Pages

Wednesday, April 4, 2012

ಜಗವೆನ್ನ ಮುದ್ದಿಸದದೇಕೆಂದು ಕೊರಗದಿರು



ಜಗವೆನ್ನ ಮುದ್ದಿಸದದೇಕೆಂದು ಕೊರಗದಿರು|
ಮಗುವು ನೀಂ ಪೆತ್ತರ್ಗೆ,ಲೋಕಕೆ ಸ್ಪರ್ಧಿ|
ಹೆಗಲ ಹೊರೆ ಹುಟ್ಟಿದರ್ಗೆಲ್ಲ ಮಿರುತಿರೆ|
ನಿನ್ನ ರಗಳೆಗಾರಿಗೆ ಬಿಡುವೋ? -ಮಂಕುತಿಮ್ಮ ||649||

 ತಲೆವಾಗಿನೊಳೆ ಕೊಳಕ ,ಪಂಚೆನಿರಿಯೊಳ ಹರಕ|
ತಿಳಿಸುವೆಯ ರಜಕಗಲ್ಲದೆ ಲೋಕರಿಂಗೆ|
ಅಳಲು  ದುಗುಡಗಳ ನಿನ್ನೊಳಗೆ ಬಯ್ದಿಡದೆ ನೀ|
ಇಳೆಗೆ ಹರಡುವುದೇಕೋ? -ಮಂಕುತಿಮ್ಮ||719|| 

ಸಾಮಾನ್ಯವಾಗಿ ಎಲ್ಲರ ಇಚ್ಛೆ ಏನೆಂದರೆ ನಾನು ಮಾಡಿದ ಕೆಲಸವನ್ನು ಲೋಕ ಮೆಚ್ಚ ಬೇಕು, ಜನರು ಹೊಗಳಬೇಕು, ಅದಕ್ಕೆ ನಮ್ಮದೇ ಆದ ಕಾರಣವೂ ಸಿದ್ಧವಾಗಿರುತ್ತದೆ -ನಾನು ಎಂತಹ ಜನೋಪಯೋಗಿ ಕೆಲಸ ಮಾಡಿದ್ದೀನಿ! ನನ್ನಲ್ಲದೆ ಇನ್ಯಾರನ್ನು ಜನರು ಮೆಚ್ಚಬೇಕು? ಆದರೆ ಡಿ.ವಿಜಿ ಯವರು ಹೇಳುತ್ತಾರೆ, ಎಲವೋ ಮಂಕೇ, ನಿನ್ನನ್ನು ಹೆತ್ತವರಿಗೆ ನೀನು ಮಗು, ಆದರೆ ಲೋಕಕ್ಕೆ ನೀನು ಸ್ಪರ್ಧಿ-ಈ ಸತ್ಯ ನಿನಗೆ ಗೊತ್ತಿರಲಿ, ನಿನ್ನನ್ನು ಮೀರಿಸುವವರಿದ್ದಾರೆ, ಎಲ್ಲರಿಗೂ ಅವರದೇ ಆದ ಒತ್ತಡಗಳಿವೆ, ನಿನ್ನ ರಗಳೆ ಯಾರಿಗೆ ಬೇಕೋ, ಇದಕ್ಕೆಲ್ಲಾ ನೀನು ಕೊರಗಬೇದವೆಂದು ಬುದ್ಧಿಯ ಮಾತನ್ನು ಹೇಳುತ್ತಾರೆ. ನೀನು ತಲೆಗೆ ಹಾಕಿರುವ ಪೇಟದ ಒಳಗಿರುವ ಕೊಳಕನ್ನು ಹಾಗೂ ನೆರಿಗೆ ಮಾಡಿ ಯಾರಿಗೂ ಕಾಣದಂತೆ ಸಿಕ್ಕಿಸಿಕೊಂದಿರುವ ಪಂಚೆಯ ಹರಕನ್ನೂ ದೋಬಿಗೂ ದರ್ಜಿಗೂ ತಿಳಿಸುತ್ತೀಯೋ ಅಥವಾ ಲೋಕಕ್ಕೆಲ್ಲಾ ಟಾಮ್ ಟಾಮ್ ಮಾಡುತ್ತೀಯೋ? ಹಾಗೆಯೇ ನಿನ್ನ ಅಳಲನ್ನು, ದುಗುಡಗಳನ್ನೂ ನಿನ್ನೊಳಗೆ ಬಚ್ಚಿಟ್ಟುಕೊಳ್ಲದೆ ಲೋಕಕ್ಕೆಲ್ಲಾ ಸಾರುತ್ತೀಯ, ಯಾಕೋ ಎಂದು ಡಿ.ವಿ.ಜಿ.ಯವರು ಪ್ರಶ್ನಿಸುತ್ತಾರೆ.