Pages

Thursday, September 25, 2014

ಜೀವನವೇದ-9

ತಾಯಿಯು ತನ್ನ ಮಗುವಿಗೆ ಆಸರೆಯಾಗುವಂತೆ ಜಲಧಾರೆಗಳು ನಮಗೆ ಆಸರೆಯಾಗಲಿ

ಸಂಧ್ಯಾವಂದನೆ ಮತ್ತು ದೇವತಾರ್ಚನೆ ಮಾಡುವಾಗ ಹೇಳುವ ಮಾರ್ಜನ ಮಂತ್ರದ ಬಗ್ಗೆ ಇಂದು ವಿಚಾರ ಮಾಡೋಣ.
ಅಥರ್ವ ವೇದದ ಮೊದಲ ಕಾಂಡದ ಐದನೇ ಸೂಕ್ತ:
ಮಂತ್ರ-೧
ಆಪೋ ಹಿ ಷ್ಠಾ ಮಯೋ ಭುವಸ್ತಾ ನ ಊರ್ಜೇ ದಧಾತನ |
ಮಹೇ ರಣಾಯ ಚಕ್ಷಸೇ ||
ಅರ್ಥ:
ಆಪ: = ಜಲಧಾರೆಗಳೇ
ಮಯೋಭುವ: = ನೀವು ಕಲ್ಯಾಣದಾಯಿನಿಯರು
ಸ್ಥ = ಆಗಿದ್ದೀರಿ
ತಾ: = ಆ ಜಲಧಾರೆಗಳು
ನ: = ನಮ್ಮನ್ನು
ಊರ್ಜೇ = ಬಲಯುತರನ್ನಾಗಿಸಲಿ
ಮಹೇ ರಣಾಯ ಚಕ್ಷಸೇ = ಮಹಾ ರಮಣೀಯವಾದ ದೃಷ್ಟಿಗಾಗಿ
ದಧಾತನ = ಒದಗಲಿ
ಭಾವಾರ್ಥ:-
ಕಲ್ಯಾಣದಾಯಿನಿಯರಾದ ಈ ನದೀನದಾದಿಗಳು ನಮ್ಮನ್ನು  ಸುಂದರರನ್ನಾಗಿಯೂ, ಬಲಶಾಲಿಗಳನ್ನಾಗಿಯೂ ಮಾಡಲಿ. ಸಂಧ್ಯಾವನೆ ಆರಂಭದಲ್ಲಿ  ಉದ್ಧರಣೆಯಲ್ಲಿ ನೀರು ತುಂಬಿ ಬೆರಳುಗಳನ್ನು ಅದರಲ್ಲಿ ಅದ್ದಿ ಈ ಮಂತ್ರವನ್ನು ಹೇಳುತ್ತಾ ದೇಹದ ಅಂಗಾಂಗಗಳಮೇಲೆ ಚುಮುಕಿಸಿಕೊಳ್ಳುತ್ತೇವೆ. ಉಪನಯನ ಸಂಸ್ಕಾರವಾಗುವ ವಟುಗಳಿಗೆ ಸಾಮಾನ್ಯವಾಗಿ ಈ ಮಂತ್ರದ ಲಾಭವನ್ನು ಹೇಳುವಾಗ ಹೀಗೆ ಹೇಳುವುದನ್ನು ಕೇಳಿದ್ದೇನೆ - ನಿಮಗರಿವಿದ್ದೋ ಅಥವಾ ಅರಿವಿಲ್ಲದೆಯೋ ಶಾರೀರಿಕವಾಗಿ ಮಾಡಿದ ಪಾಪವು ಈ ಮಂತ್ರಹೇಳಿ ನೀರನ್ನು ಪ್ರೋಕ್ಷಣೆಮಾಡಿಕೊಳ್ಳುವುದರಿಂದ ನಿವಾರಣೆಯಾಗಿ  ಶರೀರವು ಶುದ್ಧಿಯಾಗುತ್ತದೆ
ವೇದಮಂತ್ರಗಳನ್ನು  ಹೀಗೆ ಅರ್ಥೈಸುವುದು ಎಷ್ಟು ಸರಿ? ಈ ಮಂತ್ರವನ್ನು ಹೇಳುತ್ತಾ  ನೀರನ್ನು ಪ್ರೋಕ್ಷಿಸಿಕೊಳ್ಳುವುದರಿಂದ  ನೀನು ಮಾಡಿದ  ಪಾಪವು ಪರಿಹಾರವಾಗುತ್ತದೆಂದು ಈ ಮಂತ್ರದಲ್ಲಿ ಎಲ್ಲಿ ಹೇಳಿದೆ? ವೇದವಾದರೋ ಪಾಪಕೃತ್ಯವನ್ನು ಮಾಡಲು ಆಸ್ಪದವನ್ನೇ ಕೊಡುವುದಿಲ್ಲ.ಒಂದು ವೇಳೆ ಪಾಪಕೃತ್ಯವನ್ನು ಮಾಡಿದರೆ ಅದರ ಪ್ರತಿಫಲವನ್ನು ಅವನು ಎದುರಿಸಲೇ ಬೇಕಾಗುತ್ತದೆ.
ಹಾಗಾದರೆ ಈ ಮಂತ್ರವು ಏನು ಹೇಳುತ್ತದೆ?
 ಈ ಮಂತ್ರದ ಸರಿಯಾದ  ಅರ್ಥವನ್ನು ತಿಳಿದು ಸಂಧ್ಯಾವಂದನೆ ಮಾಡಿದರೆ! ನೀರನ್ನು ಮೈ ಮೇಲೆ ಪ್ರೋಕ್ಷಣೆ ಮಾಡಿಕೊಳ್ಳುವಾಗ ಅದನ್ನು ನೀಡಿರುವ ಭಗವಂತನನ್ನು ಮನದಲ್ಲಿ ಸ್ಮರಿಸಿಕೊಂಡು “ ಆ  ಭಗವಂತನು ನನಗೆ ಶಕ್ತಿ ಕೊಡಲಿ, ಕಾಂತಿ ಕೊಡಲಿ” ಎಂದು ಪ್ರಾರ್ಥಿಸುತ್ತಾ ಕ್ರಿಯೆಯನ್ನು ಮಾಡಿದರೆ ಮನಸ್ಸಿನಲ್ಲಿ ನಾವು ಏನು ಭಾವಿಸುತ್ತೇವೆಯೋ ಅದರಂತೆಯೇ ಆಗುತ್ತೇವೆ. ಆದ್ದರಿಂದ ನೀರನ್ನು ಪ್ರೋಕ್ಷಿಸಿಕೊಳ್ಳುವುದು ಒಂದು ನೆಪ ಅಷ್ಟೆ. ಆದರೆ ನೀರನ್ನು ಪ್ರೋಕ್ಷಿಸಿಕೊಳ್ಳುವಾಗ ನಮ್ಮಲ್ಲಿ ಈ ಅಂಶಗಳು ಮೂಡಿದರೆ ನಾವು ಆರೋಗ್ಯವಂತರೂ, ರಮಣೀಯರೂ, ಬಲಶಾಲಿಗಳೂ ಆಗುವುದರಲ್ಲಿ ಸಂದೇಹವಿಲ್ಲ. ಆದರೆ ಯಾಂತ್ರಿಕವಾಗಿ ನೀರನ್ನು ಪ್ರೋಕ್ಷಿಸಿಕೊಳ್ಳುತ್ತಾ ಮನದಲ್ಲಿ ಅನ್ಯ ಚಿಂತೆಗಳು ಮೂಡಿದರೆ ನಾವು ಹೇಳುವ ಮಾರ್ಜನ ಮಂತ್ರದ ಪ್ರಭಾವವು ನಮ್ಮ ಶರೀರ ಮನಸ್ಸುಗಳ ಮೇಲೆ ಯಾವ ಪರಿಣಾಮವನ್ನೂ ಬೀರಲಾರದು. ಅಲ್ಲದೆ ಕೇವಲ ನೀರನ್ನು ಪ್ರೋಕ್ಷಿಸಿಕೊಂಡರೆ ಮಾಡಿದ್ದ ಪಾಪವು ಪರಿಹಾರವಾಗಲಾರದು.
ಮಂತ್ರ-೨
ಯೋ ವ: ಶಿವತಮೋ ರಸಸ್ತಸ್ಯ ಭಾಜಯತೇಹ ನ: | 
ಉಶತೀರಿವ ಮಾತರ: ||
ಅರ್ಥ:
ಯ: = ಯಾವ
ವ: = ಆ ಜಲವು
ಶಿವತಮ: ರಸ: = ಅತ್ಯಂತ ಕಲ್ಯಾಣಕಾರವಾದ ರಸವಿದೆಯೋ
ಉಶತೀ: ಮಾತರ: ಇವ = ಮಮತೆಯ ಮಾತೆಯರಂತೆ
ನ: ಇಹ ತಸ್ಯ ಭಾಜಯತೇ = ನಮಗೆ ಅದರ ಭಾಗವು ಲಭಿಸಲಿ
ಭಾವಾರ್ಥ: ತಾಯಂದಿರು ವಾತ್ಸಲ್ಯದಿಂದ ತಮ್ಮ ಮಕ್ಕಳಿಗೆ ನೆಲೆ ನೀಡುವಂತೆ, ಆಸರೆಯಾಗುವಂತೆ ಅಮೃತಮಯ ಜಲಧಾರೆಗಳ ಆಶ್ರಯದಲ್ಲಿ ನಮಗೆ ಬದುಕು ಲಭಿಸಲಿ.
ಈ ಮಂತ್ರದ ಅರ್ಥ ಎಷ್ಟು ಸೊಗಸಾಗಿದೆ!  ಎಂತಹಾ ಅದ್ಭುತ ಹೋಲಿಕೆ! ತಾಯಾಂದಿರು ತಮ್ಮ ಮಕ್ಕಳಿಗೆ ಮಮಕಾರದಿಂದ ಆಶ್ರಯ ಕೊಡುವಂತೆ ನಮಗೆ ಭಗವಂತನು ಸೃಷ್ಟಿಸಿರುವ ಜಲಧಾರೆಗಳು ಆಶ್ರಯ ಕೊಡಲಿ. ಇಲ್ಲಿ ನೀರಿನ ಮಹತ್ವವನ್ನು ಅರ್ಥ ಮಾಡಿಕೊಳ್ಳಬೇಕು. ನಾನು ಪ್ರೋಕ್ಷಿಸಿಕೊಳ್ಳುತ್ತಿರುವ ನೀರು ಅಂತಿಂತಾ ನೀರಲ್ಲ. ಅದು ಪವಿತ್ರ ಗಂಗೆ! ಅದು ನನಗೆ ಆಶ್ರಯ ಕೊಡಲಿ, ಎಂದರೆ ನಮ್ಮ ಆರೋಗ್ಯಭಾಗ್ಯ ನಮಗೆ ಲಭಿಸಿರುವುದೇ ಈ ಪವಿತ್ರವಾದ ನೀರಿನಿಂದ. ನೀರಿಲ್ಲದ ಒಂದು ದಿನವನ್ನು ಕಲ್ಪಿಸಿಕೊಳ್ಳಿ. ಮನುಶ್ಯನಿಗೆ ಏನಿಲ್ಲದಿದ್ದರೂ ಗಾಳಿ, ನೀರು ಮಾತ್ರ ಅತ್ಯಗತ್ಯವಾಗಿ ಬೇಕು. ನಮಗೆ ಅದರ ಮಹತ್ವ ಗೊತ್ತಿದೆಯೇ? ಎಲ್ಲವೂ ನಮಗೆ ಯಾವ ಸಮಸ್ಯೆಇಲ್ಲದೆ ದೊರಕುತ್ತಿದ್ದಾಗ ಅದರ ಮಹತ್ವ ಗೊತ್ತಾಗುವುದಿಲ್ಲ. ಆದರೆ ಅದರ ಲಭ್ಯತೆ ಕಷ್ಟವಾದಾಗ ಆ ವಸ್ತುವಿನ ಮಹತ್ವ ಗೊತ್ತಾಗುತ್ತದೆ. ನಮ್ಮ ಆರೋಗ್ಯದ ವಿಚಾರದಲ್ಲೂ ಅಷ್ಟೆ. ಮನುಶ್ಯನು ಮಾನಸಿಕವಾಗಿ ದೈಹಿಕವಾಗಿ ಆರೋಗ್ಯವಾಗಿದ್ದಾಗ  ಆರೋಗ್ಯದ ಮಹತ್ವ ಗೊತ್ತಾಗುವುದೇ ಇಲ್ಲ. ಆದರೆ ಒಂದುವಾರ ಹಾಸಿಗೆ ಹಿಡಿದು ಮಲಗಿ ಪುನ: ಸುಧಾರಿಸಿಕೊಂಡು ಹಾಸಿಗೆಯಿಂದ ಎದ್ದಾಗ ಮನುಶ್ಯನ ಮಾನಸಿಕತೆ ಹೇಗಿರುತ್ತದೆ? ಮನುಶ್ಯನು ಬಲು ಸಂತಸಗೊಂಡು ಸ್ನೇಹಿತರೊಡನೆಲ್ಲಾ ತನ್ನ ಸಂತಸವನ್ನು ಹಂಚಿಕೊಳ್ಳುತ್ತಾನೆ. ಈಗ ಯೋಚಿಸೋಣ. ಆರೋಗ್ಯ ಕೆಡುವುದಕ್ಕಿಂತ ಒಂದು ದಿನ ಹಿಂದೆ ಇವತ್ತು ಪಡುತ್ತಿರುವ ಸಂತೋಷ ಅನುಭವಿಸಿದ್ದಿರಾ? ಇಲ್ಲ,  ಎನ್ನುವುದಾದರೆ ಯಾಕೇ?  ಏಕೆಂದರೆ ಆರೋಗ್ಯವಂತ ಬದುಕಿನ ಮಹತ್ವ ನಮಗೆ ಗೊತ್ತಿಲ್ಲ. ಯಾವಾಗ ಆರೋಗ್ಯ ಕೆಡುತ್ತದೆಯೋ ಆಗ ಅದರ ಮಹತ್ವದ ಅರಿವಾಗುತ್ತದೆ.
ನೀರಿನ, ಗಾಳಿಯ ವಿಷಯದಲ್ಲೂ ಅಷ್ಟೆ. ನಾವು ನೀರನ್ನು ಅದೆಷ್ಟು ಪೋಲು ಮಾಡುತ್ತೇವೋ! ವಾತಾವರಣವನ್ನು ಅದೆಷ್ಟು ಕಲುಶಿತಗೊಳಿಸುತ್ತೇವೆಯೋ! ಕಾರಣ ಗಾಳಿ ಮತ್ತು ನೀರನ್ನು ಹಣಕೊಟ್ಟು ಕೊಳ್ಳಲಿಲ್ಲವಲ್ಲಾ! [ನಗರಗಳಲ್ಲಿ  ವಾಟರ್ ಟ್ಯಾಕ್ಸ್ ಕಟ್ಟಿದರೂ ಅದು ಬಲು ಕಡಿಮೆ] ರಸ್ತೆಯಲ್ಲಿ ತಿರುಗಾಡುವಾಗ  ನಾಲ್ಕಾರು ಮನೆಗಳಿಂದ ಓವರ್ ಹೆಡ್ ಟ್ಯಾಂಕ್ ತುಂಬಿ ಚಿರಂಡಿಗೆ ಅದೆಷ್ಟು ನೀರು ಹರಿದು ಹೋಗುತ್ತದೋ! ಅಂತೆಯೇ ಗಾಳಿಯನ್ನು ನಾವು ಅದೆಷ್ಟು ಕಲುಶಿತಗೊಳಿಸುತ್ತೇವೆಯೋ!
ಈ ಮಂತ್ರವನ್ನು ಹೇಳುವಾಗ   ನೀರು ಮತ್ತು ಗಾಳಿಯ ಮಹತ್ವವು ನಮಗೆ  ಅರ್ಥವಾಗಬೇಕು. ಮಹತ್ವವರಿತು  ಅದರಂತೆ ನಡೆದರೆ  ನೀರು ನಮಗೆ ಆರೋಗ್ಯವನ್ನೂ , ಜೀವನದಲ್ಲಿ ನೆಮ್ಮದಿ, ಶಾಂತಿಯನ್ನೂ ನೀಡುತ್ತದೆ.
ಮಂತ್ರ-೩  
ತಸ್ಮಾ ಅರಂ ಗಮಾಮ ವೋ ಯಸ್ಯ ಕ್ಷಯಾಯ ಜಿನ್ವಥ|ಆಪೋ ಜನಯಥಾ ಚ ನ:||
ಅರ್ಥ:
ಯಸ್ಯ ಕ್ಷಯಾಯ ಜಿನ್ವಥ = ಯಾವನನ್ನು ನೆಲೆಗೊಳಿಸಲು ಅವು ಹರಿದುಬರುತ್ತವೋ
ತಸ್ಮೈ = ಅವನಿಗಾಗಿ
ಅರಂ ಗಮಾಮ = ಸೂಕ್ತವಾಗಿ ಬಳಸಿಕೊಳ್ಳುತ್ತೇವೆ [ಅವು]
ನ: = ನಮ್ಮನ್ನು
ಜನಯಥ = ಬಲಪಡಿಸಲಿ
ಭಾವಾರ್ಥ:
ನಮ್ಮ ಕಲ್ಯಾಣಕ್ಕೆಂದೇ ಹರಿಯುವ ಜಲರಾಶಿಯನ್ನು ಸಂಪೂರ್ಣವಾಗಿ ಆಶ್ರಯಿಸುತ್ತೇವೆ. ಅವು ನಮ್ಮ ಬದುಕನ್ನು ನಿರಂತರ ಸಂಮೃದ್ಧಗೊಳಿಸಲಿ.
ಮಂತ್ರ-೪
ಈಶಾನಾ ವಾರ್ಯಾಣಾಂ ಕ್ಷಯಂತೀಶ್ಚರ್ಷಣೀನಾಮ್ |
ಅಪೋ ಯಾಚಾಮಿ ಭೇಷಜಮ್ ||
ಅರ್ಥ:
ವಾರ್ಯಾಣಾಂ = ಅಭಿಲಾಷೆ ಪಟ್ಟ ಇಷ್ಟಾರ್ಥಗಳ
ಈಶಾನಾ ಆಪ: = ಗಂಗಾ ಮಾತೆಯಿಂದ
ಚರ್ಷಣೀನಾಂ = ಜೀವಕೋಟಿಗಳ
ಕ್ಷಯಂತೀ: = ರೋಗಗಳನ್ನು ನಾಶಮಾಡುವ
ಭೇಷಜಂ ಯಾಚಾಮಿ = ಔಷಧಿಯು ದೊರಕಲಿ
ಭಾವಾರ್ಥ:
ಇಷ್ಟಾರ್ಥಗಳನ್ನು ನೀಡುವ ಜಲಧಾರೆಗಳು ನಮಗೆ ದಿವ್ಯ ಔಷಧಿಗಳನ್ನು ನೀಡಲಿ.
ಈ ಎರಡು ಮಂತ್ರಗಳು ನೀರಿನ ವಿಶೇಷ ಗುಣಗಳನ್ನು ವಿವರಿಸುತ್ತಾ ,ಇಂತಾ ಪವಿತ್ರ ನೀರು ನಮ್ಮ ಬದುಕನ್ನು ಸಂಮೃದ್ಧ ಗೊಳಿಸಲೆಂದೂ, ನೀರಿನ ಔಷಧ ಗುಣವು ನಮ್ಮ ಆರೋಗ್ಯವನ್ನು ಚೆನ್ನಾಗಿಟ್ಟಿರಲಿ ಎಂದೂ ಭಗವಂತನನ್ನು ನಾವು  ಈ ಮಂತ್ರದ ಮೂಲಕ ಪ್ರಾರ್ಥಿಸುವಾಗಲೇ ನೀರಿನ ಪಾವಿತ್ರ್ಯವನ್ನು ಹಾಳುಗೆಡವದಂತೆ ನಾನು ಜೀವನ ನಡೆಸುತ್ತೇನೆಂದೂ ಸಹ ಸಂಕಲ್ಪ ಮಾಡಿದಾಗ, ನಮ್ಮ ಸಂಧ್ಯಾವಂದನೆಯು  ನಮ್ಮ ಆರೋಗ್ಯದ ಮೇಲೆ ಸತ್ಪ್ರಭಾವವನ್ನು ಬೀರುವುದಲ್ಲದೆ ನಮ್ಮ ಬದುಕಿನಲ್ಲಿ  ನೆಮ್ಮದಿಯೂ  ಶಾಂತಿಯೂ ನೆಲೆಸುವುದು.

-ಹರಿಹರಪುರಶ್ರೀಧರ್