Pages

Tuesday, January 25, 2011

ಉಪನಯನ(ಮುಂಜಿ)ಸಂಸ್ಕಾರದ ಮೂಲ ಉದ್ದೇಶವೇನು?

ವೇದೋಕ್ತ ಜೀವನ ಪಥ ಪಾಠ ಮಾಡುತ್ತಿರುವ ಶ್ರೀ ಸುಧಾಕರಶರ್ಮರು
 ಶ್ರೀ ಸುಧಾಕರ ಶರ್ಮಾ ರವರಿಗೆ,ಪ್ರಣಾಮಗಳು.
ನಿಮ್ಮ ಒಂದು ಆಡಿಯೋ ಪ್ರಕಾರ (ನಾನು ಅರ್ಥೈಸಿಕೊಂಡಂತೆ) ಬ್ರಾಹ್ಮಣನಾದವನು ಜ್ಞಾನವನ್ನು ಹೊಂದಿ, ಇತರರಿಗೆ ಮಾರ್ಗದರ್ಶಿಯಾಗುತ್ತಾನೆ, ಹಾಗೆ ಅದು ಜಾತಿಯಲ್ಲ ಎಂದು ವಿವರಿಸಿದ್ದೀರ.
ಈಗ ಪ್ರಶ್ನೆಗಳು:
೧) ನಿಮ್ಮ ಪ್ರಕಾರ ನಾವೇ ಮಾಡಿಕೊಂಡಂಥ ಬ್ರಾಹ್ಮಣರಾದ ನಾವುಗಳು ಗಂಡು ಮಕ್ಕಳಿಗೇಕೆ ಉಪನಯನ(ಮುಂಜಿ)ವನ್ನು ಮಾಡುತ್ತೇವೆ. ಅದರ ಮೂಲ ಉದ್ದೇಶವೇನು?? ಈ ಪದ್ದತಿಯನ್ನು ಮಾನವರಾದ ನಾವೇ ರೂಢಿಸಿಕೊಂಡು ಬಂದಿರುವುದೇ?
೨) ಉಪನಯನದಲ್ಲಿ ಜನಿವಾರವನ್ನು (ಎಳೆಯನ್ನು) ಹಾಕುತ್ತೇವೆ. ಅದರ ವೈಶಿಷ್ಟ್ಯವೇನು?
೩) ಉಪನಯನದ ನಂತರ ಸಂಧ್ಯಾವಂದನೆಯ ಬಗ್ಗೆ ಕೂಡ ವಿವರಿಸುವಿರಾ?
- ಚಿತ್ರ 
-------------------------------------------------
 
ಬ್ರಾಹ್ಮಣ್ಯ ಹುಟ್ಟಿನಿಂದ ಬರುತ್ತದೆ - ಎಂಬಲ್ಲಿಂದ ಚಿಂತನೆ ವೇದಗಳಿಂದ ದೂರಸರಿದಿದೆ. ನಮ್ಮ ಗುಣ, ಸ್ವಭಾವ, ಕರ್ಮಗಳನ್ನು, ನಮ್ಮ ಸೇವಾಕ್ಷೇತ್ರವನ್ನು ನೋಡಿ ನಾವು ಬ್ರಾಹ್ಮಣರೋ ಮತ್ತೇನೋ ಆಗುತ್ತೇವೆ. ಇವುಗಳಲ್ಲಿ ಮೇಲು-ಕೀಳುಗಳಿಲ್ಲ. ಬ್ರಾಹ್ಮಣನು ಎಷ್ಟು ಶ್ರೇಷ್ಠನೋ ಶೂದ್ರನೂ ಅಷ್ಟೇ ಶ್ರೇಷ್ಠ!!! ಉಪನಯನ ಮತ್ತು ವೇದಾರಂಭಸಂಸ್ಕಾರ = ಗುರುಕುಲವಾಸ ಮತ್ತು ಶಿಕ್ಷಣ. ಶಿಕ್ಷಣ ಯಾರ ಸ್ವತ್ತು? ಸಮಾಜ ಚೆನ್ನಾಗಿರಬೇಕಾದರೆ ಪ್ರತಿಯೊಬ್ಬರಿಗೂ - ಯಾವುದೇ ಭೇದಭಾವವಿಲ್ಲದೆ - ಶಿಕ್ಷಣ ಸಿಗಬೇಕು. (ಇಂದು ಸರ್ಕಾರೀ ಪೋಷಿತ ಶಿಕ್ಷಣವಲ್ಲ, ವೇದಗಳು ಸಾರುವ ಮಾನವೀಯ ಶಿಕ್ಷಣ, ವ್ಯಕ್ತಿತ್ವ ರೂಪಕ ಶಿಕ್ಷಣ.) ಉಳಿದೆಲ್ಲವೂ ನಾವೇ ಅರೆಬರೆ ಜ್ಞಾನದಿಂದ ರೂಢಿಸಿಕೊಂಡಿರುವ ಚಿಂತನೆಯಿಲ್ಲದ ಸಂಪ್ರದಾಯ! ಮೊದಲನೆಯ ಎಳೆ - ದೇವಋಣ - ಪರಮಾತ್ಮನಿಂದ ಪಡೆದುಕೊಂಡಿರುವ ಎಲ್ಲ ಸೌಲಭ್ಯಗಳ ವಿಚಾರದಲ್ಲಿ ಕೃತಜ್ಞತೆ. ಈ ಋಣವನ್ನು ತೀರಿಸುವ ಸಂಕಲ್ಪ. ಆ ಎಲ್ಲ ಕೊಡುಗೆಗಳನ್ನೂ ಶುದ್ಧವಾಗಿ ರಕ್ಷಿಸುವುದು, ಇತರರೊಡನೆ ಹಂಚಿಕೊಳ್ಳುವುದು ವಿಧಾನ. (ನೀರು, ಗಾಳಿ, ಜ್ಞಾನ, ಪ್ರಕೃತಿಸಂಪತ್ತು ಇತ್ಯಾದಿ) ಜ್ಞಾನ. ಮಾನವ ಇತರ ಪ್ರಾಣಿಗಳಿಗಿಂತ ಭಿನ್ನವಾಗಿರುವುದೇ ಈ ಜ್ಞಾನದ ಕಾರಣದಿಂದ. ಇತರ ಪ್ರಾಣಿಗಳಲ್ಲಿ ಕೇವಲ ಸ್ವಾಭಾವಿಕ ಜ್ಞಾನವಿದ್ದರೆ, ಮನುಷ್ಯನಲ್ಲಿ ಅದರೊಂದಿಗೆ, ನೈಮಿತ್ತಿಕ್ ಜ್ಞಾನ, ಆಥ್ಯಾತ್ಮಿಕ ಜ್ಞಾನಗಳೂ ಸೇರಿವೆ. ಈ ಜ್ಞಾನಗಳನ್ನು ಸಂಪಾದಿಸುವೆ ಎಂಬ ಸಂಕಲ್ಪ. ಮನಸ್ಸಿನ ಶುದ್ಧಿ. ನಮ್ಮ ಅಂತರಂಗದಲ್ಲಿ ಕೊಳೆ ಇರುವವರೆಗೂ ಶಾಂತಿ, ಆನಂದಗಳ ಅನುಭವ ಉಂಟಾಗುವುದಿಲ್ಲ. ಆ ಕೊಳೆಗಳನ್ನು ಕಳೆದುಕೊಂಡು ಶುದ್ಧತೆಯನ್ನು ಗಳಿಸುತ್ತೇನೆ ಎಂಬ ಸಂಕಲ್ಪ. ಎರಡನೆಯ ಎಳೆ - ಪಿತೃ ಋಣ. ತಂದೆ-ತಾಯಿಗಳು, ಪಾಲಕ ಪೋಷಕರು ನಮ್ಮ ಬಾಲ್ಯ ಕಾಲದಲ್ಲಿ ಕಿಂಚಿತ್ತೂ ಬೇಸರಿಸಿಕೊಳ್ಳದೆ, ಅಸಹ್ಯಪಟ್ಟುಕೊಳ್ಳದೆ ನಮಗೆ ಆಶ್ರಯ, ಆಹಾರ, ಬಟ್ಟೆ, ಪ್ರೀತಿ ಮೊದಲಾದುವನ್ನು ಕೊಟ್ಟಿದ್ದಾರೆ. ನಮ್ಮ ಮಲ-ಮೂತ್ರಗಳನ್ನು ಶುಚಿಗೊಳಿಸಿದ್ದಾರೆ. ಈ ಬಗ್ಗೆ ನಮ್ಮ ಕೃತಜ್ಞತೆ ಆವಶ್ಯಕ. ಅವರ ವೃದ್ಧಾಪ್ಯದಲ್ಲಿ (ಅವರು ಬದುಕಿರುವಾಗ) ನಮ್ಮ ಕೈಯಿಂದಲೇ ಅವರ ಸೇವೆಯನ್ನು ಅದೇ ಭಾವನೆಯಿಂದ ಮಾಡುವುದು ಈ ಋಣವನ್ನು ತೀರಿಸಿಕೊಳ್ಳುವ ಬಗೆ. ಕೇವಲ ಜ್ಞಾನ ನಿರುಪಯುಕ್ತ. ಅದು ಆಚರಣೆಗೆ ಇಳಿಯಬೇಕು. ಅದನ್ನೇ ಕರ್ಮ ಎನ್ನುತ್ತಾರೆ. ಮಾನವಜೀವನದಲ್ಲಿ ಇದೂ ಪ್ರಮುಖಸ್ಥಾನವನ್ನು ಪಡೆಯುತ್ತುದೆ. ಮಾತಿನ ಶುದ್ಧಿಯೂ ಅತ್ಯಗತ್ಯ. ನಮ್ಮ ಮಾತು ತೂಕವಾಗಿರಬೇಕು. ಮಾತಿನಲ್ಲಿ ಸತ್ಯ, ಪ್ರಿಯ ಮತ್ತು ಹಿತದ ಪ್ರಮಾಣ ಹೆಚ್ಚಿದಂತೆ ತೂಕವೂ ಹೆಚ್ಚುತ್ತಾ ಹೋಗುತ್ತದೆ. ಮೂರನೆಯ ಎಳೆ - ಆಚಾರ್ಯ ಋಣ. ಯಾರು ಯಾರು ನಮಗೆ ಜೀವನ ಶಿಕ್ಷಣವನ್ನು ಕೊಟ್ಟಿದ್ದಾರೋ ಅವರೆಲ್ಲರೂ ಆಚಾರ್ಯರೇ. ಅವರ ಸಾಧನೆ, ಜ್ಞಾನ, ಅನುಭವಗಳ ಸಾರವನ್ನು ಅಮಗೆ ಧಾರೆಯೆರೆದಿರುತ್ತಾರೆ. (ನಾನಿಲ್ಲಿ ಆಚಾರ್ಯ ಹೆಸರನ್ನು ಇಟ್ಟುಕೊಂಡಿರುವ ಬಗ್ಗೆಯಾಗಲೀ, ಸಂಬಳಕ್ಕೆ ಪಾಠ ಮಾಡುವ Teachers ಬಗ್ಗೆಯಾಗಲೀ ಹೇಳುತ್ತಿಲ್ಲ) ಅವರ ಕೊಡುಗೆಯ ಬಗ್ಗೆ ಕೃತಜ್ಞತೆ. ಆ ಜ್ಞಾನವನ್ನು ರಕ್ಷಿಸಿ, ನಮ್ಮ ಸಾಧನೆ, ಜ್ಞಾನ, ಅನುಭವಗಳಿಂದ ಸಮೃದ್ಧಿಗೊಳಿಸಿ ಮುಂದಿನ ಜನಾಂಗಕ್ಕೆ ನೀಡುವುದೇ ಆಚಾರ್ಯ ಋಣವನ್ನು ತೀರಿಸುವ ಬಗೆ. ಅದಕ್ಕಾಗಿ ಸಂಕಲ್ಪ. ಜ್ಞಾನ, ಕರ್ಮಗಳೊಂದಿಗೆ, ಸರ್ವವ್ಯಾಪಿಯೂ,ಸರ್ವಶಕ್ತವೂ, ಸರ್ವಜ್ಞವೂ, ಸಾರ್ವಭೌಮವೂ, ಆನಂದಸ್ವರೂಪವೂ ಆದ ಒಂದು ಪರಮಾತ್ಮಶಕ್ತಿ ಸದಾ ನಮ್ಮೊಂದಿಗಿದೆ ಎಂಬ ದೃಢ ಅರಿವು, ಅದರ ಆಧಾರದ ಮೇಲೆ ಮೂಡುವ ಆತ್ಮವಿಶ್ವಾಸ, ಜೀವನೋತ್ಸಾಹಗಳೇ ಉಪಾಸನೆ. ಇದೂ ಮಾನವಜೀವನದ ಸಾರ್ಥಕತೆಗೆ ಅನಿವಾರ್ಯ. ನಮ್ಮ ಎಲ್ಲ ಕರ್ಮಗಳೂ ಈ ಉಪಾಸನೆಯ ಭಾವನೆಯಿಂದ ನಡೆದಲ್ಲಿ ಕಾಯಶುದ್ಧಿ ಸಾಧಿಸಿದಂತೆ. ಈ ಸಂಕಲ್ಪ, ಸಾಧನೆಗಳನ್ನು ನೆನಪಿಸುವುದಕ್ಕಾಗಿ ಮೂರು ಎಳೆಯ ಯಜ್ಞೋಪವೀತ - ಸತ್ಕರ್ಮಗಳನ್ನು ಮಾಡಲು ದೃಢನಿರ್ಧಾರ ಕೈಗೊಂಡಿರುವ ಸಂಕೇತ. ಅವರವರ ಕರ್ತವ್ಯಗಳನ್ನು ಅವರವರೇ ಮಾಡಬೇಕು. ಹೆಂಡತಿಯ ಜನಿವಾರವನ್ನು ಗಂಡ ಹಾಕಿಕೊಳ್ಳುವುದು ಈ ಹಿನ್ನೆಲೆಯಲ್ಲಿ ಅಜ್ಞಾನ ಎಂಬುದು ಸುಲಭವಾಗಿ ತಿಳಿಯುತ್ತದಲ್ಲವೇ? ಅಂತೆಯೇ ಇದು ಸಕಲ ಮಾನವರಿಗೂ ಕೊಡಬೇಕಾದ ಸಂಸ್ಕಾರ ಎಂಬುದನ್ನೂ ಹೇಳದೆಯೇ ತಿಳಿಯಬಹುದಲ್ಲವೇ? ಉಪನಯನ, ವೇದಾರಂಭ ಸಂಸ್ಕಾರಗಳಲ್ಲಿ ತಿಳಿಹೇಳುವ (ಮೇಲಿನ ಜ್ಞಾನದೊಂದಿಗೆ ಇನ್ನೂ ಇವೆ) ವಿಚಾರಗಳನ್ನು ದಿನವೂ ಬೆಳಿಗ್ಗೆ, ಸಂಜೆ ನೆನಪಿಸಿಕೊಳ್ಳುವುದೇ ಸಂಧ್ಯಾವಂದನೆ. ಸಹಜವಾಗಿಯೇ ನಮಗೆ ಮರೆವಿರುತ್ತದೆ. ಅದನ್ನು ಮೀರುವ ಒಂದು ವಿಧಾನವಿದು. (ಮತ್ತೊಮ್ಮೆ ಯಾವಾಗಲಾದರೂ ಸಂಧ್ಯೋಪಾಸನೆಯ ಮಂತ್ರಗಳ ಬಗ್ಗೆ ವಿಚಾರ ಮಾಡೋಣ.)  -ಸುಧಾಕರ ಶರ್ಮಾ