ಶ್ರೀ ಮಂಜುನಾಥಶರ್ಮರ ಪ್ರಶ್ನೆಗಳಿಗೆ ಶ್ರೀ ಸುಧಾಕರಶರ್ಮರು ಅಭಿಮತ ಪುಟದಲ್ಲಿ ನೀಡಿರುವ ಪ್ರತಿಕ್ರಿಯೆಯನ್ನು ಇಲ್ಲಿ ಪ್ರಕಟಿಸಲಾಗಿದೆ. ಪ್ರಶ್ನೆಯನ್ನು ಯಾರೇ ಆಗಲೀ ದಯಮಾಡಿ ತಮ್ಮ ಈ ಮೇಲ್ ವಿಳಾಸವನ್ನು ಕೊಟ್ಟು ವೇದಸುಧೆಯೊಡನೆ ಸಂಪರ್ಕದಲ್ಲಿದ್ದರೆ ಒಳ್ಳೆಯದು, ಇನ್ನು ಮುಂದೆ ಈ ಮೇಲ್ ವಿಳಾಸವಿಲ್ಲದೆ ಅನಾನಿಮಸ್ ಹೆಸರಿನಲ್ಲಿ ಕೇಳಿದ ಪ್ರಶ್ನೆಗಳನ್ನು ಗಮನಿಸಲಾಗುವುದಿಲ್ಲವೆಂದು ಅನಿವಾರ್ಯವಾಗಿ ಹೇಳಬೇಕಾಗಿದೆ. ಕಾರಣ ಶ್ರೀ ಮಂಜುನಾಥಶರ್ಮರಿಗೆ ತಮ್ಮ ಈ ಮೇಲ್ ವಿಳಾಸವನ್ನು ನೀಡಲು ವಿನಂತಿಸಿದ್ದರೂ ಈವರಗೆ ವೇದಸುಧೆಗೆ ತಮ್ಮ ಈ ಮೇಲ್ ವಿಳಾಸವನ್ನು ನೀಡಿರುವುದಿಲ್ಲ. ಅಥವಾ ಅವರು ವೇದಸುಧೆಯಲ್ಲಿ ಪ್ರಶ್ನೆಯನ್ನು ಕೇಳಿದನಂತರ ವೇದಸುಧೆಗೆ ಪುನ: ಭೇಟಿನೀಡಿದ್ದರೋ ಇಲ್ಲವೋ ತಿಳಿಯದು. ಈಗಲಾದರೂ ದಯಮಾಡಿ ಶ್ರೀ ಮಂಜುನಾಥಶರ್ಮರು ತಮ್ಮ ಈಮೇಲ್ ವಿಳಾಸವನ್ನು ನೀಡಲು ಕೋರಿಕೆ.
---------------------------------------------------------
ಶ್ರೀ ಸುಧಾಕರಶರ್ಮರಿಗೆ ನಮಸ್ಕಾರಗಳು
ಕಳೆದ ಐದಾರು ತಿಂಗಳುಗಳಿಂದ ನಿಮ್ಮ ಧ್ವನಿಯಲ್ಲಿ ಹಲವು ಪ್ರವಚನಗಳನ್ನು ಕೇಳಿದ್ದೇನೆ. ಈ ಅವಕಾಶವನ್ನು ಕಲ್ಪಿಸಿಕೊಟ್ಟ ವೇದಸುಧೆಗೂ ಮತ್ತು ನಿಮಗೂ ಕೃತಜ್ಞತೆಗಳು.
ವೇದ ಮಂತ್ರಗಳ ಬಗ್ಗೆ ನಿಮ್ಮ ಸರಳವಾದ ವಿವರಣೆಯಿಂದ ಜೀವನ ಕ್ರಮವೇ ಒಂದು ಯಜ್ಞವಾಗಿರಬೇಕೆಂಬುದನ್ನು ನಾನು ಒಪ್ಪುತ್ತೇನೆ. ಹಲವು ಪ್ರವಚನಗಳಲ್ಲಿ ವೇದಮಂತ್ರಗಳನ್ನು ಕಲಿಯಲು ಜಾತಿಯಾಗಲೀ ಲಿಂಗವಾಗಲೀ ಆಡ್ದಬರುವುದಿಲ್ಲ ಎಂಬುದನ್ನು ಒತ್ತುಕೊಟ್ಟು ಆಧಾರಸಹಿತವಾಗಿ ಹೇಳಿದ್ದೀರಿ. ಧನ್ಯವಾದಗಳು.
ಒಂದು ಸಂದೇಹ ನನಗೆ ಕಾಡುತ್ತಿದೆ. ನನಗೆ ವೇದಮಂತ್ರಗಳನ್ನು ಸ್ವರಸಹಿತವಾಗಿ ಕಲಿಯಬೇಕೆಂಬ ಆಸೆ ಇದೆ. ಆದರೆ ನನಗೀಗಾಗಲೇ ಅರವತ್ತು ವರ್ಷ ವಯಸ್ಸು. ನಾಲ್ಕು ವೇದವನ್ನು ಸಂಪೂರ್ಣವಾಗಿ ಈ ಜನ್ಮದಲ್ಲಿ ನನಗೆ ಕಲಿಯಲು ಸಾಧ್ಯವಿಲ್ಲವೆಂಬ ಅರಿವಿದೆ. ಆದರೆ ನಾಲ್ಕೂ ವೇದಗಳನ್ನು ಅಧ್ಯಯನಮಾಡಿರುವ ಹಲವರು ನಿಮ್ಮೊಡನಿರಬಹುದು. ನೀವೂ ಕೂಡ ಅಧ್ಯಯನ ಮಾಡಿರಬಹುದು.ನಿಮ್ಮಂತವರು ಆಯ್ದ ವೇದಮಂತ್ರಗಳ ಒಂದು ಚಿಕ್ಕ ಪುಸ್ತಕವನ್ನು ನಮ್ಮಂತವರಿಗೆ ಏಕೆ ಕೊಡಬಾರದು? ಅದರಲ್ಲಿ ನಾಲ್ಕೂ ವೇದಗಳಿಂದ ಆಯ್ದ ಕೆಲವು ವೇದಮಂತ್ರಗಳನ್ನು ಮುದ್ರಿಸಿ ಅದಕ್ಕೆ ಅರ್ಥ ಮತ್ತು ವಿವರಣೆಯನ್ನು ಕೊಡಬಾರದೇಕೆ? ವೇದದ ಹೆಸರಲ್ಲಿ ಸಾವಿರ ಪುಟಗಳ ಗ್ರಂಥಗಳನ್ನು ಪ್ರಕಟಿಸಿದರೆ ಅದನ್ನು ಮನೆಯಲ್ಲಿಟ್ಟು ಪೂಜಿಸಬಹುದು ಅಷ್ಟೆ. ನೀವೇ ಹೇಳುವಂತೆ ಗ್ರಂಥಗಳಿರುವುದು ಅಧ್ಯಯನಕ್ಕೆ ಪೂಜೆ ಮಾಡಲು ಅಲ್ಲ. ಹಾಗಾದರೆ ನಿಮ್ಮಂತವರು ನಮಗೆ ದಾರಿ ತೋರಿಸಬೇಡವೇ? ಮತ್ತೊಂದು ವಿಚಾರ. ಹಲವು ಕಡೆ ನೀವು ನಮ್ಮ ಪೂರ್ವದಿಂದ ಬಂದಿರುವ ಪೂಜಾಪದ್ದತಿಯಬಗ್ಗೆ ಹಗುರವಾಗಿ ಮಾತನಾಡಿದ್ದೀರಿ. ಉಧಾಹರಣೆಗೆ ಹೇಳಬೇಕೆಂದರೆ "ಆಗಮಾರ್ಥಂತು ದೇವಾನಾಂ" ಮಂತ್ರದ ಬಗ್ಗೆ . ಎಲ್ಲ ಕಡೆ ದೇವರು ಇರುವುದು ಸತ್ಯವಾದರೂ ನಮ್ಮ ಕಾನ್ಸೆಂಟ್ರೇಶನ್ ಗೋಸ್ಕರ ಅವನನ್ನು ಒಂದು ಕಡೆ ಊಹಿಸಿಕೊಂಡರೆ ಆಗುವ ನಷ್ಟವಾದರೂ ಏನು? ನೀವು ಇನ್ನು ನೂರು ವರ್ಷ ವಾದಮಾಡಿದರೂ ನಮ್ಮಲ್ಲಿ ಚಾಲ್ತಿಯಲ್ಲಿರುವ ಪೂಜಾ ಪದ್ದತಿಯನ್ನು ನಮ್ಮಂತವರು ಬಿಡಲು ಸಾಧ್ಯವಿಲ್ಲ. ನಮಗೆ ನಿಮ್ಮ ವಿಚಾರದಲ್ಲಿ ಪ್ರೀತಿ ಇದ್ದರೂ ದೇವಾಲಯ,ದೇವರ ವಿಗ್ರಹ -ಈ ವಿಚಾರದಲ್ಲಿ ನಿಮ್ಮ ಖಂಡನೆಯನ್ನು ನಾನಲ್ಲಾ ನನ್ನಂತಹ ಯಾರೂ ಒಪ್ಪುವುದಿಲ್ಲ. ಒಂದು ವೇಳೆ ಎಲ್ಲಾ ತೊರೆದು ನಿಮ್ಮೊಡನೆ ಇರುತ್ತೇವೆಂದು ಯಾರಾದರೂ ಹೊರಟರೆ ಆ ಸಂಖ್ಯೆ ಪ್ರತಿಶತ ೧ ಕೂಡ ಆಗುವುದಿಲ್ಲ. ಆದ್ದರಿಂದ ವ್ಯರ್ಥವಾಗಿ ನೀವು ನಮ್ಮಂತವರ ಮನಸ್ಸಿಗೆ ಅಹಿತಮಾಡುವುದನ್ನು ಬಿಟ್ಟರೆ ನಿಮ್ಮ ಉಳಿದೆಲ್ಲಾ ವಿಚಾರವನ್ನೂ ಒಪ್ಪುವವರ ಸಂಖ್ಯೆ ಹೆಚ್ಚುವುದರಲ್ಲಿ ಸಂಶಯವಿಲ್ಲ. ಜಾತಿಯ ಬಗೆಗೆ ನಿಮ್ಮ ವಿವವರಣೆಯಿಂದ ಬಲು ಸಂತೋಷವಾಗಿದೆ. ಹೋಮದಲ್ಲಿ ಅನಗತ್ಯವಾಗಿ ಸುಡುವ ರೇಶ್ಮೆ ಹಾಗೂ ಇನ್ನಿತರ ಬೆಲೆ ಬಾಳುವ ವಸ್ತುಗಳ ಬಗ್ಗೆ ನಿಮ್ಮ ವಿಚಾರದಲ್ಲಿ ನನ್ನ ಒಪ್ಪಿಗೆ ಇದೆ. ಹಿಂಸೆಯ ವಿರೋಧಕ್ಕೆ ಸಮ್ಮತಿ ಇದೆ.ಆದರೆ ಸಸ್ಯಾಹಾರಿಗಳಾಗಿದ್ದರೆ ಮಾತ್ರ ಉಪನಯನ ಸಾಧ್ಯವೆಂದು ತಿಳಿಸಿದ್ದೀರಿ. ಇದೂ ಕೂಡ ಪ್ರಾಕ್ಟಿಕಲ್ ಅಲ್ಲ. ಇದರಿಂದ ಪುನ: ನೀವು ಒಂದು ವರ್ಗವನ್ನು ದೂರ ಇಡುವ ಹುನ್ನಾರ ಮಾಡಿದ್ದೀರಿ. ನನ್ನ ಮಾತಿನಲ್ಲಿ ನಿಮ್ಮ ಬಗ್ಗೆ ಮೆಚ್ಚುಗೆಯೂ ಇದೆ. ಅದೇ ವೇಳೆ ನಿಮ್ಮ ಬಗ್ಗೆ ಕನಿಕರವೂ ಇದೆ. ಕನಿಕರ ಏಕೆಂದರೆ ನಾನು ಒಪ್ಪದ ಹಲವು ವಿಚಾರ ತಿಳಿಸಿದ್ದೀನಲ್ಲಾ, ಅವುಗಳಿಂದಲೇ ನಿಮ್ಮ ಏಳ್ಗೆಗೆ ಅಡ್ಡಿಯಾಗುತ್ತವಲ್ಲಾ! ಸ್ವಲ್ಪ ಲಿಬರಲ್ ಆಗಿ ನೀವು ಯೋಚಿಸಬೇಡವೇ? ಎಲ್ಲದಕ್ಕೂ ವೇದವೇ ಅಂತಿಮ ವೆನ್ನುತ್ತೀರಿ. ಇರಲಿ. ಆದರೆ ವಿಶ್ವದ ಶಾಂತಿಗಾಗಿ ನೂರಾರು ಜನ ಮಹನೀಯರು ಅವರದೇ ಆದ ರೀತಿಯಲ್ಲಿ ಕಾಣಿಕೆ ನೀಡುತ್ತಿದ್ದಾರೆ. ಸಂಗೀತದ ಕ್ಷೇತ್ರವನ್ನೇ ತೆಗೆದುಕೊಳ್ಳಿ, ಶಾಸ್ತ್ರೀಯ ಸಂಗೀತದಿಂದ ಸಿಗುವ ನೆಮ್ಮದಿ ನನಗೆ ಸಾಕು. ನೀವು ಅದನ್ನು ಸಾಮವೇದ ಎನ್ನುತ್ತೀರೇನೋ. ಇರಲಿ. ಆದರೆ ವೇದಕ್ಕೆ ಹೊರತಾದ ಹಲವು ಸಂಗತಿಗಳು ಇಂದಿನ ಜಗತ್ತಿಗೆ ನೆಮ್ಮದಿನೀಡಬಲ್ಲವು. ಮತ್ತೊಮ್ಮೆ ಅಗತ್ಯವೆನಿಸಿದರೆ ವಿವರವಾಗಿ ಬರೆಯುವೆ. ಈಗ ಇಷ್ಟು ಸಾಕು. ನಿಮ್ಮ ಸಮಝಾಯಿಶಿ ಬೇಕು.
- ಮಂಜುನಾಥಶರ್ಮ
------------------------------------------------------