ಕ್ರಮವೊಂದು ಲಕ್ಷ್ಯವೊಂದುಂಟೇನು ಸೃಷ್ಟಿಯಲಿ?
ಭ್ರಮಿಪುದೇನಾಗಾಗ ಕರ್ತೃವಿನ ಮನಸು?
ಮಮತೆಯುಳ್ಳವನಾತನಾದೊಡೀ ಜೀವಗಳು
ಶ್ರಮಪಡುವುದೇಕಿಂತು -ಮಂಕುತಿಮ್ಮ ?
ಕ್ರಮವು ಒಂದು ಲಕ್ಷ್ಯವು ಒಂದು ಉಂಟೇನು ಸೃಷ್ಟಿಯಲಿ ಭ್ರಮಿಪುದು ಅದೇನು ಆಗಾಗ ಕರ್ತೃವಿನ ಮನಸು ಮಮತೆಯುಳ್ಳವನು ಆತನು ಆದೊಡೆ ಜೀವಗಳು ಶ್ರಮಪದುವುದೇಕೆ ಇಂತು - ಮಂಕುತಿಮ್ಮ
ಕ್ರಮವು= ರೀತಿ, ಲಕ್ಷ್ಯವು = ಗುರಿ(purpose ), ಭ್ರಮಿಪುದು = ವಿಕಾರಗೊಳ್ಳುವುದು ಅಥವಾ ವಿಚಲಿತವಾಗುವುದು,
ಕರ್ತೃ= ಜಗತ್ತನ್ನು ಸೃಷ್ಟಿದವ , ಆದೊಡೆ= ಆದರೆ, ಶ್ರಮ = ಕಷ್ಟ
ಇಲ್ಲಿ ಗುಂಡಪ್ಪನವರು ಕೇಳುವ ಪ್ರಶ್ನೆ ಹೀಗಿದೆ
" ಈ ಭಗವಂತನ ಸೃಷ್ಟಿಯಲ್ಲಿ ಒಂದು ಕ್ರಮ ಅಥವಾ ಗುರಿ ಏನಾದರೂ ಇದೆಯೇ? ಈ ಸೃಷ್ಟಿಕರ್ತನ ಮನಸ್ಸು ಏಕೆ ಆಗಾಗ ವಿಚಲಿತವಾಗಿ ಎಲ್ಲೆಲ್ಲೋ ಹರಿದಾಡುತ್ತದೆ. ? ತಾನು ಸೃಷ್ಟಿಸಿದ ಜೀವಿಗಳ ಮೇಲೆ ಅವನಿಗೆ ಪ್ರೀತಿ ವಾತ್ಸಲ್ಯಗಳು ಇರುವುದಾದರೆ ಈ ಜೀವಿಗಳು ಏತಕ್ಕಾಗಿ ಈ ರೀತಿಯ ಕಷ್ಟಗಳನ್ನು ಅನುಭವಿಸುತ್ತವೆ?
ಗುಂಡಪ್ಪನವರ ಮನಕರಗಿ ಇಂತಹ ಪ್ರಶ್ನೆಗಳನ್ನು ತಮ್ಮನ್ನು ತಾವೇ ಕೇಳಿಕೊಳ್ಳುತ್ತಾ, ಓದುಗರ ಮುಂದಿಡುತ್ತಾರೆ. ಇಡೀ ಜಗತ್ತಿನ ಆಗು ಹೋಗುಗಳಿಗೆ ಏನಾದರೂ ಒಂದು ಕ್ರಮವಿದೆಯೇ ಎಂದು ಅವರ ಪ್ರಶ್ನೆ. ಇದೆ ಎಂದು ಹೇಳಬಹುದು. ಹಗಲು ರಾತ್ರಿಗಳು ಭೂಮಿಯ ಸುತ್ತುವಿಕೆಯಿಂದ ಆಗುತ್ತದೆ. ಭೂಮಿಯೂ ಒಂದು ಲೆಕ್ಕಾಚಾರದಲ್ಲೇ ಸುತ್ತುತ್ತದೆ. ಹಾಗೆ ಸುತ್ತುವುದರಿಂದ ಋತುಮಾನಗಳು. ಬಿಸಿಲು, ಮಳೆ, ಚಳಿ ಮತ್ತು ಗಾಳಿ ಕಾಲಗಳು. ಬೆಳೆಗಳು, ಹೂ, ಹಣ್ಣುಗಳಿಗೂ ಒಂದೊಂದು ಕಾಲ.
ಆದರೂ ಆಗಾಗ ನಮಗರಿಯದಂತ ವ್ಯತ್ಯಾಸಗಳು ಆಗುತ್ತವೆ. ಅತೀವೃಷ್ಟಿ- ಅನಾವೃಷ್ಟಿಗಳು, ಜ್ವಾಲಾಮುಖಿಗಳು, ಭೂಕಂಪಗಳು, ಯುದ್ಧಗಳು, ಹೀಗೆ ಮಾನವನಿಗೆ ಮತ್ತು ಜೀವಿಗಳಿಗೆ ಮಾರಕವಾದ ನೈಸರ್ಗಿಕ ವಿಧ್ಯಮಾನಗಳು ನಡೆಯುವಾಗ , ಏಕೆ ಈ ಭಗವಂತನ ಸೃಷ್ಟಿಯಲಿ ಒಂದು ಕ್ರಮವೇ ಇಲ್ಲವೇ ಮತ್ತು ಇದನ್ನೆಲ್ಲಾ ಆಗಗೊಡುವ ಆ ಪರಮಾತ್ಮನ ಮನಸ್ಸು ಏಕೆ ವಿಚಲಿತಗೊಳ್ಳುತ್ತದೆ ಎಂಬ ಪ್ರಶ್ನೆ ಸಹಜವಾಗೇ ಮೂಡುತ್ತದೆ. ಅಂತಹ ಪ್ರಶ್ನೆಯನ್ನೇ ಡಿ.ವಿ.ಜಿ. ಯವರು ಕೇಳುತ್ತಾರೆ.
ಆದರೆ ಈ ಜಗತ್ತಿನಲ್ಲಿ ನಡೆಯುವ ಜೀವನದ ನಾಟಕದಲ್ಲಿ ಒಬ್ಬೊಬ್ಬರು ಒಂದು ರೀತಿ. ಒಬ್ಬರಂತೆ ಒಬ್ಬರಿಲ್ಲ, ಒಬ್ಬರ ಯೋಚನೆಯಂತೆ ಮತ್ತೊಬ್ಬರದಿಲ್ಲ, ಪ್ರತಿಯೊಬ್ಬರ ಆಸೆ ಆಕಾಂಕ್ಷೆಗಳೂ ಭಿನ್ನ ಭಿನ್ನ ಅಲ್ಲವೇ? ಅವನ ಬುದ್ಧಿ ಏಕೆ ಹಾಗೆ ಭಿನ್ನ ಭಿನ್ನ ಎನ್ನುವುದಕ್ಕೆ ವಿಜ್ಞಾನಿಗಳು, ಶಾಸ್ತ್ರಜ್ಞರೂ, ತತ್ವವೇತ್ತರೂ ಸಹ ಭಿನ್ನ ಭಿನ್ನವಾದ ವ್ಯಾಖ್ಯಾನಮಾಡುತ್ತಾರೆ. ಹಾಗಾಗಿ ಭಿನ್ನತೆಯೇ ಜೀವನದ ಲಕ್ಷಣ ಅಥವಾ ಗುಣ.
ಈ ಭಿನ್ನತೆಗೂ ಆ ಪರಮಾತ್ಮನೇ ಕಾರಣನೋ? ಎಂದರೆ. ಅಹುದು ಮತ್ತು ಅಲ್ಲ. ಇಲ್ಲಿ ಎರಡು ವಿಚಾರಗಳಿವೆ. ಒಂದು " ಎಲ್ಲವೂ ಪರಮಾತ್ಮನ ಇಚ್ಚೆಯಂತೆ ನಡೆಯುತ್ತದೆ" ಎಂದರೆ ಈ ಭಿನ್ನತೆಯೂ ಅವನ ಇಚ್ಚೆಯಂತೆಯೆ ಎಂದು ಆಯಿತು. " ಪ್ರತಿ ಜೀವಿಯೂ ಅವನವನ ಕರ್ಮಕ್ಕನುಗುಣವಾಗಿ ಫಲಾಫಲಗಳನ್ನು ಪಡೆದು ಜೀವಿಸುತ್ತಾನೆ " ಎಂದಾದರೆ ಇಲ್ಲಿ, ಪರಮಾತ್ಮನ ಪ್ರಮೇಯ ಕಡಿಮೆ. ಆದರೆ "ಇದೋ" ಅಥವಾ "ಅದೋ" ಎನ್ನುವ ದ್ವಂದ್ವ ಸಹ ಸದಾ ಮಹಾ ಮಹಾ ಪಂಡಿತರನ್ನೇ ಕಾಡಿದೆ, ಮತ್ತು ಇಂದಿಗೂ ಇತ್ಯರ್ಥವಾಗದೆ ಉಳಿದಿದೆ.
ಈ ಕಗ್ಗಕ್ಕೆ ಮತ್ತು ಈ ಕಗ್ಗದ ಹಿಂದಿನ ನಾಲ್ಕು ಕಗ್ಗಗಳಿಗೂ ಮತ್ತು ಮುಂದೆ ಬರುವ ಕಗ್ಗಗಳಿಗೂ ಒಂದು ಹಿನ್ನೆಲೆಯುಂಟು. ಗುಂಡಪ್ಪನವರು ಈ ಕಗ್ಗವನ್ನು ಮೊದಲು ಪ್ರಕಟಿಸಿದ್ದು ೧೯೪೨ರಲ್ಲಿ. ಆಗ ಜಗತ್ತಿನೆಲ್ಲೆಲ್ಲೂ ಬರ, ಅನಾವೃಷ್ಟಿ ೨ನೆ ವಿಶ್ವ ಯುದ್ಧದ ಕಾಲ. ಎಲ್ಲೆಲ್ಲೂ ಹಾಹಾಕಾರ, ಆಕ್ರಂದನ, ಬಡತನ ಆಹಾರದ ಕೊರತೆ, ರೋಗ ರುಜಿನಗಳ ಮಹಾಪೂರ ಹೀಗೆ ಹತ್ತು ಹಲವಾರು ಪ್ರಕೊಪಗಳಿಗೆ ಬಲಿಯಾಗಿ ಜನರು ತೊಳಲಾಡುತ್ತಿದ್ದರು. ಹಾಗಾಗಿ ಡಿ.ವಿ.ಜಿ. ಯವರು ಅಂದಿನ ಪರಿಸ್ತಿತಿಗೆ ಪ್ರತಿಕ್ರಿಯೆಯ ರೂಪದಲ್ಲಿ, ಆ ಪರಮಾತ್ಮನು ಎಲ್ಲರನ್ನೂ ಸೃಷ್ಟಿಸಿ, ಎಲ್ಲರಲ್ಲೂ ಸಮಾನವಾದ ಪ್ರೀತಿ ಇದ್ದರೆ ಈ ರೀತಿಯ ಸಂಕಷ್ಟಗಳು ಜನರಿಗೆ ಏಕೆ ಎಂಬಂತಹ ಕರುಣಾ ಪೂರಿತವಾದ ಪ್ರಶ್ನೆಗಳನ್ನು ತಮ್ಮನ್ನು ತಾವೇ ಕೇಳಿಕೊಳ್ಳುತ್ತಾರೆ.
ಆದರೆ ವಾಚಕ ಮಿತ್ರರೇ, ಅಂದಿನ ಸ್ಥಿತಿಗೂ ಇಂದಿನ ಸ್ಥಿತಿಗೂ ಏನೂ ವ್ಯತ್ಯಾಸವಿಲ್ಲ. ಪ್ರಪಂಚದಲ್ಲಿ ಮಾನವನ ಜೀವನ ಇನ್ನಷ್ಟು ಕ್ಲಿಷ್ಟವಾಗಿದೆ, ಇನ್ನಷ್ಟು ಹದಗೆಟ್ಟಿದೆ, ಸ್ವಾರ್ಥದ ಬುದ್ಧಿ ಇನ್ನಷ್ಟು ಬಲವಾಗಿದೆ, ದೇಶ ದೇಶಗಳನಡುವೆ ದ್ವೇಷದ ಭಾವ ಇನ್ನೂ ಹಾಗೆ ಇದೆ. ಹಳೆಯದನ್ನು ಮರೆತು, ಪ್ರೀತಿ ವಿಶ್ವಾಸದಲಿ, ತೃಪ್ತಿ ಸಂತೋಷದಲಿ ಬದುಕಿ ಪ್ರಗತಿಯತ್ತ ಹೋಗಲು ಯಾರಿಗೂ ಇಷ್ಟವಿಲ್ಲ. ಹಾಗಾಗಿ ಮಾನ್ಯ ಗುಂಡಪ್ಪನವರು ಅಂದು ಕೇಳಿದ ಪ್ರಶ್ನೆಗಳು ಇಂದಿಗೂ ಪ್ರಸ್ತುತ. ಹಾಗಾಗಿ ಅವರ ವಿಚಾರಗಳನ್ನು ನಮ್ಮ ಮನಸ್ಸುಗಳಲ್ಲೂ ವಿಚಾರದ ಓರಗೆ ಹಚ್ಚಿ ನೋಡೋಣ ಬನ್ನಿ ಮಿತ್ರರೇ.
ಇಂದಿನ ದಿನ ನಿಮಗೆಲ್ಲರಿಗೂ ಶುಭವಾಗಲಿ
ನಮಸ್ಕಾರ
ರವಿ ತಿರುಮಲೈ