Pages

Saturday, September 18, 2010

ದಶಶ್ಲೋಕೀಗುರ್ವಷ್ಟಕಮ್ನಿರ್ವಾಣ ಷಟ್ಕಮ್
ವೇದಸುಧೆಯ ಆತ್ಮೀಯ ಅಭಿಮಾನಿಗಳೇ,
ನಿಮಗೆಲ್ಲರಿಗೂ ತಿಳಿದಿರುವಂತೆ ವೇದಾಧ್ಯಾಯೀ ಸುಧಾಕರಶರ್ಮರ ಉಪನ್ಯಾಸಗಳಿಂದ ಪ್ರೇರಿತವಾಗಿ ಸಾಮಾನ್ಯ ಜನರಿಗೆ ಸರಳ ಮಾತುಗಳಲ್ಲಿ ವೇದದ ವಿಚಾರಗಳನ್ನುತಿಳಿಸಲು "ವೇದಸುಧೆ" ಬ್ಲಾಗ್ ಆರಂಭಿಸಿದೆ. ಆದರೆ ಪ್ರಾರಂಭದ ದಿನಗಳಲ್ಲಿ ಶರ್ಮರ ವಿಪರೀತವಾದ ಪ್ರವಾಸಗಳಿಂದ ವೇದಸುಧೆಗೆ ಅವರು ಹೆಚ್ಚು ಸಮಯ ಕೊಡಲು ಸಾಧ್ಯವಾಗಲಿಲ್ಲ. ಹಾಗಾಗಿ ವೇದದ ವಿಚಾರಕ್ಕೆ ಪೂರಕವಾದ ಲೇಖನಗಳನ್ನು ವೇದಸುಧೆಯಲ್ಲಿ ಬರೆಯಲು ವೇದಸುಧೆಯ ಅಭಿಮಾನಿಗಳನ್ನೇ ಆಹ್ವಾನಿಸಲಾಯ್ತು. ನಮ್ಮ ಆಹ್ವಾನವನ್ನು ಮನ್ನಿಸಿ ಶ್ರೀ ವಿಷ್ಣುಭಟ್, ಶ್ರೀರಾಘವೇಂದ್ರ ನಾವಡ, ಶ್ರೀ ಕವಿ ನಾಗರಾಜ್,ಶ್ರೀ ಕವಿಸುರೇಶ್, ಶ್ರೀ ವಿಶಾಲ್, ಡಾ|| ಜ್ಞಾನದೇವ್,ಮತ್ತು ಶ್ರೀ ಹಂಸಾನಂದಿ ಇವರುಗಳು ಹಲವು ಲೇಖನಗಳನ್ನು ಬರೆದು ವೇದಸುಧೆಯನ್ನು ನಿರಂತರವಾಗಿ ಚಟುವಟಿಕೆಯಿಂದಿರುವಂತೆ ಸಹಕರಿಸುತ್ತಾ ಬಂದಿರುವುದು ಸಂತಸದ ಸಂಗತಿ. ಕಳೆದ ಒಂದೆರಡು ದಿನಗಳಿಂದ ಶ್ರೀ ಶರ್ಮರು ಹಾಸನ ಜಿಲ್ಲೆಯ ಬೇಲೂರು, ಹಾಸನ ಮತ್ತು ಅರಕಲಗೂಡಿನಲ್ಲಿ ಪ್ರವಾಸ ಕೈಗೊಂಡು ಹಲವು ಸತ್ಸಂಗಗಳಲ್ಲಿ ಪಾಲ್ಗೊಂಡಿರುತ್ತಾರೆ. ಅವರ ಎಲ್ಲಾ ಉಪನ್ಯಾಸಗಳನ್ನೂ ವೀಡಿಯೋ/ಆಡಿಯೋ ರೆಕಾರ್ಡ್ ಮಾಡಲಾಗಿದೆ. ಅಲ್ಲದೆ ವೇದಸುಧೆಗಾಗಿಯೇ ಹಲವು ವೀಡಿಯೋ ಕ್ಲಿಪ್ ಗಳನ್ನು ತಯಾರಿಸಲಾಗಿದೆ. ಎಲ್ಲವೂ ನಮ್ಮ ದೈನಂದಿನ ಜೀವನಕ್ಕೆ /ಆರೋಗ್ಯಕರ ಬದುಕಿಗೆ ನೆರವಾಗುವುದರಲ್ಲಿ ಸಂದೇಹವಿಲ್ಲ. ನೂರಾರು ವರ್ಷಗಳಿಂದ ನಾವು ಆಚರಿಸಿಕೊಂಡು ಬಂದಿರುವ ಹಲವು ಸಂಪ್ರದಾಯಗಳು/ಆಚರಣೆಗಳು ವೇದೋಕ್ತವಾಗಿರುವುದಿಲ್ಲವಷ್ಟೇ ಅಲ್ಲ , ನಮ್ಮ ಆಚರಣೆಗಳಲ್ಲಿ ಹಲವು ಆಚರಣೆಗಳು ಅಂಧಾನುಕರಣೆಗಳೇ ಆಗಿವೆ. ಸತ್ಯಾನ್ವೇಶಿಯಾದ ಶ್ರೀ ಶರ್ಮರು ವೇದದ ಆಧಾರವಿಲ್ಲದ ಆಚರಣೆಗಳನ್ನು ಖಂಡಿಸುತ್ತಾರಾದ್ದರಿಂದ ನಮಗೆ ಕಸಿವಿಸಿಯಾಗದಿರದು. ಆದರೆ ಅವರ ಪೂರ್ಣ ಉಪನ್ಯಾಸಗಳನ್ನು ತಾಳ್ಮೆಯಿಂದ ಕೇಳಿದವರಿಗೆ ಒಂದು ಹೊಸ ಹೊಳಹು ಸಿಗುವುದರಲ್ಲಿ ಸಂಶಯವಿಲ್ಲ. ಇಡೀ ಮನುಕುಲದ ಒಳಿತಿಗಾಗಿ ಇರುವ ವೇದವನ್ನು ಎಲ್ಲರಿಗೂ ತಲುಪಿಸುವಲ್ಲಿ ಯಾಕೋ ನಮ್ಮ ವೇದ ಪಂಡಿತರು ಸೋತಿದ್ದಾರೆ. ಆ ಕೆಲಸವನ್ನು ತಮ್ಮ ಶಕ್ತಿ ಮೀರಿ ಮಾಡುತ್ತಿರುವವರಲ್ಲಿ ನಮಗೆ ಶರ್ಮರು ಪ್ರಮುಖವಾಗಿ ಕಾಣುತ್ತಾರೆ. ಅವರ ನಿತ್ಯ ಬದುಕು ನೋಡಿದವರಿಗೆ ಅವರಂತಿರಬೇಕೆನಿಸುತ್ತದೆ. ಆದ್ದರಿಂದ ವೇದಸುಧೆಯು ತನ್ನ ಅಭಿಮಾನಿಗಳಿಗೆ ಇನ್ನು ಮುಂದೆ ವಾರದಲ್ಲಿ ಎರಡುದಿನಗಳು [ಪ್ರತಿ ಮಂಗಳವಾರ ಮತ್ತು ಶುಕ್ರವಾರ] ವೇದದ ವಿಚಾರಗಳನ್ನು ಶರ್ಮರ ಸರಳ ಮಾತುಗಳಲ್ಲಿ ಕೇಳಲು ಯೋಜನೆಯನ್ನು ಸಿದ್ಧಪಡಿಸುತ್ತಿದೆ. ಸಧ್ಯಕ್ಕೆ ಒಂದೆರಡು ತಿಂಗಳುಗಳಿಗಾಗುವಷ್ಟು ಸಾಮಗ್ರಿಯನ್ನು ಶರ್ಮರು ಒದಗಿಸಿರುತ್ತಾರೆ. ಅದು ಮುಗಿಯುವುದರೊಳಗಾಗಿ ವೇದಸುಧೆಯು ಪುನ: ಶರ್ಮರ ಬೆನ್ನು ಹತ್ತಿ ಮತ್ತಷ್ಟು ಸರಕು ಸಂಪಾದಿಸಿ ವೇದಸುಧೆಯಲ್ಲಿ ನೀಡುವ ಭರವಸೆಯನ್ನು ನೀಡುತ್ತದೆ. ವೇದಸುಧೆಯಲ್ಲಿ ಬರೆಯುವ ನಮ್ಮ ಬಳಗದ ಮಿತ್ರರು ಮಂಗಳವಾರ ಮತ್ತು ಶುಕ್ರವಾರ ಹೊರತು ಪಡಿಸಿ ಉಳಿದ ದಿನಗಳಲ್ಲಿ ನಿಮ್ಮ ಲೇಖನಗಳನ್ನು ವೇದಸುಧೆಯ ಅಭಿಮಾನಿಗಳಿಗೆ ನೀಡಬೇಕೆಂದು ವೇದಸುಧೆಯು ವಿನಂತಿಸುತ್ತದೆ. ಅಲ್ಲದೆ ಶರ್ಮರ ಉಪನ್ಯಾಸಗಳನ್ನು ತಾಳ್ಮೆಯಿಂದ ಕೇಳಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾ ಸಂದೇಹಗಳಿದ್ದರೆ ಶರ್ಮರಿಂದ ಸಮಾಧಾನವನ್ನು ಪಡೆಯಬಹುದಾಗಿಗೆ ಎಂದು ತಿಳಿಸ ಬಯಸುತ್ತದೆ. ಪುಂಸವನ ಉಪನ್ಯಾಸದ ಬಗ್ಗೆ ಶ್ರೀಯುತ ಕವಿ ಸುರೇಶ್ ಮತ್ತು ಶ್ರೀ ವಿಶಾಲ್ ಆರೋಗ್ಯಕರ ಚರ್ಚೆ ಮಾಡುತ್ತಾ ವೇದಸುಧೆಯ ಘನತೆಯನ್ನು ಹೆಚ್ಚಿಸಿರುತ್ತಾರೆ. ಹೀಗೆಯೇ ವೇದಸುಧೆಯಲ್ಲಿ ಆರೋಗ್ಯಕರ ಚರ್ಚೆಗಳು ನಡೆದು ಒಂದಿಷ್ಟು ಸದ್ವಿಚಾರಗಳು ಎಲ್ಲರಿಗೂ ತಲುಪುವಂತಾಗಲಿ. ಮುಂದಿನ ಏಪ್ರಿಲ್ ಮಾಹೆಯಲ್ಲಿ ವೇದೋಕ್ತ ಜೀವನ ಪಥ ಕಾರ್ಯಗಾರ ಒಂದನ್ನು ಹಾಸನ ಜಿಲ್ಲೆಯ ಕಾವೇರಿ ನದಿ ದಂಡೆಯ ಅಥವಾ ಹೇಮಾವತಿ ದಂಡೆಯ ಪ್ರಕೃತಿ ಮಡಿಲಲ್ಲಿ ಆಯೋಜಿಸಲು ಚಿಂತನೆ ನಡೆದಿದೆ. ಎಲ್ಲರಿಗೂ ಅದಕ್ಕೆ ಮುಕ್ತ ಆಹ್ವಾನವಿದೆ. ಎಂದಿನನಂತೆ ಸಹಕಾರವನ್ನು ಕೋರುತ್ತಾ, ವಂದನೆಗಳೊಂದಿಗೆ,
-ಹರಿಹರಪುರಶ್ರೀಧರ್
ನಿರ್ವಾಹಕ