ವೇದದಲ್ಲಿ ಮೂವತ್ಮೂರು ಕೋಟಿ ದೇವತೆಗಳೆಂದು ಹೇಳಿದೆ. ಹಾಗಾಗಿ ಭಗವಂತನೆಂದರೆ ಒಬ್ಬನೇ ಆಗಿರಬೇಕಿಲ್ಲ, ಎಂಬ ವಾದ ಇದೆ. ಇಂತಹ ವಾದಗಳನ್ನು ಸಮಾಧಾನಪಡಿಸುವುದು ಕಷ್ಟ. ಅಗತ್ಯವೂ ಇಲ್ಲ. ಆದರೂ ವೇದದಲ್ಲಿ ಭಗವಚ್ಛಕ್ತಿಯು ಒಂದೇ ಎಂದು ಹಲವಾರು ಮಂತ್ರಗಳಲ್ಲಿ ಪ್ರತಿಪಾದಿಸಿದೆ. ವೇದದ ಬೆಳಕಲ್ಲಿ “ದೇವತೆ” ಮತ್ತು “ಭಗವಂತ” ಈ ಪದಗಳ ಬಗ್ಗೆ ಇಂದು ವಿಚಾರ ಮಾಡೋಣ.
ಯಾಸ್ಕ ಮಹರ್ಷಿಗಳ ನಿರುಕ್ತದಂತೆ “ದೇವೋ ದಾನಾತ್” ಎಂದಿದೆ. ಹಾಗೆಂದರೇನು? ದೇವನೆಂದರೆ ಕೊಡುವವನು ಎಂದರ್ಥ. ಉಧಾಹರಣೆಗೆ ಅಗ್ನಿರ್ದೇವತಾ, ವರುಣೋ ದೇವತಾ, ಸೂರ್ಯೋದೇವತಾ,?ಇತ್ಯಾದಿ. ಅಂದರೆ ಅಗ್ನಿಯು ಶಾಖ ಕೊಡುತ್ತದೆ, ವರುಣ ಮಳೆಯನ್ನು ಸುರಿಸುತ್ತದೆ, ಸೂರ್ಯನಿಂದ ಬೆಳಕು ಮತ್ತು ಶಾಖವನ್ನು ಪಡೆಯುತ್ತೇವೆ. ಅಂತೆಯೇ ಒಬ್ಬ ಶ್ರೀಮಂತನು ಬಡವರಿಗೆ ಹಣವನ್ನು ದಾನ ಮಾಡುತ್ತಾನೆ. ವಿದ್ವಾಂಸನು ಜ್ಞಾನವನ್ನು ದಾನಮಾಡುತ್ತಾನೆ, ಹೀಗೆ ಯಾವುದು ಪ್ರಪಂಚಕ್ಕೆ ಏನನ್ನಾದರೂ ಕೊಡುತ್ತದೋ ಅದು ದೇವತೆ.ಹಾಗೆಯೇ ಅದೇ ನಿರುಕ್ತದಲ್ಲಿ “ಮಂತ್ರ ಪ್ರತಿಪಾದಕ ವಿಷಯೋ ದೇವತಾ” ಎಂತಲೂ ಹೇಳಿದೆ. ಅಂದರೆ ಒಂದು ಮಂತ್ರವು ಯಾವ ವಿಷಯವನ್ನು ಪ್ರತಿಪಾದಿಸುತ್ತದೋ ಆ ವಿಷಯವನ್ನು ದೇವತೆ ಎನ್ನುತ್ತಾರೆ. ಒಂದು ವಿಷಯದಿಂದ ಉಪಯೋಗ ಪಡೆಯುವುದೆಂದರೆ ಮನುಷ್ಯನು ಅದನ್ನು ಆಧಿಭೌತಿಕವಾಗಿ, ಆಧ್ಯಾತ್ಮಿಕವಾಗಿ ಮತ್ತು ಆಧಿ ದೈವಿಕವಾಗಿ ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ “ದೇವತೆಗಳ ಬಗ್ಗೆ ಪ್ರಸ್ತಾಪವಾಗಿರುವ ಒಂದೆರಡು ಮಂತ್ರಗಳ ಬಗ್ಗೆ ವಿಚಾರ ಮಾಡೋಣ.
ಯೇ ತ್ರಿಂಶತಿ ತ್ರಯಸ್ಪರೋ ದೇವಾಸೋ ಬರ್ಹಿರಾಸದನ್| ವಿದನ್ನಹ ದ್ವಿತಾಸನನ್||
[ಋಗ್ವೇದ: ೮.೨೮.೧]
ಯೇ =ಯಾವ
ತ್ರಿಂಶತಿ ತ್ರಯಸ್ಪರ: = ಮೂವತ್ಮೂರು
ದೇವಾಸ: = ದೇವತೆಗಳು
ಬರ್ಹಿ = ಯಜ್ಞಾಸನದ ಮೇಲೆ
ಆಸದನ್ = ಕುಳಿತುಕೊಳ್ಳುತಾರೋ ಅವರು
ಅಹ = ನಿಜವಾಗಿ
ದ್ವಿತಾ = ಎರಡು ರೀತಿ
ವಿದನ್ = ತಿಳಿದವರಾಗಿರುತ್ತಾರೆ ಮತ್ತು
ಆಸನನ್ = ಎರಡು ರೀತಿ ಹಂಚಲು ಸಮರ್ಥರಾಗಿರುತ್ತಾರೆ
ಯಾವ ಮೂವತ್ಮೂರು ದೇವತೆಗಳು ಯಜ್ಞಾಸನದ ಮೇಲೆ ಕುಳಿತುಕೊಳ್ಳುತಾರೋ ಅವರು ನಿಜವಾಗಿ ತಿಳಿದವರಾಗಿರುತ್ತಾರೆ ಮತ್ತು ಎರಡು ರೀತಿ ಹಂಚಲು ಸಮರ್ಥರಾಗಿರುತ್ತಾರೆ.ರೂಢಿಯಲ್ಲಿ ಮೂವತ್ಮೂರು ಕೋಟಿ ದೇವತೆಗಳೆಂದು ಹೇಳುತ್ತಾರೆ. ಆದರೆ ಈ ವೇದ ಮಂತ್ರವು ಮೂವತ್ಮೂರು ದೇವತೆಗಳ ಕುರಿತು ಹೇಳುತ್ತಿದೆ.
ಈ ಮಂತ್ರದಲ್ಲಿ ದ್ವಿತಾಸನನ್ ಮತ್ತು ದ್ವಿತಾ ವಿದನ್ ಎಂಬ ಎರಡು ಶಬ್ಧಗಳ ಪ್ರಯೋಗವಾಗಿದೆ. ಹಾಗೆಂದರೇನು? ದ್ವಿತಾವಿದನ್ ಎಂದರೆ ಶತೃಗಳನ್ನೂ ಮಿತ್ರರನ್ನೂ ತಿಳಿದವನು, ದ್ವಿತಾಸನನ್ ಎಂದರೆ ನಿಗ್ರಹ ಮತ್ತು ಅನುಗ್ರಹ ಗಳ ಸಮಯವನ್ನು ಅರಿತವನು.
ಈ ಮಂತ್ರಗಳನ್ನು ಗಮನಿಸಿದಾಗ ದೇವತೆಗಳೆಂದರೆ ನಮಗೆ ಅನುಕೂಲ ಕಲ್ಪಿಸುವವರೆಂದು ಹೇಳಿದೆ ಹೊರತೂ ಅವರನ್ನು ಭಗವಂತನೆಂದು ಹೇಳಿಲ್ಲ. ನೂರಾರು ಹೆಸರುಗಳಿಂದ ಕರೆದರೂ ಭಗವಂತ ಎಂಬುವನು ಒಬ್ಬನೇ ಎಂಬುದನ್ನು ಮತ್ತೊಂದು ಮಂತ್ರವು ಅತಿ ಸ್ಪಷ್ಟವಾಗಿ ಹೇಳುತ್ತದೆ.
ಇಂದ್ರಂ ಮಿತ್ರಂ ವರುಣಮಗ್ನಿಮಾಹುರಥೋ ದಿವ್ಯಃ ಸ ಸುಪರ್ಣೋ ಗರುತ್ಮಾನ್|
ಏಕಂ ಸತ್ ವಿಪ್ರಾ ವಹುದಾವದಂತ್ಯಗ್ನಿಂ ಯಮಂ ಮಾತರಿಶ್ವಾನಮಾಹು: ||
[ಋಗ್ವೇದ ೧.೧೬೪.೪೬]
ಅಗ್ನಿಂ = ತೇಜೋಮಯ ಪ್ರಭುವನ್ನು
ಇಂದ್ರಂ ಮಿತ್ರಂ ವರುಣಂ = ಇಂದ್ರ, ಮಿತ್ರ,ವರುಣ ಎಂದು
ಅಹುಃ = ಕರೆಯುತ್ತಾರೆ
ಅಥೋ = ಹಾಗೆಯೇ
ಃ = ಆ ಪ್ರಭುವು
ದಿವ್ಯಃ = ದಿವ್ಯನೂ
ಸುಪರ್ಣಃ = ಸುಪರ್ಣನೂ
ಗುರುತ್ಮಾನ್ = ಮಹಾನ್ ಆತ್ಮವಂತನೂ ಹೌದು
ಸತ್ ಏಕಮ್ = ಸತ್ಯವು ಇರುವುದು ಒಂದೇ
ವಿಪಾಃ = ವಿಶೇಷ ಪ್ರಜ್ಞಾವಂತರಾದ ಜ್ಞಾನಿಗಳು
ಬಹುಧಾ ವದಂತಿ = ಅನೇಕ ರೀತಿಯಲ್ಲಿ ವರ್ಣಿಸುತ್ತಾರೆ.
ಅಗ್ನಿಮ್ = ಅದೇ ತೇಜೋ ರೂಪವನ್ನು
ಯಮಂ ಮಾತರಿಶ್ವಾನಂ ಅಹುಃ = ಯಮ, ಮಾತರಿಶ್ವಾ ಎನ್ನುತ್ತಾರೆ.
ತೇಜೋಮಯ ಪ್ರಭುವನ್ನು ಇಂದ್ರ, ಮಿತ್ರ,ವರುಣ ಎಂದು ಕರೆಯುತ್ತಾರೆ, ಹಾಗೆಯೇ ಆ ಪ್ರಭುವು ದಿವ್ಯನೂ ಸುಪರ್ಣನೂ ಆತ್ಮವಂತನೂ ಹೌದು, ಸತ್ಯವು ಇರುವುದು ಒಂದೇ, ವಿಶೇಷ ಪ್ರಜ್ಞಾವಂತರಾದ ಜ್ಞಾನಿಗಳು ಅನೇಕ ರೀತಿಯಲ್ಲಿ ವರ್ಣಿಸುತ್ತಾರೆ. ಅದೇ ತೇಜೋ ರೂಪವನ್ನು ಯಮ, ಮಾತರಿಶ್ವಾ ಎನ್ನುತ್ತಾರೆ.
ಈ ಮಂತ್ರದಲ್ಲಿ ಒಬ್ಬನೇ ಭಗವಂತನೆಂದು ಎಷ್ಟು ಸ್ಪಷ್ಟವಾಗಿ ಹೇಳಿದೆ ಅಲ್ಲವೇ. ದೇವನೊಬ್ಬ ನಾಮ ಹಲವು. ಇರುವ ಒಂದೇ ಸತ್ಯವಸ್ತುವನ್ನು ವಿದ್ವಾಂಸರು ಬೇರೆ ಬೇರೆ ಹೆಸರಲ್ಲಿ ಕರೆಯುತ್ತಾರೆಂದು ಹೇಳಿದೆ. ಇಂದ್ರ ,ಅಗ್ನಿ, ವರುಣ, ಸೂರ್ಯ, ಹೀಗೆ ನಮಗೆ ಅನುಕೂಲ ಕಲ್ಪಿಸುವ ಇವರನ್ನೆಲ್ಲಾ ದೇವತೆಗಳೆಂದು ಹೇಳಿದೆ. ಆದರೆ ಅವರನ್ನೆಲ್ಲಾ ಭಗವಂತನೆಂದು ಹೇಳಿಲ್ಲ. ದೇವರು ಒಬ್ಬನೇ ಎಂದು ವೇದವು ಸ್ಪಷ್ಟ ಪಡಿಸುತ್ತದೆ. ಆದರೆ ಇರುವ ಒಬ್ಬನೇ ದೇವರನ್ನು ವಿದ್ವಾಂಸರು ಹಲವಾರು ಹೆಸರುಗಳಿಂದ ಕರೆಯುತ್ತಾರೆಂದು ವೇದವು ಸಾರಿ ಹೇಳುತ್ತದೆ.
ನಿರುಕ್ತದಲ್ಲಿ “ಮಂತ್ರ ಪ್ರತಿಪಾದಕ ವಿಷಯೋ ದೇವತಾ” ಎಂಬ ವಿವರಣೆ ಇದೆ. ಮಂತ್ರಗಳು ಪ್ರತಿಪಾದಿಸುವ ವಿಷಯವನ್ನು ದೇವತೆ ಎನ್ನುತ್ತಾರೆ. ಅಂದರೆ ಉಧಾಹರಣೆಗೆ ಋಗ್ವೇದದ ಮೊದಲನೇ ಮಂಡಲದ ಮೊದಲನೇ ಸೂಕ್ತದ ಮೊದಲನೇ ಮಂತ್ರವನ್ನು ನೋಡೋಣ.
ಅಗ್ನಿಮೀಳೇ ಪುರೋಹಿತಮ್ ಯಜ್ಞಸ್ಯ ದೇವಮೃತ್ವಿಜಮ್ |ಹೋತಾರಂ ರತ್ನಧಾತುವಮ್||
ಈ ಮಂತ್ರದ ದೇವತೆ ಅಗ್ನಿ ,ಅಂದರೆ ಈ ಮಂತ್ರವು ಅಗ್ನಿಯ ವಿಷಯವನ್ನು ಪ್ರತಿಪಾದಿಸುತ್ತದೆ ಎಂದರ್ಥ. ಈ ಮಂತ್ರದ ಬಗ್ಗೆ ಇಲ್ಲಿ ಚರ್ಚೆ ಮಾಡುತ್ತಿಲ್ಲ. ದೇವತೆ ಎಂದು ಯಾವುದನ್ನು ಕರೆಯುತ್ತಾರೆ, ಎಂಬುದಕ್ಕೆ ಈ ಮಂತ್ರದ ವಿಷಯವನ್ನು ಪ್ರಸ್ತಾಪಿಸಿದೆ ಅಷ್ಟೆ.
ಆದ್ದರಿಂದ ಓದುಗರು ದೇವತೆ ಮತ್ತು ಭಗವಂತ ಎಂದರೆ ಒಂದೇ ಎಂದು ಅರ್ಥ ಮಾಡಿಕೊಳ್ಳಬಾರದು. ವಿಷಯವನ್ನೇ ಒಬ್ಬ ಭಗವಂತ ನೆಂದು ಅರ್ಥಮಾಡಿಕೊಂಡು ಬಿಟ್ಟರೆ ಅದು ವೇದಕ್ಕೆ ಪೂರ್ಣ ವಿರುದ್ಧವಾಗಿ ಬಿಡುತ್ತದೆ. ಭಗವಂತ ಒಬ್ಬನೇ. ಅವನ ಹೆಸರು ಬಹಳ, ಎಂದು ಅರ್ಥಮಾಡಿಕೊಂಡರೆ ಸಾಕು.
ಆದರೆ ಪ್ರಪಂಚದಲ್ಲಿ ಈಗ ನಡೆದಿರುವುದೇನು? ನನ್ನ ದೇವರು ಬೇರೆ, ನಿನ್ನ ದೇವರು ಬೇರೆ ದೇವರ ಹೆಸರಲ್ಲಿ ಬಡಿದಾಟ. ಇಲ್ಲಿ ಧರ್ಮ ಮತ್ತು ಮತದ ಸೂಕ್ಷ್ಮ ಅರಿತುಕೊಂಡರೆ ದೇವರು ತಾನಾಗಿಯೇ ಅರ್ಥವಾಗಿಯಾನು.
ಧರ್ಮ ಅಂದರೆ ಜೀವನಮಾರ್ಗ ಎಂದು ಅರ್ಥಮಾಡಿಕೊಂಡರೆ ಸಾಕು.ಅದಕ್ಕೆ ಸಾಕಷ್ಟು ವಿವರಣೆ ಗಳಿವೆ,ಅದನ್ನು ಇಲ್ಲಿ ಚರ್ಚಿಸುವ ಗೋಜಿಗೆ ಹೋಗುವುದಿಲ್ಲ. ಆದರೆ ಮತ ಬೇರೆ. ನನ್ನನ್ನು ಮತ್ತು ನನ್ನ ಮತಗ್ರಂಥವನ್ನು ನೀನು ನಂಬುವುದದರೆ ನೀನೂ ಕೂಡ ನನ್ನ ಮತದ ಅನುಯಾಯಿ. ಒಂದು ಮತ ಎನ್ನಬೇಕಾದರೆ ಅದಕ್ಕೊಬ್ಬ ಪ್ರವಾದಿ ಅದಕ್ಕೊಂದು ಗ್ರಂಥ ಇರಲೇ ಬೇಕು. ಉಧಾಹರಣೆಗೆ ಕ್ರೈಸ್ತ ಮತವನ್ನೇ ನೋಡೋಣ. ಪ್ರವಾದಿ ಏಸುಕ್ರಿಸ್ತ. ಆ ಮತದ ನಂಬಿಕೆಯ ಗ್ರಂಥ ಬೈಬಲ್, ಮೊಹಮದ್ ಪೈಗಂಬರ್ ಆರಂಭಿಸಿದ್ದು ಇಸ್ಲಾಮ್, ಬುದ್ಧನಿಂದ ಬೌದ್ಧ. ಏಸೂ ಕ್ರಿಸ್ತ ಹುಟ್ಟಿದನಂತರ ಆರಂಭವಾದ ಕ್ರೈಸ್ತಮತಕ್ಕೆ ೨೦೦೦ ವರ್ಷಗಳಾಗಿವೆ. ಉಳಿದ ಮತಗಳಿಗೂ ಆವುಗಳದೇ ನಿಶ್ಚಿತ ದಿನಗಳಿವೆ. ಆದರೆ ಧರ್ಮ ಹಾಗಲ್ಲ. ಹಿಂದು ಎಂಬುದು ಧರ್ಮ. ಮತ ಎನ್ನಲು ಅದಕ್ಕೆ ಒಬ್ಬ ಪ್ರವಾದಿ ಇಲ್ಲ. ಅದಕ್ಕೆ ಒಂದೇ ಮತಗ್ರಂಥವಿಲ್ಲ. ನೂರಾರು ಋಷಿಮುನಿಗಳು ಕಂಡುಕೊಂಡ ಸತ್ಯದ ಮಾರ್ಗವೇ ಹಿಂದು ಧರ್ಮ. ಅದೊಂದು ಸಂಸ್ಕೃತಿ.
ಏಕಮ್ ಸತ್ ವಿಪ್ರಾ ಬಹುದಾ ವದಂತಿ-ಎಂಬುದು ನಮ್ಮ ಋಷಿಮುನಿಗಳು ಕಂಡುಕೊಂಡ ಸತ್ಯ. ದೇವನು ಒಬ್ಬನೇ ನಾಮ ಹಲವು. ಈ ಸತ್ಯದ ಅರಿವಾದಾಗ ವಿಶ್ವದಲ್ಲಿ ದೇವರ ಹೆಸರಿನಲ್ಲಿ ಕಚ್ಚಾಟವಿರಲಾರದು. ಅಲ್ಲವೇ?