Pages

Wednesday, April 20, 2011

ಅಂತಿಮ ಸತ್ಯ!

ಮೊನ್ನೆ ತಾನೇ ನನ್ನ ಅತ್ತೆಯವರು ದೈವಾಧೀನರಾದರು. ಅವರ ಅಂತಿಮ ಸಂಸ್ಕಾರದಲ್ಲಿ ನಾನೂ ಭಾಗಿಯಾಗಿದ್ದೆ. ಸುಮಾರು 5 ಎಕರೆಯಷ್ಟು ವಿಶಾಲವಾದ ರುದ್ರಭೂಮಿಯಲ್ಲಿ ಚಟ್ಟದ ಮೇಲೆ ಶವವನ್ನು ಮಲಗಿಸಿ ಅಂತಿಮ ವಿಧಿ-ವಿಧಾನಗಳನ್ನು ನಡೆಸುತ್ತಿದ್ದಾಗ ಮನದಾಳದಲ್ಲಿ ಮೂಡಿದ ಮಿಡಿತಗಳು ಹಲವಾರು.  ತಂದೆ-ತಾಯಿಯವರಿಗೆ ಮುದ್ದಿನ ಮಗಳಾಗಿ, ಸಹಜಾತರಿಗೆ ಸೋದರಿಯಾಗಿ, ಅನೇಕರಿಗೆ ಪ್ರಿಯ ಗೆಳತಿಯಾಗಿ, ಗಂಡನಿಗೆ ಅನುರೂಪಳಾದ ಸತಿಯಾಗಿ, ತನ್ನ ಮಕ್ಕಳಿಗೆ ಪ್ರೀತಿ-ವಾತ್ಸಲ್ಯದ ಮಡುವಾಗಿ, ತನ್ನ ಅತ್ತೆ-ಮಾವ, ಮೈದುನ-ನಾದಿನಿಯರಿಗೆ ಸಹಕಾರಿಯಾಗಿ, ಅಳಿಯಂದರಿಗೆ ಗೌರವ-ಲೇಪಿತ ಮಮತಾಮಯಿಯಾಗಿ ತುಂಬು ಬಾಳು ನಡೆಸಿದ್ದ ನನ್ನ ಅತ್ತೆ , ಎಲ್ಲರಂತೆ, ಕೊನೆಗೆ ಹೋಗುವಾಗ ಮಾತ್ರಾ ಏಕಾಕಿ!  ಕೇವಲ ಬೆರಳೆಣಿಕೆಯಷ್ಟು ಮಂದಿ ಅಂತಿಮ ಯಾತ್ರೆಗೆ   ಸಾಥ್  ನೀಡಿದವರು (ಅದೂ ಅಲ್ಲಿಯವರೆಗೆ ಮಾತ್ರಾ!!). ನಂತರದ ಪ್ರಯಾಣದ ಹಾದಿಯಲ್ಲಿ.....?

ಸಾವು ನಿಶ್ಚಿತ ಎಂಬುದು ಎಲ್ಲರೂ ಅರಿತ ಮಾತು. ಆದರೆ ಸಾಯುವತನಕವೂ ಎಲ್ಲರಿಗೂ ಅದು ಮರೆತ ಮಾತು! ಹಾಗಾಗಿ ಸಾವು ಎರಗುವವರೆಗೆ ನಮಗೆ ಸಾವಿನ ಪ್ರಜ್ಞೆ ಯಾವಾಗಲೂ ಬಹುತೇಕ ಬರುವುದೇ ಇಲ್ಲ. ಹಾಗಾಗಿಯೇ ಆ ಪ್ರಜ್ಞೆಯ ಅನುಪಸ್ಥಿತಿಯಲ್ಲಿ ನಾವು ಎಲ್ಲ ಲೌಕಿಕವಾದ ಮತ್ತು ಅಶಾಶ್ವತವಾದ ವಸ್ತು/ವಿಷಯ/ವ್ಯಕ್ತಿಗಳ ಬಗ್ಗೆಯೇ ವಿಚಾರ ಮಾಡುತ್ತಾ ನಮ್ಮ ಬಹುಮೂಲ್ಯ ಸಮಯವನ್ನು ಕಳೆದು ಬಿಡುತ್ತೇವೆ. ಮುಂದಿನ ಕ್ಷಣವೇ   ಸಾವು ಬರಬಹುದು ಎಂಬ ನಿರಂತರ ಪ್ರಜ್ಞೆ, ಬಹುಶ: ನಮ್ಮನ್ನು ಒಂದು ಉತ್ತಮ ಜೀವನಶೈಲಿಯತ್ತ ಒಯ್ಯಬಲ್ಲದು ಎನಿಸುತ್ತದೆ. ಏನೇ ಅಂದರೂ ಸಾವೇ ಅಂತಿಮವಾದ ಸತ್ಯ; ಉಳಿದೆಲ್ಲವೂ ಮಿಥ್ಯ. ಹಾಗಾಗಿ ಸತ್ಯಾನ್ವೇಷಣೆಗೆ ಹೆಚ್ಚು ಶ್ರಮ ಪಡಬೇಕಿಲ್ಲ. ನಮ್ಮ ಸುತ್ತಮುತ್ತ ಸಂಭವಿಸುವ ಸಾವುಗಳ ಅರಿವು ಮತ್ತು ನನಗೂ ಅದೊಂದು ದಿನ ಬಂದೇ ಬರುತ್ತದೆಂಬ ಅರಿವೇ ಅಂತಿಮ ಸತ್ಯ. ಪುರಂದರದಾಸರ ಈ ಕೃತಿಯನ್ನು ನೋಡಿ:

ಹಿಗ್ಗುವೆ ಯಾಕೊ ಈ ದೇಹಕ್ಕೆ ಹಿಗ್ಗುವೆ ಯಾಕೊ                             || ಪ ||

ಹಿಗ್ಗುವ ತಗ್ಗುವ ಮುಗ್ಗುವ ಕುಗ್ಗುವ
ಅಗ್ನಿಯೊಳಗೆ ಬಿದ್ದು ದಗ್ಧವಾಗೊ ದೇಹಕ್ಕೆ                                 || ಅ.ಪ.||

ಸತಿ ಪುರುಷರು ಕೂಡಿ ರತಿಕ್ರೀಡೆಗಳ ಮಾಡಿ
ಪತನಾದ ಇಂದ್ರಿಯ ಪ್ರತಿಮೆಯ ದೇಹಕ್ಕೆ                                   

ಆಗದ ಭೋಗಗಳ ಆಗುಮಾಡುತಲಿದ್ದು
ರೋಗ ಬಂದರೆ ಬಿದ್ದು ಹೋಗುವ ದೇಹಕ್ಕೆ                                  

ಪರರ ಸೇವೆಯ ಮಾಡಿ ನರಕ ಭಾಜನನಾಗಿ
ಮರಳಿ ಮರಳಿ ಬಿದ್ದು ಉರುಳುವ ದೇಹಕ್ಕೆ                                   

ಸೋರುವುದೊಂಭತ್ತು ಬಾಗಿಲ ಮಲಗಳು
ನೀರಿಲ್ಲದಿದ್ದರೆ ನಾರುವ ದೇಹಕ್ಕೆ                                               

ಪುರಂದರವಿಠಲನ ಚರಣ ಕಮಲಕ್ಕೆ
ಎರಗದೆ ತಿರುಗುವ ಗರುವದ ದೇಹಕ್ಕೆ                                         

ಅಂತಕನ ದೂತರು ಬಂದು ಎಳೆದೊಯ್ಯುವಾಗ ಪಕ್ಕಕ್ಕೆ ಸರಿದು ದೂರಾಗುವವರೇ ಎಲ್ಲರೂ. ಬಂದದ್ದು ನಾನೊಬ್ಬನೇ - ಹೋಗಬೇಕಾದ್ದೂ ನಾನೊಬ್ಬನೇ. ಉಳಿದೆಲ್ಲವೂ ಜೀವನ ಪಯಣದ ಹಾದಿಯ ತಾತ್ಕಾಲಿಕ ಸಂಗಾತಿಗಳು ಅಷ್ಟೇ.  ಇರುವ ತನಕ  ಬಾಳುವ ಬಾಳಿನ ರೀತಿ ತನಗೂ ಮತ್ತು ತನ್ನನ್ನವಲಂಬಿಸಿದವರಿಗೂ ಸಹನೀಯವಾಗಿರುವಂತೆ ನೋಡಿಕೊಂಡು, ಕಮಲಜಲಪತ್ರಭಾವದಲ್ಲಿ ಶಾಶ್ವತ ಸತ್ಯವಾದ ಸಾವಿನ ನಿರಂತರ ಪ್ರಜ್ಞೆಯೊಂದಿಗೆ ನಡೆಯುವುದೇ ಸೂಕ್ತವೇನೋ?