Pages

Friday, February 19, 2016

ಮಾನವ ಜನ್ಮವನ್ನು ಸಾರ್ಥಕ ಪಡಿಸಿಕೊಳ್ಳೋಣ

 ಶ್ರೀ ಕೃಷ್ಣಮೂರ್ತಿಯವರು ಬೇಲೂರು ತಾಲ್ಲೂಕು ಆಂದಲೆ ಗ್ರಾಮದಲ್ಲಿ ಶನಿದೇವಾಲಯದ ಅರ್ಚಕರು.  ದಲಿತ ಕುಟುಂಬಕ್ಕೆ ಸೇರಿದ ಶ್ರೀಯುತರಿಗೆ ಮಕ್ಕಳಿಗೆ ವೇದೋಕ್ತವಾಗಿ ಉಪನಯನ ಮಾಡಿಸುವಾಸೆ. ವೇದಭಾರತಿಯನ್ನು ಸಂಪರ್ಕಿಸಿದರು.ನಾವು ಅತ್ಯಂತ     ಸಂತೋಷದಿಂದ ಒಪ್ಪಿಕೊಂಡೆವು. ದಿನಾಂಕ ೧೯.೨.೨೦೧೬ ರಂದು ಬ್ರಹ್ಮೋಪನಯನಕ್ಕೆ ಮುಹೂರ್ತ ಕೂಡಿಬಂತು. ಶನಿದೇವಾಲಯದ ಮುಂದೆ ಶಾಮಿಯಾನ ಹಾಕಿ  ಅಶ್ವತ್ಥ ವೃಕ್ಷದ ಕೆಳಗೆ ಕಾರ್ಯಕ್ರಮ ನಡೆಸಲಾಯ್ತು. ವೇದಾಧ್ಯಾಯೀ ಶ್ರೀ ನವೀನ್ ಅವರಿಗೆ ಸಹಕಾರಿಯಾಗಿ ವೇದಭಾರತಿಯ ಕಾರ್ಯಕರ್ತರು ನಿಂತೆವು.  ಕಾಲೊನಿಯ ಜನರೆಲ್ಲಾ ಬಂದರು. ಬ್ರಹ್ಮೋಪದೇಶ ಆದನಂತರ ವೇದಾಧ್ಯಾಯೀ ಶ್ರೀ ನವೀನ್  ಬ್ರಹ್ಮೋಪದೇಶದ ಬಗ್ಗೆ ತಿಳಿಸಿದರೆ "ಎಲ್ಲರಿಗಾಗಿ ವೇದ " ಪರಿಚಯವನ್ನು ಹರಿಹರಪುರಶ್ರೀಧರ್ ಮಾಡಿಕೊಟ್ಟರು.ವೇದಭಾರತಿಯ ಗೌರವಾಧ್ಯಕ್ಷರಾದ ಶ್ರೀ ಕವಿ ನಾಗರಾಜ್ ಅವರು ಸಮಾರಂಭ ಕುರಿತು ಮೆಚ್ಚುಗೆಯ ಮಾತನಾಡಿದರು . ವಟುವಿನ ತಂದೆ ಕೃಷ್ಣ ಮೂರ್ತಿಗಳ ಹೃದಯಾಂತರದ  ಮಾತು  ನಮ್ಮೆಲ್ಲರಲ್ಲೂ ಸಾರ್ಥಕತೆಯ ಭಾವ ಮೂಡಿಸಿತು. 
ಕೃಷ್ಣ ಮೂರ್ತಿಗಳ  ಮನದಾಳದ ಮಾತು

" ನನಗೆ ಇಂದು ಅತ್ಯಂತ ಸಂತೋಷವಾಗುತ್ತಿದೆ. ವೇದೋಕ್ತವಾಗಿ ನನ್ನ ಮಗನಿಗೆ ವೇದಭಾರತಿಯವರು ಉಪನಯನ ಮಾಡಿದ್ದಾರೆ.   ಇಂತಾ ಒಂದು  ಪವಿತ್ರ  ಕಾರ್ಯಕ್ರಮ ಹಿಂದೆ  ಎಂದೂ ಆಗಿರಲಿಲ್ಲ.   ನಮ್ಮ ಸಮುದಾಯಕ್ಕೆ  ಹಿಂದು ಸಮಾಜದಲ್ಲಿ ಗೌರವ ಸಿಗಬೇಕಾದರೆ ನಮ್ಮ ಬದುಕು ಪರಿಶುದ್ಧವಾಗಿರಬೇಕು.  ನಾವು  ಮಾಂಸಾಹಾರವನ್ನಾಗಲೀ ಬೇರೆ ಯಾವ ತಾಮಸ ಆಹಾರವನ್ನೂ ತೆಗೆದುಕೊಳ್ಳದಿರುವ ದೃಢ ನಿರ್ಧಾರ ಮಾಡಬೇಕು.  ಮೇಲು-ಕೀಳಿಗೆ ವೇದದಲ್ಲಿ ಅವಕಾಶವೇ ಇಲ್ಲ, ನಾವೆಲ್ಲಾ ಭೂತಾಯಿಯ ಮಕ್ಕಳು.ನಾವೆಲ್ಲಾ ಅಣ್ಣ ತಮ್ಮ, ಅಕ್ಕ-ತಂಗಿಯರೆಂದು ವೇದವು ಸಾರುತ್ತದೆಂಬ ಅಂಶವನ್ನು ವೇದದ ಆಧಾರದಲ್ಲೇ ತಿಳಿದು ಸಂತೋಷವಾಗಿದೆ. ನಾವೆಲ್ಲಾ ಸೇರಿ ಹಿಂದು ಸಮಾಜಕ್ಕೆ ಶಕ್ತಿಯನ್ನು ತುಂಬಬೇಕು. ಅನ್ಯಮತೀಯರು ನಮಗೆ ಆಮಿಶ ಒಡ್ಡಿ ಮತಾಂತರಕ್ಕೆ ಪ್ರಯತ್ನಿಸುತ್ತಿದ್ದಾರೆ . ನಾವು   ಎಚ್ಚರದಿಂದ ಇರಬೇಕು.  ಹಿಂದು  ಸಮಾಜದಲ್ಲಿ ನಾವು ನೆಮ್ಮದಿಯಾಗಿ ಬಾಳಲು ಅವಕಾಶ ಇದ್ದೇ ಇದೆ.  ಎಂಬತ್ನಾಲ್ಕು ಲಕ್ಷ  ಜೀವಿಗಳಲ್ಲಿ ಮಾನವ ಜನ್ಮ ದೊಡ್ಡದು.   ನಾವು ವೇದದ ಆಶಯದಂತೆ ನಡೆದರೆ ಇನ್ನೂ ಉನ್ನತ ಸ್ಥಿತಿಯಲ್ಲಿ ನಮ್ಮ ಮುಂದಿನ ಜನ್ಮವಾಗುತ್ತದೆ.  ಇಲ್ಲವಾದಲ್ಲಿ ಮತ್ತೆ ನಮಗೆ ಮಾನವ ಜನ್ಮ ಸಿಗಲು ಎಂಬತ್ನಾಲ್ಕು ಲಕ್ಷ ಜನ್ಮಗಳನ್ನೆತ್ತಬೇಕಾಗುತ್ತದೆ.ಆದ್ದರಿಂದ ಸಿಕ್ಕಿರುವ ಈ ಮಾನವ ಜನ್ಮವನ್ನು ಸಾರ್ಥಕ ಪಡಿಸಿಕೊಳ್ಳೋಣ. 
  ಬ್ರಹ್ಮೋಪನಯನಕ್ಕೆ ವಟು ವೇದಿಕೆಗೆ ಬಂದದ್ದು ಹೀಗೆ

ಬೇಲೂರಿನ ಸುಬ್ರಹ್ಮಣ್ಯ ದಂಪತಿಗಳಿಂದ ಬ್ರಹ್ಮಚಾರಿಗೆ ಭಿಕ್ಷೆ

ಎಲ್ಲರಿಗಾಗಿ ವೇದ ಪರಿಚಯ ನುಡಿ



ವಟುವಿನ ತಂದೆ ಕೃಷ್ಣಮೂರ್ತಿಗಳ ಹೃದಯಾಳದ ಮಾತು

ವೇದಾಧ್ಯಾಯೀ ಶ್ರೀ ನವೀನ್ ಶರ್ಮರಿಂದ ಬ್ರಹ್ಮೋಪನಯನದ ಬಗ್ಗೆ ನಾಲ್ಕು ಮಾತು