Pages

Sunday, January 19, 2014

ಜೀವನ ವೇದ-2


                                       
ಒಂದು ಸಂಮೃದ್ಧವಾದ ಮನೆ ಅಂದರೆ ಹೇಗಿರಬೇಕು? ಮನೆಯ ಯಜಮಾನ ಹೇಗಿರಬೇಕು? ಎಂಬ ವಿಚಾರವನ್ನು  ಅಥರ್ವಣ ವೇದದಲ್ಲಿನ ಒಂದು ಮಂತ್ರದಲ್ಲಿ ಹೀಗೆ ಹೇಳಿದೆ.

ಇಮೇ ಗೃಹಾ ಮಯೋಭುವ ಊರ್ಜಸ್ವಂತ: ಪಯಸ್ವಂತ:|
ಪೂರ್ಣಾ ವಾಮೇನ ತಿಷ್ಠಂತಸ್ತೇ ನೋ ಜಾನಂತ್ವಾಯತ: ||

[ಅಥರ್ವಣದ ೭ನೇ ಕಾಂಡದ ೬೦ನೇ ಸೂಕ್ತದ ೨ನೇ ಮಂತ್ರ]

ಈ ಮಂತ್ರದ ಅರ್ಥವೇನೆಂದರೆ ನಮ್ಮ ಮನೆಗಳು ಆಹಾರಧಾನ್ಯಗಳಿಂದಲೂ ಹಾಲು ಮೊಸರಿನಿಂದಲೂ ತುಂಬಿದ್ದು,ಎಲ್ಲರಿಗೂ ಈ ಮನೆಯಲ್ಲಿ ಸುಖಶಾಂತಿ ನೆಮ್ಮದಿ ಸಿಗುವಂತಾಗಲೀ.
ಈ ಮಂತ್ರವನ್ನು ಹೇಗೆ ಅರ್ಥಮಾಡಿಕೊಳ್ಳ ಬೇಕು? ಒಂದು ಗೌರವಯುತ ಗೃಹವೆಂದರೆ ಆ ಮನೆಯಲ್ಲಿ ಆಹಾರಧಾನ್ಯದ ಸಂಗ್ರಹವಿರಬೇಕು.ಆಹಾರಧಾನ್ಯದ ಸಂಗ್ರಹವಿರಬೇಕೆಂದರೆ ಆ ಮನೆಯೊಡೆಯ ಆಹಾರಧಾನ್ಯವನ್ನು ಸಂಮೃದ್ಧವಾಗಿ ಬೆಳೆದಿರಬೇಕು.ಹಾಲು ಮೊಸರು ಸದಾಕಾಲವಿರುವಂತೆ ಹಸುಕರುಗಳನ್ನು ಸಾಕಿಕೊಂಡಿರಬೇಕು. ಮನೆಗೆ ಅತಿಥಿಗಳು ಸಂತೋಷದಿಂದ ಬಂದುಹೋಗುವಂತಿರಬೇಕು. ಮನೆಯಲ್ಲಿ ಸುಖಶಾಂತಿ ನೆಮ್ಮದಿ ನೆಲಸಿರಬೇಕು.

ಮನೆಯ ಯಜಮಾನ ಹೇಗಿರಬೇಕು?

ಊರ್ಜಂ ಬಿಭ್ರದ್ ವಸುವನೀ ಸುಮೇಧಾ
ಅಘೋರೇಣ ಚಕ್ಷುಷಾಮಿತ್ರಿಯೇಣ|
ಗೃಹಾನೈಮಿ ಸುಮನಾ ವಂದಮಾನೋ
ರಮಧ್ವಂ ಮಾ ಬಿಭೀತ ಮತ್||
[ಅಥರ್ವಣದ ೭ನೇ ಕಾಂಡದ ೬೦ನೇ ಸೂಕ್ತದ ೧ನೇ ಮಂತ್ರ]

 ಈ ಮಂತ್ರದ ಅರ್ಥ ಹೀಗಿದೆ. ಮನೆಯ ಯಜಮಾನನು ಶಕ್ತಿವಂತನಾಗಿರಬೇಕು, ಧನಾರ್ಜನೆ ಮಾಡುತ್ತಿರಬೇಕು,ಮೇಧಾವಂತನಾಗಿರಬೇಕು,ಮನೆಯ ಸದಸ್ಯರೊಡನೆ ಕ್ರೋಧರಹಿತನೂ,ಸ್ನೇಹಪೂರ್ಣ ಕಣ್ಣುಗಳಿಂದ ನೋಡುವವನೂ, ಸುಪ್ರಸನ್ನ ಮನಸ್ಸುಳ್ಳವನೂ,ಎಲ್ಲರಿಂದ ಪ್ರಶಂಸಿಸಲ್ಪಡುವವನೂ ಆಗಿದ್ದು ಮನೆಯ ಸದಸ್ಯರಿಗೆ  ನೀವು ನನಗೆ ಹೆದರಬೇಕಾಗಿಲ್ಲ, ಸಂತೋಷದಿಂದಿರಿ, ಎಂಬ ಸಂತೈಸುವ ಮಾತುಗಳನ್ನಾಡುತ್ತಾ ಎಲ್ಲರೊಡನೆ ಆನಂದದಿಂದ ಪ್ರಸನ್ನನಾಗಿರಬೇಕು.

ಈ ಮಂತ್ರದ ಒಂದೊಂದೂ ಶಬ್ಧಗಳೂ ಅತ್ಯಂತ ಮಹತ್ವ ಉಳ್ಳವುಗಳೇ ಆಗಿವೆ. ಈ ಮಂತ್ರದ ಒಂದೊಂದೇ ಶಬ್ಧದ ಬಗ್ಗೆ ವಿಚಾರ ಮಾಡೋಣ. ಮನೆಯ ಯಜಮಾನನಿಗಿರಬೇಕಾದ ಪ್ರಥಮ ಅರ್ಹತೆ ಎಂದರೆ.. . . . . .

ಊರ್ಜನ್ ಬಿಭ್ರತ್

ಊರ್ಜಮ್ ಎಂದರೆ ಪ್ರಾಣಬಲ ಅಥವಾ ಶಕ್ತಿ, ಬಿಭ್ರತ್ ಅಂದರೆ ಧಾರಣೆ ಮಾಡು, ಅಂದರೆ ಮನೆಯ ಯಜಮಾನನು ಶಕ್ತಿಯನ್ನು ಹೊಂದಿದವನಾಗಿರಬೇಕು. ಈ ಸಂಸಾರವೆಂಬುದು ಸಾಗರ. ಈ ಸಾಗರವನ್ನು ದಾಟಲು ಶಕ್ತಿ ಬೇಡವೇ? ವೈದಿಕ ಸಂಸ್ಕೃತಿಯಲ್ಲಿ ದುರ್ಬಲನಿಗೆ ಗೃಹಸ್ಥಾಶ್ರಮದಲ್ಲಿ ಪ್ರವೇಶವೇ ಇಲ್ಲ.
 ಮನು ಹೇಳುತ್ತಾನೆ ಯೋಧಾರ್ಯೋ ದುರ್ಬಲೇಂದ್ರಿಯೈ: ದುರ್ಬಲ ಇಂದ್ರಿಯ ಉಳ್ಳವರು ಮತ್ತು ಹೆದರುವವರು ಗೃಹಸ್ಥಾಶ್ರಮ ಸ್ವೀಕರಿಸಲು ಅರ್ಹರಲ್ಲ.ಅಂತವರು ಗೃಹಸ್ಥಾಶ್ರಮವನ್ನು ಪ್ರವೇಶಿಸಬಾರದು.
ಮನೆಯ ಯಜಮಾನನು ಶಕ್ತಿಶಾಲಿಯಾಗಿದ್ದರೆ ಅವನಲ್ಲಿ ಯಾರ ಬಗ್ಗೆಯೂ ದ್ವೇಷ,ಅಸೂಯೆ, ಮಾತ್ಸರ್ಯ ಭಾವನೆಗಳಿರದೆ ಎಲ್ಲರೊಡನೆ  ಪವಿತ್ರಪ್ರೇಮ ಭಾವ ಇದ್ದು ಕುಟುಂಬವು ಸಂತಸದಿಂದ ಇರುತ್ತದೆ. ಯಜಮಾನನೇನಾದರೂ ಶಕ್ತಿಹೀನನಾಗಿದ್ದರೆ ಸಣ್ಣ ಸಣ್ಣ ವಿಷಯಗಳಿಗೂ ಎಲ್ಲರ ಮೇಲೆ ಕೋಪ ಮಾಡಿಕೊಂಡು ರೇಗಾಡುತ್ತಾ  ಕುಟುಂಬದ ನೆಮ್ಮದಿಯು ಹಾಳಾಗುತ್ತದೆ. ಆದ್ದರಿಂದ ಗೃಹಸ್ಥನು ತನ್ನ ಶರೀರ ಮತ್ತು  ಇಂದ್ರಿಯಗಳನ್ನು ಶಕ್ತಿಯುತವಾಗಿ ಇಟ್ಟುಕೊಳ್ಳಬೇಕೆಂಬುದು ವೇದದ ಆಶಯ. ಯಜಮಾನನಿಗಿರಬೇಕಾದ ಎರಡನೆಯ ಅರ್ಹತೆ ಎಂದರೆ. . . . .  .

ವಸುವನಿ:
ವಸುವನೀ ಎಂದರೆ ಉತ್ತಮ ಮಾರ್ಗದಲ್ಲಿ ಧರ್ಮದಿಂದ ಧನವನ್ನು ಸಂಪಾದಿಸುವವರು ಎಂದು ಅರ್ಥ. ವಾಮ ಮಾರ್ಗದಲ್ಲಿ ಎಂದೂ ಹಣವನ್ನು  ಸಂಪಾದಿಸ ಕೂಡದು. ಇದು ವೇದದ ಆದೇಶ. ಅಗ್ನೇ ನಯ ಸುಪಥಾ ರಾಯೇ ಎಂದರೆ ಧನವನ್ನು ಸಂಪಾದಿಸಲು ನಮ್ಮನ್ನು ಉತ್ತಮ ಮಾರ್ಗದಲ್ಲಿ ಕರೆದುಕೊಂಡು ಹೋಗು, ಎಂದು  ಭಗವಂತನಲ್ಲಿ ಪ್ರಾರ್ಥಿಸುವ  ಒಂದು ವೇದಮಂತ್ರವಿದೆ. ನಮ್ಮ ಧರ್ಮಶಾಸ್ತ್ರಗಳು ಏನು ಹೇಳುತ್ತವೆ? ನೋಡೋಣ. . . .
ಅನ್ಯೇಯೇನಾಗತಾ ಲಕ್ಷ್ಮೀ: ಖದ್ಯೋತ ಇವ ದೀಪ್ಯತೇ|
ಕ್ಷಣಂ ಪ್ರಕಾಶ್ಯ ವಸ್ತೂನಿ ನಿರ್ವಾಣೇ ಕೇವಲಂ ತಮ: ||

ಅನ್ಯಾಯದಿಂದ ಸಂಪಾದಿಸಿದ ಹಣವು ಆಕ್ಷಣಕ್ಕೆ ಪ್ರಕಾಶಿಸುವಂತೆ ಭಾಸವಾಗುತ್ತದೆ. ಆದರೆ ಸ್ವಲ್ಪ ಸಮಯದ ನಂತರ ಬೆಳಕೆಲ್ಲಾ ಕರಗಿ ಅಂಧಕಾರವೇ ವ್ಯಾಪಿಸುತ್ತದೆ. ಈ ಅರಿವು ಅಧಿಕಾರಿಗಳಲ್ಲಿ,ರಾಜಕಾರಣಿಗಳಲ್ಲಿ, ವ್ಯಾಪಾರಿಗಳಲ್ಲಿ ಇದ್ದಿದ್ದರೆ ದುರ್ಮಾರ್ಗದಲ್ಲಿ ಹಣವನ್ನು ಸಂಪಾದಿಸಿ ನಂತರ ಜೈಲು ಸೇರುವ ಸಂದರ್ಭ ಬರುತ್ತಿರಲಿಲ್ಲ, ಅಲ್ಲವೇ?
ಹಾಗಾದರೆ ಹಣವನ್ನು ಹೇಗೆ ಸಂಪಾದಿಸಬೇಕು?

ಅಕೃತ್ವಾ ಪರಸಂತಾಪಮ್
ಅಗತ್ವಾ ಖಲ ನಮ್ರತಾಮ್|
ಅನುತ್ಸೃಜ್ಯ ಸತಾಂ ಮಾರ್ಗಮ್
ಯತ್ ಸ್ವಲ್ಪಮಪಿ ತದ್ ಬಹು||

ಯಾರಿಗೂ ಕಷ್ಟವನ್ನು ಕೊಡದೆ, ದುರ್ಜನರಿಗೆ ತಲೆಬಾಗದೆ, ಸನ್ಮಾರ್ಗವನ್ನು ಬಿಡದೆ, ಸ್ವಲ್ಪ ದುಡಿದರೂ ಅದೇ ಬಹಳವೆಂದು ದುಡಿದ ಸಂಪಾದನೆಯೇ ಶ್ರೇಷ್ಠ.
ವಸುವನೀ ಪದದ ಬಗ್ಗೆ ವಿಮರ್ಶೆ ಮಾಡುತ್ತಿದ್ದೆವಲ್ಲವೇ? ವಸು ಎಂಬ ಪದಕ್ಕೆ ವ್ಯವಸ್ಥಿತವಾದ ಯೋಗ್ಯ ಜೀವನವೆಂದೂ ಅರ್ಥವಿದೆ. ನಾವು ಎಷ್ಟು ಹಣ ಸಂಪಾದಿಸುತ್ತೇವೆಂಬುದಕ್ಕಿಂತ ಎಷ್ಟು ಸರಳವಾಗಿ ಕಡಿಮೆ ಖರ್ಚಿನಲ್ಲಿ ಜೀವನ ಮಾಡುತ್ತೇವೆಂಬುದೂ ಗಣನೆಗೆ ಬರುತ್ತದೆ. ಆದ್ದರಿಂದ ನೆಮ್ಮದಿಯ ಜೀವನಕ್ಕೆ ಹೆಚ್ಚು ಸಂಪಾದನೆ ಬೇಕೆಂದೇನೂ ಅಲ್ಲ, ಆದರೆ ದುಡಿಮೆಯನ್ನು ವ್ಯವಸ್ಥಿತವಾಗಿ ಖರ್ಚು ಮಾಡುತ್ತಾ ಸಂಸಾರ ಮಾಡುವವನನ್ನೂ ವಸುವನೀ ಎನ್ನಬಹುದು.
ಇನ್ನೊಂದು ಬಹಳ ಸತ್ಯವಾದ ವಿಚಾರವೆಂದರೆ ಮಿತವಾಗಿ ಹಣವನ್ನು ಬಳಸುವುದರಿಂದ ವಿಲಾಸೀ ಜೀವನಕ್ಕೆ ಅವಕಾಶವೇ ಇರುವುದಿಲ್ಲ. ಆಗ ಸಹಜವಾಗಿ ಯಾವ ರೋಗದ ಭಯ ಇರುವುದಿಲ್ಲ. ಭೋಗೇ ರೋಗಭಯಮ್ ಎಂಬ ಮಾತಿದೆ. ಭೋಗಿಸೋಣವೆಂದರೆ ರೋಗದ ಭಯ.ಇದು ಯಾರಿಗೆ? ಹೆಚ್ಚು ಹಣವಿದ್ದವರಿಗೆ ಅಲ್ಲವೇ? ನ್ಯಾಯಮಾರ್ಗದಲ್ಲಿ ದುಡಿಯುವವನಿಗೆ ಭೋಗದ ಪ್ರಶ್ನೆಯೇ ಇಲ್ಲ. ಆಗ ರೋಗದ ಭಯವೆಲ್ಲಿ? ಯಜಮಾನನಿಗಿರಬೇಕಾದ ಮೂರನೆಯ ಅರ್ಹತೆ ಎಂದರೆ. . . . .  .
ಸುಮೇಧಾ:
ಮೇಧಾವಂತನಾಗಿರಬೇಕು. ಎಲ್ಲಿ ಮೇಧಾ ಅಂದರೆ ಜ್ಞಾನವಿರುತ್ತದೆಯೋ ಅಲ್ಲಿ ಮೋಹ, ಮೂರ್ಖತೆ ಮತ್ತು ಅಂಧವಿಶ್ವಾಸಗಳಿರುವುದಿಲ್ಲ.   ಮಹಾಭಾರತದಲ್ಲಿ ಮೋಹಕ್ಕೆ ಸಿಲುಕಿದ್ದ  ದುರ್ಯೋಧನನ ಸ್ಥಿತಿ ಹೇಗಿತ್ತು ಎಂಬುದನ್ನು ಅವನ ಮಾತುಗಳಿಂದಲೇ ಕೇಳಿ. . .

ಜಾನಾಮಿ ಧರ್ಮಂ ನ ಚ ಮೇ ಪ್ರವೃತ್ತಿ:
ಜಾನಾಮ್ಯಧರ್ಮಂ ನ ಚ ಮೇ ನಿವೃತ್ತಿ:

ಧರ್ಮವೇನೆಂದು ನನಗೆ ಗೊತ್ತಿದೆ, ಆದರೆ ನನಗೆ ಪಾಲಿಸಲು ಸಾಧ್ಯವಾಗುತ್ತಿಲ್ಲ
ಅಧರ್ಮವೇನೆಂಬುದೂ ಗೊತ್ತಿದೆ, ಆದರೆ ಬಿಡಲು ಸಾಧ್ಯವಾಗುತ್ತಿಲ್ಲ.
ನಮ್ಮೆಲ್ಲರದೂ ಇದೇ ಸ್ಥಿತಿಯಲ್ಲವೇ? ಯಾವುದು ಧರ್ಮ ಯಾವುದು ಅಧರ್ಮ, ಎಂಬ ಅರಿವಿರುತ್ತದೆ ಆದರೆ ಧರ್ಮದ ದಾರಿಯಲ್ಲಿ ನಡೆಯಲು ಆಗುತ್ತಿಲ್ಲ, ಅಧರ್ಮದ ಹಾದಿಯನ್ನು ಬಿಡಲಾಗುತ್ತಿಲ್ಲ. ಇದಕ್ಕೆಲ್ಲಾ ಕಾರಣವೇನು? ವ್ಯಾಮೋಹ.
ಮನೆಯ ಯಜಮಾನನಿಗೆ ಮಕ್ಕಳಲ್ಲಿ ವ್ಯಾಮೋಹವಿದ್ದರೆ ಮಕ್ಕಳ ಅಧ: ಪತನಕ್ಕೆ ಕಾರಣನಾಗುತ್ತಾನೆ. ವ್ಯಾಮೋಹದ ಕಾರಣದಿಂದ ಮಕ್ಕಳ ತಪ್ಪು ತಂದೆಗೆ ತಪ್ಪಾಗಿ ಕಾಣುವುದೇ ಇಲ್ಲ. ಅಥವಾ ವ್ಯಾಮೋಹದ ಕಾರಣ ಮಕ್ಕಳು ತಪ್ಪು ಮಾಡಿದರೂ ನೋಡಿಕೊಂದು ಸುಮ್ಮನಿರುತ್ತಾನೆ. ವ್ಯಾಮೋಹದ ಕತ್ತಲು ಅವನಿಗೆ ಆವರಿಸಿರುತ್ತದೆ.
ಪ್ರೇಮವು ಉತ್ಥಾನಕ್ಕೆ ಕಾರಣವಾದರೆ ಮೋಹವು ಪಥನಕ್ಕೆ ಕಾರಣವಾಗುತ್ತದೆ. ಮನೆಯ ಯಜಮಾನನಿಗೆ ಮನೆಯ ಸದಸ್ಯರ ಮೇಲೆ ಪ್ರೇಮವು ಇರಬೇಕೇ ಹೊರತೂ ವ್ಯಾಮೋಹವಲ್ಲ.

ಗೃಹಸ್ಥನಿಗಿರಬೇಕಾದ ಇನ್ನೂ ಹಲವು ಗುಣಗಳ ಬಗ್ಗೆ ಮುಂದಿನ ವಾರ ನೋಡೋಣ.