ಕೋಪವೆಂಬುದು ಕೇಳು ವಂಶದಾ ಬಳುವಳಿಯು|
ಸಜ್ಜನರ ಸಹವಾಸವೇ ಪರಿಹಾರದಮೃತವು||
ಕೋಪದ ತಾಪದಿಂ ಪಡದಿರಲು ಪರಿತಾಪ|
ಶಾಂತಚಿತ್ತದಲಿ ಅಡಿಯನಿಡು ಮೂಢ||
ದೇಹದೌರ್ಬಲ್ಯವದು ಸಿಡಿಮಿಡಿಗೆ ಕಾರಣವು|
ಅಸಹಾಯಕತೆ ತಾ ಕೋಪಾಗ್ನಿಗದು ಘೃತವು||
ದೇಹಧಾರ್ಢ್ಯವನು ಕಾಪಿಟ್ಟು ಧೃಢಚಿತ್ತದಲಿ|
ಮುನ್ನಡೆದು ವ್ಯಗ್ರತೆಯ ನಿಗ್ರಹಿಸು ಮೂಢ||
ಕೀಳರಿಮೆಯದು ತಾ ಸಿಟ್ಟಿಗದು ಹೇತುವು|
ಅಭಿಮಾನಕಾಘಾತ ಕಿಚ್ಚಿಗದು ಕಾರಣವು||
ಬಲಶಾಲಿಗಳೊಡನಾಡಿ ಧೀಶಕ್ತಿ ನೀಗಳಿಸು|
ಛಲದಿಂದ ಬಲಗಳಿಸಿ ಮೇಲೇರು ಮೂಢ||
ರಾಷ್ಟ್ರ ರಾಷ್ಟ್ರದ ನಡುವೆ ರಾಜ್ಯ ರಾಜ್ಯದ ನಡುವೆ
ಗ್ರಾಮ ಗ್ರಾಮದ ನಡುವೆ ಜಾತಿ ಜಾತಿಯ ನಡುವೆ||
ಮನುಜ ಮನುಜರನಡುವೆ ಧಗಧಗಿಸುವ ದ್ವೇಷದ|
ಮೂಲ ಕ್ರೋಧಾಗ್ನಿಯಲ್ಲದೆ ಮತ್ತೇನು ಮೂಢ||
***************
-ಕವಿನಾಗರಾಜ್.