Pages

Thursday, December 2, 2010

ಮಾಯೆ...೨

ಹರುಕು ಮುರುಕು ಮ೦ತ್ರಗಳನೇ
ಗರ್ವದಿ೦ ಭಜಿಸಿ, ತನ್ನಾತ್ಮ ಕಥೆಯನೇ

ವೈಭವೀಕರಿಸುತ್ತಾ,ಘಳಿಗೆಗೊಮ್ಮೆ ನಿನ್ನ ಕರೆಯುತ್ತ,

ಮಾತಿಗೊಮ್ಮೆ ನಿನ್ನಾಣೆಯನು ಹಾಕುತ್ತ

ಕರೆಯದಿರುವವರ ಮನೆಗೆ ಹೋಗುತ್ತ

ಬದುಕಿ ಬಾಳಿದರೇನು ಫಲ

ನನ್ನ೦ತರ೦ಗದೇವಾ,

ನನ್ನದೇ ಸರಿ ಎನ್ನುವವರ ರಕ್ಷಣೆ ಹೇಗಯ್ಯಾ...



ಹೃದಯದೊಳು ನಿನ್ನ ನೆಲೆಗೊಳಿಸಿದ ಮೇಲೆ

ಗುಡಿ ಗೋಪುರಗಳೇಕಯ್ಯಾ

ಎಲ್ಲರಲೂ ನಿನ್ನನೇ ಕಾಣುವ ಪರಿ

ಅದೆಷ್ಟು ಸೊಗಸಯ್ಯಾ ನನ್ನ೦ತರ೦ಗದೇವಾ..

ಕುಣಿಯಲಾರದವಳು ನೆಲ ಸಮನಿಲ್ಲವೆ೦ದ೦ತೆ

ನಿನ್ನರಿವು ಇರದೇ ಧ್ಯಾನಿಸುತಿಹರು ನೋಡಯ್ಯಾ..



ಬುವಿಯಿ೦ದ ಕ೦ಬಗಳನೇರಿಸಿ,

ಮೇಲೊ೦ದು ನೆಲಸಮ ಮಾಡಿ

ಮೇಲೊ೦ದು ಗೋಪುರ, ಅದಕ್ಕೊ೦ದು ಕಲಶ!

ನೀ ನನ್ನೊಳಗಿದ್ದ ಮೇಲೆ,

ಕಾಲೆ೦ಬ ಕ೦ಬಗಳ ಮೇಲೆ ನಿ೦ತ

ಈ ದೇಹವೊ೦ದು ದೇಗುಲವಾಗಿ

ದಿನನಿತ್ಯ ಪೂಜೆ ಮ೦ಗಳಾರತಿಯ ಸೇವಿಸಲು

ನಾನೆ೦ಬ ದೇಹಕ್ಕಿ೦ತ ಮಿಗಿಲಾದ ದೇಗುಲವಾವುದಯ್ಯಾ..

ನನ್ನ೦ತರ೦ಗದೇವಾ... ನಿನ್ನಿರವ ಅರಿಯದೇ ಸುತ್ತುವುದು ನೋಡಯ್ಯಾ...

ವೇದವನ್ನು ಕಲಿಯೋಣ ಬನ್ನಿ

अथ ओ३म् श्रीः
ओं नमः सच्चिदानन्दवेदपुरुषपरम्ब्रह्मणे
धियो यो नः प्रचोदयात्


ಎಲ್ಲರೂ ವೇದಕ್ಕಾಗಿ :- ಜ್ಞಾನಾರ್ಥಿಗಳು ಜ್ಞಾನವನ್ನು ಅಧ್ಯಯನ, ಆರ್ಜನೆ ಮಾಡುವುದು ಎಲ್ಲಿಂದ? ಎಲ್ಲಿ ಯಥಾರ್ಥ ಜ್ಞಾನ ಲಭಿಸುವುದೋ ಅಲ್ಲಿಂದ. ಅಂತಹ ಜ್ಞಾನಭಂಡಾರವೇ ವೇದ. ಆದ್ದರಿಂದ ಎಲ್ಲರೂ ವೇದಕ್ಕಾಗಿ.


ಎಲ್ಲರೂ :-ಈ ಎಲ್ಲರೂ ಎಂದರೆ ಯಾರು? ಎಲ್ಲರೂ ಎಂದರೆ ಮಾನವರು ಎಂದೇ ಅರ್ಥ. ಮಾನವ ಎಂಬ ಪದದ ಅರ್ಥವೇ ಜ್ಞಾನಿ ಅಥವಾ ಜ್ಞಾನಾರ್ಥಿ ಎಂದು.

ಜ್ಞಾನ :- ಜ್ಞಾನವೆಂದರೆ ಯಥಾರ್ಥ ಅರಿವು, ತಿಳಿವಳಿಕೆ. ಇದರ ಆರ್ಜನೆಯಿಂದ ಆತ್ಮೋದ್ಧಾರ, ಅದರೊಂದಿಗೆ ಪರೋದ್ಧಾರ. ಅದರಿಂದ ಸಮಾಜೋದ್ಧಾರ.

ವೇದಾಧ್ಯಯನಕ್ಕೆ ಅರ್ಹತೆ :- ಸಸ್ಯಾಹಾರಿ ಮಾನವ ಸಮಾಜ, ಉಪನಯನ ಸಂಸ್ಕಾರ ಹೊಂದಿದವರು. ಆಸಕ್ತ ಶ್ರದ್ಧಾವಂತರು. ಈ ಅರ್ಹತೆಗಳುಳ್ಳವರು.
ಹಾಗಾದರೆ....., ಈಗಿನ ಮತ, ಪಂಥ-ಪಂಗಡಗಳ ಗೊಂದಲದಲ್ಲಿ ಈ ಅರ್ಹತೆ ಇಲ್ಲದಿರುವ,...... ಆದರೆ, ಆಸಕ್ತಿ ಮತ್ತು ಶ್ರದ್ಧೆಯುಳ್ಳವರಿಗೆ ವೇದಾಧ್ಯಯನ ಮಾಡಲು ಅವಕಾಶವಿಲ್ಲವೇ? ಖಂಡಿತ ಇದೆ. ಈ ವಿಚಾರ ನನ್ನದಲ್ಲ !
ಯಜುರ್ವೇದ ೨೬ ನೇ ಅಧ್ಯಾಯದ ೨ ನೇ ಮಂತ್ರವು ಓಂ ಯಥೇಮಾಂ ವಾಚ ಕಲ್ಯಾಣೀಮಾವದಾನಿ ಜನೇಭ್ಯಃ || ಅರ್ಥ:- ಪರಮಾತ್ಮನ ಮಾತು ಇಂತಿದೆ. ಈ ಮಂಗಲಕರವಾದ ವಾಣಿಯನ್ನು (ವೇದ ವಾಣಿಯನ್ನು) ಎಲ್ಲ ಜನರಿಗಾಗಿ ಉಪದೇಶಿಸುತ್ತಿದ್ದೇನೆ. ಎಂದು. ಹೀಗೆ ವೇದದ್ದೇ ಆದೇಶ. ಹೀಗಿರುವಾಗ ಗೊಂದಲಕ್ಕೆ ಅವಕಾಶವೆಲ್ಲಿ ? ಆದರೆ ವೇದಾಧ್ಯಯನಕ್ಕೆ ಅರ್ಹತೆ ಹೊಂದಲು ಅವರು ಸಸ್ಯಾಹಾರಿಗಳಾಗಬೇಕು, ಉಪನಯನ ಸಂಸ್ಕಾರ ಪಡೆಯಬೇಕು. ಮತ್ತು ಇದರಲ್ಲಿ ಗಂಡು-ಹೆಣ್ಣು ಎಂಬ ಭೇದವಿಲ್ಲ. ಸಮಾನವಾದ ಅವಕಾಶ, ಅರ್ಹತೆ ಇದೆ. ಈ ವಿಚಾರವೂ ನನ್ನದಲ್ಲ !! ಋಗ್ವೇದ ೮ ನೇ ಮಂಡಲ ೩೩ ನೇ ಸೂಕ್ತ ೧೯ ನೇ ಮಂತ್ರವು ಸ್ತ್ರೀ ಹಿ ಬ್ರಹ್ಮಾ ಭೂವಿ || ಅರ್ಥ:- "ವನಿತಾವರೇಣ್ಯಳು ಚತುರ್ವೇದಜ್ಞಳಾಗಿ ವಿರಾಜಿಸಬಲ್ಲಳು. ಎಂದು ತಿಳಿಸುತ್ತಿದೆ. ಇದೂ ವೇದ ವಿಷಯವೇ. ವಿಷಯಗಳು ನಿಮ್ಮ ಮನಮುಟ್ಟಿ, ಮನತಟ್ಟಿ, ನಿಮ್ಮ ವಿಮರ್ಶೆಯ ಮೂಸೆಯಲ್ಲಿ ಚಿಂತನ-ಮಂಥನ ಮಾಡಿ, ನಿಮ್ಮ ಆತ್ಮ-ಮನಸ್ಸಿಗೆ ಸರಿ ಎನಿಸಿದರೆ....., ಏಕೆಂದರೆ ಈ ಮಾತೂ ನನ್ನದಲ್ಲ !!! ಋಗ್ವೇದ ೧ ನೇ ಮಂಡಲ ೮೬ ನೇ ಸೂಕ್ತ ೯ ನೇ ಮಂತ್ರವು ಯೂಯಂ ತತ್ಸತ್ಯಶವಸ ವಿಷ್ಕರ್ತಾ ಮಹಿತ್ವನಾ || ಅರ್ಥ:- ಸತ್ಯವನ್ನೇ ಶಕ್ತಿಯಾಗಿ ಹೊಂದಿರುವ ಧೀರರೇ ! (ಸತ್ಯವಾದ ಶಕ್ತಿಯಿಂದಲೇ ವಿರಾಜಿಸುವ ಧೀರರೇ !) ನೀವು ನಿಮ್ಮ ಸ್ವಂತ ಮಹಿಮೆಯಿಂದಲೇ ಆ ಸತ್ಯವನ್ನು ಆವಿಷ್ಕರಿಸಿರಿ, ಬೆಳಕಿಗೆ ತನ್ನಿರಿ. ಎಂದು ಸ್ವತಃ ವೇದವೇ ತನ್ನನ್ನು ತಾನು ತೆರೆದುಕೊಳ್ಳುತ್ತಿದೆ.ಆದ್ದರಿಂದ, ಯಥಾರ್ಥ ಜ್ಞಾನ ಆರ್ಜನೆಗಾಗಿ ನಾನೂ ವೇದಾಧ್ಯಯನ ಮಾಡಲೇ ಬೇಕು ಎಂದು ಮುಕ್ತ ಮನಸ್ಸಿನಿಂದ ನಿಶ್ಚಯಿಸಿ, ಆತ್ಮಪೂರ್ವಕವಾಗಿ ನೀವೂ ದೃಢ ನಿರ್ಧಾರಕ್ಕೆ ಬಂದಿದ್ದರೆ, ತಪ್ಪದೆ ತಡಮಾಡದೆ ಬನ್ನಿ. ಈ ಕೂಡಲೇ ವೇದಾಧ್ಯಯನ ಪ್ರಾರಂಭಿಸಿ.

ವಿ.ಸೂ.:- ಈ ವಿಚಾರಗಳಿಂದ ಅಕಸ್ಮಾತ್ ಗೊಂದಲಗೊಂಡಿದ್ದರೂ..... ಬನ್ನಿ. ಮುಕ್ತ ಮನಸ್ಸಿನಿಂದ ಮುಖತಃ ಮಾತನಾಡೋಣ. ಸಮಸ್ಯಾ ಮುಕ್ತರಾಗೋಣ.
ಸಸ್ನೇಹ ನಮಸ್ತೇ,


- ಪುರೋಹಿತ ವೇಲಾಪುರಿ ವಿಶ್ವನಾಥ ಶರ್ಮಾ-ವೇದಾಧ್ಯಾಯೀ, ಬೇಲೂರು.

ವೇದವನ್ನು ಕಲಿಯೋಣವೆಂದು ಶ್ರೀ ವಿಶ್ವನಾಥ ಶರ್ಮರು ಕರೆ ಕೊಟ್ಟಿರುವುದರಿಂದ ಸಹಜವಾಗಿ ಯಾವಾಗ ಪಾಠಮಾಡುತ್ತೀರೆಂದು ಪ್ರಶ್ನೆ ಕೇಳಬಹುದಲ್ಲವೇ? ಈಗಾಗಲೇ ಪಾಠ ಆರಂಭವಾಗಿದೆ.ಇನ್ನು ಕೆಲವೇ ದಿನಗಳಲ್ಲಿ, ವೇದಸುಧೆಯಲ್ಲೂ ಆರಂಭ ಗೊಳ್ಳಲಿದೆ...ನಿರೀಕ್ಷಿಸಿ...
-ಶ್ರೀಧರ್

ಯೋಚಿಸಲೊ೦ದಿಷ್ಟು..೨೦

“ಬೆಳಕಿನ ಚಿ೦ತನೆಗಳು“

೧. ಕೆಲವರು ಕತ್ತಲೆಯನ್ನು ತೆಗಳುವುದರಲ್ಲಿಯೇ ಬಹುಕಾಲವನ್ನು ವ್ಯಯಮಾಡುತ್ತಾರೆ. ಇನ್ನು ಕೆಲವರು ಸುಮ್ಮನೆ ಒ೦ದು ಸಣ್ಣ ಹಣತೆಯನ್ನು ಹಚ್ಚಿ ಸುಮ್ಮನಿದ್ದು ಬಿಡುತ್ತಾರೆ!

೨.  ಎಷ್ಟೇ ಅಗಾಧವಾದ ಪ್ರಮಾಣದ ಕತ್ತಲೆಯಾದರೂ ಒ೦ದು ಸಣ್ಣ ಹಣತೆಯನ್ನು ಮುಚ್ಚಿಬಿಡುವ ಸಾಮರ್ಥ್ಯ ಅದಕ್ಕಿಲ್ಲ!

೩. ಬೆಳಗುತ್ತಿರುವ ಹಣತೆಯ ಮು೦ದೆ,ಕನ್ನಡಿ ಹಿಡಿದಾಗ ಅದರ ಪ್ರಕಾಶ ಹೆಚ್ಚಾಗುತ್ತದೆ.ನಮಗೆ ಹಣತೆಯಾಗಲು ಆಗದಿದ್ದರೆ, ಕನ್ನಡಿಯಾದರೂ ಆಗೋಣ!

೪.  ಒಳಗೆ ಕತ್ತಲಿದ್ದು, ಹೊರಗೆ ಎಷ್ಟು ಬೆಳಕಿದ್ದರೂ ಏನೂ ಪ್ರಯೋಜನವಿಲ್ಲ.

೫.ಪರ್ವತದ ಸುತ್ತಮುತ್ತ ಹರಡಿರುವ ಕತ್ತಲೆಯ ಆಚೆ ಏನಿದೆ?ಎ೦ಬ ಪ್ರಶ್ನೆಗೆ ಉತ್ತರ ನಾಳೆ ಮು೦ಜಾವಿಗೆ ಉದಯಿಸಲಿರುವ ಸೂರ್ಯನಿದ್ದಾನೆ! ಎ೦ಬ ಉತ್ತರವೇ ಸೂಕ್ತ! “ನಾಳಿನ ಸೂರ್ಯ“ ನಮ್ಮ ಬೆಳಕಿನ ನಿರೀಕ್ಷೆಯ ಪ್ರತೀಕ.

೬. ಅ೦ಧನಿಗೂ ರಾತ್ರೆ ನಡೆಯುವಾಗ ಕೈಯಲ್ಲೊ೦ದು ಬೆಳಕಿನ ದೊ೦ದಿ ಬೇಕೇ ಬೇಕು! ಅದು ಅವನಿಗಲ್ಲ.ಅವನ ವಿರುಧ್ಧ ದಿಕ್ಕಿನಲ್ಲಿ ನಡೆದು ಬರುವವನಿಗೆ!

೭.ಮನೆಯ ಕಿಟಕಿಯಲ್ಲಿ ಬೆಳಕು ಕ೦ಡಿತೆ೦ದರೆ ಮನೆಯಲ್ಲಿ ಯಾರಾದರೂ ಇದ್ದಾರೆ೦ದು ಅರ್ಥ.ಮ೦ದಹಾಸವು ಮನೆ ಯೊ೦ದರ ಕಿಟಕಿಯಲ್ಲಿ ಕಾಣುವ ಬೆಳಕಿನ೦ತೆ!

೮. ಕತ್ತಲೆಯಿ೦ದಾಗಿಯೇ ನಕ್ಷತ್ರಗಳು ಬೆಳಗುತ್ತಿವೆ!

೯. ಸಾಲು ಸಾಲು ಹಣತೆಗಳು ಬೆಳಗಿದರೂ ಬೆಳಕು ಮಾತ್ರ ಒ೦ದೇ!

೧೦. ಹೃದಯದಲ್ಲಿರುವ ಬೆಳಕಿನಿ೦ದಲೇ ನಮ್ಮ ನಿಜವಾದ ಸೌ೦ದರ್ಯದ ಅನಾವರಣವಾಗುತ್ತದೆ.

೧೧.ವಜ್ರದ ಮೇಲೆ ಬಿದ್ದ ಬೆಳಕು ಪ್ರತಿಫಲಿಸುತ್ತದೆ. ನಾವೂ ವಜ್ರಗಳಾಗೋಣ,ಕಲ್ಲಾಗದಿರೋಣ!

೧೨. ನಮ್ಮೊಳಗೆ ನಮ್ಮದೇ ಬೆಳಕಿದ್ದರೆ,ಎ೦ಥ ಕತ್ತಲ ಸಾಮ್ರಾಜ್ಯದೊಳಗೂ ನಡೆದು ಹೋಗಬಹುದು.

೧೩. ಅಗ್ನಿಯು ಒಲೆಯಲ್ಲಿ ಉರಿದರೆ ಬೆ೦ಕಿ! ಹಣತೆಯಲ್ಲಿ ಉರಿದರೆ ದೀಪ!

೧೪. ಅಮಾವಾಸ್ಯೆಯ ರಾತ್ರಿಯಲ್ಲಿಯೇ ಬೆಳಕಿನ ಬೆಳಗು ಹೆಚ್ಚು!

೧೫. ಗೂಡೊಳಗಿನ ದೀಪದಿ೦ದ ಗೂಡಿನ ಒಳಗೂ ಬೆಳಕು! ಹೊರಗೂ ಬೆಳಗು!

ಸಂಪಾದಕೀಯ

ಸ್ನೇಹಿತರೊಬ್ಬರ  ಮೇಲ್ ಹೀಗಿದೆ-" ಬೇರೆ ಬೇರೆ ವಿದ್ವಾಂಸರ ಉಪನ್ಯಾಸಗಳನ್ನೂ ದಯಮಾಡಿ ಪ್ರಕಟಿಸಿ"   
ವೇದಸುಧೆಯಾದರೋ ಈ ಬಗ್ಗೆ ಹಲವಾರು ಪ್ರಯತ್ನಗಳನ್ನು ಮಾಡುತ್ತಲೇ ಇದೆ. ಲಭ್ಯವಾದ ಉಪನ್ಯಾಸಗಳನ್ನು ಪ್ರಕಟಿಸಲಾಗುತ್ತಿದೆ.ಮತ್ತೊಮ್ಮೆ  ವೇದಸುಧೆಯ ಎಲ್ಲಾ ಅಭಿಮಾನಿಗಳಲ್ಲೂ ವಿನಂತಿಸಲಾಗಿದೆ. ಒಂದು ಉತ್ತಮ ಉಪನ್ಯಾಸವನ್ನು ನೀವು ಕೇಳಿದಾಗ ಅದರ ಕೊಂಡಿಯನ್ನಾದರೂ ವೇದಸುಧೆಗೆ ಮೇಲ್ ಮಾಡಿದರೆ  ಆ ಉಪನ್ಯಾಸವನ್ನು ಪಡೆಯುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಿ ಪ್ರಕಟಿಸಲಾಗುವುದೆಂದು ತಿಳಿಸಲು ವೇದಸುಧೆಯು ಬಯಸುತ್ತದೆ.

ಬಲಿವೈಶ್ವದೇವ ಯಜ್ಞ



ನಮ್ಮ ಆಚರಣೆಗಳು-ಬಲಿವೈಶ್ವದೇವ ಯಜ್ಞ -ಒಂದು ವೈಜ್ಞಾನಿಕ ವಿಶ್ಲೇಷಣೆ-ವೇದಾಧ್ಯಾಯೀ ಸುಧಾಕರಶರ್ಮರಿಂದ-10 ನಿಮಿಷಗಳ ವಿವರಣೆ