ಚಿತ್ರ ಋಣ : ಅಂತರ್ಜಾಲ
ಎಲ್ಲಿಯ ಸಂಬಂಧ ?
ಮಾನವ ಜೀವನ ಭಾವನೆಗಳ ಸರಕೊಂಡಿ ಬೆಸೆದಿಹ ಸಂಕೋಲೆ
ನಾವಿದನರಿತರು ಹೊರಬರಲಾರೆವು
ಕಂಡೂ ತೂಗುವ ಉಯ್ಯಾಲೆ
ಹುಟ್ಟುವುದೆಲ್ಲೋ ಸಾವು ಅದೆಲ್ಲೋ
ಗೊತ್ತಿರದಾ ಹಲಪುಟಗಳಿವು
ಒಟ್ಟಿಗೆ ಇರಲೂ ಒಮ್ಮನಸಿಲ್ಲದ
ಉತ್ತರ ರಹಿತ ಪ್ರಶ್ನೆಗಳು
ಬಂದಿಹೆವಿಲ್ಲಿ ಬರಿಗೈಯ್ಯಲ್ಲಿ
ಬಂಧನ ಮರೆತು ಮೆರೆಯುವೆವು
ಸಂದುವೆವಲ್ಲಿ ಬರಿಮೈಯ್ಯಲ್ಲಿ
ಅಂದಿಗೆ ಬಿಡುಗಡೆ ಕಾಣುವೆವು !
ನಾನೊಬ್ಬಣ್ಣ ನೀನೋ ತಮ್ಮ
ಅಪ್ಪಾ ಅಮ್ಮಾ ಕಣ್ಣೊಡೆಯೆ
ಈ ದಿಬ್ಬಣವು ಇಲ್ಲಿಗೆ ಮಾತ್ರ
ಯಾರಿಹರು ನೀ ಹೊರನಡೆಯೆ ?
ಯಾರ ಮಗನು ನೀ ಯಾರ ಮಗಳು ನೀ ?
ಯಾರಿಗೆ ನೀನು ಯಜಮಾನ ?
ಬಾರಿ ಬಾರಿ ನೀ ಕೇಳಿಕೊ ಇದನೇ
ಸಾರುವೆ ನಿನಗೆ ಬಹುಮಾನ !
--- [ ನಿಮ್ಮೊಡನೆ ವಿ.ಆರ್.ಭಟ್ ವಿಭಾಗದ ' ಚಿಂತನಶೀಲ ಕವನಗಳು' ಸಂಕಲನದಿಂದ ]