-ಶ್ರೀಧರ್
ಹರಿ ಓಂ
ಮೊನ್ನೆ ತಾನೆ ನಡೆದ ವೇದಸುಧೆ ಬಳಗದ ವಾರ್ಷಿಕೋತ್ಸವದಲ್ಲಿ ಭಾಗವಹಿಸುವ ಸದವಕಾಶ ನನಗೆ ಸಿಕ್ಕಿದ್ದು ಸರಿಯಷ್ಟೆ. ಈ ಸಂದರ್ಭದಲ್ಲಿ ಅದೆಷ್ಟೋ ವಿಷಯಗಳನ್ನು ಚರ್ಚಿಸಲಾಯಿತು. ಕಾರ್ಯಕ್ರಮದ ದಿನ ಬೆಳಗ್ಗೆ ಐದು ಘಂಟೆಗೇನೇ ಆತ್ರೇಯರು, ನಾನು ಮತ್ತು ಶ್ರೀನಾಥ್ (ಇನ್ನೊಬ್ಬ ವೇದಸುಧೆ ಅಭಿಮಾನಿ) ರವರು ಸುಧಾಕರ ಶರ್ಮರ ಕೋಣೆಯ ಬಾಗಿಲನ್ನು ತಟ್ಟಿದ್ದೆವು! ನಮ್ಮೆಲ್ಲರ ಪ್ರಶ್ನೆಗಳಿಗೆ ಸಾವಧಾನವಾಗಿಯೇ ಉತ್ತರಿಸಿದರು ಶರ್ಮರು. ಆ ಸಂದರ್ಭದಲ್ಲಿ ಚರ್ಚಿಸಲಾದ ವಿಷಯಗಳ ಬಗ್ಗೆ ಬರೆಯಲು ಸಾಕಷ್ಟು ಸಮಯ ಬೇಕು, ಮೇಲಾಗಿ ಅವುಗಳಲ್ಲಿ ಬಹಳಷ್ಟು ವಿಷಯಗಳು ಶರ್ಮರ ಪ್ರವಚನಗಳಲ್ಲಿ ಲಭ್ಯವಿವೆ. ಇವೆಲ್ಲಕಿಂತ ಹೆಚ್ಚಾಗಿ ನನ್ನ ಮನಸ್ಸಿಗೆ ನಾಟಿದ್ದು ಎಂದರೆ ಆನಂತರದ ಅಗ್ನಿಹೋತ್ರದ ಸಮಯದಲ್ಲಿ ಶರ್ಮರು ಹೇಳಿದ ಒಂದು ಮಾತು. ಆಗಿನ ಸಂದರ್ಭವೆಂದರೆ ಅಗ್ನಿಹೋತ್ರದ ಅಂತಿಮ ಹಂತದಲ್ಲಿ ಪಠಿಸುವ ಮಂತ್ರವೊಂದಿದೆ. ಆ ಮಂತ್ರದ ಅರ್ಥ "ಇತರರು ನಮ್ಮನ್ನು ಪ್ರೀತಿಸುವಂತಾಗಲಿ, ನಾವು ಕೂಡ ಇನ್ನೊಬ್ಬನನ್ನು ಪ್ರೀತಿಸುವೆವು" ಎಂಬಂತೆ ಇದೆ. ಇಲ್ಲಿ ಶರ್ಮರ ಮಾತುಗಳಲ್ಲೇ ಹೇಳಲು ಸಾಧ್ಯವಾಗಿತ್ತಿಲ್ಲ ನನಗೆ. ಯಾಕೆಂದರೆ ಅಗ್ನಿಹೋತ್ರದ ಆಡಿಯೋ ರೆಕಾರ್ಡಿಂಗ್ ನನ್ನ ಬಳಿ ಇಲ್ಲ. ಅದು ಲಭ್ಯವಾದರೆ ಶರ್ಮರು ಹೇಳಿದ್ದನ್ನು ಯಥಾರ್ಥವಾಗಿ ಕೇಳಬಹುದು. ಇರಲಿ. ಇದೇ ಮಾತು ನನ್ನ ಕಿವಿಯಲ್ಲಿ ಇನ್ನೂ ಗುಯ್ ಗುಡುತ್ತಿದೆ. ಮತ್ತೆ ಮತ್ತೆ ನೆನಪಾಗುತ್ತಿದೆ, ತಲೆಯೊಳಗೆ ಏನೇನೋ ಯೋಚನೆಗಳನ್ನು ಹುಟ್ಟುಹಾಕುತ್ತಿದೆ. ಅಬ್ಬ! ವ್ಯಕ್ತಿಯೊಬ್ಬರ ಮಾತೊಂದು ಎಷ್ಟು ಪ್ರಭಾವ ಬೀರಬಹುದೆಂದು ನನಗೀಗ ತಿಳಿಯುತ್ತಿದೆ! (ಹೀಗೆ ಒಂದುಕ್ಷಣಕ್ಕೆ ನಾನು ಉಸಿರಾಡುವುದನ್ನೇ ಮರೆಸಿದ ಮಾತುಗಳು ಶರ್ಮರ ಉಪನ್ಯಾಸಗಳಲ್ಲಿ ಸಾಕಷ್ಟು ಇವೆ, ಅವುಗಳ ಬಗ್ಗೆ ಈಗ ಬೇಡ). ಈ ಒಂದು ಮಾತು ಯಾಕೆ ನನಗೆ ಮತ್ತೆ ಮತ್ತೆ ನೆನಪಾಗುತ್ತಿದೆ?
ಶರ್ಮರು ಮುಂದುವರೆದು ಅದೇ ಮಂತ್ರದ ಅರ್ಥವನ್ನು ವಿವರಿಸುತ್ತಾ, ಎಲ್ಲರೂ ಇದರ ಪ್ರಕಾರ ನಡೆದುಕೊಂಡರೆ ಪ್ರಪಂಚದಲ್ಲಿ ಈಗ ಕಂಡುಬರುತ್ತಿರುವ ಅಧ್ವಾನಗಳೆಲ್ಲ ಇಲ್ಲವಾಗುತ್ತವೆ ಎಂದು ಹೇಳುತ್ತಾರೆ. ಹಾಗಿದ್ದರೆ ನಾವು ಮಾತ್ರ ಅಹಿಂಸೆ ಆಚರಿಸಿ ಇನ್ನೊಬ್ಬರನ್ನು ಆದರಿಸಿದರೆ, ಪ್ರೀತಿಸಿದರೆ ಸಾಕೇ, ಆ ’ಇನ್ನೊಬ್ಬನೂ’ ಹಾಗೆಯೇ ನಡೆದುಕೊಳ್ಳಬೇಕಲ್ಲವೇ! ಎಂಬ ಸಂಶಯ ಸಹಜ. ನನ್ನ ಮನಸಿನಲ್ಲೂ ಈ ಸಂಶಯ ಆ ಗಳಿಗೆಯಲ್ಲಿ ಬಂತು. ಅದಕ್ಕೆ ಶರ್ಮರು ಹೇಳುವ ಮಾತು ಇದು (ನನಗೆ ನೆನಪಿಗೆ ಬರುವಂತೆ) - "ನಾವು ಅಹಿಂಸೆ, ಸತ್ಯಕ್ಕೆ ಮತ್ತು ದೇವರ ನಿಯಮಗಳಿಗೆ ಬಧ್ಧರಾಗಿದ್ದಲ್ಲಿ ಎಷ್ಟೇ ದುಷ್ಟನಾದವನೂ ನಮ್ಮ ಮುಂದೆ ವಿನಮ್ರನಾಗಲೇ ಬೇಕು. ಇದು ಪ್ರಪಂಚದ ನಿಯಮ, ಆ ಭಗವಂತನ ನಿಯಮ. ಇದರಲ್ಲಿ ಸಂಶಯ ಬೇಡ. ಒಂದು ವೇಳೆ ಹಾಗಾಗದಿದ್ದಲ್ಲಿ ನಮ್ಮ ನಿಯಮ ನಿಷ್ಠೆಯನ್ನು ಪ್ರಶ್ನಿಸಿಕೊಳ್ಳಬೇಕೇ ಹೊರತು ಸತ್ಯದ, ಅಹಿಂಸೆಯ ನಿಯಮಗಳನ್ನಲ್ಲ". ಎಂಥಾ ಮಾತು! ನನ್ನ ಮನಸ್ಸಿನಲ್ಲಿದ್ದ ಪ್ರಶ್ನೆಯನ್ನು ಓದಿ ಅವರಾಗೇ ಉತ್ತರಿಸಿದಂತೆ ನನಗೆ ಭಾಸವಾಯಿತು. ಇಲ್ಲಿ ಶರ್ಮರ ಮಾತು ಸರಿಯೋ ತಪ್ಪೋ ಎಂಬ ವಿಮರ್ಶೆಗೆ ನಾನು ಹೊರಟಿಲ್ಲ. ಅಷ್ಟು ತಿಳುವಳಿಕೆಯೂ ನನಗಿಲ್ಲ. ಈ ಮಾತುಗಳಿಂದ ನನ್ನ ಮನಸ್ಸಿನಲ್ಲಿ ಕೆಲವಾರು ಯೋಚನೆಗಳು ಬಂದು ಹೋಗುತ್ತಾ ಇವೆಯೇ ಹೊರತಾಗಿ ಯಾವುದೇ ಅಂತಿಮ ರೂಪ ಸಿಕ್ಕಿಲ್ಲ.
ಈ ಮಂತ್ರದ ಅರ್ಥ ಯೇಸುಕ್ರಿಸ್ತನ "ನಿನ್ನ ಶತ್ರುವನ್ನು ಪ್ರೀತಿಸು" ಎಂಬ ಮಾತಿನಂತೆಯೇ ಇದೆ ಅಲ್ಲವೇ? ವೇದ ಎನ್ನುವುದು ಪುಸ್ತಕವಲ್ಲ, ಅದು ಕಾಲಕಾಲಕ್ಕೆ, ಪ್ರಪಂಚದ ಬೇರೆ ಬೇರೆ ಕಡೆಗಳಲ್ಲಿ ಯೋಗಿಗಳಿಗೆ ಶ್ರುತವಾದ ಸತ್ಯ ಎಂಬ ಶರ್ಮರ ಮಾತುಗಳು ಇಲ್ಲಿ ನೆನಪಾಗುತ್ತದೆ (ವೇದಗಳು ಪ್ರಪಂಚದ ನಿಯಮಗಳನ್ನು ಸೂಚಿಸುವಂಥವುಗಳಾಗಿದ್ದಲ್ಲಿ ಅವು ಭಾರತದಲ್ಲಿ ಮಾತ್ರ ಏಕಿವೆ ಎಂಬ ನನ್ನ ಪ್ರಶ್ನೆಗೆ ಶ್ರೀಯುತ ಶರ್ಮರು ಈ ರೀತಿ ಉತ್ತರಿಸಿದ್ದರು). ಗಾಂಧೀಜಿ ಹೇಳಿದ "ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆ ತೋರಿಸು" ಎಂಬ ಮಾತು ಕೂಡ ಈ ಅರ್ಥದಲ್ಲೇ ಇದೆ (ಆದರೆ ಇದು ಪ್ರಸ್ತುತ ಕಾಲದಲ್ಲಿ ನಿರ್ವೀರ್ಯತೆಯ ಲಕ್ಷಣವಾಗಿ ಗುರುತಿಸಲ್ಪಡುತ್ತಿದೆ). ಪ್ರಪಂಚದ ಮಹಾತ್ಮರೆಲ್ಲ ಇದನ್ನು ಹೇಳಿದ್ದಾರೆ. ಇಂಥ ಮಹಾತ್ಮರುಗಳೆಲ್ಲ ಆಯಾಯಾ ಕಾಲದ ಜನರ ಜೀವನ ಸ್ವರೂಪವನ್ನು ಬದಲಿಸಿ ಹೊಸ ಯೋಚನಾ ಲಹರಿಯೊಂದನ್ನು ಜನಮಾನಸದಲ್ಲಿ ತಂದವರು ಎಂಬುದೂ ಸತ್ಯ. ಮಹರ್ಷಿ ದಯಾನಂದರ ತತ್ವಗಳೇ ಅನೇಕ ಸ್ವಾತಂತ್ರ್ಯ ಹೋರಾಟಗಾರರಿಗೆ ಸ್ಫೂರ್ತಿಯಾಗಿತ್ತು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ನನ್ನ ಮನಸ್ಸಿನಲ್ಲಿ ಏಳುತ್ತಿರುವ ಇನ್ನೊಂದು ಪ್ರಶ್ನೆ - ಭಾರತೀಯರ ಜೀವನದಲ್ಲಿ ವೈದಿಕ ಸತ್ಯಗಳು ಅಳಿದು ವೇದಗಳು ಕೇವಲ ಧಾರ್ಮಿಕ ಆಚರಣೆಗಳಾಗಿ ಪರಿವರ್ತಿತವಾದ ಕಾಲ ಯಾವುದು? ಇದನ್ನು ಹೇಳುವುದು ಬಹುಷ: ಕಷ್ಟ. ಯಾಕೆಂದರೆ ವೈದಿಕ ಪರಂಪರೆ ಎನ್ನುವುದು ಭಾರತದಲ್ಲಿ ಎಂದೂ ಪೂರ್ತಿಯಾಗಿ ನಾಶವಾಗಿಲ್ಲ. ಒಂದೋ ಅವು ಜನರ ಬದುಕಿನಲ್ಲಿದ್ದವು, ಅಥವಾ ಆಚರಣೆಗಳಲ್ಲಿದ್ದವು. ಮೊದಲನೆಯದು ಕಣ್ಣಿಗೆ ಕಾಣದು, ಎರಡನೆಯದು (ಕೇವಲ) ಕಾಣಿಸುತ್ತದೆ. ಹಾಗಾಗಿ ಇತಿಹಾಸ ಪಠ್ಯವೊಂದರಲ್ಲಿ "ಇಂತಿಂಥಾ ರಾಜನ ಆಸ್ಥಾನದಲ್ಲಿ ಇಷ್ಟಿಷ್ಟು ಮಂದಿ ವೈದಿಕ ಪಂಡಿತರಿದ್ದರು" ಎಂದು ಹೇಳುವಾಗ ಆ ಪಂಡಿತರು ಕೇವಲ ವೇದಗಳನ್ನು ಕಂಠಸ್ಥ ಮಾಡಿಕೊಂಡು ಆಸ್ಥಾನದ ಪಗಾರ ತಿಂದುಂಡು ಸಂತೋಷವಾಗಿದ್ದವರೋ ಅಥವಾ ವೇದಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಿಜ ಯೋಗಿಗಳಾಗಿದ್ದವರೋ ಎಂಬುದು ಸ್ಪಷ್ಟವಾಗುವುದಿಲ್ಲ. ಕ್ಷತ್ರಿಯರು ವೇದರೀತ್ಯಾ ಕ್ಷಾತ್ರ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದರೋ ಅಥವಾ ಜನ್ಮತ: ಬಂದ ಅರಸೊತ್ತಿಗೆಗಳನ್ನು ಅಲಂಕರಿಸಿಕೊಂಡು ಸುಖಿಸುತ್ತಿದ್ದವರೇ? ಇದನ್ನೂ ತಿಳಿಯುವುದು ಕಷ್ಟ. ಬ್ರಾಹ್ಮಣ/ಕ್ಷತ್ರಿಯರೆರಡರಲ್ಲೂ ಕೆಲವರು ಅಪವಾದಗಳಂತಿದ್ದಿರಬಹುದು, ಆ ವಿಷಯ ಬೇರೆ. ಇರಲಿ. ಇನ್ನು ಈ ದೇಶದ ಮೇಲೆ ಧಾಳಿ ನಡೆಸಿದರಲ್ಲ, ಆ ದಾಳಿಗಳ ಬಗ್ಗೆ ಏನೆನ್ನಬೇಕು! ವೇದದ ಅರಿವು ಸಮಾಜದಿಂದ ಮಾಯವಾಗಿದ್ದಕ್ಕೂ ಹೊರಗಿನಿಂದ ಬಂದ ಅನ್ಯರ ಧಾಳಿಗಳಿಗೆ ಸಂಬಂಧವಿದೆಯೇ ಅಥವಾ ಇಲ್ಲವೆ? ಅಸತ್ಯಗಳನ್ನೇ ಸತ್ಯವೆಂದು ತಿಳಿದು, ವೇದಕ್ಕೆ ಬೆನ್ನು ತೋರಿಸಿ ಬದುಕಿದ ಮೂಢರಿಗೆ ಸಿಕ್ಕಿದ ಶಿಕ್ಷೆಯೇ ಅದು? ಅಥವಾ ಸಾತ್ವಿಕರಾಗಿದ್ದ, ಸತ್ಯಸಂಧರಾಗಿದ್ದ, ಯುಧ್ಧಗಳಲ್ಲಿ ಯುಧ್ಧನಿಯಮಗಳನ್ನು ಪಾಲಿಸಿ ಸೋತ ಭಾರತೀಯರ ಮೇಲೆ ರಾಕ್ಷಸೀ ಸ್ವಭಾವದ ದಾಳಿಕೋರರು ನಡೆಸಿದ ಹತ್ಯಾಕಾಂಡವೇ? ತಿಳಿಯುತ್ತಿಲ್ಲ. ಸಿಖ್ಖರು ವೇದಗಳನ್ನು ತಿರಸ್ಕರಿಸಿದರೆಂದು ನಾವು ಇತಿಹಾಸದಲ್ಲಿ ಓದುತ್ತೇವೆ. ಅವರು ವೇದಗಳನ್ನೇ ತಿರಸ್ಕರಿಸಿದರೋ ಅಥವಾ ವೇದದ ಹೆಸರಿನಲ್ಲಿ ಆ ಕಾಲದಲ್ಲಿದ್ದ ಮೂಢ ಆಚರಣೆಗಳನ್ನು ತಿರಸ್ಕರಿಸಿದರೋ? ಇದನ್ನು ತಿಳಿಯುವುದೂ ಕಷ್ಟ. ಗಾಂಧೀಜಿಯವರ ಅಹಿಂಸಾ ಸತ್ಯಾಗ್ರಹಗಳಿಂದಲೇ ನಮಗೆ ಸ್ವಾತಂತ್ರ್ಯ ಸಿಕ್ಕಿತೇ ಅಥವಾ ಬೋಸ್ ಮತ್ತು ಇನ್ನಿತರ ಕ್ರಾಂತಿವೀರರಿಗೆ ಹೆದರಿ ಮತ್ತು ಇತರ ಅಂತರರಾಷ್ಟ್ರೀಯ ಒತ್ತಡಗಳಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿತೇ? ಭಯೋತ್ಪಾದಕ ಧಾಳಿ ಎದುರು ಅಹಿಂಸೆಯ ಪಾಠ ನಡೆಯುತ್ತದೆಯೇ, ಅಂಥಾ ಅಹಿಂಸೆ ಸತ್ಯಗಳನ್ನು ತನ್ನ ಜೀವನದಲ್ಲಿ ಅಳವಡಿಸಿದ ನಾಯಕ ಅಥವಾ ಯೋಗಿ ನಮ್ಮಲ್ಲಿದ್ದಾನೆಯೇ? ಇದ್ದರೂ ಆತನ ಅಹಿಂಸೆ ಭಯೋತ್ಪಾದಕನ ಮನ ಗೆಲ್ಲುತ್ತದೋ ಅಥವಾ ಆತನಿಗೆ ವೀರಪ್ಪನ್ ಮನವೊಲಿಸಲು ಹೋದ ಡಿಸಿಎಫ್ ಶ್ರೀನಿವಾಸ್ ಗೆ ಬಂದ ದುರ್ಗತಿ ಬಂದೀತೇ? ಇವೆಲ್ಲಾ ಪ್ರಶ್ನೆಯಾಗಿ ಉಳಿದಿದೆ, ಉತ್ತರ ಸಿಗುತ್ತಿಲ್ಲ.
ಯುಧ್ಧ, ಧಾಳಿಗಳ ವಿಚಾರ ಬಿಟ್ಟು ಜನಸಾಮಾನ್ಯನ ವಿಚಾರಕ್ಕೆ ಬಂದರೆ ಇತಿಹಾಸದ ಬೇರೆ ಬೇರೆ ಕಾಲಘಟ್ಟಗಳಲ್ಲಿ ಬುಧ್ಧ, ಬಸವಣ್ಣ ಮುಂತಾದವರು ವೇದಗಳನ್ನು ತಿರಸ್ಕರಿಸಿದವರೇ. ಶಂಕರಾದಿಗಳು ವೇದಸಂಹಿತೆಗಳನ್ನು ಆಧರಿಸಿ ಬರೆದ ಭಾಷ್ಯಗಳಲ್ಲಿ ಇಂದು ಏನೇನೋ ಬೆರೆತು ಹೋಗಿವೆ. ಮಹರ್ಷಿ ದಯಾನಂದರು ವೇದಗಳನ್ನು ಪುನರ್ ವಿಮರ್ಷಿಸುವ ಸಾಹಸಕ್ಕೆ ಕೈ ಹಾಕಿದರು. ಅಂತಹ ಮಹರ್ಷಿ ದಯಾನಂದರ ಸತ್ಯಾರ್ಥ ಪ್ರಕಾಶ ಹೇಳುವ ವಿಚಾರಗಳಿಗೂ ಬುಧ್ಧ ಬಸವಣ್ಣರ ತತ್ವಗಳಿಗೂ ಸಾಮ್ಯತೆ ಇದೆ! (ಉದಾ : ದೇಹವೆ ದೇಗುಲ ಎಂದು ಹೇಳಿದ ಬಸವಣ್ಣನೂ, ದಯಾನಂದರೂ, ಬುಧ್ಧನೂ ಮೂರ್ತಿ ಪೂಜೆಯನ್ನು ತಿರಸ್ಕರಿಸಿದ್ದಾರೆ. ಅಹಿಂಸೆ, ಸರಳ ಜೀವನ, ದಾನ/ತ್ಯಾಗ, ಮೂಢ ಆಚರಣೆಗಳು ಇತ್ಯಾದಿ ವಿಚಾರಗಳಲ್ಲಿ ಇವರೆಲ್ಲರ ವಿಚಾರಗಳು ಒಂದೇ ಆಗಿವೆ). ಈ ಎಲ್ಲವಕ್ಕೂ ಏನಾದರೂ ಸಂಬಂಧ ಇದೆಯೇ, ಇವುಗಳೆಲ್ಲದರಿಂದ ಯಾವುದೋ ಒಂದು ವಿಚಾರ ಸ್ಪಷ್ಟವಾಗುತ್ತದೆಯೋ ಅಥವಾ ಇವೆಲ್ಲವೂ ಒಂದಕ್ಕೊಂದು ಸಂಬಂಧವಿಲ್ಲದೆ, ಆಕಸ್ಮಿಕವಾಗಿ ಘಟಿಸಿದ ಘಟನೆಗಳೋ ಗೊತ್ತಿಲ್ಲ.
ಸಧೃಢವಾದ ರಾಜ್ಯವೊಂದು ಯಾವಾಗಲೂ ತನ್ನ ರಾಜ್ಯವನ್ನು ವಿಸ್ತರಿಸಿಕೊಳ್ಳುತ್ತಿರಬೇಕು, ಅಂತಹ ರಾಜ್ಯದ ರಾಜನು ತನ್ನ ರಾಜ್ಯ ವಿಸ್ತರಿಸುವುದರಲ್ಲಿ ಉದಾಸೀನ ತೋರಬಾರದು, ದುರ್ಬಲ ರಾಜನು ಪ್ರಬಲರೊಂದಿಗೆ ಹೋರಾಡುವುದರಲ್ಲಿ ಅರ್ಥವಿಲ್ಲ, ಬದಲಾಗಿ ಆತನ ಜೊತೆ ಒಪ್ಪಂದ ಮಾಡಿಕೊಳ್ಳಬೇಕು, ಅರ್ಥವೇ ಧರ್ಮದ ಮೂಲ, ಪ್ರತಿಯೊಬ್ಬನೂ ಜೀವನದಲ್ಲಿ ಅರ್ಥ ಸಂಪಾದನೆಯನ್ನೇ ತನ್ನ ಜೀವನದ ಗುರಿಯಾಗಿಸಿಕೊಳ್ಳಬೇಕು, ಹಾಗೂ ಹಾಗೆ ಗಳಿಸಿದ ಸಂಪತ್ತನ್ನು ಕೂಡಿಡಬೇಕು ಇತ್ಯಾದಿ ವಿಚಾರಗಳನ್ನು ಹೇಳಿದ ಚಾಣಕ್ಯ ವೇದಕ್ಕೆ ವಿರುಧ್ಧವಾಗಿ ನಡೆದುಕೊಂಡನೇ ಅಥವಾ ಅಲ್ಪಜ್ನಾನಿಯಾದ ನನ್ನ ತಲೆಗೆ ಈ ವಿಚಾರಗಳಲ್ಲಿನ ಸೂಕ್ಷ್ಮತೆಗಳು ಅರ್ಥವಾಗುತ್ತಿಲ್ಲವೇ? ಗೊತ್ತಿಲ್ಲ. ಇಂದಿನ ಕಾಲಕ್ಕೆ ಚಾಣಕ್ಯ ಬೇಕೋ ವೇದ ಬೇಕೋ ಅಥವಾ ಅವೆರಡೋ ಒಂದೆಯೋ, ಅಥವಾ ಅವೆರಡೂ ಬೇಡವೋ, ಗೊತ್ತಿಲ್ಲ.
ಹೀಗೆಯೇ - ಅರ್ಥವಿಲ್ಲದ, ಇರುವ ವಿಚಾರಗಳು ತಲೆಯಲ್ಲಿ ಬಂದು ಹೋಗುತ್ತಿವೆ. ಉತ್ತರ ಸಿಗುತ್ತೋ ಇಲ್ಲವೋ ಗೊತ್ತಿಲ್ಲ. ಸತ್ಯ ಎನ್ನುವುದು ಯಾರಿಗೂ ಸಿಗುವುದಿಲ್ಲವಂತೆ. ಅದನ್ನು ಹುಡುಕಿಕೊಂಡು ಹೋಗುವ ದಾರಿ ಮಾತ್ರವೇ ಸತ್ಯವಂತೆ. ನಾನು ಆ ದಾರಿಯಲ್ಲಿದ್ದೇನೊ ಇಲ್ಲವೋ ಎನ್ನುವ ಸತ್ಯವೂ ಕೂಡ ನನಗೆ ತಿಳಿಯುತ್ತಿಲ್ಲ. :)
ನನ್ನೀ ಬರಹದ ಧಾಟಿ ಮೇಲೆ ತಿಳಿಸಿದ ಸುಧಾಕರ ಶರ್ಮರ ಮಾತಿಗೆ ಭಿನ್ನಾಭಿಪ್ರಾಯದಂತೆ ಮೇಲ್ನೋಟಕ್ಕೆ ಕಾಣಿಸಬಹುದು. ಆದರೆ ಅವರ ಮಾತನ್ನು ನಾನು ಒಪ್ಪಿದ್ದರಿಂದಲೇ ಈ ರೀತಿ ಮನಸ್ಸು ಹೊಯ್ದಾಡುತ್ತಿದೆ ಅನಿಸುತ್ತದೆ. ಹೇಗೆ ನಾವು ಅಳೆದು, ತೂಗಿ ತೆಗೆದುಕೊಂಡ ನಿರ್ಧಾರ ಜೀವನದಲ್ಲಿ ಹೆಚ್ಚು ಗಟ್ಟಿಯಾಗಿ ಉಳಿದುಕೊಳ್ಳುತ್ತದೋ ಹಾಗೆಯೇ ವಿಚಾರ ಮಾಡಿ, ಪರಾಮರ್ಶಿಸಿ ಒಪ್ಪಿಕೊಂಡ ತತ್ವ ಸತ್ಯಕ್ಕೆ ಹೆಚ್ಚು ಹತ್ತಿರ ಎಂದು ಅನಿಸುತ್ತದೆ. ಅದಕ್ಕೇ ಇಷ್ಟೆಲ್ಲ ಹೊಯ್ದಾಟಗಳು ಇರಲಿ ಅನಿಸುತ್ತಿದೆ.
ಅಂದಹಾಗೆ ಇಷ್ಟೆಲ್ಲಾ ಯೋಚನೆಗಳಿಗೆ ಕಾರಣರಾದ ಸುಧಾಕರ ಶರ್ಮರಿಗೆ ಧನ್ಯವಾದಗಳು. ಇಲ್ಲಿ ಉಧ್ಧರಿಸಿದ ಅವರ ಮಾತುಗಳು ಅವರಾಡಿದ್ದಕ್ಕಿಂತ ಭಿನ್ನವಾಗಿದ್ದರೆ ಕ್ಷಮೆಯಿರಲಿ. ಪೂರ್ತಿ ಅಲ್ಲದಿದ್ದರೂ ಬಹುತೇಕ ಅವರು ಹೇಳಿದ ಅರ್ಥದಲ್ಲಿಯೇ ನಾನು ಬರೆದಿದ್ದೇನೆ ಎನ್ನುವ ಭಂಡ ಧೈರ್ಯ ನನ್ನದು.
Submitted by kavinagaraj on February 3, 2011 - 11:32am.
ಪ್ರಿಯ ಮಹೇಶ್, ವೇದಸುಧೆ ವಾರ್ಷಿಕೋತ್ಸವ ನಿಮ್ಮಂತಹ ಅನೇಕರಲ್ಲಿ ಅಂತರಂಗವನ್ನು ಕೆದಕುವಲ್ಲಿ ಸಫಲವಾಗಿದೆ. ಇದು ಸತ್ಯದ ಹುಡುಕಾಟದ ಆರಂಭ. ಮುಂದುವರೆಸಿ, ಶುಭವಾಗಲಿ.
ಒಳ್ಳೆ ಪ್ರಶ್ನೆ ಮೂಡಿದೆ.ಚರಿತ್ರೆಯ ಸರಿಯಾದ ಪರಿಚಯ ಇಲ್ಲದ ನಾನು ಇಂದು ಪುರಂದರದಾಸರ "ನಗೆಯು ಬರುತಿದೆ " ಗೀತೆಯನ್ನು ಗಮನಗೊಟ್ಟು ಕೇಳುತ್ತಾ ಆಶ್ಚರ್ಯಗೊ೦ಡಿದ್ದೆ.ಸುಮಾರು ೬೦೦ ವರುಷಗಳ ಹಿಂದೆಯೇ ನಮ್ಮಲ್ಲಿ ಲ೦ಪಟತನ ದಾಖಲೆಯಾಗುವ ಮಟ್ಟಕ್ಕೆ ಬೆಳೆದಿತ್ತು ಎಂದು ಲೆಕ್ಕ ಹಾಕುತ್ತಾ ಬಂದಿದ್ದೆ. ನಿಮ್ಮ ಲೇಖನ ಕಾಕತಾಳೀಯವೋ ಎಂಬಂತೆ ಇಂದೇ ಓದಬೇಕೆ?