Pages

Tuesday, March 27, 2012

ದೈವಾಂಶ ಸಂಭೂತರಿಗೆ ಮಾತ್ರ ಎಲ್ಲರಲ್ಲೂ ದೇವರು ಕಾಣುತ್ತಾನೆ

ಓದುವುದನ್ನು ಆರಂಭಿಸಿದಾಗಿನಿಂದ ಬ್ರಾಹ್ಮಣರ ಬಗ್ಗೆ ಒಂದು ವರ್ಗದ ಆಪಾದನೆಗಳನ್ನು ಕೇಳುತ್ತಲೇ ಬಂದಿದ್ದೇನೆ. ಅದೇನೋ ಎಲ್ಲರೂ 'ಪುರೋಹಿತ ಶಾಹಿ' ಅನ್ನೋ ಪದದ ಧಾರಾಳ ಬಳಕೆ ಮಾಡುತ್ತಾರೆ. ಹಾಗಂದರೇನು ಅಂಥ ನಂಗೆ ಗೊತ್ತಿಲ್ಲ ಶೋಷಿತವರ್ಗ ಶೋಷಣೆ ಗಳನ್ನ ಮರೆಯೋದು ಅಷ್ಟು ಸುಲಭವಲ್ಲವೇನೋ? ಆದರೆ ತೆಗಳಿಕೆ ಯಾರಿಗೆ ಇಷ್ಟವಾಗತ್ತೆ? ನಂಗೂ ಬೇಜಾರಾಗ್ತಿತ್ತು. ಈಗ ಅಷ್ಟಾಗಲ್ಲ. ಈ ಘಟನೆ ನಡೆದ ಮೇಲೆ ಬೇಸರದ ಭಾವ ಇನ್ನೂ ಕಡಿಮೆಯಾಗಿದೆ. ಗುಡಿಯ ಸಂಭ್ರಮ ಅಂಥ ಒಂದು ಕಾರ್ಯಕ್ರಮವನ್ನ, ಬೆಂಗಳೂರಿನ ಕೆಲವು ಗುಡಿಗಳಲ್ಲಿ ಆಯೋಜಿಸಿದ್ದರು. ಮಲ್ಲೇಶ್ವರದ ವೇಣುಗೋಪಾಲ ಸ್ವಾಮಿಯ ಗುಡಿ ನಾನು ಯಾವಾಗಲೂ ಹೋಗುವ ಗುಡಿಗಳಲ್ಲೊಂದು. ಅಲ್ಲೂ ಗುಡಿಯ ಸಂಭ್ರಮದ ಕಾರ್ಯಕ್ರಮವಿತ್ತು, ಪ್ರಕಾಶ್ ಬೆಳವಾಡಿಯವರ ಒಂದು ನಾಟಕ ಇತ್ತು. ನೋಡೋಕೆ ಹೋಗಿದ್ದೆವು. ಆವತ್ತು ಗುಡಿಯಲ್ಲಿ ಏನೋ ವಿಶೇಷ ಪೂಜೆ. ಸ್ವಾಮಿ ಗರುಡ ವಾಹನದ ಮೇಲೆ ಅಲಂಕೃತ ನಾಗಿ ಮೆರವಣಿಗೆಗೆ ಸಿಧ್ಧನಾಗಿ ಕುಳಿತಿದ್ದ. ಉತ್ಸವ ಮುಗಿದ ಮೇಲೆ, ಒಳಗೆ ಗರ್ಭಗುಡಿಯ ದೇವರ ನೋಡಲು ನಾನು ಮತ್ತು ನನ್ನ ಮಗ ಹೋದೆವು. ಅಲ್ಲೇ ಪ್ರಾಂಗಣದಲ್ಲಿ ಸಾಲಾಗಿ ಒಂದಷ್ಟು ಜನ ಕೂತಿದ್ದರು. ಅವರೆಲ್ಲರೂ ಶ್ರೀ ವೈಷ್ಣವರು . ಆ ಗುಡಿಗೆ ಶ್ರೀ ವೈಷ್ಣವ ಭಕ್ತರೇ ಪ್ರಮುಖರು . ಹಾಗೆ ಕೂತವರ ಮುಂದೆ ಎಲೆ ಇತ್ತು, ಪ್ರಸಾದ ಬಡಿಸುತ್ತಿದ್ದರು. ನಾವು ದೇವರ ನೋಡಿ ನಮಸ್ಕಾರ ಮಾಡಿ ಹೊರ ಬರುವಾಗ ಮಗನ ಕಣ್ಣು ಎಲೆಯ ಮೇಲೆ ಹೋಯಿತು. ಎಂದೂ ಬಾಯ್ತೆರೆದು ತಿನ್ನಲು ಕೇಳದ ಮಗ " ಅಮ್ಮ, ಓರು ಓಲಕ್ಕಿ ತಿಂತಿದಾರೆ, ನಂಗೂ ಬೇಕು" ಅಂದ. ಹೇಗೆ ಕೇಳೋದು?, ಅಲ್ಲಿ ಸಾರ್ವ ಜನಿಕರನ್ನ ಅವರು ಕರೆಯುತ್ತಿರಲಿಲ್ಲ. ಹಾಗೆ ಮರೆಸಿ ಹೊರಗೆ ಕರಕೊಂಡು ಬಂದೆ. ಅವ ಮರೆಯಲಿಲ್ಲ. ಸರಿ ಎಂದೂ ತಿನ್ನಲು ಕೇಳದ ಮಗ ಕೇಳುತ್ತಿದ್ದಾನೆ, ತಿಂತಾನೇನೋ ಅನ್ನೋ ಆಸೆ ಇಂದ, ನಾನು ನನ್ನ ಪತಿ ಮತ್ತೆ ದೇವಳದ ಒಳಗೆ ಹೋದೆವು. ಅಷ್ಟು ಹೊತ್ತಿಗೆ ಕಚ್ಚೆ ಉಟ್ಟ ಶ್ರೀ ವೈಷ್ಣವ ಹೆಂಗಸರು, ಗಂಡಸರು ತಿಂದ ಎಲೆ ಹಿಡಿದು ಕೊಂಡು ಕೈ ತೊಳೆಯಲು ಹೊರ ಬರುತ್ತಿದ್ದರು. ಆದರೂ ಬಡಿಸುತ್ತಿದ್ದವರನ್ನ "ಸ್ವಲ್ಪ ಪ್ರಸಾದ ಕೊಡ್ತಿರಾ" ಅಂದೆ. "ಖಾಲಿಯಾಯ್ತು" ಅನ್ನೋ ಉತ್ತರ ಬಂತು. ಮತ್ತೆ ಮಗ ಕೇಳಿದ. ಅಲ್ಲೇ ಇದ್ದ ಒಬ್ಬ ಹೆಂಗಸು ಅಲ್ಲಿ ಹಾಲ್ ನ ಒಳಗೆ ಕೊಡ್ತಾರೆ ಹೋಗಿ ಕೇಳಿ ಅಂದರು. ಸರಿ ಅಲ್ಲೂ ಹೋದೆವು. ಮತ್ತೆ ಕೇಳಿದೆವು. ನೋಡ್ತೀನಿ ಅಂದ ಒಬ್ಬ ಪುಣ್ಯಾತ್ಮ ಫೋನ್ ಬಂದು ಮಾಯವಾದರು . ಅಷ್ಟು ಹೊತ್ತಿಗೆ ಮೊದಲು ಕೇಳಿದ್ದ ವ್ಯಕ್ತಿ ಮತ್ತೆ ಬಂದರು. ಈ ಬಾರಿ ನೋಡ್ತೀನಿ ಅಂತ ಒಳ ಹೋದರು. ಹಾಲ್ ನಲ್ಲಿ ನಮ್ಮ ಮುಂದೆ ಸಾಲಾಗಿ ಎಲೆ ಇಟ್ಟು, ಪುಷ್ಕಳವಾಗಿ ಕದಂಬಂ, ಪೊಂಗಲ್ ಮತ್ತಿನ್ನಿನೇನೋ ಹೆಸರುಗಳ ಪ್ರಸಾದಗಳನ್ನ ಬಡಿಸುತ್ತಿದ್ದರು. ಬಕೆಟ್ ತುಂಬಾ ಇದ್ದ ಪ್ರಸಾದಗಳು ನಮ್ಮ ಕಣ್ಣು ಕುಕ್ಕುತ್ತಿದ್ದವು. ಮುಂದೆಯೇ ರಾಶಿ ಬಾಳೆಯೂ ಬಿದ್ದಿತ್ತು. ಸರಿ ಬಿಡು ಒಂದು ಎಲೆಯಲ್ಲಿ ಕೊಡ್ತಾರೆ ಅಂಥ ನಾವು ನಿಂತೆವು . ಒಳ ಹೋದಾತ ಬಂದರು "ತಗೋಳಮ್ಮ" ಅಂಥ ಒಂದು ಸೌಟಿನಲ್ಲಿ ಪೊಂಗಲ್ ತಂದಿದ್ದರು. ನಾನು ಒಂದು ಬಾಳೆ ಎಲೆ ಕೇಳೋಣ ಅನ್ನೋ ಅಷ್ಟರಲ್ಲಿ, ತುದಿ ಇಂದ ಒಂದು ತುತ್ತು ಪೊಂಗಲನ್ನು ನನ್ನ ಕೈಗೆ ಹಾಕಿ ಹೊರಟು ಹೋದರು . ಮಗ "ಇದು ಓಲಕ್ಕಿ ಅಲ್ಲ, ನಂಗೆ ಬೇಡ" ಅಂಥ ಮೂತಿ ತಿರುವಿದ. ಸರಿ ಹೊರ ಹೋಗಿ ಅವನಿಗೆ ಬೇರೇನೋ ಕೊಡಸಿ ಸಮಾಧಾನ ಮಾಡಿದೆವು. ಅವರು ಒಳಕರೆದು ಪ್ರಸಾದ ಕೊಡಲೆಂದು ನಾ ನೀರಿಕ್ಷಿಸಿರಲಿಲ್ಲ, ಕೇಳಿದ್ದು ನಾನೂ ಅಲ್ಲ. ಒಂದು ಮಗು ಅಷ್ಟು ಸ್ಪಷ್ಟವಾಗಿ ನನಗೆ ಪ್ರಸಾದ ಬೇಕು ಅಂದಾಗಲೂ ಕೊಡದೆ ಹೋದದ್ದು ಎಷ್ಟರ ಮಟ್ಟಿಗೆ ಸರಿ? ಇಂಥ ವರ್ತನೆಗಳು ಬ್ರಾಹ್ಮಣರ ವಿರುಧ್ಧದ ಆರೋಪಗಳಿಗೆ ತುಪ್ಪ ಸುರಿಯಲಾರವೇ? ಭಗವಂತನ ನಾಮವನ್ನ ಎಲ್ಲ ಸ್ತರದವರಿಗೆ ತಲುಪಿಸುವ ಸಲುವಾಗಿ ಗೋಪುರದ ಮೇಲಿಂದ ನಾಮವನ್ನ ಉಚ್ಚರಿಸಿದ ಭಗವದ್ ರಾಮಾನುಜರ ಶಿಷ್ಯ ಪರಂಪರೆ ಇಲ್ಲಿಗೆ ಬಂತೇ? ಕಲ್ಲು ಕೃಷ್ಣನ ಕೈಗೆ ಬೆಣ್ಣೆ ಮುದ್ದೆಯನಿಟ್ಟವರಿಗೆ ಒಂದು ಮಗುವಿನಲ್ಲಿ ಕೃಷ್ಣ ಕಾಣಲಿಲ್ಲವೇ? ಈ ಬರಹದ ಹಿಂದಿನ ಉದ್ದೇಶ ಯಾರನ್ನೂ ಹಳಿಯುವುದಲ್ಲ. ನನಗೆ ವೇಣುಗೋಪಾಲನ ಸನ್ನಿಧಿ ಇಂದಿಗೂ ಪ್ರಿಯವೇ. ಆದರೆ ಪುರದ ಹಿತವನ್ನ ಬಯಸಬೇಕಾದ ಪುರೋಹಿತ , ಒಳಿತನ್ನು ಆಚರಿಸಿ ತೋರಿಸಬೇಕಾದ ಜ್ಞಾನಿ ಆಚಾರ್ಯ ಎಲ್ಲಿ ಕಳೆದು ಹೋದ? ಎಂಬ ಪ್ರಶ್ನೆ ಕಾಡುತ್ತೆ. ಮಾರನೆ ದಿನ ನನ್ನ ಸಹೋದ್ಯೋಗಿಗಳೊಂದಿಗೆ ಈ ಪ್ರಸಂಗ ಹೇಳುತ್ತಿದ್ದೆ . ಒಬ್ಬರೆಂದರು, "ನಾನು ಗುರು ರಾಘವೇಂದ್ರ ವೈಭವ ನೋಡುತ್ತೇನೆ. ಅದರಲ್ಲಿ ಗುರುಗಳು ಎಲ್ಲರನ್ನೂ ಎಷ್ಟು ಪ್ರೀತಿ ಇಂದ ಕಾಣುತ್ತಾರೆ. ಆದರೆ ಇಂದಿನ ರಾಯರ ಮಠಗಳಿಂದ ಅದನ್ನ ನೀರಿಕ್ಷಿಸಬಹುದೇ? ಬಹುಶಃ ದೈವಾಂಶ ಸಂಭೂತರಿಗೆ ಮಾತ್ರ ಎಲ್ಲರಲ್ಲೂ ದೇವರು ಕಾಣುತ್ತಾನೆ". ಅವರ ಮಾತು ನನ್ನ ಮನಸನ್ನ ಇನ್ನೂ ತಿಳಿಯಾಗಿಸಿತು. ನನಗೆ ಅಲ್ಲಿದ್ದ ಯಾರೂ ವೈಯುಕ್ತಿವಾಗಿ ಪರಿಚಯದವರಲ್ಲಿ. ಯಾವ ವರ್ಗದ ಬಗ್ಗೆಯೂ ನನಗೆ ಸಿಟ್ಟಿಲ್ಲ. ಇದು, ಉಣ್ಣಲು ಕೇಳಿದ ಮಗುವಿಗೆ ಇಕ್ಕಲಾಗದೇ ಹೋದ ತಾಯ ಭಾವ ಮಾತ್ರ.
 -ಸ್ವರ್ಣ

 [ಸೋದರೀ ಸ್ವರ್ಣ ಅವರು ಮೇಲಿನ ತಮ್ಮ ಆ೦ತರಾಳದ ಮಾತನ್ನು ತಮ್ಮ ಬ್ಲಾಗ್ ನಲ್ಲಿ ಪ್ರಕಟಿಸಿ ನನಗೆ ನೋಡಲು ಮೇಲ್ ಮಾಡಿದ್ದರು. ಅದನ್ನಿಲ್ಲಿ ಪ್ರಕಟಿಸಲಾಗಿದೆ. ಹಲವು ದೇವಾಲಯಗಳಲ್ಲಿ ಇಂದಿಗೂ ನಡೆಯುತ್ತಿರುವ ಭೇಧಭಾವವನ್ನು ಗಮನಿಸಿದರೆ ಇನ್ನೂ ಯಾವ ಕಾಲಕ್ಕೆ ಈ ವ್ಯವಸ್ಥೆಗಳು ಮಾನವೀಯ ನೆಲೆಯಮೇಲೆ ಮಾರ್ಪಾಡಾಗುತ್ತದೆ! ಎಂಬ ಬೇಸರ ಕಾಡುತ್ತದೆ] -ಹರಿಹರಪುರ ಶ್ರೀಧರ್, ಸಂಪಾದಕ,ವೇದಸುಧೆ



                ಮಗನ ಮದುವೆ ಹತ್ತಿರವಾಗುತ್ತಿದೆ. ಇನ್ನು ಆಹ್ವಾನ ಪತ್ರಿಕೆ ಹಿಡಿದು ಸುತ್ತಲೇ ಬೇಕು. ಮೇ 7 ಕ್ಕೆ ಮದುವೆ.
ಬೆಂಗಳೂರಿನಲ್ಲಿ.ಅಂತರ್ಜಾಲ ತಾಣದ ಮಿತ್ರರೆಲ್ಲರಿಗೆ ಮೇಲ್ ಮೂಲಕವೇ ಆಹ್ವಾನಿಸುವೆ. ಸಮಯ ಇನ್ನೂ ಇದೆ. ಇನ್ನು 
ಬರೆಯಲು ಓದಲು ಅವಕಾಶ ಬಲು ಕಡಿಮೆ. ಈಗಾಗಲೇ ಶೆಡ್ಯೂಲ್ ಮಾಡಿರುವ ಲೇಖನಗಳು/ ಪ್ರವಚನಗಳು ಅದರಂತೆ 
ಪ್ರಕಟವಾಗಲಿವೆ. ಆದರೆ ನಿತ್ಯ ಕುಳಿತು ಅಂತರ್ಜಾಲ ಜಾಲಾಡುವ ಪರಿಸ್ಥಿತಿ ಏನಿದ್ದರೂ ಮೇ 20 ರ ನಂತರವೇ. ಅಲ್ಲಿಯವರಗೆ 
ಆಗ್ಗಾಗ್ಗೆ ಸಮಯ ಸಿಕ್ಕಾಗ ಇಲ್ಲಿ ತಲೆ ಹಾಕುವೆ.
-ಹರಿಹರಪುರಶ್ರೀಧರ್
ಸಂಪಾದಕ


ಸ್ಮಿತವಿರಲಿ ವದನದಲಿ - ವೇದಸುಧೆ » Vedasudhe

ಸ್ಮಿತವಿರಲಿ ವದನದಲಿ - ವೇದಸುಧೆ » Vedasudhe




ಸ್ಮಿತವಿರಲಿ ವದನದಲಿ, ಕಿವಿಗೆ ಕೇಳಿಸದಿರಲಿ|
ಹಿತವಿರಲಿ ವಚನದಲಿ , ಋತವ ಬಿಡದಿರಲಿ|
ಮಿತವಿರಲಿ ಮನಸಿನುದ್ವೇಗದಲಿ, ಭೋಗದಲಿ
ಅತಿ ಬೇಡವೆಲ್ಲಿಯುಂ ಮಂಕುತಿಲ್ಲ|