ಸಾಮಾನ್ಯವಾಗಿ ಭಾವಜೀವಿಗಳಲ್ಲಿ ಒಂದು ಕೊರತೆ ಕಾಣುತ್ತೆ. ಯಾವುದೋ ಒಂದು ಭಾವಕ್ಕೆ ಬಂಧಿಯಾಗಿದ್ದರೆ ಉಳಿದದ್ದೆಲ್ಲವನ್ನೂ ಕಡೆಗಣಿಸುವ ಪ್ರವೃತ್ತಿ.ಉಧಾಹರಣೆಗೆ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಅನೇಕರನ್ನು ನೋಡಿದ್ದೇನೆ. ಸರಿಯಾದ ಸಮಯಕ್ಕೆ ಸ್ನಾನವಿಲ್ಲ, ಸರಿಯಾದ ಸಮಯಕ್ಕೆ ಆಹಾರವಿಲ್ಲ, ಸರಿಯಾದ ನಿದ್ರೆ ಇಲ್ಲ.ಶರೀರ ಮನಸ್ಸುಗಳಿಗೆ ಅಗತ್ಯವಾದ ವ್ಯಾಯಾಮವಿಲ್ಲ. ಆದರೆ ಎಲ್ಲದರಬಗ್ಗೆ ಬರೆಯುವುದಂತೂ ನಿಜ. ಮನುಷ್ಯನಿಗೆ ತನ್ನ ದೈಹಿಕ-ಮಾನಸಿಕ ಆರೋಗ್ಯವು ತನ್ನ ನಿಯಂತ್ರಣದಲ್ಲಿಲ್ಲದಿದ್ದರೆ ಏನು ಮಾಡಿ ಏನು ಪ್ರಯೋಜನ? [ ಮದ್ಯಸೇವನೆಮಾಡಿ,ಧೂಮಪಾನಮಾಡುತ್ತಾ ಬರೆಯುವವರೂ ಇದ್ದಾರೆ. ಇವರ ಬಗ್ಗೆ ಚರ್ಚಿಸುವುದಿಲ್ಲ]
ಸುಧಾಕರಶರ್ಮರಂತವರು ಅಪರೂಪ. ತಾವು ಯೋಗಿಯಂತೆ ಬದುಕುತ್ತಾ , ಆಹಾರವಿಹಾರಗಳಿಗೆ ಒಂದು ಪಥ್ಯವನ್ನು ಹಾಕಿಕೊಂಡು, ಪ್ರಾಣಾಯಾಮ-ಯೋಗವನ್ನು ಕಡೆಗಣಿಸದೆ, ಸಾಹಿತ್ಯಕೃಷಿ, ಅಧ್ಯಯನ ಮಾಡುತ್ತಾ, ಸಾಮಾಜಿಕ ಜಾಗೃತಿಗಾಗಿ ಚಟುವಟಿಕೆಗಳನ್ನು ನಡೆಸುತ್ತಾ ಮಾದರಿಯಾಗಿ ಬಾಳುವ ಕ್ರಮ.
ನನಗಿರುವ ಕೊರತೆಗಳಿಗೆ ಪರಿಹಾರ ಹುಡುಕಲೆಂದೇ ಈ ಮಾತುಗಳು.
ಒಂದು ಘಟನೆಯನ್ನು ವೇದಸುಧೆಯ ಎಲ್ಲಾ ಅಭಿಮಾನಿಗಳ ಗಮನಕ್ಕೆ ತಂದುಬಿಡುತ್ತೇನೆ. ಸುಮಾರು ೧೫ ವರ್ಷಗಳ ಹಿಂದೆ ಸರ್ವೈಕಲ್ ಸ್ಪಾಂಡಲೈಟಿಸ್ ಸಮಸ್ಯೆಯಿಂದಾಗಿ ಒಂದು ರಾತ್ರಿ ಇದ್ದಕ್ಕಿದ್ದಂತೆ ನನ್ನ ಎಡಗೈ ಶಕ್ತಿಯನ್ನು ಕಳೆದುಕೊಂಡಿತು. ಅಂದರೆ ನನ್ನ ಪಾಲಿಗೆ ಅದು ಸತ್ತಂತಾಯ್ತು. ಕೈ ಒಂದಿಂಚೂ ಮೇಲೆತ್ತಲಾಗುತ್ತಿಲ್ಲ. ಗಾಭರಿಯಾಯ್ತು. ಬೆಳಿಗ್ಗೆ ಎದ್ದವನೇ ಆತಂಕದಿಂದ ನನ್ನ ಮಿತ್ರರಾದ ಹಾಸನದ " ಧರ್ಮಸ್ಥಳ ಆಯುರ್ವೇದಿಕ್ ಕಾಲೇಜಿನ " ಪ್ರಾಂಶುಪಾಲರಾದ ಡಾ|| ಪ್ರಸನ್ನರಾವ್ ಅವರಿಗೆ ಫೋನ್ ಮಾಡಿದೆ. ಗಾಭರಿ ಬೇಡ. ಬನ್ನಿ ಸರಿಮಾಡುತ್ತೇನೆಂದು ಭರವಸೆ ನೀಡಿದರು. ಆಯುರ್ವೇದಿಕ್ ಆಸ್ಪತ್ರೆಯಲ್ಲಿ ಎಂಟು ದಿನಗಳು ಸತತವಾಗಿ ಆಯಿಲ್ ಮಸ್ಸೇಜ್, ಸ್ಟೀಮ್ ಬಾತ್ ಎಲ್ಲಾ ಮಾಡಿದ್ದಾಯ್ತು. ಏನೂ ಪರಿಣಾಮ ಬೀರಲಿಲ್ಲ. ನನಗೆ ಆತಂಕ ಹೆಚ್ಚಾಯ್ತು. ನಾನೆಂದೆ "ಡಾಕ್ಟ್ರೇ, ಏನೂ ಸುಧಾರಿಸಲಿಲ್ಲವಲ್ಲಾ! ನನ್ನನ್ನು ನಿಮ್ಹ್ಯಾನ್ಸ್ ಗೆ [ಹೀಗೆಂದಾಗ ಹುಚ್ಚಾಸ್ಪತ್ರೆಗೆ ಎಂದು ಗೇಲಿ ಮಾಡಿದವರಿದ್ದಾರೆ] ಕಳಿಸಿ ಬಿಡಿ. ಅಲ್ಲಾದರೂ ತೋರಿಸುತ್ತೇನೆ"
ಆಗ ಪ್ರಸನ್ನರಾಯರು ಹೇಳಿದರು" ನೋಡಿ ಶ್ರೀಧರ್ ನೀವು ಅಲ್ಲಿ ತೋರಿಸಿದೊಡನೆ ಕುತ್ತಿಗೆ ಭಾಗದಲ್ಲಿ ಆಪರೇಶನ್ ಮಾಡಬೇಕೆಂದು ಹೇಳುತ್ತಾರೆ. ಆದರೆ ನೀವು ಆಪರೇಶನ್ ಮಾಡಿಸಿಕೊಳ್ಳಬೇಡಿ. ನನಗೆ ಫೋನ್ ಮಾಡಿ ಬೇರೆ ದಾರಿ ಹುಡುಕೋಣ ವೆಂದರು.ನಿಮ್ಹ್ಯಾನ್ಸ್ ನಲ್ಲಿ ಮೊದಲು ಪರೀಕ್ಷಿಸಿದ ವೈದ್ಯರು ಸುಮಾರು ಐನೂರು ರೂಪಾಯಿಗಳ ಮಾತ್ರೆ ಬರೆದುಕೊಟ್ಟರು. ಮೂರು ದಿನಗಳ ನಂತರ ನನ್ನನ್ನು ಪರೀಕ್ಷಿಸಿದ ಹಿರಿಯ ವೈದ್ಯರು ಈ ಮಾತ್ರೆ ಬೇಡ " ಒಂದು ಆಪರೇಶನ್ ಆಗಬೇಕು, ಅದೂ ನೂರಕ್ಕೆ ನೂರು ಭರವಸೆ ಇಲ್ಲ. ಪ್ರಯತ್ನ ಮಾಡಬೇಕಷ್ಟೆ." ಎಂದರು . ಆಗ ಬೇರೆ ದಾರಿ ಇಲ್ವಾ ಡಾಕ್ಟ್ರೇ ಎಂದಾಗ ಫಿಸಿಯೋ ತೆರೆಫಿ ಪ್ರಯತ್ನಿಸಬಹುದು ಅದು ತುಂಬಾ ನಿಧಾನ. ಸುಧಾರಣೆ ಕಷ್ಟ. ಎಂದರು.ಆದರೂ ಫಿಸಿಯೋ ತೆರೆಫಿ ಚಿಕಿತ್ಸೆ ಆರಂಭಿಸಲಾಯ್ತು. ಅಲ್ಲೂ ಸುಧಾರಿಸಲೇ ಇಲ್ಲ. ಆಗ ಸುಮಾರು ಆರು ತಿಂಗಳು ನನ್ನ ಸ್ಥಿತಿ ದೇವರೇ ಬಲ್ಲ. ಒಂದು ಕೈಯಲ್ಲಿ ಎಲ್ಲಾ ಕೆಲಸ ಮಾಡಬೇಕು. ಹೆಚ್ಚು ದಿನ ರಜೆ ಹಾಕುವಂತಿಲ್ಲ.
ಈ ಮಧ್ಯೆ ನನ್ನ ಮಿತ್ರರೊಬ್ಬರು ಒಂದು ಸಲಹೆ ನೀಡಿದರು. ಮುಂಬಯಿಯಲ್ಲಿ ಒಬ್ಬ ಸ್ಪಿರಿಚುಯಲ್ ಹೀಲರ್ ಇದ್ದಾರೆ. ಅವರಹತ್ತಿರ ಹೋದರೆ ಕೇವಲ ಸ್ಪರ್ಷಮಾತ್ರದಿಂದ ಗುಣಪಡಿಸುತ್ತಾರಂತೆ. ಫೋನ್ ನಂಬರ್ ಪಡೆದು ಅವರನ್ನು ಹುಡುಕಿದೆ. ಅವರು ಧಾರವಾಡದಲ್ಲಿ ಕ್ಯಾಂಪ್ ಮಾಡಿದ್ದರು. ಮುಳುಗುವವನಿಗೆ ಕಡ್ಡಿ ಕಂಡರೂ ಹಿಡಿದುಕೊಳ್ಳುವಂತೆ ಅವರ ಬಳಿ ಹೋದೆ. ರಾತ್ರಿ ಟ್ರೈನ್ ನಲ್ಲಿ ಪ್ರಯಾಣಮಾಡುವಾಗ ಅನುಭವಿಸಿದ ನೋವು ಅವರ ಸ್ಪರ್ಷದ ನಂತರ ಸ್ವಲ್ಪ ಕಾಲ ಇರಲಿಲ್ಲ. "ನಾಲ್ಕೈದು ಭಾರಿ ಬಂದರೆ ಗುಣಪಡಿಸುವೆ" ಎಂದರು..... ಮತ್ತೆ ಅವರ ಬಳಿ ಹೋಗಲಾಗಲಿಲ್ಲ. ಆದರೂ ಔಷಧಿ-ಮಾತ್ರೆ ಇಲ್ಲದೆ, ಆಪರೇಶನ್ ಇಲ್ಲದೆ ನಾನು ಸಂಪೂರ್ಣ ಗುಣಮುಖನಾದೆ. ಅದು ಹೇಗೆ? ಆ ಪವಾಡವನ್ನು ನಾಳೆ ಬರೆಯುವೆ.