Pages

Monday, September 30, 2013

ನೀವೇನಂತೀರಾ?

ಮಿತ್ರ ಲೋಕೇಶ್ ಒಂದು ಮಾತನ್ನು ಬಹಳ ಸ್ಪಷ್ಟ ಶಬ್ಧಗಳಲ್ಲಿ ಹೇಳಿದರು " ಈ ವಿಗ್ರಹಾರಾಧನೆ ಹೊರಟು ಹೋಗಲಿ, ಹಲವು ಸಮಸ್ಯೆಗಳು ತಾನೇ ತಾನಾಗಿ ಹೋಗುತ್ತವೆ" ಅದರಲ್ಲಿ ಮುಖ್ಯವಾದದ್ದು ಪ್ರಾಣಿಹಿಂಸೆ ಕಡಿಮೆ ಯಾಗುತ್ತೆ. ನನ್ನ ಮನಸ್ಸಿನಲ್ಲಿ ಅದು  ಹೇಗಪ್ಪಾ, ಪ್ರಾಣಿ ಹಿಂಸೆಗೂ ವಿಗ್ರಹಾರಾಧನೆಗೂ ಸಂಬಂಧ ಏನು ಅಂತಾ ಯೋಚಿಸುತ್ತಿದ್ದೆ. ಅಷ್ಟರಲ್ಲಿ ಅವರು ಮಾತು ಮುಂದುವರೆಸಿದರು. ಪುರದಮ್ಮಾ ಇಲ್ವಾ ಸಾರ್ ಅಂದ್ರು. ನಾನು ಹೇಳಿದೆ " ಹೂ". ಹಾಸನದಲ್ಲಿ ಅತಿ ಹೆಚ್ಚು ಪ್ರಾಣಿಬಲಿ ಎಲ್ಲಿ ಆಗುತ್ತೆ? ಅಂತಾ ಯಾರನ್ನಾದರೂ ಕೇಳಿ.ಅದು ಪುರದಮ್ಮ ದೇವಸ್ಥಾನದಲ್ಲಿ. 
ಹೌದಾ?
ಪ್ರತೀ  ಹಳ್ಳಿಯಲ್ಲೂ ಗ್ರಾಮದೇವತೆ ಇರ್ತಾಳಲ್ಲಾ? ಅವಳಿಗೂ ಆಡು-ಕುರಿ-ಕೋಳಿ ಬಲೀ ಕೊಡಲೇ ಬೇಕು.ಇತ್ತೀಚಿಗೆ ಕೋಣನ ಬಲಿ ನಿಶೇಧಿಸಿದ್ದರೂ ಪೋಲೀಸರ ಕಣ್ಣಿಗೆ ಮಣ್ಣೆರಚಿ ಕೋಣನ ಬಲಿಯೂ ಆಗುತ್ತೆ.ಲೋಕೇಶ್ ಮಾತು ಕೇಳುತ್ತಿದ್ದರೆ ನನಗೆ ತಲೆ ಗಿರ್ ಅಂತಿತ್ತು. ನನ್ನ ಕಣ್ಮುಂದೆ ದೊಡ್ದ ದೊಡ್ದ ದೇವಸ್ಥಾನಗಳು ಮಾತ್ರ ಬಂದಿದ್ದವು. ಅಷ್ಟಕ್ಕೇ ಅವರು ಸುಮ್ಮನಾಗಲಿಲ್ಲ. ದೊಡ್ದ ದೊಡ್ದ ದೇವಸ್ಥಾನದಲ್ಲಿ ಪ್ರಾಣಿಬಲಿ ಇಲ್ಲಾ ಅಲ್ವಾ? ಅಲ್ಲಿ ಮನುಶ್ಯನೇ ಪುರೋಹಿತರಿಗೆ ಬಲಿ ಪಶುವಾಗ್ತಾನೆ. ಅಲ್ಲಿನ ಸೇವೆಯ ಪಟ್ಟಿ ನೋಡಿ.    ಗೊತ್ತಾಗುತ್ತೆ. ಹತ್ತು ರೂಪಾಯಿ ಯಿಂದ ಆರಂಭಗೊಂಡು ಇಪ್ಪತ್ತೈದು ಲಕ್ಷ ರೂಪಾಯಿವರಗೂ ಸೇವೆ ಇರುತ್ತೆ. ಅದಕ್ಕಿಂತ ಹೆಚ್ಚಾಗಿ ಮಂಗಳಾರತಿ ತಟ್ಟೆ ಹಿಡಿದು ತಟ್ಟೆಕಾಸಿಗಾಗಿ ಚಾಚುತ್ತಾರಲ್ಲಾ ಆದೃಶ್ಯ ಬೇಸರ ತರುವುದಿಲ್ಲವೇ? ಸಾವಿರಾರು ಜನ ಭಕ್ತರು ಸಾಲು ಗಟ್ಟಿ   ಹೋಗುವಾಗ ಒಬ್ಬ ರಾಜಕಾರಣಿ ಬಂದ್ರೆ ದೇವರ ದರ್ಶನ ಹೇಗಾಗುತ್ತದೆ, ಅಂತಾ ನಿಮಗೆ ಗೊತ್ತಾ? 
ನನಗೆ ತಲೆ ಇನ್ನೂ ಹೆಚ್ಚು ಗಿರ್ ಅನ್ನಲು ಶುರುವಾಯ್ತು. ನಾವು ದೇವಾಲಯಗಳ ಒಂದು ಮುಖ ಮಾತ್ರ ನೋಡಿ ಇದನ್ನೆಲ್ಲಾ ಉದಾಸೀನ ಮಾಡ್ತೀವಲ್ಲಾ! ಇದೂ ಸತ್ಯವಲ್ವಾ?
ಅಬ್ಭಾ! ನಮ್ಮ ಜೀವನೋಪಾಯಕ್ಕೆ ನಾವು ದೇವರನ್ನೂ ಬಲಿಪಶುಮಾಡಿಬಿಟ್ಟೆವು!!

ಅದು ಹೇಗೆ ಬಂತೋ ಈ ವಿಗ್ರಹಾರಾಧನೆ,ಇರಲಿ, ಚಿಂತೆ ಇಲ್ಲ. ಆದರೆ ಅದರ ಹೆಸರಲ್ಲಿ ನಡೆಯುತ್ತಿರುವ ಈ ದಂಧೆ ಶೋಭೆ ತರುತ್ತಾ?

ಹಾಗೇ ತುಲನೆ ಮಾಡಿದೆ. ಪ್ರತೀದಿನ ಹತ್ತಿಪ್ಪತ್ತು ಜನ ಒಟ್ಟಾಗಿ ಕುಳಿತು ಕಳೆದ ಒಂದು ವರ್ಷದಿಂದ ಸಾಮೂಹಿಕವಾಗಿ ಮಾಡುತ್ತಿರುವ ಅಗ್ನಿಹೋತ್ರಕ್ಕೆ ಖರ್ಚೇ ಇಲ್ಲ. ಹತ್ತಿಪ್ಪತ್ತು ರೂಪಾಯಿನ  ತುಪ್ಪ. ಯಾರೋ ತುಪ್ಪ ತಂದ್ರೆ ಮುಗೀತು.  ಸ್ತ್ರೀ ಪುರುಷರೆಲ್ಲಾ ಸಾಮೂಹಿಕವಾಗಿ ಮಂತ್ರ ಪಠಿಸುತ್ತಾ ಅಗ್ನಿಹೋತ್ರ ಮಾಡುವಾಗ ಸಿಗುವ ಆನಂದ ಬೇರೆಲ್ಲಿ ಸಿಕ್ಕೀತು? ಅದರ ಪರಿಣಾಮ? ನೆಮ್ಮದಿ,ಶಾಂತಿ, ಉತ್ತಮ  ಆರೋಗ್ಯ. ಇನ್ನೇನು ಬೇಕು? ಇಷ್ಟು ಸಾಕು.....ಹೀಗೆನ್ನುವಾಗ ಮತ್ತೊಬ್ಬ ಮಿತ್ರರು ಹೇಳ್ತಾರೆ " ಹಾಗಂತ ನಮ್ಮ ಪೂರ್ವಿಕರು ಆಚರಣೆಗೆ ತಂದಿರುವ ಪೂಜೆ ಪುನಸ್ಕಾರ ನಿಲ್ಲಿಸಲು ಸಾಧ್ಯವೇ?

ನಿಲ್ಲಿಸಿ,ಅಂತಾ ಯಾರು ಹೇಳಿದ್ರು? ಯೋಚಿಸಿ ಅಂತಾ ಅಷ್ಟೇ ಹೇಳಿದೆ. ನೀವೇನಂತೀರಾ?