Pages

Tuesday, July 1, 2014

ವೇದಭಾರತಿಯ ವಾರ್ಷಿಕೋತ್ಸವ

         ಕಳೆದ  ಎರಡು ವರ್ಷಗಳಿಂದ "ವೇದಭಾರತಿಯ" ಹೆಸರಲ್ಲಿ "ಎಲ್ಲರಿಗಾಗಿ ವೇದ" ಧ್ಯೇಯದೊಡನೆಲವು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಮುಗಿಸಿ ಎರಡನೆಯ  ವರ್ಷದ ವಾರ್ಷಿಕೋತ್ಸವಕ್ಕೆ ವೇದಭಾರತಿಯು ಸಜ್ಜಾಗುತ್ತಿದೆ. ಬರುವ ಆಗಸ್ಟ್ 16 ಮತ್ತು 17 ರಂದು ವಿಭಿನ್ನವಾಗಿ ಕಾರ್ಯಕ್ರಮಗಳನ್ನು ನಡೆಸಲು ವ್ಯವಸ್ಥೆಗಳು ಆರಂಭವಾಗಿವೆ.

         ಎಲ್ಲರಿಗಾಗಿವೇದ ಎಂಬ ಉದ್ಧೇಶದೊಡನೆ ವೇದಸುಧೆಯು 9.2.2010 ರಂದು ಆರಂಭವಾದಾಗ ಒಂದೆರಡು ವರ್ಷ ಕೇವಲ ಅಂತರ್ಜಾಲದಲ್ಲಿ ನಮ್ಮ ಚಟುವಟಿಕೆಯು   ವೇದಸುಧೆಯ ಹೆಸರಿನಲ್ಲಿ ನಡೆದು ವೇದಾಧ್ಯಾಯೀ ಶ್ರೀ ಸುಧಾಕರಶರ್ಮರ ಹಲವು ಉಪನ್ಯಾಸಗಳನ್ನು ಏರ್ಪಾಡುಮಾಡಿ ಹಾಸನದ ಜನತೆಯಲ್ಲಿ ವೇದದ ನಿಜ ಅರಿವು ಮೂಡಿಸುವ ಪ್ರಯತ್ನವನ್ನು ಮಾಡಿದೆವು. 30.1.2011 ನಡೆದ ವೇದಸುಧೆಯ ಪ್ರಥಮ ವಾರ್ಷಿಕೋತ್ಸವವು ಬ್ಲಾಗ್ ಲೋಕದಲ್ಲಿ ಒಂದು ಮೈಲಿಗಲ್ಲು. ರಾಜ್ಯದ ಹಲವು    ಸ್ಥಳಗಳಿಂದ ಆಗಮಿಸಿ ಪಾಲ್ಗೊಂಡಿದ್ದ  ವೇದಸುಧೆಯ ಸುಮಾರು 500 ಅಭಿಮಾನಿಗಳ ಮಹಾ  ಮೇಳ  ಅದಾಗಿತ್ತು. ನಂತರದ ದಿನಗಳಲ್ಲಿ  ನಮ್ಮದೇ ಆದ ವೆಬ್ಸೈಟ್ vedasudhe.com ಆರಂಭವಾಯ್ತು. ನಿರಂತರ ವೇದದ ಪ್ರಚಾರ ಕಾರ್ಯ ಮುಂದುವರೆಯಿತು.

ವೇದಾಧ್ಯಾಯೀ ಶ್ರೀ ಸುಧಾಕರಶರ್ಮರೊಡನೆ   ನಡೆದ ಮುಕ್ತ ಸಂವಾದ ಕಾರ್ಯಕ್ರಮವನ್ನು ಹಾಸನ ನಗರ ಜನತೆಗೆ ಕೇಬಲ್ ಟಿ.ವಿ.ಮೂಲಕ  ನೇರ ಪ್ರಸಾರ ಮಾಡಿ ತೋರಿಸಲಾಯ್ತು. 

ನಂತರ   2012 ಆಗಸ್ಟ್ 19 ರಂದು  ಬೇಲೂರಿನ    ವೇದಾಧ್ಯಾಯೀ ಶ್ರೀ ವಿಶ್ವನಾಥಶರ್ಮರ ಮಾರ್ಗದರ್ಶನದಲ್ಲಿ  ವೇದ ಪಾಠದ ಆರಂಭದೊಡನೆ "ವೇದಭಾರತಿ" ಹೆಸರಿನ ಸಂಘಟನೆಯನ್ನು ಆರಂಭಿಸಲಾಯ್ತು.

        ನಂತರದ ದಿನಗಳಲ್ಲಿ  ನಡೆದ ವೇದೋಕ್ತಜೀವನ ಶಿಬಿರ, ಬಾಲಶಿಬಿರ, ಗೋರಕ್ಷೆಗಾಗಿ   ಪಂಡಿತ್ ಅಜಿತ್ ಕಡ್ಕಡೆ ಯವರ ಸಂಗೀತ ಕಛೇರಿ, ಪೂಜ್ಯ ಚಿದ್ರೂಪಾನಂದ ಸರಸ್ವತೀ ಸ್ವಾಮೀಜಿಯವರಿಂದ ಗೀತಾಜ್ಞಾನಜ್ಞ ...ಒಂದಕ್ಕಿಂತ ಒಂದು ಅದ್ಭುತ. ಇವುಗಳೆಲ್ಲದರ ಜೊತೆಗೆ  ಹಾಸನದ ಸ್ಥಳೀಯ ಪತ್ರಿಕೆ ಜನಮಿತ್ರ,ಜನಹಿತ ಹಾಗೂ ವಿಕ್ರಮ ವಾರಪತ್ರಿಕೆಗಳಲ್ಲಿ  ವೇದದ ಅಂಕಣಗಳು  ವೇದಭಾರತಿಯ ಕೆಲಸದ ಭಾಗವಾಗಿಯೇ ಆರಂಭವಾದವು.

ಎಲ್ಲರನ್ನೂ ಹೆಚ್ಚು  ಆಕರ್ಶಿಸಿದ್ದು ನಮ್ಮ ನಿತ್ಯ ಅಗ್ನಿಹೋತ್ರ ಕಾರ್ಯಕ್ರಮ. ನಿತ್ಯವೂ ಸಂಜೆ 6.00 ರಿಂದ 7.00 ರವರಗೆ ನಡೆಯುವ ಅಗ್ನಿಹೋತ್ರ ಮತ್ತು  ವೇದ ಪಾಠದಲ್ಲಿ ಪಾಲ್ಗೊಳ್ಳುತ್ತಿರುವ ಸುಮಾರು 15 ಜನ ಮಾತೆಯರು ಮತ್ತು 15ಜನ ಪುರುಷರು ವೇದಭಾರತಿಗೆ ಶಕ್ತಿಯಾಗಿ, ಬೆನ್ನೆಲುಬಾಗಿ ನಿಂತಿದ್ದಾರೆ. 

ಈ ಒಂದು ಗುಂಪು ಸಕ್ರಿಯವಾಗಿರುವುದರಿಂದ ಮೈಸೂರು, ಅರಸೀಕೆರೆ, ಹಂಪಾಪುರ,ಬೆಂಗಳೂರು ,ಕೊಣನೂರು ಸಮೀಪದ ತರಗಳಲೆ ಹಾಗೂ ಹಾಸನ ನಗರದ ಹಲವೆಡೆಗಳಲ್ಲಿ ಅಗ್ನಿಹೋತ್ರವನ್ನು ಒಂದು ಅಭಿಯಾನದಂತೆ ಮಾಡುತ್ತಿದ್ದು ಈಗಾಗಲೇ ಸಾವಿರಾರು ಜನರಿಗೆ ವೇದದ ಅರಿವು ಮೂಡಿಸುವ ಪ್ರಯತ್ನ ನಡೆದಿರುವುದು ವೇದಭಾರತಿಯ ಹೆಗ್ಗಳಿಕೆಯೇ ಸರಿ.

ಈ ಹಿಂದೆ ಯಾವುದೇ ಕಾರ್ಯಕ್ರಮ ನಡೆಸಬೆಕಾಗಿದ್ದರೂ ವೈಯಕ್ತಿಕ ಸಾಮರ್ಥ್ಯದ   ಮೇಲೆ   ನಡೆಸಲಾಗುತ್ತಿತ್ತು.ಆದರೆ ಈಗ ಕಣ್ಮುಂದೆ ಜವಾಬ್ದಾರಿಯನ್ನು ಹೆಗಲ ಮೆಲೆ ಹೊರುವ 25-30 ಕಾರ್ಯಕರ್ತರ   ಗುಂಪು ಸಿದ್ಧವಾಗಿದೆ. ವೇದಭಾರತಿಯ ಹರ್ಷಕ್ಕೆ ಇದಕ್ಕಿಂತ ಹೆಚ್ಚಿನದೇನು ಬೇಕು?

ಇನ್ನೂ ಹೆಚ್ಚು ಸಂತಸ ಪಡುವ ಸಂಗತಿ ಎಂದರೆ  ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಪೂಜ್ಯ ನಿರ್ಮಲಾನಂದನಾಥ ಸ್ವಾಮೀಜಿ, ಶ್ರೀರಾಮಕೃಷ್ಣಾಶ್ರಮದ ಪೂಜ್ಯ ಬೋಧಸ್ವರೂಪಾನಂದರು,ಪೂಜ್ಯ ಯುಕ್ತೇಶಾನಂದರು, ಬರಮಸಾಗರದ ಪೂಜ್ಯ ಬ್ರಹ್ಮಾನಂದ ತೀರ್ಥಭಿಕ್ಷು ಅವರಲ್ಲದೆ ಹಲವಾರು ಮಹನೀಯರು ವೇದಭಾರತಿಯ ಕಾರ್ಯಕ್ರಮಗಲಲ್ಲಿ ಪಾಲ್ಗೊಂಡು ಸ್ತ್ರೀಯರು ಪಠಿಸುವ ವೇದಮಂತ್ರವನ್ನು ಕೇಳಿ ಸಂತಸ ವ್ಯಕ್ತಪಡಿಸಿ ಆಶೀರ್ವದಿಸಿದ್ದಾರೆ.

ಈಭಾರಿಯ  ವಾರ್ಷಿಕೋತ್ಸವದಲ್ಲಿ  ವೇದಾಧ್ಯಾಯೀ ಶ್ರೀ ಸುಧಾಕರಶರ್ಮರು, RSS ನ ಜ್ಯೇಷ್ಠ ಪ್ರಚಾರಕರಾದ ಶ್ರೀ ಸು.ರಾಮಣ್ಣನವರು, ವೇದತರಂಗದ ಸಂಪಾದಕರಾದ ಶ್ರೀ ಶೃತಿ ಪ್ರಿಯರು, ಮೈತ್ರೇಯಿ ಗುರುಕುಲದ ಆಚಾರ್ಯೇ ಶ್ರೀಮತಿ ಅಮೃತವರ್ಷಿಣೀ ಉಮೇಶ್  ಇವರೆಲ್ಲಾ ಪಾಲ್ಗೊಂದು ಮಾರ್ಗದರ್ಶನ ಮಾಡಲಿದ್ದಾರೆ. ವೇದಸುಧೆಯ ಅಭಿಮಾನಿಗಳಿಗೆ ಸ್ವಾಗತವಿದೆ.