ನನ್ನ ಕೈಗೆ ಪುನರ್ಜೀವ ಬಂದ ಪವಾಡದ ಬಗ್ಗೆ ಇಂದು ಬರೆಯುತ್ತೇನೆಂದು ನಿನ್ನೆ ತಿಳಿಸಿದ್ದೆ. ಏನ್ ಸಾರ್ ಅದು ಪವಾಡ? ಯಾವ ಸ್ವಾಮೀಜಿ ಹತ್ತಿರ ಹೋಗಿದ್ರಿ? ಅಂತಾ ನನ್ನ ಪರಿಚಯದವರು ಆಗಲೇ ನನಗೆ ಫೋನಿನಲ್ಲಿ ಕೇಳಿದ್ದಾಯ್ತು. ಪವಾಡ! ಆಬಗ್ಗೆ ನಾನು ಏನೂ ಬರೆಯುವುದಿಲ್ಲ. ಆದರೆ ನನಗೆ ಪವಾಡವಾಗಿ ಗುಣಪಡಿಸಿದ್ದು ಪ್ರಾಣಾಯಾಮ!! ಡಾ|| ಅರುಣಾಚಲಯ್ಯ ಎಂಬ ವೈದ್ಯರೊಬ್ಬರು ಹಾಸನದಲ್ಲಿದ್ದರು. ಈಗ ಬೆಂಗಳೂರಿನಲ್ಲಿದ್ದಾರೆಂದು ಕಾಣುತ್ತೆ. ಒಂದು ಪ್ರಾಣಾಯಾಮ ತರಗತಿಯಲ್ಲಿ ನನ್ನ ಅನುಭವವನ್ನು ಹೇಳಿದಾಗ, ಅವರು ಗೇಲಿ ಮಾಡಿ ಬಿಟ್ಟರು. ನಾನೇನೂ ಸುಮ್ಮನಾಗಲಿಲ್ಲ. "ಅಲ್ಲಾ ಡಾಕ್ಟ್ರೇ, ಪ್ರಾಣಾಯಾಮ ಅಭ್ಯಾಸ ಮಾಡುತ್ತಲೇ ನನ್ನ ಕೈಗೆ ಪುನರ್ಜೀವ ಬಂದು ಈಗ ನಾನೂ ಎಲ್ಲರಂತೆ ಸಾಕ್ಷಿಯಾಗಿ ಎದುರಿಗೇ ನಿಂತಿರುವಾಗ ,ನೀವು ತಮಾಶೆ ಮಾಡ್ತೀರಲ್ಲಾ! ಹಾಗಾದರೆ ನನ್ನ ಅನುಭವವೇ ಸುಳ್ಳೇ?"-ಎಂದು ಗಟ್ಟಿಯಾಗೇ ಹೇಳಿದಾಗ ಅವರು ಸುಮ್ಮನಾಗಬೇಕಾಯ್ತು. ಅಷ್ಟೇ ಅಲ್ಲ, ಅವರೂ ಪ್ರಾಣಾಯಾಮ ತರಗತಿಗಳಿಗೆ ಬರಲು ಆರಂಭಿಸಿ ಈಗ ಅವರು ಆರ್ಟ್ ಆಫ್ ಲಿವಿಂಗ್ ನಲ್ಲಿ ಟೀಚರ್ ಆಗಿರಬಹುದು.
ಈಗ ನನ್ನ ಕಥೆ ಮತ್ತೆ ಶುರು ಮಾಡುವೆ. ನನ್ನ ಎಡಗೈ ನಿತ್ರಾಣದಿಂದ ನಾನು ಮಾನಸಿಕವಾಗಿ ಕುಸಿದುಹೋಗಿದ್ದೆ. ಒಂದು ದಿನ ಬೆಳಿಗ್ಗೆ ನ್ಯೂಸ್ ಪೇಪರ್ ಜೊತೆಯಲ್ಲಿ ಒಂದು ಕರಪತ್ರವು ನನ್ನ ಮನೆ ಬಾಗಿಲಲ್ಲಿ ಬಿದ್ದಿತ್ತು. ಎಸ್.ಎಸ್.ವೈ [ಸಿದ್ಧ ಸಮಾಧಿ ಯೋಗ] ತರಗತಿಯು ಆರಂಭವಾಗುವ ಬಗ್ಗೆ ಪ್ರಕಟಣೆ ಅದರಲ್ಲಿತ್ತು. ನೋಡಿದೆ"ಬಿ.ಪಿ. ಶುಗರ್, ಹೃದ್ರೋಗ, ಇತ್ಯಾದಿ ಯಾವುದೇ ಹಳೆಯ ರೋಗಗಳಿಗೆ ಯಾವ ಔಷಧ ವಿಲ್ಲದೆ ಚಿಕಿತ್ಸೆ"
ಕರಪತ್ರ ನೋಡಿದೊಡನೆ ಧ್ಯಾನ-ಪ್ರಾಣಾಯಾಮ ತರಗತಿಯನ್ನು ಸೇರಲು ನಿರ್ಧರಿಸಿದೆ. ಹಾಸನದ ಜವೇನಹಳ್ಳಿ ಮಠದಲ್ಲಿ ಆರಂಭವಾದ ಆ ಶಿಭಿರವನ್ನು ನಡೆಸಿಕೊಟ್ಟವರು ಶ್ರೀ ಸುರೇಶ್ ಗುರೂಜಿ. ತರಗತಿ ಪ್ರಾರಂಭವಾಯ್ತು. ವಜ್ರಾಸನದಲ್ಲಿ ಕುಳಿತು ಪ್ರಾಣಾಯಾಮ ಅಭ್ಯಾಸ ಶುರುಮಾಡಬೇಕು. ಎರಡೂ ಹಸ್ತಗಳನ್ನು ಸೊಂಟದ ಮೇಲಿಡಬೇಕು. ಬಲಗೈ ಇಡಲು ಸಾಧ್ಯ, ಎಡಗೈ? ಎಡ ಹಸ್ತವನ್ನು ಬಲಹಸ್ತದ ಸಹಾಯದಿಂದ ಸೊಂಟದ ಮೇಲಿಟ್ಟೆ. ವಿಭಾಗಶ: ಪ್ರಾಣಾಯಾಮ ಶುರುವಾಯ್ತು. ಅಂದು ಕಳೆಯಿತು. ಎರಡನೆಯ ದಿನವೂ ಆರಂಭದಲ್ಲಿ ಸೊಂಟದ ಮೇಲೆ ಎಡಹಸ್ತವನ್ನು ಬಲಹಸ್ತದ ಸಹಾಯದಿಂದಲೇ ಇಟ್ಟು ಪ್ರಾಣಾಯಾಮ ಶುರು ಮಾಡಿದೆ. ಆನಂತರ ಹಸ್ತಗಳನ್ನು ಕೊಂಕಳಲ್ಲಿ ಇಡಬೇಕು. ಮತ್ತೆ ಅದೇ ರೀತಿ ಎಡಗೈಯ್ಯನ್ನು ಬಲಗೈ ಸಹಾಯದಿಂದ ಇಟ್ಟೆ. ಹೀಗೆ ಎರಡೂ ಸ್ಥಿತಿಯ ಪ್ರಾಣಾಯಾಮಗಳನ್ನು ಎರಡೂ ದಿನ ನಾಲ್ಕಾರು ಭಾರಿ ಪ್ರಯತ್ನ ಪೂರ್ವಕವಾಗಿ ಮಾಡಿದೆ. ಮೂರನೆಯ ದಿನ ಪ್ರಾಣಾಯಾಮ ತರಗತಿಯ ಆರಂಭದಲ್ಲಿ ಸ್ವಲ್ಪ ಎಡಗೈಯ್ಯನ್ನು ಬಲಗೈ ಸಹಾಯದಿಂದಲೇ ಸ್ವಲ್ಪ ಸುಲಭವಾಗಿ ಸೊಂಟದಮೇಲಿಡಲು ಸಾಧ್ಯವಾಯ್ತು. ಆದಿನ ನನ್ನ ಜೀವನದಲ್ಲಿ ಮರೆಯಲಾಗದ ದಿನ.ಆಶ್ಚರ್ಯ! ಪ್ರಾಣಾಯಾಮ ಅಭ್ಯಾಸ ಮಾಡುತ್ತಾ ಮಾಡುತ್ತಾ ಕೈಯಲ್ಲಿ ಶಕ್ತಿಯ ಸಂಚಾರ ಆರಂಭ!! ಚಕಿತನಾದೆ. ಎನೋ ಒಂದು ಶಕ್ತಿಯು ಪ್ರವಹಿಸುವಂತೆ ಭಾಸವಾಯ್ತು. ಅಬ್ಭಾ! ಅದೆಷ್ಟು ದಿಗಳಿಂದ ಕಳೆದುಕೊಂಡಿದ್ದ ಕೈಯ್ಯನ್ನು ನಿಧಾನವಾಗಿ ಆಡಿಸುವಂತಾಯ್ತು. ಅಂದು ನನಗೆ ಹಬ್ಬ!!
ನೋಡಿ, ಮನುಷ್ಯನಿಗೆ ಎಲ್ಲಾ ಚೆನ್ನಾಗಿದ್ದಾಗ ಜೀವನ ಸಪ್ಪೆ ಎನಿಸುತ್ತೆ. ಕೊಟ್ಟಿದ್ದನ್ನು ಭಗವಂತ ಕಿತ್ತುಕೊಂಡು ಮತ್ತೆ ಕೊಟ್ಟಾಗ ನಮಗೆ ಅದರ ಮಹತ್ವ ಅರ್ಥವಾಗುತ್ತೆ. ಕ್ರಮೇಣ ದಿನಕಳೆದಂತೆ ಅದರ ಮಹತ್ವ ಮರೆಯಾಗುತ್ತಾ ಬರುತ್ತೆ. ನಾನು ಈ ವಿಚಾರದಲ್ಲಿ ಒಬ್ಬ ಪಕ್ಕಾ ಉಧಾಹರಣೆಗೆ ಯೋಗ್ಯ. ಕಾರಣವೇನೆಂದರೆ ಧ್ಯಾನ-ಪ್ರಾಣಾಯಾಮವನ್ನು ಸತತವಾಗಿ ಎರಡು-ಮೂರು ವರ್ಷಗಳು ಮಾಡಿಕೊಂಡು ನೆಮ್ಮದಿಯ ಜೀವನ ಮಾಡುತ್ತಿದ್ದ ನಾನು ಕ್ರಮೇಣ ಅನ್ಯಾನ್ಯ ಸಾಮಾಜಿಕ ಕಾರ್ಯಕ್ರಮದಲ್ಲಿ ನನ್ನನ್ನು ತೊಡಗಿಸಿಕೊಂಡವನು ನನ್ನ ಜೀವನ ಕ್ರಮವನ್ನು ವೆತ್ಯಾಸ ಮಾಡಿಕೊಂಡೆ. ಈಗ ಸಣ್ಣಪುಟ್ಟ ರೋಗಗಳು ನನ್ನನ್ನು ಭಾಧಿಸುತ್ತವೆ. ಎಲ್ಲಕ್ಕೂ ನನ್ನಲ್ಲೇ ಪರಿಹಾರವಿದೆ, ಆದರೆ ನಾನೊಬ್ಬ ಭಾವುಕ. ಯವುದೋ ವಿಚಾರಕ್ಕೆ ಅಂಟಿಕೊಂಡರೆ ನನ್ನ ಎಲ್ಲಾ ಸಮಯವನ್ನೂ ಅದಕ್ಕೆ ಮೀಸಲು ಮಾಡಿ ನನ್ನನ್ನು ನಾನು ಮರೆಯುತ್ತೇನೆ. ನೀವು ಹೀಗಾಗಬೇಡಿ ಎಂದು ವಿನಂತಿಸಲೇ ನಾನು ಈ ಪುಟ್ಟ ಬರಹವನ್ನು ಮುಕ್ತಾಯ ಮಾಡುವೆ.
--------------------------------------
ಪ್ರಾಣಾಯಾಮದಿಂದ ನನಗೆ ಗುಣವಾಯ್ತೆಂದರೆ ಸೋದರಿ ಚಿತ್ರನಂಬಲಾಗುತ್ತಿಲ್ಲವೆಂದು ತಿಳಿಸಿದ್ದಾರೆ. ಯಾವ ಪ್ರಾಣಾಯಾಮ? ಎಂದಿದ್ದಾರೆ. ಎಸ್.ಎಸ್.ವೈ ನಲ್ಲಿ ಹೇಳಿಕೊಡಲಾಗುವ ಈ ಪ್ರಾಣಾಯಾಮವನ್ನು "ವಿಭಾಗೀಯ ಪ್ರಾಣಾಯಾಮಗಳು" ಎನ್ನುತ್ತಾರೆ. ಯೋಗಶಾಸ್ತ್ರದಲ್ಲಿ ಏನಿದೆಯೋ ನನಗೆ ತಿಳಿಯದು. ಆದರೆ ನನಗೆ ವರವಾದ ವಿಭಾಗೀಯ ಪ್ರಾಣಾಯಾಮದ ಒಂದು ಚಿಕ್ಕ ಕ್ಲಿಪ್ ಇಲ್ಲಿ ಹಾಕಿರುವೆ ಸೋದರಿ ಚಿತ್ರ ಇವರಿಗಾಗಿ. ಎಸ್.ಎಸ್.ವೈ ನಲ್ಲಿ ಹೇಳಿಕೊಡಲಾಗುವ ಪ್ರಾಣಾಯಾಮಗಳಲ್ಲಿ ಇದು ಒಂದು. ಇಲ್ಲಿ ನನಗೆ ಯಾರ ಬಗ್ಗೆಯೂ ಪ್ರಚಾರಕೊಡಬೇಕೆಂಬ ಆಸೆ ಇಲ್ಲ. ಆದರೆ ನನ್ನ ಅನುಭವವನ್ನು ಮುಕ್ತವಾಗಿ ಹಂಚಿಕೊಂಡಿರುವೆ ಅಷ್ಟೆ.
--------------------------------------
ಪ್ರಾಣಾಯಾಮದಿಂದ ನನಗೆ ಗುಣವಾಯ್ತೆಂದರೆ ಸೋದರಿ ಚಿತ್ರನಂಬಲಾಗುತ್ತಿಲ್ಲವೆಂದು ತಿಳಿಸಿದ್ದಾರೆ. ಯಾವ ಪ್ರಾಣಾಯಾಮ? ಎಂದಿದ್ದಾರೆ. ಎಸ್.ಎಸ್.ವೈ ನಲ್ಲಿ ಹೇಳಿಕೊಡಲಾಗುವ ಈ ಪ್ರಾಣಾಯಾಮವನ್ನು "ವಿಭಾಗೀಯ ಪ್ರಾಣಾಯಾಮಗಳು" ಎನ್ನುತ್ತಾರೆ. ಯೋಗಶಾಸ್ತ್ರದಲ್ಲಿ ಏನಿದೆಯೋ ನನಗೆ ತಿಳಿಯದು. ಆದರೆ ನನಗೆ ವರವಾದ ವಿಭಾಗೀಯ ಪ್ರಾಣಾಯಾಮದ ಒಂದು ಚಿಕ್ಕ ಕ್ಲಿಪ್ ಇಲ್ಲಿ ಹಾಕಿರುವೆ ಸೋದರಿ ಚಿತ್ರ ಇವರಿಗಾಗಿ. ಎಸ್.ಎಸ್.ವೈ ನಲ್ಲಿ ಹೇಳಿಕೊಡಲಾಗುವ ಪ್ರಾಣಾಯಾಮಗಳಲ್ಲಿ ಇದು ಒಂದು. ಇಲ್ಲಿ ನನಗೆ ಯಾರ ಬಗ್ಗೆಯೂ ಪ್ರಚಾರಕೊಡಬೇಕೆಂಬ ಆಸೆ ಇಲ್ಲ. ಆದರೆ ನನ್ನ ಅನುಭವವನ್ನು ಮುಕ್ತವಾಗಿ ಹಂಚಿಕೊಂಡಿರುವೆ ಅಷ್ಟೆ.