Pages

Tuesday, June 8, 2010

ಪುರೋಹಿತರ ಮನ ಕರಗಲೇ ಇಲ್ಲ!

ನಮ್ಮ ಸೋದರತ್ತೆ ಗೌರಮ್ಮ ನವರು ತಮ್ಮ ಹತ್ತನೆಯ ವರ್ಷದಲ್ಲೇ ಬಾಲ್ಯವಿವಾಹವಾಗಿ ಹನ್ನೆರಡನೆಯ ವಯಸ್ಸಿಗೆ ಪತಿಯನ್ನು ಕಳೆದುಕೊಂಡು, ವಿಧವೆ ಪಟ್ಟ ಕಟ್ಟಿಕೊಂಡು ನಮ್ಮ ಮನೆಯಲ್ಲೇ ತಮ್ಮ ಉಳಿದ ದೀರ್ಘ ಜೀವನವನ್ನು ಅವರ ತಮ್ಮನ ಮಕ್ಕಳಾದ ನಮ್ಮನ್ನೇ ಮಕ್ಕಳೆಂದು ತಿಳಿದು ನಮ್ಮ ಹೆತ್ತ ತಾಯಿ ಗಿಂತಲೂ ಹೆಚ್ಚು ಪ್ರೀತಿಯಿಂದ ನಮ್ಮನ್ನೆಲ್ಲಾ ಬೆಳೆಸುವುದರಲ್ಲೇ ಅವರ ಜೀವನದ ಸಾರ್ಥಕತೆ ಕಂಡುಕೊಂಡ ಮಹಾನ್ ವ್ಯಕ್ತಿ. ೭೫ ನೆಯ ವಯಸ್ಸಿನಲ್ಲಿ ಅವರು ನಮ್ಮ ಮನೆಯಲ್ಲೇ ಕೊನೆಯುಸಿರೆಳೆದರು. ಈ ಘಟನೆ ನಡೆದು ಇಪ್ಪತ್ತೈದು ವರ್ಷಗಳು ಕಳೆದುಹೋಯ್ತು. ಆ ಸಂದರ್ಬದಲ್ಲಿ ನಡೆದ ಒಂದು ಘಟನೆಯನ್ನು ವೇದಸುಧೆಯ ಅಭಿಮಾನಿಗಳ ಗಮನಕ್ಕೆ ತರಬೇಕೆನಿಸುತ್ತಿದೆ.
ಈಗಾಗಲೇ ತಿಳಿಸಿದಂತೆ ನಮ್ಮತ್ತೆ ಗೌರಮ್ಮ ನವರಿಗೆ ಸ್ವಂತ ಮಕ್ಕಳಿಲ್ಲ. ಅವರ ಶ್ರಾದ್ಧ ಕರ್ಮಗಳನ್ನು ಮಾಡುವವರಾರು? ನಮ್ಮ ತಂದೆಗೂ ವಯಸ್ಸಾಗಿದೆ. ಶರೀರದಲ್ಲಿ ತ್ರಾಣವಿಲ್ಲ. ನಾವು ಮಾಡಬೇಕೆಂದರೆ ಅಪ್ಪ-ಅಮ್ಮ ಬದುಕಿರುವಾಗ ನೀವು ಮಾಡಕೂಡದೆಂದು ಹಿರಿಯರು ನಮ್ಮನ್ನು ಕಟ್ಟಿ ಹಾಕಿದರು. ಆಗ ಯಾವ ಶಾಸ್ತ್ರದಲ್ಲಿತ್ತೋ ಗೊತ್ತಿಲ್ಲ ಒಬ್ಬ ಕರ್ತೃವನ್ನು ನೇಮಿಸಿಕೊಂಡಿದ್ದಾಯ್ತು. ಅವರಾರೋ ಮೂರನೆಯ ಸಂಬಂಧವಿಲ್ಲದ ವ್ಯಕ್ತಿ. ಅವರು ಕರ್ತೃವಿನ ಜಾಗದಲ್ಲಿದ್ದು ಶ್ರಾದ್ಧಕರ್ಮಗಳು ನಮ್ಮತ್ತೆ ಮರಣಹೊಂದಿದ ಐದನೆಯ ದಿನ ಶುರುವಾಯ್ತು. ಎರಡು ದಿನಗಳಷ್ಟೇ ಕಳೆದಿದೆ. ಕರ್ತೃ ನಾಪತ್ತೆ ಯಾಗಿಬಿಟ್ಟರು. ಕರ್ಮ ನಡೆಯುವಂತಿಲ್ಲ. ಎಲ್ಲರಿಗೂ ಗಾಭರಿ! ಇದನ್ನೆಲ್ಲಾ ಅತಿಯಾಗಿ ನಂಬಿದ್ದ ನನಗೆ ಆತಂಕ. ಏನಾಗಿ ಬಿಡುತ್ತೋ ಏನೋ!! ಸರಿ, ಕರ್ತೃವನ್ನು ಹೇಗಾದರೂ ಕರೆತರಲು ನನ್ನ ಪ್ರಯತ್ನ ಶುರುವಾಯ್ತು. ನಮ್ಮ ಹುಟ್ಟೂರು ಹರಿಹರಪುರವೆಂಬ ಹಳ್ಳಿ. ಅಲ್ಲಿಗೆ ಸುಮಾರು ಎಂಟು ಮೈಲು ದೂರದ ಹೊಳೆನರಸೀಪುರದಲ್ಲಿ ಕರ್ತೃವಿನ ಮನೆ. ಹೊಳೆನರಸೀಪುರಕ್ಕೆ ಅವರ ಮನೆಗೆ ಹೋದೆ. ಅಲ್ಲಿಲ್ಲ. ಒಬ್ಬ ಪುರೋಹಿತರ ಮನೆಯಲ್ಲಿರುವುದಾಗಿ ತಿಳಿದು ಅಲ್ಲಿ ಹೋದೆ. ಆತ ಆ ಪುರೋಹಿತರೊಡನೆ ಒಂದು ದೇವಸ್ಥಾನಕ್ಕೆ ಹೋಗಿದ್ದಾನೆ. ಅಲ್ಲಿ ಹೋಗಿ ವಿಚಾರಿಸಲಾಗಿ ಪಕ್ಕದಲ್ಲಿದ್ದ ಪುರೋಹಿತರೆಡೆಗೆ ಅವರ ದೃಶ್ಟಿ ಹೋಯ್ತು.
" ಏನು ಗುರುಗಳೇ, ಮೊನ್ನೆಯಿಂದ ನಮ್ಮತ್ತೆ ಕರ್ಮಾದಿಗಳನ್ನು ಕರ್ತೃವಾಗಿ ಮಾಡುತ್ತಿರುವ ಇವರು ಇಂದು ಬಾರದೆ ದಿಕ್ಕೇ ತೋಚದಾಗಿದೆ. ದಯವಿಟ್ಟು ಕಳಿಸಿಕೊಡಿ."-- ನನ್ನ ಕಣ್ಣು ಅದಾಗಲೇ ತೇವವಾಗಿತ್ತು.
ಆ ಪುರೋಹಿತರು ಹೇಳಿದರು" ಅದ್ಯಾವನೋ ಮಾಡಿಸ್ತಾ ಇದಾನಲ್ಲಾ! ಅವನನ್ನೇ ಕೇಳು, ಹೇಗಾದರೂ ಮಾಡಿಕೊಳ್ಳಲಿ, ಇವನನ್ನು ಕಳಿಸುಲ್ಲ."
ನಾನಂತೂ ಧರೆಗೆ ಇಳಿದುಹೋದೆ. ದೇವಸ್ಥಾನದ ಮುಂದೆ ರಸ್ತೆಯಲ್ಲೇ ಆ ಪುರೋಹಿತರ ಪಾದಕ್ಕೆ ಸಾಸ್ಟಾಂಗ ನಮಸ್ಕಾರ ಮಾಡುತ್ತಾ ಕಣ್ಣೀರಿಟ್ಟೆ. ಪುರೋಹಿತರ ಮನ ಕರಗಲೇ ಇಲ್ಲ. ಕೊನೆಗೆ ನಮ್ಮ ಸಂಬಂಧಿಕರೊಬ್ಬರ ಸಹಕಾರದಿಂದ ಬೇರೆ ದಾರಿಯಾಯ್ತು. ಅದು ಬೇರೆ ವಿಚಾರ. ಆದರೆ ಅಂದು ನನಗಾದ ಮಾನಸಿಕ ನೋವು ಈ ಪುರೋಹಿತ ವ್ಯವಸ್ಥೆ ಮೇಲೆ ಕಿಡಿ ಕಾರುವಂತಾಗಿದೆ. ಆದರೂ ಉತ್ತಮ ಮನೋಧರ್ಮದ ಪುರೋಹಿತರುಗಳನ್ನೂ ಕಂಡಿದ್ದೇನೆ. ಹಾಗಾಗಿ ನಾನು ಬಂಡೆದ್ದಿಲ್ಲ!! ಅಂದು ಆ ಪುರೋಹಿತರು ಹಾಗೆ ವರ್ತಿಸಿದ್ದೇಕೆ ಎಂಬುದು ನಿಮಗೆ ತಿಳಿಯಿತಲ್ಲವೇ?
ನೀವೇನು ಹೇಳ್ತೀರಿ?

-ಹರಿಹರಪುರ ಶ್ರೀಧರ್
--------------------------------------------------------------
ಯಾರು ಏನು ಹೇಳಿದರು?
ಸಾಗರದಾಚೆಯ ಇಂಚರ:
ನಿಜಕ್ಕೂ ಕೆಲವೊಮ್ಮೆ ಪುರೋಹಿತರ ಮೇಲೆ ನಂಗೂ ಕೋಪ ಬಂದಿದೆ
ದಿನಕ್ಕೆ ಒಂದೇ ಪೂಜೆ ಯಿದ್ದರೆ ತಾಸು ಬೇಕು,
ಅದೇ ಪೂಜೆ ದಿನಕ್ಕೆ ೧೦ ಇದ್ದರೆ, ೩೦ ನಿಮಿಷ ಸಾಕು
ನಿಮ್ಮ ಘಟನೆ ಮನ ತಟ್ಟುವಂತಿದೆ
June 9, 2010 1:40 PM
--------------------------------------------------------------
ವಿ.ಆರ್.ಭಟ್ :

This Habbit of Purohits are bad, they must understand atleast now! nice article
June 9, 2010 3:14 PM
-------------------------------------------------------------
ವಿಶಾಲ್:
This is a clear example of fear within us.Purohit's arrogance was because of the position he has which he doesn't deserve.Who gave him that position, its we.Why did we give,because of Ignorance and fear.
Lets hope that the society realizes this soon and get out of that dogma.

---------------------------------------------------------

Venkatakrishna.K.K.

ಅಪ್ಪ ಪುರೊಹಿತ, ಆದಕಾರಣ ಮಗ ಪುರೊಹಿತ. ದಕ್ಷಿಣೆಗೆ ತಕ್ಕ ಪ್ರದಕ್ಷಿಣೆ. ವಿಚಾರವಿಲ್ಲದ ಆಚಾರ.ಅನಾಚಾರದ ವಿಚಾರ.ಗೊಡ್ಡು ಸಂಪ್ರದಾಯ ಗೊತ್ತಿದೆ,ಶಾಸ್ತ್ರವಿಚಾರ ಗೊತ್ತಿಲ್ಲ. ಇದು ಇಂದಿನ ನೂರಾರು ಪುರೊಹಿತರ ಕತೆ.
June 13, 2010 6:45 PM

------------------------------------------------------------
ತಮ್ಮ ಅಭಿಪ್ರಾಯಗಳನ್ನು ತಿಳಿಸಿರುವ ಸಾಗರದಾಚೆಯ ಇಂಚರ. ಶ್ರೀಯುತ ವಿ.ಆರ್. ಭಟ್ Venkatakrishna.K.K. ಮತ್ತು ಶ್ರೀ ವಿಶಾಲ್ ಅವರುಗಳಿಗೆ ಧನ್ಯವಾದಗಳು. ನಡೆದ ನೈಜ ಘಟನೆಯನ್ನು ಯಥಾವತ್ತಾಗಿ ಬರೆಯಲು ಕಾರಣವಿದೆ. ಇಪ್ಪತ್ತೈದು ವರ್ಷಗಳ ಹಿಂದಿನ ನನ್ನ ಮಾನಸಿಕತೆಗೂ ಇಂದಿನ ಮಾನಸಿಕತೆಗೂ ಅಜಗಜಾಂತರ ವೆತ್ಯಾಸವಿದೆ. ಇರಲಿ. ಶ್ರಾದ್ಧದ ನಿಜಾರ್ಥವನ್ನು ವೇದಾಧ್ಯಾಯೀ ಸುಧಕರಶರ್ಮರು ವೇದದ ಹಿನ್ನೆಲೆಯಲ್ಲಿ ತಿಳಿಸಬೇಕೆಂದು ವಿನಂತಿಸುವೆ.
-ಶ್ರೀಧರ್