Pages

Thursday, June 28, 2012

ಯೇಗ್ ದಾಗೆಲ್ಲಾ ಐತೆ-ಬೆನ್ನು ಹತ್ತಿ ಹೊರಟಾಗ- ಭಾಗ-4ಆತ್ಮಕ್ಕೆಲ್ಲಿಯ ಸಾವು?
ಮುಕುಂದೂರ್ ಸ್ವಾಮೀಜಿ ಯವರ ಜೀವನ ಘಟನೆಗಳನ್ನು ಓದುತ್ತಿದ್ದನ್ತೆಲ್ಲಾ ಆನಂದವಾಗುತ್ತೆ. ಅಧ್ಯಾತ್ಮವನ್ನು ಎಷ್ಟು ಸರಳವಾಗಿ ಮನಮುಟ್ಟುವಂತೆ ಹೇಳ್ತಾ ಇದ್ರೂ ಅಂದ್ರೆ......
ಸ್ವಾಮೀಜಿಯವರ ಆಶ್ರಮಕ್ಕೆ ಒಬ್ಬ ಭಕ್ತ ಬರ್ತಾನೆ. " ಸ್ವಾಮಿ ದೊಡ್ದಬೋರೆಗೌಡ ಸತ್ತೋದ " ಎಂದು ದು:ಖದಿಂದ ಹೇಳ್ತಾನೆ.
-ಹಾ! ಸತ್ತು ಹೋದ! ದೊಡ್ದಬೋರೆಗೌಡ !![ನಕ್ಕು] ಎಲ್ಲಾರ ಉಂಟೆ?
-ಇಲ್ಲಾ ಸ್ವಾಮಿ ನಾನೇ ಖುದ್ದು ನೋಡಿ ಬಂದೆ ,ನಿನ್ನೆ ಸತ್ತು ಇವತ್ತು ಮಣ್ಣು ಮಾಡಿ ಅಲ್ಲಿಂದಲೇ ಬರ್ತಾ ಇದ್ದೀನಿ !!
-ಹೌದಾ? ನೀನೇ ಖುದ್ದು ನೋಡಿದ್ಯಾ? ಏನಪ್ಪಾ ಸತ್ತು ಹೋಗೋದು ಅಂದ್ರೆ? ಎಂದರು ಗಂಭೀರವಾಗಿ.
-ಹೌದು ಸ್ವಾಮಿ , ನಾನೇ ನೋಡ್ದೆ ಅಂತೀನಿ.
-ಸರಿ ಬಿಡಪ್ಪಾ, ನೀನೇ ಕಂಡೇ ಅಂದ್ಮ್ಯಾಕೆ ಇನ್ನೇನ್ ಐತೆ? [ಕೃಷ್ಣ ಶಾಸ್ತ್ರಿಗಳ ಕಡೆ ನೋಡುತ್ತಾ......]" ಸ್ವಾಮಿ ಸತ್ತು ಹೊಗೊದುಂಟೆ? ಅದು ಬಂದೂ ಇಲ್ಲಾ, ಹೋಗೋದೂ ಇಲ್ಲಾ. ಅದು ಎಂದೆಂದಿಗೂ ಇರೋದು, ಈ ಯಪ್ಪಾ ನೋಡಿದ್ರೆ ನಾನೇ ಕಂಡೇ ಅಂತಾನೆ,ಎಂಗಪ್ಪಾ ಬಾಳಿ ಬದುಕಿ ಸತ್ತು ವೋಗೋದು? ಇವನಂತೂ ಸತ್ತು ವೋಗಾಕಿಲ್ಲಾ. [ಅವರನ್ನೇ ನೋಡಿಕೊಂಡು ]
" ಹೀಗಂತಾ ಹೇಳಿ ಜೋರಾಗಿ ನಕ್ಕಾಗ ಎಲ್ಲರೂ ಕಕ್ಕಾ-ಬಿಕ್ಕಿ.
ದೇಹಕ್ಕಷ್ಟೇ ಸಾವು, ಆತ್ಮನಿಗೆ ಸಾವಿಲ್ಲಾ!! ಎಂಬುದನ್ನು ಎಷ್ಟು ಸರಳವಾಗಿ ನಿರೂಪಿಸಿಬಿಟ್ರು!!

-------------------------------------------------------------
ಹಿಂಗೇ ಬಿಡದಂಗೆ ಹಿಡ್ಕಂದ್ರೆ ಅವಾ ಬಿಡ೦ಗೇ ಇಲ್ಲಾ!!
ಸ್ವಾಮಿಗಳ ಆಶ್ರಮದ ಮುಂದೆ ನಿಂತು ದೂರಕ್ಕೆ ಕಣ್ಣು ಹಾಯಿಸಿದರೆ ಸಿದ್ಧರ ಬೆಟ್ಟ ಕಾಣುತ್ತೆ. ಆ ಬೆಟ್ಟ ವನ್ನು ಹತ್ತಲು ಕೃಷ್ಣ ಶಾಸ್ತ್ರಿಗಳೊಟ್ಟಿಗೆ ಒಮ್ಮೆ ಸ್ವಾಮೀಜಿ ಹೊರಟರು. ಆಶ್ರಮದಿಂದ ೭-೮ ಮೈಲಿ ನಡೆದು ಬೆಟ್ಟದ ಬುಡ ಸೇರಿದರು. ಸ್ವಾಮೀಜಿಗೆ ಬೆಟ್ಟಹತ್ತುವುದೆಂದರೆ ಬಲು ಸಲೀಸು.ಸ್ವಾಮೀಜಿಯಂತೂ ಬಂಡೆಯಿಂದ ಬಂಡೆಗೆ ಜಿಗಿಯುತ್ತಾ ನಿರಾಯಾಸವಾಗಿ ಹತ್ತುತ್ತಾ ಹೊರಟರು, ಆದರೆ ಕೃಷ್ಣಶಾಸ್ತ್ರಿಗಳಿಗೆ ಆಯಾಸವಾಗ್ತಾ ಇದೆ, ಎಷ್ಟು ಪ್ರಯತ್ನ ಪಟ್ಟರೂ ಸ್ವಾಮೀಜಿ ಯವರೊಟ್ಟಿಗೆ ಹೆಜ್ಜೆ ಹಾಕಲು ಶಾಸ್ತ್ರಿಗಳಿಗೆ ಸಾಧ್ಯವಾಗುತ್ತಿಲ್ಲ. ಒಂದು ಕಡೆಯಂತೂ ಎರಡು ಎತ್ತರವಾದ ಬಂಡೆಗಳ ನಡುವೆ ಆಳವಾದ ಕಂದಕ. ಸ್ವಾಮೀಜಿ ಸಲೀಸಾಗಿ ಜಿಗಿದೇ ಬಿಟ್ಟರು. ಆದರೆ ಶಾಸ್ತ್ರಿಗಳಿಗೆ ಸಾಧ್ಯವಾಗುತ್ತಿಲ್ಲ. ಆಗ ಸ್ವಾಮೀಜಿಯು ತಾವು ತಲೆಗೆ ಸುತ್ತಿದ್ದ ರುಮಾಲು ಬಿಚ್ಚಿ ಹಗ್ಗದಂತೆ ಉದ್ದಮಾಡಿ ಅದರ ಒಂದು ತುದಿಯನ್ನು ಶಾಸ್ತ್ರಿಗಳತ್ತ ಎಸೆಯುತ್ತಾರೆ, " ಈಗ ಹಗ್ಗ ಬಿಗಿಯಾಗಿ ಹಿಡ್ಕಾ ಇವ ನಿನ್ನ ಕರಕೊನ್ಡಾನು! " ಸ್ವಾಮೀಜಿ ನಗುತ್ತಾ ಹೇಳುತ್ತಾರೆ. ಶಾಸ್ತ್ರಿ ರುಮಾಲಿನ ಸಹಾಯದಿಂದ ಬನ್ದೆಮೇಲೇರುತ್ತಾರೆ.
ಸ್ವಾಮೀಜಿ ಮಾರ್ಮಿಕವಾಗಿ ಹೇಳುತ್ತಾರೆ" ನೋಡಪ್ಪಾ ಹಿಂಗೇ ಬಿಗಿಯಾಗಿ ಹಿಡ್ಕಂದ್ರೆ ಇವ ಕೈ ಬಿಡನ್ಗೇ ಇಲ್ಲಾ." ಭಗವಂತನನ್ನು ಕಾಣಲು ಎಷ್ಟು ದೃಢ ವಾದ ನಂಬಿಕೆ ಇರಬೇಕು , ಅನ್ನೋದನ್ನು ಸ್ವಾಮೀಜಿಯವರು ಚಿಕ್ಕ ಚಿಕ್ಕ ಘಟನೆಗಳಲ್ಲೂ ಮನಮುಟ್ಟುವಂತೆ ಹೇಳುತ್ತಿದ್ದ ಪರಿ ಇದು.
-----------------------------------------------------------------------
"ಎಲ್ಲಾ ರೂಪವು ತಾನಂತೆ ಶಿವ ಎಲ್ಲೆಲ್ಲಿಯೂ ಅವ ಇಹನಂತೆ"
ಬೆಟ್ಟವನ್ನು ಹತ್ತಿ ಹತ್ತಿ ಶಾಸ್ತ್ರಿಗಳಿಗೆ ಹೊಟ್ಟೆಯಲ್ಲಿ ಹಸಿವು ಜಾಸ್ತಿಯಾಗಿ ಬಿಟ್ಟಿತು. ಆಯಾಸ ಹೆಚ್ಚಾಗಿ ಬಂಡೆಯ ಮೇಲೆ ಮಲಗಿಬಿಟ್ರು, ಸ್ವಾಮೀಜಿಯಾದರೋ ಪ್ರಕೃತಿಯನ್ನೆಲ್ಲಾ ಬಣ್ಣಿಸ್ತಾ ಇದಾರೆ,
-ಯಾರಿಗೆ ಬೇಕು ಸ್ವಾಮೀಜಿ? ನನಗಂತೂ ತುಂಬಾ ಹಸಿವಾಗಿದೆ.
-ಬೆಟ್ಟಕ್ ಬಂದು ಹಸಿವಾಗ್ತದೆ ಅಂದ್ರೆ ಇಕ್ಕೊರ್ ಯಾರು? ಯೇನಾದ್ರ ಬುತ್ತಿ ತರ್ಬೇಕಿತ್ತಪ್ಪಾ!
- ಇಷ್ಟು ತಡವಾಗುತ್ತೆ ಅಂತಾ ನನಗೆ ಗೊತ್ತಾಗ್ಲಿಲ್ಲವಲ್ಲಾ
-ಅಂಗಾದ್ರೆ ಯಾರಾನ ತಂದಾಕಿದ್ರೆ ತಿಂದ ಬುಡ್ತೀಯಾ? ಹಾಸ್ಯಮಾಡಿ ಸ್ವಾಮೀಜಿ ನಕ್ಕರು, ಶಾಸ್ತ್ರಿಗಳೂ ನಕ್ಕರು.
-ಅಗೋ ಅಲ್ಲಿ ಯಾರೋ ಬಂದಂಗಾತು ,ಅವರನ್ನ ಕೇಳಾಣ " ಸ್ವಾಮೀಜಿ ಮಾತು ಕೇಳಿ ಶಾಸ್ತ್ರಿ ತಿರುಗಿ ನೋಡ್ತಾರೆ , ಯಾರೂ ಇಲ್ಲಾ.
-ಅಗೋ ಅಲ್ಲಿ ನೋಡು , ಆಕಾಶದಲ್ಲಿ ಬಹು ಎತ್ತರದಲ್ಲಿ ಹಾರಾಡ್ ತಿದ್ದ ಎರಡು ಹದ್ದುಗಳನ್ನು ಸ್ವಾಮೀಜಿ ತೋರಿಸಿ ಹೇಳ್ತಾರೆ, " ಎಲೆ ಅಪ್ಪಯ್ಯಗಳಾ ಈ ಹುಡುಗನಿಗೆ ಭಾರಿ ಹಸಿವಾಗೈತೆ, ವಸಿ ಎನಾದರ ಕೊಡ್ರಪ್ಪಾ!
ಸ್ವಾಮೀಜಿ ತಮಾಷೆ ಮಾಡ್ತಾರಲ್ಲಾ ಅಂತಾ ಶಾಸ್ತ್ರಿಗಳಿಗೆ ಬೇಸರವೇ ಆಗುತ್ತೆ,
ಅಷ್ಟರಲ್ಲಿ ಸ್ವಾಮೀಜಿ ಹೇಳ್ತಾರೆ" ಇಗಳಪ್ಪಾ, ಕೊಟ್ಟೆ ಬಿಟ್ರಲ್ಲಾ! ತಕೋ ತಿನ್ನು , ಬಾಳಾ ಹಸ್ದಿದ್ದೀಯಾ ,ಅಂತಾ ಕೈಲಿದ್ದ ಬಾಳೆಹಣ್ಣನ್ನು ಕೊಡ್ತಾರೆ.
-ತಿನ್ನು, ತಿನ್ನು, ಕೇಳಿದ್ರೆ ಇನ್ನೂ ಕೊಡ್ತಾರೆ,
ಶಾಸ್ತ್ರಿ ಹಣ್ಣನ್ನು ನೋಡ್ತಾರೆ; ಆಗತಾನೆ ಗುಡಾಣದಿನ್ದ ತೆಗೆದಂತಿದೆ. ಒಂದಾದ ಮೇಲೊಂದರಂತೆ ಮೂರು ಹಣ್ಣನ್ನು ಕೊಟ್ಟಿದ್ದಲ್ಲದೆ , ಸ್ವಾಮೀಜಿಯವರೂ ಮೂರು ಬಾಳೆ ಹಣ್ಣನ್ನು ತಿಂತಾರೆ.
ಆಗ ಶಾಸ್ತ್ರಿಗಳು ಕೇಳ್ತಾರೆ" ಸ್ವಾಮೀಜಿ ಈ ಹಣ್ಣು ಎಲ್ಲಿಂದ ಬಂತು?
-ಆವಾಗ ಬರೋವಾಗ ಅಲ್ಲೊಬ್ಬ ಬಂದಾ ನೋಡು, ಅವಾಕೊಟ್ಟ.
-ಯಾರು ಸ್ವಾಮೀಜಿ ಅವನು? ನಾನು ನೋಡಲೇ ಇಲ್ಲವಲ್ಲಾ?
-ನೀನು ನೋಡ್ಲಿಲ್ಲಾ ಅಂದ್ರೆ ಅವನು ಬಂದೆ ಇಲ್ಲಾ ಅನ್ನು? ಅವನು ಇಲ್ವೆ ಇಲ್ಲಾ ಅನ್ನು?
ಶಾಸ್ತ್ರಿಗಳಿಗೆ ಎಲವೂ ವಿಸ್ಮಯವಾಗಿ ಕಾಣುತ್ತೆ.
ಸ್ವಾಮೀಜಿ ನಗ್ತಾ ಹಾಡ್ತಾರೆ" ಎಲ್ಲಾ ರೂಪವೂ ತಾನಂತೆ ಶಿವಾ, ಎಲ್ಲೆಲ್ಲಿಯೂ ಅವಾ ಇಹನಂತೆ,
ಕಾಣಲಾರದವರಿಗೆ ಕಲ್ಲಂತೆ.....ಅವ ಇಲ್ಲಂತೆ...
ಹೀಗೆ ಅದೆಷ್ಟು ಘಟನೆಗಳೋ!
ಸ್ವಾಮೀಜಿಯವರೊಡನೆ ಶಾಸ್ತ್ರಿಗಳಿಗಾದ ಇಂತಹ ಅನುಭವಗಳನ್ನು ಓದುತ್ತಾ ಇದ್ದರೆ ಮೈ ಝುಂ .. ಎನ್ನುತ್ತೆ.
--------------------------------------------------------------


ಮನವಿ:

 ಶ್ರೀ ಬೆಳೆಗೆರೆ ಕೃಷ್ಣಶಾಸ್ತ್ರಿಗಳ  ಹತ್ತಾರುವರ್ಷಗಳ ಸ್ವಾಮೀಜಿಯವರ ಒಡನಾಟದ ಪರಿಣಾಮವಾಗಿ ಬಟ್ಟಿ ಇಳಿಸಿರುವ "ಯೇಗ್ ದಾಗೆ ಐತೆ "  ಪುಸ್ತಕದಿಂದ ಪ್ರೇರಿತರಾಗಿರುವ  ಹಾಸನದ    ಶ್ರೀ ಕವಿನಾಗರಾಜ್, ಶ್ರೀ ಪ್ರಕಾಶ್,ಬೇಲೂರಿನ ಡಾ.ಶ್ರೀವತ್ಸ ವಟಿ ಯವರು ಸೇರಿದಂತೆ ಕೆಲವು ಆತ್ಮೀಯರು ಸೇರಿ ಶ್ರೀ ಮುಕುಂದೂರು ಸ್ವಾಮಿಗಳ ಬಗ್ಗೆ ಪ್ರಕಟವಾಗದೇ ಇರಬಹುದಾದ    ಇನ್ನಷ್ಟು  ಮಾಹಿತಿಗಳನ್ನು  ಸಂಗ್ರಹಿಸಲು ಚಿಂತನೆ ನಡೆಸಿದ್ದೇವೆ. ಸ್ವಾಮೀಜಿಯವರು ಅರಸೀಕೆರೆ ತಾಲ್ಲೂಕು ಮತ್ತು ತುಮಕೂರು, ಚಿತ್ರದುರ್ಗ ಜಿಲ್ಲೆಗಳಲ್ಲಿ     ಸಾಕಷ್ಟು  ಓಡಾಟ ನಡೆಸಿರುವಂತಿದೆ.  ಹಾಗೂ ಹೊಳೇ ನರಸೀಪುರ ತಾಲ್ಲೂಕಿನ ಮುಕುಂದೂರು ಬೆಟ್ಟದಲ್ಲಿ ಕೆಲವು ಕಾಲ ತಪಸ್ಸು ಮಾಡಿ ಅವರಿಗೆ ಮುಕುಂದೂರಜ್ಜ ಅಥವಾ ಮುಕುಂದೂರು ಸ್ವಾಮಿಗಳು ಎಂಬ ಹೆಸರು ಬಂದಿದೆ.   ಈ ಭಾಗಗಳ ಪರಿಚಯವಿರುವ ಓದುಗ ಮಿತ್ರರು ಈ ಸತ್ಕಾರ್ಯದಲ್ಲಿ ಕೈಜೋಡಿಸಬೇಕಾಗಿ ಕೋರುವೆ.
ನೀವೇನು ಮಾಡಬಹುದು?
1. ಮುಕುಂದೂರು ಸ್ವಾಮಿಗಳ ಹೆಸರು ತಿಳಿದವರ ಮಾಹಿತಿ ನಮಗೆ ಕೊಡಿ.ಅವರನ್ನು ಭೇಟಿಯಾಗಲನುಕೂಲವಾಗುವ ವಿಳಾಸ ಮತ್ತು ದೂರವಾಣಿ ಸಂಖ್ಯೆ ಕೊಡಿ
2. ನಿಮಗೆ ಸಾಧ್ಯವಾದರೆ ಅವರ ಸಂದರ್ಶನ ನಡೆಸಿ ವೀಡಿಯೋ ಕ್ಲಿಪ್ ನಮಗೆ ಕಳಿಸಿಕೊಡಿ.
3. ಒಂದು ವಿಚಾರ ಸ್ಪಷ್ಟವಿರಲಿ. ಸ್ವಾಮೀಜಿಯವರು ಯಾವುದೇ ಸಂಪ್ರದಾಯ ಪೋಷಕರಲ್ಲ.
4. ನಮಗೆ ಅಗತ್ಯವಿರುವುದು ಅವರ ನೇರವಾದ ಆಧ್ಯಾತ್ಮಿಕನುಡಿಗಳು. ನೆನಪಿರಲಿ ಸ್ವಾಮೀಜಿಯವರು  ವಿಗ್ರಹದಲ್ಲಿ ಮಾತ್ರ ದೇವರನ್ನು ಕಂಡವರಲ್ಲ. ಪ್ರಕೃತಿಯಲ್ಲಿರುವ ಗಿದಮರ ಬಳ್ಳಿಗಳು, ಬಂಡೆಗಳು,ಪ್ರಾಣಿ ಪಕ್ಷಿಗಳನ್ನು ಮನುಷ್ಯನಷ್ತೇ ಸಹಜವಾಗಿ ಮಾತನಾಡಿಸುತ್ತಿದ್ದವರು. ಆದ್ದರಿಂದ ಈ ತಲಹದಿಯಮೇಲೆ  ನೀವು ಮಾತನಾಡಿಸುವವರಿಂದ ಮಾಹಿತಿ ಪಡೆಯುವುದು ಉತ್ತಮ.