Pages

Saturday, April 17, 2010

ಆತ್ಮವಿಮರ್ಶೆ

ಪ್ರತ್ಯಹಂ ಪ್ರತ್ಯವೇಕ್ಷೇತ ನರಶ್ಚರಿತಮಾತ್ಮನ:|
ಕಿಂ ನ ಮೇ ಪಶುಭಿಸ್ತುಲ್ಯಂ ಕಿಂ ನು ಸತ್ಪುರುಶೈರಿತಿ||

ಪ್ರತಿದಿನವೂ ರಾತ್ರಿ ಮಲಗುವಾಗ ತನ್ನ ಆದಿನದ ನಡತೆಯನ್ನು ತಾನೇ ವಿಮರ್ಶೆಮಾಡಿಕೊಳ್ಳಬೇಕು, " ಇಂದು ನಾನು ಪಶುಗಳಂತೆ ನಡೆದುಕೊಂಡಿಲ್ಲ, ತಾನೆ? ಸತ್ಪುರುಷನಂತೆ ಸ್ವಲ್ಪವಾದರೂ ಇಂದು ನಡೆದುಕೊಂಡಿದ್ದೇನೆಯೇ?" - ಎಂದು.

"ಬೆಳಗಿನಿಂದ ರಾತ್ರಿ ವರಗೆ ನಾನು ಏನೆಲ್ಲಾ ಮಾಡಿರುತ್ತೇನೆ, ಯಾರ್ಯಾರ ಜೊತೆ ಸಂತಸವಾಗಿ ಕಾಲ ಕಳೆದಿರುತ್ತೇನೆ, ಯಾರ್ಯಾರ ಜೊತೆ ಬೇಸರದಿಂದ ವ್ಯವಹರಿಸಿರುತ್ತೇನೆ, ಎಷ್ಟು ಕೆಲಸವನ್ನು ನ್ಯಾಯಯುತವಾಗಿ ಮಾಡಿದೆನು, ಅನ್ಯಾಯ ಮಾರ್ಗದಲ್ಲಿ ನಡೆದಿರುತ್ತೇನೆಯೇ? ವಿನಾಕಾರಣ ಯಾರಿಗೆ ನೋವುಂಟು ಮಾಡಿದೆ? ನನ್ನಿಂದ ಯಾರಿಗಾದರೂ ಸ್ವಲ್ಪವಾದರೂ ಪ್ರಯೋಜನವಾಗಿದೆಯೇ? ನಾನು ಮನುಷ್ಯತ್ವದಿಂದ ವರ್ತಿಸಿದ್ದೇನೆಯೇ? ಅಥವಾ ನನ್ನಿಂದ ತಪ್ಪಾಗಿದ್ದರೆ ಅದು ನಾಳೆ ಪುನರಾವರ್ತಿತವಾಗಬಾರದು" - ಹೀಗೆ ರಾತ್ರಿ ಮಲಗುವ ಮುಂಚೆ ೫-೧೦ ನಿಮಿಷಗಳು ಧ್ಯಾನಸ್ಥಿತಿಯಲ್ಲಿ ಕುಳಿತು ಆತ್ಮವಿಮರ್ಶೆ ಮಾಡಿಕೊಂಡಿದ್ದೇ ಆದರೆ ಪ್ರತಿದಿನವೂ ನಮ್ಮನ್ನು ಇನ್ನೂ ಹೆಚ್ಚು ಹೆಚ್ಚು ಸುಧಾರಿಸಿಕೊಳ್ಳಬಲ್ಲೆವು.