Pages

Wednesday, December 3, 2014

ನಮ್ಮೊಳಗಿರುವ ದುಷ್ಟಗುಣಗಳು

ಋಗ್ವೇದದ ಈ ಒಂದು ಮಂತ್ರದ ಬಗ್ಗೆ ವಿಚಾರಮಾಡೋಣ.

ಉಲೂಕಯಾತುಂ ಶುಶುಲೂಕಯಾತುಂ ಜಹಿ ಶ್ವಯಾತುಮುತ ಕೋಕಯಾತುಮ್|
ಸುಪರ್ಣಯಾತುಮುತ ಗೃಧ್ರಯಾತುಂ ದೃಷದೇವ ಪ್ರಮೃಣ ರಕ್ಷ ಇಂದ್ರ
[ಋಗ್ವೇದ ಮಂಡಲ ೭ ಸೂಕ್ತ ೧೦೪ ಮಂತ್ರ ೨೨]

ಉಲೂಕಯಾತುಂ=ಗೂಬೆಯ ನಡೆಯೆಂಬ
ರಕ್ಷ: = ಅವಗುಣ [ಮೋಹ]
ಶುಶುಲೂಕಯಾತುಂ= ತೋಳನನಡೆ
ರಕ್ಷ: = ಅವಗುಣ [ಕ್ರೋಧ]
ಶ್ವಯಾತುಮ್=ನಾಯಿಯ ನಡೆ
ರಕ್ಷ: = ಅವಗುಣ [ಲೋಭ]
ಉತ= ಮತ್ತು
ಕೋಕಯಾತುಮ್= ಜಕ್ಕವಕ್ಕಿಯನಡೆ
ರಕ್ಷ: = ಅವಗುಣ [ಕಾಮ]
ಜಹಿ = ಹೊಡೆದುಹಾಕು
ಸುಪರ್ಣಯಾತುಮ್= ಗರುಡಪಕ್ಷಿಯ ನಡೆ
ರಕ್ಷ: = ಅವಗುಣ [ಮದ]
ಉತ= ಮತ್ತು
ಗೃಧ್ರಯಾತುಂ= ಹದ್ದಿನ ನಡೆ
ರಕ್ಷ: = ಅವಗುಣ [ಮಾತ್ಸರ್ಯ]
ದೃಷದಾ ಇವ = ಕಲ್ಲಿನಂತಹ ಕಠೋರವಾದ ಸಾಧನದಿಂದ
ಪ್ರಮೃಣ = ಚೆನ್ನಾಗಿ ಹೊಸಕಿ ಹಾಕು

ಈ ವೇದ ಮಂತ್ರದಲ್ಲಿ ನಮ್ಮೊಳಗಿರುವ ದುಷ್ಟಗುಣಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿದೆ. ಈ ದುಷ್ಟಗುಣಗಳನ್ನು ಒಂದೊಂದು ಪ್ರಾಣಿಯ ಅವಗುಣಕ್ಕೆ ಹೋಲಿಸಿ ಮನದಟ್ಟು ಮಾಡಲಾಗಿದೆ. ನಮ್ಮೊಳಗಡಗಿರುವ ಈ ದುಷ್ಟಪ್ರಾಣಿಗಳು ಯಾವುವೆಂದು ನೋಡೋಣ.
ಉಲೂಕಯಾತುಂ ಅಂದರೆಗೂಬೆಯ ನಡೆ. ನಮ್ಮೆಲ್ಲರೊಳಗೆ  ಗೂಬೆಗಳು ಸೇರಿಬಿಟ್ಟಿವೆ.ಗೂಬೆಗಳಿಗೆ ಬೆಳಕು ಕಂಡರೆ ಆಗುವುದಿಲ್ಲ. ಬೆಳಕು ಕಂಡೊಡನೆಯೇ ಓಡಿಹೋಗಿಬಿಡುತ್ತವೆ. ನಮ್ಮೊಳಗಿರುವ ಗೂಬೆಯಂತಹ ಗುಣಕ್ಕೂ ಹಾಗೆಯೇ. ಜ್ಞಾನವೆಂಬ ಬೆಳಕನ್ನು ಕಂಡರೆ ಆಗುವುದಿಲ್ಲ. ಜ್ಞಾನವೆಂಬ ಬೆಳಕನ್ನು ಕಂಡಕೂಡಲೇ ಓಡಿಹೋಗುವ ಸ್ವಭಾವವಿದೆಯಲ್ಲಾ ಇದು ಗೂಬೆಯ ಸ್ವಭಾವ. ಇದು ನಮ್ಮೊಳಗಿದೆ.ಈ ಗುಣವಿದ್ದಾಗ ಕತ್ತಲೆಯಲ್ಲಿ ಏನು ನಡೆದರೂ ನಮಗೆ ಗೊತ್ತಾಗುವುದೇ ಇಲ್ಲ. ಅಜ್ಞಾನವೆಂಬ ಅಂಧಕಾರವಿದ್ದಾಗ ನಮಗೆ ಸತ್ಯ ಯಾವುದು ಸುಳ್ಳು ಯಾವುದು ಗೊತ್ತಾಗುವುದೇ ಇಲ್ಲ. ಇದಕ್ಕೆ ಮೋಹವೆಂದೂ ಹೇಳಬಹುದು. ಮೋಹಕ್ಕೆ ಬಲಿಯಾದಾಗ ನಮಗೆ ಎಲ್ಲವೂ ಸರಿಯಾಗಿಯೇ ಕಾಣುತ್ತದೆ. ಈ ಮೋಹದ ಪರಿಣಾಮದಿಂದ  ನಮ್ಮ ಮನೆಯಲ್ಲಿ    ಏನು ತಪ್ಪುಗಳು ನಡೆದರೂ ನಮಗೆ ಗೊತ್ತಾಗುವುದೇ ಇಲ್ಲ. ಮೋಹದ ಪಾಶಕ್ಕೆ ನಾವು ಒಳಗಾಗಿರುತ್ತೇವೆ.
ನಮ್ಮೊಳಗಿರುವ ಎರಡನೆಯ ಪ್ರಾಣಿಸಹಜಗುಣವೆಂದರೆ ತೋಳನ ಗುಣ. ಶುಶುಲೂಕಯಾತುಂ ಅಂದರೆ ತೋಳನನಡೆ. ತೋಳನ ನಡೆಯು ಸಾಮಾನ್ಯವಾಗಿ ಯಾವಾಗಲೂ ಗುರ್ ಗುಟ್ಟುವ ಸ್ವಭಾವ. ಅದು ಕ್ರೋಧದ ಸಂಕೇತ.ಬೇಗ ತಾಳ್ಮೆಯನ್ನು ಕಳೆದುಕೊಳ್ಳುವ ಸ್ವಭಾವ. ಇಂತಹ ತೋಳನ ಸ್ವಭಾವ ನಮ್ಮೊಳಗಿದೆ. ಮುಖದ ಮೇಲೆ ತೋರ್ಗೊಡದಿದ್ದರೂ ಒಳಗೆ ತಾಳ್ಮೆಇಲ್ಲವಾದರೆ ತೋಳನ ಸ್ವಭಾದಲ್ಲಿ ಸಿಲುಕಿದ್ದೇವೆಂದೇ ಅರ್ಥ. ಬಾಯ್ಮಾತಿನಲ್ಲಿ ಒಳ್ಳೆಯ ಮಾತನಾಡುತ್ತಿದ್ದರೂ ಒಳಗೆ ಕ್ರೋಧ ತುಂಬಿರುತ್ತದೆ.

ಮುಂದಿನ ಗುಣ ನಾಯಿಯ ಗುಣ. ಶ್ವಯಾತುಮ್ ಅಂದರೆ ನಾಯಿಯ ನಡೆ. ಇದು ಮಾತ್ಸರ್ಯದ ಸಂಕೇತ. ನಾಯಿಯ ಮುಂದೆ ಯಾವುದೋ ಆಹಾರವಿದೆ ಎಂದಿಟ್ಟುಕೊಳ್ಳಿ. ಅದನ್ನು ತಾನೂ ತಿನ್ನುವುದಿಲ್ಲ, ಬೇರೆ ಯಾವ ಪ್ರಾಣಿಯೂ ಮುಟ್ಟಲೂ ಬಿಡುವುದಿಲ್ಲ. ಇಂತಹ ಸ್ವಭಾವಕ್ಕೆ ಮಾತ್ಸರ್ಯ ಅಥವಾ ಹೊಟ್ಟೆ ಉರಿ ಎನ್ನಬಹುದು. ಇಂತಹ ಸ್ವಭಾವ ನಮ್ಮೊಳಗಿಲ್ಲವೇ? [ಇದು ನಾಯಿಯ ಒಂದು ಸ್ವಭಾವ ಅಷ್ಟೆ.   ಆದರೆ ನಾಯಿಗೆ ಬೇರೆ ಉತ್ತಮ ಗುಣಗಳಿಲ್ಲವೆಂದು ಇದರ ಅರ್ಥವಲ್ಲ] ಆದರೆ ನಾಯಿಯ ಈ ದುಷ್ಟಸ್ವಾಭಾವವಿದೆಯಲ್ಲಾ, ಅದು ನಾಯಿಗಿಂತಲೂ ನಮ್ಮೊಳಗೇ ಜಾಸ್ತಿ ಇದೆ. ನಮ್ಮೆದುರು ಬೇರೆಯವರು ಚೆನ್ನಾಗಿ ಬದುಕಬಾರದು. ಅವರ ಬಗ್ಗೆ ನಮಗೆ ಮಾತ್ಸರ್ಯ. ನಮಗೆ ಅವರಂತೆ ಬದುಕಲು  ಸಾಧ್ಯವಾಗುವುದಿಲ್ಲ. ಬೇರೆಯವರು ಬದುಕುವುದನ್ನು ಸಹಿಸುವುದಿಲ್ಲ. ಈ ಕೆಟ್ಟ  ಸ್ವಭಾವ ನಮ್ಮಲ್ಲಿ ತುಂಬಿ ತುಳುಕುತ್ತಿಲ್ಲವೇ?
ಮುಂದಿನ ಸ್ವಭಾವ ಜಕ್ಕವಕ್ಕಿಯ ಸ್ವಭಾವ. ಕೋಕಯಾತುಮ್ ಅಂದರೆ  ಜಕ್ಕವಕ್ಕಿಯನಡೆ. ಈ ಪಕ್ಷಿ ಇಂದಿನ ಜನರಿಗೆ ಪರಿಚಯವಿಲ್ಲದಿರಬಹುದು.ನೈಟಿಂಗ್ ಗೇಲ್[ಬುಲ್‌ಬುಲ್‌ಹಕ್ಕಿ] ಪಕ್ಷಿಗೆ ಹೋಲಿಸಬಹುದು. ರಾತ್ರಿ ವೇಳೆಯಲ್ಲಿ ಹಾಡುವ ಹಕ್ಕಿ. ಇದು ಕಾಮದ ಸ್ವಭಾವ. ಸದಾ ಕಾಮದಲ್ಲಿ ತೊಡಗಿರುವ ಹಕ್ಕಿ. ಎಷ್ಟರ ಮಟ್ಟಿಗೆ  ಕಾಮದ ಚಟುವಟಿಕೆ ನಡೆಸುತ್ತದೆಂದರೆ ಅದು ಕಾಮದಲ್ಲಿ ತೊಡಗಿರುವಾಗಲೇ ಪ್ರಾಣವನ್ನು ಬಿಡುತ್ತದೆ. ಅಂದರೆ ಇಂದ್ರಿಯ ಭೋಗದ ಸಂಕೇತ ಈ ಕೋಕ ಪಕ್ಷಿ. ಸದಾಕಾಲವೂ ಅದು ಬೇಕು, ಇದು ಬೇಕು, ಭೋಗಿಸಬೇಕು ಎಂಬ ತವಕದ ಸಂಕೇತವೇ ಈ ಹಕ್ಕಿ. ಕಾಮನೆ ಎಂದರೆ ಗಂಡು ಹೆಣ್ಣಿನ ಕೂಡುವಿಕೆಯೇ ಆಗಬೇಕೆಂದೇನೂ ಅರ್ಥವಲ್ಲ. ಸದಾಕಾಲ ಬೇಕು ಬೇಕೆಂಬ ಬಯಕೆ. ನಮ್ಮ ಅಂತರಂಗಕ್ಕೆ ಪ್ರಶ್ನೆ  ಮಾಡಿಕೊಳ್ಳೋಣ. ನಮ್ಮಲ್ಲಿ ಈ ಮೃಗೀಯ ಗುಣ ಇಲ್ಲವೇ?
ಮುಂದಿನ ಸ್ವಭಾವ ಗರುಡಪಕ್ಷಿಯ ನಡೆ. ಸುಪರ್ಣಯಾತುಮ್ ಅಂದರೆ ಗರುಡಪಕ್ಷಿಯ ನಡೆ. ಸಾಮಾನ್ಯವಾಗಿ ಎತ್ತರದಲ್ಲಿ ಹಾರುವ ಗರುಡಪಕ್ಷಿಯು ಕೆಳಗೆ ಬಂದು ಕುಳಿತುಕೊಳ್ಳುವಾಗಲೂ ಎತ್ತರದ ಜಾಗದಲ್ಲಿ ಕುಳಿತುಕೊಳ್ಳುತ್ತದೆ. ಇದು ಮದದ ಸಂಕೇತ. ಅಂದರೆ ನಾನು ಎಲ್ಲರಿಗಿಂತ ದೊಡ್ದವ, ನನ್ನ ಸಮಾನ ಯಾರಿದ್ದಾರೆಂಬ ಭಾವ. ಈ ಪ್ರಾಣಿಸಹಜಗುಣ ನಮ್ಮೊಳಗೆ ನಮ್ಮನ್ನು ನಾಶಮಾಡುತ್ತಿರುವ ಒಂದು ಅವಗುಣ.
ಮುಂದಿನದು ಗೃಧ್ರಯಾತುಂ ಅಂದರೆ ಹದ್ದಿನ ನಡೆ. ಹದ್ದು ಲೋಭದ ಸಂಕೇತ. ಅಂದರೆ ದುರಾಸೆಯ ಸಂಕೇತ. ಕಾಮಕ್ಕೂ ಲೋಭಕ್ಕೂ ಸ್ವಲ್ಪ ವೆತ್ಯಾಸವಿದೆ. ಕಾಮ ಎಂದರೆ ಬೇಕು, ಬೇಕು, ಬೇಕೆಂದು ಅನುಭವಿಸಿ ಬಿಡುವುದು, ಲೋಭವೆಂದರೆ ಬೇಕು, ಬೇಕು, ಬೇಕೆಂದು ಗಳಿಸಿ ಸಂಗ್ರಹ ಮಾಡಿಡುವುದು.ಲೋಭಿಯು ತಾನು ಅನುಭವಿಸುವುದಕ್ಕಿಂತ ಇಡುವುದೇ ಹೆಚ್ಚು.
ಹೀಗೆ ಅದೆಷ್ಟು ತರದ ಹದ್ದುಗಳು, ಅದೆಷ್ಟು ತರದ ತೋಳಗಳು, ನಾಯಿಗಳು,ಕೋಕಪಕ್ಷಿಗಳು, ಗರುಡಗಳು,ಗೂಬೆಗಳು ನಮ್ಮೊಳಗೆ ವಾಸಿಸುತ್ತಿರಬಹುದು? ಹೀಗಿರುವಾಗಲೂ  ನಮ್ಮ ಅಂತರಂಗವು ಪರಿಶುದ್ಧವಾಗಿರಬೇಕೆಂಬುದು ನಮ್ಮ ಆಸೆ.ಇಂತ ಪರಿಸ್ಥಿತಿಯಲ್ಲಿ ಆನಂದದ ಅನುಭವವು ಆಗಬೇಕೆಂದರೆ ಸಿಗುವ ಬಗೆಯಾದರೂ ಹೇಗೆ? ಹಾಗಾದರೆ ಇಂತಹಾ ಪರಿಸ್ಥಿಯಲ್ಲಿ ಆನಂದ ಸಿಗಬೇಕಾದರೆ ಏನು ಮಾಡಬೇಕು? ಈ ಮಂತ್ರದ ಕೊನೆಯ ಭಾಗದಲ್ಲಿ ಉತ್ತರವಿದೆ.

ದೃಷದೇವ ಪ್ರಮೃಣ ರಕ್ಷ ಇಂದ್ರ
ಇಲ್ಲಿ ಇಂದ್ರ ಎಂಬ ಪದವಿದೆ.ನಾವು ಈಗಾಗಲೇ ವಿಚಾರಮಾಡಿರುವಂತೆ ಇಂದ್ರ, ಅಗ್ನಿ, ಯಮ. . . . . . ಇತ್ಯಾದಿ ಏನೇ ಹೆಸರಿದ್ದರೂ ಅದು  ಸರ್ವಶಕ್ತ ಭಗವಂತನ ಹೆಸರೇ ಆಗಿದೆ. ಇಂದ್ರ ಪದವನ್ನು ಅರ್ಥಮಾಡಿಕೊಳ್ಳ  ಬೇಕಾದರೆ ಅದರ ಮೂಲ ಧಾತುವನ್ನು ಅರ್ಥಮಾಡಿಕೊಳ್ಳಬೇಕು. ಮೂಲ ಧಾತುವನ್ನು ಹುಡುಕಿದಾಗ..
ಇದಿ ಪರಮೈಶ್ವರ್ಯೇ ಎಂದು ತಿಳಿಯುತ್ತದೆ. ಅಂದರೆ ಪರಮ ಐಶ್ವರ್ಯಶಾಲಿಯಾದ ಭಗವಚ್ಛಕ್ತಿಯ ಹೆಸರು ಇಂದ್ರ. ಇಡೀ ಬ್ರಹ್ಮಾಂಡವು ಯಾರ ವಶದಲ್ಲಿದೆಯೋ ಅಂತಹ ವಿಶ್ವಚೇತನ ಭಗವಚ್ಛಕ್ತಿಯೇ ಇಂದ್ರ. ನಮ್ಮ ಅಂತರಂಗದಲ್ಲಿ  ಭಗವಂತನಲ್ಲಿ ನಾವು ಪ್ರಾರ್ಥಿಸುತ್ತಿದ್ದೇವೆ ಹೇ, ಇಂದ್ರ ಈ ದುಷ್ಟಪ್ರಾಣಿಗಳೆಲ್ಲಾ ನಮ್ಮೊಳಗೆ ಸೇರಿ ನಮಗೆ ಹಿಂಸೆ ಕೊಡುತ್ತಿವೆ.ಇವುಗಳಿಂದ ನಮ್ಮನ್ನು ರಕ್ಷಿಸು.
ರಕ್ಷಇಂದ್ರ ರಕ್ಷ ಎಂದರೆ ರಕ್ಷಿಸು ಎಂದು ಸಾಮಾನ್ಯವಾಗಿ ಅರ್ಥಮಾಡಿಕೊಳ್ಳುತ್ತೇವೆ. ಆದರೆ ಯಾವುದರಿಂದ ನಮ್ಮನ್ನು ರಕ್ಷಿಸಿಕೊಳ್ಳಬೇಕೋ ಆ ರಾಕ್ಷಸೀ ಶಕ್ತಿಗಳಿಗೆ ಹೆಸರು ರಕ್ಷ . ರಕ್ಷ ಪದದಿಂದಲೇ ರಾಕ್ಷಸ ಪದ ನಿರ್ಮಾಣವಾಗಿದೆ. ಯಾವುದರಿಂದ ನಮ್ಮನ್ನು ರಕ್ಷಿಸಿಕೊಳ್ಳಬೇಕೋ ಅಂತಹ ದುಷ್ಟಶಕ್ತಿಗಳಿಗೆ ರಾಕ್ಷಸೀ ಶಕ್ತಿಗಳೆಂದು ಹೆಸರು. ಇಂತಹ ದುಷ್ಟಶಕ್ತಿಗಳನ್ನು ನಮ್ಮಿಂದ ಹೇಗೆ ದೂರಮಾಡಬೇಕೆಂಬುದನ್ನು ಮಂತ್ರದ ಮುಂದಿನ ಭಾಗ ತಿಳಿಸುತ್ತದೆ. . . . . .
ದೃಷದೇವ ಪ್ರಮೃಣ ದೃಷದಾ ಇವ ಅಂದರೆ ಕಲ್ಲಿನಂತಹ ಕಠೋರವಾದ ಸಾಧನದಿಂದ, ಪ್ರಮೃಣ ಅಂದರೆ ಚೆನ್ನಾಗಿ ಹೊಸಕಿ ಹಾಕು. ಕಲ್ಲಿನಿಂದ ಅರೆಯುವಂತೆ ಅರೆದುಬಿಡು. ಕಲ್ಲಿನಿಂದ ಅರೆಯುವುದೆಂದರೇನು? ಕಲ್ಲಿನಿಂದ ಅರೆಯುವ ಮಾತಿನ ಹಿಂದಿನ ತೀವ್ರತೆಯನ್ನು ಗಮನಿಸಬೇಕು. ಈ ದುಷ್ಟ ಪ್ರಾಣಿಗಳು ನನ್ನೊಳಗೆ ಸೇರಿ ನನಗೆ ಕೊಡುತ್ತಿರುವ ಕಾಟವನ್ನು ನಾನು ತಡೆಯಲಾರೆ ಆದ್ದರಿಂದ ಕಲ್ಲಿನಿಂದ ಹೊಸಕಿಹಾಕಿಬಿಡು ಹೀಗೆ ನಮ್ಮ ಅಂತರ್ಯದಲ್ಲಿ ಇಂತಹ ಮೊರೆಯನ್ನು ಭಗವಂತನಲ್ಲಿ ಮಾಡಬೇಕು.
ಈ ಮಂತ್ರವನ್ನು ಅರ್ಥಮಾಡಿಕೊಂಡಾಗ ಭಗವಂತನಿಗಾಗಿ ನಮ್ಮ ಅಂತರಂಗದಲ್ಲಿ ಮೊರೆಇಡಬೇಕೇ ಹೊರತೂ ಬಾಹ್ಯಕ್ರಿಯೆಗಳಿಂದಲ್ಲ, ಎಂಬುದು ನಮಗೆ ಅರಿವಾಗುತ್ತದೆ. ಅಂದರೆ ನಮ್ಮ ಅಂತರರಂಗದ ಕೊಳೆಯನ್ನು ಪೂರ್ಣವಾಗಿ ತೆಗೆದುಹಾಕಲು ಭಗವಂತನಲ್ಲಿ ಮೊರೆಯಿಟ್ಟು ಅವನಲ್ಲಿ ಶರಣಾದಾಗ ನಮಗೆ ಆನಂದವನ್ನು ಪಡೆಯುವ ಹಾದಿ ಸುಗುಮವಾಗುತ್ತದೆ. ಅಂದರೆ ಅಂತರ್ಯದಲ್ಲಿರುವ ಕಾಮ,ಕ್ರೋಧ,ಲೋಭ, ಮೋಹ, ಮದ ,ಮತ್ಸರ್ಯಗಳನ್ನು ನಮ್ಮಿಂದ ಕಿತ್ತು ಹೊರಗೆ ಹಾಕುವ ತೀವ್ರವಾದ ಸಂಕಲ್ಪ ನಮ್ಮೊಳಗೆ ಮಾಡಿ, ಅದಕ್ಕೆ ತಕ್ಕಂತೆ ನಾವು ವ್ಯವಹರಿಸಿದರೆ ನಮ್ಮ ಅಂತರಂಗವು ಶುದ್ಧವಾಗುತ್ತದೆ ಆಗ ಆನಂದದ ಅನುಭವವು ನಮ್ಮ ಅಂತರಂಗದಲ್ಲಿಯೇ ಆಗುತ್ತದೆ.
ಆದ್ದರಿಂದ ಆನಂದಕ್ಕಾಗಿ ಹೊರಗೆಲ್ಲೂ ಹುಡುಕಬೇಕಾಗಿಲ್ಲ. ನಮ್ಮ ಅಂತರಂಗವನ್ನು ಶುದ್ಧಮಾಡಿಕೊಂಡು ನಮ್ಮ ನಡೆ, ನುಡಿ, ವ್ಯವಹಾರದಲ್ಲಿ ಸತ್ಯ, ಅಹಿಂಸೆ, ಅಸ್ತೇಯ, ಅಪರಿಗ್ರಹ,ಬ್ರಹ್ಮಚರ್ಯ, ಶೌಚ,ಸಂತೋಷ, ತಪಸ್ಸು,ಸ್ವಾಧ್ಯಾಯ, ಈಶ್ವರಪ್ರಣೀಧಾನ, ಇವುಗಳನ್ನು ಬಲು ಶ್ರದ್ಧೆಯಿಂದ ಪಾಲನೆ ಮಾಡಿದ್ದೇ ಆದರೆ ಭಗವಂತನ ಸಾಕ್ಷಾತ್ಕಾರ ಸಾಧ್ಯ.