Pages

Sunday, May 8, 2011

|ಶಿಖರಿಶಿರೋಮಣಿತುಂಗಹಿಮಾಲಯ- ಶೃಂಗನಿಜಾಲಯ-ಮಧ್ಯಗತೇ|


|ಶಿಖರಿಶಿರೋಮಣಿತುಂಗಹಿಮಾಲಯ-
ಶೃಂಗನಿಜಾಲಯ-ಮಧ್ಯಗತೇ|

ಗಂಗಾನದಿಯಲ್ಲಿ ಮಿಂದು ಪುನೀತರಾದ ಭಗವಾನ್ ಶಂಕರರು ಗಂಗಾತಟಕ್ಕೆ ಮೆಟ್ಟಿಲುಗಳನ್ನೇರಿ ಬರುವಾಗ ಅಸ್ಪೃಷ್ಯನೊಬ್ಬ ದಾರಿಗಡ್ಡಲಾಗಿ ಮಲಗಿಬಿಟ್ಟಿದ್ದ. ದಾರಿ ಕೊಡೆಂದು ಕೇಳಲಾಗಿ ದಾಟಿಹೋಗೆಂದು ಶಂಕರರಿಗೆ ಹೇಳಿದ. ಏನೇ ಮಾಡಿದರೂ ಅಗಲವಾದ ಪಾವಟಿಗೆಗಳನ್ನು ಹತ್ತುವಾಗ ಆತನ ಸ್ಪರ್ಷ್ಯವಾಗುವುದು ಅನಿವಾರ್ಯವಾಗಿತ್ತು. ಆತನಲ್ಲಿ ಏನೇ ಹೇಳಿದರೂ ಆತ ಅತಿಯಾದ ಕೋಪವನ್ನು ತೋರುತ್ತಿದ್ದ. ಶಂಕರರೂ ಸ್ವಲ್ಪ ಗದರಿದರು. ’ತೊಲಗಾಚೆ’ ಎಂದರು. ಆ ಕ್ಷಣ ಆತ ಕೇಳಿದ " ನೀನು ತೊಲಗಾಚೆ ಎಂದಿದ್ದು ನನ್ನ ದೇಹಕ್ಕೋ ಅಥವಾ ನನ್ನ ಆತ್ಮಕ್ಕೋ ? ದೇಹಕ್ಕಾದರೆ ನಿನ್ನದೂ ನನ್ನದೂ ಮತ್ತು ಇತರ ಎಲ್ಲಜೀವಿಗಳದೂ ಜಡಶರೀರವಷ್ಟೇ ? ದೇಹದೊಳಗಿನ ಆತ್ಮಕ್ಕಾದರೆ ನನ್ನೊಳಗೂ ನಿನ್ನೊಳಗೂ ಮತ್ತು ಇತರ ಎಲ್ಲಾ ಜೀವಿಗಳೊಳಗೂ ಇರುವ ಆ ಆತ್ಮವೊಂದೇ ಆಗಿದೆ. " ಶಂಕರರು ತಬ್ಬಿಬ್ಬಾಗಿಬಿಟ್ಟರು. ದಿಟ್ಟಿಸಿ ನೋಡುತ್ತಾರೆ ಆತನಲ್ಲಿ ಸಾಕ್ಷಾತ್ ವಿಶ್ವನಾಥನ ರೂಪ ಗೋಚರಿಸುತ್ತದೆ. ಮಹಾದೇವನೇ ತನ್ನನ್ನು ಪರೀಕ್ಷಿಸಲು ಬಂದಿದ್ದನ್ನು ನೋಡಿದ ಶಂಕರರ ಬಾಯಿಂದ ’ಮನೀಷಾ ಪಂಚಕಮ್’ ಹೊರಡಲ್ಪಟ್ಟಿತು!

ಅಂದಿನ ಗೊಂಡಾರಣ್ಯಗಳಲ್ಲಿ ಕಾಲುದಾರಿಯೂ ಇಲ್ಲದ ಜಾಗಗಳಲ್ಲಿ ತಾವೇ ದಾರಿಯನ್ನು ಕಲ್ಪಿಸಿಕೊಂಡು ಶಂಕರರು ಓಡಾಡುತ್ತಿದ್ದರು. ಮಾರ್ಗಮಧ್ಯೆ ಅವರಿಗೆ ಹಲವು ಅಡೆತಡೆಗಳು ಕಾಣಿಸುತ್ತಿದ್ದವು. ಹೇಳಿಕೇಳಿ ಎಳೆಯ ವಟುವಾಗಿದ್ದ ಅವರ ಜೊತೆಗೆ ಆರಂಭದ ದಿನಗಳಲ್ಲಿ ಸಂಚರಿಸಲು ಯಾರೂ ಇದ್ದಿರಲಿಲ್ಲವೆನಿಸುತ್ತದೆ. ಈ ಸೃಷ್ಟಿಯ ಹಲವು ಅಶರೀರ ರೂಪಗಳು ತಮ್ಮ ಮುಕ್ತಿಗಾಗಿ ಶಂಕರರನ್ನು ಅಡರಿಕೊಳ್ಳುತ್ತಿದ್ದವು. ಪಿಶಾಚಿಗಳು, ದೆವ್ವ-ಭೂತಗಳು, ಬ್ರಹ್ಮರಾಕ್ಷಸಾದಿಗಳು ಮಾರ್ಗದಲ್ಲಿ ಸದಾ ಇರುತ್ತಲೇ ಇದ್ದವು. ಇಂದೂ ಕೂಡ ಅವು ಇರುತ್ತವಾದರೂ ನಮಗೆ ಅವುಗಳ ಗೋಚರಿಸುವಿಕೆ ನೇರವಾಗಿ ಕಾಣದೇ ಪರೋಕ್ಷವಾಗಿ ಕಾಣಿಸುತ್ತದೆ. ಉದಾಹರಣೆಗೆ ಎಲ್ಲವೂ ಸರಿಯಾಗಿದ್ದ ವಾಹನ ಬ್ರೇಕ್ ಫೇಲಾಗುವುದು, ಇದ್ದಕ್ಕಿದ್ದಂತೇ ಯಾವುದೋ ಪ್ರಾಣಿ ಅಡ್ಡಬಂದು ಆಮೇಲೆ ನಾಪತ್ತೆಯಾಗುವುದು, ಚಲಿಸುತ್ತಿರುವ ವಾಹನದಲ್ಲಿ ಭಾರಜಾಸ್ತಿ ಎನಿಸಿ ಅಲ್ಲಾಡಿದಂತಾಗುವುದು, ವಾಹನ ಎಷ್ಟೇ ವೇಗದಲ್ಲಿ ಚಲಿಸಿದರೂ ದಾರಿಸಾಗದೇ ಉಳಿಯುವುದು, ವಾಹನದ ವೇಗ ಮಿತಿಮೀರಿದಂತೆನಿಸಿವುದು ---ಇವೆಲ್ಲಕ್ಕೂ ಕೆಲವೊಮ್ಮೆ ಸ್ಥಾನಿಕ ಅಶರೀರಿಗಳ ಆಕ್ರಮಣ ಅಥವಾ ಉಪದ್ರವ ಕಾರಣವಾಗುತ್ತದೆ. ದಿವ್ಯಶಕ್ತಿಯುಳ್ಳ ಶಂಕರರು ಅವುಗಳಿಗೆಲ್ಲಾ ಉತ್ತರಿಸುತ್ತಿದ್ದರು, ಕಾಲಾನಂತರದಲ್ಲಿ ಮಾರ್ಗಗಳಲ್ಲಿ ಚಲಿಸುವ ಜನರಿಗೆ ಉಪಯುಕ್ತವಾಗಲಿ ಎಂಬ ಕಾರಣಕ್ಕೆ ’ಮಾರ್ಗ ಬಂಧು ಸ್ತೋತ್ರ’ ವನ್ನು ರಚಿಸಿದರು. ಈ ಮಾರ್ಗಬಂಧು ಸ್ತೋತ್ರದ ವೈಶಿಷ್ಟ್ಯವೆಂದರೆ ಇಹದಲ್ಲಿ ಚಲಿಸುವವರಿಗೂ, ಧ್ಯಾನಮಾರ್ಗದಲ್ಲಿ ಪರಾಶಕ್ತಿಯ ಗೋಚರವನ್ನು ಬಯಸಿ ಚಲಿಸುವವರಿಗೂ ಇದು ಉಪಯುಕ್ತವಾಗಿದೆ. ಧ್ಯಾನಕ್ಕೆ ಕುಳಿತಾಗಲೂ ಕೂಡ ಮನಸ್ಸನ್ನು ಕೇಂದ್ರೀಕೃತಗೊಳಿಸಲು ಅಡ್ಡಿಪಡಿಸುವ ಹಲವು ಭಾವತರಂಗಗಳು ಬರುತ್ತವೆ. ಅವುಗಳೆಲ್ಲದರಿಂದ ಮುಕ್ತಿ ಸಿಗಬೇಕಾದರೆ ಶಂಕರರ ’ಮಾರ್ಗ ಬಂಧು ಸ್ತೋತ್ರ’ ವನ್ನು ಪಠಿಸಿದರೆ ಉತ್ತಮ.

ಆದಿ ಶಂಕರರು ಮಾತೆಯ ಬಗ್ಗೆ ಬಹಳ ಕಾಳಜಿ ಉಳ್ಳವರಾಗಿದ್ದರು. ಏಕಮಾತ್ರ ಸಂತಾನವಾದ ಅವರು ಸನ್ಯಾಸಿಯಾಗುತ್ತೇನೆಂದು ಹೊರಟಾಗ ಅವರ ತಾಯಿ ಬಹಳ ಪ್ರಯಾಸದಿಂದ ಒಪ್ಪಿಕೊಳ್ಳಬೇಕಾಯಿತು. ಇದ್ದೊಬ್ಬ ಮಗ ಸನ್ಯಾಸಿಯಾಗಿಬಿಟ್ಟರೆ ಸಂಸಾರಿಯಾದ ತನ್ನನ್ನು ನೋಡಿಕೊಳ್ಳುವವರಾರು?. ಆದರೂ ಆ ಮಹಾತಾಯಿ ತನ್ನ ಸ್ವಾರ್ಥವನ್ನು ಮರೆತು ಜಗದ ಜನತೆಗೆ ಉಪಕಾರವಾಗಲಿ ಎಂಬ ದೃಷ್ಟಿಯಿಂದ ಮಗನನ್ನು ಹರಸಿ ಬೀಳ್ಕೊಟ್ಟರು, ಹೊರಡುವಾಗ ಮಗ ಹೇಳಿದ " ಅಮ್ಮಾ ನಿನ್ನ ಕೊನೆಗಾಲದಲ್ಲಿ ಎಲ್ಲಿದ್ದರೂ ನಾನು ಬಂದು ತಲುಪುತ್ತೇನೆ. " ಹೊರಟ ಶಂಕರರು ದೇಶಾಂತರ ಹಲವು ಪ್ರದೇಶಗಳಲ್ಲಿ ಸಂಚರಿಸಿದರು. ಹೀಗಿರುವಾಗ ಒಮ್ಮೆ ಅವರಿಗೆ ತಾಯಿಯ ಅಂತ್ಯ ಸಮೀಪಿಸಿದ ದೃಷ್ಟಾಂತವಾಯಿತು. ಆ ಕೂಡಲೇ ಹೊರಟುನಿಂತ ಅವರು ಪೂರ್ವಾಶ್ರಮದ ಕಾಲಟಿಯ ಮನೆಗೆ ಓಡೋಡಿ ಹೋದರು. ಶಂಕರರ ಅಮ್ಮ ಕೊನೆಯ ಘಟ್ಟದಲ್ಲಿದ್ದರು. ಮಗ ಬಂದುದನ್ನು ಗ್ರಹಿಸುತ್ತಲೇ ಇಹವನ್ನು ತೊರೆದರು. ತೊಡೆಯಮೇಲೆ ತಲೆಇಟ್ಟು ಇಹವನ್ನು ತ್ಯಜಿಸಿದ ಅಮ್ಮನ ಅಂತ್ಯಕ್ರಿಯೆಗೆ ವ್ಯವಸ್ಥೆಮಾಡಬೇಕಾಗಿತ್ತು. ಸನ್ಯಾಸಿಯಾದವನು ಇಹದ ಬಂಧನವನ್ನು ಕಳಚಿಕೊಳ್ಳುವುದರಿಂದ ಅಮ್ಮನ ಉತ್ತರಕ್ರಿಯೆಗಳನ್ನು ಅವರು ಮಾಡುವಂತಿರಲಿಲ್ಲ. ಆದರೆ ಶಂಕರರು ಅಮ್ಮನಿಗೆ ವಚನವಿತ್ತಿದ್ದರು! ಬಹುಶಃ ಧರ್ಮಸಂಕಟವೆಂದರೇ ಇದು! ಸನ್ಯಾಸಿ ಶಂಕರರು ತಾನೇ ಅಮ್ಮನ ಅಂತ್ಯಕ್ರಿಯೆಯನ್ನು ಪೂರೈಸಲು ನಿಂತರು. ಅಕ್ಕ-ಪಕ್ಕದ ಬ್ರಾಹ್ಮಣರಾದಿಯಾಗಿ ಯಾರೇ ಆಗಲಿ ಅವರ ಸಹಾಯಕ್ಕೆ ಬರಲಿಲ್ಲ-ಏಕೆಂದರೆ ಸನ್ಯಾಸಿ ಉತ್ತರಕ್ರಿಯೆಯನ್ನು ಮಾಡುತ್ತಾನೆ ಎಂಬ ಕಾರಣಕ್ಕಾಗಿ. ಆದರೂ ಶಂಕರರು ಧೃತಿಗೆಡಲಿಲ್ಲ. ಅಲ್ಲಿಲ್ಲಿ ಅಲೆದು ಒಂದಷ್ಟು ಸೌದೆ ಒಟ್ಟುಗೂಡಿಸಿದರು, ಚಿತೆಯನ್ನು ಮನೆಯ ಮಗ್ಗುಲಲ್ಲೇ ನಿರ್ಮಿಸಿದರು. ಗತಿಸಿದ ಅಮ್ಮನ ಶರೀರವನ್ನು ಚಿತೆಯಮೇಲಿಟ್ಟು ದಹಿಸಿದರು. ಅಮ್ಮನ ಆತ್ಮಕ್ಕೆ ಸದ್ಗತಿಯನ್ನು ಕರುಣಿಸಿದರು. [ಈ ನೆನಪಿನಲ್ಲಿ ಕೇರಳದಲ್ಲಿ ಇವತ್ತಿಗೂ ಹಲವೆಡೆ ಸತ್ತವ್ಯಕ್ತಿಗಳನ್ನು ಮನೆಗಳ ಮಗ್ಗುಲಲ್ಲೇ ಸುಡುವುದು ವಾಡಿಕೆ.]

ಸನ್ಯಾಸಿಗಳಿಗೆ ಜನ್ಮಕೊಟ್ಟ ಅಪ್ಪನೂ ನಮಸ್ಕರಿಸಬಹುದು. ಆದರೆ ತಾಯಿಯಿಂದ ಮಾತ್ರ ಅವರು ನಮಸ್ಕಾರವನ್ನು ಸ್ವೀಕರಿಸುವುದಿಲ್ಲ! ತಾಯ ಋಣ ಅಂಥದು. ಒಂಬತ್ತು ತಿಂಗಳು ಹೊತ್ತು-ಹೆತ್ತು ಸಲಹುವ ಮಮತಾಮಯಿ ತಾಯಿ ಎಂದೂ ತನ್ನ ಮಗುವಿಗೆ ಕೆಟ್ಟದ್ದನ್ನು ಬಯಸುವುದಿಲ್ಲ. ಗಾದೆಯೊಂದು ಹೀಗಿದೆ ’ತಾಯಿ ಮಗನ ಹೊಟ್ಟೆಯನ್ನು ನೋಡುತ್ತಾಳೆ ಹೆಂಡತಿ ಗಂಡನ ಜೇಬು ನೋಡುತ್ತಾಳೆ’ ಇದರರ್ಥ : ದುಡಿದು ಮರಳಿದ ಮಗನ ಹೊಟ್ಟೆ ಯಾವ ರೀತಿ ಹಸಿದು ಪರಿತಪಿಸಿತ್ತಿರಬಹುದು ಎಂಬುದು ತಾಯಿಯ ಚಿಂತೆ ಆದರೆ ಇಂದಿನ ದುಡಿಮೆ ಎಷ್ಟಾಗಿರಭುದು ಎಂಬುದು ಹೆಂಡತಿಯ ಚಿಂತೆ! ತನ್ನ ಊಟಕ್ಕೂ ಮೊದಲು ಮಗನ/ಮಕ್ಕಳ ಊಟವಾಯಿತೇ ಎಂಬುದನ್ನು ತಾಯಿ ಖಾತ್ರಿಪಡಿಸಿಕೊಳ್ಳುತ್ತಾಳೆ. ಒಮ್ಮೆ ತನಗಿರದಿದ್ದರೂ ಮಕ್ಕಳಿಗೆ ಏನನ್ನಾದರೂ ಒದಗಿಸಲು ಪ್ರಯತ್ನಿಸುವ ಆ ತಾಯ ತಾಯ್ತನದ ಜವಾಬ್ದಾರಿ, ಕಳಕಳಿ ಕೇವಲ ಬಾಯಿಂದ ಹೇಳಿ ತೀರಿಸಲಾಗುವ ಋಣವದಲ್ಲ. ತನ್ನ ತಾಯಿಯಲ್ಲೂ ಜಗನ್ಮಾತೆಯನ್ನೇ ಕಂಡ ಶಂಕರರು ’ ದೇವ್ಯಪರಾಧ ಕ್ಷಮಾಪಣ ಸ್ತೋತ್ರ’ವನ್ನು ರಚಿಸಿದರು. ಅದರಲ್ಲಿ ಹಲವು ಸರ್ತಿ ಹೇಳಿದರು--" ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾ ನ ಭವತಿ " [ಒಬ್ಬ ಕೆಟ್ಟ ಮಗುವಿರಬಹುದೇ ಹೊರತು ಕೆಟ್ಟ ತಾಯಿ ಇರಲಾರಳು]

ಆಶುಕವಿತ್ವದ ಆಚಾರ್ಯ ಶಂಕರರು ಹೋದಲ್ಲೆಲ್ಲಾ ಹಲವು ಕೃತಿಗಳನ್ನು ಸರಳ ಸಂಸ್ಕೃತದಲ್ಲಿ ರಚಿಸಿದರು. ಮನೋಹರವಾದ ಶಬ್ದಲಾಲಿತ್ಯದಿಂದ ಕೂಡಿದ ಸ್ತೋತ್ರಗಳು, ಶ್ಲೋಕಗಳು ಎಷ್ಟೇ ಸರ್ತಿ ಉಚ್ಚರಿಸಿದರೂ ಮತ್ತೆಮತ್ತೆ ತಿನ್ನಬೇಕೆನಿಸುವ [ಉಲಿಯಬೇಕೆನಿಸುವ] ಹಪಹಪಿಕೆಯನ್ನೂ ಮನಶ್ಯಾಂತಿಯನ್ನೂ ಕರುಣಿಸುವ ರಸಪೂರಿತ ಹಣ್ಣುಗಳು! ಆಸೇತು ಹಿಮಾಲಯ ಪರ್ಯಂತ ಹಲವಾರು ಬಾರಿ ತಿರುಗಾಡಿದ ಶಂಕರರು ಇಡೀ ಅಖಂಡ ಭರತಖಂಡವನ್ನೂ [ಅಪಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಸಹಿತದ ಭಾರತ] ಒಮ್ಮೆ ಮಾತೆಯಾಗಿಯೂ ಇನ್ನೊಮ್ಮೆ ಪಿತೃವಾಗಿಯೂ ಕಂಡು ಸ್ತೋತ್ರಗಳನ್ನು ಅನುಗ್ರಹಿಸಿದರು. ಜಗತ್ತೇ ಅರ್ಧನಾರೀಶ್ವರ ಶಕ್ತಿಯ ಪ್ರತೀಕವೆಂಬುದು ಅವರ ಅಭಿಮತವಾಗಿತ್ತು.

ಅಯಿ ಜಗದಂಬ ಮದಂಬ ಕದಂಬ-
ವನಪ್ರಿಯವಾಸಿನಿ ಹಾಸರತೇ |
ಶಿಖರಿಶಿರೋಮಣಿತುಂಗಹಿಮಾಲಯ-
ಶೃಂಗನಿಜಾಲಯ-ಮಧ್ಯಗತೇ|
ಮಧುಮಧುರೇ ಮಧುಕೈಟಭಭಂಜಿನಿ
ಕೈಟಭಭಂಜಿನಿ ರಾಸರತೇ |
ಜಯ ಜಯ ಹೇ ಮಹಿಷಾಸುರಮರ್ದಿನಿ
ರಮ್ಯಕಪರ್ದಿನಿ ಶೈಲಸುತೇ ||

ಹಿಮಾಲಯಗಳೂ ಗಿರಿಶಿಖರಗಳೂ ಕದಂಬವನಗಳೂ ಶೃಂಗನಿಜಾಲಯಗಳೂ ಎಲ್ಲೆಲ್ಲೂ ದೇವಿಯ, ಜಗನ್ಮಾತೃಕೆಯ ರೂಪವನ್ನು ಕಂಡ, ಆ ದಿವ್ಯರೂಪದ ಮನಸಾ ಉಂಡ ಮಹಾಮಹೋಪಾಧ್ಯಾಯ ಶಂಕರರು ಮುಂದಿನ ಪೀಳಿಗೆಗೆ ತಾನು ಕಂಡ ಸೌಂದರ್ಯವನ್ನು ಸ್ತೋತ್ರಗಳಲ್ಲಿ ಕಟ್ಟಿಕೊಟ್ಟರು.

ಹಿಂದೊಮ್ಮೆ ತಮಿಳುನಾಡಿನ ಮಧುರೆಯಲ್ಲಿ ಮೀನಾಕ್ಷಿ ಸುಂದರೇಶ್ವರ ದೇವಸ್ಥಾನದಲ್ಲಿ ನೆಲೆಸಿರುವ ಮೀನಾಕ್ಷಿ ಅಮ್ಮನವರು ಕಾರಣಾಂತರಗಳಿಂದ ಕ್ರೋಧಗೊಂಡು ರಾತ್ರಿಯಹೊತ್ತು ಕಾಳಿಯಾಗಿ ಸಂಚರಿಸುತ್ತ ಆಲಯವನ್ನು ಪ್ರವೇಶಿಸುವ ಜನರನ್ನೂ ಪ್ರಾಣಿಗಳನ್ನೂ ನುಂಗುತ್ತಾ ತಿರುಗುತ್ತಿದ್ದಳಂತೆ. ಹಲವಾರು ಬಲಿಗಳನ್ನು ತೆಗೆದುಕೊಳ್ಳುತ್ತಿದ್ದ ಮಹಾಕಾಳಿಯ ಆ ರೂಪವನ್ನು ನೆನೆಯುತ್ತಾ ಹಗಲಿನಲ್ಲೂ ಅರ್ಚಕರು ದೇವಸ್ಥಾನಕ್ಕೆ ಹೋಗುವುದಕ್ಕೆ ಹೆದರತೊಡಗಿದರು! ತೀರ್ಥಯಾತ್ರೆಮಾಡುತ್ತಾ ಬಂದ ಶಂಕರರು ಯಾರ ಮಾತನ್ನೂ ಕೇರ್‍ಳದೇ ರಾತ್ರಿಹೊತ್ತು ಅಲ್ಲೇ ತಂಗಿದರು. ಆ ರಾತ್ರಿ ಅಮ್ಮ ಮೀನಾಕ್ಷಿ ಕಾಳಿಯಾಗಿ ಭಯಂಕರವಾಗಿ ಘರ್ಜಿಸುತ್ತಾ ಏಕಾಏಕಿಯಾಗಿ ಕುಳಿತ ಶಂಕರರೆಡೆಗೆ ಬಂದು ತಿನ್ನುವುದಾಗಿ ಹೆದರಿಸಿದಳು. ಶಂಕರರು ಹೇಳಿಕೇಳಿ ೧೬-೧೭ರ ಹರೆಯದ ಬಾಲಕ! ಪುಕ್ಕಲನಾಗಿದ್ದರೆ ಓಡಿಹೋಗಬೇಕಾಗಿತ್ತು. ಆದರೆ ಶಂಕರರ ವಿಷಯದಲ್ಲಿ ಹಾಗಿರಲಿಲ್ಲ, ಅಮ್ಮನ ರೂಪವನ್ನೇ ಬದಲಿಸಲು ಅವರು ಅಲ್ಲುಳಿದಿದ್ದರು! ಮೀನಾಕ್ಷಿಯನ್ನು ಕಂಡು ನಕ್ಕುಬಿಟ್ಟರು! ಭಯಂಕರಳಾದ ತನ್ನನ್ನು ನೋಡಿ ನಗುತ್ತಿರುವ ಹುಡುಗನನ್ನು ಕಂಡು ಅಮ್ಮನಿಗೂ ಆಶ್ಚರ್ಯವಾಯಿತು. " ಜಗತ್ತಿಗೇ ಅಮ್ಮನಾದ ನೀನು ಮಕ್ಕಳನ್ನೆಲ್ಲಾ ಹೀಗೆ ಹೆದರಿಸುವುದೇ ? " ಎಂಬ ಶಂಕರರ ಪ್ರಶ್ನೆಗೆ ಅಮ್ಮನಲ್ಲಿ ಉತ್ತರವಿರಲಿಲ್ಲ. ಅಮ್ಮನ ಆವೇಶ ನಿಧಾನಾವಾಗಿ ಇಳಿಯುತ್ತಾ ಸಾಗಿತು. ಶಂಕರರಲ್ಲಿ ಸುಂದರೇಶ್ವರನ ರೂಪ ಆಕೆಗೆ ಮನದಟ್ಟಾಯಿತು. ಆದರೂ ಆಕೆ ಪಣವೊಂದನ್ನೊಡ್ಡಿ ಅದನ್ನು ಗೆಲ್ಲುವಂತೇ ಆಜ್ಞಾಪಿಸಿದಳು. ಅದರಂತೇ ಆ ರಾತ್ರಿ ಆ ಪಣವನ್ನು ಗೆಲ್ಲುವ ಸಲುವಾಗಿ ಶಂಕರರು ಚಕ್ರಬಂಧವೊಂದನ್ನು ರಚಿಸುತ್ತಾ ಶ್ಲೋಕದಲ್ಲಿ ಅವುಗಳನ್ನು ವಿವರಿಸುತ್ತಾ ಕುಳಿತರು. ಬೆಳಗಾಗುವಷ್ಟರಲ್ಲಿ ದೇವಿಗೆ ಸೌಮ್ಯಕಳೆ ಬಂದಿತ್ತು. ಶಂಕರರನ್ನು ಪ್ರೀತಿಯಿಂದ ಮೈದಡವಿ ವಿಗ್ರಹದಲ್ಲಿ ಐಕ್ಯವಾದವಳು ಮುಂದೆಂದೂ ಮತ್ತೆ ಕಾಳಿಯ ಉಗ್ರಸ್ವರೂಪವನ್ನು ಧರಿಸಲಿಲ್ಲ. ಅಂದಿನದಿನ ರಚಯಿತವಾದ ಆ ಚಕ್ರಬಂಧವೇ ಶ್ರೀಚಕ್ರವೆಂದು ಪ್ರಸಿದ್ಧಿಪಡೆಯಿತು! ಅದರ ಆರಾಧನೆಗೆ ಸೌಂದರ್ಯಲಹರೀ ಮತ್ತು ಲಲಿತಾ ಸಹಸ್ರನಾಮಗಳು ಶಂಕರರಿಂದ ಕೊಡಲ್ಪಟ್ಟವು. ಇಂದಿಗೂ ಆ ಚಕ್ರವನ್ನು ಗೃಹ ಗೋಷ್ಠಗಳಾದಿಯಾಗಿ ಹಲವೆಡೆ ಧನಾಕರ್ಷಕ ಯಂತ್ರವೆಂದು ಇಟ್ಟು ಪೂಜಿಸುವುದನ್ನು ನೋಡಬಹುದು. ಇದೇ ಶ್ರೀಚಕ್ರವನ್ನು ಶಂಕರರು ಆಮೇಲೆ ಹಲವೆಡೆಗಳಲ್ಲಿ ಶಿಲೆಗಳಮೇಲೆ ಕೊರೆದು ಪ್ರತಿಷ್ಠಾಪಿಸಿದರು. ಪ್ರಮುಖವಾಗಿ ತಿರುಪತಿ, ಶೃಂಗೇರಿ ಮುಂತಾದೆಡೆಗಳಲ್ಲಿ ಅವುಗಳನ್ನು ವಿಗ್ರಹಗಳೆಡೆಯಲ್ಲೇ ಬರೆದರು.

ಸನಾತನ ಧರ್ಮ ತನ್ನ ಮೂಲಧ್ಯೇಯಗಳನ್ನು ಕಳೆದುಕೊಂಡು ಕ್ರಮೇಣ ಹಿಂಸಾತ್ಮಕವಾಗಿ ಪರಿವರ್ತವಾಗುತ್ತಿರುವ ಸನ್ನಿವೇಶದಲ್ಲಿ ಪರಶಿವನ ನೇರ ಅವತಾರವಾಗಿ ಶಂಕರನಾಗಿ ಕೇರಳದ ಕಾಲಟಿಯಲ್ಲಿ ಆರ್ಯಾಂಬೆ ಹಾಗೂ ಶಿವಗುರು ಎಂಬ ದಂಪತಿಯ ಮಗುವಾಗಿ ಜನಿಸಿ ಕೇವಲ ೩೨ ವರ್ಷಗಳಕಾಲ ಭೌತಿಕ ಕಾಯದಿಂದ ಜೀವಿಸಿದ್ದ ಶ್ರೀ ಶಂಕರರು ಹಿಮಾಲಯದ ಕೇದಾರನಾಥದಲ್ಲಿ ಶಿಖರಗಾಮಿಯಾಗಿ ನಡೆದು ಅದೃಷ್ಯರಾದರು, ಪ್ರಕೃತಿಯಲ್ಲಿ ಭೌತಿಕವಾಗಿ ಕಾಣದಾದರು. ಆದರೂ ಇಂದಿಗೂ ಅನೇಕ ನಾಸ್ತಿಕ ಜನರಿಗೆ ಅವರ ಪ್ರೌಢಿಮೆಯನ್ನೂ ಪಾಂಡಿತ್ಯವನ್ನೂ, ಎಳವೆಯ ಅನನ್ಯ ಸಾಧನೆಯನ್ನೂ ಅಲ್ಲಗಳೆಯಲಾಗುವುದಿಲ್ಲ. ತತ್ವವೊಂದು ಹೀಗಿದೆ-- ಮೌಂಟ್ ಎವರೆಷ್ಟ್ ಏರಿದವರಿಗೆ ಮಾತ್ರ ಅಲ್ಲಿಂದ ಭೂಮಂಡಲ ಯಾವರೀತಿ ಕಾಣುತ್ತದೆ ಎಂಬುದು ತಿಳಿಯುತ್ತದೆ ಹೇಗೋ ಹಾಗೇ ಅವರವರ ದೃಷ್ಟಿಕೋನದಂತೇ ಮುಂದೆ ಹಲವಾರು ಪಂಥಗಳೂ ಭಕ್ತಿಪಂಥಗಳೂ ಹುಟ್ಟಿಕೊಂಡರೂ ಯಾವುದೇ ಕೊರತೆಯನ್ನಾಗಲೀ ಸಂಶಯವನ್ನಾಗಲೀ ಇಡದೇ ಹಲವು ಜ್ವಲಂತ ಸಾಕ್ಷಿಗಳೊಂದಿಗೆ ಸದಾ ಅ-ದ್ವೈತ ಎಂದು ಸಾರುವ ಪ್ರಕೃತಿಧರ್ಮವನ್ನು ಗಮನಿಸಿದರೆ ಶಂಕರರು ಪ್ರಕೃತಿಯ ಸಹಜ ಧರ್ಮವನ್ನೇ ನಮಗೆ ತಿಳಿಸಿದ್ದಾರೆ ಎಂಬುದು ಗೋಚರವಾಗುತ್ತದೆ. ಕೇವಲ ೩೨ ವಯಸ್ಸೇ ಆಗಿದ್ದರೂ ಹಲವರಿಗೆ ಶಂಕರರು ಮಾತಾ-ಪಿತೃ ಸ್ವರೂಪಿಯಾಗಿ ಕಂಡಿದ್ದಾರೆ; ಕಾಣುತ್ತಾರೆ. ಶಂಕರರಿಗೂ ಮತ್ತು ಅವರಲ್ಲಿರುವ ಮಾತೆಯರೂಪಕ್ಕೂ ನಮಿಸಿದರೆ ಜನ್ಮದಿನವಾದ ಇಂದು ಅವರನ್ನು ನೆನೆದಿದ್ದೂ ಆಗುತ್ತದೆ ಮತ್ತು ಮಾತೆಯರ ದಿನವಾದ ಇಂದು ಅವರನ್ನೂ ಸ್ಮರಿಸಿದ ಹಾಗಾಗುತ್ತದೆ ಎಂಬಕಾರಣದಿಂದ ಹೀಗೆ ನಿಮ್ಮೊಂದಿಗೆ ವಿಷಯ ಪ್ರಸ್ತಾಪಿಸಿದೆ.

ಪದಕಮಲಂ ಕರುಣಾನಿಲಯೇ
ವರಿವಸ್ಯತಿ ಯೋನುದಿನಂ ಸ ಶಿವೇ |
ಅಯಿ ಕಮಲೇ ಕಮಲಾನಿಲಯೇ
ಕಮಲಾನಿಲಯಃ ಸ ಕಥಂ ನ ಭವೇತ್ |
ತವ ಪದಮೇವ ಪರಂಪದಮಿತ್ಯನು-
ಶೀಲಯತೋ ಮಮ ಕಿಂ ನ ಶಿವೇ |
ಜಯ ಜಯ ಹೇ ಮಹಿಷಾಸುರಮರ್ದಿನಿ
ರಮ್ಯಕಪರ್ದಿನಿ ಶೈಲಸುತೇ ||


|| ಸಮಸ್ತ ಸನ್ಮಂಗಳಾನೀ ಭವಂತು ||