Pages

Tuesday, October 13, 2015

ದೇವಾಲಯಗಳಲ್ಲಿ ಶುಷ್ಕ ಪೂಜೆಗಳಿಗಿಂತ ಜ್ಞಾನಪ್ರಸರಣ ತುರ್ತಾಗಿ ನಡೆಯಬೇಕಾಗಿದೆ

 ಶರನ್ನವರಾತ್ರಿಯ  ಮೊದಲದಿನವಾದ ಇಂದು ವಿಜಯವಾಣಿಯಲ್ಲಿ ಡಾ.ಕೆ.ಎಸ್.ನಾರಾಯಣಾಚಾರ್ಯರ ಮನದಾಳದ ನೇರ-ದಿಟ್ಟ  ನುಡಿಗಳನ್ನು ಓದಿದ ಮೇಲೆ ದಿಕ್ಕೆಟ್ಟ ಜನರಿಗೆ ಸೂಕ್ತ ಮಾರ್ಗದರ್ಶಕರು ಈ ದೇಶದಲ್ಲಿ  ಇನ್ನೂ  ಇದ್ದಾರೆಂಬ ಭಾವನೆಯಿಂದ ನನ್ನ ಚಟುವಟಿಕೆಗಳಿಗೆ ಇನ್ನಷ್ಟು ವೇಗವನ್ನು ಕೊಡಬೇಕೆಂದು ಮನದಲ್ಲೇ ನಿರ್ಧರಿಸಿಕೊಂಡೆ.
ಈ ದೇಶ ಉದ್ಧಾರವಾಗಬೇಕಾದರೆ..... ಲೇಖನದ ಕೊನೆಯ ಮಾತು ದೇವಾಲಯಗಳಲ್ಲಿ  ಶುಷ್ಕ ಪೂಜೆಗಳಿಗಿಂತ ಜ್ಞಾನಪ್ರಸರಣ ತುರ್ತಾಗಿ ನಡೆಯಬೇಕಾಗಿದೆ ಎಂಬ ಮಾತು ಇಂದಿಗೆ ಅತ್ಯಂತ ಮಹತ್ವವನ್ನು ಪಡೆಯುತ್ತದೆ. ನನಗೆ ಲೇಖನ ಓದುವಾಗ ಹಾಸನದ ಶಂಕರಮಠದಲ್ಲಿ ಈಗ್ಗೆ ಸುಮಾರು ಎಂಟು ಹತ್ತು ವರ್ಷಗಳಲ್ಲಿ ವಿಜಯದಶಮಿ ಸಂದರ್ಭಗಳಲ್ಲಿ ನಾವು ಆಯೋಜಿಸುತ್ತಿದ್ದ  ಜ್ಞಾನಯಜ್ಞದ ನೆನಪಾಗುತ್ತಿದೆ. ಗದಗ್ ಶ್ರೀರಾಮಕೃಷ್ಣಾಶ್ರಮದ ಪೂಜ್ಯ ನಿರ್ಭಯಾನಂದರು, ತುಮಕೂರಿನ ಪೂಜ್ಯ ವೀರೇಶಾನಂದರು, ಬೆಂಗಳೂರು ಭವತಾರಣಿ ಆಶ್ರಮದ ಮಾತಾಜಿ ವಿವೇಕಮಯೀ, ಚಿನ್ಮಯಾಮಿಷನ್ನಿನ ಬ್ರಹ್ಮಚಾರಿ ಸುಧರ್ಮಚೈತನ್ಯರು, ಹುಬ್ಬಳ್ಳಿಯ ಪೂಜ್ಯ ಚಿದ್ರೂಪಾನಂದಸರಸ್ವತೀ, ಬೆಂಗಳೂರಿನ ವೇದಾಧ್ಯಾಯೀ ಶ್ರೀಸುಧಾಕರಶರ್ಮರು. . . . ಇವರೆಲ್ಲಾ ಬಂದು ನಡೆಸಿಕೊಡುತ್ತಿದ್ದ ಉಪನ್ಯಾಸಗಳು! ಅಬ್ಬಾ! ಒಂದೇ ಎರಡೇ!!
ಈಗಲೂ ಹಲವು ಮಿತ್ರರು ನನ್ನನ್ನು ಆಗಿಂದಾಗ್ಗೆ ಕೇಳುತ್ತಾರೆ ಯಾಕೆ ಉಪನ್ಯಾಸಗಳನ್ನು ನಡೆಸುವುದನ್ನು ನಿಲ್ಲಿಸಿ ಬಿಟ್ಟಿರಿ? ನಿಲ್ಲಿಸಿಲ್ಲ. ನನ್ನ ಕಾರ್ಯಚಟುವಟಿಕೆಗಳಲ್ಲಿ ಸ್ವಲ್ಪ ಬದಲಾವಣೆಯಾಗಿದೆ. ನಮ್ಮ ಮನೆ ಈಶಾವಾಸ್ಯಮ್ ನಲ್ಲಿ ಪ್ರತೀ ದಿನ ಸತ್ಸಂಗದಲ್ಲಿ ವೇದಭಾರತಿಯು ಇದೇ ಕೆಲಸವನ್ನು ಮಾಡುತ್ತಿದೆ-ಎನ್ನುತ್ತೇನೆ.
ಹೌದು ಶ್ರೀ ನಾರಾಯಣಾಚಾರ್ಯರ ಮಾತು ಎಷ್ಟು ಅರ್ಥಗರ್ಭಿತ! ದೇವಾಲಯಗಳಲ್ಲಿ  ಶುಷ್ಕ ಪೂಜೆಗಳಿಗಿಂತ ಜ್ಞಾನಪ್ರಸರಣ ತುರ್ತಾಗಿ ನಡೆಯಬೇಕಾಗಿದೆ ಇಂದಿನಿಂದ ಬಹುತೇಕ ದೇವಾಲಯಗಳಲ್ಲಿ ದುರ್ಗಾಮಾತೆಗೆ ಪ್ರತೀ ದಿನ ಒಂದೊಂದು ಅಲಂಕಾರ, ಹವನ-ಹೋಮಗಳು, ಪೂಜೆ ಪುನಸ್ಕಾರಗಳು ನಡೆಯುತ್ತವೆ. ಜನರು ಸಾಲುಗಟ್ಟಿ ದುರ್ಗೆಯ ದರ್ಶನ ಪಡೆಯುತ್ತಾರೆ. ಉತ್ತಮ ಕಾರ್ಯವೇ ಆಗಿದೆ. ಆದರೆ ಅಷ್ಟೇ ಸಾಕೇ? ಇವೆಲ್ಲವೂ ನಾವು ನೆಮ್ಮದಿಯಾಗಿರಬೇಕೆಂದು ಮಾಡುವ ದೇವತಾ ಕಾರ್ಯಗಳು ತಾನೇ? ಆದರೆ ನಿಜವಾಗಿ ನಮ್ಮ ಮನೆಗಳಲ್ಲಿ ನೆಮ್ಮದಿ ಇದೆಯೇ? ಸುಖ ಇದೆಯೇ? ಆನಂದಕ್ಕೆ ಆಸ್ಪದ ಇದೆಯೇ? ಮಕ್ಕಳೇ ಮನೆಗೆ ಆಸ್ತಿ ಅಲ್ಲವೇ? ಅವರು ನಿಜವಾಗಿ ಆಸ್ತಿಯಾಗಿದ್ದಾರಾ? ಒಂದು ವೇಳೆ ನಮ್ಮ ನಿರೀಕ್ಷೆಗೆ ತಕ್ಕಂತೆ ಅವರಿಲ್ಲವೆಂದಾದರೆ ತಪ್ಪು ಯಾರದ್ದು? ಮಕ್ಕಳದ್ದೇ? ಅಥವಾ ಪೋಷಕರದ್ದೇ?
ದೇವಾಲಯಗಳಲ್ಲಿ ನೋಡಿ, ಸಾಮಾನ್ಯವಾಗಿ ನಲವತ್ತು ವಯಸ್ಸಿನ ಮೇಲ್ಪಟ್ಟವರಿಂದಲೇ ತುಂಬಿರುತ್ತದೆ! ಉಪನ್ಯಾಸ ಕಾರ್ಯಕ್ರಮಗಳಿಗೆ ಬರುವವರು ಯಾರು? ಕಿವಿ ಮಂದವಾಗಿರುವ             ದೃಷ್ಟಿ ಕಮ್ಮಿಯಾಗಿರುವ! ಅರವತ್ತು ದಾಟಿದ ಎಪ್ಪತ್ತು ಎಂಬತ್ತರ ವೃದ್ಧರಿಗೆ ಉಪನ್ಯಾಸ! ಅವರಿಗೆ ವಿಷಯ ಯಾವುದಿರಬೇಕೋ ಅದಿರುತ್ತದೆ. ಆದರೆ ನಮ್ಮ ಯುವಕರು ಉಪನ್ಯಾಸಗಳಿಗೆ ಬರುತ್ತಾರಾ? ಬರುವುದಿಲ್ಲವಾದರೆ ಕಾgಣ ಏನು? ಅವರನ್ನು ಆಕರ್ಷಿಸುತ್ತಿರುವ ವಿಷಯಗಳು ಯಾವುವು? ಆಕರ್ಷಣೆಗೆ ಒಳಗಾಗುವ ವಿಷಯಗಳ ಪ್ರಭಾವ ಏನು? ಯುವಕರು ನಮ್ಮ ದೇಶದ ಸಂಪತ್ತೆಂಬುದು ನಮ್ಮ ನೆಚ್ಚಿನ ಪ್ರಧಾನಿಯವರ ಆಶಯ. ಆದರೆ ಎಷ್ಟು ಯುವಕರು ನಮ್ಮ ದೇಶಕ್ಕೆ ಆಸ್ತಿಯಾಗಿದ್ದಾರೆ! ಯುವ ಶಕ್ತಿಯ ಎಷ್ಟುಭಾಗ ದೂರದರ್ಶನದ ಮುಂದೆ ಕ್ರಿಕೆಟ್ ಪಂದ್ಯ ನೋಡುತ್ತಲೋ, ಅಂತರ್ಜಾಲದಲ್ಲಿ ಬೆತ್ತಲೆದೃಶ್ಯ ನೋಡುವುದರಲ್ಲೋ ಕಳೆದು ಹೋಗಿದೆ? ನಮ್ಮ ದೇಶದ ಎಷ್ಟು ಯುವಕರಿಗೆ ದೇಶಭಕ್ತಿ ಇದೆ? ದೇಶಕ್ಕಾಗಿ ನನ್ನ ಬದುಕು !! ಎನ್ನುವ ಮನೋಭಾವದ ಯುವಕರೆಷ್ಟು ಜನರಿದ್ದಾರೆ!!
ದೇಶದ ಇಂತಾ ದೊಡ್ದ ಯುವಸಂಪತ್ತಿನ ಉಪಯೋಗ ದೇಶಕ್ಕೆ ಸರಿಯಾಗಿ ಆಗಬೇಡವೇ? ಹಳ್ಳಿಗಳಲ್ಲಂತೂ ಪುಡಾರಿಗಳ ಹಿಂದೆ ಸುತ್ತುವ ಯುವಕರನ್ನು ನೋಡಿದಾಗ ಬಲು ದುಃಖವಾಗುತ್ತದೆ. ಇವರಲ್ಲಿ ಜಾಗೃತಿ ಮಾಡುವುದು ಯಾವಾಗ? ಯಾರು ಜಾಗೃತಿ ಕೆಲಸ ಮಾಡಬೇಕು!
ನಿಜವಾಗಿ ಅಂತಾ ಕೆಲಸ ಕೂಡ ನಡೆಯುತ್ತಿದೆ. ರಾ.ಸ್ವ. ಸಂಘ , ಪತಂಜಲಿ ಯೋಗ ಪೀಠ, ರಾಮಕೃಷ್ಣ ಮಿಷನ್, ಮುಂತಾದ ಸಂಘಟನೆಗಳು ಮಾಡುತ್ತಿವೆ. ಆದರೂ ಸಾಲದು. ನಮ್ಮ ಜನಸಂಖ್ಯೆಗೆ ಹೋಲಿಸಿದಾಗ ಕೆಲಸದ ವೇಗ ಇನ್ನೂ ಹೆಚ್ಚಬೇಕು.
ನಾರಾಯಣಾಚಾರ್ಯರು ತಮ್ಮ ಲೇಖನದಲ್ಲಿ  ದೇಶವನ್ನು ಕಾಡುತ್ತಿರುವ ಹಲಾವಾರು ಸಮಸ್ಯೆಗಳ ಬಗ್ಗೆ ಓದುಗರ ಕಣ್ ತೆರೆಸುವ ಪ್ರಯತ್ನ ಮಾಡಿದ್ದಾರೆ. ಪ್ರತಿಯೊಂದು ವಿಷಯಗಳೂ ಒಂದು ಲೇಖನ ಬರೆಯುವಷ್ಟು ಮಹತ್ವ ಉಳ್ಳ ವಿಷಯಗಳೇ ಆಗಿವೆ. ಕೊನೆಯಲ್ಲಿ ಸಮಸ್ಯೆಗಳ ಪರಿಹಾರಕ್ಕೆ ಅವರ ಒಂದು ಸಲಹೆ ಗಮನಾರ್ಹ.  ಸಾಮಾಜಿಕ ಸಾಮರಸ್ಯಕ್ಕಾಗಿ ನಾವು ಹಳಬರ ಮಾರ್ಗದರ್ಶನಕ್ಕೆ ಮೊರೆ ಹೋಗಬೇಕು. ಶ್ರೀರಾಮಕೃಷ್ಣ, ವಿವೇಕಾನಂದ,ನಾರಾಯಣಗುರು, ಫುಲೆ, ಅಮೃತಾನಂದಮಯೀ. ಚಿನ್ಮಯಾನಂದ, ದಯಾನಂದರ ವಿಚಾರಧಾರೆಗಳು ಒಟ್ಟಾಗಿ ಇತ್ತ ಶ್ರಮಿಸಬೇಕು
ಈ ಮೇಲಿನ ಸಲಹೆಯಿಂದ ನನಗೆಷ್ಟು ಸಮಾಧಾನವಾಗಿದೆ ಎಂದರೆ ನಾವೀಗ ವೇದಭಾರತಿ ಮತ್ತು ಪತಂಜಲಿ ಯೋಗ ಪೀಠ ಒಂದು ವೇದಿಕೆಯಲ್ಲಿ ಎಲ್ಲರಿಗಾಗಿ ವೇದ, ಎಲ್ಲರಿಗಾಗಿ ಯೋಗ ಎಂಬ ಉದ್ದೇಶದೊಡನೆ ಚಟುವಟಿಕೆಯನ್ನು ಈ ವರ್ಷ ವಿಶ್ವ ಯೋಗದಿನದಿಂದ ಆರಂಭಿಸಿದ್ದೇವೆ. ಈಗಾಗಲೇ ನೂರಾರು ಜನರಿಗೆ ಯೋಗದ ತರಬೇತಿ, ವೇದದ ಅರಿವು ಮೂಡಿಸುವ ಕೆಲಸ ಸಾಗಿದೆ  ವೇದ-ಯೋಗ ಸಂಗಮದ ಹೆಸರಲ್ಲಿ. ಜನರ ಸಹಕಾರ ಪಡೆದು ನಮ್ಮ ಕಾರ್ಯವೇಗವನ್ನು ಹೆಚ್ಚಿಸಬೇಕೆಂಬ ಉದ್ದೇಶವೂ ಇದೆ.
-ಹರಿಹರಪುರಶ್ರೀಧರ್
ಸಂಯೋಜಕ, ವೇದಭಾರತೀ, ಹಾಸನ