ಶ್ರೀ ಶ್ರೀನಾಥರ ಪ್ರಶ್ನೆಗೆ ಶ್ರೀ ಸುಧಾಕರಶರ್ಮರು ನೀಡಿರುವ ವಿವರಣೆ ಇಲ್ಲಿದೆ.
ಆಹಾರಸೇವನೆಯ ಬಗ್ಗೆ ವೇದ ಮತ್ತು ಆಯುರ್ವೇದ ಹಿನ್ನೆಲೆಯಲ್ಲಿ ಒಂದಷ್ಟು ವಿಚಾರಗಳು.
1. ಊಟ ಏಕೆ ಮಾಡಬೇಕು?
ನಿರಂತರ ಕಾರ್ಯಚಟುವಟಿಕೆಗಳಿಂದ ಕಳೆದುಹೋದ ಶಕ್ತಿಯನ್ನು ಮರುಪೂರೈಕೆ ಮಾಡಲು. (ಹಾಗಾಗಿ ನಾವು ತಿನ್ನುವ ಆಹಾರದಲ್ಲಿ ಶಕ್ತಿಯಿರಬೇಕು ಎಂಬುದನ್ನು ಮತ್ತ ಹೇಳಬೇಕಿಲ್ಲ).
2. ಯಾವಾಗ ತಿನ್ನಬೇಕು?
ಹಸಿವಾದಾಗ. ಹಸಿವೆಯಲ್ಲಿ ಎರಡು ವಿಧ - ನಿಜ ಹಸಿವು, ಕಳ್ಳ ಹಸಿವು!
ಗಡಿಯಾರ ನೋಡಿ ಊಟ ಮಾಡುವವರಿಗೆ ಆ ಸಮಯಕ್ಕೆ ಸರಿಯಾಗಿ ಹೊಟ್ಟೆಯಲ್ಲಿ ಏನೋ ಒಂದು ತರಹ ಆಗುತ್ತದೆ. ಅದನ್ನು ಹಸಿವೆಂದು ತಿನ್ನುತ್ತಾರೆ. ಇದು ಕಳ್ಳ ಹಸಿವು. ನಮಗೆ ಇಷ್ಟವಾದ ತಿನಿಸನ್ನು ನೋಡಿದಾಗಲೂ ಹಸಿವಿನಂತೆ ಏನೂ
ಆಗುತ್ತದೆ. ಇದೂ ಕಳ್ಳ ಹಸಿವು.
ಮೊದಲು ತಿಂದ ಆಹಾರ ಜೀರ್ಣವಾದಮೇಲೆ ಆಹಾರ ತಿನ್ನುವ ಬಯಕೆ ಆದಲ್ಲಿ ಅದು ನಿಜ ಹಸಿವು. ಮೊದಲು ತಿಂದ ಆಹಾರ ಜೀರ್ಣವಾಗಿದೆ ಎಂದು ತಿಳಿಯುವುದು ಹೇಗೆ?
ಉದ್ಗಾರ ಶುದ್ಧಿರುತ್ಸಾಹೋ ವೇಗೋತ್ಕರ್ಷೋ ಯಥೋಚಿತಃ|
ಲಘುತಾ ಕ್ಷುತ್ ಪಿಪಾಸಾ ಚ ಜೀರ್ಣಾಹಾರಸ್ಯ ಲಕ್ಷಣಮ್||
ಉಸಿರು ಶುದ್ಧವಾಗಿರಬೇಕು, ಬಾಯಿ ವಾಸನೆಯಿರಬಾರದು, ಕಮರು ತೇಗು ಮೊದಲಾದವು ಇರಬಾರದು; ಉತ್ಸಾಹ, ಲವಲವಿಕೆ ಇರಬೇಕು; ಮಲಮೂತ್ರಾದಿಗಳು ಕಾಲಕಾಲಕ್ಕೆ ಸರಿಯಾಗಿ ಆಗಿ, ಅವುಗಳ ಶೇಷ ಶರೀರದಲ್ಲಿ ಇರಬಾರದು; ಹಗುರವಾಗಿದೆ ಎನಿಸಬೇಕು, ಮೈ-ಮನಗಳು ಭಾರವಾಗಿವೆ ಎಂದೆನಿಸಬಾರದು; ನೀರನ್ನು ಕುಡಿದರೂ ಅದರ ಸವಿ ನಾಲಿಗೆಗೆ ಅರಿವಾಗಬೇಕು. ಇಂತಹ ಹಿನ್ನೆಲೆಯಲ್ಲಿ ಹೊಟ್ಟೆಯಲ್ಲಿ ಚುಮು ಚುಮು ಎಂದು, ಆಹಾರ ಸೇವಿಸಬೇಕು ಎಂದೆನಿಸಿದರೆ ಅದು ನಿಜವಾದ ಹಸಿವು.!! (ಎಷ್ಟು ಸಲ ನಾವು ಊಟಕ್ಕೆ ಮುಂಚೆ ಎಷ್ಟೆಲ್ಲಾ ಪರಿಶೀಲನೆ ಮಾಡಿದ್ದೇವೆ?! - ನನ್ನನ್ನೂ ಸೇರಿಸಿಕೊಂಡು!)
3. ಏನು ಸೇವಿಸಬೇಕು?
ಆಗಲೇ ಹೇಳಿದ ಹಾಗೆ ಸತ್ವಭರಿತವಾದ ಆಹಾರವನ್ನು ಸೇವಿಸಬೇಕು.
(ಮುಂದುವರೆಸುವೆ)
-ಸುಧಾಕರ ಶರ್ಮ