಳಲ್ಲಿ ಉಪನ್ಯಾಸಗನ್ನು ಅಪ್ಲೋಡ್ ಮಾಡಿ ವೇದಸುಧೆಯಲ್ಲಿ ಪ್ಲಯರ್ ನ್ನು ಎಂಬೆಡ್ ಮಾಡಲಾಗುತ್ತಿತ್ತು. ಆದರೆ ಈಗ ಸ್ವಂತ ತಾಣದಲ್ಲಿಯೇ ಆಡಿಯೋ ಅಪ್ ಲೊಡ್ ಮಾಡಲು ಅನುಕೂಲವಿರುವುದರಿಂದ ಇನ್ನುಮುಂದೆ www.vedasudhe.com ತಾಣದಲ್ಲಿ ವೇದಕ್ಕೆ ಸಂಬಂಧಿಸಿದ ಮತ್ತು ಪೂರಕವಾದ ಉಪನ್ಯಾಸಗಳನ್ನು ಹಾಗೂ ಮಂತ್ರಗಳನ್ನು ಯಾವ ತಾಣಗಳನ್ನು ಅವಲಂಭಿಸದೆ ನೇರವಾಗಿ ಪ್ರಕಟಿಸಲಾಗುವುದು. ಈಗಾಗಲೇ ಶ್ರೀ ಸುಧಾಕರ ಶರ್ಮರ "ಎಲ್ಲರಿಗಾಗಿ ವೇದ" ಉಪನ್ಯಾಸದ 13 ಕಂತುಗಳು ನಿತ್ಯವೂ ಪ್ರಕಟವಾಗಿದ್ದು ಇನ್ನೂ ಏಳು ಕಂತುಗಳು ನಿತ್ಯವೂ ಪ್ರಕಗೊಳ್ಲಲಿವೆ. ನಂತರ ನಿತ್ಯ ಪಠಿಸಲು ಅನುಕೂಲವಾಗುವ  ವೇದಮಂತ್ರಗಳ ಆಡಿಯೋ ಕ್ಲಿಪ್ ಗಳನ್ನು ಪ್ರಕಟಿಸಲಾಗುವುದು. ಈಗಾಗಲೇ ಪ್ರಕಟಿಸಲಾಗಿರುವ ಹಾಗೂ ಎಂದಿಗೂ ನಿತ್ಯನೂತನವಾಗಿರುವ ವೇದಕ್ಕೆ ಸಂಬಂಧಿಸಿದ ಉಪನ್ಯಾಸಗಳನ್ನು ಈ ಬ್ಲಾಗಿನ "ಶರ್ಮರಪುಟ" ದಲ್ಲಿ ಕೇಳಬಹುದೆಂದು ತಿಳಿಸುತ್ತಾ ಇನ್ನು ಮುಂದೆ ಈ ಬ್ಲಾಗಿನಲ್ಲಿ ನಿಯಮಿತವಾಗಿ ಪ್ರಕಟವಾಗುತ್ತಿರುವ ಕವಿನಾಗರಾಜರ "ವೇದಪಥ" ರವಿ ತಿರುಮಲೈ ರವರ "ಮಂಕುತಿಮ್ಮನ ಕಗ್ಗದ ಸಾರ" ಮತ್ತು ಸುಬ್ರಹ್ಮಣ್ಯರ "ವಿವೇಕಚೂಡಾಮಣಿ " ಮುಂತಾದ ಹಲವು ಉಪಯುಕ್ತ ಪುಟಗಳು ಮುಂದುವರೆಯುತ್ತದೆಂಬುದನ್ನು ನಿಮ್ಮ ಗಮನಕ್ಕೆ ತರಬಯಸುತ್ತೇನೆ.
-ಹರಿಹರಪುರಶ್ರೀಧರ್
ಸಂಪಾದಕ

ಮಂಕು ತಿಮ್ಮನ ಕಗ್ಗ - ರಸಧಾರೆ





   ಕಗ್ಗ-9


ಏನು ಭೈರವಲೀಲೆಯೀ ವಿಶ್ವಭ್ರಮಣೆ! 

ಏನು ಭೂತಗ್ರಾಮನರ್ತನೋನ್ಮಾದ ! I

ಏನಗ್ನಿ ಗೋಳಗಳು ! ಏನಂತರಾಳಗಳು !  

ಏನು ವಿಸ್ಮಯ ಸೃಷ್ಟಿ! - ಮಂಕುತಿಮ್ಮ II  


ಭೈರವಲೀಲೆಯೀ = ಭೈರವ+ ಲೀಲೆಯು+ಈ , ಭೂತಗ್ರಾಮನರ್ತನೋನ್ಮಾದ = ಭೂತ+ಗ್ರಾಮ+ನರ್ತನ+ಉನ್ಮಾದ, ಏನಗ್ನಿ= ಏನು+ ಅಗ್ನಿ

ಬೈರವ= ಪರಮ ಶಿವ, ರುದ್ರ, ಉನ್ಮಾದ = ಉದ್ವೇಗ, ಗೋಳ = ಉಂಡೆ, ವಿಸ್ಮಯ= ಆಶ್ಚರ್ಯ. 


ಏನಿದು ಭೈರವ ಲೀಲೆ. ಏನಿದು ಇಡೀ ವಿಶ್ವದ ಸುತ್ತಾಟ. ಏನಿದು ಪಂಚ ಮಹಾ ಭೂತಗಳ ಮತ್ತು ಆ ಭೂತಗಳ ವಾಸಸ್ಥಳವಾದ ಆ ಮಹಾ ಚೈತನ್ಯ ಮತ್ತು ಮತ್ತು ಆ ಚೈತನ್ಯದ ಉನ್ಮಾದಭರಿತ ನರ್ತನ.

ಏನಿದು ಅಗ್ನಿ ಗೋಳಗಳು ಈ ಸೃಷ್ಟಿಯ ಅಂತರಾಳ. ಆಹಾ ಎಂತಹ ಈ ವಿಸ್ಮಯ ಈ ಸೃಷ್ಟಿ. ಇದು ಈ ಕಗ್ಗದ ಅಂತರ್ಯದ ಭಾವ. 


ರುದ್ರ ತಾಂಡವ ಎನ್ನುವ ಅರ್ಥದಲ್ಲಿ ಈ ವಿಶ್ವದ ಸೃಷ್ಟಿಯನ್ನು ವಿಸ್ಮಯವೆಂದು ಕರೆಯುತ್ತಾರೆ ಶ್ರೀ ಗುಂಡಪ್ಪನವರು. ಹೌದು ಇದು ವಿಸ್ಮಯವೇ ಸರಿ. ಆ ಹಿಂದೆಯೇ ವಿವರಿಸಿದಂತೆ ಸೌರವ್ಯೂಹಗಳು, ಕ್ಷೀರಪಥಗಳು, ಆಕಾಶಗಂಗೆಗಳು ಮತ್ತು ಇಡೀ ವಿಶ್ವ. ಈ ವಿಶ್ವದ ಅಂತರ್ಯದಲ್ಲಿ ನಡೆಯುವ ಅಗ್ನಿಸ್ಪೋಟಗಳು, ಹೊಸ ಹೊಸ ನಕ್ಷತ್ರಗಳ,  ಗ್ರಹಗಳ ಹುಟ್ಟು, ಸಿಡಿತ, ಒಂದರೊಳಗೆ ಒಂದು ವಿಲೀನವಾಗುವ ಪ್ರಕ್ರಿಯೆ, ಇವೆಲ್ಲವನ್ನೂ  ನಾವು ಕಾಣುವುದಿರಲಿ, ಊಹಿಸಲೂ ಅಸಾಧ್ಯವಾದ ರೂಪ. ಅದನ್ನು ಪರಶಿವನ ಅಥವಾ ನಟರಾಜನ ರುದ್ರ ತಾಂಡವಕ್ಕೆ ಹೋಲಿಸುತ್ತಾರೆ. ಈ ಸೃಷ್ಟಿ, ಸೃಷ್ಟಿಯಲ್ಲಿನ ಪಂಚ ಮಹಾಭೂತಗಳು ಮತ್ತು ಅವುಗಳ ಕಾರ್ಯ ವೈಖರಿಯಾವುದೂ ಸಹ, ಊಹಾತೀತ. ಇದೊಂದು ಯಾರಿಗೂ ಅರ್ಥವಾಗದ ವಿಸ್ಮಯವೆನ್ನುತ್ತಾರೆ ಮಾನ್ಯ ಗುಂಡಪ್ಪನವರು. 


152 ದಶಲಕ್ಷ ಕಿಲೋ ಮೀಟರ್ ದೂರದಲ್ಲಿರುವ ನಮ್ಮ ಸೌರಮಂಡಲದ ಸೂರ್ಯನಿಂದ ಹೊರಟ ಬೆಳಕು ಭೂಮಿಯನ್ನು ತಲುಪಲು ಬೇಕಾಗುವ ಸಮಯ 8 .28 ನಿಮಿಷಗಳು. ಸೂರ್ಯ ಒಂದು ನಕ್ಷತ್ರ. ನಮಗೆ ಆಕಾಶದಲ್ಲಿ ಕಾಣುವ ಅನ್ಯ ಅನೇಕ ನಕ್ಷತ್ರಗಳಂತೆ. 152 ದಶಲಕ್ಷ ಕಿಲೋ ಮೀಟರ್ ದೂರದಲ್ಲಿದ್ದರೂ ಇಷ್ಟು ಹತ್ತಿರದಲ್ಲಿ ಕಂಡಂತೆ ಕಂಡು ಇಷ್ಟು ಬೆಳಕನ್ನು ಮತ್ತು ಶಾಖವನ್ನು ನೀಡುತ್ತಾನೆ ಈ ನಮ್ಮ ಸೂರ್ಯನೆಂಬ ನಕ್ಷತ್ರ. ಬೇಸಿಗೆ ಕಾಲದಲ್ಲಿ ಅವನ ಶಾಕವನ್ನು ತಡೆಯಲಾರದೆ ಸಾವನ್ನಪ್ಪುವ ಜನರೆಷ್ಟೋ.! ಇದನ್ನೇ ಅಗ್ನಿ ಗೋಳವೆಂದರು ಶ್ರೀ ಗುಂಡಪ್ಪನವರು. 


ವಾಚಕರೆ ಯೋಚಿಸಿ, ಇಷ್ಟು ಹತ್ತಿರ ಕಾಣುವ ನಮ್ಮ ಸೂರ್ಯನೇ 152 ದಶಲಕ್ಷ ಕಿಲೋ ಮೀಟರ್ ದೂರದಲ್ಲಿದ್ದಾನೆಂದರೆ, ಇನ್ನು ನಮ್ಮ ಕಣ್ಣಿಗೆ ಬೆಳ್ಳಿ ಚುಕ್ಕಿಯಂತೆ  ಕಾಣುವ ಎಷ್ಟೋ ನಕ್ಷತ್ರಗಳು ಎಷ್ಟು ದೂರದಲ್ಲಿರಬೇಕು? ನಮ್ಮ ಸೌರಮಂಡಲದ ಸೂರ್ಯನ ನಂತರ ನಮಗೆ ಹತ್ತಿರದಲ್ಲಿರುವ ನಕ್ಷತ್ರವೆಂದರೆ ಆಲ್ಫಾ ಸೆಂಚ್ಯುರಿ ಅಥವಾ ಮ್ಯಾಗ್ಜಿಮಾ ಸೆಂಚ್ಯುರಿ . ಇದು ನಮಗೆ ಎಷ್ಟು ದೂರದಲ್ಲಿದೆಯೆಂದರೆ, ಅಲ್ಲಿಂದ ಹೊರಟ ಬೆಳಕು ನಮ್ಮ ಭೂಮಿಯನ್ನು ತಲುಪಬೇಕಾದರೆ 4 .7  ವರ್ಷಗಳು ಬೇಕಾಗುತ್ತದೆ. ಇನ್ನೂ ದೂರದಲ್ಲಿರುವ ನಕ್ಷತ್ರಗಳ ದೂರವೆಷ್ಟೋ, ನಮಗೆ ಕಾಣದಿರುವ ನಕ್ಷತ್ರಪುಂಜಗಳೆಷ್ಟೋ!!  ಅಂದರೆ ಈಗ ನಾವು ಒಂದು ನಕ್ಷತ್ರವನ್ನು ನೋಡುತ್ತಿದ್ದೇವೆ ಎಂದರೆ ಅಲ್ಲಿಂದ ಎಂದೋ ಹೊರಟ ಬೆಳಕನ್ನು ನಾವು ಇಂದು ನೋಡುತ್ತಿದ್ದೇವೆ. ಹಾಗೆ ನಮಗೆ ಕಾಣುವ ಅತೀ ದೂರದ ನಕ್ಷತ್ರ  ನಮಗಿಂತ ಎಷ್ಟು ದೂರದಲ್ಲಿರಬಹುದು. ಕಾಣುವುದೇ ಎಷ್ಟೋ ದೂರದಲ್ಲಿದ್ದರೆ ಕಾಣದ್ದೆಷ್ಟೋ ಯಾರಿಗೆ ಗೊತ್ತು. ಇಂತಹ ವಿಶ್ವ, ನಮ್ಮ ಯೋಚನೆಗೂ ನಿಲುಕದ ಅದ್ಭುತ ಸೃಷ್ಟಿ. 


ಈ ಸೃಷ್ಟಿಯ ಗೂಢ ನಿಗೂಢ ವಿಸ್ಮಯಗಳು.ಅಬ್ಬ! ಎಂತಹ ವಿಚಿತ್ರ. ಇದನ್ನೇ ಗುಂಡಪ್ಪನವರು ವಿಸ್ಮಯ ಅಥವಾ ವಿಚಿತ್ರವೆನ್ನುತ್ತಾರೆ. ಈ ಸೃಷ್ಟಿಯನ್ನು ಒಂದು ಸೂತ್ರದಲ್ಲಿ ಹಿಡಿದಿಟ್ಟಿರುವ ಆ ಪರಮ ಶಕ್ತಿ. ಇವುಗಳ ಮುಂದೆ ನಾವೆಷ್ಟರವರು?  ನಮ್ಮ ಸಾಮರ್ಥ್ಯದ ಮಿತಿ  ಏನು?  ನಾವು ಅಹಂಕಾರಪಡಲು ಏನಾದರೂ ಕಾರಣವಿದೆಯೇ? ಯೋಚಿಸಿ ವಾಚಕರೆ. 


ಈ ವಿಸ್ಮಯಭರಿತ ಮತ್ತು ವಿಚಿತ್ರವಾದ ವಿಶ್ವ, ಅದರ ನಿಗೂಢತೆ ಮತ್ತು ಇದರ ಸೃಷ್ಟಿಕರ್ತನ ಸಾಮರ್ತ್ಯಗಳ ಬಗ್ಗೆ ಆಲೋಚಿಸುತ್ತಾ ನಾವೆಲ್ಲರೂ ಮುಂದಿನ ಕಗ್ಗಕ್ಕೆ ಹೋಗುವ. 


ಇಂದಿನ ದಿನ ಎಲ್ಲರಿಗೂ ಶುಭವಾಗಲಿ. 


ನಮಸ್ಕಾರ

ರವಿ ತಿರುಮಲೈ