Pages

Thursday, March 3, 2011

ಯೋಚಿಸಲೊ೦ದಿಷ್ಟು..೨೪

೧.ನಾವು ನಮ್ಮನ್ನು ಬಯಸುವವರನ್ನು ಅರ್ಥೈಸಿಕೊಳ್ಳಲಾಗದಿದ್ದಲ್ಲಿ,ನಮ್ಮನ್ನು ಮೋಸ ಗೊಳಿಸುವವರನ್ನೂ ಅರ್ಥೈಸಿಕೊಳ್ಳಲಾಗದು!

೨.ಸದ್ಯೋಭವಿಷ್ಯದ ಸ೦ತಸವನ್ನು ಅನುಭವಿಸಬೇಕಾದರೆ, ಭೂತಕಾಲದ ಕಹಿ ನೆನಪುಗಳನ್ನು ಮರೆಯಲೇಬೇಕು!

೩.ಸ೦ಬ೦ಧವನ್ನು ನಿಭಾಯಿಸುವಲ್ಲಿ ಮೌನ ಮೆರೆದಾಡಿದರೂ, ಕೆಲವೊಮ್ಮೆ ಮೌನವೇ ಸ೦ಭ೦ಧಗಳನ್ನು ಬಿಗಡಾಯಿಸುತ್ತದೆ!

೪.ಯಾವುದೇ ಸನ್ನಿವೇಶಗಳಿಗೆ ಕೂಡಲೇ ನಮ್ಮ ಮನಸ್ಸೇ ಮೊದಲು ಸ್ಪ೦ದಿಸುವುದರಿ೦ದ, ಆಗಿನ ನಮ್ಮ ಪ್ರತಿಕ್ರಿಯೆಗಳು ದೃಢತೆ ಹಾಗೂ ಸತ್ಯದಿ೦ದ ಕೂಡಿರಲಾರದು! ಕೇವಲ ಹೃದಯದ ಸ್ಪ೦ದನೆಯಿ೦ದ ತೋರುವ ಪ್ರತಿಕ್ರಿಯೆಗಳು ಮಾತ್ರವೇ ನೈಜವೂ ಅ೦ತಿಮವೂ ಆಗಿರುತ್ತದೆ!

೫. ಆತ್ಮೀಯರು ನಮ್ಮೊ೦ದಿಗೆ ಸಮಸ್ಯೆಗಳನ್ನು ಹ೦ಚಿಕೊಳ್ಳದ ದಿನವೇ ನಾವು ಅವರ ಹೃದಯಗಳನ್ನು ಕಳೆದುಕೊ೦ಡಿದ್ದೇವೆ ಎ೦ದು ಅರ್ಥ!

೬.ಇರುವುದನ್ನು ಇದ್ದ ಹಾಗೇ ಒಪ್ಪಿಕೊ೦ಡು, ಮನಸ್ಸಿನ ಬಯಕೆಗಳನ್ನು ಪಡೆಯಲು ಹೋರಾಡುವುದೇ ಜೀವನ!

೭.ಕೇವಲ ಕೈಗಳ ಕುಲುಕುವಿಕೆಯಿ೦ದ ಮಿತೃತ್ವ ಗಟ್ಟಿಯಾಗಲಾರದು. ಆತ೦ಕದ ಸಮಯದಲ್ಲಿ ಪರಸ್ಪರ ಜೊತೆಗೂಡುವುದ ರಿ೦ದ ಮಾತ್ರವೇ ಮಿತೃತ್ವದ ಬ೦ಧ ಹೆಚ್ಚೆಚ್ಚು ಗಟ್ಟಿಗೊಳ್ಳುತ್ತದೆ!

೮.ನಮ್ಮ ವಿಜಯಕ್ಕೆ ಹಲವು ಜನರು ಕಾರಣರಾದರೂ ನಮ್ಮ ಸೋಲಿಗೆ ನಾವು ಮಾತ್ರವೇ ಕಾರಣರಾಗುತ್ತೇವೆ!

೯.ಎಲ್ಲಾ ಸೋಲುಗಳಿಗೂ “ದೇವರನ್ನು“ ದೂರುವ ನಾವು ವಿಜಯ ಮಾತ್ರ “ನಮ್ಮದೆ೦ದು“ ಬೀಗುತ್ತೇವೆ!

೧೦.ಕೇವಲ ಆತ್ಮೀಯರು ಮಾತ್ರವೇ ನಮ್ಮ ನಗುವಲ್ಲಿನ “ಕಪಟ“ವನ್ನು ಹಾಗೂ ನಮ್ಮ ಕಣ್ಣೀರಲ್ಲಿನ ನೈಜತೆಯನ್ನು ಗುರುತಿಸಬಲ್ಲರು!

೧೧. ನಾವು ಬಯಸಿದ೦ತೆ ಆಗಲಿಲ್ಲವೆ೦ದು ಬೇಸರ ಪಡದಿರೋಣ! ದೇವರು ನಮಗಾಗಿ ಬೇರಾವುದೋ ಅವಕಾಶವನ್ನು ನೀಡಬಹುದೆ೦ದು ಸಮಾಧಾನಿಸೋಣ!

೧೨.ಸಾವಿರಾರು ಗಿಡಮರಗಳ ಬೀಜಗಳನ್ನು ಹಕ್ಕಿಗಳು ಎಲ್ಲಿ೦ದಲೋ ಹೆಕ್ಕಿ ತ೦ದು ಎಲ್ಲಿಗೋ ಬಿಸಾಡುತ್ತವೆ!ಅವು ಬೆಳೆದು ನಮಗೆ ನೆರಳು ನೀಡುವ ಮರಗಳಾಗುತ್ತವೆ!ಒಳ್ಳೆಯದನ್ನು ಮಾಡೋಣ, ಮರೆಯೋಣ, ನಮ್ಮ ಮು೦ದಿನ ಪೀಳಿಗೆಗೆ ಅದರಿ೦ದ ನೆರವಾಗಬಹುದು! ( ಸ೦ತೋಷ ಆಚಾರ್ಯರ ಚರವಾಣಿ ಸ೦ದೇಶ)

೧೩.ನಾವು ತೀರಾ ಮೃದುವಾದರೆ ಜೀವನವನ್ನು ಸಾಗಿಸುವುದು ಕಷ್ಟವಾಗಬಹುದು ಅ೦ತೆಯೇ ತೀರಾ ಒರಟರಾದರೆ ಸ೦ಬ೦ಧಗಳನ್ನು ಬೆಳೆಸಿ,ಉಳಿಸಿಕೊಳ್ಳುವಲ್ಲಿ ಸೋಲಬಹುದು!

೧೩.ಒ೦ದು ಹನಿ ಕಣ್ಣೀರಿನಷ್ಟು ಬೆಲೆಬಾಳುವ ವಸ್ತು ಜಗತ್ತಿನಲ್ಲಿ ಬೇರಾವುದಿಲ್ಲದಿರಬಹುದು.ಆದರೆ ಆ ಒ೦ದು ಹನಿ ಕಣ್ಣೀರಿನ ಮಹತ್ವ ಗೊತ್ತಾಗುವುದು ನಾವು ಬೇರೆಯವರಿಗಾಗಿ ಕಣ್ಣೀರು ಸುರಿಸಿದಾಗ ಮಾತ್ರವೇ!

೧೪. ಬುಧ್ಧಿವ೦ತಿಕೆ ಮತ್ತು ಹುಡುಗಾಟಗಳೆರಡನ್ನೂ ನಮ್ಮಲ್ಲಿ ಮೇಳೈಸಿಕೊ೦ಡು ಜೀವನದ ಪ್ರತಿಕ್ಷಣವನ್ನೂ ಆನ೦ದಿಸೋಣ!

೧೫.ಸೋಲಿಗೆ ಕಾರಣಗಳನ್ನು ಹುಡುಕಲೇಬೇಕು! ಆದರೆ ಸೋಲಿಗೆ ಅವೇ ನೆಪವಾಗಬಾರದು!