Pages

Monday, August 2, 2010

ಅವಧೂತ-೩

ಒಂದು ವಿನಂತಿ:
ನಮ್ಮೆಲ್ಲಾ ಯಶಸ್ಸಿನ ಹಿಂದೆ ಭಗವಂತನ ಚೈತನ್ಯವೇ ಕೆಲಸ ಮಾಡುತ್ತಿದೆ, ಎಂಬ ಅಚಲ ನಂಬಿಕೆ ನನ್ನದು.ನನ್ನ ಜೀವಿತದ ಐವತ್ತೈದು ವರ್ಷಗಳು ಇದೇ ನಂಬಿಕೆಯಲ್ಲಿ ಕಳೆದಿದೆ. ನನ್ನ ನಂಬಿಕೆಯನ್ನು ಬೇರೆಯವರ ಮೇಲೆ ಹೇರುವ ಕೆಲಸವನ್ನು ನಾ ಮಾಡಲಾರೆ.ಆದರೆ ನನ್ನಂತೆಯೇ ನಂಬಿಕೆ ಇರುವ ಹಲವರಿಗೆ ಇಂತಾ ವಿಚಾರಗಳನ್ನು ತಿಳಿಸಬೇಕೆಂಬ ಇಚ್ಛೆಯಿಂದ ಇಲ್ಲಿ ಕೆಲವು ಘಟನೆಗಳನ್ನು ಬರೆದಿರುವೆ. ಅವಧೂತರ ಕೃಪೆಗೆ ಪಾತ್ರರಾಗಿ ನಿಶ್ಚಿಂತೆಯಿಂದ ಜೀವನ ಸಾಗಿಸುತ್ತಿರುವ ನನ್ನ ಹಲವು ಆತ್ಮೀಯರಿಂದ ಕೇಳಿದ ಅವರವರ ಜೀವನದಲ್ಲಿ ಅವಧೂತರ ಪ್ರಭಾವವನ್ನು "ನಂಬುವವರಿಗೆ" ತಿಳಿಸಲು ಈ ಲೇಖನವಷ್ಟೆ. ವೇದಸುಧೆಯ ಅಭಿಮಾನಿಗಳು ಅವಧೂತರ ಪ್ರಭಾವಕ್ಕೆ ಒಳಗಾಗಿದ್ದರೆ ತಮ್ಮ ಅನುಭವವನ್ನು ಹಚಿಕೊಳ್ಳಬಹುದು.


ಇತ್ತೀಚಿನ ಘಟನೆ. ಡಾ|| ವಾರಿಧಿ ಎಂಬ ವೈದ್ಯರಿಗೆ ಕೈ ಬೆರಳುಗಳನ್ನು ಮಡಿಸಲಾರದಂತಹ ಸಂಧಿವಾತ.ಹಲವು ವರ್ಷಗಳ ಚಿಕಿತ್ಸೆಯ ನಂತರವೂ ಪರಿಹಾರ ಕಾಣಲೇ ಇಲ್ಲ. ಪತಿ ಕೂಡ ವೈದ್ಯರೇ. ದಿನ ದಿನಕ್ಕೆ ವಾತರೋಗ ಜಾಸ್ತಿಯಾಗಿ ಇನ್ನೇನು ಪ್ರಾಕ್ಟೀಸ್ ಮಾಡುವುದನ್ನು ನಿಲ್ಲಿಸಿಬಿಡುವ ಆಲೋಚನೆಯಲ್ಲಿದ್ದರು. ಹೇಗಾದರಾಗಲೀ ಕಡೆಯ ಪ್ರಯತ್ನವಾಗಿ ಗುರುಗಳನ್ನೊಮ್ಮೆ ಕೇಳಿ ಬಿಡೋಣವೆಂದು ನೇರವಾಗಿ ಸಕ್ಕರಾಯ ಪಟ್ಟಣಕ್ಕೆ ಧಾವಿಸುತ್ತಾರೆ. ಮನೆಯಲ್ಲಿ ಅವಧೂತರು ಇಲ್ಲ. ಚಿಕ್ಕಮಗಳೂರಿಗೆ ಹೋಗಿರುವುದಾಗಿ ತಿಳಿದು ಅಲ್ಲಿಗೇ ಹೋಗುತ್ತಾರೆ. ಅಲ್ಲಿ ಒಂದು ಮನೆಯಲ್ಲಿ ಚಾಪೆಯಮೇಲೆ ಮಲಗಿ ಗುರುಗಳು ವಿಶ್ರಾಂತಿ ಪಡೆಯುತ್ತಿದ್ದಾರೆ. ಡಾ|| ವಾರಿಧಿ ಆ ಮನೆಯ ಒಳಗೆ ಕಾಲಿಡುತ್ತಲೇ ಮಲಗಿದ ಜಾಗದಿಂದಲೇ " ಡಾ|| ವಾರಿಧಿ ಬನ್ನಿ, ಬನ್ನಿ, ಏನಮ್ಮಾ ನನ್ನ ಕಾಲು ಇಷ್ಟೊಂದು ನೋಯ್ತಾ ಇದೆಯಲ್ಲಾ! ಸ್ವಲ್ಪ ಕಾಲನ್ನು ಒತ್ತುವಿರಾ ?"
ಕೂಡಲೇ ಡಾ|| ವಾರಿಧಿ ಗುರುಗಳ ಕಾಲು ಒತ್ತಲು ಆರಂಭಿಸುತ್ತಾರೆ. ಎಷ್ಟು ಹೊತ್ತು ಒತ್ತಿದರೂ ಸಾಕು, ಎನ್ನಲೇ ಇಲ್ಲ. ಗುರುಗಳು ಕಣ್ಮುಚ್ಚಿರುವುದನ್ನು ಗಮನಿಸಿ ನಿಲ್ಲಿಸಿದರೆ ಕೂಡಲೇ ಕಣ್ ತೆರೆಯುತ್ತಿದ್ದರು, ಪುನ: ವಾರಿಧಿ ತಮ್ಮ ಕಾಯಕ ಮುಂದುವರೆಸುತ್ತಿದ್ದರು. ಕೊನೆಗೊಮ್ಮೆ" ಹೋಗಲಿ ಬಿಡಮ್ಮ, ಪಾಪ, ನಿಮ್ಮ ಕೈ ಎಷ್ಟು ನೋಯುತ್ತಿದೆಯೋ! "
ಡಾ|| ವಾರಿಧಿ ಕೈ ತೆಗೆಯುತ್ತಾರೆ ವಾತರೋಗ ಮಾಯ!! ಅಂದು ದೂರವಾದ ರೋಗ ಮತ್ತೆ ಕಾಣಿಸಿಕೊಂಡಿಲ್ಲವಂತೆ. ಗುರುಗಳೇ ಚಾಪೆಯಮೇಲೆ ಮಲಗುವಾಗ ತಾನು ಮಂಚದಮೇಲೆ ಸುಪ್ಪತ್ತಿಗೆಯಲ್ಲಿ ಮಲಗುವುದೆಂದರೇ! ಅಂದಿನಿಂದ ಡಾ!! ವಾರಿಧಿ ಚಾಪೆಯ ಮೇಲೆ ಮಲಗುತ್ತಿದ್ದಾರೆ. ಈಗಲೂ ಡಾ|| ವಾರಿಧಿ ಬೆಂಗಳೂರು ಸಮೀಪ ನೆಲಮಂಗಲದಲ್ಲಿದ್ದಾರೆ.

ಅವಧೂತ-೨

ನಾನು ಈಗ್ಗೆ ಸುಮಾರು ೧೮-೨೦ ವರ್ಷಗಳ ಹಿಂದೆ. ಮೊದಲಭಾರಿ ಅವಧೂತ ದರ್ಶನ ಪಡೆದಾಗ ಪೂಜ್ಯರು ಬಿಳಿ ಪಂಚೆ ಬಿಳಿ ಜುಬ್ಬ/ಶರ್ಟ್ ಧರಿಸುತ್ತಿದ್ದರು.ಮೊದಲ ಭಾರಿ ಸಕ್ಕರಾಯಪಟ್ಟಣಕ್ಕೆ ಮಿತ್ರರಾದ ಹಾಸನದ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ರೀಡರ್ ಆಗಿದ್ದ ಶ್ರೀ ಉಪೇಂದ್ರರೊಡನೆ ಹೋಗುವಾಗ ದಾರಿಯುದ್ದಕ್ಕೂ ಅವಧೂತರೆಂದರೆ ಹೇಗಿರಬಹುದೆಂಬ ಅನೇಕ ಕಲ್ಪನೆಗಳನ್ನು ಮನಸ್ಸಿನಲ್ಲಿಯೇ ಮೂಡಿಸಿಳ್ಳಲು ಪ್ರಯತ್ನಿಸಿದಾಗ ನಮ್ಮ ಋಷಿಮುನಿಗಳ ಹಲವು ಚಿತ್ರಗಳು ಕಣ್ಮುಂದೆ ಬಂದು, ಹೀಗಿರಬಹುದು, ಹಾಗಿರಬಹುದು, ಎಂಬ ಹಲವು ಊಹೆಗಳೊಡನೆ ಪೂಜ್ಯರ ಮನೆಯೊಳಗೆ ಕಾಲಿಟ್ಟೆ. ನಾಡಹೆಂಚಿನ ದೊಡ್ಡಮನೆ. ಮನೆ ಹಿಂದೆ ಇರುವ ಹಿತ್ತಲಲ್ಲಿ ಹಸುಗಳ ಮೇವಿಗಾಗಿ ಒಣ ಹುಲ್ಲನ್ನು ಒಟ್ಟಿದ್ದರೆಂದು ಕಾಣುತ್ತೆ. ಆಗತಾನೇ ಹುಲ್ಲನ್ನು ಮೆದೆಯಿಂದ ತೆಗೆದು ಹಸುಗಳಿಗೆ ಹಾಕಿ ಪೂಜ್ಯರು ಹಿತ್ತಲ ಬಾಗಿಲಿನಿಂದ ಮನೆಯೊಳಗೆ ಬರುವುದನ್ನು ಗಮನಿಸಿದೆವು. ಮುಖದ ತುಂಬ ಕೆದರಿದ ಗಡ್ದ. ಕೆದರಿದ ತಲೆಗೂದಲು. ಕೂದಲಿಗೆಲ್ಲಾ ಅಂಟಿರುವ ಹುಲ್ಲಿನ ತುಣುಕುಗಳು. ಒಮ್ಮೆ ನೋಡಿದ ಕೂಡಲೇ "ಇವರೇ ಅವಧೂತರು!" ಎಂಬ ಅಚ್ಚರಿಯೊಡನೆ ದೀನನಾಗಿ ನಿಂತೆ.ನಂತರ ಹತ್ತಿರ ಹೋಗಿ ನಮಸ್ಕರಿಸಿದೆ. ಒಂದು ಚಾಪೆಯಮೇಲೆ ಹತ್ತಿರದಲ್ಲೇ ಕುಳ್ಳಿರಿಸಿ ಕೊಂಡ ಪೂಜ್ಯರು " ನಿನ್ನ ಕೈ ಮುಟ್ಟಬಹುದಾ? " ಎಂದರು. "ಅಗತ್ಯವಾಗಿ ಗುರುಗಳೇ"- ಎಂದನಾನು ಅವರ ಹತ್ತಿರ ಕೈ ನೀಡಿದೆ.ನನ್ನ ಒಂದೊಂದೇ ಕೈ ಬೆರಳುಗಳನ್ನು ಅವರ ಹಸ್ತದಿಂದ ಹಿಡಿದ ಪೂಜ್ಯರು ನನ್ನ ಮನೆಯ ವಿವರ ಹೇಳುತ್ತಾ ಹೋದರು.ನಮ್ಮ ಕುಟುಂಬ ಎಲ್ಲಾ ವಿವರ ಬಿಚ್ಚಿಟ್ಟರು. ಅಷ್ಟು ಹೊತ್ತಿಗೆ ನಾನು ಮೂಕವಿಸ್ಮಿತನಾಗಿದ್ದೆ. ಪೂಜ್ಯರು ಹೇಳಿದರು" ನಿನ್ನ ಹಣಕಾಸಿನ ಮುಗ್ಗಟ್ಟಿನಬಗ್ಗೆ ನನ್ನನ್ನು ಕೇಳಲು ನೀನು ಬಂದಿದ್ದೀಯಾ, ಅಕ್ಟೋಬರ್ ೨೭ ರೊಳಗೆ ಹಣಕಾಸಿನ ತಾಪತ್ರಯಗಳೆಲ್ಲಾ ಕಳೆದು ಬಿಡುತ್ತೆ. ನಿಶ್ಚಿಂತೆಯಾಗಿರು, ಎಂದು ಹರಸಿದರು. ಅತ್ಯಾಶ್ಚರ್ಯವೆಂದರೆ ನಾನು ಅವರಲ್ಲಿ ಹೋಗಿದ್ದುದು ಜೂನ್ ಅಥವಾ ಜುಲೈ ತಿಂಗಳು ಇರಬಹುದು. ಅದೇ ವರ್ಷದ ಅಕ್ಟೋಬರ್ ೨೭ ರೊಳಗೆ ಹಣಕಾಸಿನ ತಾಪತ್ರಯಗಳೆಲ್ಲಾ ನಿವಾರಣೆ ಯಾಗಿತ್ತು. ಅಷ್ಟೇ ಅಲ್ಲ, ಮುಂದೆ ಇಲ್ಲಿಯವರಗೆ ತಾಪತ್ರಯ ಕಾಣಲೇ ಇಲ್ಲ.

ಒ೦ದು ಸ್ವಗತ..

ಆಗಿ೦ದಲೇ ಬಿಚ್ಚಿ ಗ೦ಟುಗಳ


ಒ೦ದೊ೦ದಾಗಿ ,ಹುಡುಕುತ್ತಲೇ ಇದ್ದೇನೆ


ಎಲ್ಲಾ ಗ೦ಟುಗಳೂ ಭರಪೂರ ತು೦ಬಿವೆ!


ನನ್ನದ್ಯಾವುದು, ನನ್ನ ಭಾಗವೆಷ್ಟು?


ಜೀವನ ನನ್ನದಾದರೂ


ನಡೆದ ಹಾದಿ ನನ್ನದಲ್ಲ!


ಯಾವುದೋ ಬಸ್ಸುಗಳು,


ಎಲ್ಲೆಲ್ಲಿಯೋ ಕೆಲವೊ೦ದು ಆರ್ಸೀಸಿಯದ್ದಾದರೆ


ಮತ್ತೆ ಕೆಲವೊ೦ದು ಹೆ೦ಚಿನ ನಿಲ್ದಾಣಗಳು


ಹೆಚ್ಚಿನದ್ದೆಲ್ಲಾ ಬಟಾಬಯಲೇ!


ಗುರುತಿರದ ಪ್ರಯಾಣಿಕರು


ಬೇಕೆ೦ದು ಎಲ್ಲರದನ್ನೂ


ನಾನೇ ತು೦ಬಿಕೊ೦ಡಿದ್ದೇನೆ,


ಪರರಿಗಾಗಿ ಬದುಕಿದ ಬದುಕೇನೂ ನನ್ನದಲ್ಲ


ಸ್ವ೦ತದ್ದೇನಿಲ್ಲ ನನ್ನದೆ೦ದು,


ನನ್ನದಲ್ಲದ ಒ೦ದು ಊರುಗೋಲು


ಜೊತೆಗಿನ ಗ೦ಟುಗಳು ಮಾತ್ರವೇ,


ಯಾವ್ಯಾವ ಗ೦ಟುಗಳು ಯಾರ್ಯಾರದ್ದೋ?


ಬದುಕಿನ ಸತ್ಯಾನ್ವೇಷಣೆಯ ಹಾದಿಯಲ್ಲಿದ್ದೇನೆ.


ಊರುಗೋಲು? ಬೇಕು, ನಡೆಯುವಾಗ


ಎಡವಿದರೆ ಬೇಕಲ್ಲವೇ?


ಇದೊ೦ದು ಗ೦ಟು ಯಾರದ್ದೆ೦ದು ಗೊತ್ತಾದರೆ ಸಾಕು


ಕೊಟ್ಟು ಮು೦ದೆ ನಡೆಯುವವನಿದ್ದೇನೆ!


ಸಾಗಲಾರದ ಹಾದಿಯೇನೂ ಅಲ್ಲ.


ಇದೊ೦ದು ಗ೦ಟು ಯಾರದೆ೦ದು ಗೊತ್ತಾದರೆ ಸಾಕು.