Pages

Saturday, June 2, 2012

ಯಾಕೆ ಅವರು ಮನುಷ್ಯರಲ್ಲವೇ?ಮನುಷ್ಯನಿಗೆ ತನ್ನನ್ನು ಉತ್ತಮಪಡಿಸಿಕೊಳ್ಳಲು ಚಿಕ್ಕ ಪುಟ್ಟ ಘಟನೆಗಳೂ ಪ್ರೇರಣೆ ಕೊಡಬಲ್ಲವು, ಸಾಮಾನ್ಯ ಜನರೂ ಪ್ರೇರಕರಾಗಬಲ್ಲರು. ಈ ಮಾತನ್ನು ಹೇಳಲು ಇಂದು ನಾನು ಸಾಕ್ಷಿಯಾದ ಒಂದು ಘಟನೆಯನ್ನು ಇಲ್ಲಿ ಬರೆಯುವೆ. ಇಂದು ಹಿಂದು ಸಾಮ್ರಾಜ್ಯೋತ್ಸವ ಪ್ರಯುಕ್ತ ಆರ್.ಎಸ್.ಎಸ್. ನವರು ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಬೆಳಿಗ್ಗೆ ಏಳು ಗಂಟೆಗೆ ಹೋಗಿದ್ದೆ. ಕಾರ್ಯಕ್ರಮಮುಗಿಸಿ ಒಂದು ಹೋಟೆಲ್ ನಲ್ಲಿ ಮಿತ್ರನೊಡನೆ ಕಾಫಿ ಹೀರುತ್ತಾ ಕುಳಿತೆ. ಎದುರು ಮೇಜಿನಲ್ಲಿ ಕುಳಿತಿದ್ದ ಮಧ್ಯ ಪ್ರಾಯದ ವ್ಯಕ್ತಿಯೋರ್ವರು " ಸಾರ್, ಸಾರ್ , ಎಂದು ಕರೆದರು" ಹತ್ತಿರದಲ್ಲಿಯೇ ಇದ್ದ ಮಾಣಿ ಅವರತ್ತ ನೋಡದೆ ಸುಮ್ಮನೆ ನಿಂತಿದ್ದರು. ಮತ್ತೆ ಆತ " ಸಾರ್ ನಿಮ್ಮನ್ನೇ ಕರೆಯುತ್ತಿರುವುದು" ಎಂದು ಮಾಣಿಯನ್ನುದ್ಧೇಶಿಸಿ ಮತ್ತೆ ಕರೆದರು. ಆಗ ಎಚ್ಚೆತ್ತ ಮಾಣಿ " ಸಾರ್, ಹೇಳಿ, ಏನು ಬೇಕು?-  ಕೇಳಿದರು.

ಆ ವ್ಯಕ್ತಿ ತಮಗೆ ಬೇಕಾದ್ದನ್ನು ಹೇಳಿದರು. ಮಾಣಿ ಖುಷಿಯಿಂದ ಅವರ ಸೇವೆಯಲ್ಲಿ ತೊಡಗಿಸಿಕೊಂಡರು. ಕುಟುಂಬ ಸಹಿತ ಬಂದಿದ್ದ ಆ ವ್ಯಕ್ತಿಗೆ ಬಲು ಸಂತಸದಿಂದ ಅವರಿಗೆ ಬೇಕಾದ್ದನ್ನು ತಂದು ಅವರ ಮಕ್ಕಳೊಡನೆ ತಮಾಶೆ ಮಾಡಿಕೊಂಡು ಖುಷಿಯಾಗಿದ್ದರು.ಈ ಘಟನೆ ನೋಡುತ್ತಿದ್ದ ನಮಗೆ ಏಳಲು ಮನಸ್ಸೇ ಬರಲಿಲ್ಲ. ಅವರ ಸಂಭಾಷಣೆಯನ್ನು ಸ್ವಲ್ಪಹೊತ್ತು ಆಲಿಸಿ ನಂತರ ಎದ್ದು ಹೊರಬರುವಾಗ ಆವ್ಯಕ್ತಿಯ ನಗುಮುಖ ಹಾಗೆಯೇ ನನ್ನ ಮನ: ಪಟಲದ ಮೇಲೆ ಉಳಿದಿತ್ತು.ಅಲ್ಲಿಂದ ಮನೆಗೆ ಬರುವ ವೇಳೆಗೆ   ಸಿಮೆಂಟ್ ನಲ್ಲಿ ಮಾಡಿದ್ದ ಕುಂಡಗಳನ್ನು ತಳ್ಳುವ ಗಾಡಿಯಲ್ಲಿಟ್ಟು  ಮಾರಾಟಮಾಡುತ್ತಿದ್ದುದನ್ನು ಕಂಡೆ.ವಿಚಾರಿಸಿದೆ. ಒಂದು ಕುಂಡಕ್ಕೆ 30 ರೂಪಾಯಿ ಹೇಳಿದರು. ಎಂಟು ಕುಂಡಗಳನ್ನು ಕೊಂಡೆ. ಮೂರು ಮಹಡಿಗಳನ್ನು ಹತ್ತಿ  ಆರ್.ಸಿ.ಸಿ. ಮೇಲೆ ಆ ಕುಂಡಗಳನ್ನು ಸಾಗಿಸಬೇಕು. ಮಾರಾಟಗಾರನಲ್ಲಿ ಮನವಿ ಮಾಡಿಕೊಂಡೆ, ಆಯ್ತು ಸಾರ್, ಅಲ್ಲಿಯೇ ಇಟ್ಟು ಬರುತ್ತೀನೆಂದರು. ಕೆಲಸ ಆಯ್ತು. ಜೊತೆಗೆ ಇಪ್ಪತ್ತು ರೂಪಾಯಿ ಸೇರಿಸಿ ಕೊಟ್ಟೆ.

ಆ ವ್ಯಕ್ತಿ ಹೇಳಿದರು" ಸಾರ್ 240 ಆಗುತ್ತೆ. 260 ರೂಪಾಯಿ ಕೊಟ್ಟಿದ್ದೀರಲ್ಲಾ! 

ನಾನು ಹೇಳಿದೆ" ನನ್ನ ಕೈಲಿ ಅಲ್ಲಿಗೆ ಸಾಗಿಸಲು ಕಷ್ಟವಾಗುತ್ತಿತ್ತು. ನೀವು ಸಹಾಯ ಮಾಡಿದಿರಲ್ಲಾ, 20 ರೂಪಾಯಿ ಎಕ್ಸ್ಟ್ರಾ ಕೊಟ್ಟಿರುವೆ, ಎಂದೆ. ರಸ್ತೆಯಲ್ಲಿ ಬರುವಾಗ ಮಾವಿನಹಣ್ನು ತಂದಿದ್ದೆ. ಒಂದು ಮಾವಿನಹಣ್ಣು  ಕೊಟ್ಟೆ. ಆ ಮುಖದ      ನ ಸಂತೋಷ ನೋಡಬೇಕು!..........
ನಿಜವಾಗಿ ತಳ್ಳು ಗಾಡಿಯವರನ್ನು, ತಲೆಯ ಮೇಲೆ ಹೊತ್ತು ಮಾರುವವ ರನ್ನು       ,ಕೂಲಿ ಕೆಲಸ ಮಾಡುವವರನ್ನು , ಆಟೊ ಡ್ರೈವರ್ ಗಳನ್ನು, ಹೋಟೆಲ್ ಮಾಣಿಗಳನ್ನು ಎಷ್ಟು ಕೇವಲ ವಾಗಿ ಕಾಣುತ್ತೀವಲ್ಲವೇ? ಯಾಕೆ ಅವರು ಮನುಷ್ಯರಲ್ಲವೇ? 
ಬೆಂಗಳೂರಿನ ಹನುಮಂತನಗರದಿಂದ ವಿಜಯನಗರಕ್ಕೆ ಆಟೋದಲ್ಲಿ ಬಂದೆ. ಆಟೋಚಾಲಕ  ಚಿಕ್ಕ ಚಿಕ್ಕ ರಸ್ತೆಗಳಲ್ಲಿ ಸಾಗಿ ವಿಜಯನಗರ ತಲುಪಿದರು. ಮನೆ ಮುಂದೆ ನಿಂತಾಗ " ಎಷ್ಟಾಯಿತು? " ಎಂದೆ. 57 ರೂಪಾಯಿ ಸಾರ್,  ಮೀಟರ್ ದರ ಹೆಚ್ಚಿದಮೇಲೆ ಹೆಚ್ಚಿನ ದರದ ಪಟ್ಟಿಯಂತೆ 68 ರೂಪಾಯಿ ಕೊಡಿ ಎಂದು ಹೇಳಿದರು.ನೂರು ರೂಪಾಯಿ ಕೊಟ್ಟೆ. 30ರೂಪಾಯಿ ಹಿಂದಿರುಗಿಸಿದವರು ಎರಡು ರೂಪಾಯಿಗಾಗಿ ಜೇಬೆಲ್ಲಾ ಹುಡುಕುತ್ತಿದ್ದರು. ಪರವಾಗಿಲ್ಲ ಎಂದೆ.ಆ ಹೊತ್ತಿಗೆ ಮನೆಯೊಳಗಿದ್ದ ನನ್ನ ತಂಗಿ ಹೊರಬಂದು" ಈ ಆಟೋದವರು ಹೊಸಬರನ್ನು ಕಂಡರೆ ಸುಲಿಗೆ ಮಾಡಿ ಬಿಡ್ತಾರೆ, ಎಂದು ಬಿಟ್ಟಳು. ನನಗೆ ತುಂಬಾ ಕಸಿವಿಸಿಯಾಯ್ತು. "ಇಲ್ಲಮ್ಮ, ಅವರು ಸರಿಯಾಗಿಯೇ ಬಂದಿದ್ದಾರೆ. ಸರಿಯಾಗಿಯೇ ಹಣತೆಗೆದುಕೊಂಡಿದ್ದಾರೆ, ಎಂದರೂ ಅವಳಿಗೆ ಸಮಾಧಾನವಾಗುತ್ತಿಲ್ಲ, ಡ್ರೈವರ್ ಗೆ ವಿದಾಯ ಹೇಳಿ, ನನ್ನ ತಂಗಿಗೆ ಕ್ಲಾಸ್ ತೆಗೆದುಕೊಂಡೆ. ಪಾಪ! ಆಟೋ ಡ್ರೈವರ್ ಬಹಳ ಸಮೀಪದ ಹಾದಿಯಲ್ಲಿ ಬಂದು ನನಗೆ ಉಳಿತಾಯ ಮಾಡಿದ್ದರು. ಹಾಗಂತ  ಎಲ್ಲರೂ  ಹಾಗೆಯೇ ಇರ್ತಾರೆ, ಅಂತಲ್ಲ. ಆದರೆ ನನ್ನ ಅನುಭವವೆಂದರೆ ನನಗೆ ಯಾರೂ ಮೋಸ ಮಾಡಿಯೇ ಇಲ್ಲ.


[ಚಿತ್ರಗಳು ಗೂಗಲ್  ಕೃಪೆ]