Pages

Monday, November 15, 2010

ಇದು ತಪ್ಪು, ಇದು ಸರಿ, ಎಂದು ಹೇಳಲು ನಾವ್ಯಾರು?

ಮನವಿ: ಈ ಲೇಖನಕ್ಕೆ ಶ್ರೀ ಕವಿನಾಗರಾಜರು ,ಶ್ರೀ ಮಹೇಶ್ ಹಾಗೂ ಶ್ರೀ ವಿಶಾಲ್ ರವರು ಚರ್ಚೆ ಆರಂಭಿಸಿದ್ದಾರೆ. ಇಂತಹ ವಿಚಾರಗಳು ಚರ್ಚೆಗೊಳಗಾಗಬೇಕು.  ಅಂತೂ ಚಿಂತನ-ಮಂಥನದ ಅಂತ್ಯದಲ್ಲಿ ಬೆಣ್ಣೆಯು ಹೊರಬರಬೇಕು. ಆದರೆ ಸಾಮಾನ್ಯವಾಗಿ ಕೊನೆಯಲ್ಲಿ ಚರ್ಚೆಯು ಯಾವುದೋ ವೈಯಕ್ತಿಕ ವಿಚಾರಕ್ಕೆ  ಬಂದು ನಿಂತು ಬಿಡುತ್ತದೆ. ವಿಚಾರವಂತರೆಲ್ಲರೂ ಪಾಲ್ಗೊಂಡರೆ ಒಂದು ಹೊಸಹೊಳಹು ಮೂಡಬಹುದು. ಶ್ರೀ ರಾಘವೇಂದ್ರರ ಪ್ರತಿಕ್ರಿಯೆಗೆ ನಾನೊಂದು ಪ್ರತಿಕ್ರಿಯೆ ಬರೆದು ಪೋಸ್ಟ್ ಮಾಡಿದೆ.ಅದು ಉದ್ದವಾಯ್ತು. ಪ್ರಕಟವಾಗಲಿಲ್ಲ. ಪ್ರತಿಕ್ರಿಯೆಗಳು ಉದ್ದವಾದರೆ  ದಯಮಾಡಿ  ವೇದಸುಧೆಗೆ ಮೇಲ್ ಮಾಡಿ. ಮುಖ್ಯ ಲೇಖನದ ಜೊತೆಗೇ ಪ್ರಕಟಿಸಲಾಗುದು               
                      

ರಾಜಕಾರಣಿಗಳೇನೋ ಪವರ್ ಗಾಗಿ ಸಿದ್ಧಾಂತದ ಹೆಸರು ಹೇಳಿಕೊಂಡು ಅವರಿವರನ್ನು ಬೈಕೊಂಡು ಕಾಲ ಹಾಕ್ತಾರೆ."ಎಲ್ಲಾರು ಮಾಡುವುದು ಖುರ್ಚಿಗಾಗಿ, ಮಂತ್ರಿಗಾದಿಗಾಗಿ"- ರಾಜಕಾರಣಿಗಳ ಬಗ್ಗೆ ಎಲ್ಲಾರಿಗೂ ಗೊತ್ತು ಬಿಡಿ, ಆದರೆ ಧರ್ಮ-ಸಂಸ್ಕೃತಿ-ಸಮಾಜ ಅಂತಾ ಮಾತಾಡೋರೂ ಕೂಡ ಅದೆಷ್ಟು ರಂಪಾ ಮಾಡ್ತಾರೆ!   ಸಾಮಾನ್ಯ ಜನರಿಗೆ ಬೇಕಾಗಿರೋದೇನು?  ಹೊಟ್ಟೆಗೆ ಒಂದಿಷ್ಟು ಹಿಟ್ಟು, ಮೈ ಮುಚ್ಚಲು ಬಟ್ಟೆ, ವಾಸಕ್ಕೊಂದು ಸೂರು, ಒಳ್ಳೆಯ ಆರೋಗ್ಯ. ಇದಕ್ಕಾಗಿ ಅವನ ಮನಸ್ಸು ಒಪ್ಪಿಗೆ ಯಾಗುವಂತೆ ಬೇಕಾದ್ದನ್ನು ಆಯ್ಕೆ ಮಾಡಿಕೊಳ್ತಾನೆ. ನೆಮ್ಮದಿ ಎಲ್ಲಿ ಸಿಗುತ್ತೋ ಅಲ್ಲಿ ಹೋಗ್ತಾನೆ. 

ಅವರವರ ಭಾವಕ್ಕೆ ಅವರವರ ಭಕುತಿಗೆ
ಅವರವರ ತೆರನಾಗಿ ಇರುತಿಹನು ಶಿವಯೋಗಿ|
ಹರಿಯ ಭಕ್ತರಿಗೆ ಹರಿ ಹರನ ಭಕ್ತರಿಗೆ ಹರ
ನರರೇನು ಭಾವಿಪರೊ ಅದರಂತೆ ತೋರುವನು||

                       ಮೇಲೆ ಹೇಳಿದ ವಚನದಂತೆ  ಅವನಿಗೆ ಹೇಗೆ ಇಷ್ಟಾ ಆಗುತ್ತೋ ಹಾಗೆ ಪೂಜೇನೋ, ಪುನಸ್ಕಾರಾನೋ, ಧ್ಯಾನವನ್ನೋ ,ಏನೋ ಒಂದು ಮಾಡಿಕೊಂಡು ನೆಮ್ಮದಿಯನ್ನು ಹುಡುಕಿಕೊಳ್ಳುತ್ತಾನೆ. ಇಂತವರ ತಲೆಗೆ ಹುಳು ಬಿಡೋರೇ ಹೆಚ್ಚು. ತನ್ನ ಪಾಡಿಗೆ ತಾನು ಕುಡಿದು ತಿಂದುಕೊಂಡು ಕಾಲ ಹಾಕುತ್ತಿದ್ದವನಿಗೆ ಉಪದೇಶವನ್ನು ಮಾಡೋರ್ಯಾರು? ಆದರೆ ಯಾರು ಒಂದು ಸನ್ಮಾರ್ಗದಲ್ಲಿರ್ತಾರೋ ಅವರ ತಲೆ ತಿನ್ನೋರೇ ಜಾಸ್ತಿ.ಯಾಕೆ ಈ ಮಾತನ್ನು ಹೇಳ್ತಾ ಇದ್ದೀನಿ, ಅಂತೀರಾ? ಮೊನ್ನೆ ನನ್ನ ಒಬ್ಬ ಸ್ನೇಹಿತರು ನನಗೆ ಕೇಳಿದರು-"ನಾವು ಬ್ರಾಹ್ಮಣ್ಯವನ್ನು ಕಾಪಾಡುತ್ತಿದ್ದೀವಾ? ನಿತ್ಯವೂ ತ್ರಿಕಾಲ [ ಸಂಧ್ಯಾಕಾಲ ಎರಡೇ ಎನ್ನುವ ವಾದವೂ ಇದೆ]   ಸಂಧ್ಯಾವಂದನೆ ಎಷ್ಟು ಮನೆಯಲ್ಲಿ ಮಾಡ್ತಾರೆ? ನಿತ್ಯವೂ ದೇವತಾರ್ಚನೆ  ಎಷ್ಟು ಮನೆಯಲ್ಲಿ ಮಾಡ್ತಾರೆ? ಎಲ್ಲಾ ಭಾಷಣ ಬಿಗಿದ್ರೆ ಆಗಲಿಲ್ಲಾ ರೀ ಬ್ರಾಹ್ಮಣ್ಯ ಕಾಪಾಡೋ ಕೆಲಸಾ ಆಗ್ಬೇಕು" ನಾನು ಸುಮ್ನೆ ಕೇಳ್ತಾ ಇದ್ದೆ. ಇದರ ಬಗ್ಗೆ ವಾದ ಮಾಡ್ತಾ ಕುಳಿತುಕೊಂಡ್ರೆ ಇದು ಬಗೆಹರಿಯುವುದಿಲ್ಲ ವೆಂಬ ಅರಿವು ನನಗಿತ್ತು.  ಅವರು ಹೊರಟಾಗ ಹೇಳಿದೆ " ನಮ್ಮ ನಮ್ಮ ಅಂತಸಾಕ್ಷಿಯನ್ನು ಕೇಳಿಕೊಂಡರೆ ಗೊತ್ತಾಗುತ್ತೆ-ನಾವು ಮಾಡುತ್ತಿರುವುದು ಎಷ್ಟು ಸರಿ, ಎಂದು"  ಮುಂದೆ ಮಾತನಾಡುವವರಿದ್ದರು, ಆದರೆ ಅವರಿಗೂ ಆಫೀಸ್ ಗೆ ಸಮಯವಾಗಿತ್ತು.

                     ನಾನು  ಈ ಬ್ಲಾಗ್ ಶುರುಮಾಡಿದಮೇಲೆ ಸುಧಾಕರಶರ್ಮರ ಉಪನ್ಯಾಸಗಳನ್ನು ಅಲ್ಲಿಲ್ಲಿ ಕೇಳಿಸಿದಮೇಲೆ  ಈ ತರಾ ಜನರ ಕಾಟ ಜಾಸ್ತಿ ಆಗಿದೆ.  ನಾನಂತೂ ವೇದ ಪಂಡಿತನಲ್ಲ. ಆದರೆ ವೇದದ ಕೆಲವು ಮಂತ್ರಗಳ ಅರ್ಥವನ್ನು ಶರ್ಮರು ಸರಳವಾಗಿ ಹೇಳುವುದನ್ನು ಕೇಳಿದರೆ ಜೀವನಕ್ಕೆ ಬೇಕಾದ್ದೆಲ್ಲವೂ ಇಲ್ಲಿ ಇದೆ ಅನ್ನಿಸುತ್ತೆ. ಆದರೆ ವಾದ ಮಾಡಿ ಗೆಲ್ಲಬೇಕೆಂಬುದಕ್ಕಾಗಿ ನಾನು ಶರ್ಮರ ಉಪನ್ಯಾಸವನ್ನು ಕೇಳುವುದಿಲ್ಲ. ಕೇವಲ ನೆಮ್ಮದಿಗಾಗಿ. ಅಂದಹಾಗೆ ನನ್ನ ಮೊದಲ ಬ್ಲಾಗ್ ಹೆಸರೇ " ನೆಮ್ಮದಿಗಾಗಿ"  ವಾದ...ವಾದ..ವಾದ! ಯಾವ ಪುರುಷಾರ್ಥಕ್ಕಾಗಿ ವಾದ ಮಾಡಬೇಕು? ವಾದ ಮಾಡಿ ಏನ್ ಗೆಲ್ಲಬೇಕು? ಶರ್ಮರ ವಿಚಾರವೆಲ್ಲಾ ನನಗೆ ಒಪ್ಪಿಗೆ ಇದೆ ಎಂದು ಖಂಡಿತಾ ಅರ್ಥವಲ್ಲ.  ಆದರೆ ಕೆಲವು ವೇದಮಂತ್ರಗಳ ಅರ್ಥ ಹೇಳಿದ್ದಾರಲ್ಲಾ! ಅದು ಒಪ್ಪಿಗೆ ಯಾಗಿದೆ. ಇಷ್ಟಪಟ್ಟವರಿಗೆಲ್ಲಾ  ಅವರ ಉಪನ್ಯಾಸದ ಸಿ.ಡಿ ಕೇಳಿಸುತ್ತೇನೆ. ಈ ನನ್ನ  ಚಟುವಟಿಕೆ ಕೂಡ ಕೆಲವರಿಗೆ ಮುಜುಗರವಾಗಿದೆ.ನಾನೇನೂ ಯಾರನ್ನೂ " ಶ್ರಾದ್ಧ " ಮಾಡ್ಬೇಡಿ, ಪೂಜೆ ಮಾಡ್ಬೇಡಿ, ದೇವಾಲಯಕ್ಕೆ ಹೋಗ್ಬೇಡಿ, ವ್ರಥ-ಕಥೆ ಆಚರಿಸಬೇಡಿ ಅನ್ನೋದಿಲ್ಲ. ಅವರವರ ಇಷ್ಟದಂತೆ ಅವರವರು ಇರಲು ಎಲ್ಲರೂ ಸ್ವತಂತ್ರರು. ಆದರೆ ಭಗವಂತನನ್ನು ಕಾಣಲು ಇದೇ ಮಾರ್ಗ ಸರಿ ಅನ್ನೋ ವಿಚಾರದಲ್ಲಿ  ಕಚ್ಚಾಟ ಇದ್ದದ್ದೇ.
                          ನಾನಾದರೋ ನಲವತ್ತು ವರ್ಷಗಳ ಕಾಲ  ಆರ್.ಎಸ್.ಎಸ್. ಸಿದ್ಧಾಂತದಲ್ಲಿ ಬೆಳೆದವನು.ಆದರೆ ಇತ್ತೀಚಿನ ರಾಜಕೀಯ ಚಟುವಟಿಕೆಗಳಿಂದ ಬೇಸತ್ತಿರುವ ನಾನು ಸಂಘದ ಚಟುವಟಿಕೆಗಳಿಂದಲೂ ದೂರ ಇರುವವನು. ಆದರೆ ನಮ್ಮ ದೇಶದ ಸಂಸ್ಕೃತಿ-ಪರಂಪರೆಗಳ ಬಗ್ಗೆ  ಕಾಳಜಿ ಉಳ್ಳವನು. ನಮ್ಮ ಋಷಿ ಪರಂಪರೆಯ ಬಗ್ಗೆ ಹೆಮ್ಮೆ ಪಡುವವನು. ನಿಜವಾಗಿ ಭಾರತದ ಈ ಮಣ್ಣಿನಲ್ಲಿ ಜನಿಸಿರುವುದು ನನಗೆ ಅತ್ಯಂತ ಹೆಮ್ಮೆಯ ಅಭಿಮಾನದ ಸಂಗತಿ ಯಾಗಿದೆ.ವೇದಗಳ ಹೊರತು ಪಡಿಸಿ ಇನ್ಯಾವ ಧರ್ಮ ಗ್ರಂಥಗಳ ಬಗ್ಗೆ , ಹಿಂದು ಪದದ ಬಗ್ಗೆಯೇ ಶ್ರೀ ಶರ್ಮರಿಗೆ ಒಲವಿಲ್ಲವೆಂದರೆ  ನಾನು  ಶ್ರೀ ಶರ್ಮರ ನಿಲುವನ್ನು ಬೆಂಬಲಿಸಬೇಕೆಂದೇನೂ ಅಲ್ಲ. ನಾನು  ಹಿಂದು ಎಂಬ ಬಗ್ಗೆ ನನಗೆ ಅಭಿಮಾನವಿದೆ. ಹಿಂದು ಕೇವಲ ಒಂದು ಮತದ ಹೆಸರಲ್ಲ. ಅದೊಂದು ಜೀವನ ಶೈಲಿ, ಅದೊಂದು  ಸಂಸ್ಕೃತಿ, ಅದು ನಮ್ಮ ರಾಷ್ಟ್ರೀಯತೆಯ ಹೆಸರು.ಈ ವಿಚಾರದಲ್ಲಷ್ಟೇ ಅಲ್ಲ ನಮ್ಮ ಮನೆಗಳಲ್ಲಿ ನಡೆದು ಬಂದಿರುವ ಅನೇಕ ಹಬ್ಬ ಹರಿದಿನಗಳು, ವ್ರತ-ಕಥೆಗಳು,ಶ್ರಾದ್ಧ ಕರ್ಮಗಳು  ಆಚರಣೆಗಳನ್ನು ಶರ್ಮರು ಒಪ್ಪುವುದಿಲ್ಲ . ಆದರೆ ನನ್ನ ವಿಚಾರವನ್ನು ನೋಡಿದಾಗ ’ಡಬ್ಬಲ್ ಸ್ಟಾಂಡ್ " ಅನ್ನಿಸುತ್ತೆ.  ಹಿಂದಿನಿಂದಲೂ ನಡೆದುಕೊಂಡು ಬಂದಿರುವುದನ್ನು ಏಕಾ ಏಕಿ ನಿಲ್ಲಿಸುವುದರ ಬದಲು ಆಚರಿಸುವಾಗ ಅದರರ್ಥವನ್ನು ತಿಳಿಯುವ ಪ್ರಯತ್ನ ಶುರುವಾಗಿದೆ. ಯಾವುದು ಅರ್ಥ ಹೀನವೆಂದು ನನಗೆ ಅನ್ನಿಸುತ್ತೆ, ಅದರಿಂದ ನಾನು ದೂರ ಉಳಿಯುತ್ತೇನೇ ಹೊರತೂ ಮನೆಮಂದಿಗೆಲ್ಲಾ ನೀವೂ ಹೀಗೇ ಇರಿ ಎಂದು ಹೇಳಿ ಬೇಸರಮಾಡುವುದಿಲ್ಲ. ಆದಷ್ಟೂ  ನನಗೆ ಅರ್ಥವಾದರೆ ಅರ್ಥಪಡಿಸುವ ಪ್ರಯತ್ನ ಮಾಡುವೆ. ನಂತರವೂ ಇಲ್ಲಾ, ಹಿಂದಿನಿಂದ ನಡೆದು ಬಂದಿದೆ, ಬಿಡಲಾರೆ, ಎಂದರೆ ಕಿರಿ ಕಿರಿ ಮಾಡಿಕೊಂಡು  ನೆಮ್ಮದಿಯನ್ನು ಹಾಳುಮಾಡಿಕೊಳ್ಳುವುದಿಲ್ಲ.
ಇಷ್ಟೆಲ್ಲಾ ಹೇಳಿದರೂ ಹೇಳಬೇಕಾದ್ದನ್ನೇ ಹೇಳಲಿಲ್ಲ ವಲ್ಲಾ! ಶ್ರೀ ರಾಘವೇಂದ್ರ ನಾವಡರು ದುರ್ಗಾಕವಚದ ಬಗ್ಗೆ  ಬರೆಯುವ ಮುಂಚೆ ನನಗೆ ಫೋನ್ ಮಾಡಿದ್ದರು, ನನ್ನ ಅನುಮತಿ ಕೇಳಿದರು’" ದೇವರ ಬಗ್ಗೆ ವೇದಸುಧೆಯಲ್ಲಿ ಬರೆದರೆ ಪರವಾಗಿಲ್ಲವಾ?" ಎಂದು . ನಾನು ಹೇಳಿದೆ" ಬರೆಯಿರಿ ವೇದಸುಧೆ ಇರುವುದೇ ಇಂತಾ ಎಲ್ಲಾ ವಿಚಾರಕ್ಕೂ  ಚಿಂತನ-ಮಂಥನ ವೇದಿಕೆಯಾಗಿ ಕೆಲಸ ಮಾಡಲು. ನಿಮ್ಮ ಬರಹ ಒಪ್ಪದಿದ್ದವರು ಕಾರಣ ಕೊಟ್ಟು ಖಂಡಿಸಲಿ. ಹಾಗೆ ನೋಡಿದರೆ ವೇದಗಳ ಹೊರತಾಗಿ ಅದೆಷ್ಟು ಧರ್ಮ ಗ್ರಂಥಗಳಿಲ್ಲ! ರಾಮಾಯಣ, ಮಹಾಭಾರತವಷ್ಟೇ ಅಲ್ಲದೆ ಸಹಸ್ರಾರು ಸಾಹಿತ್ಯ ಗ್ರಂಥಗಳಿವೆ.ಪುರಾಣ ಪುಣ್ಯಕಥೆಗಳಿವೆ. ಅವೆಲ್ಲವನ್ನೂ ಸಮುದ್ರಕ್ಕೆ ಬಿಸಾಕಲು ಸಾಧ್ಯವೇ? ನೂರಾರು ಋಷಿಮುನಿಗಳು ತಾವು ಮಾಡಿದ ತಪಸ್ಸಿನ ಫಲವಾಗಿ ತಮ್ಮ ಅನೇಕ ಚಿಂತನೆಗಳನ್ನು ಹಂಚಿ ಕೊಂಡಿದ್ದಾರೆ. ಎಲ್ಲವನ್ನೂ ತಿರಸ್ಕರಿಸುವುದಾದರೂ ಹೇಗೆ?  ಸತ್ಯ ಒಂದೇ  ತಿಳಿದವರು ಅದನ್ನು ಅವರವರ ರೀತಿಯಲ್ಲಿ ಹಳಿದರೆಂದೂ ವೇದದಲ್ಲೇ ಹೇಳಿದೆ.
                     ವೇದಸುಧೆಯ ಹಿರಿಯ ಮಿತ್ರರಾದ ಕವಿ ನಾಗರಾಜರು  ಒಂದು ರೀತಿಯಲ್ಲಿ ಬಾಹ್ಯ ಪೂಜೆ-ಪುನಸ್ಕಾರಗಳು, ಮಠಾಧಿಪತಿಗಳು,ಇತ್ಯಾದಿಯನ್ನೆಲ್ಲಾ ನಂಬದ  ಅವರದೇ ಆದ ರೀತಿಯಲ್ಲಿ ಭಗವಂತನನ್ನು ಅಂತರ್ಯದಲ್ಲಿ ಕಾಣುವ ವ್ಯಕ್ತಿ.ಅಂತಹ ವಿಚಾರಶೀಲರು ಒಂದು ಘಟನೆ ಹೇಳಿದರು-  " ಒಂದು ಧಾರ್ಮಿಕ ಕ್ಷೇತ್ರ. ಅಲ್ಲಿನ ಸ್ವಾಮೀಜಿಯವರು  ಅಲ್ಲಿನ ವ್ಯವಸ್ಥೆಗಾಗಿ ಒಂದು ಕಟ್ಟಡ ಕಟ್ಟಿಸಿದರು. ಸುಮಾರು ೩೦ ಲಕ್ಷ ರೂಗಳನ್ನು ಗುತ್ತಿಗೆದಾರನಿಗೆ ಕೊಡಬೇಕಿತ್ತು. ಗುತ್ತಿಗೆದಾರನು ತನ್ನ ಕಷ್ಟವನ್ನು ಸ್ವಾಮೀಜಿಗೆ ನಿವೇದಿಸಿಕೊಂಡ. ಸ್ವಾಮೀಜಿಯವರ ಹತ್ತಿರ ೩೦ಲಕ್ಷವೆಲ್ಲಿ ೩೦ ಸಾವಿರರೂಪಾಯಿಗಳೂ ಇಲ್ಲ. ಭಕ್ತರನ್ನು ನಂಬಿ ಕೆಲಸ ಮಾಡಿಸಿದ್ದರು. ಈಗ ಸಂಕಷ್ಟದಲ್ಲಿದ್ದಾರೆ. ಸ್ವಾಮೀಜಿಯವರು ತಮ್ಮ ಆರಾಧ್ಯ ದೈವದ ಮುಂದೆ ನಿಲ್ಲುತ್ತಾರೆ, ಏಕವಚನದಲ್ಲಿ  ದೇವರನ್ನು ನಿಂದಿಸುತ್ತಾರೆ.ಬೆಳಗಾಗುವಾಗ ಭಕ್ತನೊಬ್ಬ ೩೦ ಲಕ್ಷ ರೂ ಚೆಕ್ ನೊಂದಿಗೆ ಪ್ರತ್ಯಕ್ಷ. ಸ್ವತ: ನಾಗರಾಜರೇ ಈ ಘಟನೆಯನ್ನು ನೋಡಿ ಸಾಕ್ಷಿಯಾದರು. ಈಗಲೂ ಆಡಂಬರದ ಪೂಜೆ ಪುನಸ್ಕಾರಗಳನ್ನು ಮಾಡದೆ ಮನದಲ್ಲೇ ದೇವರನ್ನು ಆರಾಧಿಸುವ ನಾಗರಾಜರು ಈ ಘಟನೆಯನ್ನು ನಂಬಲೇ ಬೇಕಾಗಿದೆ. ಇಂಹ ಘಟನೆಗಳು ನೂರಾರು ಇರುತ್ತವೆ. ಕೆಲವು ಉತ್ಪ್ರೇಕ್ಷೆಯಾಗಲೂ ಬಹುದು. ಆದರೂ ಈಗಲೂ ಅವಧೂತರು, ಹಾಗೂ ಕೆಲವು ದೇವಿಯ ಆರಾಧಕರ ಹಿಂದೆ  ಸಾವಿರಾರು ಜನ ಭಕ್ತರಿರುತ್ತಾರೆ. ಅವರ ನಂಬಿಕೆ ಅವರದು. ಕಣ್ಣಿಗೆ ಕಾಣುವಂತಹ ದುರಾಚಾರ, ಜನರಿಗೆ ದ್ರೋಹ ನಡೆಯುತ್ತಿದ್ದರೆ ಬಲಿ ಪಶುಗಳಾದವರು ಸಿಡಿದೇಳಬೇಕೇ ಹೊರತೂ ಜಗತ್ತಿನಲ್ಲಿ ನಡೆಯುತ್ತಿರುವ ಎಲ್ಲವನ್ನೂ ಇದು ತಪ್ಪು, ಇದು ಸರಿ, ಎಂದು ಹೇಳಲು ನಾವ್ಯಾರು?
-ಹರಿಹರಪುರಶ್ರೀಧರ್
ಸಂಪಾದಕ