Pages

Saturday, September 17, 2011

ಮಾಯೆ-4

ಕುಲವೆನ್ನುವರು... ಕಳೆ ಎನ್ನುವರು
ಕಳೆಯಿರದಾ ಕುಲವಿಹುದೇನಯ್ಯಾ..
ಹುಲುಸಾಗಿ ಬೆಳೆವ ಕಳೆಗೂ
ಅಭದ್ರತೆ ಎ೦ಬುದು ಇಹುದಯ್ಯಾ...
ಎನ್ನ೦ತರ೦ಗದೇವಾ ಕುಲದ ಕಳೆಯ
ಕಲೆಯೊಳಗೆ ಬೆರೆತು ಮುಳುಗಿಹೋಗಿರುವ
ನಾನೆ೦ತ ಕುಲೀನನಯ್ಯಾ..
ಇದಕೆ ಕಲಾಯಿ ಹಾಕುವ ಬಗೆ ಹೇಳಯ್ಯಾ..

ಮನದಲೊ೦ದು ನಡೆಯಲೊ೦ದು..
ನಿನ್ನಲೊ೦ದು ಎನ್ನಲೊ೦ದು..
ನನಗೆ ಸ೦ಕಟ ನಿನಗೆ ಪರೀಕ್ಷೆ...
ಕರೆದರೂ ಬರದಿರುವ ನೀನು
ಹಿ೦ಬದಿಯೇ ನಿ೦ತು ನೋಡುವೆಯಲ್ಲಯ್ಯಾ
ಕರೆದರೂ ಬರದಿದ್ದವನು ನೀನೊಬ್ಬನಯ್ಯಾ!
ಎನ್ನ೦ತರ೦ಗದೇವ.. ಕಷ್ಟಕ್ಕಾದವನೇ ನೀನಯ್ಯಾ
ಎ೦ಬುದರ ಅರಿವಿರದ ನಾನೆ೦ತ ಬ೦ಧುವಯ್ಯಾ

ವಿವೇಕ ಚೂಡಾಮಣಿ - ಭಾಗ -೧೧



ಗ್ರಂಥದ ಮುಂದುವರಿದ ಭಾಗ

तद्वैराग्यं जुगुप्सा या दर्शनश्रवणादिभिः ।
देहादिब्र्ह्मपर्यन्ते ह्यनित्ये भोगवस्तुनि ॥२१॥

ತದ್ವೈರಾಗ್ಯಂ ಜುಗುಪ್ಸಾ ಯಾ ದರ್ಶನಶ್ರವಣಾದಿಭಿಃ |
(= ನೋಡುವುದು, ಕೇಳುವುದು ಮುಂತಾದವುಗಳಿಂದ ಹುಟ್ಟುವ ವೈರಾಗ್ಯ )
ದೇಹಾದಿಬ್ರಹ್ಮಪರ್ಯಂತೇ ಹ್ಯನಿತ್ಯೇ ಭೋಗವಸ್ತುನಿ ||೨೧||
(=ದೇಹದಿಂದ ಮೊದಲಾಗಿ ಬ್ರಹ್ಮದವರೆಗಿನ ಅನಿತ್ಯವಾದ ಭೋಗವಸ್ತುಗಳಲ್ಲಿ)

ಬ್ರಹ್ಮವೇ ಸತ್ಯ ಜಗತ್ತು ಮಿಥ್ಯೆ ಎಂಬ ಧೃಡ ನಿಶ್ಚಯವು ಬಂದ ನಂತರ ಜಗತ್ತಿನ ವ್ಯಾವಹಾರಿಕ, ಪ್ರಾಪಂಚಿಕ ಭೋಗವಸ್ತುಗಳ ಬಗೆಗೆ ಜಿಗುಪ್ಸೆ ಅಥವಾ ಅನಾಸಕ್ತಿಯು ಹುಟ್ಟಬೇಕು ಮತ್ತು ಅಂತಹ ವೈರಾಗ್ಯದ ಭಾವವನ್ನು ಉಂಟುಮಾಡಿಕೊಳ್ಳಬೇಕು ಎಂದು ’ಇಹಾಮುತ್ರಫಲಭೋಗವೈರಾಗ್ಯ’ ಎಂಬ ಎರಡನೆಯ ಸಾಧನದಲ್ಲಿ ಶ್ರೀ ಶಂಕರರು ನಿರೂಪಿಸುತ್ತಾರೆ.
’ಇಹ’ ಎಂದರೆ ಈ ಜಗತ್ತಿನಲ್ಲಿ ದೇಹದ ಮೂಲಕ ಮೊದಲಾಗುವ ಎಲ್ಲಾ ಪ್ರಾಪಂಚಿಕ ಸುಖ-ಭೋಗಗಳ ಮೇಲಿನ ಜಿಗುಪ್ಸೆ ಎಂದಾಗುತ್ತದೆ. ವ್ಯಾವಹರಿಕ ಜಗತ್ತಿನಲ್ಲಿ ಆಕರ್ಷಣೆಗಳು, ಭೋಗಗಳು ಹುಟ್ಟುವುದೇ ದೇಹದ ಕರ್ಮೇಂದ್ರಿಯಗಳು, ಜ್ಞಾನೇಂದ್ರಿಯಗಳ ಮೂಲಕ ಎನ್ನುವಾಗ ಅಂತಹ ಎಲ್ಲಾ ಸುಖ-ಭೋಗಗಳ ಮೇಲಿನ ಆಸಕ್ತಿಯನ್ನು ಬಿಟ್ಟು ಕೇವಲಬ್ರಹ್ಮದಲ್ಲಿ ನಿಶ್ಚಯವಾಗುವುದು ಎಂದು ತಿಳಿಯಬೇಕಾಗುತ್ತದೆ.
’ಅಮುತ್ರ’ ಅಥವಾ ಪರಲೋಕ ಎಂದರೆ ನಮ್ಮ ಪುರಾಣಗಳಲ್ಲಿ ವರ್ಣಿಸಿರುವಂತೆ ಸಿಗಬಹುದಾದ ’ಸ್ವರ್ಗ’ ಸುಖ-ಭೋಗಗಳು.  ಸ್ವರ್ಗಸುಖವನ್ನೂ ತ್ಯಜಿಸುವುದು ವೈರಾಗ್ಯದ ಲಕ್ಷಣ ಎನ್ನುವ ಅರ್ಥದಲ್ಲಿ ಹೇಳಿರುತ್ತಾರೆ.
’ರಾಗ’ ಎಂದರೆ ಬಣ್ಣ ಅಥವಾ ಸೆಳೆತ ಎಂದುಕೊಂಡರೆ ’ವಿರಾಗ’ ಎನ್ನುವುದು ’ರಾಗ’ ದ ವಿರೋಧಸೂಚಕವಾಗಿ ಬರುತ್ತದೆ. ವಿರಾಗದ ಭಾವವೇ ವೈರಾಗ್ಯ. ವೈರಾಗ್ಯವು ಹುಟ್ಟದೇ ಇದ್ದಲ್ಲಿ ಆತ್ಮಾಭ್ಯಾಸವೂ ಸಾಧ್ಯವಿಲ್ಲ.
ಈ ಜಗತ್ತಿನಲ್ಲಿ ಆಚರಿಸುವ ಕರ್ಮಗಳಿಂದ ಮತ್ತು ಅದರ ಪುಣ್ಯಫಲಗಳಿಂದ ಸ್ವರ್ಗಪ್ರಾಪ್ತಿಯಾಗುತ್ತದೆ ಎನ್ನುವುದಾದರೆ, ಆ ಸ್ವರ್ಗದಲ್ಲೂ ಸಹ ಇರುವುದು ಸುಖ-ಭೋಗಗಳೆ !.  ಇಲ್ಲಿ ಸಾಧಾರಣ ಕುರ್ಚಿಯ ಮೇಲೆ ಕುಳಿತುಕೊಂಡರೆ ಅಲ್ಲಿ ರತ್ನಸಿಂಹಾಸನದ ಮೇಲೆ ಕೂರಿಸಲಾಗುತ್ತದೆ.  ಹೀಗಿರುವಾಗ ಸ್ವರ್ಗಪ್ರಾಪ್ತಿಯೂ ಮೋಕ್ಷವಲ್ಲ ಎಂಬುದು ಇಲ್ಲಿ ನಿರೂಪಿತವಾಗುತ್ತದೆ.  "ಇಲ್ಲಿ ನಮ್ಮ ಸಿನಿಮಾ ನರ್ತಕಿಯರು ಕುಣಿದರೆ ಅಲ್ಲಿ ರಂಭೋರ್ವಶಿಯರು ನರ್ತಿಸುತ್ತಾರೆ. ಎರಡೂ ನರ್ತನವೇ ಆದರೆ, quality ಬದಲಾಗಬಹುದು "  ಎಂದು ರಾ. ಗಣೇಶರು ರಸವತ್ತಾಗಿ ಹೇಳುತ್ತಾರೆ.
ಕಾಶಿಗೆಂದು ಯಾತ್ರೆ  ಹೋದವರು ಅಲ್ಲಿ ಮೂರು ವಸ್ತುಗಳನ್ನು (ಪ್ರಿಯವಾದುದು ಎಂದು ಕೆಲವರು ಒತ್ತಿ ಹೇಳುತ್ತಾರೆ. ನನಗೆ ಅದರ ಬಗ್ಗೆ ಆಸಕ್ತಿಯಿಲ್ಲ) ಬಿಟ್ಟು (ತ್ಯಜಿಸಿ) ಬರಬೇಕು ಎಂಬ ಆಚರಣೆಯೊಂದಿದೆ. ಹಾಗೆ ಬಿಟ್ಟು ಬರುವವರೂ ಬಹುಸಂಖ್ಯೆಯಲ್ಲಿದ್ದಾರೆ. (ನಮ್ಮ ತಂದೆಯವರು ಅವರ ಗೆಳೆಯರೊಬ್ಬರಿಗೆ "ನೀನು ಸಿಟ್ಟನ್ನು ಬಿಟ್ಟು ಬಾರಯ್ಯಾ" ಎಂದು ಹೇಳಿದ್ದರು !).  ಕಾಶಿಯಲ್ಲಿ ಮೈಸುರು ಪಾಕನ್ನು ಬಿಟ್ಟು ಬಂದವರು ಮೈಸೂರಿನಲ್ಲಿ ಮೈಸೂರು ಪಾಕನ್ನು ತಿಂದರಂತೆ. ಯಾರೋ ವಿವೇಕಿಗಳು "ಬಿಟ್ಟದ್ದು ಏಕೆ ? " ಎಂದು ಕೇಳಿದ್ದಕ್ಕೆ ’ನಾನು ಬಿಟ್ಟದ್ದು ಕಾಶಿಯಲ್ಲಿ, ಅಲ್ಲಿ ತಿನ್ನೋದಿಲ್ಲ ಅಂತಲೇ ಹೊರತು ಮೈಸೂರಿನಲ್ಲಿ ಅಲ್ಲ’ ಎಂದರಂತೆ !. ಕೆಲವರು ಸಾವಿರದಲ್ಲಿ ಕೊಡುವ ಲಂಚವನ್ನು ಮುಟ್ಟುವುದೇ ಇಲ್ಲ, ಲಕ್ಷದಲ್ಲಾದರೆ ಬಿಡುವುದೇ ಇಲ್ಲ !.   "ಬಿಟ್ಟೆ" ಎನ್ನುವುದಾದರೆ ಎಲ್ಲೆಡೆಯೂ ಎಲ್ಲವನ್ನೂ ಬಿಡುವುದು ಎಂದಾಗಬೇಕಾಗುತ್ತದೆ ಮತ್ತು ಅದೇ ’ಇಹಾಮುತ್ರಫಲಭೋಗವೈರಾಗ್ಯ’ ಎಂದು ಸದ್ಗುರುಗಳು ಹೇಳುತ್ತಾರೆ.
ದಾರಿಬದಿಯ ತಳ್ಳುವಗಾಡಿಯಲ್ಲಿ ಮಾಡುವ ದೋಸೆಯನ್ನು ತಿನ್ನೋದಿಲ್ಲ ಎಂದು ಆಣೆ ಮಾಡಿ , ದೊಡ್ಡ ಸ್ಟಾರ್ ಹೋಟೆಲ್ಲಿನ ದೋಸೆಯನ್ನು ಮಾತ್ರ ತಿನ್ನುತ್ತೇನೆ ಎನ್ನುವುದು ದೋಸೆಯನ್ನು ಬಿಟ್ಟ ಲಕ್ಷಣವಂತೂ ಅಲ್ಲ. ಲಕ್ಷ-ಲಕ್ಷ ಬೆಲೆಬಾಳುವ ಕಾರಿನ ಕುಶನ್ ಸೀಟಿನ ಮೇಲೆ ಕೃಷ್ಣಾಜಿನವನ್ನು ಹಾಸಿಕೊಂಡು ಕುಳಿತು ದಿಗ್ವಿಜಯಕ್ಕೆ ತೆರಳುವುದು ಕಾರಿನ ಸುಖ-ಭೋಗಗಳನ್ನು ಬಿಟ್ಟಂತೇನೂ ಅಲ್ಲ !.

ದೇಹದಿಂದ ಮೊದಲಾಗಿ ಬ್ರಹ್ಮದವರೆಗಿನ ಎಲ್ಲಾ ಸುಖ-ಭೋಗಗಳನ್ನು ಬಿಡುವುದೇ ವೈರಾಗ್ಯ ಎಂದು ಶಂಕರರು ಮೇಲ್ಕಂಡ ಶ್ಲೋಕದಲ್ಲಿ ಹೇಳಿರುತ್ತಾರೆ.  ಬಿಡುವುದಾದರೂ ಹೇಗೆ ? ಎಂಬ ಪ್ರಶ್ನೆ ಬರುತ್ತದೆ.
ಇಹಭೋಗವಸ್ತುಗಳನ್ನು ಮತ್ತೆ ಮತ್ತೆ ತಿಳಿಯುವುದರಿಂದ ಅದರ ಬಗೆಗೆ ವಿಚಾರ ಮಾಡುವುದರಿಂದ ಅದರಲ್ಲಿನ ಹುಳುಕುಗಳು(ದೋಷಗಳು) ಕಾಣುತ್ತಾ ಹೋಗುತ್ತದೆ. ಕೋಟಿ-ಕೋಟಿ ಹಣವನ್ನು ಕೂಡಿಟ್ಟರೂ ಆಪಾದನೆಗಳಿಗೆ ತಲೆಬಾಗಿ ಜೈಲುಪಾಲಾದಾಗ ಹಣವನ್ನು ಕೂಡಿಸಿದ ಅಡ್ಡದಾರಿಯ ಬಗೆಗೆ ಜಿಗುಪ್ಸೆ ಹುಟ್ಟಬೇಕಾಗುತ್ತದೆ. ಹುಳುಕುಗಳನ್ನು ತಿಳಿಯಬೇಕಾಗುತ್ತದೆ.

ಸದ್ಗುರು ಚಂದ್ರಶೇಖರ ಭಾರತಿಗಳು ತಮ್ಮ ವ್ಯಾಖ್ಯಾನದಲ್ಲಿ ವಿಷ್ಣುಪುರಾಣದಿಂದ ಆಯ್ದ ಸೊಗಸಾದ ವಾಕ್ಯವೊಂದನ್ನು ಉದಾಹರಿಸುತ್ತಾರೆ.
"ಸ್ವದೇಹಾಶುಚಿಗಂಧೇನ ನ ವಿರಜ್ಯೇತ ಯಃ ಪುಮಾನ್ |
ವೈರಾಗ್ಯಕಾರಣಂ ತಸ್ಯ ಕಿಮನ್ಯದುಪದಿಷ್ಯತಾಮ್ || " ಎಂದು.
" ಯಾರಿಗೆ ತನ್ನ ಮೈಯಿನ ಬೆವರಿನ ವಾಸನೆಯು (ದೇಹದ ದುರ್ವಾಸನೆ) ಬಾಧಿಸಿ ಅದರ ಬಗೆಗೆ ಜಿಗುಪ್ಸೆಯನ್ನು ಹುಟ್ಟಿಸುವುದಿಲ್ಲವೋ ಆತನಿಗೆ ಯಾರು ತಾನೆ ವೈರಾಗ್ಯದ ಉಪದೇಶವನ್ನು ಮಾಡಲು ಸಾಧ್ಯ ?!" ಎಂದು ಸೊಗಸಾದ ವ್ಯಾಖ್ಯಾನವನ್ನು ಕೊಡುತ್ತಾರೆ. ಹಂತ-ಹಂತವಾಗಿ ಬಾಡಿ ಉದುರಿಹೋಗುವ ಈ ದೇಹದ ವಿಚಾರವಾಗಿ ಜಿಗುಪ್ಸೆಯು ಹುಟ್ಟಿ ಎಲ್ಲಾ ಸುಖ-ಭೋಗಗಳ ಮೇಲಿನ ಆಸಕ್ತಿಯು ನಿವಾರಣೆಯಾಗಿ ವೈರಾಗ್ಯವು ಹುಟ್ಟುವುದೇ ಎಲ್ಲವನ್ನೂ ’ಬಿಟ್ಟೆ’ ಎನ್ನುವ ಭಾವ ಎಂದು ಅರಿಯಬೇಕಾಗುತ್ತದೆ.

ಇಹದ ಭೋಗಗಳನ್ನೆನೋ ನೋಡಿ-ತಿಳಿದು ಆಸಕ್ತಿ ಕಳೆದುಕೊಂಡು ಜಿಗುಪ್ಸೆಯನ್ನು ತಾಳಬಹುದು. ಆದರೆ, ಪರದ ಬಗೆಗಿನ ಆಸಕ್ತಿಯು ನಿವಾರಣೆಯಾಗುವುದು ಹೇಗೆ ?. ಪರದ ಅಥವಾ ಸ್ವರ್ಗಸುಖದ ವಿಚಾರವನ್ನು ಇಹಲೋಕದಲ್ಲಿರುವವರು ಕೇಳಿ ತಿಳಿದುಕೊಳ್ಳಬೇಕೆ ಹೊರತು ಕಾಣಲಂತೂ ಸಾಧ್ಯವಿಲ್ಲ. ನಮ್ಮ ಪುರಾಣಗಳಲ್ಲಿ ಸ್ವರ್ಗಸುಖಗಳನ್ನು ರಸವತ್ತಾಗಿ ವರ್ಣಿಸಿರುವುದರಿಂದ ಪುರಾಣಶ್ರವಣದಿಂದಲೂ ಪರದ ಭೋಗವಸ್ತುಗಳ ಪ್ರತಿ ಆಸಕ್ತಿಯು ಹುಟ್ಟಿ ಆತ್ಮಾಭ್ಯಾಸಕ್ಕೆ ತೊಡಕಾಗುತ್ತದೆ. ’ಮುಂದಿನ ರಸ್ತೆಯಲ್ಲಿರುವ ಹೋಟೆಲಿನಲ್ಲಿ ರುಚಿಯಾದ ಮಸಾಲೆದೋಸೆ ಸಿಗುತ್ತದೆ’ ಎನ್ನುವುದನ್ನು ಕೇಳಿದಾಗಲೇ ಬಾಯಲ್ಲಿ ಒಂದೆರೆಡು ಹನಿ ನೀರೂರುವುದು ಮಾನವ ಸಹಜ ಗುಣ. ಆತ್ಮಾಭ್ಯಾಸದಲ್ಲಿ ತೊಡಗುವವರು ಇವುಗಳಿಂದಲೂ ಜಿಗುಪ್ಸೆಯನ್ನು ಹೊಂದಬೇಕಾಗುತ್ತದೆ.  ಪುರಾಣಗಳಿಂದ ತಿಳಿದುಕೊಳ್ಳುವ , ಕೇಳುವ ವಿಚಾರಗಳು ಮನಸ್ಸನ್ನು ಸ್ವರ್ಗಪ್ರಾಪ್ತಿಗೆ ಕಾರಣವಾಗುವ ಕರ್ಮಗಳೆಡೆಗೆ ಎಳೆದೊಯ್ಯುತ್ತದೆ. ಹಲವು ಮಹಾಯಾಗಗಳನ್ನು ಮಾಡಿ ಅದರ ಪುಣ್ಯಫಲದಿಂದ ಅನನ್ಯವಾದ ಸ್ವರ್ಗವನ್ನು ಪಡೆದರೂ ಅಲ್ಲಿಯೂ ಸುಖ-ಭೋಗಗಳನ್ನೇ ಅನುಭವಿಸುವುದರಿಂದ ಸಂಪಾದಿಸಿದ ಪುಣ್ಯವು ಕಡಿಮೆಯಾಗುತ್ತಾ (ಕ್ಷಯಿಸಿ) ಬಂದು ಕೊನೆಗೆ ಪುಣ್ಯವು ಬರಿದಾದ ನಂತರ ಯಾವುದಾದರೊಂದು ರೂಪದಲ್ಲಿ ಭೂಮಿಗೆ ಬೀಳಬೇಕಾಗುತ್ತದೆ. ಸ್ವರ್ಗದಲ್ಲಿ ಇರಲೇನೋ ಆಸೆಯಿರುತ್ತದೆ ಆದರೆ, ಪುಣ್ಯವು ಮುಗಿದ ನಂತರ ತಳ್ಳಿಸಿಕೊಂಡು ಬರಬೇಕಾಗುತ್ತದೆ. (ಭಗವದ್ಗೀತೆಯಲ್ಲಿ ಬರುವ ವಿಚಾರ).
ಸ್ವರ್ಗದ ಕತೆಯೂ ಹೀಗಿರುವಾಗ ಅದಾದರೂ ಏಕೆ ? ಅದೂ ಅನಿತ್ಯವೇ ಆಗಿದೆಯಲ್ಲಾ !, ಎಂಬ ಭಾವದಿಂದ ವೈರಾಗ್ಯವು ಹುಟ್ಟಬೇಕಾಗುತ್ತದೆ.  ದೇಹದಿಂದ ಮೊದಲಾಗಿ ಬ್ರಹ್ಮದವರೆಗಿನ ಎಲ್ಲಾ ಅನಿತ್ಯಗಳ ವಿಚಾರವನ್ನು ಕೇಳಿ-ನೋಡಿ-ತಿಳಿದು ಅದರಲ್ಲಿ ದೋಷಗಳನ್ನು ಕಂಡನಂತರ ಭೋಗವಸ್ತುಗಳ ಪ್ರತಿಯಾಗಿ ಜಿಗುಪ್ಸೆಯು ಹುಟ್ಟಿ ಆತ್ಮಾಭ್ಯಾಸಕ್ಕೆ ದಾರಿಯಾಗುತ್ತದೆ ಎಂದು ತಿಳಿಸುತ್ತಾರೆ.
ಆತ್ಮಜ್ಞಾನಕ್ಕೆ ಬ್ರಹ್ಮಸತ್ಯ ಜಗನ್ಮಿಥ್ಯಾ ಎಂದು ನಿಶ್ಚಯಿಸಿಕೊಳ್ಳುವುದು ಎಷ್ಟು ಮುಖ್ಯವೋ ವೈರಾಗ್ಯ ಸಾಧನೆಯ ಮೂಲಕ ಅದನ್ನು ಅನುಸರಿಸುವುದೂ ಅಷ್ಟೇ ಮುಖ್ಯ ಎಂದು ಸದ್ಗುರುಗಳು ವ್ಯಾಖ್ಯಾನಿಸುತ್ತಾರೆ.

ಇಹದ ಬಂಧನಕ್ಕೆ ಬೀಳುವ ಪರಿಯನ್ನು ಶ್ರೀ ರಾಮಕೃಷ್ಣ ಪರಮಹಂಸರು ಒಂದು ಕತೆಯ ಮೂಲಕ ಸೊಗಸಾಗಿ ಹೇಳುತ್ತಾರೆ.
"ಒಂದೂರಿನಲ್ಲಿ ಒಬ್ಬ ಸಾಧು ವಾಸಮಾಡುತ್ತಿದ್ದ. ಪ್ರತಿದಿನ ಸ್ನಾನಮಾಡಿದ ನಂತರ ತನ್ನ ಲಂಗೋಟಿಯನ್ನು ಕುಟೀರದೊಳಗೆ ಹರವುತ್ತಿದ್ದ. ಒಂದು ಇಲಿ ಬಂದು ಆತನ ಲಂಗೋಟಿಯನ್ನು ದಿನವೂ ಕಚ್ಚಿಕೊಂಡು ಹೋಗುತ್ತಿತ್ತು. ಸಾಧುವಿಗೆ ಲಂಗೋಟಿಯನ್ನು ಹೊಂದಿಸಲು ಕಷ್ಟವಾಗಿ ಇಲಿಯಿಂದ ಪಾರಾಗಲು ಬೆಕ್ಕನ್ನು ಸಾಕಿದನಂತೆ. ಬೆಕ್ಕಿನ ಹೊಟ್ಟೆಯನ್ನು ತಣಿಸಲು ಹಾಲಿಗಾಗಿ ಹಸುವನ್ನು ಸಾಕಿದನಂತೆ. ಹಸುವಿನ ಮೇವಿಗಾಗಿ ಒಂದು ಹೊಲವನ್ನು  ಬೇಡಿ ಪಡೆದುಕೊಂಡು ಹುಲ್ಲನ್ನು ಬೆಳೆದನಂತೆ. ಒಬ್ಬನಿಂದಲೇ ಹೊಲವನ್ನು ನೊಡುವುದು ಕಷ್ಟವಾಗಿ ಕೆಲವು ಆಳುಗಳನ್ನು ಹೊಂದಿಸಿಕೊಂಡನಂತೆ. ಆಳುಗಳ ಊಟೋಪಚಾರಕ್ಕಾಗಿ ಒಬ್ಬಳನ್ನು ಮದುವೆಯಾದನಂತೆ, ನಂತರ ಮಕ್ಕಳಾಯಿತಂತೆ !.  ಕೊನೆಗೆ ಅವನೊಬ್ಬ ದೊಡ್ಡ ಬೇಸಾಯಗಾರನೂ ಗ್ರಾಮದ ಮುಖಂಡನೂ ಆಗಿ ಸಂಸಾರದೊಳಗೆ ಸೇರಿಕೊಂಡನಂತೆ". ಇಷ್ಟೆಲ್ಲಾ ಆಗಿದ್ದು ಕೇವಲ ಒಂದು ಲಂಗೋಟಿಯ ಸಲುವಾಗಿ !. ಒಂದು ಸಣ್ಣವಸ್ತುವಿನ ಮೇಲಿನ ಆಸಕ್ತಿಯೂ ಕೂಡ ಆತ್ಮಾಭ್ಯಾಸಿಗೆ ಹೇಗೆ ತೊಡಕಾಗಬಹುದು ಎಂಬುದನ್ನು ಹೀಗೆ ನಿರೂಪಿಸುತ್ತಾರೆ.

ಮುಂದಿನ ಕಂತಿನಲ್ಲಿ ಶಮದಮಾದಿ ಆರು ಗುಣಗಳ ವಿಷಯವನ್ನು ತಿಳಿಯೋಣ.

ವಂದನೆಗಳೊಂದಿಗೆ...
--------------------------------------------------------