Pages

Showing posts with label ವಿವೇಕ ಚೂಡಾಮಣಿ. Show all posts
Showing posts with label ವಿವೇಕ ಚೂಡಾಮಣಿ. Show all posts

Friday, October 12, 2012

ವಿವೇಕ ಚೂಡಾಮಣಿ -ಭಾಗ-೨೨

मूलम्-ಮೂಲ

विद्वान् स तस्मा उपसत्तिमीयुषे मुमुक्षवे साधु यथोक्तकारिणे।
प्रशान्तचित्ताय शमान्विताय तत्वोपदेशं कृपयैव कुर्यात् ॥४३॥

ವಿದ್ವಾನ್ ಸ ತಸ್ಮಾ ಉಪಸತ್ತಿಮೀಯುಷೇ ಮುಮುಕ್ಷವೇ ಸಾಧು ಯಥೋಕ್ತಕಾರಿಣೇ |
ಪ್ರಶಾಂತಚಿತ್ತಾಯ ಶಮಾನ್ವಿತಾಯ ತತ್ವೋಪದೇಶಂ ಕೃಪಯೈವ ಕುರ್ಯಾತ್ |೪೩|

ಪ್ರತಿಪದಾರ್ಥ :-

(ಸಃ ವಿದ್ವಾನ್ = ಆ ವಿದ್ವಾಂಸನು, ಉಪಸತ್ತಿಮ್ ಈಯುಷೇ = ತಿಳಿವನ್ನು ಬಯಸಿರುವ, ಮುಮುಕ್ಷವೇ = ಮುಮುಕ್ಷವಾದ, ಸಾಧು-ಯಥೋಕ್ತ-ಕಾರಿಣೇ = ಹೇಳಿದಂತೆ ಸರಿಯಾಗಿ ನೆಡೆಯುವ(ಮಾಡುವ), ಪ್ರಶಾಂತ ಚಿತ್ತಾಯ = ನಿರ್ಮಲ ಮನಸ್ಕನಾದ, ಶಮಾನ್ವಿತಾಯ = ಶಮದಮಾದಿ ಗುಣಗಳಿಂದ ಸಂಪನ್ನನಾದ, ತಸ್ಮೈ = ಆ ಅಪೇಕ್ಷಿಗೆ, ಕೃಪಯಾ ಏವ = ಕರುಣೆಯಿಂದಲೇ, ತತ್ವೋಪದೇಶಂ -ಕುರ್ಯಾತ್ = ತತ್ವೋಪದೇಶವನ್ನು ಮಾಡಬೇಕು )

ತಾತ್ಪರ್ಯ:-

ಬ್ರಹ್ಮಜ್ಞಾನಿಯಾದ ಗುರುವು ಉಪದೇಶವನ್ನು ಬಯಸುತ್ತಿರುವ, ಶಮಾದಿ ಗುಣಗಳಿಂದ ಕೂಡಿರುವ , ಹೇಳಿದಂತೆ ಸರಿಯಾಗಿ ನೆಡೆಯುವ, ಒಳ್ಳೆಯ ಮನಸಿನವನಾದ , ಮುಮುಕ್ಷವಾದ ಜ್ಞಾನಾಪೇಕ್ಷಿಗೆ ಕರುಣೆಯಿಂದ ಕೃಪೆತೋರಿ ತತ್ವೋಪದೇಶವನ್ನು ಮಾಡಬೇಕು.

ವಿವರಣೆ :-

ಜ್ಞಾನೋಪದೇಶವನ್ನು ಬಯಸಿ ಬರುವ ಅಪೇಕ್ಷಿಯನ್ನು ಕರುಣೆಯಿಂದ ಶಿಷ್ಯನನ್ನಾಗಿ ಸ್ವೀಕರಿಸಿ ಆತನಿಗೆ ತತ್ವೋಪದೇಶವನ್ನು ಬ್ರಹ್ಮವಿದನಾದ ಗುರುವು ಮಾಡಬೇಕು ಎಂದು ಆಚಾರ್ಯರು ಈ ಶ್ಲೋಕದಲ್ಲಿ ಹೇಳಿರುತ್ತಾರೆ. ಪ್ರಕರಣದಲ್ಲಿ ಬರುವ ವಿಚಾರಗಳು ಗುರು-ಶಿಷ್ಯರಿಬ್ಬರಿಗೂ ಅನ್ವಯವಾಗುತ್ತದೆ. ಉಪಸತ್ತಿಯನ್ನು ಬಯಸಿ ಬರುವ ಶಿಷ್ಯನಾದರೂ ಸಾಮಾನ್ಯದವನೇ ? ಅಲ್ಲ, ಆತನು ಈಗಾಗಲೇ ಶಮಾದಿಗುಣಸಂಪನ್ನನಾಗಿರುತ್ತಾನೆ ಮತ್ತು ಒಳ್ಳೆಯ ಪ್ರಾಮಾಣಿಕ ಮನಸ್ಸುಳ್ಳವನಾಗಿರುತ್ತಾನೆ. ಗುರುವು ಹೇಳಿದ್ದನ್ನು ಸರಿಯಾಗಿ ನೆಡೆಸಿಕೊಡುವವನಾಗಿರುತ್ತಾನೆ. ವಿನಯವಂತನೂ ಆಗಿರುತ್ತಾನೆ. ಶಿಷ್ಯನಿಗೆ ಬ್ರಹ್ಮಜ್ಞಾನವೂ ತಿಳಿದಿರುತ್ತದೆ  ಆದರೆ, ಬ್ರಹ್ಮದ ಅನುಭೂತಿಗಾಗಿ ಆತನು ಗುರುವಿನ ಮೊರೆಹೋಗುತ್ತಾನೆ. ತನ್ನೊಳಗಿರುವ ಚೈತನ್ಯವನ್ನು ಜಾಗೃತಗೊಳಿಸಿಕೊಳ್ಳಲು ಗುರುವಿನ ಸಾಮೀಪ್ಯವನ್ನು ಶಿಷ್ಯನು ಬಯಸುತ್ತಾನೆ. ಇಂತಹ ಶಿಷ್ಯನಿಗೆ ಗುರುವು ಕೃಪೆಯಿಂದ ತತ್ವೋಪದೇಶವನ್ನು ಮಾಡಬೇಕು ಎಂದು ಆಚಾರ್ಯರು ಹೇಳುತ್ತಾರೆ.

मूलम्-ಮೂಲ :-

माभैष्ट विद्वंस्तव नास्त्यपायः संसारसिंधोस्तरणेऽस्त्युपायः ।
येनैव याता यतयोऽस्य पारं तमेव मार्गं तव निर्दिशामि ।४४।

ಮಾ ಭೈಷ್ಟ ವಿದ್ವಂಸ್ತವ ನಾಸ್ತ್ಯಪಾಯಃ ಸಂಸಾರಸಿಂಧೋಸ್ತರಣೇಽಸ್ತ್ಯುಪಾಯಃ |
ಯೇನೈವ ಯಾತಾ ಯತಯೋಽಸ್ಯ ಪಾರಂ ತಮೇವ ಮಾರ್ಗಂ ತವ ನಿರ್ದಿಶಾಮಿ |೪೪| 

ಪ್ರತಿಪದಾರ್ಥ :-

(ವಿದ್ವನ್ = ಅಯ್ಯಾ ವಿದ್ವಾಂಸನೇ, ಮಾ ಭೈಷ್ಟ = ಹೆದರಬೇಡ, ತವ-ಅಪಾಯಃ-ನ ಅಸ್ತಿ = ನಿನಗೆ ಅಪಾಯವೂ ಇಲ್ಲ, ಸಂಸಾರ ಸಿಂಧೋಃ = ಸಂಸಾರ ಸಾಗರವನ್ನು, ತರಣೇ = ದಾಟುವುದಕ್ಕೆ, ಉಪಾಯಃ -ಅಸ್ತಿ = ಸಾಧನವು ಇದೆ, ಯತಯಃ = ಯಾರು ಯಾರು (ಪ್ರಯತ್ನಶಾಲಿಗಳು), ಯೇನ ಏವ = ಯಾವುದೊಂದರಿಂದಲೇ (ಮಾರ್ಗದಿಂದಲೇ) , ಅಸ್ಯ-ಪಾರಂ= ಇದರ ತೀರವನ್ನು, ಯಾತಃ=ತಲುಪಿದರೋ (ಪಡೆದರೋ), ತಮ್ ಏವ ಮಾರ್ಗಂ= ಅದೇ ಹಾದಿಯನ್ನು, ತವ-ನಿರ್ದಿಶಾಮಿ= ನಿನಗೂ ತೋರಿಸುತ್ತೇನೆ )

ತಾತ್ಪರ್ಯ:-

ಅಯ್ಯಾ ವಿವೇಕಿಯೇ-ವಿದ್ವಾಂಸನೇ ನೀನು ಹೆದರಬೇಡ. ನಿನಗೆ ಯಾವ ಅಪಾಯವೂ ಇಲ್ಲಿಲ್ಲ. ಸಂಸಾರಸಾಗರವನ್ನು ದಾಡುವುದಕ್ಕೆ ಉಪಾಯಗಳು ಇವೆ. ಪ್ರಯತ್ನಶೀಲರು ಯಾವೊಂದು ಮಾರ್ಗದಿಂದಲೇ ಭವಸಾಗರವನ್ನು ದಾಟಿದರೋ ಆ ದಾರಿಯನ್ನೇ ನಾನು ನಿನಗೂ ತೋರಿಸುತ್ತೇನೆ.

ವಿವರಣೆ:-

ಶಿಷ್ಯನು ಅರಿವಿನ ಅನುಭೂತಿಯ ಭಿಕ್ಷೆಯನ್ನು ಬೇಡಿಕೊಂಡು ಗುರುವಿನ ಬಳಿಗೆ ಬಂದಾಗ ಮೊದಲು ಗುರುವು ಆತನಿಗೆ ಅಭಯವನ್ನು ಕೊಡಬೇಕಾಗುತ್ತದೆ. ಆ ಪ್ರಕರಣವನ್ನು ಆಚಾರ್ಯರು ಇಲ್ಲಿ ನಿರೂಪಿಸುತ್ತಾರೆ.  ವಿದ್ವಾಂಸನಾದ ಶಿಷ್ಯನು ತನ್ನ ಮುಂದೆ ಬಾಗಿದಾಕ್ಷಣ ಗುರುವು ಆತನ ಹೆದರಿಕೆಯನ್ನು ಮೊದಲು ದೂರ ಮಾಡಬೇಕು. ಶಿಷ್ಯನಿಗೆ ಭವಸಾಗರವನ್ನು ದಾಟಬಲ್ಲನೇ ಎಂಬ ಹೆದರಿಕೆ ಇದ್ದಿರಬಹುದು ಹಾಗಾಗಿ ಆತನನ್ನು ಕಂಡ ಕೂಡಲೇ " ಬಾರಪ್ಪಾ, ನೀನೇನೂ ಭಯ ಪಡಬೇಕಾದ್ದಿಲ್ಲ. ಇಲ್ಲಿ ನಿನಗೆ ಯಾವ ಅಪಾಯವೂ ಉಂಟಾಗುವುದಿಲ್ಲ . ಈ ಸಂಸಾರ ಸಾಗರವನ್ನು ದಾಟುವುದಕ್ಕೆ ಉಪಾಯಗಳು ಇದ್ದೇ ಇವೆ. ಈ ಭವಸಾಗರವನ್ನಾಗಲೇ ಅನೇಕರು ದಾಟಿದ್ದಾರೆ.  ನೀನೇನೂ ಮೊದಲ ಪ್ರಯೋಗ ಪ್ರಾಣಿಯಲ್ಲ. ಈ ದಾರಿಯಲ್ಲಾಗಲೇ ಅನೇಕರು ನಡೆದು ಹೋಗಿದ್ದಾರೆ. ಹಾಗೆ ನೆಡೆದೂ ನೆಡೆದೂ ಈ ದಾರಿಯು ತುಂಬ ಗಟ್ಟಿಯಾಗಿದೆ. ನಿನಗೆ ಯಾವ ತೊಂದರೆಗಳೂ ಇಲ್ಲಿಲ್ಲ. ನೀರಡಿಕೆಯಾದರೆ ಕೆರೆ-ಬಾವಿಗಳಿವೆ. ಹಸಿವಾದರೆ ಭಿಕ್ಷಾನ್ನವು ದೊರೆಯುತ್ತದೆ. ಆಯಾಸ ನೀಗಿಸಿಕೊಳ್ಳಲು ದೇಗುಲತಾಣಗಳಿವೆ. ಇದು ನೆಮ್ಮದಿಯ ದಾರಿ. ಸಾಧನೆಗೈದವರು ಬೇರೆ-ಬೇರೆಯ ಹಂತಗಳಲ್ಲಿ ನಿನಗೆ ದೊರಕುತ್ತಾರೆ. ನಿನ್ನ ದಾರಿಯನ್ನು ಸರಳಗೊಳಿಸಿದ್ದಾರೆ. ಅನೇಕ ಸಾಧಕರು ಇದೇ ದಾರಿಯಲ್ಲಿ ಸಾಗಿ ಜ್ಞಾನಿಗಳಾಗಿದ್ದಾರೆ. ನಿನಗೂ ನಾನು ಅದೇ ದಾರಿಯನ್ನು ತೋರಿಸುತ್ತೇನೆ"  ಎಂಬ ಆಪ್ತವಚನಗಳಿಂದ ಸಂತೈಸಿ ಆತನಿಗೆ ಉಪದೇಶ ನೀಡಲು ಮುಂದಾಗಬೇಕು ಎಂದು ಆಚಾರ್ಯರು ಸೊಗಸಾಗಿ ನಿರೂಪಣೆ ಮಾಡುತ್ತಾರೆ.

ಶಿಷ್ಯನಿಗೆ ಏನೆಲ್ಲಾ qualification ಗಳು ಇರಬೇಕೋ ಅದಕ್ಕಿಂತಲೂ ಹೆಚ್ಚಿನ ಗುಣಗಳು ಗುರುವಿನಲ್ಲಿರಬೇಕಾದ್ದು ಅನಿವಾರ್ಯ ಎನ್ನುವುದನ್ನು ಈ ಪ್ರಕರಣದಿಂದ ತಿಳಿಯಬಹುದು. ಶಿಷ್ಯನು ಈಗಾಗಲೇ ಸಕಲಗುಣ ಸಂಪನ್ನನಾಗಿದ್ದಾನೆ. ಅದು ಗುರುವಿಗೂ ತಿಳಿದೇ ಇರುತ್ತದೆ. ಆದರೂ, ಶಿಷ್ಯನಲ್ಲಿ ವಿನಯವಂತಿಕೆ ಮೂಡತ್ತದೆ ಗುರುವಿನ ಮುಂದೆ ಬಾಗುತ್ತಾನೆ. ತನ್ನ ಮುಂದೆ ಬಾಗಿ ನಿಂತುಬಿಟ್ಟನು ಎಂದ ಮಾತ್ರಕ್ಕೆ ಗುರುವು ಆತನ ಮೇಲೆ ಅಧಿಕಾರ ನೆಡೆಸುತ್ತಾನೆಯೆ ? ಇಲ್ಲ, ಆತನನ್ನು ಆಪ್ತವಚನಗಳಿಂದ ಸಂತೈಸುತ್ತಾನೆ.  ಈ ಸದ್ಭಾವನೆಯು ಎಂದೆಂದಿಗೂ ಪ್ರಸ್ತುತ.

ಮನೆಗೆ ಬಂದ ಗೆಳೆಯರಿಗೆ ’ತಾವು ಕಾಫಿ-ಟೀ ಕುಡಿಯೋದಿಲ್ವೇ" ಎಂದು ಕೇಳುವುದಕ್ಕಿಂತಲೂ " ಕಾಫಿ-ಟೀ ಏನಾದ್ರೂ ಕುಡಿಯುವಿರೇನು ? " ಎಂದು ಕೇಳುವುದು ಎಷ್ಟೋ ಉತ್ತಮ.

ಮುಂದಿನ ಕಂತಿನಲ್ಲಿ ಇನ್ನಷ್ಟು ತಿಳಿಯೋಣ.

ವಂದನೆಗಳೊಂದಿಗೆ,....


Tuesday, July 3, 2012

ವಿವೇಕ ಚೂಡಾಮಣಿ ಭಾಗ -೨೧




मूलम्-ಮೂಲ


कथं तरेयं भवसिन्धुमेतं का 
वा गतिर्मे कतमोस्तुपायः ।
जाने न किञ्चित्कृपयाव मां 
प्रभो संसारदुःख-क्षतिमानतुष्व ॥४१॥

ಕಥಂ ತರೇಯಂ ಭವಸಿಂಧುಮೇತಂ ಕಾ ವಾ ಗತಿರ್ಮೇ ಕತಮೋಽಸ್ತ್ಯುಪಾಯಃ |
ಜಾನೇ ನ ಕಿಂಚಿತ್ ಕೃಪಯಾವ ಮಾಂ ಪ್ರಭೋ ಸಂಸಾರ ದುಃಖ -ಕ್ಷತಿಮಾತನುಷ್ವ ||೪೧||

ಪ್ರತಿಪದಾರ್ಥ :

(ಏತಂ ಭವಸಿಂಧುಂ = ಈ ಸಂಸಾರಸಾಗರವನ್ನು,  ಕಥಂ ತರೇಯಂ = ಹೇಗೆ ದಾಟಬಲ್ಲೆನು ? , ಮೇ =ನನಗೆ, ಗತಿಃ=ದಾರಿಯು, ಕಾ ವಾ =ಯಾವುದು ?, ಕತಮಃ = ಯಾವ, ಉಪಾಯಃ ಅಸ್ತಿ = ಉಪಾಯವಿರುವುದು ?,
ಕಿಂಚಿತ್ = ಯಾವುದನ್ನೂ , ನ ಜಾನೇ = ಅರಿಯೆನು, ಪ್ರಭೋ = ಗುರುವೆ, ಮಾಂ=ನನ್ನನ್ನು, ಕೃಪಯಾ = ಕೃಪೆತೋರಿ, ಅವ = ಕಾಪಾಡು, ಸಂಸಾರದುಃಖ-ಕ್ಷತಿಂ-ಆತನುಷ್ವ = ಸಂಸಾರದುಃಖವನ್ನು ನಾಶಮಾಡು ).

ತಾತ್ಪರ್ಯ : 

ಈ ಸಂಸಾರಸಾಗರವನ್ನು ಹೇಗೆ ದಾಟಬಲ್ಲೆನು ? ನನಗೆ ದಾರಿ ಯಾವುದು ? ಮೋಕ್ಷೋಪಾಯಗಳು ಯಾವುದು ? ಇದ್ಯಾವುದನ್ನೂ ನಾನರಿಯೆನು. ಹೇ ಗುರುವೆ ನನ್ನನ್ನು ಕೃಪೆತೋರಿ ಕಾಪಾಡು. ಈ ಸಂಸಾರದುಃಖವನ್ನು ನಾಶಮಾಡು.

ವಿವರಣೆ :

ಶಿಷ್ಯನು ಗುರುವಿನ ಮುಂದೆ ಜ್ಞಾನೋಪದೇಶವನ್ನು ನೀಡುವಂತೆ ಬೇಡಿಕೊಂಡ ನಂತರ ತನ್ನ ಭಯವನ್ನು ಅಥವಾ ಭೀತಿಯನ್ನು ಗುರುವಿನ ಮುಂದೆ ಪ್ರಕಟಪಡಿಸುತ್ತಾನೆ. ಶಿಷ್ಯನಿಗೆ ಸಂಸಾರಸಾಗರವನ್ನು ದಾಟುವುದು ಹೇಗೆ ? ಎಂಬ ಭೀತಿಯಿದೆ. ಸಾಧನ ಚತುಷ್ಟಯ ಸಂಪನ್ನನಾಗಿದ್ದರೂ ಉಪದೇಶವಾಗದ ಹೊರತು ಜ್ಞಾನದ ಹಿರಿಮೆಯು ತಿಳಿಯುವುದಿಲ್ಲ. ಹಾಗೆ ತಿಳಿಯಲಾರದೆ ಉಳಿದರೆ ತನ್ನ ಗತಿಯೇನು ? ಬೇರೆ ದಾರಿಯಾದರೂ ಯಾವುದಿದೆ ? ಎಂಬ ಭೀತಿಯು ಶಿಷ್ಯನನ್ನು ಕಾಡುತ್ತದೆ. ಹೀಗೆ ಭೀತನಾದ ಶಿಷ್ಯನು ಗುರುವಿನ ಮುಂದೆ ಬಾಗಿ ಕೃಪೆತೋರಿ ತನ್ನ ಭಯವನ್ನು ಹೋಗಲಾಡಿಸುವಂತೆ ಕೇಳಿಕೊಳ್ಳುತ್ತಾನೆ. ಶಿಷ್ಯನಿಗೆ ಮೋಕ್ಷೋಪಾಯಗಳ ಕುರಿತಾಗಿ ಸಂದೇಹವಿದೆ. ಹಾಗಾಗಿ ಕರ್ಮ-ಭಕ್ತಿ-ಜ್ಞಾನ ಗಳಲ್ಲಿ ಮೋಕ್ಷಕ್ಕೆ ಕಾರಣವಾಗುವುದು ಯಾವುದೆಂದು ಗುರುವನ್ನು ವಿನಯದಿಂದ-ಭಯದಿಂದ ಕೇಳುತ್ತಾನೆ. ಈ ಸಂಸಾರದುಃಖವನ್ನು ಬುಡಸಮೇತ ಕಿತ್ತುಹಾಕುವಂತೆ ಗುರುವಿನಲ್ಲಿ ವಿನಂತಿಸಿಕೊಳ್ಳುತ್ತಾನೆ.
ಶಿಷ್ಯನು ತುಂಬ ಸ್ಪಷ್ಟವಾಗಿ ತನ್ನ ಮನದಿಂಗತವನ್ನು ಹೊರಹಾಕುವುದನ್ನು ಈ ಶ್ಲೋಕದಲ್ಲಿ ಗಮನಿಸಬಹುದಾಗಿರುತ್ತದೆ. ಗುರುವಿನ ಮುಂದೆ ನಿವೇದಿಸಿಕೊಳ್ಳುವಾಗ ಹಿಂಜರಿಕೆಯಾಗಲೀ, ಗೋಪ್ಯತೆಗಳಾಗಲೀ ಇರಬಾರದೆಂಬುದಕ್ಕೆ ಈ ಶ್ಲೋಕವು ನಿದರ್ಶನ ಎನ್ನಬಹುದು.

मूलम्-ಮೂಲ


तथावदन्तं शरणागतं स्वं संसार-दावानल-तापतप्तम् ।
निरीक्ष्य कारुण्यरसार्द्र-दृष्ट्या दध्यादभीतिं सहसा महात्मा ॥४२॥

ತಥಾ ವದಂತಂ ಶರಣಾಗತಂ ಸ್ವಂ ಸಂಸಾರ-ದಾವಾನಲ-ತಾಪತಪ್ತಮ್ |
ನಿರೀಕ್ಷ್ಯ ಕಾರುಣ್ಯ-ರಸಾರ್ದ್ರ-ದೃಷ್ಟ್ಯಾ ದದ್ಯಾದಭೀತಿಂ ಸಹಸಾ ಮಹಾತ್ಮಾ ||೪೨||

ಪ್ರತಿಪದಾರ್ಥ :

(ತಥಾ = ಹೀಗೆ, ವದಂತಂ = ಹೇಳುತ್ತಿರುವ, ಶರಣಾಗತಂ = ಶರಣಾಗತನಾದ, ಸ್ವಂ = ತನ್ನವನೇ ಆದ(ಆತ್ಮೀಯನಾದ), ಸಂಸಾರ-ದಾವಾನಲ-ತಾಪತಪ್ತಂ = ಸಂಸಾರವೆಂಬ ಕಾಡ್ಗಿಚ್ಚಿನಿಂದ ಬೆಂದಿರುವ (ಶಿಷ್ಯನನ್ನು),
ಮಹಾತ್ಮಾ = ಮಹಾತ್ಮನು, ಕಾರುಣ್ಯ-ರಸಾರ್ದ್ರ-ದೃಷ್ಟ್ಯಾ = ಕರುಣೆಯು ತುಂಬಿರುವ ನೋಟದಿಂದ, ನಿರೀಕ್ಷ್ಯ = ನೋಡಿ, ಸಹಸಾ = ಕೂಡಲೇ, ಅಭೀತಿಂ = ಅಭಯವನ್ನು(ಧೈರ್ಯವನ್ನು), ದದ್ಯಾತ್ = ಕೊಡಬೇಕು)

ತಾತ್ಪರ್ಯ : 

ಹೀಗೆ ಬೇಡಿಕೊಳ್ಳುತ್ತಿರುವ , ಸಂಸಾರವೆಂಬ ಕಾಡ್ಗಿಚ್ಚಿನಿಂದ ಬೆಂದು ಶರಣಾಗತನಾಗಿರುವ ತನ್ನ ಶಿಷ್ಯನನ್ನು ಮಹಾತ್ಮನಾದ ಗುರುವು ಕರುಣಾಪೂರಿತವಾದ ನೋಟದಿಂದ ನೋಡಿ ಕೂಡಲೇ ಅಭಯವನ್ನು ನೀಡ.ಬೇಕು.

ವಿವರಣೆ : 

'ಹೆದರಿದವನ ಮೇಲೆ ಕಪ್ಪೆ ಎಸೆಯುವ ’ ಬದಲು ಅಂಜಿಕೆಯನ್ನು ಹೋಗಲಾಡಿಬಲ್ಲಂತಹ ನಾಲ್ಕು ಒಳ್ಳೆಯ ಮಾತುಗಳನ್ನು ಆಡುವುದು ಸೌಜನ್ಯತೆ. ವಿವೇಕಾನಂದರು " stregnth is life weakness is death" ಎಂದು ಸಾರುವ ಮೂಲಕ ಎಲ್ಲರಲ್ಲೂ ಧೈರ್ಯವನ್ನು ತುಂಬಿದ್ದಾರೆ. ಮಹಾತ್ಮನಾದ ಗುರುವು ದೀನನಾಗಿ ತನ್ನ ಬಳಿಗೆ ಬರುವ ಶಿಷ್ಯನಿಗೆ ಮೊದಲು ಅಭಯವನ್ನು ಕೊಡಬೇಕು ಮತ್ತು ಆತನನ್ನು ಕರುಣೆಯಿಂದ ಕಂಡು ಉಪಚರಿಸಬೇಕು ಎಂದು ಆಚಾರ್ಯರು ಹೇಳುತ್ತಾರೆ.

ಮುಂದಿನ ಕಂತಿನಲ್ಲಿ ಇನ್ನಷ್ಟು ತಿಳಿಯೋಣ.
---------------

ಕೊ : ಈ ಕಂತಿನಲ್ಲಿರುವ  ವಿಚಾರಗಳು ಈಗಾಗಲೇ ಮತ್ತೆ-ಮತ್ತೆ ಬಂದಿರುವುದರಿಂದ  ಚಿಕ್ಕದಾಗಿ ಹೇಳಿದ್ದೇನೆ . ಅಗತ್ಯವಿರುವಲ್ಲಿ ವಿಸ್ತರಿಸುತ್ತೇನೆ.

Saturday, April 14, 2012

ವಿವೇಕ ಚೂಡಾಮಣಿ -ಭಾಗ -೨೦




मूलम् - ಮೂಲ:

अयं स्व्भावस्स्व्त एव यत्पर श्रमापनोदप्रवणं महात्मनाम् ।
सुधांशुरेष स्वयमर्क - कर्कश-प्रभाभितत्पा-मवति क्षितिं किल ॥೩೯।


ಅಯಂ ಸ್ವಭಾವಃ ಸ್ವತ ಏವ ಯತ್ಪರ-ಶ್ರಮಾಪನೋದ -ಪ್ರವಣಂ  ಮಹಾತ್ಮನಾಮ್ |
ಸುಧಾಂಶುರೇಷ ಸ್ವಯಮರ್ಕ-ಕರ್ಕಶ-ಪ್ರಭಾಽಭಿತಪ್ತಾಮವತಿ ಕ್ಷಿತಿಂ ಕಿಲ ||೩೯||

ಪ್ರತಿಪದಾರ್ಥ :

(ಸ್ವತಃ ಏವ = ತಾವಾಗಿಯೇ, ಪರಶ್ರಮಾಪನೋದ-ಪ್ರವಣಂ ಯತ್ = ಇತರರ ಕಷ್ಟ(ಶ್ರಮ)ಪರಿಹಾರದಲ್ಲಿ ಪ್ರವೃತ್ತಿಯು ಯಾವುದೋ, ಅಯಂ = ಇದು ಮಹಾತ್ಮರ, ಸ್ವಭಾವಃ = ಸಹಜಗುಣ, ಅರ್ಕ-ಕರ್ಕಶಪ್ರಭಾ-ಅಭಿತಪ್ತಾಂ = ಸೂರ್ಯನ ಪ್ರಖರವಾದ ಬಿಸಿಲಿನಿಂದ ಬೆಂದಿರುವ, ಕ್ಷಿತಿಂ = ಭೂಮಿಯನ್ನು, ಏಷಃ ಸುಧಾಂಶುಃ = ಈ ಚಂದ್ರಮನು, ಸ್ವಯಂ = ತಾನೇ, ಅವತಿ ಕಿಲ = ರಕ್ಷಿಸುವನಲ್ಲವೆ ? )

ತಾತ್ಪರ್ಯ :

ಇತರರ ಕಷ್ಟವನ್ನು, ಬೇನೆಗಳನ್ನು ಪರಿಹರಿಸುವುದರಲ್ಲಿ ತಾವಾಗಿಯೇ ಮುನ್ನುಗುವುದು ಮುಂದಾಲೋಚಿಸುವುದು ಮಹಾತ್ಮರು ಜ್ಞಾನಿಗಳೆನಿಸಿಕೊಂಡವರ ಸಹಜಗುಣವು.  ನೇಸರನ ತುಂಬ ಚುರುಕಾದ ಬಿಸಿಲಿನಿಂದ ಬೇಯುವ ಭೂಮಿಯನ್ನು ತಿಂಗಳನು ತಾನೇ ತನ್ನ  ಬೆಳಕಿನಿಂದ ತಂಪಾಗಿಸುವುದಿಲ್ಲವೆ ? .

ವಿವರಣೆ :

ಕಬ್ಬಿನಲ್ಲಿ ಸಿಹಿಯು ಏಕಿರಬೇಕು ಎಂಬ ಪ್ರಶ್ನೆಯೇ ಅಸಂಗತವಾಗಿಬಿಡುತ್ತದೆ. ಸಕ್ಕರೆಯಲ್ಲಿ ಸಿಹಿಯ ಕಾರಣವನ್ನು ಹುಡುಕಿದಂತೆ !.  ಕಬ್ಬಿನಲ್ಲಿ ಸಿಹಿಯು ಇರುವುದು ಹುಟ್ಟಿನಿಂದಲೇ ಬಂದುದಾಗಿರುತ್ತದೆ.  ಹಾಗೆಯೇ ಬ್ರಹ್ಮಜ್ಞಾನಿಗಳೆನಿಸಿಕೊಂಡವರು ಲೋಕದ ಸಂಕಟಕ್ಕೆ ತಾವಾಗಿಯೇ ಯಾವ ಪ್ರಚೋದನೆಗೂ ಒಳಗಾಗದೆ ಮರುಗುವ ಮತ್ತು ಕಷ್ಟವನ್ನು ಹೋಗಲಾಡಿಸುವ ಸಹಜಗುಣವನ್ನು ಹೊಂದಿರುತ್ತಾರೆ.

ಆಕ್ಷೇಪ :      ನಿಮಿತ್ತವಿಲ್ಲದೆ ಪ್ರವೃತ್ತಿಯೂ ಇಲ್ಲ ಅಲ್ಲವೆ ?
ಸಮಾಧಾನ : ರವಿ-ಚಂದ್ರರು ಯಾವ ನಿಮಿತ್ತದಿಂದ (ಕಾರಣದಿಂದ) ಧರೆಗೆ ಬೆಳಕನೀಯುತ್ತಿದ್ದಾರೆ ? ಈ ಪ್ರಕ್ರಿಯೆಯು ದಿನವೂ ಅನಿಮಿತ್ತವಾಗಿಯೇ ನೆಡೆಯುತ್ತಿದೆ.

ನೇಸರನ ಪ್ರಖರವಾದ ಕಿರಣಗಳು ಭೂಮಿಯನ್ನು ದಿನವೆಲ್ಲಾ ಕಾಯಿಸಿದರೆ ಇರುಳಿನಲ್ಲಿ ಚಂದ್ರನು ತನ್ನ ಸೊಬಗಿನ ಬೆಳಕಿನಿಂದ ಧರೆಯನ್ನು ತಂಪಾಗಿಸುತ್ತಾನೆ. ಇಬ್ಬರಿಗೂ ಯಾವ ಕಾರ್ಯ-ಕಾರಣಗಳೂ ಇಲ್ಲಿ ಇರುವುದಿಲ್ಲ. ಪ್ರಕೃತಿಯಲ್ಲಿನ ಸಹಜಕ್ರಿಯೆಗಳಂತೆ ಮಹಾತ್ಮರಾದವರೂ ಸಹ ಅನ್ಯರಿಗಾಗಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ.  ದ.ರಾ. ಬೇಂದ್ರೆಯವರು ಹೇಳುವಂತೆ " ಎನ್ನ ಪಾಡೆನಗಿರಲಿ ಅದರ ಹಾಡನ್ನಷ್ಟೆ ನೀಡುವೆನು ರಸಿಕ ನಿನಗೆ " ಎಂಬ ಭಾವವು ಇಲ್ಲಿ ಕಂಡುಬರುತ್ತದೆ. ಕರ್ಮಗಳೆಂಬ ಬಿರುಬಿಸಿಲಿನಲ್ಲಿ ಬೆಂದು ನೊಂದು ಬರುವ ಅಪೇಕ್ಷಿಯನ್ನು, ಜ್ಞಾನಿಯು ತತ್ವವೆಂಬ ತಿಂಗಳ ಬೆಳಕಿನಿಂದ ಸಂತೈಸುತ್ತಾನೆ. ಕಾರಿರುಳೆಂಬ ರಕ್ಕಸಿಯು ತೊಲಗಿದ ನಂತರ ಬೆಳಕೆಂಬ ಅಮೃತವು ಸಹಜವಾಗಿ ಬರುತ್ತದೆ. ಅಜ್ಞಾನವನ್ನು ತೊಡೆದು ಹಾಕುವುದಷ್ಟೇ ಗುರುವಿನ ಕೆಲಸ. ಜ್ಞಾನ ಪ್ರಾಪ್ತಿಯ ನಂತರ ಗುರುವೂ ಇಲ್ಲಿ ನಗಣ್ಯ !. ಇರುಳೇ ಇರದಿದ್ದರೆ ’ಹಗಲು ಬರುತ್ತದೆ’ ಎಬುದಕ್ಕೆ ಅರ್ಥವುಂಟೆ ? . ಮುಂದಿನದೆಲ್ಲವೂ ಸ್ವಾನುಭವದಿಂದಲೆ ಬರುವಂತಹುದು. ಜ್ಞಾನಿಗೆ ಯಾವ ನಿಮಿತ್ತವೂ ಇರುವುದಿಲ್ಲ.  ಮಾಗಿದ ಹಣ್ಣು ತಂತಾನೇ ಬೀಳುವಂತೆ ಮಹಾತ್ಮರೂ ಸಹ ಅನಿಮಿತ್ತವಾಗಿ ಲೋಕವನ್ನು ರಕ್ಷಿಸುತ್ತಾರೆ ಎಂದು ಆಚಾರ್ಯರು ವಿವರಿಸಿರುತ್ತಾರೆ.

मूलम् - ಮೂಲ

ब्रम्हानन्द-रसानुभूति-कलितैः पूतैः सुशीतैः सितैः
युष्मद्वाक्कल शोज्झितैः श्रुतिसुखैः वाक्यामृतैः सेचय ।
संतप्तं भवतापदावदहन-ज्वालाभिरेनं प्रभो
धन्यास्ते भवदिक्षण-क्षणगतेः पात्रिकृताः स्वीकृताः ॥४೦॥

ಬ್ರಹ್ಮಾನಂದ- ರಸಾನುಭೂತಿ-ಕಲಿತೈಃ ಪೂತೈಃ ಸುಶೀತೈರ್ಹಿತೈಃ(ಸಿತೈಃ)
ಯುಷ್ಮದ್-ವಾಕ್ಕಲಶೋಜ್ಝಿತೈಃಶ್ರುತಿಸುಖೈರ್ವಾಕ್ಯಾಮೃತೈಃ ಸೇಚಯ|
ಸಂತಪ್ತಂ ಭವತಾಪ -ದಾವದಹನ -ಜ್ವಾಲಾಭಿರೇನಂ ಪ್ರಭೋ
ಧನ್ಯಾಸ್ತೇ ಭವದೀಕ್ಷಣ -ಕ್ಷಣಗತೇಃ ಪಾತ್ರೀಕೃತಾಃ ಸ್ವೀಕೃತಾಃ || ೪೦||

ಪ್ರತಿಪದಾರ್ಥ :

(ಪ್ರಭೋ = ಹೇ ಗುರುವೆ, ಭವತಾಪ-ದಾವದಹನ-ಜ್ವಾಲಾಭಿಃ= ಸಂಸಾರವೆಂಬ ಕಾಳ್ಗಿಚ್ಚಿನ ಜ್ವಾಲೆಗಳಿಂದ, ಸಂತಪ್ತಂ = ಬೆಂದಿರುವ, ಏನಂ = ಈ (ನನ್ನನ್ನು), ಬ್ರಹ್ಮಾನಂದ -ರಸಾನುಭೂತಿ-ಕಲಿತೈಃ = ತನ್ನರಿವಿನ (ಬ್ರಹ್ಮಾನಂದದ) ಅನುಭವದಿಂದ ಕೂಡಿರುವ- ಮಧುರವಾಗಿರುವ, ಪೂತೈಃ= ಅಪ್ಪಟವಾದ(ಶುದ್ಧವಾದ), ಸುಶೀತೈಃ = ತಂಪಾಗಿರುವ (ಶೀತಲವಾಗಿರುವ), ಹಿತೈಃ = ಒಳ್ಳೆಯದಾದ(ಹಿತವಾಗಿರುವ), ಯುಷ್ಮತ್-ವಾಕ್-ಕಲಶ-ಉಜ್ಝಿತೈಃ = ನಿಮ್ಮ ಮಾತುಗಳೆಂಬ ಕಲಶದಿಂದ ಹೊರಹೊಮ್ಮಿರುವ, ಶ್ರುತಿಸುಖೈಃ = ಕೇಳಲು ಇಂಪಾಗಿರುವ, ವಾಕ್ಯಾಮೃತೈಃ = ನಲ್ನುಡಿಗಳೆಂಬ ಅಮೃತಧಾರೆಗಳಿಂದ, ಸೇಚಯ = ತೋಯಿಸು (ಚಿಮುಕಿಸು), ಭವತ್-ಈಕ್ಷಣ-ಕ್ಷಣ-ಗತೇ = ನಿನ್ನ ಕಟಾಕ್ಷದ ಕ್ಷಣಮಾತ್ರ -ಪ್ರಸರಣೆಗೆ, ಪಾತ್ರೀ-ಕೃತಾಃ = ಪಾತ್ರರಾಗಿರುವ, ಸ್ವೀಕೃತಾಃ = ಒಪ್ಪಿಗೆಯಾಗಿರುವ, ತೇ = ಅವರು(ಅಪೇಕ್ಷಿಯು), ಧನ್ಯಾಃ = ಧನ್ಯರು.)

ತಾತ್ಪರ್ಯ :

ಹೇ ಗುರುವೆ, ಸಂಸಾರತಾಪತ್ರಯವೆಂಬ ಕಾಳ್ಗಿಚ್ಚಿನಿಂದ ಬೆಂದಿರುವ ನೊಂದಿರುವ ನನ್ನನ್ನು ಬ್ರಹ್ಮಾನಂದ -ರಸಾನುಭವದಿಂದ ಕೂಡಿರುವ ಮಧುರವಾಗಿರುವ ಕೇಳಲು ಇಂಪಾಗಿರುವ ನಿಮ್ಮ ಮಾತೆಂಬ ಕಲಶದಿಂದ ಹೊರಹೊಮ್ಮಿರುವ ನಲ್ನುಡಿಗಳಿಂದ-ಉಪದೇಶಾಮೃತದಿಂದ ತೋಯಿಸಿರಿ-ಚಿಮುಕಿಸಿರಿ; ಇಂತಹ ನಿಮ್ಮ ಕಟಾಕ್ಷದ ಕ್ಷಣಮಾತ್ರದ ಪ್ರಸರಣೆಗೆ ಪಾತ್ರರಾಗಿ ಒಪ್ಪಿಗೆಯಾಗಿರುವವರೇ ಧನ್ಯರು !.

ವಿವರಣೆ :

ಹೀಗೆ ಶಿಷ್ಯನಾಗುವವನು ಗುರುವಿನ ಮುಂದೆ ನಿವೇದಿಸಿಕೊಳ್ಳುತ್ತಾ ತನ್ನನ್ನು ಸಂಸಾರದ ಜಂಜಡಗಳಿಂದ ಪಾರುಮಾಡಿ ಎಂದು ಕೇಳಿಕೊಳ್ಳುತ್ತಾನೆ. ಆ ಗುರುವಾದರೂ ಸ್ವತಃ ಬ್ರಹ್ಮಜ್ಞಾನಿಯೇ ಆಗಿರುತ್ತಾನೆ. ಬ್ರಹ್ಮಾನಂದದ ರಸಾನುಭವದಲ್ಲಿ ಮಿಂದಿರುತ್ತಾರೆ. ಗುರುವಿನ ತತ್ವೋಪದೇಶವು ಇಂಪಾದ ಸಂಗೀತದಂತಿರುತ್ತದೆ. ಇಂತಹ ಉಪದೇಶಾಮೃತವನ್ನು ನನಗೆ ಚಿಮುಕಿಸಿ ಎಂದು ಅಪೇಕ್ಷಿಯು ವಿನಂತಿಸುತ್ತಾನೆ. ಇಂತಹ ಕ್ಷಣಮಾತ್ರದ ಘಟನೆಗೆ ಪಾತ್ರರಾಗುವವರೇ ಧನ್ಯರು ಎಂದು ಆಚಾರ್ಯರು ವಿವರಿಸುತ್ತಾರೆ. ಗುರೂಪದೇಶವು ಅಜ್ಞಾನವನ್ನು ತೊಡೆದು ಹಾಕುವುದರಿಂದ ಅದು ಅಪ್ಪಟವಾದು (ಪೂತೈಃ) ಅಥವಾ ಪವಿತ್ರವಾದುದು ಮತ್ತು ರಜಸ್ಸು ಮತ್ತು ತಮಸ್ಸನ್ನು ಹೋಗಲಾಡಿಸಿ ಸತ್ವಗುಣಮಾರ್ಗವೊಂದನ್ನೆ ಹೊಂದಿಸುವುದರಿಂದ ಅದು ನಿರ್ಮಲವಾದುದು (ಸಿತೈಃ) ಎಂದು ಶ್ರೀ ಚಂದ್ರಶೇಖರ ಭಾರತಿಗಳು ವ್ಯಾಖ್ಯಾನಿಸಿರುತ್ತಾರೆ.
ಬ್ರಹ್ಮಜ್ಞಾನಕ್ಕೆ ಸ್ವಾನುಭವವೇ ಮುಖ್ಯವಾದರೂ ಗುರುವಿಲ್ಲದ ಗುರೂಪದೇಶವಿಲ್ಲದ ಜ್ಞಾನವು ವ್ಯರ್ಥವೆಂದೇ ತಿಳಿಯಬೇಕಾಗುತ್ತದೆ. ಗುರುವು catalyst (ವೇಗವರ್ಧಕ) ನಂತೆ ಕಾರ್ಯ ನಿರ್ವಹಿಸುತ್ತಾರೆ. ಉಪದೇಶವು ಮುಗಿದ ನಂತರ ಶಿಷ್ಯನು ಜ್ಞಾನಿಯೇ ಆಗಿರುತ್ತಾನೆ. ಶ್ರವಣಮಾತ್ರದಿಂದಲೇ (ಶ್ರುತಿ ಸುಖೈಃ) ಬ್ರಹ್ಮದ ಆನಂದವು ಲಭಿಸುವುದರಿಂದ ಮುಂದೆ ಉಪದೇಶದ ಅಗತ್ಯವಿಲ್ಲದೆ ಮನನ ಮತ್ತು ನಿಧಿಧ್ಯಾಸನಗಳಿಂದ ಬ್ರಹ್ಮದ ಅನುಭವವನ್ನು ಪಡೆಯುತ್ತಾನೆ ಎಂದು ಆಚಾರ್ಯರು ವಿವರಿಸುತ್ತಾರೆ.
ಗುರೂಪದೇಶವೆಂದರೆ ವೇದಾಂತದ ಅರ್ಥ ವಿಚಾರಗಳನ್ನು ತಿಳಿಯುವುದು ಚರ್ಚಿಸುವುದು ಮತ್ತು ಜ್ಞಾನಪ್ರಾಪ್ತಿಯ ನಂತರ ವಿಚಾರ-ಚರ್ಚೆಗಳನ್ನು ಬದಿಗಿಟ್ಟು ಬ್ರಹ್ಮಾನುಭವದಲ್ಲಿ ತೊಡಗುವುದು ಎಂದು ಹೇಳುತ್ತಾರೆ.
"ವೇದಾಂತದ ಅರಿವಿಲ್ಲದ ಜ್ಞಾನವೂ ವ್ಯರ್ಥ ಜ್ಞಾನಪ್ರಾಪ್ತಿಯ ನಂತರ ವೇದಾಂತವೂ ವ್ಯರ್ಥ" ಎಂದು ರಮಣಮಹರ್ಷಿಗಳು ಒಂದೆಡೆ ಹೇಳುತ್ತಾರೆ. (’ಜ್ಞಾನ ಬಂದಮೇಲೆ ವೇದಾಂತ ಏಕಪ್ಪಾ ? ತಲೆ ಚಚ್ಕೋಳೋಕೆ !’ ಎನ್ನುತ್ತಾರೆ ರಮಣರು) .
ಆಚಾರ್ಯರು ಜ್ಞಾನದ ಪಾರಮ್ಯದಲ್ಲಿ ಕರ್ಮವನ್ನು ಕಡೆಗಣಿಸಿದ್ದಾರೆ ಎಂಬ ಆಕ್ಷೇಪಗಳು ಅಲ್ಲಲ್ಲಿ ಬರುತ್ತಿರುತ್ತದೆ. ವಾಸ್ತವದಲ್ಲಿ ಶಂಕರರು ಕರ್ಮಕ್ಕೆ ಸಲ್ಲಬೇಕಾದ ಎಲ್ಲ ಗೌರವವನ್ನೂ ನೀಡಿದ್ದಾರೆ. ಅದನ್ನು ಆಚಾರ್ಯರ ಕೃತಿಗಳ ಅಧ್ಯಯನದಿಂದಲೇ ಕಂಡುಕೊಳ್ಳಬಹುದು. ಕರ್ಮದಲ್ಲಿ ಹೊಂದಾಣಿಕೆಯು ಬರುವಂತೆ ಜ್ಞಾನದಲ್ಲಿ ಯಾವ ಹೊಂದಾಣಿಕೆಯೂ ಬರುವುದಿಲ್ಲ.  ಪಕ್ಕದ ಮನೆಯವರು ತಿರುಪತಿಗೆ ಹೊರಟಿದ್ದಾರೆ ಎಂದರೆ ನಾವೂ ನೂರು ರೂಪಾಯಿ ಕೊಟ್ಟು ನಮ್ಮದೂ ಒಂದು ನಮಸ್ಕಾರ ಹಾಕಿ ಬನ್ನಿ ಎಂದು ಸವರಿಸಿ ಕುಳಿತಲ್ಲೇ ಗೋವಿಂದ ಎನ್ನಬಹುದು !. ಹಿರಿಯರ ಕಾರ್ಯಗಳನ್ನು ಮಾಡುವಾಗ (ಶ್ರಾದ್ಧಾದಿಗಳು) ಅನಿರ್ವಾಹ ಪಕ್ಷದಲ್ಲಿ ಸಂಬಂಧಿಕರಿಂದ ಅಂತಹ ಕರ್ಮಗಳನ್ನು ಮಾಡಿಸುವ ಅವಕಾಶವೂ ಉಂಟು. ಪಕ್ಕದಲ್ಲಿ ಇರದಿದ್ದರೂ ಅವರ ಹೆಸರು-ಕುಲ-ಗೋತ್ರಗಳನ್ನು ಹೇಳಿ ಕಾರ್ಯಗಳನ್ನು ನೆಡೆಸಬಹುದು ನೆಡೆಯಿಸುತ್ತಿದ್ದೇವೆ. ಇಂತಹ ಹೊಂದಾಣಿಕೆಗಳ ಗೊಂದಲದಲ್ಲಿ ಕರ್ಮದ ಬಲವು ಕಡಿಮೆಯಾಗುತ್ತದೆ. ಆದರೆ ಜ್ಞಾನವು ವಿಚಾರದಿಂದ ಮತ್ತು ಸ್ವಾನುಭದಿಂದ ಮಾತ್ರವೇ ಬರುವಂತಹುದಾದುದರಿಂದ ಹೊಂದಾಣಿಕೆಯ ಪ್ರಶ್ನೆಯೇ ಬರುವುದಿಲ್ಲ. ಹೋಟೆಲಿನ ಮಾಣಿಯು ಬಗೆಬಗೆಯ ತಿನಿಸುಗಳ ಪಟ್ಟಿಯನ್ನು ವದರಿದ ಮಾತ್ರಕ್ಕೆ ನಮ್ಮ ಹೊಟ್ಟೆ ತುಂಬಿಬಿಡುತ್ತದಯೆ ? ನಾವೇ ತಿಂದು ಹೊಟ್ಟೆ ತುಂಬಿಸಿಕೊಳ್ಳಬೇಕಾಗುತ್ತದೆ.  ವದರುವ ಕೆಲಸವನ್ನು ಯಾರು ಬೇಕಾದರೂ ಮಾಡಬಹುದು ಆದರೆ ತಿನ್ನುವುದು ಮಾತ್ರ ಸ್ವಾನುಭವದ ಕೆಲಸ !.

ಮುಂದೆ ಗುರು-ಶಿಷ್ಯರ ಸಂವಾದದ ಮೂಲಕ ಬ್ರಹ್ಮವಿದ್ಯೆಯ ಆರಂಭವನ್ನು ತಿಳಿಯೋಣ.

ವಂದನೆಗಳು.

Monday, February 13, 2012

ವಿವೇಕ ಚೂಡಾಮಣಿ-ಭಾಗ-೧೯




मूलम् - ಮೂಲ

दुर्वारसंसारदवाग्नितप्तं दोधूयमानं दुरदृष्टवातैः ।
भीतं प्रसन्नं परिपाहि मृत्योः शरण्यमन्यं यदहं न जाने ॥३८॥

ದುರ್ವಾರ-ಸಂಸಾರ-ದವಾಗ್ನಿತಪ್ತಂ ದೋಧೂಯಮಾನಂ ದುರದೃಷ್ಟವಾತೈಃ |
ಭೀತಂ ಪ್ರಪನ್ನಂ ಪರಿಪಾಹಿ ಮೃತ್ಯೋಃ ಶರಣ್ಯಮನ್ಯಂ ಯದಹಂ ನ ಜಾನೇ ||೩೭||

ಪ್ರತಿಪದಾರ್ಥ :

 (ಯತ್ = ಯಾವ ಕಾರಣದಿಂದ, ಅಹಂ =ನಾನು, ಅನ್ಯಂ ಶರಣ್ಯಂ= ಬೇರೆ ಗುರುವನ್ನು(ಕಾಯುವವನನ್ನು) , ನ ಜಾನೇ=ಅರಿಯೆನೊ , (ಹೀಗಾಗಿ) ದುರ್ವಾರ-ಸಂಸಾರ-ದವಾಗ್ನಿತಪ್ತಂ = ಬಗೆಹರಿಸಲು ಆಗದಿರುವ ಬದುಕಿನ ಜಂಜಡಗಳೆಂಬ ಕಾಳ್ಗಿಚ್ಚಿನಿಂದ ಬೆಂದಿರುವ (ನೊಂದಿರುವ), ದುರದೃಷ್ಟವಾತೈಃ = ದುರದೃಷ್ಟವೆಂಬ ಬಿರುಗಾಳಿಯಿಂದ , ದೋಧೂಯಮಾನಂ = ಅದುರುತ್ತಿರುವ(ಕಂಪಿಸುತ್ತಿರುವ), ಭೀತಂ = ಹೆದರಿರುವ, ಪ್ರಪನ್ನಂ = ಶರಣು ಬಂದಿರುವ, (ನನ್ನನ್ನು) ಮೃತ್ಯೋಃ = ಇಂತಹ ಸಾವಿನಿಂದ, ಪರಿಪಾಹಿ = ಕಾಪಾಡು).

ತಾತ್ಪರ್ಯ:

ಪರಿಹರಿಸಲು ಆಗದಿರುವ ಸಂಸಾರವೆಂಬ ಜಂಜಡಗಳ ಕಾಳ್ಗಿಚ್ಚಿನಿಂದ ಬೆಂದು-ನೊಂದು ದುರದೃಷ್ಟವೆಂಬ ಬಿರುಗಾಳಿಯಿಂದ ಅದುರಿ-ಬೆದರಿ ನಿನ್ನಲ್ಲಿಯೇ ಶರಣು ಬಂದಿರುವ ನನ್ನನ್ನು ಈ ಸಂಸಾರವೆಂಬ ಸಾವಿನ ಮನೆಯಿಂದ ಕಾಪಾಡು; ಏಕೆಂದರೆ ಬೇರೆ ಯಾವ ಗುರುವನ್ನೂ ರಕ್ಷಕನನ್ನೂ ನಾನರಿಯೆನು .

ವಿವರಣೆ:

ಆತ್ಮಜ್ಞಾನವನ್ನು ಅರಸಿ ಬರುವ ಶಿಷ್ಯನು ಗುರುವಿನ ಮುಂದೆ ನಿವೇದಿಸಿಕೊಳ್ಳುತ್ತಾ ’ನಿಮ್ಮನ್ನು ಬಿಟ್ಟರೆ ಬೇರಾರೂ ನನಗೆ ದಾರಿ ತೋರುವವರಿಲ್ಲ’ ಎಂದು ಹೇಳುತ್ತಾನೆ. ಗುರುವು ಯಾವ ಕಾರಣಕ್ಕೂ ತನ್ನನ್ನು ಪಕ್ಕಕ್ಕೆ ಸರಿಸಬಾರದು ಅಥವಾ ಉದಾಸೀನ ಮಾಡಬಾರದು ಎಂದು ತನ್ನ ತೀವ್ರತರವಾದ ಮೋಕ್ಷಾಪೇಕ್ಷೆಯನ್ನು ಶಿಷ್ಯನು ಇಲ್ಲಿ ಪ್ರಕಟಿಸುತ್ತಾನೆ. ಸಂಸಾರವೆಂಬುದು ದಾವಾಗ್ನಿ ಅಥವಾ ಕಾಡಿನಕಿಚ್ಚು. ಇದಕ್ಕೆ ಬಿರುಗಾಳಿಯು ಸೇರಿಕೊಂಡುಬಿಟ್ಟರೆ ಅದು ಎಲ್ಲೆಡೆ ಬಹುಬೇಗ ಹರಡತೊಡಗುತ್ತದೆ. ಮತ್ತೆ-ಮತ್ತೆ ಸಂಸಾರದೊಳಗೆ ಬೀಳುವಂತೆ ಮಾಡುತ್ತಿರುವ ಬಯಕೆಗಳಿಂದ ಅಥವಾ ವಾಸನೆಗಳಿಂದ ಹೆದರಿ ಬೇರೆಲ್ಲೂ ಹೋಗದೆ ನಿಮ್ಮ ಬಳಿಗೆ ಶರಣಾಗಿ ಬಂದಿರುವ ನನ್ನನ್ನು ದುರದೃಷ್ಟಕರವಾದ ವಾಸನೆಗಳೆಂಬ ಬಿರುಗಾಳಿ-ಕಾಳ್ಗಿಚ್ಚಿನಂತಹ ಸಾವಿನಕೂಪದಿಂದ ಪಾರು ಮಾಡಿ ಎಂದು ಶಿಷ್ಯನು ಕೇಳಿಕೊಳ್ಳುತ್ತಾನೆ. ಗುರುವಿನ ಕೃಪಾದೃಷ್ಟಿಯು (ಕಾರುಣ್ಯದ ನೋಟ, ಅನುಗ್ರಹದ ನೋಟ) ತ್ವರಿತವಾಗಿ ಶಿಷ್ಯನ ಮೇಲೆ ಬೀಳಬೇಕೆಂಬುದು ಮೇಲಿನ ಶ್ಲೋಕದ ಆಶಯವಾಗಿದೆ. ತಡವಾದರೆ ವಾಸನೆಗಳು ಮತ್ತೆ ಸಾಧಕನನ್ನು ಮುತ್ತಿಕೊಂಡು ಸಂಸಾರದೊಳಗೆ ಬೀಳುವಂತೆ ಮಾಡಬಹುದು, ಇದರಿಂದ ಲೋಕಕ್ಕೆ ಮತ್ತೊಬ್ಬ ಸಾಧಕನ ಸೇವೆಯು ಸಿಗಲಾರದು ಎಂಬ ಭಾವವು ಕಂಡುಬರುತ್ತದೆ. ಯಾವಾಗ ಹೆದರದಿದ್ದರು ಮನುಷ್ಯನು ಸಾವಿಗೆ ಹೆದರಬೇಕಾಗುತ್ತದೆ. ಸಾವಿನ ಕೊನೆಯ ಕ್ಷಣದಲ್ಲಾದರೂ ’ಮುಗಿಯಿತೇ’ ಎಂಬ ಕರುಣಾಜನಕ ಭಾವವು ಸಾಮಾನ್ಯವಾಗಿ ಹುಟ್ಟದೇ ಇರಲಾರದು. ಇಂತಹ ಭಯವನ್ನು ಹೋಗಲಾಡಿಸಿ ಜನನ-ಮರಣಗಳೆಂಬ ಜಂಜಡದಿಂದ ನನ್ನನ್ನು ಪಾರುಮಾಡಿ ಎಂದು ಶಿಷ್ಯನು ನಿವೇದಿಸಿಕೊಳ್ಳುವುದು ಸಮುಚಿತವಾಗಿ ಕಂಡುಬರುತ್ತದೆ. ’ಶರಣಮನ್ಯಂ ಯದಹಂ ನ ಜಾನೇ - ನಿಮ್ಮನ್ನು ಬಿಟ್ಟರೆ ನನಗೆ ಗತಿಯಿಲ್ಲ’ ಎಂದು ಗುರುವನ್ನು ತನ್ನೆಡೆಗೆ ಸೆಳೆದುಕೊಳ್ಳುವ ತಂತ್ರವನ್ನೂ ಆಚಾರ್ಯರು ಇಲ್ಲಿ ತುಂಬ ಉದಾರತೆಯಿಂದ ಜ್ಞಾನಾರ್ಥಿಗಳಿಗೆ ತಿಳಿಸಿರುತ್ತಾರೆ.

 मूलम्-ಮೂಲ

शान्ता महान्तो निवसन्तिसन्तो वसन्तवल्लोकहितं चरन्तः ।
तीर्णास्स्वयं भीमभवार्णवं जनानहेतुनाऽन्यानपि तारयन्तः॥३९॥

ಶಾಂತಾ ಮಹಾಂತೋ ನಿವಸಂತಿ ಸಂತೋ ವಸಂತವಲ್ಲೋಕಹಿತಂ ಚರಂತಃ |
ತೀರ್ಣಾಃಸ್ವಯಂ ಭೀಮಭವಾರ್ಣವಂ ಜನಾನಹೇತುನಾಽನ್ಯಾನಪಿ ತಾರಯಂತಃ ||೩೮||

ಪ್ರತಿಪದಾರ್ಥ:

( ಭೀಮಭವಾರ್ಣವಂ = ಅಗಾಧವಾದ(ಜಂಜಡಗಳಿಂದ ಕೂಡಿರುವ) ಸಂಸಾರಸಾಗರವನ್ನು , ಸ್ವಯಂ = ತಾವೇ, ತೀರ್ಣಾಃ = ದಾಟಿರುವವರೂ, ಅಹೇತುನಾ = ನಿಮಿತ್ತವಿಲ್ಲದೆ, ಅನ್ಯಾನ್ ಜನಾನ್ ಅಪಿ = ಇತರ ಜನರನ್ನೂ, ತಾರಯಂತಃ = ದಾಟಿಸುವವರೂ, ಶಾಂತಾಃ = ನೆಮ್ಮದಿಯಿಂದಿರುವವರೂ, ಮಹಾಂತಾಃ = ದೊಡ್ಡವರೂ (ಮಹನೀಯರೂ) [ಆದ], ಸಂತಃ= ಸತ್ಪುರುಷರು, ವಸಂತವತ್ = ವಸಂತಋತುವಿನಂತೆ, ಲೋಕಕಲ್ಯಾಣಗಳನ್ನು , ಚರಂತಃ = ಮಾಡುತ್ತಾ, ನಿವಸಂತಿ = ಇರುತ್ತಾರೆ.)

ತಾತ್ಪರ್ಯ :

ಅಗಾಧವಾದ ಮತ್ತು ಜಂಜಡಗಳಿಂದ ಕೂಡಿರುವ ಸಂಸಾರಸಾಗರವನ್ನು ದಾಟಿ ಯಾವ ನಿಮಿತ್ತವೂ  ಇಲ್ಲದೆ ಇತರರನ್ನೂ ದಾಟಿಸುವ ಶಾಂತರೂ ಮಹನೀಯರೂ ಆದ ಸತ್ಪುರುಷರು ವಸಂತಕಾಲದಂತೆ ಯಾವಾಗಲೂ ಲೋಕಕ್ಕೆ ಒಳಿತನ್ನೇ ಮಾಡುತ್ತಿರುತ್ತಾರೆ.

ವಿವರಣೆ:

ಶಿಷ್ಯನು ಗುರುವನ್ನು ಹೊಂದಿ ಸಂಸಾರಸಾಗರವನ್ನು ದಾಟಿಸಿ ಎಂದೇನೋ ಕೇಳಿಕೊಳ್ಳುತ್ತಾನೆ. ಆದರೆ, ದಾಟಿಸಬಲ್ಲವರು ಯಾರು ?!. ಗುರುವು ಯಶಸ್ವಿಯಾಗಿ ದಾಟಿದ್ದರೆ ಶಿಷ್ಯನನ್ನೂ ದಾಟಿಸುತ್ತಾನೆ. ಈಜು ಬಲ್ಲವನು ಮಾತ್ರ ಈಜು ಬಾರದವನಿಗೆ ಕಲಿಸಬಲ್ಲನು. ಕುರುಡನು ಇತರರಿಗೆ ದಾರಿಯನ್ನು ತೋರಿಸಲಾರನು.  ಜೀವನ್ಮುಕ್ತರನ್ನೇ ಶಿಷ್ಯನು ಜ್ಞಾನಪ್ರಾಪ್ತಿಗಾಗಿ ಆಶ್ರಯಿಸಬೇಕು ಎನ್ನುವುದನ್ನು  ಆಚಾರ್ಯರು ಇಲ್ಲಿ ಸೂಕ್ಷ್ಮವಾಗಿ ಹೇಳಿರುತ್ತಾರೆ. ಹೀಗೆ ಸ್ವಾನುಭವವಿರುವ ಗುರುವು ಯಾವ ಅಪೇಕ್ಷೆಯನ್ನೂ ಇಟ್ಟುಕೊಳ್ಳದೆ ಜ್ಞಾನೋಪದೇಶವನ್ನು ಮಾಡುವವನಾಗಬೇಕು ಎಂಬ ವಿಚಾರವೂ ಇಲ್ಲಿ ಬರುತ್ತದೆ. ಹೀಗೆ ಆಚಾರ್ಯರು ಗುರು-ಶಿಷ್ಯರಿಬ್ಬರಿಗೂ ವಿವೇಕವನ್ನು ಉಪದೇಶಿಸುತ್ತಾ ಹೋಗುತ್ತಾರೆ. ಆಚಾರ್ಯರು ವಸಂತಕಾಲವನ್ನು ಅನುಮೋದಿಸಿರುವುದು ಇಲ್ಲಿಯ ವಿಶೇಷ. ಗ್ರೀಷ್ಮವು ಬಿಸಿಲ ಬೇಗೆಯಿಂದ ಕೂಡಿ ಕಂಗೆಡಿಸಿದರೆ ವರ್ಷಕಾಲದಲ್ಲಿ ಮಳೆಯಿಂದ ಹಾನಿಯೂ ಆಗುವುದುಂಟು. ಶರತ್ಕಾಲ ಮತ್ತು ಶಿಶಿರಗಳಲ್ಲಿ ಚಳಿ ಮತ್ತು ಹಿಮಪಾತಗಳಿಂದ ತೊಂದರೆಯಾಗುವುದುಂಟು. ವಸಂತಕಾಲದಲ್ಲಿ ಪ್ರಕೃತಿಯು ಸೊಬಗಿನಿಂದ ಕೂಡಿ ತಂಗಾಳಿಯನ್ನು ತೀಡುತ್ತಾ ಹಿತಕರವಾದ ಸನ್ನಿವೇಷವನ್ನು ಉಂಟುಮಾಡುವುದರಿಂದ ವಸಂತಕಾಲವನ್ನು ಇಲ್ಲಿ ಪ್ರಸ್ತಾವಿಸಿದ್ದಾರೆ ಎನ್ನಬಹುದು. ಸತ್ಪುರುಷರಾದ ಗುರುಗಳು ವಸಂತಕಾಲದಂತೆ ಯಾವಾಗಲೂ ಲೋಕಹಿತವನ್ನೇ ಬಯಸುತ್ತಾ ಒಳಿತನ್ನೇ ಉಂಟುಮಾಡುತ್ತಿರುತ್ತಾರೆ ಎನ್ನುವುದು ತಾತ್ಪರ್ಯ.

 ಮುಂದಿನ ಕಂತಿನಲ್ಲಿ ಇನ್ನಷ್ಟು ತಿಳಿಯೋಣ...

Thursday, January 12, 2012

ವಿವೇಕ ಚೂಡಾಮಣಿ-ಭಾಗ-೧೮



मूलम् = ಮೂಲ

स्वामिन्नमस्ते नतलोकबन्धो 
करुण्यसिन्धो पतितं भवाब्धौ ।
मामुद्धरात्मीयकटाक्षदृष्ट्या 
ऋज्व्याऽतिकारुण्यसुधाभिवृष्ट्या ॥೩೬||

ಸ್ವಾಮಿನ್ನಮಸ್ತೇ ನತಲೋಕ ಬಂಧೋ
ಕಾರುಣ್ಯಸಿಂಧೋ ಪತಿತಂ ಭವಾಬ್ಧೌ  |
ಮಾಮುದ್ಧರಾತ್ಮೀಯ-ಕಟಾಕ್ಷದೃಷ್ಟ್ಯಾ
ಋಜ್ವ್ಯಾಽತಿಕಾರುಣ್ಯ-ಸುಧಾಭಿವೃಷ್ಟ್ಯಾ || ೩೬||

ಪ್ರತಿಪದಾರ್ಥ:

(ನತಲೋಕಬಂಧೋ =ನಮಿಸುತ್ತಿರುವ ಜನರ ಬಂಧುವೆ, ಕಾರುಣ್ಯ ಸಿಂಧೋ = ಕರುಣಾಸಾಗರನೆ, ಸ್ವಾಮಿನ್ = ಸ್ವಾಮಿಯೆ-ಗುರುವೆ, ತೇ =ನಿನಗೆ, ನಮಃ= ನಮನಗಳು ;  ಭವಾಬ್ಧೌ =ಸಂಸಾರಸಾಗರದಲ್ಲಿ , ಪತಿತಂ = ಬಿದ್ದಿರುವ-ನೊಂದಿರುವ, ಮಾಂ- ನನ್ನನ್ನು, ಋಜ್ವ್ಯಾ = ಸರಳವಾದ-ಒಳ್ಳೆಯದಾದ, ಅತಿಕಾರುಣ್ಯ -ಸುಧಾಭಿವೃಷ್ಟ್ಯಾ = ಕರುಣೆಯೆಂಬ ಅಮೃತವನ್ನು ಸುರಿಸುತ್ತಿರುವ, ಆತ್ಮೀಯ-ಕಟಾಕ್ಷ-ದೃಷ್ಟ್ಯಾ = ನಿನ್ನ ಅನುಗ್ರಹದ ದೃಷ್ಟಿಯಿಂದ, ಉದ್ಧರ = ಉಧ್ಧಾರಮಾಡು. )

ತಾತ್ಪರ್ಯ :

ನಮಿಸುತ್ತಿರುವ ಜನಗಳ ಬಂಧುವೂ ಕರುಣಾಸಾಗರನೂ ಆದ ಗುರುವೇ ನಿನಗೆ ನಮಸ್ಕಾರವು. ಸಂಸಾರಸಾಗರದಲ್ಲಿ ಬಿದ್ದು ಭ್ರಮೆಗೊಳಗಾಗಿರುವ ನನ್ನನ್ನು ನಿನ್ನ ಕರುಣಾಮೃತವನ್ನು ಸುರಿಸುತ್ತಿರುವ ಕಣ್ಣುಗಳಿಂದ ದಿಟ್ಟಿಸಿ- ಅನುಗ್ರಹಿಸಿ ಉದ್ಧಾರಮಾಡು.

ವಿವರಣೆ:

ಜ್ಞಾನಾರ್ಥಿಯು ಬ್ರಹ್ಮದ ಅರಿವನ್ನು ಪಡೆಯುವ ವಿಷಯವನ್ನು ಮತ್ತು ಪರಿಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಬ್ರಹ್ಮಜ್ಞಾನಿಯಾದ ಗುರುವಿನ ಬಳಿಸಾರಿಬೇಕು ಎಂದು ಆಚಾರ್ಯರು ಹೇಳಿ ಮುಂದೆ ಶಿಷ್ಯನು ಗುರುವಿನ ಮುಂದೆ ತನ್ನ ಅಪೇಕ್ಷೆಯನ್ನು ಹೇಗೆ ನಿವೇದಿಸಿಕೊಳ್ಳಬೇಕು ಎನ್ನುವುದನ್ನು ’ಸ್ವಾಮಿನ್ ನಮಸ್ತೆ..’ ಎಂಬ ಶ್ಲೋಕದಲ್ಲಿ ವಿವರಿಸಿರುತ್ತಾರೆ. ಗುರುವಿನ ಮುಂದೆ ಹೇಳಿಕೊಳ್ಳುವುದೆಂದರೆ ಅದು ಪೂರ್ವಯೋಜಿತವೋ ಮುಖಸ್ತುತಿಯೋ ಆಗಿರದೆ ಸಾಧನ ಚತುಷ್ಟಯ ಸಂಪನ್ನತೆಯಿಂದ ತಾನಾಗೆ ಹೊರಬರುವ ಭಾವವಾಗಿರಬೇಕು ಎನ್ನುವುದು ಬಹುಮುಖ್ಯ ವಿಚಾರ. ವೈರಾಗ್ಯ ಬಂದ ಮಾತ್ರಕ್ಕೆ ಆತ ಜ್ಞಾನಿಯಾಗುವುದಿಲ್ಲ ಅಥವಾ ’ನಾನು ಸರ್ವಗುಣ ಸಂಪನ್ನನಾಗಿದ್ದೇನೆ ಆದುದರಿಂದ ಗುರುವೇ ನನ್ನನ್ನು ಅರಸಿ ಬರುತ್ತಾನೆ’ ಎನ್ನುವ ಭಾವವೂ ಅನುಚಿತವಾದುದಾಗಿರುತ್ತದೆ. ಗುರುವಿನ ಉಪದೇಶ ಮತ್ತು ಅನುಗ್ರಹವಿಲ್ಲದೆ ಜ್ಞಾನವು ಲಭಿಸುವುದಿಲ್ಲ ಅಥವಾ ಗುರುವಿಲ್ಲದ ಜ್ಞಾನಕ್ಕೆ ಬೆಲೆಯಿರುವುದಿಲ್ಲ ಎಂದು ತಿಳಿಯಬಹುದು. ಗುರುವಿನ ಮುಂದೆ ಮಂಡಿಯೂರಿ ಬಾಗಬೇಕಾಗುತ್ತದೆ ಮತ್ತು ಹಾಗೆ ಬಾಗುವುದು ಪೂಜ್ಯರಲ್ಲಿ ತೋರುವ ಅನುರಾಗ , ಮನೋಧರ್ಮ ಎನ್ನಬಹುದು. ಗುರುವಿನಿಂದ ಕಲಿಯಬೇಕಾದರೆ ಇಂತಹ ದೈನ್ಯತೆ ಇರಬೇಕಾಗುತ್ತದೆ. ಗುರುವು ಸುಮ್ಮನೆ ಕಲಿಸಿ ಕೊಡುವುದಿಲ್ಲ. ಯಾವ ಆಮಿಷಕ್ಕೂ ಬಲಿಯಾಗುವುದಿಲ್ಲ.  ’ನಾನಿಷ್ಟು ಫೀಜು ಕಟ್ಟಿದ್ದೇನೆ, ಕ್ಯಾಪಿಟೇಶನ್ ಶುಲ್ಕ ಕೊಟ್ಟಿದ್ದೇನೆ, ದೂಸರಾ ಮಾತನಾಡದೆ ನನಗೆ ಸರ್ಟಿಫಿಕೇಟ್ ಕೊಡಿ’ ಎಂದು ಕೇಳುವಂತಿಲ್ಲ !. ಬ್ರಹ್ಮಜಿಜ್ಞಾಸೆಯು ಗುರುವು ಮನಸು ಮಾಡಿದರೆ ಮಾತ್ರ ಆರಂಭವಾಗುವಂತಹುದು ಮತ್ತು ಸಾಧನ ಚತುಷ್ಟಯ ಸಂಪನ್ನನಾದ ಜ್ಞಾನಾರ್ಥಿಯನ್ನು ತನ್ನ ಶಿಷ್ಯನೆಂದು ಒಪ್ಪಿದರೆ ಮಾತ್ರ ಒಲಿದು ಬರುವಂತಹುದು.
ಒಮ್ಮೆ ಗುರುವು ಬಂದವನನ್ನು ಶಿಷ್ಯನೆಂದು ಸ್ವೀಕರಿಸಿದರೆ ಆತನು ಎಲ್ಲರಿಗಿಂತಲೂ ಹೆಚ್ಚು ಮಾನ್ಯನಾಗುತ್ತಾನೆ. ಗುರುವು ತನ್ನ ಸಾಧನೆಯ ಸಮಸ್ತವನ್ನೂ ಶಿಷ್ಯನಿಗೆ ಧಾರೆ ಎರೆಯುತ್ತಾನೆ. ಅರ್ಜುನನೂ ಸಹ ಕೃಷ್ಣನ ಮುಂದೆ ’ನಾನು ನಿನ್ನ ಶಿಷ್ಯ’ ಎಂದು ಹೇಳುತ್ತಾನೆ. ಶಿಷ್ಯವೃತ್ತಿಯು ಎಷ್ಟು ಮಹತ್ತರವಾದುದು ಎನ್ನುವುದನ್ನು ಅರ್ಜುನನ ಮಾತಿನ ಭಾವದಲ್ಲಿ ತಿಳಿಯಬಹುದು. ’ನತಲೋಕ ಬಂಧೋ’ ಎಂದರೆ  ದೈನ್ಯತೆಯಿಂದ ನಮಿಸಿ ಬರುತ್ತಿರುವ ಜನಗಳ ಆಪ್ತಮಿತ್ರನಂತೆ , ಬಾಂಧವನಂತೆ ಎಂದು ಅರ್ಥ.  ಅರ್ಜುನನು ವಿಷಾದದಲ್ಲಿ ಮುಳುಗಿದ್ದಾಗ ಕೃಷ್ಣನು ’ ಅಳಬೇಡ ಪಾರ್ಥ, ನಾನು ನಿನ್ನ ಗೆಳೆಯ’ ಎಂದು ಸಾಂತ್ವನ ಹೇಳುತ್ತಾನೆ. ಆಪ್ತವಚನದಿಂದ ಸಂತೈಸುವ ಗೆಳೆಯನಂತಹ ಗುಣವು ಗುರುವಿನದು ಎಂದು ತಿಳಿಯಬಹುದು. ಗುರುವು ಕರುಣೆಯ ಸಾಗರದಂತಿರಬೇಕು ಎನ್ನುವುದನ್ನು ಈ ಹಿಂದಿನ ಕಂತುಗಳಲ್ಲಿ ತಿಳಿದಿದ್ದೇವೆ.  ಮುಂದೆ, ’ಪತಿತಂ ಭವಾಬ್ಧೌ’ ಎಂದು ಶಿಷ್ಯನು ಹೇಳಿಕೊಳ್ಳುತ್ತಾನೆ. ಹುಟ್ಟು-ಯೌವನ-ಮುಪ್ಪು-ರೋಗ-ಸಾವು ಮುಂತಾದ ಜಂಜಡಗಳಿಂದ ಅನರ್ಥವಾದ ವಿಷಯಗಳಲ್ಲಿ ಸಿಲುಕಿ ಸಂಸಾರಸಾಗರದಲ್ಲಿ ಬಿದ್ದು ನೊಂದಿರುವ ತನ್ನನ್ನು ಉದ್ಧಾರ ಮಾಡು ಎಂದು ಶಿಷ್ಯನು ಕೇಳಿಕೊಳ್ಳುತ್ತಾನೆ.  ಹೀಗೆ ಬಂದವನು ಶಿಷ್ಯನಾಗಿ ಸ್ವೀಕೃತವಾಗಬೇಕಾದರೆ ಗುರುವಿನ ಕಾರುಣ್ಯಪೂರ್ಣವಾದ ನೋಟವು ಆತನ ಮೇಲೆ ಬೀಳಬೇಕು ಅಥವಾ ಅನುಗ್ರಹವಾಗಬೇಕು ಎನ್ನುವುದನ್ನು ’ ಋಜ್ವ್ಯಾ-ಅತಿಕಾರುಣ್ಯ-ಸುಧಾಭಿವೃಷ್ಟ್ಯಾ-ಆತ್ಮೀಯ ಕಟಾಕ್ಷ-ದೃಷ್ಟ್ಯಾ’ ಎಂಬಲ್ಲಿ ಹೇಳಿರುತ್ತಾರೆ.  ಒಳ್ಳೆಯದಾದ ಸರಳವಾದ ಕರುಣೆಯಿಂದ ತುಂಬಿದ ಗುರುವಿನ ಆಪ್ತವಾದ ನೋಟವು ಶಿಷ್ಯನಾಗುವವನ ಮೇಲೆ ಬಿದ್ದಾಗ ಹಣ್ಣು ಮಾಗಿ ಕೆಳಗೆ ಬಿದ್ದಂತಾಗುತ್ತದೆ. ’ಆತ್ಮೀಯ ಕಟಾಕ್ಷ ದೃಷ್ಟಿ’ ಎನ್ನುವುದು ’ಋಜುಸ್ವಭಾವದ ಅಥವಾ ಸರಳವಾದ ಕರುಣಾಪೂರಿತ ಅನುಗ್ರಹ’ ಎಂದು ಶ್ರೀ ಚಂದ್ರಶೇಖರ ಭಾರತಿಗಳು ತಮ್ಮ ವ್ಯಾಖ್ಯಾನದಲ್ಲಿ ಹೇಳಿರುತ್ತಾರೆ.  ಗುರುವನ್ನು ಕಂಡೊಡನೆಯೆ ಶಿಷ್ಯನಾಗುವವನು ಹೇಗೆ ನಿವೇದಿಸಿಕೊಳ್ಳಬೇಕು ಅನ್ನುವುದನ್ನು ಆಚಾರ್ಯರು ಮೇಲಿನ ಶ್ಲೋಕದಲ್ಲಿ ವಿವರಿಸಿರುತ್ತಾರೆ.

ಮುಂದಿನ ಕಂತಿನಲ್ಲಿ ಇನ್ನಷ್ಟು ತಿಳಿಯೋಣ....

-------------------------------------------------------------------

ಕೊ: ಗುರುದೃಷ್ಟಿಯು ಪಾಮರರ ಮೇಲೆ ಬೀಳಬಾರದು ಎನ್ನುವ ಮಾತನ್ನು ಕೇಳಿರುತ್ತೇವೆ.  ಅದಕ್ಕಾಗಿ ಗುರುವಿನ ಆಗಮನವಾದಾಗ ತುಂಬಿದಕೊಡವನ್ನು ಗುರುವಿನ ನೋಟಕ್ಕೆ ತಾಗುವಂತೆ ಹಿಡಿದು ಬರಮಾಡಿಕೊಳ್ಳುವುದು ವಾಡಿಕೆ. ಗುರುದೃಷ್ಟಿಯ ವಿಚಾರವನ್ನು ಇಲ್ಲಿ ಆಚಾರ್ಯರ ನಿರೂಪಣೆಯಲ್ಲಿ ತಿಳಿದಾಗ ಪಾಮರರ ಮೇಲೆ ಗುರುವಿನ ನೋಟವು ಬಿದ್ದರೆ ಏನಾದರೂ ಆಗಲು ಸಾಧ್ಯವೆ ? ಎಂದು ಯೋಚಿಸಬೇಕಾಗುತ್ತದೆ. ಸಾಧನ ಚತುಷ್ಟಯ ಸಂಪನ್ನನಿಗೇ ಗುರುವಿನ ಅನುಗ್ರಹವು ಒಲಿದು ಬರುವುದರಿಂದ ಅನ್ಯರು ಬೆದರುವ ಅಗತ್ಯವಿಲ್ಲವೆನಿಸುತ್ತದೆ. ನೆಮ್ಮದಿಯಿಂದ ಇಹಭೋಗಗಳನ್ನು ಅನುಭವಿಸಬಹುದಲ್ಲವೆ  ? ! :).
ಮಂಗಳಕರ ಮತ್ತು ಶುಭಸೂಚಕವಾಗಿಯೂ ಪೂರ್ಣಕುಂಭವನ್ನು ಹಿಡಿಯುವ ವಾಡಿಕೆ ಇದೆ.

ವಂದನೆಗಳೊಂದಿಗೆ....

Monday, November 28, 2011

ವಿವೇಕ ಚೂಡಾಮಣಿ-ಭಾಗ-೧೭


मूलम् - ಮೂಲ
श्रोत्रियोऽवृजिनोऽकामहतो यो ब्र्ह्मवित्तमः ।
ब्रह्मण्युपरतः शान्तो निरिन्धन इवानलः।
अहेतुक-दयासिन्धुः बन्धुरानमतां सताम्॥३४॥

ಶ್ರೋತ್ರಿಯೋಽವೃಜಿನೋಽಕಾಮಹತೋ ಯೋ ಬ್ರಹ್ಮವಿತ್ತಮಃ|
ಬ್ರಹ್ಮಣ್ಯುಪರತಃ ಶಾಂತೋ ನಿರಿಂಧನ ಇವಾನಲಃ |
ಅಹೇತುಕ-ದಯಾಸಿಂಧುರ್ಬಂಧುರಾನಮತಾಂ ಸತಾಮ್ ||೩೪||

ಪ್ರತಿಪದಾರ್ಥ:
(ಯಃ =ಯಾರು, ಶ್ರೋತ್ರಿಯೋ=ಶ್ರೋತ್ರಿಯನೋ(ಶಾಸ್ತ್ರಾರ್ಥಗಳ ವಿವೇಚನೆಯುಳ್ಳವನು), ಅವೃಜಿನಃ=ಪಾಪವಿಲ್ಲದವನು, ಅಕಾಮಹತಃ=ಬಯಕೆಗಳಿಲ್ಲದವನು,  ಬ್ರಹ್ಮವಿತ್ತಮಃ=ಜ್ಞಾನಿಗಳಲ್ಲಿ ಶ್ರೇಷ್ಠನು, ಬ್ರಹ್ಮಣಿ=ಬ್ರಹ್ಮದಲ್ಲಿ, ಉಪರತಃ=ನೆಲಸಿರುವವನು, ನಿರಿಂಧನಃ ಅನಲಃ ಇವ = ಉರುವಲಿಲ್ಲದ ಬೆಂಕಿಯಂತೆ,  ಶಾಂತಃ= ಶಾಂತನೂ, ಅಹೇತುಕ ದಯಾಸಿಂಧುಃ=ಯಾವ ನಿಮಿತ್ತವೂ ಇಲ್ಲದ ದಯಾಸಿಂಧುವೂ, ಆನಮತಾಂ ಸತಾಮ್= ನಮಿಸುತ್ತಿರುವ ಸತ್ಪುರುಷರಿಗೆ, ಬಂಧುಃ = ಬಾಂಧವನೂ..... (ಆಗಿರುವವನು) )

ತಾತ್ಪರ್ಯ :
ಯಾರು ಶ್ರೋತ್ರಿಯನೋ, ಪಾಪರಹಿತನೋ, ಬಯಕೆಗಳೇ ಇಲ್ಲದವನೋ, ಬ್ರಹ್ಮಜ್ಞಾನಿಗಳಲ್ಲಿ ಶ್ರೇಷ್ಠನೋ, ಕೇವಲ ಬ್ರಹ್ಮದಲ್ಲಿ ಮನಸನ್ನು ನೆಟ್ಟಿರುವವನೋ, ಕಟ್ಟಿಗೆಯಲ್ಲಿ ಉರಿದು ಆರಿಹೋದ ಬೆಂಕಿಯಂತೆ (ಉರುವಲೇ ಇಲ್ಲದ) ಶಾಂತನಾಗಿರುವವನೂ, ಯಾವ ನಿಮಿತ್ತವೂ ಇಲ್ಲದೆ ದಯಾಸಿಂಧುವಾಗಿರುವವನೋ, ಶರಣು ಬಂದ ಸಜ್ಜನರಿಗೆ ಬಂಧುವಂತಿರುವವನೋ .....)

ವಿವರಣೆ :
ಜ್ಞಾನಾರ್ಥಿಯಾಗಿ ಗುರುವಿನ ಬಳಿಸಾರಬೇಕು ಎಂದು ತಿಳಿಸಿದ ನಂತರ ಆಚಾರ್ಯರು ಮತ್ತೆ ಗುರೂಪಸತ್ತಿಯನ್ನು ಮುಂದುವರಿಸುತ್ತಾರೆ. ಅಧಿಕಾರಿಯ ಅರ್ಹತೆಯ ನಿರೂಪಣೆಯ ನಂತರ ಜ್ಞಾನಾರ್ಜನೆಯ ಪಾಠವನ್ನು ಆಚಾರ್ಯರು ಆರಂಭಿಸುತ್ತಾರೆ. ಮೇಲಿನ ಶ್ಲೋಕದಲ್ಲಿ ಮೊದಲಿಗೆ ’ಶ್ರೋತ್ರಿಯಃ’ ಎನ್ನುವುದರ ಮೂಲಕ ಗುರುವು ಶಾಸ್ತ್ರಾರ್ಥಗಳನ್ನು ಅನುಭವದಿಂದ ನಿಶ್ಚಯಿಸಿಕೊಂಡವನಾಗಿರಬೇಕು ಎಂದು ಹೇಳುತ್ತಾರೆ. ಕೇವಲ ಪುಸ್ತಕ ಪಾಂಡಿತ್ಯವಲ್ಲದೆ ಸ್ವಾನುಭದಿಂದಲೂ ತಿಳಿದುಕೊಂಡು ತರ್ಕಕ್ಕೆ-ಶಾಸ್ತ್ರಕ್ಕೆ, ಅನುಭವಕ್ಕೆ-ಶಾಸ್ತ್ರಕ್ಕೆ ವಿರೋಧಗಳು ತೋರ್ಗೊಡದಂತೆ (ಅವಿರೋಧವೆನಿಸುವಂತೆ) ಕಡ್ಡಿಮುರಿದಂತೆ ಹೇಳುವವನಾಗಿರಬೇಕು ಅಥವಾ ಹೇಳುವ ತಿಳುವಳಿಕೆಯನ್ನು ಉಳ್ಳವನಾಗಿರಬೇಕು ಎಂಬರ್ಥದಲ್ಲಿ ತಿಳಿಸುತ್ತಾರೆ. ’ಉಪನಿಷತ್ತುಗಳನ್ನು ಅಧ್ಯಯನ ಮಾಡಿ ಅದರ ಅರ್ಥವನ್ನು ವಿಚಾರಮಾಡಿದವನೇ ಶ್ರೋತ್ರಿಯನು’ ಎಂಬ ಪಾಣಿನಿಯ ಸೂತ್ರದ ವಿಚಾರವನ್ನು ಶ್ರೀ ಚಂದ್ರಶೇಖರ ಭಾರತಿಗಳು ವ್ಯಾಖ್ಯಾನದಲ್ಲಿ ಒಕ್ಕಣಿಸಿರುತ್ತಾರೆ. ’ಅವೃಜಿನಃ’ ಎಂದರೆ ಪಾಪರಹಿತನು ಎಂಬ ಅರ್ಥವಿರುತ್ತದೆ. ಜ್ಞಾನಿಯಾದ ಗುರುವಿನಲ್ಲಿ ನೈತಿಕ ಮೌಲ್ಯಗಳೂ ಇರಬೇಕಾಗುತ್ತದೆ. ಜಗತ್ತಿಗೆ ಮಾದರಿಯಾಗಿ ನಿಲ್ಲಬೇಕಾಗುವ ಗುರುವು ಒಳ್ಳೆಯತನದ ಗುಣಗಳನ್ನು ಇಟ್ಟುಕೊಂಡಿರಬೇಕೇ ಹೊರತು ’ತಾನು ಗುರು ತಾನೇನು ಮಾಡಿದರೂ ಸರಿಯೆ’ ಎನ್ನುವ ಧೋರಣೆಯನ್ನು ಹೊಂದಿರಬಾರದು. ಜಗಕ್ಕೆ ಹಿತಕಾರಿಯಾದ ಕೆಲಸಗಳನ್ನು ಮಾಡುತ್ತಾ ಲೋಕಾನುಗ್ರಹಕ್ಕಾಗಿ ಬದುಕಬೇಕು ಎಂದು ’ಅವೃಜಿನಃ’ ಎನ್ನುವಲ್ಲಿ ಹೇಳಿರುತ್ತಾರೆ. ಮುಂದೆ ’ಅಕಾಮಹತಃ’ ಎಂದು ಹೇಳುತ್ತಾರೆ. ಬಯಕೆಗಳನ್ನೆಲ್ಲಾ ನಾಶಮಾಡಿಕೊಂಡಿರುವವನು ಅಥವಾ ಬಯಕೆಗಳೇ ಏಳದಂತೆ ಸಾಧನೆ ಮಾಡಿಕೊಂಡಿರುವವನನ್ನು ಅಕಾಮಹತಃ ಎಂದು ಹೇಳುತ್ತಾರೆ.  ಮಾನ್ಯ ಡಿ.ವಿ.ಜಿ.ಯವರು ತಮ್ಮ ಕಗ್ಗದಲ್ಲಿ ಈ ಸಂದರ್ಭವನ್ನು ಸೊಗಸಾಗಿ ನಿರೂಪಿಸುತ್ತಾರೆ..

ಬೀಸಿದಲ್ಲದೆ ಬೂದಿಕವಿದ ಕಿಡಿಯುರಿದೀತೆ ?|
ಕೈಸೋಕದಿರೆ ಕೈಯ ಸಪ್ಪುಳಾದೀತೆ? ||
ವಾಸನೆಯೆ ಮಾತೆಯಾಶೆಗೆ ಪಿತನು ಸಂದರ್ಭ|
ದೋಷವೊಳಗೋ ಹೊರಗೋ ? - ಮಂಕುತಿಮ್ಮ ||

’ವಾಸನೆ ತಾಯಿ , ಸಂದರ್ಭ ತಂದೆ’ ಎಂದು ಸೊಗಸಾಗಿ ಡಿ.ವಿ.ಜಿ. ಯವರು ಹೇಳುತ್ತಾರೆ. ಗಸಗಸೆ ಪಾಯಸದ ಬಯಕೆಯೇ ಇಲ್ಲದ ಮೇಲೆ ಅದೆಷ್ಟು ಕೊಳಗ ಪಾಯಸ ತಂದಿಟ್ಟರೂ ಪ್ರಯೋಜನವಾಗಲಾರದು !. ಬಯಕೆ ಎಂಬ ದೋಷವು ಒಳಗಿನದೋ ಅಥವಾ ಹೊರಗಿನದೋ ಎಂಬುದನ್ನು ಯೋಚಿಸಿ ನಿರ್ಧರಿಸಬೇಕಾಗುತ್ತದೆ. ಕಾಮಹತಃ ಎಂದರೆ ವಿಷಯದ ಆಸೆಗಳಿಂದ ಕೂಡಿರುವವನು ಅಥವಾ ತನ್ನನ್ನು ತಾನೇ ಅದರೊಳಗೆ ದೂಡಿಕೊಂಡಿರುವವನು ಎಂದು ಅರ್ಥ. ಅಕಾಮಹತಃ ಎಂದರೆ ವಿಷಯಾಸಕ್ತಿಯಿಂದ ದೂರವಿರುವವನು ಎಂದು ಅರ್ಥ. ನಂತರ, ಬ್ರಹ್ಮಜ್ಞಾನಿಗಳಲ್ಲಿ ಉತ್ತಮೋತ್ತನೂ ಮತ್ತು ವಿಷಯಾಸಕ್ತಿಯನ್ನೆಲ್ಲಾ ಕರಗಿಸಿಕೊಂಡು ಕೇವಲ ಬ್ರಹ್ಮನಲ್ಲಿ ಮನಸನ್ನು ಇಟ್ಟಿರುವವನು ಗುರುವು ಎಂದು ಹೇಳುತ್ತಾರೆ. ಮುಂದೆ ’ಶಾಂತಃ ನಿರಿಂಧನ ಇವಾನಲಃ’ ಎಂದು ಹೇಳುತ್ತಾರೆ. ಈ ವಾಕ್ಯಕ್ಕೆ ಮೇಲಿನ ಕಗ್ಗವೇ ಉತ್ತಮ ವಿವರಣೆಯಾಗಿರುತ್ತದೆ. ಹೇಗೆ ಉರುವಲು ಇಲ್ಲದಿದ್ದರೆ ಬೆಂಕಿಯು ತಣ್ಣಗಾಗಿ ಉರಿಯಿಲ್ಲದೆಯೇ ತೋರುವುದೋ (ಹುಲ್ಲಿಲ್ಲದ ಜಾಗದಲ್ಲಿ ಬೆಂಕಿಯು ಹೊತ್ತಿದರೆ ಹೇಗೆ ತಾನೇ ಆರಿ ಹೋಗುವುದೋ) ಹಾಗೆಯೆ, ವಾಸನೆಯೇ ಇಲ್ಲದವರಲ್ಲಿ ಸಂದರ್ಭಗಳೂ ಹುಟ್ಟಲಾರದು ಮತ್ತು ಗುರುವು ಹೀಗೆಯೇ ಇರಬೇಕು ಎಂದು ಹೇಳುತ್ತಾರೆ. ಹೀಗೆ ಹೊರಗಿನ ವಿಷಯಗಳನ್ನು ಅವಲಂಬಿಸದೆ ’ಶಾಂತ’ನಾಗಿದ್ದು ಬ್ರಹ್ಮದಲ್ಲಿ ಗಟ್ಟಿಮನಸುಳ್ಳವನಾಗಿರಬೇಕು ಎಂದು ನಿರೂಪಿಸುತ್ತಾರೆ.
ನಂತರ ’ ಅಹೇತುಕ ದಯಾಸಿಂಧುಃ ಬಂಧುರಾನಮತಾಂಸತಾಮ್’ ಎಂದು ಹೇಳುತ್ತಾರೆ. ಶರಣಾಗಿ ಬರುವ ಸಜ್ಜನರಿಗೆ ಯಾವ ಪ್ರತಿಫಲದ ಅಪೇಕ್ಷೆಯೂ ಇಲ್ಲದೆ ಕರುಣೆಯ ಸಾಗರದಂತೆ ಇದ್ದು ತಿಳುವಳಿಕೆ ಮೂಡಿಸಬಲ್ಲಂತಹ ಬಂಧುವಿನಂತೆ , ಆಪ್ತ ಗೆಳೆಯನಂತೆ ಇರಬೇಕು ಎಂಬರ್ಥದಲ್ಲಿ ಹೇಳಿರುತ್ತಾರೆ. ಗೀತೆಯಲ್ಲಿ ಕೃಷ್ಣನು ಹೇಳುವ ವಾಕ್ಯವೊಂದು ಹೀಗೆ ಬರುತ್ತದೆ ; ’ ನನಗೆ ಈ ಲೋಕದಿಂದ ಯಾವ ಪ್ರಯೋಜನವೂ ಇಲ್ಲ. ಆದರೂ ಈ ಜಗತ್ತಿಗಾಗಿ ನಾನು ಎಲ್ಲವನ್ನೂ ಮಾಡುತ್ತೇನೆ, ಏಕೆಂದರೆ ಈ ಜಗತ್ತನ್ನು ನಾನು ಪ್ರೀತಿಸುತ್ತೇನೆ ಎಂದರೆ ಅನಿಮಿತ್ತವಾಗಿ ಪ್ರೀತಿಸುತ್ತೇನೆ ’ ಎಂದು. ಯಾವ ನಿಮಿತ್ತ ಕಾರಣವೂ ಇಲ್ಲದೆ ಶರಣಾಗಿ ಬಂದವರಿಗೆ ತಿಳಿಸುವ ಕರುಣೆಯನ್ನು ಗುರುವು ಹೊಂದಿರಬೇಕು ಎಂದು ನಿರೂಪಿಸುತ್ತಾರೆ. ವಾಡಿಕೆಯಂತೆ ಶೆಟ್ಟರ ಅಂಗಡಿಯಲ್ಲಿ ದಿನಸಿಯನ್ನು ಕೊಳ್ಳುವುದು ಬಿಟ್ಟು ಅಂದು ಪುಡ್ ಬಜಾರಿನಲ್ಲಿ ದಿನಸಿ ತಂದಿರುತ್ತೇವೆ. ಹೀಗೆ ತಂದಿದ್ದೇನಾದರೂ ಶೆಟ್ಟರಿಗೆ ತಿಳಿಯಿತೆಂದರೆ ಮುಂದೆ ಅವರ ಅಂಗಡಿಯಲ್ಲಿ ನಮಗೆ ಸಿಗುವುದು ಕಳಪೆ ದಿನಸಿ ಅಥವಾ ಬಜಾರಿಗಿಂತಲೂ ದುಪ್ಪಟ್ಟು ಬೆಲೆಯೆ !. ಶೆಟ್ಟರು ಸಹಿಸಿಕೊಳ್ಳುವರೆ ?!. ಗುರುವಿನ ಕತೆಯು ಹೀಗಾಗಬಾರದು ಎನ್ನುವುದು ಮೇಲಿನ ಶ್ಲೋಕದ ಆಶಯ. ಪ್ರವಾಹಣ ಜೈವಲಿಯು ಶ್ವೇತಕೇತುವಿಗೆ ಹೇಳಿದಂತೆ, ಯಾಜ್ಞವಲ್ಕ್ಯರು ಮೈತ್ರಾದೇವಿಗೆ ಹೇಳಿದಂತೆ, ಯಮನು ನಚಿಕೇತನಿಗೆ ತಿಳಿಸಿದಂತೆ  ವಿನಯದಿಂದ ಬಂದು ಕೇಳುವವರಿಗೆ (ಬೇರೆಯವರಿಗೆ ಅಲ್ಲ) ಗುರುವು ತಿಳಿಸಿಕೊಡುವಂತಹವನಾಗಿರಬೇಕು ಎನ್ನುವುದು ಸಾರಾಂಶ. ರಮಣ ಮಹರ್ಷಿಗಳಂತಹ ಮೌನವ್ಯಾಖ್ಯಾನ ಶಿರೋಮಣಿಗಳೂ ಸಹ ವಿನಯದಿಂದ ಬಂದ ಕೆಲವರಿಗೆ ತಿಳುವಳಿಕೆಯ ಪಾಠವನ್ನು ಹೇಳಿರುವುದನ್ನು ಅವರ ಜೀವನ ಚರಿತ್ರೆಯ ಸಾಹಿತ್ಯದಲ್ಲಿ ಓದಿರುತ್ತೇವೆ.

मूलम् = ಮೂಲ
तमाराध्य गुरुं भक्त्या प्रह्वः प्रश्रयसेवनैः ।
प्रसन्नं तमनुप्राप्य पृच्छेद् ज्ञातव्यमात्मनः॥३५॥ 

ತಮಾರಾಧ್ಯ ಗುರುಂ ಭಕ್ತ್ಯಾ ಪ್ರಹ್ವ-ಪ್ರಶ್ರಯ-ಸೇವನೈಃ|
ಪ್ರಸನ್ನಂ ತಮನುಪ್ರಾಪ್ಯ ಪೃಚ್ಛೇದ್ ಜ್ಞಾತಮಾತ್ಮನಃ ||೩೬||

ಪ್ರತಿಪದಾರ್ಥ :  
(ತಂ ಗುರುಂ= ಅಂತಹ ಗುರುವನ್ನು, ಭಕ್ತ್ಯಾ= ಭಕ್ತಿಯಿಂದ, ಆರಾಧ್ಯ=ಪೂಜಿಸಿ, ಆರಾಧಿಸಿ, ಪ್ರಹ್ವ-ಪ್ರಶ್ರಯ = ನಮ್ರತೆ-ವಿನಯದಿಂದ, ಸೇವನೈಃ= ಸೇವೆ ಮಾಡಿ, ಪ್ರಸನ್ನಂ ತಂ= ತೃಪ್ತನಾದ ಅವನನ್ನು, ಅನುಪ್ರಾಪ್ಯ= ಹೊಂದಿ, ಆತ್ಮನಃ ಜ್ಞಾತವ್ಯಂ= ತಾನು ತಿಳಿದುಕೊಳ್ಳಬೇಕಾದುದನ್ನು, ಪೃಚ್ಛೇತ್ = ಕೇಳಬೇಕು, ಪ್ರಶ್ನಿಸಬೇಕು )

ತಾತ್ಪರ್ಯ:
ಅಂತಹ (೩೪ನೆಯ ಶ್ಲೋಕದಲ್ಲಿ ವಿವರಿಸಿದ) ಗುಣಗಳನ್ನು ಹೊಂದಿರುವ ಗುರುವನ್ನು ಭಕ್ತಿಯಿಂದ ಪೂಜಿಸಿ ನಯ-ವಿನಯಗಳಿಂದ ಸೇವಿಸಿದ ನಂತರ ಶಾಂತನಾದ ಗುರುವಿನ ಸಮೀಪವನ್ನು ಹೊಂದಿ ತಾನು ತಿಳಿದುಕೊಳ್ಳಬೇಕಾಗಿರುವುದರ ವಿಚಾರದ ಬಗೆಗೆ ಕೇಳಬೇಕು ಅಥವಾ ಪ್ರಶ್ನೆ ಮಾಡಬೇಕು.

ವಿವರಣೆ:
ಗುಣಸಂಪನ್ನನಾದ ಗುರುವನ್ನು ನಯ-ವಿನಯಗಳಿಂದ ಪೂಜಿಸಿ ಸೇವೆ ಮಾಡಬೇಕು ಎಂದು ಹೇಳುತ್ತಾರೆ. ಗೀತೆಯಲ್ಲಿ (೧) ಹೇಳುವಂತೆ " ಸಾಷ್ಟಾಂಗ ನಮಸ್ಕಾರದಿಂದಲೂ ಕೇಳುವಿಕೆಯಿಂದಲೂ, ಗುರುಸೇವೆಯಿಂದಲೂ ತಿಳಿದುಕೊಳ್ಳಬೇಕು. ತತ್ವವನ್ನು ಅರಿತ ಜ್ಞಾನಿಗಳು ನಿನಗೆ ಅದನ್ನು ತಿಳಿಸುತ್ತಾರೆ" ಎಂಬ ವಾಕ್ಯವು ಸೊಗಸಾದುದು. ಇಲ್ಲಿ ನಮಸ್ಕಾರ, ಗುರುಸೇವೆ ಎನ್ನುವುದೆಲ್ಲವೂ ನಯ-ವಿನಯಗಳಂತಹ ಸದ್ವಿಚಾರಗಳಿಗೆ ಬೆಂಬಲವಾಗಿ ನಿಲ್ಲುತ್ತದೆ. ಭಕ್ತಿಯಿಂದ-ನಮ್ರತೆಯಿಂದ ಎಂದು ವಿಶೇಷವಾಗಿ ಹೇಳಿರುವುದು ’ಮಾತು-ಮನಸು-ಕೆಲಸ’ (ಕಾಯಾ-ವಾಚಾ-ಮನಸಾ; ತ್ರಿಕರಣ ಶುದ್ಧಿ) ಗಳಲ್ಲಿ  ನಿಯತ್ತನ್ನು ಇಟ್ಟುಕೊಳ್ಳವುದು, ಪಾರದರ್ಶಕ ನಡೆವಳಿಕೆಯನ್ನು ಉಳಿಸಿಕೊಳ್ಳುವುದು ಎನ್ನುವ ಅರ್ಥದಲ್ಲಿ. ಇಂತಹ ಉತ್ತಮ ನಡವಳಿಕೆಗಳಿಂದ ಗುರುವಿನ ಮನಸು ಒಲಿದ ನಂತರ ಆತನ ಸಮೀಪವನ್ನು ಹೊಂದಿ ಯಾವುದು ಆತ್ಮಾರ್ಥ ವಿಚಾರವೋ (ಇನ್ಯಾವುದೋ ವಿಷಯವನ್ನಲ್ಲ) ಅದರ ಬಗೆಗೆ ಕೇಳಿ ತಿಳಿದುಕೊಳ್ಳಬೇಕು ಎಂದು ಮೇಲಿನ ಶ್ಲೋಕದಲ್ಲಿ ಆಚಾರ್ಯರು ಹೇಳಿರುತ್ತಾರೆ.

ಮುಂದಿನ ಕಂತಿನಲ್ಲಿ ಇನ್ನಷ್ಟು ತಿಳಿಯೋಣ...
------------------------------------------------

ಟಿಪ್ಪಣಿ :

ಗೀತೆಯ ವಾಕ್ಯ.." ತದ್ವಿದ್ಧಿ ಪ್ರಣಿಪಾತೇನ ಪರಿಪ್ರಶ್ನೇನ ಸೇವಯಾ | ಉಪದೇಕ್ಷ್ಯಂತಿ ತೇ ಜ್ಞಾನಂ ಜ್ಞಾನಿನಸ್ತತ್ವದರ್ಶಿನಃ || ( ೪.೩೪) 

ವಂದನೆಗಳೊಂದಿಗೆ....



Saturday, November 5, 2011

ವಿವೇಕ ಚೂಡಾಮಣಿ-ಭಾಗ-೧೬


मूलम् - ಮೂಲ

मोक्षकारणसामग्र्यां भक्तिरेव गरियसी ।
स्वस्वरूपानुसन्धानं भक्तिरित्यभिधीयते ॥३२॥

ಮೋಕ್ಷಕಾರಣಸಾಮಗ್ರ್ಯಾಂ ಭಕ್ತಿರೇವ ಗರೀಯಸೀ |
ಸ್ವಸ್ವರೂಪಾನುಸಂಧಾನಂ ಭಕ್ತಿರಿತ್ಯಭಿಧೀಯತೇ ||೩೨||

ಪ್ರತಿಪದಾರ್ಥ :-
(ಮೋಕ್ಷಕಾರಣ = ಬಿಡುಗಡೆಗೆ ಕಾರಣವಾಗಿರುವ, ಸಾಮಗ್ರ್ಯಾಂ= ಸಲಕರಣೆಗಳಲ್ಲಿ(ಸಾಧನಗಳಲ್ಲಿ), ಭಕ್ತಿಃ ಏವ = ಭಕ್ತಿಯೇ, ಗರೀಯಸೀ = ದೊಡ್ಡದು(ಶ್ರೇಷ್ಠವಾದುದು). ಸ್ವಸ್ವರೂಪಾನುಸಂಧಾನಂ = ತನ್ನನ್ನುತಾನು ತಿಳಿಯುವುದು, ಭಕ್ತಿಃ ಇತಿ= ಭಕ್ತಿಯೆಂದು, ಅಭಿಧೀಯತೇ = ಹೇಳಲ್ಪಡುತ್ತದೆ )

ತಾತ್ಪರ್ಯ :

ಮೋಕ್ಷಕ್ಕೆ (ಬಿಡುಗಡೆಗೆ) ಸಹಾಯಕವಾಗಿರುವ ಸಾಧನ-ಸಲಕರಣೆಗಳಲ್ಲಿ ಭಕ್ತಿಯೂ ಸೇರಿದ್ದು ಇದೇ ಶ್ರೇಷ್ಠವಾದುದಾಗಿರುತ್ತದೆ. ತನ್ನ ನಿಜವಾದ ಸ್ವರೂಪವನ್ನು , ತನ್ನತನವನ್ನು ತಿಳಿದುಕೊಳ್ಳುವುದೇ ಭಕ್ತಿಯೆಂದು ಹೇಳಲ್ಪಟ್ಟಿದೆ.

ವಿವರಣೆ :

ಇಹದ ಬಂಧನದಿಂದ ಬಿಡಿಸಿಕೊಂಡು ಆತ್ಮಜ್ಞಾನವನ್ನು ಪಡೆಯಲು ಸಾಧನ ಚತುಷ್ಟಯಗಳ ಅಗತ್ಯವನ್ನು ಈಗಾಗಲೇ ವಿವರವಾಗಿ ತಿಳಿದಿದ್ದೇವೆ. ಇದರ ಜೊತೆಗೆ ಭಕ್ತಿಯೂ ಸಹ ತುಂಬ ಹಿರಿದಾದುದು ಎಂದು ಆಚಾರ್ಯರು ಹೇಳುತ್ತಾರೆ. ’ ಭಕ್ತಿ’ ಎಂದರೆ, ತನ್ಮಯರಾಗಿ ಫಲಾಪೇಕ್ಷೆಯಿಂದ ಮಾಡುವ ಸಗುಣ ಬ್ರಹ್ಮೋಪಾಸನೆಯಾಗಲೀ, ನಿತ್ಯಕರ್ಮಾನುಷ್ಠಾನುಗಳಗಲೀ ಅಥವಾ ಇನ್ಯಾವುದನ್ನೋ ಕುರಿತು ಚಿಂತಿಸುವುದಾಗಲೀ ಅಲ್ಲದೆ ಕೇವಲ ತನ್ನನ್ನು ತಾನು ತಿಳಿಯುವುದು ಅಥವಾ ತನ್ನತನದ ಹುರುಳು-ತಿರುಳನ್ನು ಅರಿಯುವ ವಿವೇಕವೇ ಭಕ್ತಿ ಎಂದು ಹೇಳುತ್ತಾರೆ.  ಆಚಾರ್ಯರು ಜ್ಞಾನದ ಪ್ರತಿಪಾದಕರಾಗಿದ್ದುದರಿಂದ (ಗ್ರಂಥದ ವಿಷಯವೂ ಅದೇ ಆಗಿರುವುದರಿಂದ) ಭಕ್ತಿಯನ್ನು ಏಕತ್ರ ಸಾಕಲ್ಯದ (ಅದ್ವೈತದ) ನಿಟ್ಟಿನಲ್ಲಿ ವಿವರಿಸಿದ್ದಾರೆ ಎಂದು ಸ್ಪಷ್ಟವಾಗಿ ತಿಳಿಯಬಹುದು.  ಭಕ್ತಿ ಎಂದಾಗ ತನ್ಮಯತೆ, ಸಮರ್ಪಣಾ ಮನೋಭಾವ, ಪ್ರೀತಿ, ಸ್ವಾರ್ಥತ್ಯಾಗಗಳೆಲ್ಲವೂ ಬೆಸೆದುಕೊಂಡೇ ಬರುತ್ತದೆ. ಇವೆಲ್ಲವೂ ಸಾಧನ ಚತುಷ್ಟಯಗಳಲ್ಲಿ ಬಂದಿರುವುದನ್ನು ಗಮನಿಸಬಹುದಾಗಿರುತ್ತದೆ. ಕರ್ಮ, ಭಕ್ತಿ, ಧ್ಯಾನ, ಜ್ಞಾನಗಳೆಲ್ಲವೂ ಬೇರೆಯೇ ಆಗಿದ್ದರೂ ’ಯೋಗ’ ಎನ್ನುವುದು ಇವುಗಳಿಗೆ ಸೇರಿಕೊಂಡಾಗ ಎಲ್ಲವೂ ಪರಮಾರ್ಥದ ಉದ್ದೇಶವನ್ನೇ ಹೇಳುತ್ತವೆ ಅಥವಾ ಜ್ಞಾನವೇ ಆಗುತ್ತದೆ.  ಕರ್ಮದಲ್ಲಿ ಸಕಾಮ ಕರ್ಮ (ಫಲಾಪೇಕ್ಷಿತ) ನಿಷ್ಕಾಮ ಕರ್ಮ (ಫಲದ ಬಯಕೆ ಇಲ್ಲದೆ) ಎಂದು ಇರುವಂತೆಯೇ ಭಕ್ತಿ, ಧ್ಯಾನ, ಜ್ಞಾನಗಳಲ್ಲೂ ಭೇದವು ಕಂಡುಬರುತ್ತದೆ. ಶಾಸ್ತ್ರಾರ್ಥ ಜ್ಞಾನಕ್ಕೂ ಪರಮಾರ್ಥ ಜ್ಞಾನಕ್ಕೂ ವ್ಯತ್ಯಾಸವಂತೂ ಇದ್ದೇ ಇದೆ.  ಪರಮಾರ್ಥ ಜ್ಞಾನವನ್ನು ಪಡೆಯುವುದೇ ನಿರುಪಾದಿಕವಾದ ಪರಭಕ್ತಿ ಎಂದು ಎಂದು ಹೇಳುತ್ತಾರೆ.  ಇಂತಹ ಪರಭಕ್ತಿಯು ಹುಟ್ಟುವುದು ಸ್ವಸ್ವರೂಪಾನುಸಂಧಾನದಿಂದ (ತನ್ನನ್ನು ತಾನು ಅರಿಯುವುದರಿಂದ) ಎನ್ನುತ್ತಾರೆ.   "ವೇದಾಂತದ ಶ್ರವಣ-ಮನನ-ನಿದಿಧ್ಯಾಸನವೇ ಸ್ವಸ್ವರೂಪಾನುಸಂಧಾನ ಮತ್ತು ಅದೇ ಸಾಕ್ಷಾತ್ಕಾರಕ್ಕೆ ನೇರ ಕಾರಣವು" ಎಂದು ಸದ್ಗುರುಗಳು ತಮ್ಮ ವ್ಯಾಖ್ಯಾನದಲ್ಲಿ ಹೇಳಿರುತ್ತಾರೆ.
ಶ್ಲೋಕದ ಕೊನೆಯಲ್ಲಿ "ಹೇಳಲ್ಪಡುತ್ತದೆ (ಹೇಳಲ್ಪಟ್ಟಿದೆ) ಎಂದು ಆಚಾರ್ಯರು ನಿರೂಪಿಸಿರುದನ್ನು ಗಮನಿಸಿದಾಗ ವೇದಾಂತದ ’ಏಕತ್ವ’ ತತ್ವವು ಶಂಕರಿಂದೇನೂ ಮೊದಲಾಗದೆ ಬಹಳ ಹಿಂದೆಯೇ ಪ್ರತಿಪಾದಿಸಲ್ಪಟ್ಟಿರುವ ದರ್ಶನವೆಂಬುದು ಸ್ಪಷ್ಟವಾಗುತ್ತದೆ. ’ಏಕತ್ವ’ಅ ಮತ್ತು ’ನಾನಾತ್ವ’ಗಳ ದರ್ಶನವು ಉಪವರ್ಷರೇ ಮೊದಲಾಗಿ ಹಲವು ಮಹಾಮನೀಷಿಗಳಿಂದ ಶಂಕರರಿಗಿಂತ ಮುಂಚೆಯೇ ಹೇಳಲ್ಪಟ್ಟಿದ್ದರೂ ಅಂತಹ ದರ್ಶನಗಳಿಗೆ ಸರಳವಾದ ಭಾಷ್ಯಗಳನ್ನು ರಚಿಸಿ ಆಸಕ್ತರ ಕೈಗೆಟುಕುವಂತೆ ಮಾಡಿದ್ದು ಶಂಕರರೇ ಎಂದು ನಿಸ್ಸಂದೇಹವಾಗಿ ಹೇಳಬಹುದು(ವಿದ್ವಾಂಸರ ಅಭಿಪ್ರಾಯದಂತೆ).  ಕೆಲವರು ಅದ್ವೈತದರ್ಶನವನ್ನು ’ಶಾಂಕರ ಮತ’ ಶಾಂಕರ ತತ್ವ’ ಎಂದೆಲ್ಲಾ ಹೇಳುವುದನ್ನು ಗಮನಿಸಿರುತ್ತೇವೆ. ಶಂಕರರ ಭಾಷ್ಯಗಳನ್ನು ರಚನೆಗಳನ್ನು ವಿವರವಾಗಿ ಗಮನಿಸಿದರೆ ಅವರು ಹೊಸತೇನನ್ನೂ ಹೇಳದೆ ಇರುವುದನ್ನೇ ಒಪ್ಪಗೊಳಿಸಿಕೊಟ್ಟಿದ್ದಾರೆ ಎಂಬುದು ತಿಳಿಯುತ್ತದೆ. ಆದುದರಿಂದ  ’ಶಾಂಕರ ಮತ’ ಶಾಂಕರ ತತ್ವ’ ಎಂದೆಲ್ಲಾ ಹೇಳಿ ಖಂಡನ-ಮಂಡನಗಳನ್ನು ಮುಂದುವರಿಸಿಕೊಂಡು ಜಗಳವಾಡುವುದು ವಿವೇಚನಾರಹಿತವಾದುದು ಎಂದು ಹೇಳಬೇಕಾಗುತ್ತದೆ.


 मूलम्-ಮೂಲ:-

उक्तसाधनसम्पन्नः तत्वजिज्ञासुरात्मनः ।
उपसीदेद् गुरुं प्राज्ञं यस्माद् बन्धविमोक्षणम् ॥३३॥

ಉಕ್ತಸಾಧನಸಂಪನ್ನಸ್ತತ್ವಜಿಜ್ಞಾಸುರಾತ್ಮನಃ|
ಉಪಸೀದೇದ್ಗುರುಂ ಪ್ರಾಜ್ಞಂ ಯಸ್ಮಾದ್ಬಂಧವಿಮೋಕ್ಷಣಮ್ ||೩೩||

ಪ್ರತಿಪದಾರ್ಥ:-

(ಉಕ್ತಸಾಧನ =ಹಿಂದೆ ಹೇಳಿದ ಸಾಧನಗಳಿಂದ, ಸಂಪನ್ನಃ = ಚೆನ್ನಾಗಿ ಕೂಡಿದವನೂ(ಪಡೆದವನೂ), ಆತ್ಮನಃ=ಆತ್ಮವಸ್ತುವಿನ, ತತ್ವಜಿಜ್ಞಾಸುಃ=ಹುರುಳನ್ನು ತಿಳಿಯಲು ಬಯಸುವವನೂ , ಯಸ್ಮಾತ್= ಯಾರಿಂದ, ಬಂಧ ವಿಮೋಕ್ಷಣಂ= ಅಂಟು ಕಳೆಯುತ್ತದೆಯೋ(ಮೋಕ್ಷಕ್ಕೆ ದಾರಿಯಾಗುತ್ತದೆಯೋ), ತಂ ಪ್ರಾಜ್ಞಂ ಗುರುಂ = ಅಂತಹ ಜ್ಞಾನಿಯಾದ ಗುರುವನ್ನು, ಉಪಸೀದೇತ್ =ಹೊಂದಬೇಕು,ಬಳಿ ಸಾರಬೇಕು).

ವಿವರಣೆ :-
ಹೀಗೆ ಸಾಧನ ಚತುಷ್ಟಯದ ಜೊತೆಗೆ ನಿರುಪಾಧಿಕವಾದ ಪರಭಕ್ತಿಯನ್ನೂ(ಸ್ವಸ್ವರೂಪಾನುಸಂಧಾನ) ಮೇಳವಿಸಿಕೊಂಡು ಅಥವಾ ಚೆನ್ನಾಗಿ ಪಡೆದುಕೊಂಡ ನಂತರ ಆತ್ಮಾರ್ಥದ ಚಿಂತನೆಗಾಗಿ ಅಥವಾ ಜಿಜ್ಞಾಸೆಗಾಗಿ (ಜ್ಞಾನುಮಿಚ್ಛಾ=ತಿಳಿದುಕೊಳ್ಳುವ ಬಯಕೆ, ಅಪೇಕ್ಷಿ) ಇಹದ ಅಂಟು-ನಂಟುಗಳನ್ನು (ಬಂಧನಗಳು) ಕಳೆದು ಮೋಕ್ಷದ ದಾರಿಯನ್ನು ತೋರಬಲ್ಲಂತಹ ಜ್ಞಾನಿಯಾದ ಗುರುವಿನ ಮೊರೆಹೋಗಬೇಕು ಅಥವಾ ಬಳಿಸಾರಬೇಕು ಎಂದು ಆಚಾರ್ಯರು ತಿಳಿಸುತ್ತಾರೆ.  ಸಾಧನ ಚತುಷ್ಟಯದ ಜೊತೆಗೆ ಇತರ ಎಲ್ಲಾ ಸಾಧನಗಳನ್ನು ಚೆನ್ನಾಗಿ ಪಡೆದುಕೊಂಡು ಗಂಟುಕಟ್ಟಿ ಇಟ್ಟುಕೊಂಡ ನಂತರ ಬ್ರಹ್ಮವಸ್ತುವಿನ ತಿಳುವಳಿಕೆಗಾಗಿ ತರ್ಕ, ಚರ್ಚೆಗಳನ್ನು ನೆಡೆಯಿಸಿ ಕೊನೆಗೆ ಸ್ವಾನುಭವದಿಂದ ಬ್ರಹ್ಮ ಸಾಕ್ಷಾತ್ಕಾರವನ್ನು ಪಡೆಯುವುದು ಆತ್ಮಾರ್ಥಿಯ ಉದ್ದೇಶವೆಂಬುದು ಇಲ್ಲಿ ಸ್ಪಷ್ಟವಾಗಿ ತಿಳಿಯುತ್ತದೆ.

ಆಕ್ಷೇಪ:-    ಸಾಧನ ಚತುಷ್ಟಯದ ಸಾಧನೆಯು ಇದ್ದಾಗ ಆತ್ಮಾನುಸಂಧಾನವು ಸರಳವೂ, ಪುರುಷಪ್ರಯತ್ನದಿಂದಲೂ ಸಾಧ್ಯವಾಗಬಹುದಾದುದರಿಂದ ಗುರುವಿನ-ಜಿಜ್ಞಾಸೆಯ ಅಗತ್ಯವಿದೆಯೆ ?

ಸಮಾಧಾನ :-  "ಬ್ರಹ್ಮವಸ್ತುವು ಪ್ರಸಿದ್ಧ ವಸ್ತುವೇ ಆಗಿದ್ದರೂ ಜಿಜ್ಞಾಸೆಗೆ ಅವಕಾಶವಿದೆ. ಏಕೆಂದರೆ, ಬ್ರಹ್ಮದ ವಿಶೇಷ ಸ್ವರೂಪದ ವಿಷಯದಲ್ಲಿ ವಿರುದ್ಧಾಭಿಪ್ರಾಯಗಳಿವೆ. ತಾರ್ಕಿಕರು, ಸಾಂಖ್ಯರು, ಬೌದ್ಧರು, ಲೋಕಾಯತಿಕರು ಮುಂತಾದವರಲ್ಲಿ ಬ್ರಹ್ಮ ಸ್ವರೂಪದ ವಿಷಯದಲ್ಲಿ ಏಕತೆ ಇಲ್ಲದಿರುವ ಕಾರಣ ಬ್ರಹ್ಮನನ್ನು ಅರಿತುಕೊಳ್ಳಲು ಅವಕಾಶವಿದೆ" ಎಂದು ಶ್ರೀ ಶಂಕರರೇ ತಮ್ಮ ಬ್ರಹ್ಮಸೂತ್ರಗಳ ಮೇಲಿನ ಭಾಷ್ಯದ ಆರಂಭದಲ್ಲೇ ವಿವರವಾಗಿ ಬಿಡಿಸಿಡುತ್ತಾರೆ. ತಿಳಿದುಕೊಳ್ಳಬೇಕೆಂಬ ಬಯಕೆಯು ಇದ್ದಾಗ ತಿಳಿಸಿಕೊಡುವವರೂ ಇರಬೇಕಾಗುತ್ತದೆ.

ಮುಂದೆ ’ಜ್ಞಾನಿ’ಯಾದ ಗುರುವಿನ ಬಳಿಗೆ ತೆರಳಬೇಕು ಎಂದು ಹೇಳುತ್ತಾರೆ. ಯಾರೋ ಒಬ್ಬ ಪೀಠದಮೇಲೆ ಕುಳಿತಿರುವವರನ್ನು ಗುರು ಎಂದು ಒಪ್ಪಿಕೊಂಡು ನೆಚ್ಚಿಕೊಳ್ಳುವುದಲ್ಲ, ಬ್ರಹ್ಮಜ್ಞಾನವನ್ನು ಪಡೆದಿರುವ ಗುರುವನ್ನು ಅನುಸರಿಸಬೇಕು ಎಂದು ಹೇಳುತ್ತಾರೆ. ಶಾಸ್ತ್ರಗ್ರಂಥಗಳ ಅಧ್ಯಯನದಿಂದಲೂ ಆತ್ಮಾನುಸಂಧಾನವನ್ನು ನೆಡೆಯಿಸಬಹುದಲ್ಲವೆ ? ಎಂದರೆ, ಅವುಗಳನ್ನೂ ಗುರುಗಳೇ ಬರೆದಿರುವುದರಿಂದ ಒಂದು ಮಟ್ಟಿಗೆ ಗ್ರಂಥಗಳೂ ಗುರುವೇ ಎನಿಸಿಕೊಂಡರೂ ಅವುಗಳನ್ನು ಓದಿದ ನಂತರ ಹುಟ್ಟುವ ಸಂದೇಹಗಳಿಗೆ ಪರಿಹಾರ ಕೊಡುವವರು ಯಾರು ? . ಸಿ.ಡಿ. ಹಾಕಿಕೊಂಡೋ ಅಥವಾ ಟಿ.ವಿ. ಯಲ್ಲಿ ಕಲಿಸುವುದನ್ನು ನೋಡಿಕೊಂಡೋ ಸಂಗೀತವನ್ನು, ನೃತ್ಯವನ್ನು ಕಲಿಯಲು ಮೊದಲಾಗಬಹುದು. ಆದರೆ, ನಡುವೆ ಅಪಸ್ವರ ಬಂದಾಗ, ತಾಳ ತಪ್ಪಿದಾಗ ಸಿ.ಡಿ. ಪ್ಲೇಯರ್ ತಿದ್ದಿಕೊಡುತ್ತದೆಯೆ ?!. ತಾಂತ್ರಿಕತೆಯು ತುತ್ತತುದಿಯಲ್ಲಿರುವ ಈ ಕಾಲದಲ್ಲಿ (ವಿಡಿಯೋ ಕಾನ್ಫೆರೆನ್ಸ್, ಇ-ಎಜುಕೇಶನ್) ಏನೆಲ್ಲಾ ಪ್ರಗತಿಯನ್ನು ಕಂಡಿದ್ದರೂ ಎದುರು-ಬದುರು ಕುಳಿತು ನೆಡೆಯಿಸುವ ಆಪ್ತಸಂವಾದ, ಸಮಾಲೋಚನೆಗೆ ಯಾವುದೂ ಸರಿಸಾಟಿಯಾಗಲಾರದು ಎನ್ನುವುದನ್ನು ಒಪ್ಪಬೇಕಲ್ಲವೆ ? . ಗುರುವಿನ ಉಪದೇಶದಿಂದಲೂ ಸಂದೇಹಗಳು ಪರಿಹಾರವಗದಿದ್ದಲ್ಲಿ ಪರಿಹಾರವನ್ನು ಕೊಡುವ ಗುರುವು ಬರುವವರೆವಿಗೂ ಕಾಯಬೇಕಾಗುತ್ತದೆ. ಅಂತಹವರು ಯಾರಿದ್ದಾರೆ ? ಎನ್ನುವ ಪ್ರಶ್ನೆಯೂ ಬಂದು ಹೋಗುತ್ತದೆ. ಮಾನ್ಯ ಡಿ.ವಿ.ಜಿ. ಯವರು ತಮ್ಮ ಕಗ್ಗದಲ್ಲಿ ಹೀಗೆ ಹೇಳುತ್ತಾರೆ .

"ತರಣಿದರ್ಶನಕಿಂತ ಕಿರಣಾನುಭವ ಸುಲಭ|
ಪರಮಶಾಸ್ತ್ರಕಿಂತ ಸರಿಯುದಾಹರಣೆ||
ಪರಮತತ್ತ್ವವ ಕಂಡ ಗುರುವನರಸುವುದೆಲ್ಲಿ?|
ದೊರೆತಂದು ನೀಂ ಧನ್ಯ - ಮಂಕುತಿಮ್ಮ || " 

’ಜ್ಞಾನಿ’ ಎಂದರೆ ಶಾಸ್ತ್ರಾರ್ಥಗಳನ್ನೂ ಪರಮಾರ್ಥವನ್ನೂ ಅಧ್ಯಯನ ಮತ್ತು ಅನುಭವದಿಂದ ತಿಳಿದವರು ಎಂದು ಗ್ರಹಿಸಿಕೊಳ್ಳಬೇಕಾಗುತ್ತದೆ. ಹೀಗಾಗಿ ಬ್ರಹ್ಮಜಿಜ್ಞಾಸೆಗೆ ’ಬ್ರಹ್ಮಜ್ಞಾನಿ’ ಅಥವಾ ’ಜೀವನ್ಮುಕ್ತ’ರನ್ನೇ ಮಾದರಿಯಾಗಿರಿಸಿಕೊಳ್ಳಬೇಕಾಗುತ್ತದೆ ಅಥವಾ ಆಶ್ರಯಿಸಬೇಕಾಗುತ್ತದೆ. ಗ್ರಂಥವೂ ಗುರುವಾಗಬಲ್ಲುದು, ಒಂದು ಜೇನ್ನೊಣವೂ ಪ್ರೇರಣೆ ನೀಡಬಲ್ಲುದು ಆದರೆ, ಅನುಭದಿಂದ ಬರುವ ಗುರುವಾಕ್ಯವು ಹೆಚ್ಚಿನ ಸಮಾಧಾನವನ್ನು ನೀಡಬಲ್ಲುದು ಎಂದು ತಿಳಿಯಬಹುದು. ಶಂಕರರು, ರಮಣಮಹರ್ಷಿಗಳಂತಹ ಅನೇಕ ಜ್ಞಾನಿಗಳು ಇದಕ್ಕೆ ನಿದರ್ಶನ ಎನ್ನಬಹುದು. ಕೆಲವರಿಗೆ ಶಾಸ್ತ್ರಾರ್ಥಗಳು ಚೆನ್ನಾಗಿ ಗೊತ್ತಿರುತ್ತದೆ ಆದರೆ ತಿಳಿಸುವುದಕ್ಕೆ ಬರುವುದಿಲ್ಲ. ಇನ್ನೂ ಕೆಲವರಿಗೆ ಏನೋ ಕೊಂಚ ತಿಳಿದಿರುತ್ತದೆ ಆದರೆ, ಅದನ್ನೇ ಬಣ್ಣ ಕಟ್ಟಿ ಹೇಳುವುದರಲ್ಲಿ ನಿಪುಣರಾಗಿರುತ್ತಾರೆ (ವಿವೇಕಿಗಳೊಬ್ಬರು ಹೇಳುವಂತೆ " ಅವರ ಇನ್ವೆಸ್ಟ್ ಮೆಂಟೇ ಕಮ್ಮಿ ಆದರೆ ಟರ್ನ್ ಓವರ್ ಜಾಸ್ತಿ" ಎನ್ನುವಂತೆ !).
ಪಂಡಿತರೊಬ್ಬರು ಕಾಶಿಗೆ ತೆರಳಿ ಅಲ್ಲಿ ಎಲ್ಲರೊಡನೆ ವಾದವನ್ನು ಮಾಡಿ ಗೆದ್ದ ನಂತರ "ಇನ್ನು ಇಲ್ಲಿ ವಿಶ್ವನಾಥನನ್ನು ಬಿಟ್ಟರೆ ನನ್ನೊಡನೆ ವಾದ ಮಾಡಲು ಯಾರೂ ಉಳಿದಿಲ್ಲ" ಎಂದರಂತೆ !. ಅಂದರೆ, "ಇದು ಇಷ್ಟೇ " (ಯಾವ ದೇಶಕ್ಕೇ ಹೋದರೂ) ಎಂದು ಕಡ್ಡಿಮುರಿದಂತೆ ಹೇಳುವ ಗುರುವ ಅಗತ್ಯ ಮತ್ತು ಅಪೇಕ್ಷಿಗಳು ಅಂತಹ ಗುರುವನ್ನೇ ಆಶ್ರಯಿಸಬೇಕು , ಬಳಿಸಾರಬೇಕು ಎಂದು ಆಚಾರ್ಯರು ಮೇಲಿನ ಶ್ಲೋಕದಲ್ಲಿ ಹೇಳಿರುತ್ತಾರೆ.

ಮುಂದಿನ ಕಂತಿನಲ್ಲಿ ಗುರುವಿನ ಬಳಿಸಾರಿ ನಿವೇದಿಸಿಕೊಳ್ಳುವುದರಿಂದ ಮೊದಲಾಗಿ ಬ್ರಹ್ಮಜಿಜ್ಞಾಸೆಯನ್ನು ಆಚಾರ್ಯರ ನಿರೂಪಣೆಯಲ್ಲಿ ತಿಳಿಯೋಣ.  

ವಂದನೆಗಳೊಂದಿಗೆ.

Thursday, October 27, 2011

ವಿವೇಕ ಚೂಡಾಮಣಿ - ಭಾಗ-೧೫


ಗ್ರಂಥದ ಮುಂದುವರಿಕೆ:-

मूलम्- ಮೂಲ:-
मन्दमध्यमरूपाऽपि वैराग्येण शमादिना ।
प्रसादेन गुरोः सेयं प्रवृद्धा सूयते फलम् ॥२९॥

ಮಂದ-ಮಧ್ಯಮ-ರೂಪಾಽಪಿ ವೈರಾಗ್ಯೇಣ ಶಮಾದಿನಾ |
ಪ್ರಸಾದೇನ ಗುರೋಸ್ಸೇಯಂ ಪ್ರವೃದ್ಧಾ ಸೂಯತೇ ಫಲಮ್ ||೨೯|

ಪ್ರತಿಪದಾರ್ಥ :-
(ಮಂದ-ಮಧ್ಯಮ-ರೂಪಾ ಅಪಿ= ಮಂದ ಮಧ್ಯಮ ಸ್ಥಿತಿಯಲ್ಲಿದ್ದರೂ, ವೈರಾಗ್ಯೇಣ= ವಿರಾಗದಿಂದದಲೂ, ಶಮಾದಿನಾ = ಶಮಾದಿಗುಣ ಸಾಧನದಿಂದಲೂ, ಗುರೋಃ =ಗುರುವಿನ, ಪ್ರಸಾದೇನ = ಅನುಗ್ರಹದಿಂದ, ಸಾ ಇಯಂ = ಆ ಈ (ಮುಮುಕ್ಷುತ್ವವು), ಪ್ರವೃದ್ಧಾ = ಪ್ರಬಲವಾಗಿ, ಫಲಂ = ಫಲವನ್ನು , ಸೂಯತೇ = ಉಂಟುಮಾಡುತ್ತದೆ. )

ತಾತ್ಪರ್ಯ : 
ಇಂತಹ ಮುಮುಕ್ಷುತ್ವವು ಮಂದ ಮಧ್ಯಮ ಸ್ಥಿತಿಯಲ್ಲಿದ್ದರೂ ವೈರಾಗ್ಯ , ಶಮಾದಿಗುಣ ಸಾಧನೆ ಮತ್ತು ಗುರುವಿನ ಅನುಗ್ರಹದಿಂದ (ಉಪದೇಶದಿಂದ) ಪ್ರಬಲವಾಗಿ ಮೋಕ್ಷರೂಪವಾದ ಫಲವು ಉಂಟಾಗುತ್ತದೆ.

ವಿವರಣೆ :
ಸಾಧನ ಚತುಷ್ಟಯದ ನಂತರ ಆಚಾರ್ಯರು ಮುಂದುವರಿದು ಮುಮುಕ್ಷುತ್ವದ ಬಗೆಗೆ ಹೇಳುತ್ತಾರೆ.  ಮುಮುಕ್ಷುತ್ವ ಅಥವಾ ಬಿಡುಗಡೆಯ ಬಯಕೆ ಎನ್ನುವುದು ಎಲ್ಲರಲ್ಲೂ ಒಂದೇ ತೆರನಾಗಿ ಇರುವುದಿಲ್ಲ. ಕೆಲವರಿಗೆ ಮಂದ (Slow)ವಾಗಿರುತ್ತದೆ. ನಿಧಾನವಾಗಿ ಕೆಲಸ ಮಾಡುವ ಅಥವಾ ಮುಂದಿನ ವಾರವೋ ಮುಂದಿನ ತಿಂಗಳೋ ಮಾಡಿದರಾಯಿತು ಎನ್ನುವ ಮನೋಭಾವವಿರುತ್ತದೆ. ಕೆಲವರಿಗೆ ಮಧ್ಯಮ (Medium)ಸ್ಥಿತಿಯಲ್ಲಿರುತ್ತದೆ. ನಾಳೆಯೋ ನಾಡಿದ್ದೋ ಮಾಡಿದರಾಯಿತು ಎನ್ನುವ ಮನೋಭಾವ. ಕೆಲವರಿಗೆ ಪ್ರವೃದ್ಧ(ಜಾಗೃತ, Quick, Cautious)  ಸ್ಥಿತಿಯಲ್ಲಿರುತ್ತದೆ.  ಇಂದು ಮಾಡಬೇಕಾದ ಕೆಲಸ ಈಗಲೇ ಆಗಿ ಬಿಡಬೇಕು ಎನ್ನುವ ತೀವ್ರತೆಯ ಮನೋಭಾವವಿರುತ್ತದೆ. ಹೀಗೆ ಮುಮುಕ್ಷುತ್ವವು ಮಂದ ಮಧ್ಯಮ ಸ್ಥಿತಿಯಲ್ಲಿದ್ದರೂ ಸಹ ವೈರಾಗ್ಯಸಾಧನೆ ಮತ್ತು ಶಮಾದಿಗುಣಗಳ ಪಾಲನೆಯಿಂದ ಪರಿಪಾಕಗೊಂಡ ಮೋಕ್ಷಾಪೇಕ್ಷಿಯ ಮೇಲೆ ಗುರುವಿನ ಅನುಗ್ರಹವು ಆಗುವುದರಿಂದ ಅದು ತೀವ್ರತೆಯನ್ನು ಪಡೆದುಕೊಳ್ಳುತ್ತದೆ.  ವಿಷಯಭೋಗವಸ್ತುಗಳಲ್ಲಿನ ದೋಷಗಳನ್ನು ಕಂಡು ಹುಟ್ಟುವ ಮಂದ ಮುಮುಕ್ಷುತ್ವವು ಶಾಸ್ತ್ರಾರ್ಥಗಳನ್ನು ಅರಿಯುವ ಕಾಲದಲ್ಲಿ ಮಧ್ಯಮಾವಸ್ಥೆಗೆ ಬಂದು ವೈರಾಗ್ಯವು ತೀವ್ರವಾದಂತೆ ಶಮಾದಿಗುಣಗಳು ಸಿದ್ಧಿಸಿದಂತೆ ಮನಸ್ಸು ಸಮಾಧಾನದಲ್ಲಿ ಲೀನವಾಗುವುದರೊಂದಿಗೆ ಗುರುವಿನ ಅನುಗ್ರಹವೂ ಅಪೇಕ್ಷಿಯ ಮೇಲೆ ಉಂಟಾಗಿ ಮುಮುಕ್ಷುತ್ವವು ಪ್ರಬಲವಾಗಿ ಮೋಕ್ಷರೂಪವಾದ ಫಲವು ಉಂಟಾಗುತ್ತದೆ ಎಂದು ವ್ಯಾಖ್ಯಾನಕಾರರು ವಿವರಿಸುತ್ತಾರೆ.
ಗಾಂಧೀಜಿಯವರಿಗೆ ಬಂದದ್ದು ತೀವ್ರತರವಾದ ಮುಮುಕ್ಷುತ್ವ ಎನ್ನಬಹುದು. ’ದೇಶಕ್ಕಾಗಿ ಸರಳತೆಯನ್ನು ಪಾಲಿಸುತ್ತೇನೆ’ ಎಂದು ಹೇಳಿದಷ್ಟೇ ವೇಗವಾಗಿ ತಮ್ಮ ’ಸಿವಿಲ್’ ಪೋಷಾಕುಗಳನ್ನು ತ್ಯಜಿಸಿ ದೇಶೀಯವಾದ ಒಂಟಿ ಬಟ್ಟೆಯನ್ನು ಉಟ್ಟರು !. ಅಪ್ರತೀಕಾರ ಅಥವಾ ಅಹಿಂಸೆಯನ್ನೇ ತಮ್ಮ ಧ್ಯೇಯವಾಗಿರಿಸಿಕೊಂಡು ಗುರಿಯನ್ನು ಮುಟ್ಟಿದರು. ಮಹಾಭಾರತದಲ್ಲಿ ವಿದುರನಿಗೆ ಬಂದದ್ದು ತೀವ್ರವಾದ ಮುಮುಕ್ಷುತ್ವವೆ. ಅರ್ಜುನನಿಗೆ ಬಂದ ಮುಮುಕ್ಷುತ್ವ ಹಾಗೆ ಬಂದು ಹೀಗೆ ಹೋದದ್ದು !. ಆದುದರಿಂದ, ಆತ್ಮಾಭ್ಯಾಸಿಯು ಪುರುಷ ಪ್ರಯತ್ನದಿಂದ ಶಮಾದಿಗುಣಗಳು ಮತ್ತು ವೈರಾಗ್ಯ ಸಾಧನೆಗೆ ತೀವ್ರವಾಗಿ ಯತ್ನಿಸಬೇಕಾಗುತ್ತದೆ ಎಂಬ ಸೂಕ್ಷ್ಮವನ್ನು ಇಲ್ಲಿ ಕಂಡು ತಿಳಿಯಬಹುದು.
ಮಂದಗಾಮಿಗಳು ಇಂದೋ ನಾಳೆಯೋ ಅಥವಾ ಎಂದೋ ಒಂದು ದಿನ ಆತ್ಮಾನುಭವವನ್ನು ಪಡೆದರೆ ಆಯಿತು ಎನ್ನುವ ಮನೂಭಾವದವರು. ಪ್ರವೃದ್ಧರಿಗೆ ವ್ಯಾವಹಾರಿಕ ಜಗತ್ತು ಎನ್ನುವುದು ಕಾದ ದೋಸೆಯ ಹೆಂಚಿನ ಮೇಲೆ ಕೂರುವಂತೆ !. ಆದಷ್ಟು ಬೇಗ ಎದ್ದು ಓಡಬೇಕು (ಸಂಸಾರದಿಂದ) ಎನ್ನುವ ತೀವ್ರತೆ. ಇನ್ನು ಕೆಲವರು ಕ್ರಮೇಣ ಪ್ರಪಂಚದೊಂದಿಗೆ ರಾಜಿಮಾಡಿಕೊಂಡು ಕಾಲಯಾಪನೆ ಮಾಡುವವರು , ಕ್ಷಣಿಕ ವೈರಾಗ್ಯದವರು.
ಹೀಗಿದ್ದರೂ ಸಹ ಸಾಧನ ಚತುಷ್ಟಯಗಳ ಸಾಧನೆಯಿಂದ ಮತ್ತು ಗುರುವಿನ ಅನುಗ್ರಹವನ್ನು ಪಡೆಯುವುದರಿಂದ ಮೋಕ್ಷರೂಪವಾದ ಫಲವನ್ನು ಹೊಂದಬಹುದು ಎಂದು ಆಚಾರ್ಯರು ವಿವರಿಸುತ್ತಾರೆ.

मूलम्- ಮೂಲ:-

वैराग्यंच मुमुक्षुत्वं तीव्रं यस्य तु विद्यते ।
तस्मिन्नेवार्थवंतः स्युः फलवंतः शमादयः ॥३०॥

ವೈರಾಗ್ಯಂಚ ಮುಮುಕ್ಷುತ್ವಂ ತೀವ್ರಂ ಯಸ್ಯ ತು ವಿದ್ಯತೇ |
ತಸ್ಮಿನ್ನೇವಾರ್ಥವಂತಃ ಸ್ಯುಃ ಫಲವಂತಃ ಶಮಾದಯಃ ||೩೦||

ಪ್ರತಿಪದಾರ್ಥ :-
(ತು= ಆದರೆ, ಯಸ್ಯ= ಯಾರಿಗೆ, ವೈರಾಗ್ಯಂ= ವೈರಾಗ್ಯವು, ಮುಮುಕ್ಷುತ್ವಂ ಚ= ಮತ್ತು ಬಿಡುಗಡೆಯ ಬಯಕೆಯು, ತೀವ್ರಂ ವಿದ್ಯತೇ= ತೀವ್ರವಾಗಿದೆಯೋ,
ತಸ್ಮಿನ್ ಏವ = ಅವನಲ್ಲಿಯೇ, ಶಮಾದಯಃ= ಶಮಾದಿಗುಣಗಳು, ಅರ್ಥವಂತಃ=ಅರ್ಥವುಳ್ಳವೂ, ಫಲವಂತಃ=ಫಲವುಳ್ಳದ್ದೂ, ಸ್ಯುಃ =ಆಗುವುವು).

ತಾತ್ಪರ್ಯ:-
ಆದರೆ, ಯಾರಲ್ಲಿ ವೈರಾಗ್ಯವು ಮತ್ತು ಮುಮುಕ್ಷುತ್ವವು ತೀವ್ರವಾಗಿರುವುದೋ ಅವನಲ್ಲಿಯೇ ಶಮಾದಿಗುಣಗಳು ಸಾರ್ಥಕವೂ ಸಫಲವೂ ಆಗುವುವು.

ವಿವರಣೆ:-
ಈ ಮೇಲಿನ ಶ್ಲೋಕವನ್ನು ಮತ್ತು ಅದರ ತಾತ್ಪರ್ಯವನ್ನು ಗಮನಿಸಿದರೆ ಸುತ್ತಿ-ಬಳಸಿ ಮತ್ತೆ ಇದ್ದಲ್ಲಿಗೇ ಬಂದೆವೇನೊ ಎನಿಸುತ್ತದೆ. ಅದು ನಿಜವೆ !. ಈ ಮೂಲಕ ಸಾಧನ ಚತುಷ್ಟಯದ ಗುಣಗಳೆಲ್ಲವೂ ಅಪೇಕ್ಷಿಯಲ್ಲಿ ಅಥವಾ ಅಧಿಕಾರಿಯಲ್ಲಿ ತೀವ್ರವಾಗಿಯೇ ಇರಬೇಕಾಗುತ್ತದೆ ಎನ್ನುವುದನ್ನು ತಿಳಿಯಬಹುದು.  ಒಬ್ಬನು ತನ್ನ ಹೊಲದಲ್ಲಿ ರಾಗಿಯನ್ನು ನಾಟಿ ಚೆನ್ನಾಗಿ ನೀರು ಕೊಟ್ಟು ಗೊಬ್ಬರವನ್ನೂ ಹಾಕಿ ತಿಂಗಳುಗಳ ಕಾಲ ಕಣ್ಣಿಟ್ಟು ಬೆಳೆದರೂ ಸಹ ಇಳುವರಿಯು ಚೆನ್ನಾಗಿಲ್ಲ ಎಂದು ಹೇಳುತ್ತಾನೆ. ಏಕೆಂದರೆ ಆತನು ಬೆಳೆಯ ಸುತ್ತಲೂ ಬೆಳೆದಿದ್ದ ಕಳೆಯನ್ನು ಹಾಗೆ ಬಿಟ್ಟುಕೊಂಡೇ ಉತ್ತಮ ಇಳುವರಿಯನ್ನು ಬಯಸಿರುತ್ತಾನೆ. ಸಂಪೂರ್ಣ ತೊಡಗುವಿಕೆ ಇಲ್ಲದೆ ಉತ್ತಮ ಫಲವನ್ನು ನಿರೀಕ್ಷಿಸುವುದಾದರೂ ಹೇಗೆ ? . ತೊಡವಿಕೆಯ ಜೊತೆಗೆ ಮಾಡುವ ಕೆಲಸದಲ್ಲಿ Passion ಮತ್ತು ತೀವ್ರತೆಗಳೆರಡೂ ಇರಬೇಕಾಗುತ್ತದೆ.
ಮಂದ ಮಧ್ಯಮ ಸ್ಥಿತಿಯಲ್ಲಿದ್ದರೂ ಕ್ರಮೇಣ (ಮೇಲೆ ವಿವರಿಸಿದಂತೆ) ಮುಮುಕ್ಷುತ್ವವು ತೀವ್ರವಾಗುತ್ತದೆ ಎಂದರೂ ಸಹ ಸಾಧ್ಯತೆಗಳು ದೀರ್ಘಕಾಲೀನವಾದುವೂ ಮತ್ತು ಇಂತಹ ಸ್ಥಿತಿಯಲ್ಲಿ ಮನೋನಿಗ್ರಹವು ಕಷ್ಟಸಾಧ್ಯವಾದುದರಿಂದ ತೀವ್ರತೆಯ ಭಾವವೇ ಉತ್ತಮ ಎನ್ನುವ ಆಶಯವನ್ನು ಇಲ್ಲಿ ವ್ಯಕ್ತಪಡಿಸಿದ್ದಾರೆನ್ನಬಹುದು.
ವೈರಾಗ್ಯ ಮತ್ತು ಮುಮುಕ್ಷುತ್ವದ ತೀವ್ರತೆಯನ್ನು ಇಟ್ಟುಕೊಂಡು ಸಾಧನೆಗೆ ಮುಂದಾದಾಗ ಶಮಾದಿಗಳು ಫಲನೀಡುತ್ತವೆ ಮತ್ತು ಅರ್ಥಪೂರ್ಣವಾಗಿರುತ್ತದೆ ಎಂದು ವ್ಯಾಖ್ಯಾನಿಸುತ್ತಾರೆ. ಕಾರ್ಯದಿಂದ ಕಾರಣವನ್ನು ಊಹಿಸಬೇಕೆಂಬ ಅಭಿಪ್ರಾಯವು ಇಲ್ಲಿ ವ್ಯಕ್ತವಾಗುವುದನ್ನು ಕಾಣಬಹುದು.  ತೀವ್ರ ವೈರಾಗ್ಯವಿದ್ದರೆ ಶಮಾದಿ ಶಬ್ದಗಳು ಅರ್ಥವುಳ್ಳದ್ದಾಗುವುವು, ತೀವ್ರ ಮುಮುಕ್ಷುತ್ವವಿದ್ದರೆ ಶಮಾದಿಗಳು ಫಲವುಳ್ಳದ್ದಾಗುವುವು ಎಂದು ಶ್ರೀ ಚಂದ್ರಶೇಖರ ಭಾರತಿ ಸ್ವಾಮಿಗಳು ವ್ಯಾಖ್ಯಾನಿಸುತ್ತಾರೆ.

मूलम्- ಮೂಲ:-

एतयोर्मंदता यत्र विरक्तत्वमुमुक्षुयोः ।
मरौ सलिलवत् तत्र शमादेर्भानमात्रता ॥३१॥

ಏತಯೋರ್ಮಂದತಾ ಯತ್ರ ವಿರಕ್ತತ್ವ-ಮುಮುಕ್ಷುಯೋಃ|
ಮರೌ ಸಲಿಲವತ್ತತ್ರ ಶಮಾದೇರ್ಭಾನಮಾತ್ರತಾ ||೩೧||

ಪ್ರತಿಪದಾರ್ಥ:-
(ಯತ್ರ= ಯಾರಲ್ಲಿ, ಏತಯೋ ವಿರಕ್ತತ್ವ-ಮುಮುಕ್ಷುತಾ= ಈ ವೈರಾಗ್ಯ-ಮುಮುಕ್ಷುತ್ವಗಳು, ಮಂದತಾ= ಮಂದವಾಗಿವೆಯೋ ತತ್ರ= ಅವರಿಗೆ,
ಮರೌ = ಮರುಭೂಮಿಯಲ್ಲಿ, ಸಲಿಲವತ್= ನೀರಿರುವಂತೆ, ಶಮಾದೇಃ= ಶಮಾದಿಗಳ, ಭಾನಮಾತ್ರ ತಾ= ತೋರಿಕೆಯು ಮಾತ್ರ ’ಇರುತ್ತದೆ’).

ತಾತ್ಪರ್ಯ:-
ಯಾರಲ್ಲಿ ಈ ವೈರಾಗ್ಯ-ಮುಮುಕ್ಷುತ್ವಗಳು ಮಂದವಾಗಿರುತ್ತವೆಯೋ ಅವರಲ್ಲಿ ಶಮಾದಿಗಳು ತೋರಿಕೆಗೆ ಮಾತ್ರ ಇರುತ್ತದೆ. ಹೇಗೆಂದರೆ, ಮರುಭೂಮಿಯಲ್ಲಿ ನೀರಿರುವಂತೆ (ಅಥವಾ ಮರೀಚಿಕೆಯಂತೆ, ಬಿಸಿಲ್ಗುದುರೆ).

ವಿವರಣೆ :-
ಯಾರಲ್ಲಿ ವೈರಾಗ್ಯ ಮತ್ತು ಮುಮುಕ್ಷುತ್ವಗಳು ಮಂದವಾಗಿರುತ್ತದೆಯೋ ಅವರಲ್ಲಿ ಶಮಾದಿಗುಣಗಳು ಕೇವಲ ತೋರಿಕೆಗೆ ಮಾತ್ರ ಇರುತ್ತದೆಯೇ ಹೊರತು ಸಾಧನೆಯ ರೂಪದಲ್ಲಿ ಇರುವುದಿಲ್ಲ. ಮರುಭೂಮಿಯಲ್ಲಿ ಮರೀಚಿಕೆಯನ್ನು ಕಾಣುವಂತೆ ಅಥವಾ ಮರಳುಗಾಡಿನಲ್ಲಿ ದುರ್ಲಭವಾದ ನೀರಿನ ಮೂಲದಂತೆ ತೋರಿಕೆಯಾಗುತ್ತದೆ ಎಂದು ವಿವರಿಸುತ್ತಾರೆ. ಮೇಲ್ನೋಟಕ್ಕೆ ಇದ್ದಂತೆ ಕಾಣುತ್ತದೆ ಆದರೆ ವಾಸ್ತವದಲ್ಲಿ ಇರುವುದಿಲ್ಲ ಎಂದು ಅರ್ಥ.
ಗುರಿ ಇಲ್ಲದೆ ದಾರಿಯಲ್ಲಿ ಸಾಗಿದರೆ ಎಲ್ಲಿಗೆ ತಲುಪಬೇಕೆಂಬ ಗೊಂದಲವು ಮುಗಿಯುವುದೇ ಇಲ್ಲ. ಹೊಲದಲ್ಲಿ ಉತ್ತಮ ಇಳುವರಿಯನ್ನು ಪಡೆಯಬೇಕೆಂಬ ತೀವ್ರ ಹಂಬಲವಿದ್ದರೆ ಅದಕ್ಕೆ ಪೂರಕವಾದ ಕಾರ್ಯಗಳೂ ಕೈಗೂಡುತ್ತವೆ ಸಾಧನಗಳೂ ಫಲ ನೀಡುತ್ತವೆ.  ಗುರಿಯ ನೆಚ್ಚಿಗೆ ಇಲ್ಲದಿದ್ದರೂ ಸಹ ಹಂಬಲದಿಂದ , ಉತ್ಸಾಹದಿಂದ ಕೆಲಸ ಮಾಡುತ್ತಾ ಹೋಗುವುದರಿಂದ ಅರಿಯದೆಯೇ ಗುರಿಯನ್ನು ಮುಟ್ಟುವುದು ಸಾಧ್ಯ ಎಂದು ಹೇಳಬಹುದು. ಮುಖ್ಯವಾಗಿ ಬೇಕಾಗುವುದು ಕಾರ್ಯದಲ್ಲಿ ತೀವ್ರತೆ ಮತ್ತು ಹಂಬಲ, ಇದಿಲ್ಲದೆ ಮಾಡುವ ಕೆಲಸವು ಫಲಕಾರಿಯಾಗದೆ ಕೇವಲ ’ನಾವೂ ಮಾಡಿದೆವು’ ಎನ್ನುವುದಕ್ಕೆ ಸೀಮಿತವಾಗಿಬಿಡುತ್ತದೆ.  ನೆಹರೂ ಅವರಲ್ಲಿ ತೋರಿಕೆಯಂತಿದ್ದ ದೇಶಪ್ರೇಮ, ಸ್ವದೇಶೀಯತೆ, ಸರಳತೆಗಳು ಗಾಂಧೀಜಿಯವರಲ್ಲಿ ಸಾಧನೆಯ ರೂಪದಲ್ಲಿ ಇದ್ದುವು ಎನ್ನುವುದನ್ನು ಸುಲಭವಾಗಿ ತಿಳಿಯಬಹುದು !.
ವೈರಾಗ್ಯ ಮತ್ತು ಮುಮುಕ್ಷುತ್ವವು ತೀವ್ರತೆಯನ್ನು ಪಡೆದುಕೊಂಡಾಗ ಸಾಧನೆಯ ಹಾದಿಯು ಸುಗಮವಾಗುತ್ತದೆ ಎನ್ನುವ ಸೂಕ್ಷ್ಮ ವಿಚಾರವನ್ನು ಇಲ್ಲಿ ತಿಳಿಯಬಹುದು.

ಮುಂದಿನ ಕಂತಿನಲ್ಲಿ ಇನ್ನಷ್ಟು ತಿಳಿಯೋಣ....

--------------------------

ಕೊ : ಇದೊಂದು ಹೊಸ ಮಾದರಿ. ಮೂಲ, ಪ್ರತಿಪದಾರ್ಥ, ತಾತ್ಪರ್ಯ, ವಿವರಣೆ ಕೊನೆಯಲ್ಲಿ ಟಿಪ್ಪಣಿ. ಇದು ಸೋಪಾನ.  ಈ ಪ್ರಯತ್ನ ಸರಿಯಾಗಿದೆಯೋ ಇಲ್ಲವೋ ಎನ್ನುವುದನ್ನು ನೀವೇ ಹೇಳಬೇಕು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳದ್ದೇ ಅಂತಿಮ ನಿರ್ಣಯವಾದುದರಿಂದ ತೀರ್ಮಾನವನ್ನು ನಿಮಗೇ ಬಿಟ್ಟಿದ್ದೇನೆ :) . ದಯವಿಟ್ಟು ತಿಳಿಸಿ.

ಕೊ.ಕೊ.: ಪ್ರತಿಪದಾರ್ಥವನ್ನು ಕೊಡಲು ನನ್ನಲ್ಲಿ ಸಬಂಧಪಟ್ಟ ಕನ್ನಡ ಪುಸ್ತಕವು ಇಲ್ಲ. ನನ್ನ ಗ್ರಹಿಕೆಯ, ತಿಳುವಳಿಕೆಯ ಆಧಾರದಲ್ಲಿ ಕೊಟ್ಟಿದ್ದೇನೆ, ಕೊಡುತ್ತೇನೆ.  ಇಲ್ಲೇನಾದರೂ ತಪ್ಪುಗಳು ಕಂಡು ಬಂದಲ್ಲಿ ತಿಳಿಸಿ-ತಿದ್ದಿಕೊಡಿ ಎಂದು
 ಕೇಳಿಕೊಳ್ಳುತ್ತೇನೆ. ಹಳೆಯ ಮಾದರಿಯನ್ನೇ ಉಳಿಸಿಕೊಳ್ಳಬೇಕೆಂದರೆ ,  ಅದಕ್ಕೂ ಸರಿಯೆ.

=======================

ವಂದನೆಗಳೊಂದಿಗೆ,

Saturday, October 22, 2011

ವಿವೇಕ ಚೂಡಾಮಣಿ -ಭಾಗ-೧೪


ಗ್ರಂಥದ ಮುಂದುವರಿಕೆ..

सम्यगास्थापनं बुद्धेः शुद्धे ब्रह्मणि सर्वदा ।
तत्समाधनमित्युक्तं  न तु चित्तस्य लालनम् ||२७||

ಸಮ್ಯಗಾಸ್ಥಾಪನಂ ಬುದ್ಧೇಃ ಶುದ್ಧೇ ಬ್ರಹ್ಮಣಿ ಸರ್ವದಾ|
(= ಬುದ್ಧಿಯನ್ನು ಶುದ್ಧ ಬ್ರಹ್ಮನಲ್ಲಿ ಯಾವಾಗಲೂ ಚೆನ್ನಾಗಿ ಇಟ್ಟುಕೊಳ್ಳುವುದು)
ತತ್ ಸಮಧಾನಮಿತ್ಯುಕ್ತಂ ನ ತು ಚಿತ್ತಸ್ಯ ಲಾಲನಮ್ ||೨೭||
(=ಅದನ್ನು (ಇದನ್ನು) ಸಮಾಧಾನವೆಂದು ಹೇಳಿದೆಯೇ ಹೊರತು ಚಿತ್ತ ಪೋಷಣೆಯನ್ನು ಅಲ್ಲ)

ಶುದ್ಧ ಬ್ರಹ್ಮದಲ್ಲಿ ಬುದ್ಥಿಯನ್ನು ಸ್ಥಿರಗೊಳಿಸುವುದು ಎಂದರೆ ಧರ್ಮಾತೀತವಾದ ನಿರ್ಗುಣ ಬ್ರಹ್ಮನಲ್ಲಿ ಬುದ್ಧಿಯನ್ನು ನಿಶ್ಚಯಗೊಳಿಸಿಕೊಳ್ಳುವುದು (ಸಮ್ಯಕ್ =ಚೆನ್ನಾಗಿ , ಆಸ್ಥಾಪನಂ = ನೆಲೆಗೊಳಿಸುವುದು) ಮತ್ತು ಇದನ್ನೇ ಸಮಾಧಾನವೆಂದು ಹೇಳಲ್ಪಟ್ಟಿದೆ. ಮನಸ್ಸಿನ ಲಾಲನೆಯು ಸಮಾಧಾನ (ಸಮ್ಯಕ್ =ಚೆನ್ನಾಗಿ, ಆಧಾನಂ= ಇಡುವುದು) ಅಲ್ಲ ಎಂದು ಮೇಲಿನ ಶ್ಲೋಕದಲ್ಲಿ ತಿಳಿಸುತ್ತಾರೆ. ಸಮಾಧಾನ ಎನ್ನುವುದಕ್ಕೆ ಶಾಂತಿ ಎನ್ನುವ ಅರ್ಥವಿದ್ದರೂ ಸಹ ಇಲ್ಲಿ, ಬ್ರಹ್ಮನಲ್ಲಿ  ನಿಶ್ಚಯಸ್ವರೂಪವಾದ ಬುದ್ಧಿಯನ್ನು ನೆಲೆಗೊಳಿಸಿಕೊಳ್ಳುವುದನ್ನು ಸಮಾಧಾನ ಎಂದು ಹೇಳಿರುತ್ತಾರೆ. ’ಚಿತ್ತಸ್ಯ ಲಾಲನಮ್’ ಎಂದರೆ ಮನಸ್ಸಿನ ಲಾಲನೆ ಅಥವಾ ಮನಸ್ಸಿಗೆ ಮುದವಾಗುವಂತೆ ನೆಡೆದುಕೊಳ್ಳುವುದು ಎಂಬ ಅರ್ಥದಲ್ಲಿ ಹೇಳಿರುತ್ತಾರೆ. ಚಿತ್ತ ಎನ್ನುವುದಕ್ಕೆ ಸ್ಮೃತಿ ಎನ್ನುವ ಅರ್ಥವೂ ಬರುವುದರಿಂದ ಸ್ಮೃತಿ ಅಥವಾ ನೆನಪು ಎನ್ನುವುದು ಪ್ರಮಾಣೀಕೃತವಾಗಬಹುದಾದ ಭೂಮಿಕೆಯಾಗುವುದಿಲ್ಲ  ಎಂದು ತಾರ್ಕಿಕರು ಹೇಳುತ್ತಾರೆ . ನೆನಪು ಎನ್ನುವುದೇ ಎಲ್ಲೋ ಸ್ವಲ್ಪ ಹಾಗೆ ಅಥವಾ ಹೀಗೆ ಆಗಿರಬಹುದಾದ ಎನ್ನುವ ಅರ್ಥವನ್ನು ಹೊರಡಿಸುವುದರಿಂದ ಸ್ಮೃತಿಪ್ರಮಾಣವನ್ನು ನೆಚ್ಚಿಕೊಳ್ಳುವುದು ಹಿತವಲ್ಲ ಆದುದರಿಂದ ಗತಕಾಲದ ನೆನಪುಗಳಲ್ಲೇ ಕಾಲ ಕಳೆಯುವುದನ್ನು ಬಿಟ್ಟು ವಾಸ್ತವದ ಅಂದರೆ ಅನುಭವದಿಂದ ತಿಳಿಯಬಹುದಾದ ಆತ್ಮಾರ್ಥದಲ್ಲಿ ಬುದ್ಧಿಯನ್ನು ನೆಲೆಗೊಳಿಸಿಕೊಳ್ಳುವುದು ಹಿತವಾದುದು ಎಂದು ಹೇಳುತ್ತಾರೆ.
ಮಕ್ಕಳು ಸಿಹಿತಿಂಡಿ ಬೇಕೆಂದು ಅಳುತ್ತಾ ಕುಳಿತಾಗ ಮಗುವಿನ ಮನಸ್ಸನ್ನು ಶಾಂತಗೊಳಿಸಲು ಸಿಹಿತಿಂಡಿಯನ್ನು ಕೊಟ್ಟು ಉಪಚರಿಸುತ್ತೇವೆ. ಇನ್ನೆಂದೂ ಆ ಮಗುವು ಸಿಹಿಯನ್ನು ಕೇಳುವುದೇ ಇಲ್ಲ ಎನ್ನಲು ಸಾಧ್ಯವೆ ?. ಮನಸಿನ ಹೊಯ್ದಾಟಗಳಿಗೆ ಮಿತಿ ಎಂಬುದು ಇರುವುದಿಲ್ಲ, ಆದುದರಿಂದ ಮನಸಿನ ಲಾಲನೆಯನ್ನು ಬಿಟ್ಟು ಪ್ರಯತ್ನಪೂರ್ವಕವಾಗಿ ಬುದ್ಧಿಯನ್ನು ಬ್ರಹ್ಮನಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳುತ್ತಾರೆ.
ಶ್ರೀ ಚಂದ್ರಶೇಖರ ಭಾರತಿ ಸ್ವಾಮಿಗಳು ತಮ್ಮ ವ್ಯಾಖ್ಯಾನದಲ್ಲಿ ಹೀಗೆ ಹೇಳುತ್ತಾರೆ.
"ಶುಭಾಶುಭಾಭ್ಯಾಂ ಮಾರ್ಗಾಭ್ಯಾಂ ವಹಂತೀ ವಾಸನಾಸರಿತ್ |
ಪೌರುಷೇಣ ಪ್ರಯತ್ನೇನ ಯೋಜನೀಯಾ ಶುಭೇ ಪಥಿ || " .

ವಾಸನಾ(ಬಯಕೆಗಳು, ಅವಿದ್ಯೆ, ಇತ್ಯಾದಿ) ಎನ್ನುವ ನದಿಯು ಎಲ್ಲಾ (ಒಳಿತು-ಕೆಡುಕು) ದಾರಿಯಲ್ಲಿಯೂ ಹರಿಯುತ್ತಿರುತ್ತದೆ. ಪುರುಷ ಪ್ರಯತ್ನದಿಂದ ಅದನ್ನು ಸರಿಯಾದ ದಾರಿಯಲ್ಲಿ ಹರಿಯುವಂತೆ ಮಾಡಿಕೊಳ್ಳಬೇಕು ಎಂದು ವ್ಯಾಖ್ಯಾನಿಸುತ್ತಾರೆ. ಹರಿಯುವ ನದಿಗೆ ರಾಮನ ಮನೆಯಾದರೇನು ? ರಾವಣನ ಮನೆಯಾದರೇನು ?. ಪ್ರವಾಹ ಬರುವಾಗ ಅದು ಹರಿದದ್ದೇ ದಾರಿ ಎಂದಾಗುತ್ತದೆ. ಅಂತಹ ನದಿಯನ್ನು (ವಾಸನಾ ಸರಿತ್) ಸ್ವಪ್ರಯತ್ನದಿಂದ ಬೇಕಾದ ದಾರಿಯಲ್ಲಿ ಹರಿಯುವಂತೆ ಮಾಡಿಕೊಳ್ಳುವುದು ಜ್ಞಾನಿಯ ಲಕ್ಷಣ ಎನ್ನಬಹುದು. ಎಲ್ಲವನ್ನೂ ದೇವರೇ ಮಾಡಿಬಿಡುತ್ತಾನೆ ಎನ್ನುವುದಾದರೆ ಸ್ವಪ್ರಯತ್ನ, ಸ್ವಸಾಮರ್ಥ್ಯ ಎನ್ನುವುದಕ್ಕೆ ಬೆಲೆ ಹುಟ್ಟುತ್ತದೆಯೇ ? . ಒಳ್ಳೆಯದನ್ನು ಮಾಡುವುದಕ್ಕೆ ದೇವರೇ ಬುದ್ಧಿಯನ್ನು ಕೊಡುತ್ತಾನೆ ಎನ್ನುವುದಾದರೆ ಕೊಟ್ಟಿರುವ ಬುದ್ಧಿಯನ್ನು ಇನ್ನೂ ಏಕೆ ಬಳಸಿಲ್ಲ ಎಂದು ಕೇಳಬೇಕಾಗುತ್ತದೆ !. ( ಕೈಲಾಸಂ ಹೇಳುತ್ತಾರೆ: "ಅವರು ರೋಗಿಯು ಚೇತರಿಸಿಕೊಳ್ಳಲೆಂದು ದೇವರ ಮೇಲೆ ಭಾರ ಹಾಕಿದರು, ಆ ಭಾರವನ್ನು ದೇವರು ನಾಲ್ಕು ಜನರ ಮೇಲೆ ಹಾಕಿದ " ಎಂದು !). ಪುರುಷ ಪ್ರಯತ್ನ ಎನ್ನುವುದು ಮನಸಿನ ಲಾಲಸೆಗಳನ್ನು ಹತ್ತಿಕ್ಕುವುದಕ್ಕೆ ಅಗತ್ಯವಾದುದು ಎನ್ನಬಹುದು.

ಸಾಧನ ಚತುಷ್ಟಯದಲ್ಲಿ ಮೂರನೆಯ ಸಾಧನವಾದ ಶಮದಮಾದಿ ಆರುಗುಣಗಳು ಇಲ್ಲಿಗೆ ಮುಗಿಯುತ್ತದೆ

ನಾಲ್ಕನೆಯ ಸಾಧನವು ಮುಮುಕ್ಷುತ್ವ

अहंकारादिदेहान्तान् बन्धानज्ञानकल्पितान् ।
स्वस्वरूपावबोधेन मोक्तुमिच्छा मुमुक्षुता ॥२८॥

ಅಹಂಕಾರಾದಿ-ದೇಹಾಂತಾನ್ ಬಂಧಾನಜ್ಞಾನ ಕಲ್ಪಿತಾನ್ |
(=ಅಹಮಿಕೆಯಿಂದ ಮೊದಲಾಗಿ ದೇಹದವರೆಗೆ ಅಜ್ಞಾನದಿಂದ ಕಲ್ಪಿತವಾಗಿರುವ ಬಂಧನಗಳು)
ಸ್ವಸ್ವರೂಪಾವಬೋಧೇನ ಮೋಕ್ಷುಮಿಚ್ಛಾ ಮುಮುಕ್ಷುತಾ ||೨೮||
(=ತನ್ನ ಅರಿವು ಅಥವಾ ಆತ್ಮಸಾಕ್ಷಾತ್ಕಾರದ ಜ್ಞಾನದಿಂದ (ಬಂಧನಗಳಿಂದ) ಬಿಡುಗಡೆಯನ್ನು ಬಯಸುವುದೇ ಮುಮುಕ್ಷುತ್ವವು)

ಅಹಂಕಾರದಿಂದ ಮೊದಲಾಗಿ ದೇಹದವರೆವಿಗೆ ಅಜ್ಞಾನದಿಂದ ಕಲ್ಪಿತವಾಗಿರುವ ಬಂಧನಗಳನ್ನು ತನ್ನನ್ನು ತಾನು ತಿಳಿಯುವುದರಿಂದ ಬಿಡಿಸಿಕೊಳ್ಳುವ ಬಯಕೆಯನ್ನು ಮುಮುಕ್ಷುತ್ವ ಎಂದು ಹೇಳುತ್ತಾರೆ.
ಅಹಂಕಾರ ಎಂದರೆ ಗರ್ವ ಎಂಬ ಅರ್ಥವು ಬರುವುದಿಲ್ಲ. ಕಣ್ಣು ತುಂಬ ಸುಂದರವಾಗಿಯೇನೋ ಇದೆ, ಆದರೆ ಅದು ನನ್ನ ಕಣ್ಣು ಎಂಬ ಅಂತಃಕರಣಪೂರಕವಾದ ಅಹಂಕಾರವು ಇರುತ್ತದೆ. ಅಂತಃಕರಣದ ಅಹಂಕಾರಕ್ಕೆ ಅಜ್ಞಾನವೇ ಬಂಧನ. ಅಜ್ಞಾನ ಎನ್ನುವುದು ಅಧ್ಯಾಸ(ಹಾವು ಹಗ್ಗದ ತತ್ವ) ದಿಂದ ಬಂದಿರುವುದು. ನಂತರ ಮನಸ್ಸು, ಬುದ್ಧಿ, ಜ್ಞಾನೇಂದಿಯಗಳು, ಕರ್ಮೇಂದ್ರಿಯಗಳು ಮತ್ತು ಇವುಗಳಿಂದ ಆಗಿರುವ ದೇಹ. ಇವೆಲ್ಲಕ್ಕೂ ಬಂಧನಗಳು ಇದ್ದೇ ಇರುವುವು.  ಸ್ವಸ್ವರೂಪದ ಅನುಭವದಿಂದ ಅಥವಾ ತನ್ನನ್ನು ತಾನು ತಿಳಿಯುವುದರಿಂದ(ಆತ್ಮ ಸಾಕ್ಷಾತ್ಕಾರದಿಂದ) ಹುಟ್ಟುವ ಜ್ಞಾನವು ಸರ್ವವೂ ಆತ್ಮನೇ ಆಗಿದ್ದಾನೆ ಎಂದು ಸಿದ್ಧಪಡಿಸುವುದರಿಂದ ಅಂತಹ ಬಂಧನಗಳಿಂದ ಬಿಡಿಸಿಕೊಳ್ಳಲು ಹುಟ್ಟುಬ ಬಯಕೆಯನ್ನೇ ಮುಮುಕ್ಷುತ್ವ ಎಂದು ವಿವರಿಸುತ್ತಾರೆ.  ಎಲ್ಲವೂ ಆತ್ಮನೇ ಆಗಿರುವುದರಿಂದ ಆತ್ಮನಿಗಿಂತಲೂ ಭಿನ್ನವಾಗಿ ಕಂಡುಬರುವ ಯಾವ ವಸ್ತುವನ್ನೂ ಬಯಸದಿರುವುದು ಬಂಧನದಿಂದ ಬಿಡುಗೊಂಡಂತೆ ಮತ್ತು ಮುಮುಕ್ಷುತ್ವಕ್ಕೆ ರಹದಾರಿಯಂತೆ ಎಂದು ಹೇಳಬಹುದು. ಬಂಧನದಿಂದ ಬಿಡುಗಡೆ ಹೊಂದಲು ಇಕ್ಕಟ್ಟಾದ ಕೋಣೇಯಲ್ಲಿ ಉಸಿರಾಡುವುದಕ್ಕೆ  ಎಷ್ಟು ತೀವ್ರತೆ ಬೇಕೋ ಅಂತಹ ತೀವ್ರತೆಯೇ ಬೇಕು ಎನ್ನಬಹುದು. ಶಮದಮಾದಿಗುಣಸಂಪನ್ನನಿಗೇ ಮುಮುಕ್ಷುತ್ವವು ಒಲಿದು ಬರುವುದು ಎನ್ನುವುದನ್ನು ಸೂಕ್ಷ್ಮವಾಗಿ ಗಮನಿಸಬಹುದಾಗಿರುತ್ತದೆ

ಇಲ್ಲಿಗೆ ಸಾಧನ ಚತುಷ್ಟಯವು ಮುಗಿಯುತ್ತದೆ. ಮುಂದಿನ ಕಂತಿನಲ್ಲಿ ಇನ್ನಷ್ಟು ತಿಳಿಯೋಣ.


ವಂದನೆಗಳೊಂದಿಗೆ....

Thursday, October 13, 2011

ವಿವೇಕ ಚೂಡಾಮಣಿ-ಭಾಗ-೧೩



ಗ್ರಂಥದ ಮುಂದುವರಿಕೆ :-

सहनं सर्वदुखानां अप्रतीकारपूर्ककम् ।
चिन्ताविलापरहितं सा तितिक्षा निगद्यते ॥२५॥

ಸಹನಂ ಸರ್ವದುಃಖಾನಾಂ ಅಪ್ರತೀಕಾರಪೂರ್ವಕಮ್ |
(=ದುಃಖಗಳಿಗೆ ಪ್ರತಿಕ್ರಿಯೆ ತೋರದೆ (ದೂರದೆ) ಎಲ್ಲವನ್ನೂ ಸಹಿಸಿಕೊಳ್ಳುವುದು)
ಚಿಂತಾವಿಲಾಪರಹಿತಂ ಸಾ ತಿತಿಕ್ಷಾ ನಿಗದ್ಯತೇ ||೨೫||
(=ಚಿಂತೆ-ಶೋಕಗಳಿಂದ ಮುಕ್ತನಾಗುವುದೇ ತಿತಿಕ್ಷೆಯು)

ನಾಲ್ಕನೆಯದು ತಿತಿಕ್ಷಾ

ಹೊರಗಿನ ವಿಷಯಗಳು ಯಾವಾಗ ಚಿತ್ತಕ್ಕೆ ಬಾಧಿಸುವುದಿಲ್ಲವೋ ಆಗ ಚಳಿ-ಮಳೆ-ಬಿಸಿಲು ಮುಂತಾದವುಗಳಲ್ಲಿ ವ್ಯತ್ಯಾಸವು ತಿಳಿಯುವುದಿಲ್ಲ, ದ್ವಂದ್ವವೂ ಇರುವುದಿಲ್ಲ.  ಕಾಲಕ್ಕನುಸಾರವಾಗಿ ಅವುಗಳು ವಿಕೋಪದಿಂದ ಬಂದರೂ ಸಹ ಅದನ್ನೂ ಸಹಿಸಿಕೊಳ್ಳುವುದು ತಿತಿಕ್ಷೆ ಎಂದು ಮೇಲಿನ ಶ್ಲೋಕದಲ್ಲಿ ಆಚಾರ್ಯರು ಹೇಳಿರುತ್ತಾರೆ. ಸಹಿಸಿಕೊಂಡಿರುವುದು ಎಂದರೆ , ಬಂದೊದಗಿದ್ದಕ್ಕೆ ಸಾಕಷ್ಟು ಗೊಣಗಿ, ಸಿಡುಕಿ ನಂತರ ’ಅಯ್ಯೋ ನನಗ್ಯಾಕೆ’ ಎಂದು ಸುಮ್ಮನಾಗುವುದಲ್ಲ ! , ಬದಲಾಗಿ ಅಪ್ರತೀಕಾರಪೂರ್ವಕವಾಗಿ ಎಂದರೆ ಯಾವುದೇ ಪ್ರತಿಕ್ರಿಯೆಯನ್ನು ತೋರದೆ ಆಗಿದ್ದಕ್ಕೆ ಚಿಂತಿಸದೆ, ಶೋಕಿಸದೆ ದುಃಖಗಳನ್ನು ಸಹಿಸಿಕೊಂಡಿರುವುದು ಎಂದು ಅರ್ಥ.  ಪ್ರತೀಕಾರವನ್ನು ತೋರದೆ ಸಹಿಸಿಕೊಳ್ಳುವುದು ತುಂಬಾ ಕಷ್ಟದ ಕೆಲಸವೇನೋ ನಿಜ ಆದರೆ ಅಂತಹ ಕಷ್ಟದ ಕೆಲಸವನ್ನೇ ಆತ್ಮಾಭ್ಯಾಸಿಯು ಮಾಡಬೇಕಿರುವುದು ಎನ್ನುವುದು ಮೇಲಿನ ವಾಕ್ಯದಲ್ಲಿ ಸ್ಪಷ್ಟವಾಗಿ ಕಾಣುತ್ತದೆ.  ಇಲ್ಲಿ ಗಾಂಧೀಜಿಯವರ ತತ್ವವೊಂದನ್ನು ನೆನಪಿಸಿಕೊಳ್ಳಬಹುದು. "ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆಯನ್ನು ತೋರು ಬದಲಾಗಿ ನೀನು ಹೊಡೆಯಬೇಡ" ಎಂಬ ಮಾತು. ಸಂತರ ಗುಣವೇ ಇದು ಎನ್ನಬಹುದು.  ಅಂತರಂಗ ಮತ್ತು ಬಹಿರಂಗಗಳೆರಡರಲ್ಲೂ ಸಹನಶಕ್ತಿ ಇರಬೇಕಾಗುತ್ತದೆ. ಗೆಳೆಯರೊಬ್ಬರು ಲಕ್ಷ ರೂಪಾಯಿ ಪಡೆದುಕೊಂಡು ಸಮಯಕ್ಕೆ ಸರಿಯಾಗಿ ಕೊಡದಿದ್ದಾಗ ಬಾಯಿ ಮಾತಿಗೆ ’ಇರಲಿ ಬಿಡಯ್ಯಾ ನಿಧಾನವಾಗಿ ಕೊಡುವಿಯಂತೆ’ ಎಂದು ಹೇಳಿ ಮನಸಿನಲ್ಲಿ ’ಇವನ ಮನೆ ಹಾಳಾಗ’ ಎಂದು ಜರಿಯುವುದು ಸಹನೆಯ ಲಕ್ಷಣವೇನೂ ಅಲ್ಲ !.  ದುಃಖ-ಶೋಕಾದಿಗಳಿಂದ ಕೂಡಿರುವ ಮನಸ್ಸಿಗೆ ಆತ್ಮವಿಚಾರವು ದಕ್ಕುವುದಿಲ್ಲ ಎಂದು ಹೇಳುತ್ತಾ ಸರ್ವದುಃಖಗಳನ್ನೂ ಸಹಿಸಿಕೊಂಡು, ನುಂಗಿಕೊಂಡು ಸಾಧನೆ ಮಾಡಬೇಕು ಎಂದು ತಿಳಿಸುತ್ತಾರೆ.
’ದುಃಖಾನಾಂ’ ಎಂದು ಬಹುವಚನದಲ್ಲಿ ಹೇಳಿರುವುದು ’ತಾಪತ್ರಯ’ ಗಳ ಕುರಿತಾಗಿ.  ಅಧಿಭೌತಿಕ, ಅಧಿದೈವಿಕ ಮತ್ತು ಆಧ್ಯಾತ್ಮಿಕ ವಾಗಿ ಒದಗಿ ಬರುವ ಹೊಸ-ಹೊಸ (ನವನವ ಜನಿತ) ದುಃಖಗಳನ್ನು ತಾಪತ್ರಯಗಳು ಎಂದು ಹೇಳಲಾಗಿದೆ. ಭೌತಿಕವಾಗಿ (Physical), ಮಾನಸಿಕವಾಗಿ(Menatal) ಮತ್ತು ಆಕಸ್ಮಿಕವಾಗಿ(Accidental) ಒದಗಿ ಬರುವ ಯಾವುದೇ ದುಃಖಶೋಕಾದಿಗಳಿಗೂ ಬಾಗದೆ , ಪ್ರತಿಕ್ರಿಯೆಯನ್ನೂ ತೋರದೆ ಸಹಿಸಿಕೊಂಡು (ಸಹಿಕೊಳ್ಳುವುದನ್ನೂ ಹೇಳಿಕೊಳ್ಳದೆ !)  ಸಾಧನೆಯ ಹಾದಿಯಲ್ಲಿ ಸಾಗುವುದನ್ನು ತಿತಿಕ್ಷೆ ಎಂದು ನಿರೂಪಿಸುತ್ತಾರೆ. ಹೀಗೆ ಸಹಿಸಿಕೊಳ್ಳುವುದು ಅಭ್ಯಾಸವಾಗಿಬಿಟ್ಟರೆ ಅದು ಸಾಧಕನ ಸಹಜ ಲಕ್ಷಣವೇ ಆಗಿಬಿಡುತ್ತದೆ.  ಡಯಾಬಿಟಿಸ್ಸಿಗೆ ಉಪ್ಪು-ಸಿಹಿ ಯನ್ನು ತಿನ್ನದೆ ಹತೋಟಿಯಲ್ಲಿಟ್ಟುಕೊಂಡಿರಬೇಕು ಎಂದು ವೈದ್ಯರು ಹೇಳುವುದನ್ನು ಅಂತರಂಗ-ಬಹಿರಂಗಗಳೆರಡಲ್ಲೂ ಸಾಧಿಸುತ್ತಾ ಬಂದಾಗ ಮುಂದೊಂದು ದಿವಸ ಸಿಹಿ ತುಂಬಿದ ಕೊಳಗವನ್ನೇ ಮುಂದೆ ತಂದಿಟ್ಟರೂ ಅದರ ಕಡೆಗೆ ಗಮನ ಹರಿಯಲಾರದು !.  ಹೃದಯದ ಕಾಯಿಲೆಯಿದ್ದವರಿಗೆ ಕೊಬ್ಬಿನಂಶವನ್ನು ಹೆಚ್ಚು ಸೇವಿಸಬೇಡಿ ಎಂದು ಹೇಳಿರುತ್ತಾರೆ. ಅವರೇನೋ ಬಾಹ್ಯವಾಗಿ ತಿನ್ನುವುದನ್ನು ಬಿಟ್ಟಿರುತ್ತಾರೆ ಆದರೆ ಮನಸ್ಸಿನಲ್ಲೇ ಮಂಡಿಗೆ ತಿನ್ನುತ್ತಿರುತ್ತಾರೆ. ಇದು ಮನುಷ್ಯನನ್ನು ಮಾನಸಿಕವಾಗಿ ಕುಗ್ಗಿಸುತ್ತದೆ.  ಇಲ್ಲೂ ಸಹ ’ಶಮ’ ಎನ್ನುವುದು ಸಾಧಿತವಾಗಿದ್ದಾಗ ತಿತಿಕ್ಷೆಯು ತಾನೇ ಬರುವುದರಿಂದ ಇವೆಲ್ಲವೂ ಒಂದೇ ದಾರಕ್ಕೆ ಪೋಣಿಸಿರುವ ಹೂವುಗಳು ಎಂದು ತಿಳಿಯಬೇಕಾಗುತ್ತದೆ.


ಐದನೆಯದು ಶ್ರದ್ಧೆ

शास्त्रस्य गुरुवाक्यस्य सत्यबुद्ध्यावधारणा ।
सा श्रद्धा कथिता सद्भिर्यया वस्तूपलभ्यते ॥२६॥

ಶಾಸ್ತ್ರಸ್ಯ ಗುರುವಾಕ್ಯಸ್ಯ ಸತ್ಯಬುದ್ಧ್ಯಾವಧಾರಣಾ |
(= ಶಾಸ್ತ್ರದಲ್ಲೂ ಗುರುವಾಕ್ಯದಲ್ಲೂ ಧೃಡವಾದ ಗ್ರಹಿಕೆಯನ್ನಿಟ್ಟುಕೊಳ್ಳುವುದು)
ಸಾ ಶ್ರದ್ಧಾ ಕಥಿತಾ ಸದ್ಭಿಃ ಯಯಾ ವಸ್ತೂಪಲಭ್ಯತೇ ||೨೬||
(= ಆತ್ಮವಸ್ತುವಿನ ಸಿದ್ಧಿಗಾಗಿ ನಂಬಿಕೆಯನ್ನಿಟ್ಟುಕೊಳ್ಳುವುದೇ ಶ್ರದ್ಧೆಯು)

’ಶಾಸ್ತ್ರಗಳಲ್ಲೂ ಗುರುವಿನ ಮಾತಿನಲ್ಲೂ ಸತ್ಯಬುದ್ಧಿಯಿಂದ ನಂಬಿಕೆಯನ್ನಿಟ್ಟುಕೊಂಡು ಆತ್ಮವಸ್ತುವಿನ ಚಿಂತನೆಯಲ್ಲಿ ತೊಡಗುವುದನ್ನು ಶ್ರದ್ಧೆ ಎಂದು ಸತ್ಪುರುಷರು ಹೇಳುತ್ತಾರೆ ’ ಎಂದು ಆಚಾರ್ಯರು ಶ್ರದ್ಧೆಯ ನಿರೂಪಣೆಯನ್ನು ಮಾಡುತ್ತಾರೆ.  ಬ್ರಹ್ಮದ ವಿಷಯದಲ್ಲಿ ಶಾಸ್ತ್ರವೂ ಗುರುವೂ ಹೇಳುವುದನ್ನು ಸತ್ಯವೆಂಬ ನಿಶ್ಚಿತ ಬುದ್ಧಿಯಿಂದ ಗ್ರಹಿಸಿ ಇಟ್ಟುಕೊಳ್ಳುವುದನ್ನು ಶ್ರದ್ಧೆ ಎಂದು ಹೇಳುತ್ತಾರೆ. ’ಶ್ರದ್ಧಾವಾನ್ ಲಭತೇ ಜ್ಞಾನಂ’ ಎನ್ನುವ ವಾಕ್ಯ ಬಹು ಪ್ರಸಿದ್ಧವಾದುದು. ಗೀತೆಯಲ್ಲೂ ಸಹ " ಶ್ರದ್ಧೆಯಿಲ್ಲದಿರುವ ಮನುಷ್ಯರು ಧರ್ಮವನ್ನೂ ಬಿಟ್ಟು ನನ್ನನ್ನೂ ಹೊಂದದೆ ಮತ್ತೆ-ಮತ್ತೆ ಈ ಇಹದ ಬಂಧನಕ್ಕೆ ಬೀಳುತ್ತಿದ್ದಾರೆ (೯.೩)" ಎಂಬ ವಾಕ್ಯವು ಬರುತ್ತದೆ. ಇಲ್ಲಿ ಶಾಸ್ತ್ರ ಎಂದರೆ ’ತತ್ವಮಸಿ’ ’ಪ್ರಜ್ಞಾನಾಂ ಬ್ರಹ್ಮ’  ಮುಂತಾದ ಔಪನಿಷದ ಶಾಸ್ತ್ರಗಳೆಂದು ಸದ್ಗುರುಗಳು ವ್ಯಾಖ್ಯಾನಿಸಿರುತ್ತಾರೆ. ಇದನ್ನು ಅನುಸರಿಸುವುದರಿಂದ ಬರುವುದೇ ಗುರುವಾಕ್ಯ.  ಬ್ರಹ್ಮವು ಸತ್ಯ ಮತ್ತು ನನ್ನಲ್ಲೇ ಪರಬ್ರಹ್ಮನಿದ್ದಾನೆ ಎಂಬ ಅನುಭವವನ್ನು ಪಡೆದುಕೊಳ್ಳುವುದನ್ನೇ ’ಸತ್ಯ’ ಎಂಬ ಪದದಿಂದ ಸೂಚಿಸಿದ್ದಾರೆ ಎಂದು ಹೇಳುತ್ತಾರೆ. ಅಳಿಯುವ ವಿಷಯವೆಲ್ಲವೂ ಅಸತ್ಯ ಅಥವಾ ಮಿಥ್ಯೆ ಎನ್ನುತ್ತಾರೆ. ಮಿಥ್ಯೆ ಎಂದರೆ ಸಂಪೂರ್ಣ ಅಸತ್ಯವೆಂದು ಗ್ರಹಿಸದೆ ’ಮಿಥ್ಯಾವಚನಃ ಅನಿರ್ವಚನೀಯ ಶಬ್ದಃ’ ಎಂದು ತಿಳಿಯಬೇಕಾಗುತ್ತದೆ. ಯಾವುದನ್ನು ವಿವರಿಸಲಾಗುವುದಿಲ್ಲವೋ ಅಥವಾ ಯಾವುದು ಸ್ಥಿತ್ಯಂತರಗಳಿಂದ ಬದಲಾವಣೆಯನ್ನು ಹೊಂದುತ್ತಾ ನಿರ್ಧಿಷ್ಟರೂಪವನ್ನು ತಳೆಯಲಾರದೇ ಹೋಗುತ್ತದೆಯೋ ಅದನ್ನು ’ಮಿಥ್ಯೆ’ (ಜಗನ್ಮಿಥ್ಯಾ) ಎಂದು ಗ್ರಹಿಸಬೇಕಾಗುತ್ತದೆ.
ಮೊದಲಿಗೆ ಹೇಳಿಕೊಡುವುದನ್ನು ಶ್ರದ್ಧೆಯಿಂದ ಕೇಳಬೇಕಾಗುತ್ತದೆ ಮತ್ತು ಕಲಿಬೇಕಾಗುತ್ತದೆ. ಶ್ರದ್ಧೆಯು ಇಲ್ಲದಿದ್ದರೆ ವಿಷಯದ ಸ್ವೀಕಾರ ಮನೋಭಾವವೂ ಹುಟ್ಟುವುದಿಲ್ಲ. ಶ್ರದ್ಧೆ ಮತ್ತು ನಂಬಿಕೆಯಿಂದ ಗುರುವಾಕ್ಯದಂತೆ ನಡೆಯಬೇಕು ಎಂದರೆ ವಿಚಾರವಾದಕ್ಕೆ ಎಳ್ಳುನೀರು ಬಿಟ್ಟಂತಾಗುತ್ತದೆ ಅಲ್ಲವೇ ? ಎಂದರೆ, ವಿಷಯ ಸ್ವೀಕಾರವೇ ಇಲ್ಲದೆ ವಿಚಾರವಾದರೂ ಎಲ್ಲಿಂದ ಬಂದೀತು !?. ಹಾಗಾಗಿ ಮೊದಲಿಗೆ ಶಾಸ್ತ್ರವನ್ನೂ ಗುರುವಾಕ್ಯವನ್ನೂ ಸ್ವೀಕರಿಸುವವರಾಗಬೇಕು ನಂತರವಷ್ಟೇ ವಿಚಾರಕ್ಕೆ ಅವಕಾಶವಾಗುತ್ತದೆ ಎಂದು ತಿಳಿಯಬಹುದು. ಚಿಕ್ಕಮಕ್ಕಳಂತೂ ತಂದೆ-ತಾಯಿ ಹೇಳಿಕೊಡುವುದನ್ನು ಪ್ರಶ್ನಾತೀತವಾಗಿ ಕಲಿತುಬಿಡುತ್ತವೆ. ಅಂತಹ ನಂಬಿಕೆಯ ಮೇಲೆಯೆ ಜೀವನವೂ ಸಾಗುತ್ತದೆ. ಭಾರತದಲ್ಲಿ ನಿತ್ಯವೂ ಒಂದಿಲ್ಲೊಂದು ಕಡೆ ಬಾಂಬ್ ದಾಳಿಗಳು ಆಗುತ್ತಲೇ ಇರುತ್ತವೆ, ಜನಗಳು ಸಾಯುತ್ತಲೇ ಇರುತ್ತಾರೆ ಆದರೂ ಸಹ ಎಂದಿನಂತೆ ವಹಿವಾಟುಗಳು ನಡೆಯುತ್ತವೆ, ಪ್ರವಾಸಗಳು ಜರುಗುತ್ತಲೇ ಇರುತ್ತದೆ !. ಜೀವನಶ್ರದ್ಧೆಯೇ ಮಾನವನ ಧನಾತ್ಮಕ ಅಂಶ ಎನ್ನಬಹುದು. ನಂಬಿಕೆಯ ಮೇಲೆ ಯಾವುದೋ ಹೋಟೆಲಿಗೆ ಹೋಗಿ ಏನೋ ತಿಂದು (ಅಲ್ಲಿ ಏನಾದರೂ ಕಂಟಾಮಿನೇಶನ್ ಆಗಿದೆಯೇ ಎನ್ನುವುದನ್ನೂ ಯೋಚಿಸದೆ !) ಬರುತ್ತೇವೆ. ಹೋಟೆಲಿನ ನಾವೀನ್ಯತೆ, ಅಂದ-ಚೆಂದಗಳಿಗೆ ಮನಸೋತು ಯಾವುದನ್ನೂ ಪ್ರಶ್ನಿಸದೆ ಗಾಂಭೀರ್ಯದಿಂದ ಹೋಗಿ ತಿಂದು ಕೇಳಿದಷ್ಟು ಬಿಲ್ಲನ್ನೂ ಜೊತೆಗೆ ಟಿಪ್ಸನ್ನೂ ಕೊಟ್ಟು ಬರುತ್ತೇವೆ. ಇದೇ ನಂಬಿಕೆ ಶ್ರಧ್ಧೆಯನ್ನು (ಶ್ರಧ್ ಧಾ =ಚೆನ್ನಾಗಿ ಇಡುವುದು) ಅನುಭವದಿಂದ ಬಂದಿರುವ ಶಾಸ್ತ್ರದಲ್ಲಿ  ಗುರುವಾಕ್ಯದಲ್ಲಿ ಇಟ್ಟುಕೊಳ್ಳಬಾರದೇಕೆ ?!. ಒಂದು ವಿಷಯವನ್ನು ಸ್ವೀಕರಿಸದೆ ಅದನ್ನು ತಿರಸ್ಕರಿಸಲೂ ಸಾಧ್ಯವಿಲ್ಲ ಎಂದು ಹೇಳಬಹುದು.
ಕಠೋಪನಿಷತ್ತಿನ ಆರಂಭದಲ್ಲೇ ಪ್ರಸಂಗವೊಂದು ಬರುತ್ತದೆ. ನಚಿಕೇತನ ತಂದೆಯಾದ ವಾಜಶ್ರವಸನು ವಿಶ್ವವನ್ನೇ ಆಳಬೇಕೆಂಬ ಬಯಕೆಯಿಂದ ವಿಶ್ವಜಿತ್ ಎಂಬ ಯಾಗವನ್ನು ಮಾಡುತ್ತಾನೆ. ಯಾಗದ ಕೊನೆಯಲ್ಲಿ ಸರ್ವವನ್ನೂ ದಾನಮಾಡಬೇಕಾದಾಗ (ಯಾಗದ ನಿಯಮ) ಆತನು, ಬೆಳೆಯನ್ನು ಬೆಳೆಯಲಾಗದ ಒಣಭೂಮಿ, ಬರಡು ಹಸುಗಳು ಮುಂತಾದ ಬಳಕೆಗೆ ಬಾರದ ವಸ್ತುಗಳನ್ನೇ ದಾನ ಮಾಡುತ್ತಾನೆ. ’ಅಕ್ಕಿಯ ಮೇಲೆ ಆಸೆ ನೆಂಟರ ಮೇಲೆ ಪ್ರೀತಿ’ ಎನ್ನುವ ಮನೋಭಾವ ಆತನದ್ದು. ಶ್ರದ್ಧೆಯಿಲ್ಲದ ಕಾರ್ಯದಿಂದ ತಂದೆಯು ಏನನ್ನು ತಾನೇ ಸಾಧಿಸಿಯಾನು ಎನ್ನುವುದು ನಚಿಕೇತನಿಗೆ ಬರುವ ಸಂಶಯ. ಇದಕ್ಕಾಗಿ ತನ್ನನ್ನೇ ಸಮರ್ಪಿಸಿಕೊಳ್ಳುವವರೆವಿಗೂ ನಚಿಕೇತನು ಮುಂದಡಿಯಿಡುತ್ತಾನೆ. ಇಲ್ಲಿ ಮಗನ ಶ್ರದ್ಧೆಯನ್ನೂ ತಂದೆಯ ಅಶ್ರದ್ಧೆಯನ್ನೂ ಕಾಣಬಹುದಾಗಿರುತ್ತದೆ.  

ಶ್ರದ್ಧೆಯ ವಿಷಯವಾಗಿ ರಾಮಕೃಷ್ಣ ಪರಮಹಂಸರು ಸೊಗಸಾದ ವಿವರಣೆಯೊಂದನ್ನು ಕೊಡುತ್ತಾರೆ.
 "ಲಂಕೆಯಲ್ಲಿದ್ದ ರಾಮಾನುಯಾಯಿಯೊಬ್ಬನಿಗೆ ರಾಮಕ್ಷೇತ್ರವನ್ನು ನೋಡಲು ಬಯಕೆಯಾಯಿತಂತೆ. ಆದರೆ, ಸಾಗರವನ್ನು ದಾಟಲು ಸಾಧ್ಯವಾಗದೆ ವಿಭೀಷಣನಲ್ಲಿಗೆ ಬಂದು ಕಷ್ಟವನ್ನು ಹೇಳಿಕೊಂಡನಂತೆ.
 ವಿಭೀಷಣನು ಕೈಯಲ್ಲಿ ಏನನ್ನೋ ಹಿಡಿದು ಒಂದೆರೆಡು ಮಂತ್ರಗಳನ್ನು ಹೇಳಿ ಆ ವಸ್ತುವನ್ನು  ಅನುಯಾಯಿಯ ಪಂಚೆಯ ತುದಿಗೆ ಕಟ್ಟಿ ’ ಮಂತ್ರಿಸಿದ ವಸ್ತುವೊಂದನ್ನು ನಿನ್ನ ಪಂಚೆಗೆ ಕಟ್ಟಿದ್ದೇನೆ. ಅದರ ಪ್ರಭಾವದಿಂದ ನೀನು ಸಲೀಸಾಗಿ ಸಾಗರವನ್ನು ದಾಟಬಹುದು’ ಎಂದು ಹೇಳಿ ಕಳುಹಿಸಿದನಂತೆ. ರಾಮನನ್ನು ಕಾಣುವ ತವಕದಲ್ಲಿ ಮತ್ತು ಅದೇ ಧ್ಯಾನದಲ್ಲಿ ಹೊರಟ ಆತನು ಸಾಗರದ ಮೇಲೆ ನೆಡೆದುಕೊಂಡೇ ಮುಕ್ಕಾಲುದಾರಿ ಕ್ರಮಿಸಿದನಂತೆ. ವಿಭೀಷಣನು ಅದೆಂತಹ ಮಾಯಾವಸ್ತುವನ್ನು ಮಂತ್ರಿಸಿ ಕಟ್ಟಿರಬಹುದೆಂದು ಯೋಚಿಸಿದ ಆತನು ಪಂಚೆಯ ತುದಿಯ ಗಂಟನ್ನು ಬಿಚ್ಚಿ ನೋಡಿ ಬೆರಗಾದನಂತೆ !. ಅಲ್ಲಿದ್ದುದು ಕೇವಲ ಒಂದು ಕಲ್ಲು ಮಾತ್ರ !. ’ಇದು ಇಷ್ಟೆಯೇ’ ಎಂದು ಉದ್ಗಾರ ತೆಗೆಯುತ್ತಲೇ ಆತನು ಸಾಗರದಲ್ಲಿ ಮುಳುಗಿಹೋದನಂತೆ " . ನಂಬಿಕೆಯ ಸೋರೆ ಬುರುಡೆಗೆ ಒಂದು ತೂತು ಬಿದ್ದರೂ ಸಹ ಅದರಲ್ಲಿ ನೀರು ತುಂಬಿಕೊಳ್ಳುತ್ತದೆ, ಈಜುವುದಕ್ಕೆ ಬಳಸಲು ಆಗುವುದಿಲ್ಲ.

ಮುಂದಿನ ಕಂತಿನಲ್ಲಿ  ಇನ್ನಷ್ಟು ತಿಳಿಯೋಣ.
.......................................

ಒಂದು ಮಾತು : ವಿವೇಕ ಚೂಡಾಮಣಿಯ ವಿವರಣೆಯ ಜೊತೆಗೆ ಇಲ್ಲಿ ಬರುತ್ತಿರುವ ಪ್ರತಿಕ್ರಿಯೆಗಳನ್ನೂ ಸೇರಿಸಿ ಓದಿಕೊಂಡರೆ ವಿಚಾರವು ಇನ್ನಷ್ಟು ಸ್ಪಷ್ಟವಾಗುತ್ತದೆ ಎಂದು ನಾನು ಭಾವಿಸುತ್ತೇನೆ.  ಪ್ರತಿಕ್ರಿಯೆಗಳು ವಿವರಣೆಗೆ ಮತ್ತಷ್ಟು ಹೊಳಪು ನೀಡುತ್ತಿರುವುದರಿಂದ ಅದನ್ನೂ ಪೂರಕವಾಗಿ ಸೇರಿಸಿಕೊಂಡು ಓದಿ ಎಂದು ಕೋರುತ್ತೇನೆ.
.................................

ವಂದನೆಗಳೊಂದಿಗೆ....

Tuesday, September 27, 2011

ವಿವೇಕ ಚೂಡಾಮಣಿ - ಭಾಗ -೧೨


ಗ್ರಂಥದ ಮುಂದುವರಿದ ಭಾಗ


विरज्य विषयव्रातात् दोषदृष्ट्या मुहुर्मुहुः ।
स्वलक्ष्ये नियतावस्था मनसः शम उच्यते ॥२२॥


ವಿರಜ್ಯವಿಷಯವ್ರಾತಾತ್ ದೊಷದೃಷ್ಟ್ಯಾ ಮುಹುರ್ಮುಹುಃ |
(= ಭೋಗವಸ್ತುಗಳಲ್ಲಿರುವ ದೋಷಗಳನ್ನು ಮತ್ತೆ-ಮತ್ತೆ ಕಂಡು ಭೋಗ ವಿಷಯಾಸಕ್ತಿಯನ್ನು ಬಿಡುವುದು)
ಸ್ವಲಕ್ಷ್ಯೇ ನಿಯತಾವಸ್ಥಾ ಮನಸಃ ಶಮ ಉಚ್ಯತೇ ||೨೨॥
(=ಗುರಿಯ ಸಾಧನೆಗೆ ಮನೋನಿಗ್ರಹವನ್ನಿಟ್ಟುಕೊಳ್ಳುವುದೆ ಶಮವು )

ಸಾಧನ ಚತುಷ್ಟಯದ ಮೂರನೆಯ ಸಾಧನದ ನಿರೂಪಣೆಯನ್ನು ಮಾಡುತ್ತಾ ’ಶಮದಮಾದಿ’ ಆರು ಸಂಪತ್ತುಗಳ ವಿಚಾರವನ್ನು ಶ್ರೀ ಶಂಕರರು ವಿವರಿಸುತ್ತಾರೆ.
ಮೊದಲನೆಯದಾಗಿ ’ಶಮ’ :-
ಭೋಗವಸ್ತುಗಳಲ್ಲಿ ಕಂಡುಬರುವ ದೋಷಗಳನ್ನು ಗ್ರಹಿಸಿ ಅವುಗಳಲ್ಲಿ ಜಿಗುಪ್ಸೆಯನ್ನು ಹೊಂದಿ ಆತ್ಮವಿಷಯದಲ್ಲಿ ಮಾತ್ರವೇ ಮನಸ್ಸನ್ನು ತಲ್ಲೀನಗೊಳಿಸಿಕೊಳ್ಳುವುದನ್ನು ’ಶಮ’ ಎಂದು ಹೇಳುತ್ತಾರೆ. ಮನಸ್ಸನ್ನು ಹತೋಟಿಯಲ್ಲಿಡುವುದು ಎಂದರೆ, ಇಂದ್ರಿಯಯಗಳನ್ನು ನಿಗ್ರಹಿಸುವುದು ಎಂದು ತಿಳಿಯಬೇಕಾಗುತ್ತದೆ. ಮುಖ್ಯವಾಗಿ ಜ್ಞಾನೇಂದ್ರಿಯಗಳು (ಕಣ್ಣು, ಕಿವಿ, ಮೂಗು, ಚರ್ಮ, ನಾಲಿಗೆ) ವಿಷಯವಸ್ತುವಿನ ಗೊಡವೆಗೆ ಹೋಗದಂತೆ ಹತೋಟಿಯಲ್ಲಿಟ್ಟುಳ್ಳುವುದು ಎಂದು ಅರ್ಥ. ಅಪೇಯಪಾನವು ಮನೆಯಲ್ಲಿಯೂ ಆರೋಗ್ಯಕ್ಕೆ ಹಾನಿಕಾರಕ ಹೊರಗಿನ ಅಂಗಡಿಯಲ್ಲೂ ಹಾನಿಕಾರಕವೆ !. ಜಾಗ ಬದಲಾದ ಮಾತ್ರಕ್ಕೆ ಅದರ ದೋಷಗುಣವೇನೂ ಬದಲಾಗುವುದಿಲ್ಲ. ದೋಷವನ್ನು ಗ್ರಹಿಸಿ ಒಟ್ಟಾರೆಯಾಗಿ ಭೋಗಲಾಲಸೆಯನ್ನು ಬಿಟ್ಟು ಮತ್ತೊಮ್ಮೆ ಜ್ಞಾನೇಂದ್ರಿಯಗಳು ಅತ್ತ ಸುಳಿಯದಂತೆ ಮನಸ್ಸಿನಲ್ಲಿ ನಿಶ್ಚಯಿಸಿಕೊಂಡು ಆ ಮನೋನಿಶ್ಚಯದಂತೆ ನಡೆಯುವುದೇ ’ಶಮ’ ಎನ್ನುವ ಅರ್ಥದಲ್ಲಿ ಹೇಳಿರುತ್ತಾರೆ.

ಎರಡನೆಯದು ’ದಮ’ :-

विषयेभ्यःपरावर्त्य स्थापनं स्वस्वगोलके ।
उभयेषामिंद्रियाणां स दमः परिकीर्तितः ॥२३॥

ವಿಷಯೇಭ್ಯಃ ಪರಾವರ್ತ್ಯ ಸ್ಥಾಪನಂ ಸ್ವಸ್ವಗೋಲಕೇ |
(=ಇಂದ್ರಿಯಗಳನ್ನು ವಿಷಯಭೋಗವಸ್ತುವಿನ ಕಡೆಯಿಂದ ಸ್ವಸ್ಥಾನಕ್ಕೆ ತರುವುದು)
ಉಭಯೇಷಾಮಿಂದ್ರಿಯಾಣಾಂ ಸ ದಮಃ ಪರಿಕೀರ್ತಿತಃ ||೨೩||
(=’ಇಂದ್ರಿಯಗಳೆರಡನ್ನೂ’ ಅಂಕೆಯಲ್ಲಿಡುವುದೇ ’ದಮ’ವು)

ಭೋಗವಸ್ತುಗಳಲ್ಲಿ ತಲ್ಲೀನವಾಗಿರುವ ಇಂದಿಯಗಳನ್ನು ಅದೇ ದಾರಿಯಲ್ಲಿ ಹಿಮ್ಮುಖವಾಗಿ ತಂದು (=ಪರಾವರ್ತ್ಯ ) ಸ್ವಸ್ಥಾನಗಳಲ್ಲಿ ನಿಲ್ಲಿಸಿ ಅವುಗಳು ಕೇವಲಬ್ರಹ್ಮದಲ್ಲಿ ಲೀನವಾಗುವಂತೆ ಮಾಡಿಕೊಳ್ಳುವುದೇ  ’ದಮ’ ಎಂದು ಹೇಳುತ್ತಾರೆ. ’ಇಂದ್ರಿಯಗಳು’ ಎಂಬಲ್ಲಿ ಜ್ಞಾನೇಂದಿಯಗಳು ಮತ್ತು ಕರ್ಮೇಂದ್ರಿಯಗಳೆರಡನ್ನೂ ( ಕೈ, ಕಾಲು, ಬಾಯಿ ಮುಂತಾದವು) ಹತೋಟಿಯಲ್ಲಿಟ್ಟುಕೊಳ್ಳುವುದು ಎಂದು ತಿಳಿಯಬೇಕಾಗುತ್ತದೆ.
’ಸ್ಥಾಪನಂ ಸ್ವಸ್ವಗೋಲಕೆ’ ಎನ್ನುವಲ್ಲಿ ಇಂದ್ರಿಯವಿಷಯಗಳು ಮೊದಲಾದ ಜಾಗಕ್ಕೆ ಮನಸ್ಸನ್ನು ಪುನಃ ಎಳೆದು ತರುವುದು ಎಂದು ಅರ್ಥ.  ರುಚಿಯ ಮೂಲವಿರುವುದು ನಾಲಿಗೆಯಲ್ಲಿ ಅಲ್ಲ, ಅದರ ಮೇಲಿರುವ ರುಚಿಯ ಮೊಗ್ಗುಗಳಲ್ಲಿ (taste buds). ಅಲ್ಲಿಂದ ಆರಂಭವಾಗುವ ರುಚಿಯ ಕಾರ್ಯಕ್ರಮಗಳು ಅಜೀರ್ಣವಾಗುವಷ್ಟು ತಿಂದು ವೈದ್ಯರಲ್ಲಿಗೆ ತೆರಳುವವರೆಗೂ ಮುಂದುವರಿಯುತ್ತದೆ. ವೈದ್ಯರಲ್ಲಿಗೆ ಹೋದ ಮನಸ್ಸನ್ನು ತಿರುಗಿ ರುಚಿಯ ಮೊಗ್ಗುಗಳೆಡೆಗೆ ತಂದು ಬಿಡುವುದು ಮತ್ತು ನಂತರದಲ್ಲಿ ತನಗೆ ರುಚಿಯ ಮೊಗ್ಗುಗಳಿವೆ ಎನ್ನುವುದನ್ನೇ ಮರೆತುಬಿಡುವುದು, ಇದನ್ನು ದಮ ಎಂದು ನಿರೂಪಿಸುತ್ತಾರೆ. ಕೆಟ್ಟದ್ದನ್ನು ಕೇಳಬೇಡ ಎನ್ನುವಲ್ಲಿ ಕಿವಿಯನ್ನು ಕೆಟ್ಟದ್ದರ ಕಡೆಗೆ ಆಲಿಸಬೇಡ ಅಥವಾ ಅಂತಹ ವಿಚಾರಗಳ ಪ್ರತಿಯಾಗಿ ತನಗೆ ಕಿವಿಯ ತಮಟೆಯೇ ಕೆಲಸ ಮಾಡುತ್ತಿಲ್ಲ ಎಂಬ ಭಾವವನ್ನು ತಳೆದು ನಿರ್ಲಿಪ್ತರಾಗುವುದು ಎಂದು ತಿಳಿಯಬಹುದು.

ಆಕ್ಷೇಪ : ಶಮ ಅಥವಾ ಮನೋನಿಗ್ರಹವು (ಅಂತರಿಂದ್ರಿಯ=ಶಬ್ದ, ಸ್ಪರ್ಶ, ರೂಪ,ರಸ, ಗಂಧ) ಇದ್ದಾಗ ಕರ್ಮೇಂದ್ರಿಯ (ಬಹಿರಿಂದ್ರಿಯ=ಕೈ,ಕಾಲು,ಬಾಯಿ,ಗುದ,ಮತ್ತು ಲಿಂಗ)ಗಳ ಮೇಲಿನ ಹತೋಟಿಯು ತಾನೇ ಬರುವುದಲ್ಲವೇ ? ’ದಮ’ದ ಪ್ರತ್ಯೇಕತೆಯ ಅಗತ್ಯವಾದರೂ ಏಕೆ ?

ಸಮಾಧಾನ : ಶಮದಮಾದಿಗಳು ಒಂದಕ್ಕೊಂದು ಪೂರಕವಾಗಿದ್ದರೂ ಸಹ ಶಾಸ್ತ್ರಾನುಕೂಲತೆಗಾಗಿ ಬಿಡಿಸಿ ಹೇಳಲಾಗಿದೆ ಎನ್ನಬಹುದು. ಹೆಚ್ಚು ಸ್ಪಷ್ಟತೆಗಾಗಿ ಒಂದೊಂದನ್ನೂ ಬಿಡಿಸಿ ಹೇಳಲಾಗುತ್ತದೆ.  ’ಸ್ವಾಗತ’(ವೆಲ್ಕಮ್) ವೇ ಸಾಕು, ’ಸುಸ್ವಾಗತ’ ಏಕೆ? (ವೆಲ್ ವೆಲ್ಕಮ್ಮು !). ನಲಿಯುತ್ತಾ ಬರುವುದೇನೋ ಸರಿ, ನಲಿ-ನಲಿಯುತ್ತಾ ಬರುವುದು ಏಕೆ ? ಎಂದರೆ, ವಿಷಯದ ಮಹತ್ವದ ತಿಳಿವಿಗಾಗಿ ಅಥವಾ ವಿಷಯಕ್ಕೆ ಪುಷ್ಟಿ ನೀಡುವುದಕ್ಕಾಗಿ ಹೇಳಲಾಗಿದೆ ಎನ್ನಬಹುದು. ’ಶ್ರೇಷ್ಠತಮಾಯ ಕರ್ಮಣೆ’ ಎಂಬ ವಾಕ್ಯವೊಂದು ವೇದದಲ್ಲಿ ಬರುತ್ತದೆ. ಶ್ರೇಷ್ಠ ಎನ್ನುವುದೇ superlative ಆಗಿರುವಾಗ ಶ್ರೇಷ್ಠತಮ ಎನ್ನುವುದು ಏಕೆ ? ಎಂದರೆ , ಪುಷ್ಟಿಗಾಗಿ, ಮಹತ್ವಕ್ಕಾಗಿ ಹೇಳಿದ್ದಾರೆ ಎನ್ನಬಹುದು. ( Sachin is one of the best player ಎನ್ನುತ್ತಾರೆ. Best ಎನ್ನುವುದೇ unique ಆಗಿರುವಾಗ one of the best ಏಕೆ ? ಎಂದರೆ , ದ್ರಾವಿಡ್ ಕೂಡಾ ಸಚಿನ್ ನಷ್ಟೇ talented ಆಗಿರುವುದರಿಂದ ವ್ಯತ್ಯಾಸವನ್ನು ಗುರುತಿಸಲು ಮಹತ್ವವನ್ನು ಹೇಳಲು ಬಳಸಲಾಗುತ್ತದೆ ಎನ್ನಬಹುದು !).

ಮೂರನೆಯದು ಉಪರತಿ :-

बाह्यालम्बनं वृत्तेरेषोपरतिरुत्तमा ॥२४॥

ಬಾಹ್ಯಾಲಂಬನಂ ವೃತ್ತೇರೇಷೋಪರತಿರುತ್ತಮಾ ||೨೪||
(=ಹೊರಗಿನ ವಿಷಯಗಳ ಅವಲಂಬನೆಯನ್ನು ಬಿಡುವುದೇ ಉಪರತಿ)

ದಮವನ್ನು ಸಾಧಿಸುವುದು ಹೇಗೆ ? ಎನ್ನುವದನ್ನು ’ಉಪರತಿ’ ಎಂಬಲ್ಲಿ ಹೇಳುತ್ತಾರೆ.  ಹೊರಗಿನ ಭೋಗವಸ್ತುಗಳ ಅವಲಂಬನೆಯನ್ನು ಬಿಟ್ಟು ತನ್ನಲ್ಲಿ ತಾನು ನೆಮ್ಮದಿಯನ್ನು ಕಾಣುವುದು ’ಉಪರತಿ’ ಎಂದು ಹೇಳುತ್ತಾರೆ. ಬಯಕೆಗಳು ಏಳದೆ ಇದ್ದಾಗ ವೈರಾಗ್ಯವು ಹುಟ್ಟುತ್ತದೆ. ವೈರಾಗ್ಯವಿದ್ದಲ್ಲಿ ವಿಷಯವಸ್ತುಗಳ ಮೇಲಿನ ಅವಲಂಬನೆಯೂ ಇರುವುದಿಲ್ಲ. ಹೊರಗಿನ ವಿಷಯವಸ್ತುಗಳಾವುದನ್ನೂ ನೆಚ್ಚಿಕೊಳ್ಳದೆ ಸಾಧನೆಯ ದಾರಿಯಲ್ಲಿ ಸಾಗುವುದನ್ನು ಉಪರತಿ ಎಂದು ಹೇಳುತ್ತಾರೆ. ಕೆರೆಯ ನೀರು ಕೆರೆಯ ತೂಬಿನ ಮೂಲಕ ಹೊರಟು ಮುಂದೆ ನಾಲೆಗಳಲ್ಲಿ , ಹೊಲ-ಗದ್ದೆಗಳಲ್ಲಿ ಹೇಗೆ ಬೇರೆ ರೂಪವನ್ನು ಪಡೆಯುವುದೋ ಹಾಗೆಯೇ ಮನಸ್ಸಿನ ಮೂಲಕ ಉಂಟಾಗುವ ವಿಷಯಭೋಗವು ಹೊರಗಿನ ಅವಲಂಬನೆಗಳು ಹೆಚ್ಚಾದಂತೆ ಹಲವು ರೂಪಗಳನ್ನು ಪಡೆದುಕೊಂಡು ನಿವೃತ್ತಿಧರ್ಮಕ್ಕೆ ಅಡ್ಡಿಯಾಗುತ್ತದೆ. ಹೀಗೆ ಶಮದಮಾದಿಗಳು ಒಂದಕ್ಕೊಂದು ಪೂರಕವಾಗಿದ್ದರೂ ಸಹ ಒಂದೊಂದನ್ನು ಸ್ಪಷ್ಟವಾಗಿ ಹೇಳಿದ್ದಾರೆ.

ಮುಂದಿನ ಕಂತಿನಲ್ಲಿ ’ತಿತಿಕ್ಷಾ’ ಮುಂತಾದ ಗುಣಗಳ ವಿಚಾರವನ್ನು ತಿಳಿಯೋಣ.


-------------------------------------------




"   ಐಂಕಾರ ಹ್ರೀಂಕಾರ ರಹಸ್ಯಯುಕ್ತಃ ಶ್ರೀಂಕಾರ ಗೂಢಾರ್ಥ ಮಹಾ ವಿಭೂತ್ಯಾ,
ಓಂಕಾರ ಮರ್ಮ ಪ್ರತಿಪಾದಿನೀಭ್ಯಃ ನಮೋನಮಃ ಶ್ರೀ ಗುರುಪಾದುಕಾಭ್ಯಾಮ್ "

ಮಹಾಲಯ ಅಮಾವಾಸ್ಯೆಯು ಸದ್ಗುರು ಶ್ರೀ ಚಂದ್ರಶೇಖರಭಾರತಿಸ್ವಾಮಿಗಳು ಬ್ರಹ್ಮೈಕ್ಯರಾದ ದಿನ. ಜೀವನ್ಮುಕ್ತರೆಂದೇ ಅವರು ಪ್ರಸಿದ್ದರು. ಅಂತಹ ಸದ್ಗುರುವನ್ನು ವ್ಯಕ್ತಿಗತವಾಗಿ ಕಾಣುವ ಸುಯೋಗ ನನಗಿಲ್ಲವಾದರೂ ಅವರೇ ಬರೆದಿರುವ ವಿವೇಕ ಚೂಡಾಮಣಿಯ ಸಂಸ್ಕೃತ ವ್ಯಾಖ್ಯಾನದಲ್ಲಿ ಪ್ರತ್ಯಕ್ಷವಾಗಿದ್ದಾರೆ ಎಂದು ಸ್ಪಷ್ಟವಾಗಿ ಹೇಳಬಹುದು. ಕೆಲವೊಮ್ಮೆ(ಬಹುತೇಕ) ವ್ಯಕ್ತಿಯ ವಿಚಾರಕ್ಕಿಂತಲೂ ವ್ಯಕ್ತಿಯೇ ಪರಮಾರ್ಥವಾಗಿ ವಿಜೃಂಭಿಸುವ ಅಪಾಯಗಳೇ ಹೆಚ್ಚಾಗಿರುವ ಕಾಲದಲ್ಲೂ ಅಂತಹ ವ್ಯಕ್ತಿಪೂಜೆ, ಬಾಹ್ಯಾಡಾಂಬರ ಮುಂತಾದವುಗಳನ್ನೆಲ್ಲಾ ನಿರಾಕರಿಸುತ್ತಲೇ ಬಂದು ಕೊನೆಯಲ್ಲಿ ಹೆಚ್ಚು-ಹೆಚ್ಚು ಅಂತರ್ಮುಖರಾಗಿಯೇ ಇದ್ದು ಬ್ರಹ್ಮಜ್ಞಾನದ ನಿಜಾರ್ಥವನ್ನು ಪ್ರತಿಪಾದಿಸಿ ತೋರಿಸಿದ ಚೈತನ್ಯಕ್ಕೆ ನನ್ನ ನಮನಗಳು. ಆರಾಧನೆಗಳು ಬರುತ್ತವೆ, ಹೋಗುತ್ತವೆ. ವಿವೇಕ ಚೂಡಾಮಣಿಯ ವ್ಯಾಖ್ಯಾನವನ್ನು ನನ್ನ ಬಾಲಿಶ ಮತಿಗೆ ಹೊಳೆದಂತೆ ನಿಮ್ಮೆಲ್ಲರ ಮುಂದೆ ಇಡುತ್ತಿರುವುದಕ್ಕೂ ಸದ್ಗುರುಗಳ ಪ್ರೇರಣೆಯೇ ಕಾರಣವೆನ್ನುತ್ತೇನೆ. ಈ ನಿಟ್ಟಿನಲ್ಲಿ ನಾನಿಂದು, ಇಲ್ಲಿ ಸದ್ಗುರುವಿನ ಚರಣಕ್ಕೆ ಬಾಗಿದ್ದೇನೆ.

-------------------------------------------

ವಂದನೆಗಳೊಂದಿಗೆ.......

Saturday, September 17, 2011

ವಿವೇಕ ಚೂಡಾಮಣಿ - ಭಾಗ -೧೧



ಗ್ರಂಥದ ಮುಂದುವರಿದ ಭಾಗ

तद्वैराग्यं जुगुप्सा या दर्शनश्रवणादिभिः ।
देहादिब्र्ह्मपर्यन्ते ह्यनित्ये भोगवस्तुनि ॥२१॥

ತದ್ವೈರಾಗ್ಯಂ ಜುಗುಪ್ಸಾ ಯಾ ದರ್ಶನಶ್ರವಣಾದಿಭಿಃ |
(= ನೋಡುವುದು, ಕೇಳುವುದು ಮುಂತಾದವುಗಳಿಂದ ಹುಟ್ಟುವ ವೈರಾಗ್ಯ )
ದೇಹಾದಿಬ್ರಹ್ಮಪರ್ಯಂತೇ ಹ್ಯನಿತ್ಯೇ ಭೋಗವಸ್ತುನಿ ||೨೧||
(=ದೇಹದಿಂದ ಮೊದಲಾಗಿ ಬ್ರಹ್ಮದವರೆಗಿನ ಅನಿತ್ಯವಾದ ಭೋಗವಸ್ತುಗಳಲ್ಲಿ)

ಬ್ರಹ್ಮವೇ ಸತ್ಯ ಜಗತ್ತು ಮಿಥ್ಯೆ ಎಂಬ ಧೃಡ ನಿಶ್ಚಯವು ಬಂದ ನಂತರ ಜಗತ್ತಿನ ವ್ಯಾವಹಾರಿಕ, ಪ್ರಾಪಂಚಿಕ ಭೋಗವಸ್ತುಗಳ ಬಗೆಗೆ ಜಿಗುಪ್ಸೆ ಅಥವಾ ಅನಾಸಕ್ತಿಯು ಹುಟ್ಟಬೇಕು ಮತ್ತು ಅಂತಹ ವೈರಾಗ್ಯದ ಭಾವವನ್ನು ಉಂಟುಮಾಡಿಕೊಳ್ಳಬೇಕು ಎಂದು ’ಇಹಾಮುತ್ರಫಲಭೋಗವೈರಾಗ್ಯ’ ಎಂಬ ಎರಡನೆಯ ಸಾಧನದಲ್ಲಿ ಶ್ರೀ ಶಂಕರರು ನಿರೂಪಿಸುತ್ತಾರೆ.
’ಇಹ’ ಎಂದರೆ ಈ ಜಗತ್ತಿನಲ್ಲಿ ದೇಹದ ಮೂಲಕ ಮೊದಲಾಗುವ ಎಲ್ಲಾ ಪ್ರಾಪಂಚಿಕ ಸುಖ-ಭೋಗಗಳ ಮೇಲಿನ ಜಿಗುಪ್ಸೆ ಎಂದಾಗುತ್ತದೆ. ವ್ಯಾವಹರಿಕ ಜಗತ್ತಿನಲ್ಲಿ ಆಕರ್ಷಣೆಗಳು, ಭೋಗಗಳು ಹುಟ್ಟುವುದೇ ದೇಹದ ಕರ್ಮೇಂದ್ರಿಯಗಳು, ಜ್ಞಾನೇಂದ್ರಿಯಗಳ ಮೂಲಕ ಎನ್ನುವಾಗ ಅಂತಹ ಎಲ್ಲಾ ಸುಖ-ಭೋಗಗಳ ಮೇಲಿನ ಆಸಕ್ತಿಯನ್ನು ಬಿಟ್ಟು ಕೇವಲಬ್ರಹ್ಮದಲ್ಲಿ ನಿಶ್ಚಯವಾಗುವುದು ಎಂದು ತಿಳಿಯಬೇಕಾಗುತ್ತದೆ.
’ಅಮುತ್ರ’ ಅಥವಾ ಪರಲೋಕ ಎಂದರೆ ನಮ್ಮ ಪುರಾಣಗಳಲ್ಲಿ ವರ್ಣಿಸಿರುವಂತೆ ಸಿಗಬಹುದಾದ ’ಸ್ವರ್ಗ’ ಸುಖ-ಭೋಗಗಳು.  ಸ್ವರ್ಗಸುಖವನ್ನೂ ತ್ಯಜಿಸುವುದು ವೈರಾಗ್ಯದ ಲಕ್ಷಣ ಎನ್ನುವ ಅರ್ಥದಲ್ಲಿ ಹೇಳಿರುತ್ತಾರೆ.
’ರಾಗ’ ಎಂದರೆ ಬಣ್ಣ ಅಥವಾ ಸೆಳೆತ ಎಂದುಕೊಂಡರೆ ’ವಿರಾಗ’ ಎನ್ನುವುದು ’ರಾಗ’ ದ ವಿರೋಧಸೂಚಕವಾಗಿ ಬರುತ್ತದೆ. ವಿರಾಗದ ಭಾವವೇ ವೈರಾಗ್ಯ. ವೈರಾಗ್ಯವು ಹುಟ್ಟದೇ ಇದ್ದಲ್ಲಿ ಆತ್ಮಾಭ್ಯಾಸವೂ ಸಾಧ್ಯವಿಲ್ಲ.
ಈ ಜಗತ್ತಿನಲ್ಲಿ ಆಚರಿಸುವ ಕರ್ಮಗಳಿಂದ ಮತ್ತು ಅದರ ಪುಣ್ಯಫಲಗಳಿಂದ ಸ್ವರ್ಗಪ್ರಾಪ್ತಿಯಾಗುತ್ತದೆ ಎನ್ನುವುದಾದರೆ, ಆ ಸ್ವರ್ಗದಲ್ಲೂ ಸಹ ಇರುವುದು ಸುಖ-ಭೋಗಗಳೆ !.  ಇಲ್ಲಿ ಸಾಧಾರಣ ಕುರ್ಚಿಯ ಮೇಲೆ ಕುಳಿತುಕೊಂಡರೆ ಅಲ್ಲಿ ರತ್ನಸಿಂಹಾಸನದ ಮೇಲೆ ಕೂರಿಸಲಾಗುತ್ತದೆ.  ಹೀಗಿರುವಾಗ ಸ್ವರ್ಗಪ್ರಾಪ್ತಿಯೂ ಮೋಕ್ಷವಲ್ಲ ಎಂಬುದು ಇಲ್ಲಿ ನಿರೂಪಿತವಾಗುತ್ತದೆ.  "ಇಲ್ಲಿ ನಮ್ಮ ಸಿನಿಮಾ ನರ್ತಕಿಯರು ಕುಣಿದರೆ ಅಲ್ಲಿ ರಂಭೋರ್ವಶಿಯರು ನರ್ತಿಸುತ್ತಾರೆ. ಎರಡೂ ನರ್ತನವೇ ಆದರೆ, quality ಬದಲಾಗಬಹುದು "  ಎಂದು ರಾ. ಗಣೇಶರು ರಸವತ್ತಾಗಿ ಹೇಳುತ್ತಾರೆ.
ಕಾಶಿಗೆಂದು ಯಾತ್ರೆ  ಹೋದವರು ಅಲ್ಲಿ ಮೂರು ವಸ್ತುಗಳನ್ನು (ಪ್ರಿಯವಾದುದು ಎಂದು ಕೆಲವರು ಒತ್ತಿ ಹೇಳುತ್ತಾರೆ. ನನಗೆ ಅದರ ಬಗ್ಗೆ ಆಸಕ್ತಿಯಿಲ್ಲ) ಬಿಟ್ಟು (ತ್ಯಜಿಸಿ) ಬರಬೇಕು ಎಂಬ ಆಚರಣೆಯೊಂದಿದೆ. ಹಾಗೆ ಬಿಟ್ಟು ಬರುವವರೂ ಬಹುಸಂಖ್ಯೆಯಲ್ಲಿದ್ದಾರೆ. (ನಮ್ಮ ತಂದೆಯವರು ಅವರ ಗೆಳೆಯರೊಬ್ಬರಿಗೆ "ನೀನು ಸಿಟ್ಟನ್ನು ಬಿಟ್ಟು ಬಾರಯ್ಯಾ" ಎಂದು ಹೇಳಿದ್ದರು !).  ಕಾಶಿಯಲ್ಲಿ ಮೈಸುರು ಪಾಕನ್ನು ಬಿಟ್ಟು ಬಂದವರು ಮೈಸೂರಿನಲ್ಲಿ ಮೈಸೂರು ಪಾಕನ್ನು ತಿಂದರಂತೆ. ಯಾರೋ ವಿವೇಕಿಗಳು "ಬಿಟ್ಟದ್ದು ಏಕೆ ? " ಎಂದು ಕೇಳಿದ್ದಕ್ಕೆ ’ನಾನು ಬಿಟ್ಟದ್ದು ಕಾಶಿಯಲ್ಲಿ, ಅಲ್ಲಿ ತಿನ್ನೋದಿಲ್ಲ ಅಂತಲೇ ಹೊರತು ಮೈಸೂರಿನಲ್ಲಿ ಅಲ್ಲ’ ಎಂದರಂತೆ !. ಕೆಲವರು ಸಾವಿರದಲ್ಲಿ ಕೊಡುವ ಲಂಚವನ್ನು ಮುಟ್ಟುವುದೇ ಇಲ್ಲ, ಲಕ್ಷದಲ್ಲಾದರೆ ಬಿಡುವುದೇ ಇಲ್ಲ !.   "ಬಿಟ್ಟೆ" ಎನ್ನುವುದಾದರೆ ಎಲ್ಲೆಡೆಯೂ ಎಲ್ಲವನ್ನೂ ಬಿಡುವುದು ಎಂದಾಗಬೇಕಾಗುತ್ತದೆ ಮತ್ತು ಅದೇ ’ಇಹಾಮುತ್ರಫಲಭೋಗವೈರಾಗ್ಯ’ ಎಂದು ಸದ್ಗುರುಗಳು ಹೇಳುತ್ತಾರೆ.
ದಾರಿಬದಿಯ ತಳ್ಳುವಗಾಡಿಯಲ್ಲಿ ಮಾಡುವ ದೋಸೆಯನ್ನು ತಿನ್ನೋದಿಲ್ಲ ಎಂದು ಆಣೆ ಮಾಡಿ , ದೊಡ್ಡ ಸ್ಟಾರ್ ಹೋಟೆಲ್ಲಿನ ದೋಸೆಯನ್ನು ಮಾತ್ರ ತಿನ್ನುತ್ತೇನೆ ಎನ್ನುವುದು ದೋಸೆಯನ್ನು ಬಿಟ್ಟ ಲಕ್ಷಣವಂತೂ ಅಲ್ಲ. ಲಕ್ಷ-ಲಕ್ಷ ಬೆಲೆಬಾಳುವ ಕಾರಿನ ಕುಶನ್ ಸೀಟಿನ ಮೇಲೆ ಕೃಷ್ಣಾಜಿನವನ್ನು ಹಾಸಿಕೊಂಡು ಕುಳಿತು ದಿಗ್ವಿಜಯಕ್ಕೆ ತೆರಳುವುದು ಕಾರಿನ ಸುಖ-ಭೋಗಗಳನ್ನು ಬಿಟ್ಟಂತೇನೂ ಅಲ್ಲ !.

ದೇಹದಿಂದ ಮೊದಲಾಗಿ ಬ್ರಹ್ಮದವರೆಗಿನ ಎಲ್ಲಾ ಸುಖ-ಭೋಗಗಳನ್ನು ಬಿಡುವುದೇ ವೈರಾಗ್ಯ ಎಂದು ಶಂಕರರು ಮೇಲ್ಕಂಡ ಶ್ಲೋಕದಲ್ಲಿ ಹೇಳಿರುತ್ತಾರೆ.  ಬಿಡುವುದಾದರೂ ಹೇಗೆ ? ಎಂಬ ಪ್ರಶ್ನೆ ಬರುತ್ತದೆ.
ಇಹಭೋಗವಸ್ತುಗಳನ್ನು ಮತ್ತೆ ಮತ್ತೆ ತಿಳಿಯುವುದರಿಂದ ಅದರ ಬಗೆಗೆ ವಿಚಾರ ಮಾಡುವುದರಿಂದ ಅದರಲ್ಲಿನ ಹುಳುಕುಗಳು(ದೋಷಗಳು) ಕಾಣುತ್ತಾ ಹೋಗುತ್ತದೆ. ಕೋಟಿ-ಕೋಟಿ ಹಣವನ್ನು ಕೂಡಿಟ್ಟರೂ ಆಪಾದನೆಗಳಿಗೆ ತಲೆಬಾಗಿ ಜೈಲುಪಾಲಾದಾಗ ಹಣವನ್ನು ಕೂಡಿಸಿದ ಅಡ್ಡದಾರಿಯ ಬಗೆಗೆ ಜಿಗುಪ್ಸೆ ಹುಟ್ಟಬೇಕಾಗುತ್ತದೆ. ಹುಳುಕುಗಳನ್ನು ತಿಳಿಯಬೇಕಾಗುತ್ತದೆ.

ಸದ್ಗುರು ಚಂದ್ರಶೇಖರ ಭಾರತಿಗಳು ತಮ್ಮ ವ್ಯಾಖ್ಯಾನದಲ್ಲಿ ವಿಷ್ಣುಪುರಾಣದಿಂದ ಆಯ್ದ ಸೊಗಸಾದ ವಾಕ್ಯವೊಂದನ್ನು ಉದಾಹರಿಸುತ್ತಾರೆ.
"ಸ್ವದೇಹಾಶುಚಿಗಂಧೇನ ನ ವಿರಜ್ಯೇತ ಯಃ ಪುಮಾನ್ |
ವೈರಾಗ್ಯಕಾರಣಂ ತಸ್ಯ ಕಿಮನ್ಯದುಪದಿಷ್ಯತಾಮ್ || " ಎಂದು.
" ಯಾರಿಗೆ ತನ್ನ ಮೈಯಿನ ಬೆವರಿನ ವಾಸನೆಯು (ದೇಹದ ದುರ್ವಾಸನೆ) ಬಾಧಿಸಿ ಅದರ ಬಗೆಗೆ ಜಿಗುಪ್ಸೆಯನ್ನು ಹುಟ್ಟಿಸುವುದಿಲ್ಲವೋ ಆತನಿಗೆ ಯಾರು ತಾನೆ ವೈರಾಗ್ಯದ ಉಪದೇಶವನ್ನು ಮಾಡಲು ಸಾಧ್ಯ ?!" ಎಂದು ಸೊಗಸಾದ ವ್ಯಾಖ್ಯಾನವನ್ನು ಕೊಡುತ್ತಾರೆ. ಹಂತ-ಹಂತವಾಗಿ ಬಾಡಿ ಉದುರಿಹೋಗುವ ಈ ದೇಹದ ವಿಚಾರವಾಗಿ ಜಿಗುಪ್ಸೆಯು ಹುಟ್ಟಿ ಎಲ್ಲಾ ಸುಖ-ಭೋಗಗಳ ಮೇಲಿನ ಆಸಕ್ತಿಯು ನಿವಾರಣೆಯಾಗಿ ವೈರಾಗ್ಯವು ಹುಟ್ಟುವುದೇ ಎಲ್ಲವನ್ನೂ ’ಬಿಟ್ಟೆ’ ಎನ್ನುವ ಭಾವ ಎಂದು ಅರಿಯಬೇಕಾಗುತ್ತದೆ.

ಇಹದ ಭೋಗಗಳನ್ನೆನೋ ನೋಡಿ-ತಿಳಿದು ಆಸಕ್ತಿ ಕಳೆದುಕೊಂಡು ಜಿಗುಪ್ಸೆಯನ್ನು ತಾಳಬಹುದು. ಆದರೆ, ಪರದ ಬಗೆಗಿನ ಆಸಕ್ತಿಯು ನಿವಾರಣೆಯಾಗುವುದು ಹೇಗೆ ?. ಪರದ ಅಥವಾ ಸ್ವರ್ಗಸುಖದ ವಿಚಾರವನ್ನು ಇಹಲೋಕದಲ್ಲಿರುವವರು ಕೇಳಿ ತಿಳಿದುಕೊಳ್ಳಬೇಕೆ ಹೊರತು ಕಾಣಲಂತೂ ಸಾಧ್ಯವಿಲ್ಲ. ನಮ್ಮ ಪುರಾಣಗಳಲ್ಲಿ ಸ್ವರ್ಗಸುಖಗಳನ್ನು ರಸವತ್ತಾಗಿ ವರ್ಣಿಸಿರುವುದರಿಂದ ಪುರಾಣಶ್ರವಣದಿಂದಲೂ ಪರದ ಭೋಗವಸ್ತುಗಳ ಪ್ರತಿ ಆಸಕ್ತಿಯು ಹುಟ್ಟಿ ಆತ್ಮಾಭ್ಯಾಸಕ್ಕೆ ತೊಡಕಾಗುತ್ತದೆ. ’ಮುಂದಿನ ರಸ್ತೆಯಲ್ಲಿರುವ ಹೋಟೆಲಿನಲ್ಲಿ ರುಚಿಯಾದ ಮಸಾಲೆದೋಸೆ ಸಿಗುತ್ತದೆ’ ಎನ್ನುವುದನ್ನು ಕೇಳಿದಾಗಲೇ ಬಾಯಲ್ಲಿ ಒಂದೆರೆಡು ಹನಿ ನೀರೂರುವುದು ಮಾನವ ಸಹಜ ಗುಣ. ಆತ್ಮಾಭ್ಯಾಸದಲ್ಲಿ ತೊಡಗುವವರು ಇವುಗಳಿಂದಲೂ ಜಿಗುಪ್ಸೆಯನ್ನು ಹೊಂದಬೇಕಾಗುತ್ತದೆ.  ಪುರಾಣಗಳಿಂದ ತಿಳಿದುಕೊಳ್ಳುವ , ಕೇಳುವ ವಿಚಾರಗಳು ಮನಸ್ಸನ್ನು ಸ್ವರ್ಗಪ್ರಾಪ್ತಿಗೆ ಕಾರಣವಾಗುವ ಕರ್ಮಗಳೆಡೆಗೆ ಎಳೆದೊಯ್ಯುತ್ತದೆ. ಹಲವು ಮಹಾಯಾಗಗಳನ್ನು ಮಾಡಿ ಅದರ ಪುಣ್ಯಫಲದಿಂದ ಅನನ್ಯವಾದ ಸ್ವರ್ಗವನ್ನು ಪಡೆದರೂ ಅಲ್ಲಿಯೂ ಸುಖ-ಭೋಗಗಳನ್ನೇ ಅನುಭವಿಸುವುದರಿಂದ ಸಂಪಾದಿಸಿದ ಪುಣ್ಯವು ಕಡಿಮೆಯಾಗುತ್ತಾ (ಕ್ಷಯಿಸಿ) ಬಂದು ಕೊನೆಗೆ ಪುಣ್ಯವು ಬರಿದಾದ ನಂತರ ಯಾವುದಾದರೊಂದು ರೂಪದಲ್ಲಿ ಭೂಮಿಗೆ ಬೀಳಬೇಕಾಗುತ್ತದೆ. ಸ್ವರ್ಗದಲ್ಲಿ ಇರಲೇನೋ ಆಸೆಯಿರುತ್ತದೆ ಆದರೆ, ಪುಣ್ಯವು ಮುಗಿದ ನಂತರ ತಳ್ಳಿಸಿಕೊಂಡು ಬರಬೇಕಾಗುತ್ತದೆ. (ಭಗವದ್ಗೀತೆಯಲ್ಲಿ ಬರುವ ವಿಚಾರ).
ಸ್ವರ್ಗದ ಕತೆಯೂ ಹೀಗಿರುವಾಗ ಅದಾದರೂ ಏಕೆ ? ಅದೂ ಅನಿತ್ಯವೇ ಆಗಿದೆಯಲ್ಲಾ !, ಎಂಬ ಭಾವದಿಂದ ವೈರಾಗ್ಯವು ಹುಟ್ಟಬೇಕಾಗುತ್ತದೆ.  ದೇಹದಿಂದ ಮೊದಲಾಗಿ ಬ್ರಹ್ಮದವರೆಗಿನ ಎಲ್ಲಾ ಅನಿತ್ಯಗಳ ವಿಚಾರವನ್ನು ಕೇಳಿ-ನೋಡಿ-ತಿಳಿದು ಅದರಲ್ಲಿ ದೋಷಗಳನ್ನು ಕಂಡನಂತರ ಭೋಗವಸ್ತುಗಳ ಪ್ರತಿಯಾಗಿ ಜಿಗುಪ್ಸೆಯು ಹುಟ್ಟಿ ಆತ್ಮಾಭ್ಯಾಸಕ್ಕೆ ದಾರಿಯಾಗುತ್ತದೆ ಎಂದು ತಿಳಿಸುತ್ತಾರೆ.
ಆತ್ಮಜ್ಞಾನಕ್ಕೆ ಬ್ರಹ್ಮಸತ್ಯ ಜಗನ್ಮಿಥ್ಯಾ ಎಂದು ನಿಶ್ಚಯಿಸಿಕೊಳ್ಳುವುದು ಎಷ್ಟು ಮುಖ್ಯವೋ ವೈರಾಗ್ಯ ಸಾಧನೆಯ ಮೂಲಕ ಅದನ್ನು ಅನುಸರಿಸುವುದೂ ಅಷ್ಟೇ ಮುಖ್ಯ ಎಂದು ಸದ್ಗುರುಗಳು ವ್ಯಾಖ್ಯಾನಿಸುತ್ತಾರೆ.

ಇಹದ ಬಂಧನಕ್ಕೆ ಬೀಳುವ ಪರಿಯನ್ನು ಶ್ರೀ ರಾಮಕೃಷ್ಣ ಪರಮಹಂಸರು ಒಂದು ಕತೆಯ ಮೂಲಕ ಸೊಗಸಾಗಿ ಹೇಳುತ್ತಾರೆ.
"ಒಂದೂರಿನಲ್ಲಿ ಒಬ್ಬ ಸಾಧು ವಾಸಮಾಡುತ್ತಿದ್ದ. ಪ್ರತಿದಿನ ಸ್ನಾನಮಾಡಿದ ನಂತರ ತನ್ನ ಲಂಗೋಟಿಯನ್ನು ಕುಟೀರದೊಳಗೆ ಹರವುತ್ತಿದ್ದ. ಒಂದು ಇಲಿ ಬಂದು ಆತನ ಲಂಗೋಟಿಯನ್ನು ದಿನವೂ ಕಚ್ಚಿಕೊಂಡು ಹೋಗುತ್ತಿತ್ತು. ಸಾಧುವಿಗೆ ಲಂಗೋಟಿಯನ್ನು ಹೊಂದಿಸಲು ಕಷ್ಟವಾಗಿ ಇಲಿಯಿಂದ ಪಾರಾಗಲು ಬೆಕ್ಕನ್ನು ಸಾಕಿದನಂತೆ. ಬೆಕ್ಕಿನ ಹೊಟ್ಟೆಯನ್ನು ತಣಿಸಲು ಹಾಲಿಗಾಗಿ ಹಸುವನ್ನು ಸಾಕಿದನಂತೆ. ಹಸುವಿನ ಮೇವಿಗಾಗಿ ಒಂದು ಹೊಲವನ್ನು  ಬೇಡಿ ಪಡೆದುಕೊಂಡು ಹುಲ್ಲನ್ನು ಬೆಳೆದನಂತೆ. ಒಬ್ಬನಿಂದಲೇ ಹೊಲವನ್ನು ನೊಡುವುದು ಕಷ್ಟವಾಗಿ ಕೆಲವು ಆಳುಗಳನ್ನು ಹೊಂದಿಸಿಕೊಂಡನಂತೆ. ಆಳುಗಳ ಊಟೋಪಚಾರಕ್ಕಾಗಿ ಒಬ್ಬಳನ್ನು ಮದುವೆಯಾದನಂತೆ, ನಂತರ ಮಕ್ಕಳಾಯಿತಂತೆ !.  ಕೊನೆಗೆ ಅವನೊಬ್ಬ ದೊಡ್ಡ ಬೇಸಾಯಗಾರನೂ ಗ್ರಾಮದ ಮುಖಂಡನೂ ಆಗಿ ಸಂಸಾರದೊಳಗೆ ಸೇರಿಕೊಂಡನಂತೆ". ಇಷ್ಟೆಲ್ಲಾ ಆಗಿದ್ದು ಕೇವಲ ಒಂದು ಲಂಗೋಟಿಯ ಸಲುವಾಗಿ !. ಒಂದು ಸಣ್ಣವಸ್ತುವಿನ ಮೇಲಿನ ಆಸಕ್ತಿಯೂ ಕೂಡ ಆತ್ಮಾಭ್ಯಾಸಿಗೆ ಹೇಗೆ ತೊಡಕಾಗಬಹುದು ಎಂಬುದನ್ನು ಹೀಗೆ ನಿರೂಪಿಸುತ್ತಾರೆ.

ಮುಂದಿನ ಕಂತಿನಲ್ಲಿ ಶಮದಮಾದಿ ಆರು ಗುಣಗಳ ವಿಷಯವನ್ನು ತಿಳಿಯೋಣ.

ವಂದನೆಗಳೊಂದಿಗೆ...
--------------------------------------------------------

Wednesday, September 7, 2011

ವಿವೇಕ ಚೂಡಾಮಣಿ - ಭಾಗ -೧೦


ಗ್ರಂಥದ ಮುಂದುವರಿದ ಭಾಗ:-

साधनान्यत्र चत्वारि कथितानि मनीषिभिः ।
येषु सत्स्वेव सन्निष्ठा यदभावे न सिध्यति ॥१८॥

ಸಾಧನಾನ್ಯತ್ರ ಚತ್ವಾರಿ ಕಥಿತಾನಿ ಮನೀಷಿಭಿಃ |
(= ಆತ್ಮವಿದ್ಯೆಯ ಸಾಧನಗಳು ನಾಲ್ಕು)
ಯೇಷು ಸತ್ಸ್ವೇವ ಸನ್ನಿಷ್ಠಾ ಯದಭಾವೇ ನ ಸಿಧ್ಯತಿ ||೧೮||
(= ಸಾಧನಗಳಿದ್ದರೆ (=ಏವ) ಸಾಧನೆಯು ಸಾಧ್ಯ, ಇಲ್ಲದಿದ್ದರೆ ಇಲ್ಲ)

ವಿಚಾರದಿಂದಲೇ ಜ್ಞಾನ ಎನ್ನುವುದನ್ನು ಈಗಾಗಲೇ ತಿಳಿದಿದ್ದೇವೆ. ಆತ್ಮವಿದ್ಯೆಯ ಸಿದ್ಧಿಗೆ ಇರುವ ಸಾಧನಗಳು ನಾಲ್ಕು . ಹೆಚ್ಚೆಂದರೂ ಇಷ್ಟೆ ಕಡಿಮೆಯೆಂದರೂ ಇಷ್ಟೆ ಎನ್ನುವುದು ಸೂಚಿತ. ನಾಲ್ಕು ಸಾಧನಗಳಿದ್ದರೆ ಆತ್ಮವಿದ್ಯೆಯು ಸಿದ್ಧಿಸುತ್ತದೆ ಮತ್ತು ಇವು ಇಲ್ಲದಿದ್ದರೆ ಸಿದ್ಧಿಯೂ ಇಲ್ಲ ಎಂಬರ್ಥದದಲ್ಲಿ ಹೇಳುತ್ತಾರೆ. ಇದೊಂದು ರೀತಿಯ ವ್ಯಾವರ್ತಕ ನಿಯಮ ಎನ್ನಬಹುದು. ಪಾಯಸಕ್ಕೆ ಮೆಣಸಿನಕಾಯಿ ಒಗ್ಗರಣೆ ಹಾಕುವುದು ಪಾಯಸದ ತಯಾರಿಕೆಯ ಸಾಧನಗಳಲ್ಲಿ ಇಲ್ಲ, ಹಾಗೂ ಒಗ್ಗರಣೆ ಹಾಕಿದರೆ ಪಾಯಸದ ಸಾಂಪ್ರದಾಯಿಕ ರುಚಿಯು ಕೆಡುತ್ತದೆ !. ಇಲ್ಲೂ ಕೂಡ ಇರುವುದು ನಾಲ್ಕೇ ಸಾಧನಗಳು. ಇದೇ ಕನಿಷ್ಠ ಮತ್ತು ಗರಿಷ್ಠ ಎನ್ನುವುದು ಸೂಚಿತ.
’ಮನೀಷಿಭಿಃ’ ಎಂಬಲ್ಲಿ ವೇದಜ್ಞಾನವುಳ್ಳವರು (ಶ್ರುತಿತಾತ್ಪರ್ಯ ಜ್ಞಾನವುಳ್ಳವರು) ಎಂದು ತಿಳಿಯಬೇಕು ಎನ್ನುವುದು ಸದ್ಗುರು ಚಂದ್ರಶೇಖರ ಭಾರತಿಗಳ ಒಕ್ಕಣೆ.  ಶ್ರುತಿಯ ಅವಲಂಬನೆಯಿಲ್ಲದೆ ಸಾಧಕರಿಗೆ ನಾಲ್ಕು ಸಾಧನಗಳ ವಿಚಾರವನ್ನು ತಿಳಿಯುವುದು ಮತ್ತು ಅನುಸರಿಸುವುದು ಕಷ್ಟ ಎಂಬರ್ಥದಲ್ಲಿ ಹೇಳಿರುತ್ತಾರೆ.
’ಏವ’ ಎಂದು ಹೇಳುವುದರ ಮೂಲಕ ಯಾರಿಗೆ ಸಾಧನ ಚತುಷ್ಟಯಗಳ ಸಾಧನೆ ಇರುವುದೋ ಆತನೇ ಆತ್ಮಾಭ್ಯಾಸಕ್ಕೆ ಅರ್ಹನು ಎಂದು ತಿಳಿಸುತ್ತಾರೆ.  ಸಾಧನಗಳಿಲ್ಲದಿದ್ದರೆ ಸಾಧನೆಯೂ ಇಲ್ಲ ಎಂದು ಅರ್ಥ.

ಮುಂದೆ ಸಾಧನ ಚತುಷ್ಟಯವನ್ನು ನಿರೂಪಿಸುತ್ತಾರೆ

आदौ नित्यानित्यवस्तुविवेकः परिगण्यते ।
इहामुत्रफलभोगविरागस्तदनन्तरम् ।
शमादिषट्कसम्पत्तिः मुमुक्षु्त्वमिति स्फुटम् ॥१९॥

ಆದೌ ನಿತ್ಯಾನಿತ್ಯವಸ್ತುವಿವೇಕಃ ಪರಿಗಣ್ಯತೇ |
(= ಶಾಶ್ವತ (ಉಳಿಯುವ) ಮತ್ತು ಕ್ಷಣಿಕ (ಅಳಿಯುವ) ವಸ್ತುಗಳ ವಿವೇಕವು)
ಇಹಾಮುತ್ರಫಲಭೋಗ ವಿರಾಗಸ್ತದನಂತರಮ್ |
(=ಇಹಪರಗಳಲ್ಲಿನ ಆಸೆಯ ಮೇಲಿನ ಅನಾಸಕ್ತಿ )
ಶಮಾದಿ ಷಟ್ಕ ಸಂಪತ್ತಿರ್ಮುಮುಕ್ಷುತ್ವಮಿತಿ ಸ್ಫುಟಮ್ ||೧೯||
(= ಶಮವೇ ಮೊದಲಾದ ಆರು ಗುಣಗಳು ಮತ್ತು ಮೋಕ್ಷಾಪೇಕ್ಷೆಯು)

ಆತ್ಮಾಭ್ಯಾಸಕ್ಕೆ ಮೊದಲಾಗುವ ಮುನ್ನ ಇರಬೇಕಾದ ಅರ್ಹತೆಗಳನ್ನು ತಿಳಿದುಕೊಂಡೆವು. ಅರ್ಹತೆಯನ್ನು ಸಂಪಾದಿಸಿಕೊಂಡ ನಂತರ ಸಾಧನೆಗೆ ಮೊದಲಾಗುವಾಗ ನಾಲ್ಕು ಸಾಧನಗಳು ಅರಿವು ಇರಬೇಕಾಗುತ್ತದೆ. ಅರಿತುಕೊಂಡ ನಂತರ ಅನುಸರಿಸಬೇಕಾಗುತ್ತದೆ. ಸತತ ಅನುಸರಣೆಯಿಂದ ಆತ್ಮಜ್ಞಾನವು ಸಿದ್ಧಿಸುತ್ತದೆ. ಹೊಲವನ್ನು ಉಳುಮೆ ಮಾಡಲು ನೇಗಿಲು, ಎತ್ತು ಮುಂತಾದ ಸಾಧನಗಳು ಬೇಕಾಗುತ್ತವೆ. ಉತ್ತುವ ಬಗೆಯನ್ನು ತಿಳಿದಿದ್ದೇನೆ ಹಾಗಾಗಿ ಬೆಳೆಯು ತಂತಾನೇ ಹುಲುಸಾಗಿ ಬಂದು ಬಿಡುತ್ತದೆ ಎನ್ನುವುದು ಮೂಳತನವಾಗುತ್ತದೆ.  ಬೇಸಾಯಕ್ಕೆ ಬೇಕಾಗುವ ಸಾಮಗ್ರಿಗಳನ್ನು ಹೊಂದಿಸಿಕೊಂಡು ಉತ್ತಿ ಬಿತ್ತಿದಾಗ ಬೆಳೆಯು ಬರುತ್ತದೆ.
ಹಾಗೆ ಇಲ್ಲಿಯೂ ಆತ್ಮಾಭ್ಯಾಸಕ್ಕಾಗಿ ನಾಲ್ಕು ಸಾಧನಗಳನ್ನು ಹೇಳಿರುತ್ತಾರೆ. ಅವು ಹೀಗಿವೆ
೧) ನಿತ್ಯಾನಿತ್ಯವಸ್ತುವಿವೇಕ
೨) ಇಹಾಮುತ್ರಫಲಭೋಗ ವೈರಾಗ್ಯ
೩) ಶಮದಮಾದಿ ಷಟ್ಕ ಸಂಪತ್ತಿ
೪) ಮುಮುಕ್ಷುತ್ವ

ಇಲ್ಲಿಂದ ಮುಂದೆ ಒಂದೊಂದಾಗಿ ಸಾಧನಗಳ ವಿಶಿಷ್ಟತೆಗಳನ್ನು ವಿವರಿಸುತ್ತಾ ಹೋಗುತ್ತಾರೆ. ಮೊದಲಿಗೆ ’ನಿತ್ಯಾನಿತ್ಯವಸ್ತುವಿವೇಕ’.

ब्रह्मसत्यं जगन्मिथ्येत्येवं रूपो विनिश्चयः ।
सोऽयं नित्यानित्यवस्तुविवेकः समुदाहृतः॥२०॥

ಬ್ರಹ್ಮಸತ್ಯಂ ಜಗನ್ಮಿಥ್ಯೇತ್ಯೇವಂ ರೂಪೋವಿನಿಶ್ಚಯಃ।
(=ಬ್ರಹ್ಮವು ಸತ್ಯ ಮತ್ತು ಜಗತ್ತು ಮಿಥ್ಯೆ )
ಸೋಽಯಂ ನಿತ್ಯಾನಿತ್ಯವಸ್ತುವಿವೇಕಃ ಸಮುದಾಹೃತಃ||೨೦||
(= ಇದೇ ನಿತ್ಯಾನಿತ್ಯವಸ್ತುವಿವೇಕವು)

ಆತ್ಮಜ್ಞಾನವೇ (ನಾನು ಮತ್ತು ನನ್ನ ದೈವ ಒಂದೇ ಎನ್ನುವ ಅನುಭವ - ಸುನಾಥ) ’ಬ್ರಹ್ಮ’ ಎಂದು ತಿಳಿದುಕೊಂಡಿದ್ದೇವೆ. ಇಂತಹ ಬ್ರಹ್ಮವೊಂದೇ ಸತ್ಯ, ಇನ್ನುಳಿದ ಜಗತ್ತು ಮಿಥ್ಯೆ (ಸತ್ಯವಲ್ಲದ್ದು) ಎಂಬ ಅದ್ವೈತ ತತ್ವವನ್ನು ಶ್ರೀ ಶಂಕರರು ಈ ಶ್ಲೋಕದಲ್ಲಿ ನಿರೂಪಿಸುತ್ತಾರೆ. ಇಂತಹ ಬ್ರಹ್ಮಭಾವವೇ ನಿತ್ಯಾನಿತ್ಯವಸ್ತುವಿವೇಕ ಎನ್ನುತ್ತಾರೆ.
ಬ್ರಹ್ಮವು ಸತ್ಯ ಮತ್ತು ನಿತ್ಯ (ಹುಟ್ಟು ಸಾವುಗಳ ಗೊಡವೆಯಿಲ್ಲದ್ದು) ಎನ್ನುವುದನ್ನು ದ್ವೈತ ಮತ್ತು ವಿಶಿಷ್ಟಾದ್ವೈತ ತತ್ವಗಳೂ ಮಾನ್ಯಮಾಡುತ್ತವೆ. ಆದರೆ, ಜಗತ್ತು ಅನಿತ್ಯವಲ್ಲ ಅದೂ ಸಹ ಸತ್ಯವಾದುದು ಎಂದು ದ್ವೈತಸಿದ್ಧಾಂತವು ಹೇಳುತ್ತದೆ.
" ಈ ಜಗತ್ತು ಹಿಂದೆ ಯಾವ ಕಾಲದಲ್ಲಿಯೂ ಯಾವ ದೇಶದಲ್ಲಿಯೂ ಯಾರಿಗೂ ಬಾಧಿತವಾಗಲಿಲ್ಲ ಮುಂದೆಯೂ ಆಗಲಾರದು. ಆದುದರಿಂದ ಜಗತ್ತು ನಿತ್ಯವೂ ಅಬಾಧಿತವೂ ಆಗಿದೆ " ಎಂದು ದ್ವೈತ ಸಿದ್ಧಾಂತದಲ್ಲಿ ಶ್ರೀ ಮಧ್ವಾಚಾರ್ಯರು ಭೇದವನ್ನು ಪ್ರತಿಪಾದಿಸುತ್ತಾರೆ. ಒಂದು ಪ್ರಸಿದ್ಧವಾದ ಶ್ಲೋಕದಲ್ಲಿ *(೧) ಮಧ್ವಾಚಾರ್ಯರ ತತ್ವವು ಬಹಳ ಚೆನ್ನಾಗಿ ಹೇಳಲ್ಪಟ್ಟಿದೆ. ರಾಮಾನುಜಾಚಾರ್ಯರ ವಿಶಿಷ್ಟಾದ್ವೈತಕ್ಕೂ ಅದ್ವೈತಕ್ಕೂ ಹೆಚ್ಚೇನೂ ಭಿನ್ನತೆಯಿಲ್ಲದಿದ್ದರೂ
  " ವಿಶ್ವಮಾನವರೆಲ್ಲರೂ ಪರಮಾತ್ಮನ ಸ್ವರೂಪರೇ " ಎನ್ನುವ ಅದ್ವೈತವನ್ನು ಬಿಟ್ಟು ಎಲ್ಲವೂ ಶ್ರೀ ಹರಿಯೇ , ಅವನೊಬ್ಬನೇ ಶೇಷಿ ಮಿಕ್ಕದ್ದೆಲ್ಲಾ ಶೇಷ ಎಂದು ಹೇಳುತ್ತಾರೆ. ದ್ವೈತದಲ್ಲಿಯೂ ಸಹ ’ ಹರಿ ಸರ್ವೋತ್ತಮ’ ಎನ್ನುವುದು ಅಂತಿಮ ನಿಶ್ಚಯ. ಬ್ರಹ್ಮವೆಂದರೆ ಬೇರೇನೂ ಅಲ್ಲ, ಜಗತ್ತಿನ ನಿಯಾಮಕನೂ ಸರ್ವಶಕ್ತನೂ ಆದ ಶ್ರೀಹರಿಯೇ ಮತ್ತು ಅವನೊಬ್ಬನೇ ಎಂದು ನಿರೂಪಿಸುತ್ತಾರೆ. ಹರಿಯೊಬ್ಬನೆ ಸ್ವತಂತ್ರ ಸತ್ಯ ಇನ್ನುಳಿದದ್ದೆಲ್ಲಾ ಅಧೀನ ಸತ್ಯ ಎನ್ನುವ ಪ್ರತಿಪಾದನೆಯನ್ನು ಕಾಣಬಹುದಾಗಿರುತ್ತದೆ. ಇಲ್ಲಾದರೂ ಸಹ ನಾವು ಶಂಕರರ ತತ್ವವನ್ನೇ ಕಾಣಬಹುದಾಗಿರುತ್ತದೆ. ಬ್ರಹ್ಮವೊಂದೇ ಸತ್ಯ ಜಗತ್ತು ಮಿಥ್ಯೆ ಎನ್ನುವ ಶಂಕರರ ಅದ್ವೈತಕ್ಕೂ ಹರಿಯೊಬ್ಬನೇ ( ಸಗುಣ ಬ್ರಹ್ಮ) ಸತ್ಯ ಉಳಿದುದೆಲ್ಲವೂ ಅನಿತ್ಯ ಅಥವಾ ಅಧೀನ ಸತ್ಯ (ಅಸ್ವತಂತ್ರ ಸತ್ಯ) ಮತ್ತು ಹರಿಯಿಂದಲೇ ಜಗತ್ತು ನೆಡೆಯುವುದು ಎನ್ನುವಾಗ ’ಜಗತ್ತು’ ಕೂಡಾ ಹರಿಯ ಮಾಯೆಯೇ ಎನ್ನುವುದು ನಿರೂಪಿತವಾಗುತ್ತದೆ ಮತ್ತು ಹೆಚ್ಚು ವ್ಯತ್ಯಾಸವೂ ಕಾಣದಾಗುತ್ತದೆ. ಇದು ನಿತ್ಯ ಅದು ಅನಿತ್ಯ ಎನ್ನುವ ಪೃಥಃಕರಣ ಎನ್ನಬಹುದು. (ಅರ್ಜುನನ ಗುರಿಯು ಪಕ್ಷಿಯ ಅಕ್ಷಿಯೊಂದೇ ಆಗಿದ್ದಾಗ ಉಳಿದ ಅಂಗಗಳೆಲ್ಲಾ ಆತನಿಗೆ ನಿಮಿತ್ತವಾಗಿತ್ತು ಎನ್ನುವುದನ್ನು ನೆನಪಿಸಿಕೊಳ್ಳಬಹುದು).
ಬ್ರಹ್ಮವು ಸತ್ಯ ಎಂದು ಮೊದಲೇ ಹೇಳಿಬಿಡುವುದರಿಂದ ಆತ್ಮಜ್ಞಾನವನ್ನು ಪಡೆಯಬೇಕೆಂಬ ಆಸಕ್ತನ ಆಸಕ್ತಿಯು ಇಮ್ಮಡಿಯಾಗುತ್ತದೆ ಎಂಬ ಸೂಕ್ಷ್ಮ ಸಂವೇದನೆಯನ್ನು ಇಟ್ಟುಕೊಂಡು ಶ್ರೀ ಶಂಕರರು ಸಾಧನ ಚತುಷ್ಟಯದಲ್ಲಿ ನಿತ್ಯಾನಿತ್ಯವಿವೇಕವನ್ನು ಮೊದಲಿಗೆ ಸೇರಿಸಿದ್ದಾರೆ ಎನ್ನಬಹುದು. ’ಪರಿಗಣ್ಯತೇ’ ಎಂದು ವಿಶೇಷವಾಗಿ ಹೇಳಿರುವುದನ್ನು ಗಮನಿಸಬಹುದಾಗಿರುತ್ತದೆ. ಪುಸ್ತಕವೊಂದು ಓದಲು ಚೆನ್ನಾಗಿದೆ ನಾಳೆಯಿಂದ ಓದೋಣ ಎಂದು ಕೊಂಡಿದ್ದವನಿಗೆ ಅವನ ಹತ್ತು ಮಂದಿ ಗೆಳೆಯರು ’ಆ ಪುಸ್ತಕ ತುಂಬಾ ಚೆನ್ನಾಗಿದೆ’ ಎಂದು recommend ಮಾಡಿದರೆ ಆತನು ನಾಳೆ ಬಿಟ್ಟು ಇಂದಿನಿಂದಲೇ ಓದಲು ಮೊದಲಾಗಬಹುದು !.
ಆತ್ಮನೇ ಪರಮಾತ್ಮ ಎನ್ನುವ ಧೃಡನಿಶ್ಚಯವು ಬಂದು ಬಿಟ್ಟರೆ ಮುಂದೆ ಅನುಭವದಿಂದ ತಿಳಿಯಲು ಆಸಕ್ತಿಯೂ ಹೆಚ್ಚುತ್ತದೆ ಅನುಕೂಲವೂ ಆಗುತ್ತದೆ ಎಂಬ ಭಾವವನ್ನು ’ಬ್ರಹ್ಮಸತ್ಯಂ’ ಎನ್ನುವುದರಲ್ಲಿ ಕಾಣಬಹುದು.

ಮುಂದೆ ’ಜಗತ್ತು ಮಿಥ್ಯೆ’ ಎಂದು ಹೇಳುತ್ತಾರೆ. ಜಗತ್ತು ಯಾರಿಗೆ ಬಾಧಿತವಾಗದಿದ್ದರೂ ಸಹ ಅದು ಇದ್ದಂತೆ ಇರುವುದಿಲ್ಲ. ’ಜಗತ್ತು’ ಎನ್ನುವಾಗ ಜಗತ್ತಿನಲ್ಲಿರುವ ಎಲ್ಲಾ ಜೀವ-ಜಡ ವಸ್ತುಗಳನ್ನೂ ಗಣಿಸಬೇಕಾಗುತ್ತದೆ. ಜೀವ-ಜಡವಸ್ತುಗಳಿಂದಲೇ ಜಗತ್ತು ಎನ್ನುವುದು ವಿಜ್ಞಾನವೂ ಆಗಿರುವಾಗ ಒಂದನ್ನು ಬಿಟ್ಟು ಮತ್ತೊಂದು ಇರಲಾರದು ಎನ್ನುವುದು ತಿಳಿಯುತ್ತದೆ. ಆದರೆ, ಅದ್ಯಾವುದೂ ಶಾಶ್ವತವಲ್ಲ ಎನ್ನುವುದು ವಾಸ್ತವ ಮತ್ತು ಸತ್ಯ !. ’ಬದಲಾವಣೆಯೇ ಜಗದ ನಿಯಮ’ ಎಂಬ ಗೀತಾವಾಕ್ಯದಿಂದಲೆ ಜಗತ್ತು ಅನಿತ್ಯ ಎನ್ನುವುದು ನಿಶ್ಚಯವಾಗುತ್ತದೆ.  ’ಅನಿತ್ಯ’ ಎನ್ನುವುದೇನೋ ಸರಿ ಆದರೆ, ಮಿಥ್ಯೆ ಎನ್ನುವುದು ಎಷ್ಟು ಸರಿ ? ಎಂಬ ಪ್ರಶ್ನೆಯು ಬರುತ್ತದೆ.
ಆತ್ಮಾಭ್ಯಾಸಿಯು ಅನಿತ್ಯವಾದ ಜಗತ್ತನ್ನು ನೆಚ್ಚಿ ಕುಳಿತರೆ ತನ್ನ ಪರಮಾರ್ಥದ ಉದ್ದೇಶವನ್ನು ನೆರವೇರಿಸಿಕೊಳ್ಳಲು ಸಾಧ್ಯವಾಗದು. ಆತನ ಲಕ್ಷ್ಯವೇನಿದ್ದರೂ ಬ್ರಹ್ಮದೆಡೆಗೆ ಮಾತ್ರ ಇರಬೇಕಾಗುತ್ತದೆ. ಹೀಗೆ ಗಟ್ಟಿಯಾಗುತ್ತಾ ಸಾಗಿದಂತೆ ಮೊಟ್ಟಮೊದಲ ವೈರಾಗ್ಯವು(=ಅನಾಸಕ್ತಿ, ತಟಸ್ಥ ಭಾವ) ಹುಟ್ಟುತ್ತದೆ.
ಒಂದು ರಾಜ್ಯದ ಮುಖ್ಯಮಂತ್ರಿಯಾಗಬೇಕೆನ್ನುವವನು ಅದನ್ನು ವಾಸ್ತವದಲ್ಲಿ ಬಯಸುತ್ತಾನೆಯೇ ಹೊರತು ಕೇವಲ ಕನಸಿನಲ್ಲಿ ಕಂಡು ತೃಪ್ತನಾಗುವುದಿಲ್ಲ !. ಮಿಥ್ಯಾಪ್ರಂಪಚದ ಗೊಡವೆಯಿಂದ ಪರಮಾರ್ಥ ಚಿಂತನೆಯು ಸಾಧ್ಯವಾಗುವುದಿಲ್ಲ ಎಂಬ ಭಾವವನ್ನು ಇಲ್ಲಿ ವ್ಯಕ್ತಪಡಿಸಿದ್ದಾರೆ ಎಂದುಕೊಳ್ಳಬಹುದು.
"ವೈರಾಗ್ಯವು ತಪ್ಪದೆ ಹುಟ್ಟುವುದಕ್ಕಾಗಿ ಬ್ರಹ್ಮವು ನಿತ್ಯ ಜಗತ್ತು ಅನಿತ್ಯ ಎಂದು ಹೇಳದೆ ಬ್ರಹ್ಮವು ಸತ್ಯ ಜಗತ್ತು ಮಿಥ್ಯೆ ಎಂದು ಹೇಳಿದ್ದಾರೆ " ಎಂಬುದು ಸದ್ಗುರು ಚಂದ್ರಶೇಖರ ಭಾರತಿಗಳ ವಿವರಣೆ.
’ವಿನಿಶ್ಚಯಃ’ (=ಸರಿಯಾದ , ವಿಶೇಷವಾದ ತಿಳುವಳಿಕೆ) ಎಂಬ ವಿಶೇಷಣದ ಮೂಲಕ ಆತ್ಮಾಭ್ಯಾಸಿಯು ನಿತ್ಯಾನಿತ್ಯವಿವೇಕವನ್ನು  ಧೃಡವಾಗಿ ನಿಶ್ಚಯಿಸಿಕೊಳ್ಳಬೇಕು ಎನ್ನುವುದನ್ನು ಸೂಚಿಸಿರುತ್ತಾರೆ.
ಇಂತಹ ನಿತ್ಯಾನಿತ್ಯವಿವೇಕವೆ ವೈರಾಗ್ಯಕ್ಕೆ ಕಾರಣ ಎಂಬುದನ್ನು ’ಸಮ್-ಉದಾಹೃತಃ’ ಎಂಬಲ್ಲಿ ’ಸಮ್’ ಎಂಬ ಉಪಸರ್ಗದಿಂದ ಸೂಚಿಸಿರುತ್ತಾರೆ.

ವಿವೇಕ ಚೂಡಾಮಣಿಯ ಆಂತರ್ಯವು ನಾವು ಇದೀಗ ತಿಳಿದುಕೊಂಡ ಶ್ಲೋಕದಲ್ಲಿ ಚೆನ್ನಾಗಿ ಒಡಮೂಡಿದೆ ಎನ್ನಬಹುದು. ’ಸರ್ವಕರ್ಮ ಸನ್ಯಾಸ-ವೈರಾಗ್ಯ-ಮುಮುಕ್ಷುತ್ವ-ಬ್ರಹ್ಮಭಾವ’ ಇವುಗಳು ಈ ಗ್ರಂಥದ ಮೂಲೋದ್ದೇಶ ಎನ್ನುವುದು ಇಲ್ಲಿ ಕಂಡುಬರುತ್ತದೆ. ಕೆಲವರು ’ಕೇವಲ ಸನ್ಯಾಸಿಗಳಿಗಾಗಿಯೇ ಈ ಗ್ರಂಥವಿರುವುದು, ಇದರಿಂದ ಬದುಕಿಗೆ ಯಾವ ಪ್ರಯೋಜನವೂ ಇಲ್ಲ’ ಎಂದು ಹೇಳುವುದನ್ನು ಕೇಳಿದ್ದೇನೆ. ಅವರಿಗಾಗಿ ಒಂದು ಮಾತು.
ಬದುಕುವುದಕ್ಕೆ ಜಗತ್ತಿನಲ್ಲಿ ಬೇಕಾದಷ್ಟು ಜಾಗವಿದೆ, ಮಾಡುವುದಕ್ಕೆ ಕೆಲಸವೂ ಇದೆ. ಅಂತಹವರು ಅವರವರ ಕೆಲಸಗಳನ್ನು ಮಾಡಿಕೊಂಡು ಬದುಕು ನೆಡೆಸಿಕೊಳ್ಳಬಹುದು. ಶ್ರೀ ಶಂಕರ ಭಗವತ್ಪಾದರೇನೂ ಎಲ್ಲರಿಗೂ ಮೋಕ್ಷವನ್ನು ಕೊಟ್ಟುಬಿಡುತ್ತೇನೆಂದು ಎಲ್ಲಿಯೂ ಬರೆದುಕೊಟ್ಟಿಲ್ಲ. ಬಂದವರಿಗೆ, ಆಸಕ್ತರಿಗೆ ಮಾತ್ರವೇ ಈ ಗ್ರಂಥದ ಉಪಯೋಗವಿರುವುದು ಎಂದು ಹೇಳಬೇಕಾಗುತ್ತದೆ.

ಒಬ್ಬರು ಬಹಳ ದೊಡ್ಡ ಪಂಡಿತರಿದ್ದರಂತೆ. ಎಲ್ಲವನ್ನು ತಿಳಿದುಕೊಂಡಿದ್ದ ಅವರನ್ನು ಮೀರಿಸುವವರು ಯಾರೂ ಇರಲಿಲ್ಲವಂತೆ. ಆದರೂ, ಕಾಶಿಯ ಪಂಡಿತರೊಡನೆ ಜಯ ಸಾಧಿಸದೆ ಸಾಧನೆಯು ಅಪೂರ್ಣ ಎಂಬ ಮಾತನ್ನು ಕೇಳಿದ ಪಂಡಿತರು ಕಾಶಿಗೆ ಹೋಗಿ ಮತ್ತಷ್ಟು ವಿದ್ಯೆಯನ್ನು ಕಲಿತು ಅಲ್ಲಿಯ ಪಂಡಿತರನ್ನು ಸೋಲಿಸಿ ತಮ್ಮ ಊರಿಗೆ ಮರಳಿದರಂತೆ. ಒಮ್ಮೆ ಊರಿನಲ್ಲಿದ್ದ ಒಬ್ಬ ಸಾಧಾರಣ ಮುದುಕ ಸಂತರೊಬ್ಬರು ಕೇಳಿದ ಪ್ರಶ್ನೆಯೊಂದಕ್ಕೆ ಪಂಡಿತರು ಉತ್ತರಿಸಲಾಗದೆ ಪರಾಭವ ಹೊಂದಿ ನಂತರ ಆ ಪ್ರಶ್ನೆಗೂ ಉತ್ತರ ಪಡೆಯಲೋಸುಗ ಮತ್ತೆ ಕಾಶಿಗೆ ತೆರಳಿದರಂತೆ. ನಾಲ್ಕೈದು ವರುಷಗಳ ಕಾಲ ಕಾಶಿಯಲ್ಲಿ ತಂಗಿದ್ದು ಇನ್ನಷ್ಟು ವಿದ್ಯೆಯನ್ನು ಕಲಿತು ಉತ್ತರವನ್ನು ಕಂಡುಕೊಂಡು ಊರಿಗೆ ಮರಳಿದರಂತೆ. ಅವರು ಬರುವಷ್ಟರಲ್ಲಿ ಪ್ರಶ್ನೆ ಹಾಕಿದ್ದ ಸಂತರು ತೀರಿಕೊಂಡಿದ್ದರಂತೆ !. ಉತ್ತರವನ್ನು ಯಾರಿಗೂ ಹೇಳಲಾಗದೆ ಪಂಡಿತರು ಬೇಸರಪಟ್ಟುಕೊಂಡರಂತೆ. ಆದರೇನು ? ಆ ನೆಪದಲ್ಲಿ ಇನ್ನಷ್ಟು ಕಲಿತುಕೊಂಡಿದ್ದು ಅವರಿಗೆ ಪ್ರಯೋಜನವೇ ಆಯಿತಲ್ಲಾ !. ಇಲ್ಲಿ ಮುಖ್ಯವಾಗಿ ಕಾಣುವುದು commitment ಎನ್ನುವುದು. ವಿರಾಗಿಗಳಾಗುದಕ್ಕೋಸ್ಕರವೇ ತಿಳಿಯಬೇಕೆಂದೇನೂ ಇಲ್ಲ ಅಥವಾ ತಿಳಿದಾಕ್ಷಣ ಯಾರೂ ವಿರಾಗಿಗಳಾಗುವುದೂ ಇಲ್ಲ !. ಜಿಜ್ಞಾಸೆಯು (= ಅರಿತುಕೊಳ್ಳಬೇಕೆಂಬ ಬಯಕೆ) ಎಲ್ಲಕ್ಕಿಂತ ಮುಖ್ಯವಾದುದು ಮತ್ತು ಮಾನ್ಯವಾದುದು ಎಂದು ಹೇಳಬಹುದು.

ಮುಂದಿನ ಕಂತಿನಲ್ಲಿ "ಇಹಾಮುತ್ರಫಲಭೋಗವೈರಾಗ್ಯ"ದ ವಿಚಾರವನ್ನು ತಿಳಿಯೋಣ.

------------------------------------------------------

ಟಿಪ್ಪಣಿ:-

*(೧)
ಮಧ್ವಾಚಾರ್ಯರ  ಒಂಬತ್ತು  ತತ್ವವಿರುವ ಪ್ರಸಿದ್ಧ ಶ್ಲೋಕ

ಶ್ರೀಮನ್ಮಧ್ವಮತೇ ಹರಿಃ ಪರತರೋ ಸತ್ಯಂ ಜಗತ್ತತ್ವತೋ
ಭೇದೋ ಜೀವಗಣಾ ಹರೇರನುಚರಾಃ ನೀಚೋಚ್ಛಭಾವಂ ಗತಾಃ |
ಮುಕ್ತಿರ್ನೈಜಸುಖಾನುಭೂತಿರಮಲಾ ಭಕ್ತಿಶ್ಚ ತತ್ಸಾಧನಂ
ಹ್ಯಕ್ಷಾದಿತ್ರಿತಯಂ ಪ್ರಮಾಣಮಖಿಲಾಮ್ನಾಯೈಕವೇದ್ಯೋ ಹರಿಃ ||

---------------------------------

ವಂದನೆಗಳೊಂದಿಗೆ....

Friday, August 26, 2011

ವಿವೇಕ ಚೂಡಾಮಣಿ ಭಾಗ -೯



ಗ್ರಂಥದ ಮುಂದುವರಿದ ಭಾಗ

अतो विचारः कर्तव्यो जिज्ञासोरात्मवस्तुनः |
समासाध्य दयासिन्धुं गुरुं ब्रह्मविदुत्तमम् ||१५ ||

ಅತೋ ವಿಚಾರಃ ಕರ್ತವ್ಯೋ ಜಿಜ್ಞಾಸೋರಾತ್ಮವಸ್ತುನಃ |
(=ಆತ್ಮವಿಚಾರ ಕರ್ತವ್ಯದ ಜಿಜ್ಞಾಸೆಗಾಗಿ )
ಸಮಾಸಾಧ್ಯ ದಯಾಸಿಂಧುಂ ಗುರುಂ ಬ್ರಹ್ಮವಿದುತ್ತಮಮ್ ||೧೫||
(= ಕರುಣಾಳುವೂ, ಬ್ರಹ್ಮಜ್ಞಾನಿಯೂ ಆಗಿರುವ ಗುರುವನ್ನು ಹೊಂದವುದು)

ಆತ್ಮವಿದ್ಯೆಯ ಸಿದ್ಧಿಗಾಗಿ ಗುರುವಿನ ಬಳಿಗೆ ತೆರಳಬೇಕು ಎಂದು ಈ ಹಿಂದಿನ ಶ್ಲೋಕದಲ್ಲಿ ತಿಳಿದೆವು. ಇಂದಿನ ಕಾಲದಲ್ಲಿ ಗುರುಗಳೇನೋ ಸಾಕಷ್ಟು ಇರುವರು. ಗುರುಗಳ ಶಿಷ್ಯರೂ ಅಸಂಖ್ಯರಿದ್ದಾರೆ !. ಎಂತಹವರು ಗುರು ಎನ್ನಿಸಿಕೊಳ್ಳಲು ಅರ್ಹರಾಗುತ್ತಾರೆ ? ಎಂತಹ ಗುರುವಿನ ಶಿಷ್ಯರಾಗಿ ಆತ್ಮಾಭ್ಯಾಸವನ್ನು ಮೊದಲು ಮಾಡಬೇಕು? ಎಂಬ ’ಗೊಂದಲ’ಕ್ಕೆ ಶ್ರೀ ಶಂಕರರು ಮೇಲಿನ ಶ್ಲೋಕದ ಜೊತೆಗೆ ಮುಂದಿನ ಮೂರು ಶ್ಲೋಕಗಳ ಮೂಲಕ ಪರಿಹಾರವನ್ನು ಒದಗಿಸುತ್ತಾರೆ.
ಆಸಕ್ತನು ವಿಚಾರಾಧೀನನಾಗಿ ಆತ್ಮವಸ್ತುವಿನ ಜಿಜ್ಞಾಸೆಯೇ ತನ್ನ ಕರ್ತವ್ಯವೆಂದು ತಿಳಿದು ಯೋಗ್ಯ ಗುರುವನ್ನು ಹೊಂದಬೇಕು ಎಂದು ತಿಳಿಸುತ್ತಾರೆ.
’ದಯಾಸಿಂಧುಂ’ ಎಂದು ಹೇಳುವ ಮೂಲಕ ಅಧಿಕಾರಿಯು ಕರುಣೆಯ ಸಾಗರದಂತಿರಬೇಕು ಎಂದು ಸೂಚಿಸುತ್ತಾರೆ. ಜಾಣರಿಗೆ ಕಲಿಸುವುದು ಕಷ್ಟವೇನಲ್ಲ, ಆದರೆ ದಡ್ಡರಿಗೆ ತಾಳ್ಮೆಯಿಂದ ಮತ್ತು ಕರುಣೆಯಿಂದ ಹೇಳಿಕೊಡುವ ಅಧಿಕಾರಿಯು ಅಗತ್ಯ. ಒಂದು ಹನಿ ನೀರಿಗೂ ಸಮುದ್ರವು ಆಶ್ರಯವನ್ನು ನೀಡುತ್ತದೆ. ತನ್ನ ಒಡಲಿನಲ್ಲಿ ಅಂತಹ ಅದೆಷ್ಟು ಹನಿಗಳನ್ನು ಬಚ್ಚಿಟ್ಟುಕೊಂಡಿರುತ್ತದೆಯೋ ಬಲ್ಲವರಾರು !?. ಅಧಿಕಾರಿಯು ಆತ್ಮವಿದ್ಯಾಸಕ್ತನ ಎಲ್ಲಾ ಅವಗುಣಗಳನ್ನೂ ಮನ್ನಿಸಿ ಉಪದೇಶಿಸುವಂತಹ ಕರುಣಾಳಾಗಿರಬೇಕು ಎಂದು ಹೇಳುತ್ತಾರೆ.
ಮುಂದೆ, ’ಗುರುಂ’ ಎಂದು ಹೇಳುತ್ತಾರೆ. ’ಅಧಿಕಾರಿಯೆಂದರೇ ಗುರು’ ಎನ್ನುವಾಗ ಮತ್ತೊಮ್ಮೆ ’ಗುರುಂ’ ಎಂದು ಹೇಳುವ ಅಗತ್ಯವೇನು ? ಎಂಬ ಪ್ರಶ್ನೆ ಮೂಡುತ್ತದೆ. ’ಗು’ ಶಬ್ದವು ಕತ್ತಲೆ ಅಥವಾ ಅಜ್ಞಾನವನ್ನು ಸೂಚಿಸಿದರೆ ’ರು’ ಶಬ್ದವು ಬೆಳಕು (ಕತ್ತಲೆಯ ನಿರೋಧಕ) ಅಥವಾ ಜ್ಞಾನವನ್ನು ಸೂಚಿಸುತ್ತದೆ. ಕರುಣಾಳುವಾದ ಅಧಿಕಾರಿಯು ತನ್ನ ಉಪದೇಶದ ಮೂಲಕ ಆಸಕ್ತನ ಮನದ (ಹೃದಯಾಂಧಕಾರ) ಗೊಂದಲ, ಅಜ್ಞಾನವನ್ನು ತೊಳೆಯುತ್ತಾನೆ. ಆತ್ಮವಿದ್ಯೆಯ ಅಧಿಕಾರಿಯು ಗುರುವಾಗಿರಬೇಕು ಎಂದು ಹೀಗೆ ಹೇಳುತ್ತಾರೆ.
’ದಯಾಸಿಂಧು’ ಮತ್ತು ’ಗುರುಂ’ ಎಂಬ ಎರಡು ವಿಶೇಷ ಅರ್ಹತೆಗಳನ್ನು ಪಡೆದಿರುವ ಅಧಿಕಾರಿಯು ’ ಬ್ರಹ್ಮ ವಿದುತ್ತಮಮ್’ ಎಂದೆನಿಸಿಕೊಳ್ಳುತ್ತಾನೆ. ಬ್ರಹ್ಮನನ್ನು ತಿಳಿದವರು, ಆತ್ಮಾರ್ಥವನ್ನು ಅರಿತವರೇ ಬ್ರಹ್ಮವಿದುತ್ತಮರು.

ಆಕ್ಷೇಪ : ’ಸ್ವನುಭವೋ’ ಎಂದು ಈ ಮೊದಲೇ ಹೇಳಿರುವುದರಿಂದ ’ಅಧಿಕಾರಿ’ಯ ಉಪದೇಶದ ಅಗತ್ಯವೇನಿದೆ ?

ಸಮಾಧಾನ : ಯಾವುದೇ ಅಧ್ಯಯನ , ಉಪದೇಶಗಳಿಲ್ಲದೆ ಆತ್ಮವಿದ್ಯೆಯನ್ನು ಗಳಿಸುವುದು ಪಾಮರರಿಗೆ ಸಾಧ್ಯವಿಲ್ಲ. ರಾಮಕೃಷ್ಣ ಪರಮಹಂಸರು, ರಮಣ ಮಹರ್ಷಿಗಳಂತೆ ಏನೂ ಓದದೆ, ಯಾವುದನ್ನೂ ಅಭ್ಯಾಸ ಮಾಡದೆ ಸಮ್ಯಕ್ ಜ್ಞಾನವನ್ನು ಪಡೆಯಬಲ್ಲವರು ಜಗಕ್ಕೊಬ್ಬರು, ಯುಗಕ್ಕೊಬ್ಬರು ಎನ್ನಬಹುದು (ಇಲ್ಲಿ ’ ಶತಕೋಟಿ ಜನ್ಮ ಸುಕೃತೈಃ ಪುಣ್ಯೈರ್ವಿನಾಲಭ್ಯತೇ’ ಎಂಬ ಗ್ರಂಥದ ಆರಂಭಿಕ ಶ್ಲೋಕದ ಸಾಲನ್ನು ಮನನ ಮಾಡಬಹುದು). ಎಲ್ಲರೂ ಇಂತಹವರಾಗಲು ಸಾಧ್ಯವಿಲ್ಲವಾದುದರಿಂದ ಗುರೂಪದೇಶ, ಗುರುವಿನ ಆಶ್ರಯ ಅಗತ್ಯವಾದುದಾಗಿರುತ್ತದೆ.
--------------------------------

ಮುಂದಿನ ಶ್ಲೋಕ

मेधावी पुरुषो विद्वान् ऊहापोह विचक्षणः ।
अधिकार्यात्मविद्यायामुक्तलक्षणलक्षितः ॥१६॥

ಮೇಧಾವೀ ಪುರುಷೋ ವಿದ್ವಾನ್ ಊಹಾಪೋಹ ವಿಚಕ್ಷಣಃ |
(= ಮೇಧಾವಿಯೂ(ಚುರುಕು ಬುದ್ಧಿ), ವಿದ್ವಾಂಸನೂ , ನ್ಯಾಯಾನ್ಯಾಯಗಳ ವಿವೇಚನೆಯುಳ್ಳವನು)
ಅಧಿಕಾರ್ಯಾತ್ಮವಿದ್ಯಾಯಾಮುಕ್ತಲಕ್ಷಣಲಕ್ಷಿತಃ ||೧೬||
(= ಅಧಿಕಾರಿಯು ಹೀಗೆ ಹೇಳಿರುವ ಲಕ್ಷಣಗಳಿಂದ ಕೂಡಿರಬೇಕು)

’ದಯಾಸಿಂಧುವಾದ ಗುರು, ಬ್ರಹ್ಮವಿದುತ್ತಮ, ಮೇಧಾವೀ, ವಿದ್ವಾನ್, ಉಹಾಪೋಹ ವಿಚಕ್ಷಣಃ ’ ಇವೆಲ್ಲಾ ಆತ್ಮವಿದ್ಯೆಯ ಅಧಿಕಾರಿಗೆ ಇರಬೇಕಾದ qualifications ಗಳು ಎನ್ನಬಹುದು. ವೇದಾಂತದ ಎಲ್ಲಾ ಮಜಲುಗಳು ಆರಂಭವಾಗುವುದೇ ಅಧಿಕಾರಿಯ ಅರ್ಹತೆಯ ನಿರೂಪಣೆಯಿಂದ. ಅಧಿಕಾರಿಯ ಪೂರ್ವಾರ್ಹತೆಯ ವಿವೇಚನೆಯ ನಂತರ ವೇದಾಂತದ ವಿಚಾರವು ಆರಂಭವಾಗುತ್ತದೆ.
ಆತ್ಮವಿದ್ಯೆಯ ಸಂಪಾದನೆಗಾಗಿ ಆಸಕ್ತನು ಆಶ್ರಯಿಸುವ ಅಧಿಕಾರಿಯು ಮೇಧಾವಿಯಾಗಿರಬೇಕು ಎಂಬಲ್ಲಿ, ’ಶಾಸ್ತ್ರಾರ್ಥಗಳಲ್ಲಿ ಪಾರಂಗತನಾದವನೂ, ಉಪದೇಶಿಸಲ್ಪಟ್ಟ ವಿಚಾರಗಳನ್ನು ಮನೋಗತ ಮಾಡಿಕೊಳ್ಳುವ ಶಕ್ತಿಯುಳ್ಳ ಬುದ್ಧಿವಂತನನ್ನು ’ಮೇಧಾವೀ’ ಎಂಬ ಪದದಿಂದ ಸೂಚಿಸಿರುತ್ತಾರೆ. ’ವಿದ್ವಾನ್ ’(Scholar) ಎಂದರೆ ಕಾವ್ಯ, ಕೋಶ, ವ್ಯಾಕರಣಗಳಲ್ಲಿ ನುರಿತಿರುವವನು ಎಂದು ತಿಳಿಯಬೇಕಾಗುತ್ತದೆ. ’ಊಹಾಪೋಹ ವಿಚಕ್ಷಣಃ’ ಎಂದರೆ ತರ್ಕಮೀಮಾಂಸ ಶಾಸ್ತ್ರಗಳಲ್ಲಿ ಪರಿಣತಿಯನ್ನು ಹೊಂದಿದವನೆಂದು ಹೇಳುತ್ತಾರೆ. *ಪದವಾಕ್ಯಪ್ರಮಾಣಜ್ಞ*(೧) ನಾಗಿರುವುದೇ ಆತ್ಮವಿದ್ಯೆಯ ಅಧಿಕಾರಿಯ ಮುಖ್ಯ ಲಕ್ಷಣ ಎಂದು ಶಂಕರರು ತಿಳಿಸುತ್ತಾರೆ.
’ಉಕ್ತಲಕ್ಷಣ ಲಕ್ಷಿತಃ’ ಎಂದರೆ ಈಗಾಗಲೇ ಸೂಕ್ಷ್ಮವಾಗಿ ಗ್ರಂಥದ ಕೆಲವು ಶ್ಲೋಕಗಳಲ್ಲಿ ಹೇಳಿರುವ ನಾಲ್ಕು ವಿಧವಾದ ಸಾಧನಗಳ (=ಸಾಧನ ಚತುಷ್ಟಯ. ಮುಂದಿನ ಶ್ಲೋಕಗಳಲ್ಲಿ ವಿವರಣೆಗಳು ಬರಲಿದೆ) ಸಂಪನ್ನನೆಂದು ಎಂದು ಅರ್ಥ.
ಶುಭಕಾರ್ಯಕ್ಕೆ ಹೊರಟಾಗ ಎದುರಿಗೆ ಯಾರಾದರೂ ಬರಿದಾದ ಬಿಂದಿಗೆಯನ್ನು ಹಿಡಿದು ಹೊರಟರೆ ಅಪಶಕುನವೆಂದು(ಬೆಕ್ಕು ಅಡ್ಡಬರುವುದು) ಭಾವಿಸಿ ಕೆಲಹೊತ್ತು ತಡೆದು ಮುಂದುವರಿಯುವವರಿದ್ದಾರೆ. ಅವರಿಗೂ ಗೊತ್ತಿರುತ್ತದೆ
’ಬರಿಯ ಬಿಂದಿಗೆಯು ಏನೂ ಮಾಡದೆಂದು’ , ಆದರೂ ಇತರರು ಅನುಸರಿಸುತ್ತಾರೆ ಎಂಬ ಕಾರಣಕ್ಕೆ ’ನಮಗೇಕೆ ಸಲ್ಲದ ಗೊಡವೆ’ ಎಂದು ಅಂಧಾನುಸರಣೆ ಮಾಡುತ್ತಾರೆ. ಇಂತಹವರಿಗೆ ’ಅಪೋಹ’ ವಿರುವುದಿಲ್ಲ. ಅರ್ಥಾನರ್ಥಗಳ ವಿವೇಚನೆಯನ್ನು ಹೊಂದಿರುವುದು ಅಧಿಕಾರಿಯ ಲಕ್ಷಣ ಎಂದು ಹೇಳುತ್ತಾರೆ.
--------------------------------------

ಮುಂದಿನ ಶ್ಲೋಕ

विवेकिनो विरक्तस्य शमादिगुणशालिनः ।
मुमुक्षोरेव हि ब्रह्मजिज्ञासायोग्यता मता ॥१७॥

ವಿವೇಕಿನೋ ವಿರಕ್ತಸ್ಯ ಶಮಾದಿಗುಣಶಾಲಿನಃ |
(= ವಿವೇಕಿಯೂ , ಅನಾಸಕ್ತನೂ(ತಟಸ್ಥ), ಸಹನಾಶೀಲಗುಣವುಳ್ಳವನು)
ಮುಮುಕ್ಷೋರೇವ ಹಿ ಬ್ರಹ್ಮಜಿಜ್ಞಾಸಾಯೋಗ್ಯತಾ ಮತಾ ||೧೭||
(= ಬ್ರಹ್ಮಜಿಜ್ಞಾಸುವಿಗೆ ಮುಮುಕ್ಷುತ್ವವೇ(ಬಂಧನದಿಂದ ಬಿಡುಗಡೆ) ಯೋಗ್ಯವಾದುದು)

ವಿವೇಕಿಯೂ, ವಿರಕ್ತನೂ ಶಮಾದಿಗುಣವುಳ್ಳವನು ಮತ್ತು ಮುಮುಕ್ಷುವಾದ ಅಧಿಕಾರಿಯು ವಿಚಾರಕ್ಕೆ ಯೋಗ್ಯನಾದವನು ಎಂದು ಶಂಕರರು ಸೂಚಿಸುತ್ತಾರೆ. ಈ ಶ್ಲೋಕದಲ್ಲಿ ಹೇಳಿರುವ ಎಲ್ಲಾ ಗುಣಗಳ ವಿವರಣೆಯು ಮುಂದೆ ’ಸಾಧನ ಚತುಷ್ಟಯ’ ಎಂದು ಹತ್ತು-ಹನ್ನೆರೆಡು ಶ್ಲೋಕಗಳಲ್ಲಿ ವಿವರವಾಗಿ ನಿರೂಪಿಸಲಾಗಿದೆ. ಅವುಗಳನ್ನು ಮುಂದೆ ತಿಳಿಯೋಣ.

ಅಧಿಕಾರಿಯನ್ನು ಅಥವಾ ಗುರುವನ್ನು ಹೇಗಿದ್ದರೂ ಒಪ್ಪಿಕೊಳ್ಳುವ ಪರಿಪಾಠ ಇಂದು ತುಸು ಹೆಚ್ಚಾಗಿದೆ ಎಂದೇ ಹೇಳಬಹುದು. ’ಶಿಷ್ಯರ ವಿತ್ತವನ್ನು(ದುಡ್ಡನ್ನು, ಸಂಪತ್ತನ್ನು) ಕಸಿಯುವ ಗುರುಗಳು ಹೇರಳವಾಗಿದ್ದಾರೆ , ಆದರೆ ಶಿಷ್ಯರ ಚಿತ್ತವನ್ನು( ಕಲಿಯುವ ಹುಮ್ಮಸ್ಸನ್ನು ತಣಿಸುವ) ಹಿಡಿದಿಟ್ಟುಕೊಳ್ಳುವ, ಹೃದಯವನ್ನು ಕಸಿಯುವ ಗುರುಗಳು ವಿರಳ’ ಎಂಬ ಮಾತೊಂದಿದೆ. ಅಂತಹ ಉತ್ತಮ ಗುರುಗಳನ್ನು ಹುಡುಕಬೇಕಾಗುತ್ತದೆ. ಇಲ್ಲವಾದಲ್ಲಿ ರಾಮಕೃಷ್ಣರಂತೆ, ರಮಣಮಹರ್ಷಿಗಳಂತೆ self thought ಇಟ್ಟುಕೊಂಡು ಮುಂದುವರಿಯಬೇಕಾಗುತ್ತದೆ. ಇದು ಅಸಾಧಾರಣವಾದ ದಾರಿಯಾದ್ದರಿಂದ ಗುರೂಪದೇಶ, ಆಶ್ರಯದ ವಿಚಾರವನ್ನು ಶಂಕರರು ಹೇಳುತ್ತಾರೆ. ಕೆಲವರಿಗೆ ವಿಚಾರವು ಬಹು ಚೆನ್ನಾಗಿ ಗೊತ್ತಿರುತ್ತದೆ, ಆದರೆ ಅದನ್ನು ಆಸಕ್ತರಿಗೆ ತಿಳಿಯುವಂತೆ ಹೇಳುವ ಚತುರತೆ ಇರುವುದಿಲ್ಲ ಅಥವಾ ಅಂತಹ ಕಾರುಣ್ಯವಿರುವುದಿಲ್ಲ ಎಂದು ಹೇಳಬಹುದು. ಒಂದು ವಿಚಾರವನ್ನು ನಾವು ಅರಿತಿದ್ದೇವೆ ಎನ್ನುವುದು ಅದನ್ನು ನಾವು ಹೇಗೆ ಬೇಕಾದರೂ ವಿವರಿಸಬಲ್ಲೆವು ಎನ್ನುವುದರ ಮೂಲಕ ತಿಳಿಯುತ್ತದೆ. ಗುರುವಿಗೆ ಕಲಿಸುವುದರ ಮತ್ತು ಕಲಿಯುವವರ ಬಗೆಗೆ ಪ್ರೀತಿ, ಸಹನೆ ಕಾರುಣ್ಯಗಳು ಇರಬೇಕಾಗುತ್ತದೆ. ಇಲ್ಲಿ ನನ್ನ ಕಾಲೇಜು ದಿನದ ಅನುಭವದ ವಿಷಯವೊಂದನ್ನು ಹೇಳಬಯಸುತ್ತೇನೆ. ನಾನು ಉಜಿರೆಯ ಧ.ಮ. ಕಾಲೇಜಿನಲ್ಲಿ ಕಲಿಯುತ್ತಿದ್ದಾಗ ನಮಗೆ ಜಯಲಕ್ಷ್ಮಿ ( ಅವರು ಬಹಳ ದಪ್ಪಗಿದ್ದಿದ್ದರಿಂದ ತಮ್ಮನ್ನು ತಾವೇ ’ಗಜಲಕ್ಷ್ಮಿ’ ಎಂದು ಕರೆದುಕೊಳ್ಳುತ್ತಿದ್ದರು !) ಎಂಬ ಅಧ್ಯಾಪಕರು ಗಣಿತವನ್ನು ಕಲಿಸುತ್ತಿದ್ದರು. ಅವರು ಟ್ರಿಗ್ನಾಮೆಟ್ರಿ ಹೇಳಿಕೊಡುವಾಗ ನಮ್ಮಲ್ಲಿ ಬಹಳಷ್ಟು ಮಂದಿಗೆ ನಿದ್ದೆಯ ಮಂಪರು ಬರುತ್ತಿತ್ತು.
( ಆ ವಿಷಯವೇ ಹಾಗೇ ಅನ್ನಿ !). ಪಾಠದ ಮಧ್ಯೆ ನಮ್ಮ ಗುರುಗಳು ಆಗಾಗ್ಗೆ ಡಯಾಸನ್ನು ಜೋರಾಗಿ ಕಾಲಲ್ಲಿ ಕುಟ್ಟುವುದೋ ಅಥವಾ cos theta = ’some’ degree ಎಂತಲೋ ಜೋರಾಗಿ ಕಿರುಚುತ್ತಿದ್ದರು. ಹಾಗೇ ಸದ್ದು ಜೋರಾದಾಗ ಮಂಪರುಗಳಿಗೆ ಎಚ್ಚರಿಕೆಯಾಗುತ್ತಿತ್ತು !. ಪಾಠದ ಮಧ್ಯೆ ಅವರು ತೆರೆದ ಮನದಿಂದ ಮಾತನಾಡುತ್ತಿದ್ದರು "ಮಕ್ಕಳೇ, ನಾನೂ ನಿಮ್ಮಂತೆ ಟ್ರಿಗ್ನಾಮೆಟ್ರಿ ಕ್ಲಾಸಿನಲ್ಲಿ ನಿದ್ದೆ ಮಾಡಿಕೊಂಡೇ ಬಂದವಳು. ನನಗೂ ನಿಮ್ಮ ಕಷ್ಟ ಗೊತ್ತಾಗುತ್ತದೆ. ಈ ಪಾಠವೇ ಹೀಗೆ. ಅದಕ್ಕೆ ಆಗಾಗ್ಗೆ ನಿಮ್ಮನ್ನು ಎಚ್ಚರಗೊಳಿಸುತ್ತಿರುತ್ತೇನೆ " ಎಂದು ಹೇಳುತ್ತಿದ್ದರು. ಎಂತಹಾ ಕಾರುಣ್ಯ ನೋಡಿ ನಮ್ಮ ಗುರುಗಳದ್ದು !. ಅವರು ನಿದ್ದೆ ಮಾಡಿ ಕಲಿತಿದ್ದರು ಎನ್ನುವ ಕಾರಣಕ್ಕೆ ನಾವು ಅವರಿಂದ ಏನು ಕಲಿಯುವುದಿದೆ ಎಂದು ಭಾವಿಸಿದ್ದಿದ್ದರೆ ಗಣಿತದಲ್ಲಿ ನಮ್ಮದು ಶೂನ್ಯಸಂಪಾದನೆಯಾಗಿರುತ್ತಿತ್ತು.
ಅವರು ಇಡೀ ಕಾಲೇಜಿಗೆ ಅತ್ಯುತ್ತಮ ಗಣಿತ ಉಪನ್ಯಾಸಕರು ಎನ್ನುವುದು ಹೆಮ್ಮೆಯ ವಿಚಾರವಾಗಿತ್ತು .
’ನೆಚ್ಚಿದ್ದ ಗುರುವೊಬ್ಬರು ಉಪ್ಪಿನಕಾಯಿ ತಿಂದರು’ ಎಂದ ಮಾತ್ರಕ್ಕೆ ಅವರಲ್ಲಿ ಗುರುವಿನ ಲಕ್ಷಣವೇ ಇಲ್ಲ ಎಂದು ತೀರ್ಮಾನಿಸಲು ಸಾಧ್ಯವೆ ?!. ಶಿಷ್ಯನಿಗೆ ಬೇಕಾದ್ದು ಅವರಲ್ಲಿರುವುದು ಮುಖ್ಯವಾಗುತ್ತದೆ.

ಗುರುವಾದವನು ಬ್ರಹ್ಮನಿಷ್ಠ ಅಥವಾ ಬ್ರಹ್ಮಸಂಪ್ರದಾಯದವನಾಗಿರಬೇಕು ಎಂದು ಹೇಳುತ್ತಾರೆ.
( ಸಮ್ಯಕ್ ಪ್ರಕೃಷ್ಟತಯಾ ದಾಯವರೂಪೇಣ ಸಮಾಗತಮ್ ಇತಿ ಸಂಪ್ರದಾಯಃ = ಚೆನ್ನಾಗಿ, ವಿಶೇಷವಾಗಿ ಬಳುವಳಿ ಅಥವಾ ನಮ್ಮಪಾಲಿಗೆ ಬಂದಿರುವುದೇ ಸಂಪ್ರದಾಯ ). ನಿಷ್ಠೆಯಿದ್ದಲ್ಲಿ ಬ್ರಹ್ಮಜ್ಞಾನದ ಹಾದಿ ಸುಗಮವಾಗುತ್ತದೆ. ಯಾವುದೋ ಒಂದು ವಿಚಾರಕ್ಕೆ ಕಟ್ಟುಬಿದ್ದು ಇಡೀ ವ್ಯವಸ್ಥೆಯನ್ನು ಕೀಳಾಗಿ ಅರ್ಥೈಸುವುದು ’ನಿಷ್ಠೆ’ ಎನ್ನುವುದಕ್ಕೆ ವಿರೋಧವಾಗುತ್ತದೆ.
ನಮಗೆ ಆರನೆ ತರಗತಿಯಲ್ಲಿ ’ದಯಾನಂದ ಸರಸ್ವತಿಯವರ’ ಕುರಿತು ಪಾಠವೊಂದಿತ್ತು. ದೇವ ನಿಷ್ಠರಾದ ದಯಾನಂದ ಸರಸ್ವತಿಯವರು ಶಿವರಾತ್ರಿಯ ಜಾಗರಣೆಗೆಂದು ಹೋದ ದೇವಾಲಯದಲ್ಲಿ ಮಧ್ಯರಾತ್ರಿಯ ಒಂದು ಹೊತ್ತಿನಲ್ಲಿ ಶಿವಲಿಂಗದ ಮೇಲೆ ಇಲಿಗಳು ಓಡಾಡಿದುವಂತೆ. ಅದನ್ನು ಕಂಡ ಸರಸ್ವತಿಗಳು ಹೀಗೆ ಹೇಳುತ್ತಾರೆ " ತನ್ನ ಮೈಮೇಲೆ ಓಡಾಡುವ ಇಲಿಗಳನ್ನು ಓಡಿಸಲಾರದ ಈ ಶಿವ ಜಗತ್ತಿನ ಜೀವಕೋಟಿಯನ್ನು ಹೇಗೆ ತಾನೇ ಕಾಪಾಡಿಯಾನು ?" ಎಂದು.
( ದಯಾನಂದರ ಬಗೆಗೆ ಟೀಕೆ ಮಾಡುವ ಅಥವಾ ಖಂಡನೆ ಮಾಡುವ ಯೋಗ್ಯತೆ ನನಗಿಲ್ಲ. ನನ್ನ ವಿಚಾರವೇನಿದ್ದರೂ ಈ ಒಂದು ವಾಕ್ಯದ ಬಗೆಗೆ ಮಾತ್ರ). ಜಗತ್ತಿನ ಜೀವಕೋಟಿಯಲ್ಲಿ ಪಾಪದ ಇಲಿಯೂ ಸೇರಿದೆ ಎನ್ನುವುದು ಸರಸ್ವತಿಗಳಿಗೆ ಏಕೆ ಹೊಳೆಯಲಿಲ್ಲ ? . ದೇವನಿಷ್ಠರಾಗಿದ್ದಾಗ ಜಡವಾದ ಶಿಲೆಯಲ್ಲೇ ಶಿವನನ್ನು ಕಂಡಿದ್ದ ಸರಸ್ವತಿಗಳಿಗೆ ಜೀವವಿರುವ, ಚೈತನ್ಯಪೂರ್ಣವಾದ ಇಲಿಯಲ್ಲಿ ಶಿವನನ್ನು ಕಾಣಲು ಸಾಧ್ಯವಾಗಲಿಲ್ಲವೇ ?!. ಇದಕ್ಕೆ ಸಾರಸಗಟು ವಿಗ್ರಹಾರಾಧನೆಯನ್ನೇ ಅವರು ತಿರಸ್ಕರಿಸಬೇಕಿತ್ತೇ ?. ಈ ನಿಟ್ಟಿನಲ್ಲಿ ನೋಡಿದರೆ ಆರ್ಯಸಮಾಜದಲ್ಲಿ ಸರಸ್ವತಿಗಳ ಭಾವಚಿತ್ರವನ್ನಿಟ್ಟು ಪೂಜಿಸುವುದೂ, ವೇದಗಳನ್ನು ಹೇಳಿಕೊಂಡು ಹವನ (ಬೆಂಕಿಗೆ ತುಪ್ಪ ಸುರಿಯುವುದು ಎನ್ನೋಣವೇ ?) ಮಾಡುವುದೂ ತಪ್ಪೇ ಆಗುತ್ತದೆ !. ಬ್ರಹ್ಮವಿದ್ಯೆಯ
 ಅರಿವಿಗೆ  ನಿಷ್ಠೆ ಎನ್ನುವುದು ಬಹಳ ಮುಖ್ಯವಾದ ಅಂಶವಾಗಿದೆ.

ಆತ್ಮವಿದ್ಯೆಯ ಸಾಧನೆಗೆ ಬೇಕಾದ ಸಾಧನಗಳ ವಿವರಣೆಯನ್ನು ’ಸಾಧನ ಚತುಷ್ಟಯ’ ಎಂಬ ವಿಭಾಗದಲ್ಲಿ ಶಂಕರರು ನಿರೂಪಿಸುತ್ತಾರೆ. ಮುಂದಿನ ಕಂತಿನಲ್ಲಿ ಇದರ ಬಗೆಗೆ ವಿವರವಾಗಿ ತಿಳಿಯೋಣ.

---------------------------------------------------

ಟಿಪ್ಪಣಿ:

೧) ಪದವಾಕ್ಯಪ್ರಮಾಣಜ್ಞ : ಪದಶಾಸ್ತ್ರವೆಂದರೆ ಭಾಷೆಯ ವ್ಯಾಕರಣದ ತಿಳುವಳಿಕೆ ಅಥವಾ ನುಡಿಯರಿಮೆ.
ವಾಕ್ಯಶಾಸ್ತ್ರವೆಂದರೆ ತರ್ಕ ಮತ್ತು ಮೀಮಾಂಸಶಾಸ್ತ್ರಗಳ ಅರಿವು. ಪ್ರಮಾಣವೆಂದರೆ
ನ್ಯಾಯಶಾಸ್ತ್ರಗಳ ತಿಳುವಳಿಕೆ. "ಪದವಾಕ್ಯಪ್ರಮಾಣಜ್ಞ" ಎಂಬುದನ್ನು ಯತಿಗಳ
ಬಿರುದಾವಳಿಯನ್ನು ಹೇಳುವಾಗ ಬಳಸುವುದನ್ನು ಗಮನಿಸಬಹುದು.


ವಂದನೆಗಳೊಂದಿಗೆ..