ಗ್ರಂಥದ ಮುಂದುವರಿಕೆ..
सम्यगास्थापनं बुद्धेः शुद्धे ब्रह्मणि सर्वदा ।
तत्समाधनमित्युक्तं न तु चित्तस्य लालनम् ||२७||
ಸಮ್ಯಗಾಸ್ಥಾಪನಂ ಬುದ್ಧೇಃ ಶುದ್ಧೇ ಬ್ರಹ್ಮಣಿ ಸರ್ವದಾ|
(= ಬುದ್ಧಿಯನ್ನು ಶುದ್ಧ ಬ್ರಹ್ಮನಲ್ಲಿ ಯಾವಾಗಲೂ ಚೆನ್ನಾಗಿ ಇಟ್ಟುಕೊಳ್ಳುವುದು)
ತತ್ ಸಮಧಾನಮಿತ್ಯುಕ್ತಂ ನ ತು ಚಿತ್ತಸ್ಯ ಲಾಲನಮ್ ||೨೭||
(=ಅದನ್ನು (ಇದನ್ನು) ಸಮಾಧಾನವೆಂದು ಹೇಳಿದೆಯೇ ಹೊರತು ಚಿತ್ತ ಪೋಷಣೆಯನ್ನು ಅಲ್ಲ)
ಶುದ್ಧ ಬ್ರಹ್ಮದಲ್ಲಿ ಬುದ್ಥಿಯನ್ನು ಸ್ಥಿರಗೊಳಿಸುವುದು ಎಂದರೆ ಧರ್ಮಾತೀತವಾದ ನಿರ್ಗುಣ ಬ್ರಹ್ಮನಲ್ಲಿ ಬುದ್ಧಿಯನ್ನು ನಿಶ್ಚಯಗೊಳಿಸಿಕೊಳ್ಳುವುದು (ಸಮ್ಯಕ್ =ಚೆನ್ನಾಗಿ , ಆಸ್ಥಾಪನಂ = ನೆಲೆಗೊಳಿಸುವುದು) ಮತ್ತು ಇದನ್ನೇ ಸಮಾಧಾನವೆಂದು ಹೇಳಲ್ಪಟ್ಟಿದೆ. ಮನಸ್ಸಿನ ಲಾಲನೆಯು ಸಮಾಧಾನ (ಸಮ್ಯಕ್ =ಚೆನ್ನಾಗಿ, ಆಧಾನಂ= ಇಡುವುದು) ಅಲ್ಲ ಎಂದು ಮೇಲಿನ ಶ್ಲೋಕದಲ್ಲಿ ತಿಳಿಸುತ್ತಾರೆ. ಸಮಾಧಾನ ಎನ್ನುವುದಕ್ಕೆ ಶಾಂತಿ ಎನ್ನುವ ಅರ್ಥವಿದ್ದರೂ ಸಹ ಇಲ್ಲಿ, ಬ್ರಹ್ಮನಲ್ಲಿ ನಿಶ್ಚಯಸ್ವರೂಪವಾದ ಬುದ್ಧಿಯನ್ನು ನೆಲೆಗೊಳಿಸಿಕೊಳ್ಳುವುದನ್ನು ಸಮಾಧಾನ ಎಂದು ಹೇಳಿರುತ್ತಾರೆ. ’ಚಿತ್ತಸ್ಯ ಲಾಲನಮ್’ ಎಂದರೆ ಮನಸ್ಸಿನ ಲಾಲನೆ ಅಥವಾ ಮನಸ್ಸಿಗೆ ಮುದವಾಗುವಂತೆ ನೆಡೆದುಕೊಳ್ಳುವುದು ಎಂಬ ಅರ್ಥದಲ್ಲಿ ಹೇಳಿರುತ್ತಾರೆ. ಚಿತ್ತ ಎನ್ನುವುದಕ್ಕೆ ಸ್ಮೃತಿ ಎನ್ನುವ ಅರ್ಥವೂ ಬರುವುದರಿಂದ ಸ್ಮೃತಿ ಅಥವಾ ನೆನಪು ಎನ್ನುವುದು ಪ್ರಮಾಣೀಕೃತವಾಗಬಹುದಾದ ಭೂಮಿಕೆಯಾಗುವುದಿಲ್ಲ ಎಂದು ತಾರ್ಕಿಕರು ಹೇಳುತ್ತಾರೆ . ನೆನಪು ಎನ್ನುವುದೇ ಎಲ್ಲೋ ಸ್ವಲ್ಪ ಹಾಗೆ ಅಥವಾ ಹೀಗೆ ಆಗಿರಬಹುದಾದ ಎನ್ನುವ ಅರ್ಥವನ್ನು ಹೊರಡಿಸುವುದರಿಂದ ಸ್ಮೃತಿಪ್ರಮಾಣವನ್ನು ನೆಚ್ಚಿಕೊಳ್ಳುವುದು ಹಿತವಲ್ಲ ಆದುದರಿಂದ ಗತಕಾಲದ ನೆನಪುಗಳಲ್ಲೇ ಕಾಲ ಕಳೆಯುವುದನ್ನು ಬಿಟ್ಟು ವಾಸ್ತವದ ಅಂದರೆ ಅನುಭವದಿಂದ ತಿಳಿಯಬಹುದಾದ ಆತ್ಮಾರ್ಥದಲ್ಲಿ ಬುದ್ಧಿಯನ್ನು ನೆಲೆಗೊಳಿಸಿಕೊಳ್ಳುವುದು ಹಿತವಾದುದು ಎಂದು ಹೇಳುತ್ತಾರೆ.
ಮಕ್ಕಳು ಸಿಹಿತಿಂಡಿ ಬೇಕೆಂದು ಅಳುತ್ತಾ ಕುಳಿತಾಗ ಮಗುವಿನ ಮನಸ್ಸನ್ನು ಶಾಂತಗೊಳಿಸಲು ಸಿಹಿತಿಂಡಿಯನ್ನು ಕೊಟ್ಟು ಉಪಚರಿಸುತ್ತೇವೆ. ಇನ್ನೆಂದೂ ಆ ಮಗುವು ಸಿಹಿಯನ್ನು ಕೇಳುವುದೇ ಇಲ್ಲ ಎನ್ನಲು ಸಾಧ್ಯವೆ ?. ಮನಸಿನ ಹೊಯ್ದಾಟಗಳಿಗೆ ಮಿತಿ ಎಂಬುದು ಇರುವುದಿಲ್ಲ, ಆದುದರಿಂದ ಮನಸಿನ ಲಾಲನೆಯನ್ನು ಬಿಟ್ಟು ಪ್ರಯತ್ನಪೂರ್ವಕವಾಗಿ ಬುದ್ಧಿಯನ್ನು ಬ್ರಹ್ಮನಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳುತ್ತಾರೆ.
ಶ್ರೀ ಚಂದ್ರಶೇಖರ ಭಾರತಿ ಸ್ವಾಮಿಗಳು ತಮ್ಮ ವ್ಯಾಖ್ಯಾನದಲ್ಲಿ ಹೀಗೆ ಹೇಳುತ್ತಾರೆ.
"ಶುಭಾಶುಭಾಭ್ಯಾಂ ಮಾರ್ಗಾಭ್ಯಾಂ ವಹಂತೀ ವಾಸನಾಸರಿತ್ |
ಪೌರುಷೇಣ ಪ್ರಯತ್ನೇನ ಯೋಜನೀಯಾ ಶುಭೇ ಪಥಿ || " .
ವಾಸನಾ(ಬಯಕೆಗಳು, ಅವಿದ್ಯೆ, ಇತ್ಯಾದಿ) ಎನ್ನುವ ನದಿಯು ಎಲ್ಲಾ (ಒಳಿತು-ಕೆಡುಕು) ದಾರಿಯಲ್ಲಿಯೂ ಹರಿಯುತ್ತಿರುತ್ತದೆ. ಪುರುಷ ಪ್ರಯತ್ನದಿಂದ ಅದನ್ನು ಸರಿಯಾದ ದಾರಿಯಲ್ಲಿ ಹರಿಯುವಂತೆ ಮಾಡಿಕೊಳ್ಳಬೇಕು ಎಂದು ವ್ಯಾಖ್ಯಾನಿಸುತ್ತಾರೆ. ಹರಿಯುವ ನದಿಗೆ ರಾಮನ ಮನೆಯಾದರೇನು ? ರಾವಣನ ಮನೆಯಾದರೇನು ?. ಪ್ರವಾಹ ಬರುವಾಗ ಅದು ಹರಿದದ್ದೇ ದಾರಿ ಎಂದಾಗುತ್ತದೆ. ಅಂತಹ ನದಿಯನ್ನು (ವಾಸನಾ ಸರಿತ್) ಸ್ವಪ್ರಯತ್ನದಿಂದ ಬೇಕಾದ ದಾರಿಯಲ್ಲಿ ಹರಿಯುವಂತೆ ಮಾಡಿಕೊಳ್ಳುವುದು ಜ್ಞಾನಿಯ ಲಕ್ಷಣ ಎನ್ನಬಹುದು. ಎಲ್ಲವನ್ನೂ ದೇವರೇ ಮಾಡಿಬಿಡುತ್ತಾನೆ ಎನ್ನುವುದಾದರೆ ಸ್ವಪ್ರಯತ್ನ, ಸ್ವಸಾಮರ್ಥ್ಯ ಎನ್ನುವುದಕ್ಕೆ ಬೆಲೆ ಹುಟ್ಟುತ್ತದೆಯೇ ? . ಒಳ್ಳೆಯದನ್ನು ಮಾಡುವುದಕ್ಕೆ ದೇವರೇ ಬುದ್ಧಿಯನ್ನು ಕೊಡುತ್ತಾನೆ ಎನ್ನುವುದಾದರೆ ಕೊಟ್ಟಿರುವ ಬುದ್ಧಿಯನ್ನು ಇನ್ನೂ ಏಕೆ ಬಳಸಿಲ್ಲ ಎಂದು ಕೇಳಬೇಕಾಗುತ್ತದೆ !. ( ಕೈಲಾಸಂ ಹೇಳುತ್ತಾರೆ: "ಅವರು ರೋಗಿಯು ಚೇತರಿಸಿಕೊಳ್ಳಲೆಂದು ದೇವರ ಮೇಲೆ ಭಾರ ಹಾಕಿದರು, ಆ ಭಾರವನ್ನು ದೇವರು ನಾಲ್ಕು ಜನರ ಮೇಲೆ ಹಾಕಿದ " ಎಂದು !). ಪುರುಷ ಪ್ರಯತ್ನ ಎನ್ನುವುದು ಮನಸಿನ ಲಾಲಸೆಗಳನ್ನು ಹತ್ತಿಕ್ಕುವುದಕ್ಕೆ ಅಗತ್ಯವಾದುದು ಎನ್ನಬಹುದು.
ಸಾಧನ ಚತುಷ್ಟಯದಲ್ಲಿ ಮೂರನೆಯ ಸಾಧನವಾದ ಶಮದಮಾದಿ ಆರುಗುಣಗಳು ಇಲ್ಲಿಗೆ ಮುಗಿಯುತ್ತದೆ
ನಾಲ್ಕನೆಯ ಸಾಧನವು ಮುಮುಕ್ಷುತ್ವ
अहंकारादिदेहान्तान् बन्धानज्ञानकल्पितान् ।
स्वस्वरूपावबोधेन मोक्तुमिच्छा मुमुक्षुता ॥२८॥
ಅಹಂಕಾರಾದಿ-ದೇಹಾಂತಾನ್ ಬಂಧಾನಜ್ಞಾನ ಕಲ್ಪಿತಾನ್ |
(=ಅಹಮಿಕೆಯಿಂದ ಮೊದಲಾಗಿ ದೇಹದವರೆಗೆ ಅಜ್ಞಾನದಿಂದ ಕಲ್ಪಿತವಾಗಿರುವ ಬಂಧನಗಳು)
ಸ್ವಸ್ವರೂಪಾವಬೋಧೇನ ಮೋಕ್ಷುಮಿಚ್ಛಾ ಮುಮುಕ್ಷುತಾ ||೨೮||
(=ತನ್ನ ಅರಿವು ಅಥವಾ ಆತ್ಮಸಾಕ್ಷಾತ್ಕಾರದ ಜ್ಞಾನದಿಂದ (ಬಂಧನಗಳಿಂದ) ಬಿಡುಗಡೆಯನ್ನು ಬಯಸುವುದೇ ಮುಮುಕ್ಷುತ್ವವು)
ಅಹಂಕಾರದಿಂದ ಮೊದಲಾಗಿ ದೇಹದವರೆವಿಗೆ ಅಜ್ಞಾನದಿಂದ ಕಲ್ಪಿತವಾಗಿರುವ ಬಂಧನಗಳನ್ನು ತನ್ನನ್ನು ತಾನು ತಿಳಿಯುವುದರಿಂದ ಬಿಡಿಸಿಕೊಳ್ಳುವ ಬಯಕೆಯನ್ನು ಮುಮುಕ್ಷುತ್ವ ಎಂದು ಹೇಳುತ್ತಾರೆ.
ಅಹಂಕಾರ ಎಂದರೆ ಗರ್ವ ಎಂಬ ಅರ್ಥವು ಬರುವುದಿಲ್ಲ. ಕಣ್ಣು ತುಂಬ ಸುಂದರವಾಗಿಯೇನೋ ಇದೆ, ಆದರೆ ಅದು ನನ್ನ ಕಣ್ಣು ಎಂಬ ಅಂತಃಕರಣಪೂರಕವಾದ ಅಹಂಕಾರವು ಇರುತ್ತದೆ. ಅಂತಃಕರಣದ ಅಹಂಕಾರಕ್ಕೆ ಅಜ್ಞಾನವೇ ಬಂಧನ. ಅಜ್ಞಾನ ಎನ್ನುವುದು ಅಧ್ಯಾಸ(ಹಾವು ಹಗ್ಗದ ತತ್ವ) ದಿಂದ ಬಂದಿರುವುದು. ನಂತರ ಮನಸ್ಸು, ಬುದ್ಧಿ, ಜ್ಞಾನೇಂದಿಯಗಳು, ಕರ್ಮೇಂದ್ರಿಯಗಳು ಮತ್ತು ಇವುಗಳಿಂದ ಆಗಿರುವ ದೇಹ. ಇವೆಲ್ಲಕ್ಕೂ ಬಂಧನಗಳು ಇದ್ದೇ ಇರುವುವು. ಸ್ವಸ್ವರೂಪದ ಅನುಭವದಿಂದ ಅಥವಾ ತನ್ನನ್ನು ತಾನು ತಿಳಿಯುವುದರಿಂದ(ಆತ್ಮ ಸಾಕ್ಷಾತ್ಕಾರದಿಂದ) ಹುಟ್ಟುವ ಜ್ಞಾನವು ಸರ್ವವೂ ಆತ್ಮನೇ ಆಗಿದ್ದಾನೆ ಎಂದು ಸಿದ್ಧಪಡಿಸುವುದರಿಂದ ಅಂತಹ ಬಂಧನಗಳಿಂದ ಬಿಡಿಸಿಕೊಳ್ಳಲು ಹುಟ್ಟುಬ ಬಯಕೆಯನ್ನೇ ಮುಮುಕ್ಷುತ್ವ ಎಂದು ವಿವರಿಸುತ್ತಾರೆ. ಎಲ್ಲವೂ ಆತ್ಮನೇ ಆಗಿರುವುದರಿಂದ ಆತ್ಮನಿಗಿಂತಲೂ ಭಿನ್ನವಾಗಿ ಕಂಡುಬರುವ ಯಾವ ವಸ್ತುವನ್ನೂ ಬಯಸದಿರುವುದು ಬಂಧನದಿಂದ ಬಿಡುಗೊಂಡಂತೆ ಮತ್ತು ಮುಮುಕ್ಷುತ್ವಕ್ಕೆ ರಹದಾರಿಯಂತೆ ಎಂದು ಹೇಳಬಹುದು. ಬಂಧನದಿಂದ ಬಿಡುಗಡೆ ಹೊಂದಲು ಇಕ್ಕಟ್ಟಾದ ಕೋಣೇಯಲ್ಲಿ ಉಸಿರಾಡುವುದಕ್ಕೆ ಎಷ್ಟು ತೀವ್ರತೆ ಬೇಕೋ ಅಂತಹ ತೀವ್ರತೆಯೇ ಬೇಕು ಎನ್ನಬಹುದು. ಶಮದಮಾದಿಗುಣಸಂಪನ್ನನಿಗೇ ಮುಮುಕ್ಷುತ್ವವು ಒಲಿದು ಬರುವುದು ಎನ್ನುವುದನ್ನು ಸೂಕ್ಷ್ಮವಾಗಿ ಗಮನಿಸಬಹುದಾಗಿರುತ್ತದೆ
ಇಲ್ಲಿಗೆ ಸಾಧನ ಚತುಷ್ಟಯವು ಮುಗಿಯುತ್ತದೆ. ಮುಂದಿನ ಕಂತಿನಲ್ಲಿ ಇನ್ನಷ್ಟು ತಿಳಿಯೋಣ.
ವಂದನೆಗಳೊಂದಿಗೆ....