Pages

Saturday, March 28, 2015

ವೇದದ ಅರಿವನ್ನು ಮೂಡಿಸುವ ಕೆಲಸವನ್ನು ವೇದದ ಅಭಿಮಾನಿಗಳು ಮಾಡಬೇಕು

ಯುವ ಮಿತ್ರರು ಕೆಲವರು ಎಲ್ಲೆಲ್ಲೋ ಹುಡುಕಿ ವೇದಕ್ಕೆ ಅಪಚಾರವಾಗುವ ಸಂಗತಿಗಳನ್ನು ತಮ್ಮ ಬರಹಗಳಲ್ಲಿ ಕೋಟ್ ಮಾಡುತ್ತಿದ್ದಾರೆ. ಅವರಿಗೆ ಪುಷ್ಠಿ ಕೊಡುವ ವಿಚಾರ ಎಂದರೆ ಆ ಮಾತು ವಿವೇಕಾನಂದರೇ ಹೇಳಿದ್ದು, ಶಂಕರಾಚಾರ್ಯರೇ ಹೇಳಿದ್ದು .ಅಂತಾ ಮಹಾಮಹಿಮರೇ ಹೇಳಿದಮೇಲೆ ವೇದವು ಗೋಹತ್ಯೆಗೆ ಅವಕಾಶ ಮಾಡಿಕೊಟ್ಟಿದೆ, ವೇದದಲ್ಲಿ ಅಸಮಾನತೆಗೆ ಅವಕಾಶವಿದೆ.....ಹೀಗೆಲ್ಲಾ ಬರೆಯುತ್ತಿದ್ದಾರೆ. ಅಂತಾ ಮಿತ್ರರಲ್ಲಿ ನನ್ನದು ಒಂದು ಪ್ರಶ್ನೆ ಇದೆ. ಯಾಕೆ ನಿಮಗೆ ವೇದದಲ್ಲಿ ಸದ್ವಿಚಾರಗಳು ಕಾಣಲೇ ಇಲ್ಲವೇ?-ಇದು ಮೊದಲನೆಯದು. ಎರಡನೆಯದೆಂದರೆ ಒಂದು ವೇಳೆ  ವೇದಕ್ಕೆ ಅಪಚಾರವಾಗುವಂತಾ ಸಂಗತಿಗಳು ವೇದಲ್ಲಿವೆ ಎಂದು ಯಾರೇ ಬರೆದಿದ್ದರೂ ಅದು ಸ್ವೀಕಾರಾರ್ಹವಲ್ಲ. ಮೂರನೆಯ ಮತ್ತು ಕಟ್ಟಕಡೆಯ ಸಂಗತಿ ಎಂದರೆ ಮೂಲ ವೇದದಲ್ಲಿ ಇಂತಾ ಮಾನವ ವಿರೋಧಿ ಸಂಗತಿಗಳಿವೆ ಎಂದು ಯಾರಾದರೂ  ಪ್ರೂವ್ ಮಾಡಿದರೆ ಅಂತಾ ವೇದದಿಂದ ಆಗಬೇಕಾದ್ದೇನಿದೆ? ಅದನ್ನು ಅಧ್ಯಯನ ಮಾಡಬೇಕೇಕೇ?

ಮತ್ತೆ ಮತ್ತೆ ಹೇಳುವೆ. ನಮ್ಮ ಋಷಿಮುನಿಗಳು ಸಾವಿರಾರು ವರ್ಷಗಳು ತಪಸ್ಸು ಮಾಡಿ ಕಂಡುಕೊಂಡ  ಸತ್ಯವೇ ವೇದ. ಅದು ಮಾನವತೆಯನ್ನು ಉಳಿಸಲು, ನೆಮ್ಮದಿಯ ಜೀವನ ಮಾಡಲು, ಸಾಮಾಜಿಕ ಸದ್ಭಾವನೆಗೆ ಇರುವ ಸೂತ್ರಗಳು. ಅದನ್ನು ವಿರೋಧಿಸುವುದೆಂದರೆ ಮಾನವೀಯ ಮೌಲ್ಯಗಳನ್ನು ವಿರೋಧಿಸಿದಂತೆಯೇ. ಯಾರೋ ಸ್ವಾರ್ಥಕ್ಕಾಗಿ ಬರೆದುಕೊಂಡಿರುವ ಪ್ರಾಣಿಬಲಿಯನ್ನು ಪ್ರೋತ್ಸಾಹಿಸುವ,  ಮೇಲು-ಕೀಳು ಭಾವನೆಯನ್ನು ಬಿತ್ತುವ  ಸಾಹಿತ್ಯವನ್ನು ಹುಡುಕಿ ಹುಡುಕಿ ಓದುವಿರೇಕೇ? ಇದರಿಂದ ಆರೋಗ್ಯಕರ ಸಮಾಜ ಕಟ್ಟಲು ಸಾಧ್ಯವೇ? ನಾನು ಬರೆದಿರುವ ಪುಸ್ತಕದ ಬಗ್ಗೆ ನಾನೇ ಹೇಳುವುದು ಉಚಿತವಲ್ಲ. ಆದರೂ ಸಾಮಾಜಿಕ ಸದ್ಭಾವನೆಯನ್ನು ಅರಳಿಸುವ ಅದೆಷ್ಟು ಮಂತ್ರಗಳಿವೆ-ಎಂಬುದನ್ನು ನನ್ನ  " ಜೀವನವೇದ " ಪುಸ್ತಕವನ್ನು ಓದಿ, ನಂತರ ಹೇಳಿ.

ನಾನೇನೂ ವೇದವನ್ನು ಅರೆದು ಕುಡಿದಿಲ್ಲ. ಆದರೆ ಮಾನವೀಯ ಮೌಲ್ಯಗಳನ್ನು ಬಿತ್ತುವ ನೂರಾರು ಮಂತ್ರಗಳ ಅರ್ಥವನ್ನು  ಪಂಡಿತ್ ಸುಧಾಕರ ಚತುರ್ವೇದಿಗಳು, ವೇದಾಧ್ಯಾಯೀ ಶ್ರೀ ಸುಧಾಕರಶರ್ಮರಿಂದ ತಿಳಿದುಕೊಂಡಿದ್ದೇನೆ. ಸಾಮಾಜಿಕ ಸದ್ಭಾವನೆಯನ್ನು ಕಾಪಾಡುವ ಇಂತಾ ವಿಚಾರಗಳನ್ನು ಪಡೆಯುವ ಬದಲು ಯಾರೋ ಸ್ವಾರ್ಥಪರರು ಬರೆದಿರುವ ಮಾನವವಿರೋಧೀ ಅಂಶಗಳನ್ನು ಹುಡುಕುವಿರೇಕೇ?

ವೇದದ ಪರ ವಕಾಲತ್ತು ವಹಿಸುವ ಮಿತ್ರರಲ್ಲೂ ನನ್ನ ನಿವೇದನೆ ಇದೆ. ಅದೇನೆಂದರೆ ಈ ಗೊಂದಲಗಳಿಗೆಲ್ಲಾ ಕಾರಣ ಅರಿವಿನ ಕೊರತೆ, ಅಷ್ಟೆ. ಇದನ್ನು ಯಾವುದೇ ಜಾತಿಯ ಪರ-ವಿರುದ್ಧ ಎಂದು ಭಾವಿಸಬೇಕಾಗಿಲ್ಲ. ವೇದದಲ್ಲಿ ಜಾತಿಯೆಂಬುದೇ ಇಲ್ಲ. ಇಷ್ಟೆಲ್ಲಾ ಗೊಂದಲಕ್ಕೆ ಕೆಲವೇ ಶತಮಾನಗಳಿಂದ ಆಚರಣೆಯಲ್ಲಿರುವ ಜಾತಿ ಪದ್ದತಿಯೇ ಕಾರಣ. ಜಾತಿ-ಜಾತಿ ನಡುವಿನ ದ್ವೇಷವು ಜನರನ್ನು ಹುಚ್ಚರನ್ನಾಗಿಸಿದೆ. ಮಾನವಕೋಟಿ ಒಂದೇ ಎಂಬ ಭಾವನೆ ಇಂದಿನ ಪರಿಸ್ಥಿತಿಯಲ್ಲಿ ಮೂಡುವುದು ಕಷ್ಟವಾದರೂ ವೇದದ ಅಭಿಮಾನಿಗಳು ಜಾತಿ-ಜಾತಿ ನಡುವೆ ಸದ್ಭಾವನೆಯನ್ನು ಅರಳಿಸುವ ಕೆಲಸವನ್ನು ಮಾಡಬೇಕೇ ಹೊರತೂ ಕಂದಕವನ್ನು ಹಿರಿದು ಮಾಡುವ ಕೆಲಸವನ್ನು ಮಾಡಲೇ    ಬಾರದು. ವೇದದ ಅರಿವಿಲ್ಲದಿದ್ದವರಿಗೆ ವೇದದ ಅರಿವನ್ನು ಮೂಡಿಸುವ ಕೆಲಸವನ್ನು ವೇದದ ಅಭಿಮಾನಿಗಳು ಮಾಡಬೇಕು.ಇದಕ್ಕೆ ಬಲು ತಾಳ್ಮೆ ಬೇಕು.