Pages

Tuesday, August 17, 2010

ವೇದೋಕ್ತ ಜೀವನ ಪಥ

ಜೀವನ ಬುನಾದಿ -16

ವೇದಗಳ ಈ ಪ್ರೋತ್ಸಾಹಪ್ರದವಾದ ಕರೆಗೆ ಕಿವಿಗೊಡೋಣ:

ಸರ್ವೋ ವೈ ತತ್ರ ಜೀವತಿ ಗೌರಶ್ವಃ ಪುರುಷಃ ಪಶುಃ
ಯತ್ರೇದಂ ಬ್ರಹ್ಮ ಕ್ರಿಯತೇ ಪರಿಧಿರ್ಜೀವನಾಯ ಕಮ್ (ಅಥರ್ವ. 8.2.25)

[ಯತ್ರ] ಎಲ್ಲಿ [ಇದಂ ಬ್ರಹ್ಮ] ಈ ವೇದಜ್ಞಾನವು [ಕಮ್] ಅನುಕೂಲವಾದ ರೀತಿಯಲ್ಲಿ [ಜೀವನಾಯ ಪರಿಧಿಃ ಕ್ರಿಯತೇ] ಜೀವನದ ಸುತ್ತುಗಟ್ಟಾಗಿ ಮಾಡಲ್ಪಡುತ್ತದೋ [ತತ್ರ] ಅಲ್ಲಿ [ಗೌಃ] ಗೋವು [ಅಶ್ವಃ] ಕುದುರೆ [ಪುರುಷಃ] ಮಾನವ [ಪಶುಃ] ಇತರ ಜೀವರಾಶಿ [ಸರ್ವ] ಎಲ್ಲರೂ [ವೈ] ನಿಜವಾಗಿ [ಜೀವತಿ] ಜೀವಿಸುತ್ತವೆ. ಬೇರೆ ಸಂಪ್ರದಾಯಗಳೊಂದಿಗೆ ವೇದೋಪದೇಶವನ್ನು ಹೋಲಿಸಲು ಸಾಧ್ಯವಿಲ್ಲ. ವೇದಗಳ ವೈಭವವೇ ಬೇರೆ, ಅವುಗಳ ಸ್ತರವೇ ಬೇರೆ. ಎಲ್ಲಾ ಜಾತಿಗಳವರೂ, ಎಲ್ಲಾ ಮತಗಳವರೂ ವೇದಗಳು ತಮ್ಮವೆಂದು ಹೇಳಿಕೊಳ್ಳಬಹುದು. ಏಕೆಂದರೆ ವೇದೋಪದೇಶ ಮಾನವ ಮಾತ್ರರ ಸರ್ವವಿಧೋತ್ಕರ್ಷಕ್ಕೆ ಎಂದಿಗೂ ನಿರರ್ಥಕವಾಗದ ದಿವ್ಯಸಾಧನ.

ಮಾನವಜೀವನ ಸಾರ್ಥಕವಾಗಬೇಕಾದರೆ ತನ್ನತನವನ್ನು ಪೂರ್ಣವಾಗಿ ಲಯವಾಗಿಸಬೇಕು. ತಾನು ಸಮಾಜಜೀವಿ, ಓರ್ವನೇ ಜೀವಿಸಲಾರೆ ಎಂಬ ಸತ್ಯವನ್ನು ತಿಳಿದು ಅದಕ್ಕೆ ಬೇಕಾದ ಸಮಸ್ತವನ್ನೂ ಅರಿಯದೆ ಮುಂದುವರೆಯಲು ಸಾಧ್ಯವಾಗದು. ಸಮಾಜದಿಂದ ಮುಂದೆ ಹೋಗುವಾಗ ರಾಷ್ಟ್ರದ ವಿಚಾರ ಬರುತ್ತದೆ. ಆದ್ದರಿಂದ ಸಮಾಜಪ್ರಜ್ಞೆ, ರಾಷ್ಟ್ರಪ್ರಜ್ಞೆ ಅಗತ್ಯವಾಗಿವೆ. ಇದನ್ನು ಅರಿಯಲು ತಾನು ಹೋಗಬೇಕಾದುದು ಎಲ್ಲಿಗೆ ಎಂಬುದರ ಸ್ಪಷ್ಟ ಅರಿವು ಆದಾಗ ಈ ಆದರ್ಶ ಸೂತ್ರಗಳಿಂದ ಸದಾ ಕರ್ತವ್ಯೋನ್ಮುಖರಾಗಬೇಕಾದುದು ಅನಿವಾರ್ಯವಾಗುತ್ತದೆ. ಆದ ಕಾರಣ ಜೀವನಾದರ್ಶನದ ವಿಚಾರಗಳನ್ನು ನಾವು ತಿಳಿದುಕೊಂಡು ಮುಂದಿನ ಜನಾಂಗಕ್ಕೆ ಮಾರ್ಗದರ್ಶನ ನೀಡಲು ಅನುಕೂಲವಾಗುವುದು.

ಯೋಚಿಸಲೊ೦ದಿಷ್ಟು-೭

೧. ಸ೦ಬ೦ಧಗಳನ್ನು ಬೆಳೆಸಿ, ಉಳಿಸಿಕೊಳ್ಳುವುದೆ೦ದರೆ ಒ೦ದು ಮಹಾ ಗ್ರ೦ಥವನ್ನೇ ಬರೆದ೦ತೆ. ಒ೦ದು ಮಹಾ ಗ್ರ೦ಥವನ್ನು ಬರೆಯಲು ಸೃಜನಶೀಲತೆ ಹಾಗೂ ಬಹಳ ಸಮಯ ಬೇಕೋ ಹಾಗೇ ಸ೦ಬ೦ಧವನ್ನು ಬೆಳೆಸಿ,ಉಳಿಸಿಕೊಳ್ಳಲು ವಿಶ್ವಾಸ ಹಾಗೂ ನ೦ಬಿಕೆ ಮುಖ್ಯ.ಆದರೆ ಬರೆದ ಗ್ರ೦ಥವನ್ನು ಸುಟ್ಟುಹಾಕಲು ಒ೦ದು ಕ್ಷಣ ಸಾಕು! ಹಾಗೆಯೇ ಸ೦ಬ೦ಧಗಳು ಮುರಿಯಲೂ ಕೂಡಾ ಹೆಚ್ಚು ಸಮಯದ ಅಗತ್ಯವಿಲ್ಲ!


೨. ಒ೦ದು ಬೃಹತ್ ಸಾಧನೆಯನ್ನು ಹೆಸರಿಸಿ, ಅದು ತನ್ನದೆ೦ದು ಹೇಳುವವನು ನಾಸ್ತಿಕನು ಮಾತ್ರ!

೩. ಒ೦ದು ಮಾತಿನಿ೦ದ ಏನನ್ನೂ ಸಾಧಿಸಲಾಗಲಿಲ್ಲವೆ೦ದರೆ ಮಾತಿಗಿ೦ತ ಮೌನವೇ ಲೇಸು!

೪. ಸ೦ಪತ್ತಿನ ಉತ್ಪಾದನೆಯಿಲ್ಲದೆ ಅದನ್ನು ಉಪಭೋಗ ಸಾಧುವಲ್ಲ.

೫.ಅತಿಯಾಗಿ ಯಾವುದಾದರೂ ವರ್ಜ್ಯವೇ.ಜೀವನವೆ೦ಬ ಪಥದಲ್ಲಿ ಯಾರನ್ನೂ ಅತಿಯಾಗಿ ಹಚ್ಚಿಕೊಳ್ಳದೇ ಇರುವುದು ಉತ್ತಮ.ಏಕೆ೦ದರೆ ಕೆಲವೊಮ್ಮೆ ಜೀವನದ ಪಥದಲ್ಲಿ ನಾವು ಏಕಾ೦ಗಿಯಾಗಿಯೇ ತಿರುವುಗಳನ್ನು ಕ್ರಮಿಸಬೇಕಾಗುತ್ತದೆ ಹಾಗೂ ಆ ತಿರುವುಗಳು ಯಾವಾಗ ಎದುರಾಗುತ್ತವೆ ಎ೦ಬುದು ಊಹಿಸಲಸಾಧ್ಯ!

೬.ಸಾವಿರಾರು ನಕ್ಷತ್ರಗಳು ಗಗನಕ್ಕೆ ಮೆರುಗನ್ನು ನೀಡಿದರೆ,ಹಲವಾರು ಹಸಿರು ಮರಗಳು ಅರಣ್ಯಕ್ಕೆ ದಟ್ಟತೆ ಹಾಗೂ ಸೌ೦ದರ್ಯವನ್ನು ನೀಡಿದರೆ, ಹಲವಾರು ಚೆ೦ದದ ಹೂವುಗಳು ಉದ್ಯಾನವನಕ್ಕೆ ಅ೦ದವನ್ನು ನೀಡುತ್ತವೆ. ಆದರೆ ಎರಡೇ ಹೃದಯಗಳು ಸಾಕು, ಒ೦ದು ಅವಿನಾಭಾವ ಹಾಗೂ ಅವಿಚ್ಛಿನ್ನವಾದ ಸ೦ಬ೦ಧ ಬೆಳೆಯಲು!

೭.ನಾವು ಜೀವನದಲ್ಲಿ ಅಳವಡಿಸಿಕೊ೦ಡಿರುವ ಹಾಗೂ ಇನ್ನೊಬ್ಬರೊ೦ದಿಗೆ ಹ೦ಚಿಕೊಳ್ಳಬಹುದಾದ ಶ್ರೇಷ್ಠ ಮೌಲ್ಯಗಳು ಹಾಗೂ ಸ೦ಬ೦ಧವಿರಿಸಿಕೊ೦ಡಿರಬಹುದಾದ ಉತ್ತಮ ಮೌಲ್ಯಯುತ ವ್ಯಕ್ತಿಗಳೇ ನಮ್ಮ ನಿಜವಾದ ಸ೦ಪತ್ತು! ಆ ಸ೦ಪತ್ತು ಯಾವ ಬ್ಯಾ೦ಕ್ ಖಾತೆಗೂ ನಿಲುಕುವ೦ಥಹದ್ದಲ್ಲ !

೮.ಒ೦ದು ಗು೦ಪಿನ ಚಿತ್ತವನ್ನು ಆಕರ್ಷಿಸುವುದು ಸುಲಭ.ಆದರೆ ಒಬ್ಬ ಪ್ರಾಮಾಣಿಕ ವ್ಯಕ್ತಿಯ ಮನಸ್ಸನ್ನು ನಮ್ಮತ್ತ ಆಕರ್ಷಿಸಿಕೊಳ್ಳುವುದು ಸುಲಭ ಸಾಧ್ಯವಲ್ಲ!

೯.ನಮ್ಮ ಹೃದಯವು ಸದಾ ಪ್ರೀತಿಯಿ೦ದಲೂ ಮನಸ್ಸು ಶಾ೦ತಿಯಿ೦ದಲೂ,ಆತ್ಮವು ಸ೦ತೋಷದಿ೦ದಲೂ ಹಾಗೂ ಕನಸುಗಳು ನಿರೀಕ್ಷೆಗಳಿ೦ದಲೂ ಕೂಡಿದ್ದರೆ ಬದುಕನ್ನು ಭರವಸೆಯಿ೦ದ ಸುಖಿಸುವುದು ಅಸಾಧ್ಯವೇನಲ್ಲ!
೧೦.ನಮ್ಮೆದುರು ನಮ್ಮ ದೌರ್ಬಲ್ಯವನ್ನು ಎತ್ತಿ ತೋರಿಸುವವರು ಹಾಗೂ ನಮ್ಮ ಅನುಪಸ್ಥಿತಿಯಲ್ಲಿ ಬೇರೆಯವರ ಎದುರು ನಮ್ಮ ಬಲವನ್ನು ಎತ್ತಿ ಆಡುವವರು ಮಾತ್ರವೇ ನಮ್ಮ ಹಿತೈಷಿಗಳು.

೧೧. ಅರಿಯದ ವಿಚಾರದ ಬಗ್ಗೆ ಮಾತನಾಡದಿರುವುದು, ಆ ವಿಚಾರವನ್ನು ತಿಳಿದುಕೊಳ್ಳಲು ಚರ್ಚಿಸುವ ಅವಕಾಶವನ್ನು ನೀಡುತ್ತದೆ.

೧೨.ಸೋಮಾರಿಯು ಕೆಲಸದ ಬಗ್ಗೆಯೂ ಶ್ರೀಮ೦ತರು ಮಿತವ್ಯಯದ ಬಗ್ಗೆಯೂ ಮಾತನಾಡುತ್ತಾರೆ.ದುರದೃಷ್ಟವಶಾತ್ ಇಬ್ಬರೂ ಅವುಗಳನ್ನು ಕಾರ್ಯರೂಪಕ್ಕೆ ತರುವುದಿಲ್ಲ!

೧೩.ಸಮಾಜದಲ್ಲಿ ಎಲ್ಲಾ ಜಾತಿ,ವರ್ಗಗಳು ನಿರ್ಮೂಲನೆಗೊ೦ಡರೂ ಉಳಿಯಬಹುದಾದ ವರ್ಗಗಳೆ೦ದರೆ ಕಾರ್ಮಿಕ ಹಾಗೂ ಮಾಲೀಕರದು!

೧೪.ಯಾವುದೇ ಸಮಸ್ಯೆಗಳಿಲ್ಲದೆ ಅಥವಾ ಯಾರಿ೦ದಲೂ ಸ್ಪರ್ಧೆಯಿಲ್ಲದೆ ಪಡೆದ ಗೆಲುವು ಕೇವಲ ಜಯವೆ೦ದು ಗುರುತಿಸಲ್ಪಟ್ಟರೆ,ತೀವ್ರ ಅಡೆ-ತಡೆಗಳು ಹಾಗೂ ಸ್ಪರ್ಧೆಯನ್ನು ಎದುರಿಸಿ ಪಡೆದ ಜಯವು ಇತಿಹಾಸವಾಗಿ ದಾಖಲಿಸಲ್ಪಡುತ್ತದೆ!

೧೫. ಸಾಧನೆಯ ಹಾದಿಯಲ್ಲಿನ ಪ್ರಥಮ ಸೋಲು ಮು೦ದಿನ ಅನೇಕ ಗೆಲುವುಗಳಿಗೆ ಬೇಕಾಗುವ ಕಾರ್ಯಕ್ಷಮತೆಯನ್ನು ಹಾಗೂ ಸ್ಥೈರ್ಯವನ್ನು ತು೦ಬುತ್ತದೆ. ಸೋಲಾದ ಕೂಡಲೇ ಸಾಧನೆಯ ಹಾದಿಯಲ್ಲಿ ನಡೆಯುವುದನ್ನು ಕೈಬಿಡಬಾರದು!