ಕಳೆದ ಒಂದು ವರ್ಷದಿಂದ ಹಾಸನದ ಸ್ಥಳೀಯ ಪತ್ರಿಕೆಯಲ್ಲಿ ಬರೆಯುತ್ತಿದ್ದ "ಎಲ್ಲರಿಗಾಗಿ ವೇದ" ಲೇಖನ ಮಾಲೆಯ ಮೊದಲ ಭಾಗವನ್ನು ವೇದ ಸುಧೆಯ ಓದುಗರಿಗಾಗಿ ಪ್ರಕಟಿಸಿರುವೆ.
“ಸಾಮಾನ್ಯನಿಂದ ಸಾಮಾನ್ಯರಿಗೆ”
ಕುಸುಮ-೧
ವಿಷಯ ಪ್ರವೇಶಕ್ಕೆ ಮುಂಚೆ:
ಆರಂಭದಲ್ಲಿಯೇ ಒಂದು ಮಾತನ್ನು ಓದುಗರಲ್ಲಿ ಸ್ಪಷ್ಟಪಡಿಸಿಬಿಡುವೆ. ಈ ಹೊತ್ತಿಗೆಯ ಉದ್ಧೇಶವೆಂದರೆ “ವೇದ” ಎಂದರೆ “ಇದು ನಮ್ಮಂತಹ ಸಾಮಾನ್ಯರಿಗಲ್ಲ”! ವೇದವನ್ನು ತಿಳಿಯಲು ಸಂಸ್ಕೃತದ ಜ್ಞಾನ ಇರಬೇಕು! ವೇದ ಎಂದರೆ ಪೂಜೆ ಪುನಸ್ಕಾರಕ್ಕಾಗಿ ಇರುವ ಮಂತ್ರಗಳು! ಎಲ್ಲರಿಗೂ ವೇದವನ್ನು ಓದುವ ಅರ್ಹತೆ ಇಲ್ಲ! ಹೆಂಗಸರು ಓದಬಾರದು! ಯಾವುದೋ ಒಂದು ವರ್ಗದವರು ಮಾತ್ರ ಓದಬೇಕು! ಇತ್ಯಾದಿ,ಇತ್ಯಾದಿ ವಿಚಾರಗಳು ಬಹುಪಾಲು ಜನರಲ್ಲಿ ಸಾಮಾನ್ಯವಾಗಿ ಬೇರೂರಿದೆ. ಅದಕ್ಕೆ ಹಲವಾರು ಕಾರಣಗಳು ಇವೆ .ಕಾರಣಗಳು ಏನೇ ಇರಲಿ, ಈ ಹೊತ್ತಿಗೆಯ ಉದ್ಧೇಶವೆಂದರೆ ವೇದವೆಂದರೆ ಇದು “ಅಸಾಮಾನ್ಯರಿಗೆ”ಎನ್ನುವ ಭಾವನೆಯನ್ನು ಕಿತ್ತುಹಾಕಿ ಎಲ್ಲಾ ಮಾನವರ ನೆಮ್ಮದಿಯ ಬದುಕಿಗಾಗಿ ಇರುವ ಅರಿವಿನ ಭಂಡಾರ ಎಂಬುದನ್ನು ಕೆಲವು ವೇದ ಮಂತ್ರವನ್ನು ಆಧರಿಸಿ ಸರಳವಾದ ಮಾತುಗಳಲ್ಲಿ ನನ್ನಂತಹ “ಸಾಮಾನ್ಯನಿಂದ ಸಾಮಾನ್ಯರಿಗೆ” ತಿಳಿಸುವುದೇ ಆಗಿದೆ. ಈ ಹೊತ್ತಿಗೆಯನ್ನು ಓದುವಾಗ ವೇದ ಪಂಡಿತರುಗಳು ಹಲವು ಭಾಷ್ಯಗಳ ಆಧಾರದಮೇಲೆ ಒಂದೇ ಮಂತ್ರಕ್ಕೆ ಬೇರೆಯ ಅರ್ಥವನ್ನು ನೀಡುವ ಅವಕಾಶಗಳೂ ಸಹ ಇದ್ದೇ ಇದೆ. ಆದರೆ ವೇದ ಪಂಡಿತರಲ್ಲಿ ನನ್ನ ಮನವಿ ಏನೆಂದರೆ ವೇದವು ಸಾರ್ವಕಾಲಿಕ, ಸಾರ್ವಜನಿಕ ಮತ್ತು ಸಾರ್ವ ಭೌಮ , ಎಂಬುದನ್ನು ವೇದ ಮಂತ್ರಗಳಲ್ಲೇ ನಿರೂಪಿಸಿದೆ. ಆದರೆ ಅದಕ್ಕೆ ಭಾಷ್ಯವನ್ನು ಬರೆಯುವಾಗ ಅಂದಿನ ಸಾಮಾಜಿಕ ಜೀವನಕ್ಕನುಗುಣವಾಗಿ ವೇದಮಂತ್ರವನ್ನು ಅರ್ಥೈಸಿದ್ದಾರೆಂಬುದು ಗಮನದಲ್ಲಿರಬೇಕು.ಆದರೆ ಇಂದಿನ ಕಾಲಘಟ್ಟದಲ್ಲಿ ಯಾಸ್ಕಾಚಾರ್ಯರ ನಿರುಕ್ತದ ಆಧಾರದಿಂದ ವೇದ ಮಂತ್ರಗಳನ್ನು ಬಿಡಿಸಿಕೊಂಡಾಗ ಮಾತ್ರ ವೇದವು ಇಂದಿನ ಕಾಲಕ್ಕೂ , ಮುಂದಿನ ಕಾಲಘಟ್ಟಕ್ಕೂ ಸಹ ಹೇಗೆ ಉಪಯುಕ್ತ ಎಂಬ ಅರಿವು ಮೂಡುತ್ತದೆ.
ಈಗಾಗಲೇ ನಿರುಕ್ತದ ಆಧಾರದಲ್ಲಿ ವೇದಮಂತ್ರಗಳಿಗೆ ಅರ್ಥವನ್ನು ಬಿಡಿಸಿ ಸರ್ವಮಾನವರ ಹಿತಕ್ಕಾಗಿ ಉಪಯೋಗವಾಗುವಂತೆ ಬರೆದಿರುವ ಪಂಡಿತ್ ಸುಧಾಕರ ಚತುರ್ವೇದಿಯವರ “ ವೇದೋಕ್ತ ಜೀವನ ಪಥ” , ವೇದಾಧ್ಯಾಯೀ ಸುಧಾಕರಶರ್ಮರು ನನ್ನ ಅಂತರ್ಜಾಲ ತಾಣವಾದ veಜಚಿsuಜhe.ಛಿom ಗಾಗಿ ನೀಡಿರುವ ಉಪನ್ಯಾಸಗಳು ಮತ್ತು ಬೆಂಗಳೂರಿನ ವೇದಭಾಷ್ಯಪ್ರಕಾಶನ ಸಮಿತಿಯವರು ಪ್ರಕಟಿಸಿರುವ ಕನ್ನಡ ವೇದಭಾಷ್ಯವು [ಮೂಲ ಸ್ವಾಮಿ ದಯಾನಂದ ಸರಸ್ವತಿಯವರ ಭಾಷ್ಯ] ನನ್ನ ಈ ಹೊತ್ತಿಗೆಗೆ ಆಧಾರವೆಂಬುದನ್ನು ಸವಿನಯವಾಗಿ ತಿಳಿಸಬಯಸುವೆ.ಅಲ್ಲದೆ ಸರ್ವಜನರ ಹಿತಕ್ಕಾಗಿ ಬರುವ ಯಾರದೇ ಸಲಹೆಗಳನ್ನು ಸವಿನಯವಾಗಿ ಸ್ವೀಕರಿಸಲು ಬದ್ಧನಾಗಿರುವೆ. ಇನ್ನು ಒಂದೊಂದೇ ಹೆಜ್ಜೆ ಹಾಕುತ್ತಾ ಸಾಗೋಣ.
ವೇದ ಎಂದರೇನು?
ವೇದ ಎಂದರೆ ಜ್ಞಾನ. ಇಷ್ಟು ಸರಳವಾಗಿರುವ ಅರ್ಥವನ್ನು ಅದೆಷ್ಟು ಕಠಿಣ ಮಾಡಿಬಿಟ್ಟಿದ್ದಾರೆ! ಹಾಗೆನಿಸೋದಿಲ್ಲವೇ? ಜ್ಞಾನ ಎಂದರೆ ಅರಿವು. ಎಂತಹ ಅರಿವು ? ಸುಂದರ ಬದುಕು ನಡೆಸುವುದು ಹೇಗೆಂಬ ಅರಿವು.ಮುಂದೆ ಒಂದೊಂದೇ ಮಂತ್ರವನ್ನು ಬಿಡಿಸುತ್ತಾ ಹೋಗುವಾಗ “ ಇದು ಪೂಜೆಯ ಮಂತ್ರವೇ? ಶ್ರಾದ್ಧ ಕರ್ಮಗಳಿಗೆ ಮಾತ್ರ ಪಠಿಸುವ ಮಂತ್ರವೇ? ಹವನ ಹೋಮಗಳಿಗೆ ಮಾತ್ರ ಸೀಮಿತವೇ? ಎಲ್ಲವೂ ಅರ್ಥವಾಗುತ್ತಾ ಹೋಗುತ್ತದೆ.
“ಎಲ್ಲರಿಗಾಗಿ ವೇದ” ಎಂಬುದಕ್ಕೆ ಆಧಾರವಾದ ವೇದ ಮಂತ್ರಗಳು, ಮನುಷ್ಯನ ನೆಮ್ಮದಿಯ ಬದುಕಿಗೆ ವೇದವು ಏನು ಸೂತ್ರವನ್ನು ಕೊಡುತ್ತದೆ? ಇವನು ಶ್ರೇಷ್ಠ ಇವನು ಕನಿಷ್ಠನೆನ್ನಲು ವೇದದಲ್ಲಿ ಅವಕಾಶವಿದೆಯೇ? ಎಲ್ಲವನ್ನೂ ಮುಂದಿನ ಪುಟಗಳಲ್ಲಿ ನೋಡೋಣ.
ವೇದವನ್ನು ಯಾರು ಬರೆದರು?
ವೇದವು ಅಪೌರುಷೇಯ.ಇದನ್ನು ಮನುಷ್ಯರು ಬರೆದದ್ದಲ್ಲ. ಅಂದರೆ ಹೇಗೆ ಬಂತು? ಎಂಬುದೇ ತಾನೇ ಮುಂದಿನ ಪ್ರಶ್ನೆ! ವೇದವನ್ನು ಋಷಿಗಳು ತಮ್ಮ ತಪೋ ಬಲದಿಂದ ಕಂಡುಕೊಂಡರು. “ ಋಷಿರ್ದರ್ಶನಾತ್” ಎನ್ನುತ್ತಾರೆ. ಅಂದರೆ ಋಷಿಗಳು ಕಂಡುಕೊಂಡ ಸತ್ಯ. ಋಷಿಗಳು ಅಂತರ್ಮುಖಿಗಳಾಗಿ ತಪಸ್ಸನ್ನು ಆಚರಿಸಿದಾಗ ಭಗವಂತನಿಂದಲೇ ಕಂಡುಕೊಂಡ ಸತ್ಯವೇ ವೇದಗಳು. ಮಾನವ ಜನ್ಮ ಯಾವಾಗ ಆಯ್ತೋ ಆಗಿನಿಂದಲೇ ವೇದಗಳು ಇವೆ. ವಿಜ್ಞಾನಿಯೊಬ್ಬ ಗುರುತ್ವಾಕರ್ಷಣ ನಿಯಮವನ್ನು ಕಂಡು ಹಿಡಿದ. ಯಾವುದೇ ವಸ್ತುವನ್ನು ಮೇಲೆ ಎಸೆದರೂ ಭೂಮಿಯು ಅದನ್ನು ಆಕರ್ಶಿಸುವುದರಿಂದ ಅದು ಭೂಮಿ ಮೇಲೆ ಬೀಳುತ್ತದೆ. ವಿಜ್ಞಾನಿಯು ಈ ಸತ್ಯವನ್ನು ಕಂಡುಹಿಡಿಯುವ ಮುಂಚೆಯೂ ಯಾವುದೇ ಮೇಲೆ ಎಸೆದ ವಸ್ತು ಭೂಮಿಗೆಗೆ ಬೀಳುತ್ತಲೇ ಇತ್ತಲ್ಲವೇ? ಆದರೆ ವಿಜ್ಞಾನಿಯು ಈ ನಿಯಮವನ್ನು ತನ್ನ ಸಂಶೋಧನೆಯಿಂದ ಕಂಡುಕೊಂಡನು. ಹಾಗೆಯೇ ನಮ್ಮ ಋಷಿಮುನಿಗಳು ಅದಾಗಲೇ ಇದ್ದ ವೇದ ಜ್ಞಾನವನ್ನು ತಮ್ಮ ತಪಸ್ಸಿನ ಬಲದಿಂದ ಕಂಡುಕೊಂಡರು. ಇಷ್ಟನ್ನು ವೇದದ ಉಗುಮದ ಬಗ್ಗೆ ಅರಿತು ಕೊಂಡರೆ ಸಾಕು. ಯಾವ್ಯಾವ ಮಂತ್ರವನ್ನು ಯಾವ ಯಾವ ಋಷಿಗಳು ಕಂಡುಕೊಂಡರೆಂಬುದನ್ನು ಆಯಾಮಂತ್ರಗಳಲ್ಲಿ ಉಲ್ಲೇಖಿಸಲಾಗಿದೆ. ವೇದವ್ಯಾಸರು ಅಲ್ಲಲ್ಲಿ ಹರಡಿದ್ದ ವೇದ ಜ್ಞಾನವನ್ನು ನಾಲ್ಕು ಭಾಗಗಳಲ್ಲಿ ಕ್ರಮವಾಗಿ ಹಂಚಿದರು. ಆದರೆ ನಾಲ್ಕೂ ವೇದಗಳು ಭಗವಂತನಿಂದಲೇ ಪ್ರಕಟವಾದವೆಂಬುದನ್ನು ಒಂದು ವೇದ ಮಂತ್ರವೇ ಸಾರುತ್ತದೆ. ಆ ಮಂತ್ರದಿಂದಲೇ ಮುಂದುವರೆಯೋಣ.
ಕುಸುಮ-೨
ವೇದದ ಉಗಮ:
ವೇದದ ಉಗಮವನ್ನು ಒಂದು ವೇದ ಮಂತ್ರವೇ ನಿರೂಪಿಸುತ್ತದೆ. ಯಜುರ್ವೇದದ ೩೧ ನೇ ಅಧ್ಯಾಯದ ೭ನೇ ಮಂತ್ರ ಹೀಗಿದೆ?
ತಸ್ಮಾತ್ ಯಜ್ಞಾತ್ ಸರ್ವಹುತ: ಋಚ: ಸಾಮಾನಿ ಜಜ್ಞಿರೇ|
ಛಂದಾಂಸಿ ಜಜ್ಞಿರೇ ತಸ್ಮಾತ್ ಯಜುಸ್ತಸ್ಮಾದಜಾಯತಾ||
ತಸ್ಮಾತ್ ಸರ್ವಹುತ: ಯಜ್ಞಾತ್= ಆ ಸರ್ವದಾತೃವೂ, ಉಪಾಸನೀಯನೂ ಆದ ಭಗವಂತನಿಂದ
ಋಚ: ಸಾಮಾನಿ ಜಜ್ಞಿರೇ= ಋಗ್ವೇದ ಸಾಮವೇದಗಳು ಪ್ರಕಟವಾದವು
ತಸ್ಮಾತ್ ಛಂದಾಂಸಿ ಜಜ್ಞಿರೇ =ಅವನಿಂದ ಅಥರ್ವಮಂತ್ರಗಳೂ ಪ್ರಕಟವಾದವು.
ತಸ್ಮಾತ್ ಯಜು: ಅಜಾಯತ= ಅವನಿಂದ ಯಜುರ್ವೇದವೂ ಪ್ರಕಟವಾಯ್ತು.
ಭಗವಂತನಿಂದಲೇ ನಾಲ್ಕೂ ವೇದಗಳೂ ಪ್ರಕಟವಾದವು, ಎಂಬ ಅಂಶವನ್ನು ಯಜುರ್ವೇದದ ಈ ಮಂತ್ರವು ಸ್ಪಷ್ಟಪಡಿಸುತ್ತದೆ. ಅಂದರೆ ನಾಲ್ಕೂ ವೇದಗಳು ಯಾವ ಮನುಷ್ಯನೂ ಬರೆದಿದ್ದಲ್ಲ. ಅದಾಗಲೇ ತರಂಗಗಳ ರೂಪದಲ್ಲಿ ಪ್ರಕಟವಾಗಿದ್ದ ವೇದ ಮಂತ್ರಗಳನ್ನು ಅನೇಕ ಋಷಿಗಳು ತಮ್ಮ ತಪೋಬಲದಿಂದ ಕಂಡುಕೊಂಡು ಮಂತ್ರದ್ರಷ್ಟಾರರೆನಿಸಿದರು. ಇದರಿಂದ ಏನು ನಿರೂಪಿತವಾಗುತ್ತದೆಂದರೆ ಮಾನವನ ಸೃಷ್ಟಿಯಾದಾಗಲೇ ಅವನ ಬದುಕನ್ನು ರೂಪಿಸುವ ಸೂತ್ರಗಳಾದ ವೇದಮಂತ್ರಗಳು ಭಗವಂತನಿಂದ ಪ್ರಕಟವಾಗಿದ್ದವು. ನಂತರದ ದಿನಗಳಲ್ಲಿ ಋಷಿಗಳಿಗೆ ಮಂತ್ರಗಳ ದರ್ಶನವಾಯ್ತೆಂಬುದು ವೇದಗಳಿಂದಲೇ ತಿಳಿದುಬರುವ ಸಂಗತಿ.
ವೇದವು ಯಾರಿಗಾಗಿ?
ಜ್ಞಾನ ಬೇಕೆನ್ನುವ ಎಲ್ಲರಿಗಾಗಿ ವೇದವನ್ನು ಕೊಟ್ಟಿದ್ದೇನೆ, ಎಂಬುದು ಭಗವಂತನ ಮಾತು. ಯಜುರ್ವೇದದ ೨೬ ನೇ ಅಧ್ಯಾಯದ ೨ನೇ ಮಂತ್ರ ಹೀಗಿದೆ?
ಯಥೇಮಾಂ ವಾಚಂ ಕಾಲ್ಯಾಣೀಂ ಆವದಾನಿ ಜನೇಭ್ಯ: |
ಬ್ರಹ್ಮರಾಜನ್ಯಾಭ್ಯಾಂ ಶೂದ್ರಾಯಚಾರ್ಯಾಯ ಚ ಸ್ವಾಯ ಚಾರಣಾಯ ಚ |
ಪ್ರಿಯೋ ದೇವಾನಾಂ ದಕ್ಷಿಣಾಯೈ ದಾತುರಿಹ ಭೂಯಾ ಸಮಯಂ
ಮೇ ಕಾಮ: ಸಮೃಧ್ಯತಾಮುಪ ಮಾದೋ ನಮತು||
ಅರ್ಥ:
ಇಹ= ಈ ಲೋಕದಲ್ಲಿ
ಯಥಾ ದೇವಾನಾಂ ದಕ್ಷಿಣಾಯೈದಾತು: ಭೂಯಾಸಮ್= ವಿದ್ವಜ್ಜನರಿಗೂ, ಉದಾರಾತ್ಮರಿಗೂ, ಆಧ್ಯಾತ್ಮಿಕ ಶಕ್ತಿಯ ದಾತೃವಾಗುವಂತೆ
ಇಮಾಂ ಕಲ್ಯಾಣೀಂ ವಾಚಮ್ = ಈ ಕಲ್ಯಾಣಕಾರಿಯಾದ ವಾಣಿಯನ್ನು
ಜನೇಭ್ಯ: =ಮಾನವರೆಲ್ಲರ ಸಲುವಾಗಿ
ಬ್ರಹ್ಮರಾಜನ್ಯಾಭ್ಯಾಮ್=ಬ್ರಾಹ್ಮಣ-ಕ್ಷತ್ರಿಯರಿಗಾಗಿ
ಶೂದ್ರಾಯ=ಶೂದ್ರನಿಗಾಗಿ ಚ=ಮತ್ತು
ಆರ್ಯಾಯ= ವೈಶ್ಯನ ಸಲುವಾಗಿ
ಸ್ವಾಯ=ತನ್ನವನಿಗಾಗಿ
ಚ=ಮತ್ತು[ಅದೇ ರೀತಿಯಲ್ಲಿ]
ಅರಣಾಯ=ಬೇರೆಯವನಿಗಾಗಿ
ಆವದಾನಿ=ಉಪದೇಶಿಸುತ್ತೇನೆ.
ಅಯಂ ಮೇ ಕಾಮ:= ಈ ನನ್ನ ಕಾಮನೆಯು
ಸಮೃಧ್ಯತಾಮ್=ಸಮೃದ್ಧವಾಗಲಿ
ಅದ: = ಈ ಜಗತ್ತು
ಮಾ ಉಪ ನಮತು=ನನ್ನ ಬಳಿ ನಮ್ರವಾಗಿ ಬರಲಿ
ಭಾವಾರ್ಥ:
ಈ ಮಂತ್ರವು ಏನು ಹೇಳುತ್ತದೆ? ಈ ಲೋಕದಲ್ಲಿನ ಮಾನವರೆಲ್ಲರ ಸಲುವಾಗಿ ಉಪದೇಶಿಸುತ್ತೇನೆ. ಮಂತ್ರದಲ್ಲಿರುವ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಪದಗಳನ್ನು ಈಗಿರುವಂತೆ ಜಾತಿವಾಚಕವಾಗಿ ಬಳಸಿಲ್ಲವೆಂಬುದನ್ನು ಗಮನಿಸಬೇಕು. ಮುಂದೆ ನಾಲ್ಕು ವರ್ಣಗಳ ಪರಿಚಯವಾಗುವಾಗ ಈ ವಿಚಾರವು ಸ್ಪಷ್ಟವಾಗುತ್ತದೆ. ಜಗತ್ತಿನ ನೆಮ್ಮದಿಗಾಗಿ ಎಲ್ಲರಿಗೆ ಎನ್ನುವಾಗ, ತನ್ನವನಿಗೆ, ಅಷ್ಟೇ ಅಲ್ಲ, ಬೇರೆಯವನಿಗೂ ಉಪದೇಶಿಸುತ್ತೇನೆ” ಎಂಬುದು ಭಗವಂತನ ಮಾತುಗಳು.
ಆದ್ದರಿಂದ ವೇದವನ್ನು ಯಾವುದೇ ಒಂದು ಗುಂಪಿಗೆ ಮಾತ್ರ ಎಂದು ತಿಳಿಯಬಾರದು, ಅಷ್ಟೇ ಅಲ್ಲ ವೇದವು ಎಲ್ಲಾ ಮಾನವರಿಗಾಗಿ, ಎಂಬುದನ್ನು ಮುಂದೆ ಹಲವಾರು ಮಂತ್ರಗಳಲ್ಲಿ ಕಾಣಬಹುದು. ಅಷ್ಟೇ ಅಲ್ಲ ಅಪೇಕ್ಷೆ ಪಡುವ ಯಾರಿಗೇ ಆಗಲೀ ವೇದಬಲ್ಲವನು ವೇದವನ್ನು ಹೇಳಿಕೊಡದಿದ್ದರೆ ವೇದಬಲ್ಲವನು ತನ್ನ ಸಂಪತ್ತಿನೊಡನೆ ಮಾರಿಕೊಂಡು ಹೋಗುತ್ತಾನೆಂಬುದನ್ನೂ ಸಹ ಮುಂದೆ ವಿಮರ್ಶೆ ಮಾಡಲಿರುವ ವೇದಮಂತ್ರಗಳಲ್ಲಿ ನೋಡ ಬಹುದಾಗಿದೆ.
ಕುಸುಮ-೩
ಕಲ್ಯಾಣ ಮಾರ್ಗದಲ್ಲಿ ನಡೆವವರ ಹಿಂದೆ ನಿಮ್ಮ ಜೀವನ ರಥ ತೆರಳಲಿ
ವೇದಮಂತ್ರಗಳ ಅರ್ಥ ತಿಳಿಯುತ್ತಾ ಹೋದಂತೆ ಮನಸ್ಸು ಮುದಗೊಳ್ಳುತ್ತದೆ,ಜೊತೆಯಲ್ಲೇ ಇಂತಾ ಜ್ಞಾನದ ಸರಿಯಾದ ಪ್ರಚಾರ ಪ್ರಸಾರ ಆಗಲಿಲ್ಲವಲ್ಲಾ! ಎಂಬ ಬಗ್ಗೆ ಮನಸ್ಸು ಚಿಂತೆಗೀಡಾಗುತ್ತದೆ.ಕಾರಣ ಏನಾದರೇನು, ಇನ್ನೂ ಅಳಿಯದೆ ಉಳಿದಿದೆಯಲ್ಲಾ!! ಅದೇ ಸಮಾಧಾನ. ವೇದ ಮಂತ್ರವನ್ನು ಕಲಿಸುತ್ತಿರುವ ವೇದ ವಿದ್ವಾಂಸರು ಮಂತ್ರಗಳ ಅರ್ಥವನ್ನೂ ತಿಳಿಸುತ್ತಾ ಅರ್ಥಾನುಸಂಧಾನ ಮಾಡಿಸುತ್ತಾ ವೇದಪಾಠವನ್ನು ಮಾಡಿದಾಗ ಕಲಿಯುತ್ತಿರುವ ವಿದ್ಯಾರ್ಥಿಯು ಸಮಾಜಾಭಿಮುಖವಾಗಿ ಬೆಳೆಯಲು ಅವಕಾಶವಾಗುತ್ತದೆ.
ಋಗ್ವೇದ ೫ನೇ ಮಂಡಲದ ೫೫ನೇ ಸೂಕ್ತದ ೮ನೇ ಮಂತ್ರವನ್ನು ವಿಮರ್ಶೆ ಮಾಡೋಣ.
ಯತ್ ಪೂರ್ವ್ಯಂ ಮರುತೋ ಯಚ್ಚ ನೂತನಂ ಯದುದ್ಯತೇ
ವಸವೋ ಯಚ್ಚ ಶಸ್ಯತೇ|
ವಿಶ್ವಸ್ಯ ತಸ್ಯ ಭವಥಾ ನವೇದಸ:
ಶುಭಂ ಯಾತಾಮನು ರಥಾ ಅವೃತ್ಸತಾ||
ಮರುತ:= ಸತ್ಯಕ್ಕಾಗಿ ಪ್ರಾಣ ನೀಡಲು ಸಿದ್ಧರಿರುವ ಧೀರರೇ
ವಸವ:= ಮಾನವರೇ
ನವೇದಸ:= ನೀವು ವಿದ್ಯಾರಹಿತರಾಗಿದ್ದೀರಿ
ಯತ್ ಪೂರ್ವ್ಯಂ = ಯಾವುದು ಪ್ರಾಚೀನವೋ ಚ= ಮತ್ತು
ಯತ್ ನೂತನಂ= ಯಾವುದು ನೂತನವೋ
ಯತ್ ಉದ್ಯತೇ= ಯಾವುದು ನಿಮ್ಮ ಅಂತ:ಕರಣದಿಂದ ಉದ್ಭವಿಸುತ್ತದೋ
ಚ = ಮತ್ತು
ಯತ್ ಶಸ್ಯತೇ = ಯಾವುದು ಶಾಸ್ತ್ರ ರೂಪದಲ್ಲಿ ಉಪದೇಶಿಸಲ್ಪಡುತ್ತದೋ
ತಸ್ಯ ವಿಶ್ವಸ್ಯ ಭವಥ = ಅಂತಹ ಎಲ್ಲದಕ್ಕೂ ಕಿವಿಗೊಡಿ
ಶುಭಂ ಯಾತಾಂ ಅನು = ಕಲ್ಯಾಣ ಮಾರ್ಗದಲ್ಲಿ ನಡೆವವರ ಹಿಂದೆ
ರಥಾ: ಅವೃತ್ಸತ = ನಿಮ್ಮ ಜೀವನ ರಥಗಳು ತೆರಳಲಿ
ಮನುಷ್ಯನು ಸುಖವಾಗಿ ನೆಮ್ಮದಿಯಿಂದ ಸುಂದರ ಬದುಕನ್ನು ಹೊಂದಬೇಕಾದರೆ ಯಾವ ಮಾರ್ಗದಲ್ಲಿ ಹೋಗಬೇಕೆಂಬುದನ್ನು ಈ ವೇದಮಂತ್ರವು ಅತ್ಯಂತ ಮನೋಜ್ಞವಾಗಿ ತಿಳಿಸಿಕೊಡುತ್ತದೆ.
ಮಂತ್ರದ ಭಾವಾರ್ಥ ನೋಡಿ.
ಹೇ ಮನುಜರೇ, ನೀವು ವಿದ್ಯಾರಹಿತರಾಗಿದ್ದೀರಿ[ ವಿದ್ಯೆ ಅವಿದ್ಯೆ ಯ ಅರ್ಥವನ್ನು ಮುಂದೆ ನೋಡೋಣ] ನಿಮ್ಮ ಬದುಕು ಹೇಗೆ ಸಾಗಿದರೆ ಸುಂದರವಾಗಬಲ್ಲದೆಂಬುದಕ್ಕೆ ಈ ಕೆಲವು ವಿಚಾರಗಳನ್ನು ಗಮನವಿಟ್ಟು ಕೇಳಿ.
ಯಾವುದು ಪ್ರಾಚೀನವೋ ಮತ್ತು ಯಾವುದು ನೂತನವೋ, ಯಾವುದು ನಿಮ್ಮ ಅಂತ:ಕರಣದಿಂದ ಉದ್ಭವಿಸುವುದೋ, ಹಾಗೂ ಯಾವುದು ಶಾಸ್ತ್ರರೂಪದಲ್ಲಿ ಉಪದೇಶಿಸಲ್ಪಡುತ್ತದೋ ಎಲ್ಲಕ್ಕೂ ಕಿವಿಗೊಡಿ, ಆದರೆ ಯಾವುದು ನಿಮ್ಮನ್ನು ಕಲ್ಯಾಣಮಾರ್ಗದಲ್ಲಿ ನಡೆಸುತ್ತದೋ ಅದರ ಹಿಂದೆ ನಿಮ್ಮ ಜೀವನ ರಥಗಳು ಸಾಗಲಿ.
ವೇದದ ಈ ಕರೆ ಯಾರಿಗೆ ಬೇಡ ? ಯಾವ ಕಾಲಕ್ಕೆ ಬೇಡ ? ಯಾವ ದೇಶಕ್ಕೆ ಬೇಡ? ಯಾವುದೇ ಮತ ಗ್ರಂಥಗಳು ಕೊಡುವ ಕರೆಗೂ ವೇದದ ಕರೆಗೂ ತುಲನೆ ಮಾಡುವುದು ಕಷ್ಟವೇನಲ್ಲಾ! ಅಲ್ಲವೇ? ಈ ಮಾರ್ಗದಲ್ಲಿ ಹೋದರೆ ಮಾತ್ರ ನಿನಗೆ ಮುಕ್ತಿ!! ಎಂದು ವೇದವು ಕರೆ ಕೊಡಲಿಲ್ಲವೆಂಬುದನ್ನು ವಿಚಾರವಂತರು ಗಮನಿಸಬೇಕು. ಅಲ್ಲವೇ?
ಕುಸುಮ-೪
ಋಗ್ವೇದದ ೭ನೇ ಮಂಡಲದ ೩೩ನೇ ಸೂಕ್ತ ೭ ನೇ ಮಂತ್ರದಬಗ್ಗೆ ತಿಳಿಯೋಣ
“ಆರ್ಯಾ ಜ್ಯೋತಿರಗ್ರಾ:”
ಎಷ್ಟು ಸರಳ! ಆದರೆ ಅದೆಷ್ಟು ಅರ್ಥವ್ಯಾಪ್ತಿಯನ್ನು ಹೊಂದಿರುವ ಮಂತ್ರ!!
“ಜ್ಯೋತಿಯನ್ನು ಮುಂದಿಟ್ಟುಕೊಂಡು ನಡೆಯುವವನು ಆರ್ಯ.” ಆರ್ಯರು ಈ ದೇಶದ ಮೂಲ ನಿವಾಸಿಗಳಲ್ಲ,ಅವರು ಬೇರೆ ದೇಶದಿಂದ ಭಾರತಕ್ಕೆ ಬಂದು ಇಲ್ಲಿನ ಮೂಲನಿವಾಸಿಗಳ ವಿರುದ್ಧ ಹೋರಾಡಿ ತಮ್ಮ ಅಸ್ಥಿತ್ವವನ್ನು ಭಾರತದಲ್ಲಿ ಉಳಿಸಿಕೊಂಡರು, ಹೀಗೆಲ್ಲಾ ಅಪಪ್ರಚಾರ ನಡೆದಿದೆ. ಆದರೆ ಯಾರು ಆರ್ಯರು? ಎಂಬ ಬಗ್ಗೆ ಈ ಒಂದು ಚಿಕ್ಕ ಮಂತ್ರ ಅದೆಷ್ಟು ಸೊಗಸಾಗಿ ಹೇಳಿದೆ!
ಜ್ಯೋತಿಯನ್ನು ಮುಂದಿಟ್ಟುಕೊಂಡು ನಡೆಯುವವನು ಆರ್ಯ. ಅಂದರೆ ದೀಪ ಹಿಡಿದುಕೊಂಡು ಮುಂದೆ ಹೆಜ್ಜೆ ಹಾಕುವುದೇ? ಹೌದು? ಎಂತಹ ದೀಪವೆಂಬುದನ್ನು ಮಾತ್ರ ತಿಳಿದಿರಬೇಕು. “ಜ್ಞಾನದ ದಿವ್ಯ ಜ್ಯೋತಿಯನ್ನು ಹಿಡಿಕೊಂಡು ಮುಂದೆ ಅಡಿ ಇಡುವವನು ಆರ್ಯ.” ಇಲ್ಲಿ ಪ್ರಥಮವಾಗಿ ಆರ್ಯರೆಂದರೆ ಎಲ್ಲಿಂದಲೋ ಬಂದವರಲ್ಲಾ, ಎಂಬುದನ್ನು ಮೊದಲು ಮನಗಂಡು ಯಾರನ್ನು ಆರ್ಯ ಎನ್ನುವರು? ಎಂಬುದನ್ನು ತಿಳಿದುಕೊಳ್ಳುವುದು ಒಳ್ಳೆಯದು. “ಜ್ಞಾನದ ದೀಪವನ್ನು ಹಿಡಿದುಕೊಂಡು ಮುಂದೆ ಅಡಿ ಇಡುವವನು ಆರ್ಯ” ಎನ್ನುತ್ತದೆ ಋಗ್ವೇದದ ಈ ಮಂತ್ರ. ಅಂದರೆ ಅವನು ಜ್ಞಾನವಂತನಾಗಿರಬೇಕು.ಇಂದು ಪ್ರಚಲಿತವಾಗಿರುವ ಜಾತಿಯಬಗ್ಗೆ ಉಲ್ಲೇಖ ಬರುವುದಿಲ್ಲ. ಇಲ್ಲಿ ಅವನ ಜ್ಞಾನ ಸಂಪತ್ತು ಮಾತ್ರ ಗಣನೆಗೆ ಬರುತ್ತದೆ. ಅವನ ಹುಟ್ಟು ಯಾರ ಹೊಟ್ಟೆಯಲ್ಲಾಗಿದ್ದರೇನು? ಅವನು ಜ್ಞಾನವಂತನಾಗಿರಬೇಕಷ್ಟೆ. ಅವನು ಬ್ರಾಹ್ಮಣವರ್ಣಕ್ಕೆ ಸೇರುತ್ತಾನೆಂದು ಕೂಡ ವೇದವು ಸಾರುತ್ತದೆ.[ಇಂದಿನ ಜಾತಿಯಲ್ಲ.ವರ್ಣದ ಬಗ್ಗೆ ಮುಂದೆ ನೋಡೋಣ]
ಹಾಗಾದರೆ ಆರ್ಯನೊಬ್ಬ ಎಷ್ಟು ಎಚ್ಚರದಿಂದ ಹೆಜ್ಜೆ ಇಡಬೇಕೆಂಬ ಬಗ್ಗೆ ನೋಡೋಣ. ಅವನು ಮುಂದೆ ಅಡಿ ಇಡುವಾಗ ತಪ್ಪು ಹೆಜ್ಜೆ ಇಡುವಂತಿಲ್ಲ. ಕಾರಣ ಅವನನ್ನು ಅನುಸರಿಸಲು ನೂರಾರು ಜನ ಕಾದಿದ್ದಾರೆ. ಅವನು ಸತ್ಯ-ಅಸತ್ಯ ಮಾರ್ಗದ ಭೇದವನ್ನು ಚೆನ್ನಾಗಿ ಅರಿತವನಾಗಿರಬೇಕು. ಯಾವುದರಲ್ಲಿಯೂ ಅಂಧಾನುಕರಣೆ ಮಾಡುವಂತಿಲ್ಲ. ಅವನು ಇಡುವ ಹೆಜ್ಜೆ ಸತ್ಯವೇ? ಹಿತವೇ? ಎಂದು ಪರಿಶೀಲಿಸಿ ಹೆಜ್ಜೆ ಇಡಬೇಕು. ಹೀಗೆ ವೇದದ ಒಂದೊಂದು ಚಿಕ್ಕ ಮಂತ್ರಗಳನ್ನು ಬಿಡಿಸಿ ನೋಡಿದಾಗ ಅದರ ವಿಶಾಲತೆಯ ಅರಿವಾಗುತ್ತದೆ.
ಕುಸುಮ-೫
ನಿನ್ನ ಸಮ ಇರುವವರನ್ನು ಮೀರಿಸಿ ಮುಂದೆ ನಡೆ
ಇನ್ನೊಂದು ಮಂತ್ರವನ್ನು ನೋಡೋಣ.
[ಅಥರ್ವ: ೨-೧೧-೫]
ಶುಕ್ರೋsಸಿ ಭ್ರಾಜೋsಸಿ ಸ್ವರಸಿ ಜ್ಯೋತಿರಸಿ|
ಆಪ್ನುಹಿ ಶ್ರೇಯಾಂಸಮತಿ ಸಮಂ ಕ್ರಾಮ||
ಅರ್ಥ:
ಶುಕ್ರ: ಅಸಿ= ಓ ಮಾನವ ನೀನು ನಿರ್ಮಲ ನಾಗಿದ್ದೀಯೇ
ಭ್ರಾಜ: ಅಸಿ = ಪ್ರಕಾಶವಾಗಿದ್ದೀಯೆ
ಶ್ರೇಯಾಂಸಂ ಆಪ್ನುಹಿ = ಶ್ರೇಯಸ್ಸನ್ನು ಸಾಧಿಸಿಕೋ
ಸಮಂ ಅತಿಕ್ರಾಮ = ಸಮನಾದವನನ್ನು ಮೀರಿಸಿ ಮುಂದೆ ನಡೆ
ಈ ಮಂತ್ರದ ಹಿರಿಮೆ ನೋಡಿ, ಹೇಗಿದೆ! ಮನುಷ್ಯನನ್ನು “ನೀನು ಪಾಪಿ” ಎನಲಿಲ್ಲ. ಬದಲಿಗೆ ನೀನು ನಿರ್ಮಲನಾಗಿದ್ದೀಯೆ, ನೀನು ಪ್ರಕಾಶಮಾನವಾಗಿದ್ದೀಯೇ, ಶ್ರೇಯಸ್ಸನ್ನು ನೀನೇ ಸ್ವತ: ಸಾಧಿಸಿ ಅಧ್ಯಾತ್ಮ ಮಾರ್ಗದಲ್ಲಿ ನಿನ್ನ ಸಮ ಇರುವವರನ್ನು ಮೀರಿಸಿ ಮುಂದೆ ನಡೆ. ವೇದದ ಈ ಮಂತ್ರವನ್ನು ಅರ್ಥಮಾಡಿಕೊಳ್ಳುವಾಗ ಒಮ್ಮೆ ನನ್ನ ಮೈ ಝುಮ್ ಎಂದಿತು. ಮಂತ್ರದ ಅರ್ಥವನ್ನು ಮನಸ್ಸಿಟ್ಟು ಓದಿ ,ನಿಮಗೂ ಹಾಗನ್ನಿಸದೆ ಇರದು. ಮುಂದಿನ ಮಂತ್ರದಲ್ಲಿ ಅಂಧಾನುಕರಣೆಗೆ ವೇದವು ಅದೆಷ್ಟು ವಿರೋಧಿಯಾಗಿದೆ ಎಂಬುದನ್ನು ತಿಳಿಯಬಹುದು.
ಮಾ ನೋ ದೀರ್ಘಾ ಅಭಿಶನ್ತಮಿಸ್ರಾ:
[ಋಗ್ವೇದ ೨-೨೭-೧೪]
“ದೀರ್ಘವಾದ ಅಂಧಕಾರಗಳು ನಮ್ಮನ್ನು ಆವರಿಸದಿರಲಿ”
ದೀರ್ಘವಾದ ಅಂಧಕಾರಗಳು ಯಾವುವು? ಉಧಾಹರಣೆಗೆ ನೋಡೋಣ?
ಹೊಸದಾಗಿ ವಾಹನವನ್ನೋ ಒಂದು ಯಂತ್ರವನ್ನೋ ಕೊಂಡು ಅದನ್ನು ಚಾಲನೆಗೊಳಿಸುವಾಗ ಪ್ರಥಮ ಪೂಜೆ ಮಾಡುತ್ತೀವಷ್ಟೆ.
[ಪೂಜೆಯ ವಿವರಣೆಯನ್ನೂ ಮುಂದೆ ನೋಡೋಣ] ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಆಚರಣೆ ಹೇಗಿದೆ? ಒಮ್ಮೆ ವಿಮರ್ಷೆ ಮಾಡೋಣ. ಯಂತ್ರವನ್ನು ಶುಚಿಗೊಳಿಸಿ ಅದಕ್ಕೆ ಒಂದಿಷ್ಟು ಅರಿಶಿನ-ಕುಂಕುಮ ಹಚ್ಚಿ ನಂತರ ಒಂದು ದೊಡ್ಡ ಬೂದಗುಂಬಳ ಕಾಯಿಗೆ ಒಂದು ಕುಳಿಮಾಡಿ ಅದರಲ್ಲಿ ಒಂದಿಷ್ಟು ಕುಂಕುಮ,ಒಂದಿಷ್ಟು ಚಿಲ್ಲರೆಕಾಸು ತುಂಬಿ ವಾಹದ ಸುತ್ತ ಮೂರು ಸುತ್ತು ಪ್ರದಕ್ಷಿಣೆ ಹಾಕಿ ನಂತರ ದೊಪ್ಪೆಂದು ನೆಲದ ಮೇಲೆ ಎತ್ತಿಹಾಕಿದಾಗ ಅದು ನಾಲ್ಕಾರು ಚೂರಾಗಿ ಅದರೊಳಗಿನಿಂದ ಕುಂಕುಮಬೆರೆತ ನೀರು ರಕ್ತದಂತೆ ಹರಿದಾಗ ಅದೇನೋ ಸಂತೋಷ!! ಪೂಜೆ ಮಾಡಿದ ತೃಪ್ತಿ!! ಚೂರಾದ ಕುಂಬಳ ಕಾಯಿಯನ್ನು ಪ್ರಾಣಿಗಳು ತಿಂದರೂ ಅವುಗಳ ಜೀವಕ್ಕೆ ಕಷ್ಟ. ಇನ್ನು ಮನುಷ್ಯ ತಿನ್ನುವ ಮಾತೇ ಇಲ್ಲ ಬಿಡಿ. ಬೇಯಿಸಿ ತಿನ್ನಬೇಕಾದ ಕುಂಬಳಕಾಯಿಯನ್ನು ಹೀಗೆ ಪ್ರಯೋಜನಕ್ಕೆ ಬಾರದಂತೆ ಒಡೆದು ಎಸೆಯುವುದು ಅಂಧಕಾರದ ಪರಮಾವಧಿಯಲ್ಲವೇ?
ಯಂತ್ರವನ್ನು ಚಾಲನೆಗೊಳಿಸುವಾಗ ನಾವು ಮಾಡಬೇಕಾದದ್ದೇನು? ಶುಚಿಗೊಳಿಸಬೇಕು, ಅಗತ್ಯ ಭಾಗಗಳಿಗೆ ಗ್ರೀಸ್ ಅಥವಾ ಎಣ್ಣೆ ಹಾಕಬೇಕು,ಅದು ಉತ್ತಮವಾಗಿ ಕಾರ್ಯನಿರ್ವಹಿಸಲು ಅಗತ್ಯವಾದ ನಿರ್ವಹಣೆ ಮಾಡಬೇಕು. ಬದಲಿಗೆ ಅದಾಗಲೇ ಶುಚಿಗೊಳಿಸಿದ್ದ ಯಂತ್ರದಮೇಲೆ ಪೂಜೆ ಮಾಡುವವರು ನೀರು ಚಿಮುಕಿಸಿದಾಗ ನೀರು ತಾಗಬಾರದ ವಿದ್ಯುತ್ ಭಾಗಗಳಿಗೆ ನೀರು ಬಿದ್ದಾಗ ಯಂತ್ರಕ್ಕೆ ತೊಂದರೆಯೂ ಆಗಬಹುದು. ಆ ಯಂತ್ರವಾದರೋ ಕುಂಕುಮ ಅರಿಶಿನದ ಪಟ್ಟೆಯನ್ನು ಕೇಳುತ್ತದೆಯೇ? ಕುಂಬಳಕಾಯಿ ಬಲಿ ಕೇಳುತ್ತದೆಯೇ? ಇದನ್ನೇ ಅಂಧಕಾರ ಎನ್ನಲಡ್ಡಿಯಿಲ್ಲ. ನಾವು ಮಾಡುವ ಪೂಜಾವಿಧಿಗಳಿಗೂ ಸರಿಯಾದ ಅರ್ಥ ಇರಬೇಕಲ್ಲವೇ? ಇದು ಒಂದು ಉಧಾಹರಣೆಯಷ್ಟೆ. ಒಟ್ಟಿನಲ್ಲಿ ಅವೈಜ್ಞಾನಿಕ ಯಾವುದೇ ಆಚರಣೆಯನ್ನು ವೇದವು ವಿರೋಧಿಸುತ್ತದೆ.
ಕುಸುಮ-೬
ಅಂಧಕಾರದಿಂದ ಸರಿದಮೇಲೆ ಮುಂದೇನು? ಈ ಪಶ್ನೆಗೆ ವೇದವು ಹೇಳುತ್ತದೆ. . . .
“ಜ್ಯೋತಿರ್ವೃಣೀತ ತಮಸೋ ವಿಜಾನನ್”
[ಋಗ್ವೇದ ೩-೩೯-೭]
“ಅಂಧಕಾರದಿಂದ ದೂರಸರಿದು ಜ್ಯೊತಿಯನ್ನು ತುಂಬಿಕೊಳ್ಳಬೇಕು” ಎಂದು ವೇದವು ಕರೆಕೊಡುತ್ತದೆ. ಕತ್ತಲೆ ಹೋದಮೇಲೆ ಬೆಳಕು ತಾನೆ ಬರಬೇಕು. ನಿಮ್ಮ ಜೀವನವನ್ನು ಉನ್ನತಿಗೆತ್ತಬಲ್ಲ ದಿವ್ಯ ಜ್ಯೋತಿಯನ್ನು ಅಂದರೆ ಜ್ಞಾನವನ್ನು ತುಂಬಿಕೊಳ್ಳಬೇಕೆಂದು ವೇದವು ಸ್ಪಷ್ಟ ಪಡಿಸುತ್ತದೆ. ಅಂದರೆ ಒಂದು ಆಚರಣೆಯನ್ನು ಮಾಡುವಾಗ ಅದು ನಮ್ಮನ್ನು ಸತ್ಯಪಥದಲ್ಲಿ ಕೊಂಡೊಯ್ಯುತ್ತದೋ, ಸಮಾಜದಹಿತವು ಅದರಲ್ಲಿದೆಯೇ? ವೈಜ್ಞಾನಿಕವಾಗಿ ಅದರಿಂದ ಜೀವನಕ್ಕೆ ಲಾಭವಿದೆಯೋ ಅಥವಾ ಅಂಧಕಾರದಲ್ಲಿ ನಮ್ಮನ್ನು ಮುಳುಗಿಸುತ್ತದೋ ,ಹೀಗೆ ಆಚರಣೆಯ ಎಲ್ಲಾ ಮಗ್ಗಲುಗಳನ್ನೂ ವಿವೇಚಿಸಿ ಆಚರಿಸುವುದು ಸೂಕ್ತವೆಂದು ವೇದವು ಸಾರುತ್ತದೆ. ಮನುಷ್ಯನ ಸುಖಕರವಾದ, ನೆಮ್ಮದಿಯ ಜೀವನಕ್ಕೆ ಅಗತ್ಯವಾದ ವೇದದಲ್ಲಿನ ಸೂತ್ರಗಳ ಬಗೆಗೆ ಮುಂದಿನ ಹಲವು ಮಂತ್ರಗಳಲ್ಲಿ ಚಿಂತನೆ ನಡೆಸೋಣ.ಅವುಗಳಲ್ಲಿ ಶ್ರದ್ಧೆ ಬಗ್ಗೆ ಇರುವ ಒಂದು ವೇದ ಮಂತ್ರವನ್ನು ನೋಡೋಣ.
“ ಶ್ರದ್ಧೆ”
ಅಂಧಪರಂಪರೆಗೆ ವೇದವು ವಿರೋಧಿಯಾಗಿದ್ದು ಅರಿತು ಮಾಡುವ ಆಚರಣೆಗಳ ಬಗ್ಗೆ “ ಶ್ರದ್ಧೆ” ಹೇಗಿರಬೇಕೆಂಬುದನ್ನು ಈ ಕೆಳಗಿನ ವೇದಮಂತ್ರವು ಸಾರುತ್ತದೆ?.
ಋಗ್ವೇದ: ೧೦-೧೫೧-೫
ಶ್ರದ್ಧಾಂ ಪ್ರಾತರ್ಹವಾಮಹೇ ಶ್ರದ್ಧಾಂ ಮಧ್ಯ ದಿನಂ ಪರಿ|
ಶ್ರದ್ಧಾಂ ಸೂರ್ಯಸ್ಯ ನಿಮೃಚಿ ಶ್ರದ್ಧೇ ಶ್ರದ್ಧಾಪಯೇಹ ನ: ||
ಪ್ರಾತ:= ಬೆಳಗಿನಹೊತ್ತು
ಶ್ರದ್ಧಾಂ ಹವಾಮಹೇ= ಶ್ರದ್ಧೆಯನ್ನು ಆಹ್ವಾನಿಸುತ್ತೇವೆ
ಮಧ್ಯಂದಿನಂ ಪರಿ= ನಡುಹಗಲಿನಲ್ಲಿಯೂ
ಶ್ರದ್ಧಾಮ್ = ಶ್ರದ್ಧೆಯನ್ನು ಆಹ್ವಾನಿಸುತ್ತೇವೆ
ಸೂರ್ಯಸ್ಯ ನಿಮೃಚಿ= ಸೂರ್ಯಾಸ್ತ ಕಾಲದಲ್ಲಿಯೂ
ಶ್ರದ್ಧಾಮ್ = ಶ್ರದ್ಧೆಯನ್ನೇ ಆವಾಹನೆ ಮಾಡುತ್ತೇವೆ
ಶ್ರದ್ಧೇ= ಓ ಶ್ರದ್ಧೇ!
ಇಹ= ಈ ಜಗತ್ತಿನಲ್ಲಿ
ನ: ಶ್ರದ್ಧಾಪಯ=ನಮ್ಮನ್ನು ಶ್ರದ್ಧಾನ್ವಿತರನ್ನಾಗಿ ಮಾಡು
ಅಂದರೆ ಬೆಳಿಗ್ಗೆ ಏಳುವಾಗಲಿಂದ ರಾತ್ರಿ ಮಲಗುವ ತನಕ ಶ್ರದ್ಧೆಯನ್ನೇ ಆವಾಹನೆ ಮಾಡುತ್ತೇನೆಂದು ಈ ಮಂತ್ರವು ಹೇಳುತ್ತದೆ. ಅಂದರೆ ಶ್ರದ್ಧೆ ಎಂದರೇನು? ನಮ್ಮ ನಂಬಿಕೆಯು ಯಾವಾಗ ಶ್ರದ್ಧೆ ಎನಿಸಿಕೊಳ್ಳುತ್ತದೆ? “ ಶ್ರದ್ದಾ” ಎಂಬ ಪದವನ್ನು ಬಿಡಿಸಿಕೊಂಡಾಗ “ಶ್ರದ್ಧೆ” ಪದದ ಸರಿಯಾದ ಅರ್ಥ ಗೊತ್ತಾಗುತ್ತದೆ.
ಸಾಮಾನ್ಯವಾಗಿ ಆಡುಮಾತಿನಲ್ಲಿ ಹೇಳುವುದುಂಟು” ನಮ್ಮ ಮಕ್ಕಳಿಗೆ ನಮ್ಮ ಧರ್ಮದಲ್ಲಿ ಶ್ರದ್ಧೆ ಇಲ್ಲ, ನಮ್ಮ ಆಚಾರ-ವಿಚಾರಗಳಲ್ಲಿ ಶ್ರದ್ಧೆ ಇಲ್ಲ,ಇತ್ಯಾದಿ,ಇತ್ಯಾದಿ. ಈ ಸಂದರ್ಭದಲ್ಲಿ ಎಲ್ಲರೂ ಸಾಮಾನ್ಯವಾಗಿ ಭಾವಿಸುವುದೇನು? ಈಗೇನು ಆಚಾರ-ವಿಚಾರಗಳಿವೆ, ಅವುಗಳನ್ನು ಅನುಸರಿಸದಿದ್ದಾಗ?.ಇವನಿಗೆ ನಮ್ಮ ಧರ್ಮದಲ್ಲೇ ಶ್ರದ್ಧೆ ಇಲ್ಲಾ!! ಎಂದು ಅವನ ಬಗ್ಗೆ ಪೂರ್ವಾಗ್ರಹದ ತೀರ್ಪು ಹೊರಬೀಳುತ್ತದೆ!! ಆದರೆ ನಿಜವಾಗಿ ಶ್ರದ್ಧೆ ಯಾವಾಗ ಬರಬೇಕು? ಶ್ರದ್ಧೆ ಪದವೇ ಹೇಳುತ್ತದೆ?” ಸತ್ಯದ ಧಾರಣೆ” ಅಂದರೆ ನಮ್ಮ ಆಚಾರ ವಿಚಾರಗಳನ್ನು ವಿಮರ್ಶಿಸಿ” ಇದು ಸತ್ಯವೇ? ಹಿತವೇ? ಇದರಿಂದ ಸತ್ಯದ ಅಪಚಾರವಾಗುವುದಿಲ್ಲವೇ? ಎಂಬುದನ್ನು ಮನವರಿಕೆ ಮಾಡಿಕೊಂಡು ಧರಿಸುವುದಕ್ಕೆ “ ಶ್ರದ್ಧೆ” ಎನ್ನಲಡ್ಡಿಯಿಲ್ಲ. ಆದರೆ ಯಾವುದೇ ಆಚರಣೆಯ ಸತ್ಯಾಸತ್ಯತೆಯನ್ನರಿಯದೆ ಅಂಧಾನುಕರಣೆಮಾಡುವುದನ್ನು” ಶ್ರದ್ಧೆ” ಎನ್ನಲಾಗುವುದಿಲ್ಲ. ಅದು ಕೇವಲ ನಂಬಿಕೆ. ನಮ್ಮ ನಂಬಿಕೆಗಳನ್ನು ಇತರರು ಅನುಸರಿಸದಿದ್ದರೆ ಅವರಿಗೆ ಈ ಆಚರಣೆಗಳಲ್ಲಿ” ಶ್ರದ್ಧೆ” ಇಲ್ಲಾ ಎನ್ನುವಂತಿಲ್ಲ. ಶ್ರದ್ಧೆಯೇ ಬೇರೆ. ನಂಬಿಕೆಯೇ ಬೇರೆ. ಈ ವೇದ ಮಂತ್ರವಾದರೋ ಬೆಳಿಗ್ಗೆ ಹಾಸಿಗೆಯಿಂದ ಏಳುವಾಗಿನಿಂದ ಮಲಗುವವರೆಗೂ ಶ್ರದ್ಧೆಯನ್ನೇ ಆವಾಹನೆ ಮಾಡುತ್ತೇನೆಂದು ಸಾರುತ್ತದೆ. ಶ್ರದ್ಧೆಯ ಅರ್ಥವ್ಯಾಪ್ತಿ ಎಷ್ಟಿದೆ! ನೋಡಿ!
ಕುಸುಮ-೭
“ಬುದ್ಧಿಯ ಬಗ್ಗೆ ವೇದವು ಏನು ಹೇಳುತ್ತದೆ”
ಹಿಂದಿನ ಮಂತ್ರದಲ್ಲಿ ಶ್ರದ್ಧೆಯ ಬಗ್ಗೆ ಚಿಂತನೆ ನಡೆಸಿದ್ದೇವೆ. ಈಗ ಬುದ್ಧಿಯ ಬಗ್ಗೆ ವೇದವು ಏನು ಹೇಳುತ್ತದೆ ನೋಡೋಣ.
ಅಥರ್ವ: ೬-೧೦೮-೦೫
ಮೇಧಾಂ ಸಾಯಂ ಮೇಧಾಂ ಪ್ರಾಥರ್ಮೇಧಾಂ ಮಧ್ಯಂ ದಿನಂ ಪರಿ|
ಮೇಧಾಂ ಸೂರ್ಯಸ್ಯ ರಶ್ಮಿಭಿರ್ವಚಸಾ ವೇಶಯಾಮಹೇ||
ಅರ್ಥ:
ಸಾಯಮ್ = ಸಂಜೆ
ಮೇಧಾಂ = ಬುದ್ಧಿಯನ್ನು
ಆವೇಶಯಾಮಹೇ = ಜೀವನಕ್ಕೆ ಇಳಿಸಿಕೊಳ್ಳುತ್ತೇವೆ
ಪ್ರಾಥ: = ಬೆಳಿಗ್ಗೆ
ಮೇಧಾಂ = ಬುದ್ಧಿಯನ್ನು [ಜೀವನಕ್ಕೆ ಇಳಿಸಿಕೊಳ್ಳುತ್ತೇವೆ]
ಮಧ್ಯಂದಿನಂ ಪರಿ = ಮಧ್ಯಾಹ್ನದಲ್ಲಿಯೂ
ಮೇಧಾಂ = ಬುದ್ಧಿಯನ್ನು[ಜೀವನಕ್ಕೆ ಇಳಿಸಿಕೊಳ್ಳುತ್ತೇವೆ]
ಸೂರ್ಯಸ್ಯ ರಶ್ಮಿಭಿ: = ಸೂರ್ಯ ಕಿರಣಗಳೊಂದಿಗೆ
ವಚಸಾ = [ವಿದ್ವಜ್ಜನರ ಉಪದೇಶ ]ವಚನಗಳಿಂದ
ಮೇಧಾಂ ಆವೇಶಯಾಮಹೇ = ಬುದ್ಧಿಯನ್ನು ಬಾಳಿಗೆ ಬೆಸೆದುಕೊಳ್ಳುತ್ತೇನೆ
ಈ ಮಂತ್ರವು ನಮ್ಮನ್ನು ಹೇಗೆ ಎಚ್ಚರಿಸುತ್ತದೆ! ನೋಡಿ, ನಾವು ಸದಾಕಾಲ ಬುದ್ಧಿಯನ್ನು ಜೀವನಕ್ಕೆ ಇಳಿಸಿಕೊಳ್ಳುತ್ತೇನೆಂದು ಹೇಳುವಾಗ ಜೊತೆಯಲ್ಲಿಯೇ ವಿದ್ವಜ್ಜನರ ಉಪದೇಶಗಳಿಂದ ಸೂರ್ಯಕಿರಣಗಳೊಂದಿಗೆ ಬುದ್ಧಿಯನ್ನು ಬಾಳಿಗೆ ಬೆಸೆದುಕೊಳ್ಳುತ್ತೇನೆಂದು ಈ ಮಂತ್ರವು ಹೇಳಿದೆ. ಅಂದರೆ ನಮ್ಮಷ್ಟ್ಟಕ್ಕೆ ನಮಗೆ ತೋಚಿದಂತೆ ಬುದ್ಧಿಯನ್ನು ಹರಿಬಿಡುವಂತಿಲ್ಲ. ವಿದ್ವಜ್ಜನರ ಉಪದೇಶಗಳಿಂದ ನಿನ್ನ ಬುದ್ಧಿಯನ್ನು ಹದಗೊಳಿಸಿಕೋ” ಎಂದು ಕೂಡ ವೇದವು ಸಾರುತ್ತದೆ. ಇದರೊಡನೆಯೇ ಇನ್ನೊಂದು ಮಂತ್ರವು ಹೇಳುತ್ತದೆ?
ಅಥರ್ವ: ೧೯-೬೪-೧]
ಸ ಮೇ ಶ್ರದ್ಧಾಂ ಚ ಮೇಧಾಂ ಚ ಜಾತವೇದಾ: ಪ್ರ ಯಚ್ಛತು||
ಅರ್ಥ:
ಸ ಜಾತವೇದಾ: = ಸರ್ವಜ್ಞನಾದ ಭಗವಂತನು ಮೇ = ನನಗೆ
ಶ್ರದ್ಧಾಂಚ ಮೇಧಾಂಚ ಪ್ರಯಚ್ಛತು = ಶ್ರದ್ಧೆಯನ್ನೂ ಬುದ್ಧಿಯನ್ನೂ ಕರುಣಿಸಲಿ.
ಭಗವಂತನನ್ನು ಪ್ರಾರ್ಥಿಸುವಾಗ ನನಗೆ ಇದರಲ್ಲಿ ಶ್ರದ್ಧೆ ಕೊಡು ಎಂದಷ್ಟೇ ಕೇಳಲಿಲ್ಲ, ಜೊತೆಗೆ ನನಗೆ ವಿವೇಚಿಸುವ ಬುದ್ಧಿಯನ್ನೂ ಕೊಡು ಎಂದು ಕೇಳ ಬೇಕೆಂದು ವೇದದ ಕರೆ. ಯಾವುದನ್ನಾಗಲೀ ಕುರುಡು ಕುರುಡಾಗಿ ಅನುಸರಿಸಬೇಡವೆಂಬುದೇ ವೇದದ ಆಶಯ. ಅದಕ್ಕಾಗಿಯೇ ಶ್ರದ್ಧೆಯೊಡನೆ ಬುದ್ಧಿಯೂ ಇರಬೇಕೆಂಬುದೇ ವೇದದ ಕರೆ.
“ಸತ್ಯ-ಅಸತ್ಯದ ಬಗ್ಗೆ ವೇದವು ಏನು ಹೇಳುತ್ತದೆ”
ಮೇಲಿನ ಮಂತ್ರದಲ್ಲಿ “ಶ್ರದ್ಧೆಯ ಜೊತೆಗೆ ಬುದ್ಧಿಯನ್ನೂ ಕೊಡೆಂದು” ಭಗವಂತನಲ್ಲಿ ಪ್ರಾರ್ಥಿಸಿದ್ದನ್ನು ಗಮನಿಸಿದ್ದೇವೆ. ಸತ್ಯಾ ಸತ್ಯತೆಯ ಬಗ್ಗೆ ವೇದವು ಏನು ಹೇಳುತ್ತದೆಂಬುದನ್ನು ಮುಂದಿನ ಮಂತ್ರದಲ್ಲಿ ನೋಡೋಣ.
[ಯಜುರ್ವೇದ: ೧೯-೭೭]
ದೃಷ್ಟ್ವಾ ರೂಪೇ ವ್ಯಾಕರೋತ್ ಸತ್ಯಾನೃತೇ ಪ್ರಜಾಪತಿ: |
ಅಶ್ರದ್ಧಾಂ ಅನೃತೇs ದಧಾಚ್ಛದ್ಧಾಂ ಸತ್ಯೇ ಪ್ರಜಾಪತಿ: ||
ಅರ್ಥ:
ಪ್ರಜಾಪತಿ: = ಭಗವಂತನು
ರೂಪೇ ದೃಷ್ಟ್ವಾ = ಸತ್ಯಾಸತ್ಯತೆಗಳ ರೂಪಗಳನ್ನು ನೋಡಿ
ಸತ್ಯಾನೃತೇ ವ್ಯಾಕರೋತ್ = ಸತ್ಯವನ್ನೂ ಅಸತ್ಯವನ್ನೂ ಬೇರ್ಪಡಿಸಿದನು
ಅನೃತೇ = ಅಸತ್ಯದಲ್ಲಿ
ಅಶ್ರದ್ಧಾಂ ಅದಧಾತ್ = ಅಶ್ರದ್ಧೆಯನ್ನು ನೆಲೆಗೊಳಿಸಿದನು
ಸತ್ಯೇ = ಸತ್ಯದಲ್ಲಿ
ಶ್ರದ್ಧಾಂ ಅದಧಾತ್ = ಶ್ರದ್ಧೆಯನ್ನು ನೆಲೆಗೊಳಿಸಿದನು
ಭಾವಾರ್ಥ:
ಭಗವಂತನು ಸತ್ಯಾ ಅಸತ್ಯಗಳೆರಡನ್ನೂ ನೋಡಿ ಸತ್ಯ ಮತ್ತು ಅಸತ್ಯವನ್ನು ಬೇರ್ಪಡಿಸಿದನು. ಅಸತ್ಯದಲ್ಲಿ ಅಶ್ರದ್ಧೆಯನ್ನೂ ಸತ್ಯದಲ್ಲಿ ಶ್ರದ್ಧೆಯನ್ನೂ ನೆಲಗೊಳಿಸಿದನು.
ಬಹಳ ಸುಲಭವಾಗಿ ಅರ್ಥವಾಗುವಂತಹ ವೇದ ಮಂತ್ರ ಇದು. ಮಂತ್ರವಾದರೋ ಏನನ್ನು ಒತ್ತಿ ಹೇಳುತ್ತದೆ? ಅಸತ್ಯವನ್ನು ನಂಬಬೇಡ. ಸತ್ಯದಲ್ಲಿ ಶ್ರದ್ಧೆ ಇಡು. ಶ್ರದ್ಧೆ ಎಂದರೆ “ಸತ್ಯದ ಧಾರಣೆ” ಎಂಬ ಬಗ್ಗೆ ಚರ್ಚಿಸಿದ್ದೇವೆ. ಈ ಮಂತ್ರದಲ್ಲೂ ಅದನ್ನೇ ಹೇಳುತ್ತದೆ. ಭಗವಂತನೇ ಸತ್ಯಾ-ಅಸತ್ಯಗಳನ್ನು ಬೇರ್ಪಡಿಸಿ ಸತ್ಯದಲ್ಲಿ ಮಾತ್ರವೇ ಶ್ರದ್ಧೆಯನ್ನು ನೆಲೆಗೊಳಿಸುತ್ತಾನೆ, ಎಂದು ನಿಖರವಾಗಿ ಹೇಳಿದೆ. ಅಂದರೆ ಯಾವುದು ಅಸತ್ಯವೆಂದು ಮನಗಾಣುತ್ತದೋ ಅದನ್ನು ಯಾರೇ ಹೇಳಲಿ, ಅದನ್ನು ಅನುಸರಿಸಿದರೆ ಅದು ವೇದ ವಿರೋಧಿ ನಡೆಯಾಗುತ್ತದೆ. ಆದ್ದರಿಂದ ನಾವು ಧರ್ಮದ ಹೆಸರಲ್ಲಿ ಮಾಡುವ ಆಚರಣೆಗಳನ್ನು ಸರಿಯಾಗಿ ಅರ್ಥಮಾಡಿಕೊಂಡು ಅದು, ಅಸತ್ಯ, ಅವೈಜ್ಞಾನಿಕ, ಸಮಾಜ ವಿರೋಧಿ, ಎನಿಸಿದರೆ ಅಚರಿಸಬಾರದು, ಅದು ಸತ್ಯಪಥವಾಗಿದ್ದು ಸಮಾಜಕ್ಕೆ ಪೂರಕವಾಗಿದ್ದರೆ ಮಾತ್ರ ಅದನ್ನು ಅನುಸರಿಸಬೇಕು. ಇದು ವೇದದ ಕರೆ.