Pages

Saturday, September 27, 2014

ಜೀವನವೇದ-11

ಮೇಲೆದ್ದು ನಡೆ, ಅಧ:ಪತನ ಹೊಂದಬೇಡ


ಈ ಸಂಚಿಕೆಯಲ್ಲಿ  ಮನುಷ್ಯನು ಕಷ್ಟ-ಸುಖಗಳನ್ನು ಹೇಗೆ ಸ್ವೀಕರಿಸಬೇಕೆಂಬುದನ್ನು ತಿಳಿಸುವ  ಅಥರ್ವ ವೇದದ ಒಂದು ಮಂತ್ರದ ಬಗ್ಗೆ ವಿಚಾರ ಮಾಡೋಣ.

ಉತ್ ಕ್ರಾಮಾತ: ಪುರುಷ ಮಾವ  ಪತ್ಥಾ
ಮೃತ್ಯೋ: ಪಡ್ವೀಶಮವಮುಂಚಮಾನ: |
ಮಾ ಚ್ಛಿತ್ಥಾ ಅಸ್ಮಾಲ್ಲೋಕಾದಗ್ನೇ: ಸೂರ್ಯಸ್ಯ ಸಂದೃಶ: ||
[ಅಥರ್ವ : ೮.೧.೪] 

ಅರ್ಥ:
ಪುರುಷ = ಹೇ ಜೀವನೇ
ಮೃತ್ಯೋ: ಪಡ್ವೀಶಂ ಅವಮುಂಚಮಾನ: = ಸಾವಿನ ಬಂಧವನ್ನು ಕೆಳಕ್ಕೆ ಸರಿಸಿಹಾಕುತ್ತಾ
ಅತ: ಉತ್ ಕ್ರಾಮಾ = ಇಲ್ಲಿಂದ ಮೇಲಕ್ಕೆದ್ದು ನಡೆ
ಮಾ ಅವ ಪತ್ಥಾ:  = ಕೆಳಗೆ ಬೀಳಬೇಡ
ಅಸ್ಮಾತ್ ಲೋಕಾತ್ = ಈ ಲೋಕದಿಂದ
ಮಾ ಛಿತ್ಥಾ: = ಕಡಿದುಹೋಗಬೇಡ
ಅಗ್ನೇ: = ರಾತ್ರಿಯಲ್ಲಿ ಅಗ್ನಿಯಂತೆ
ಸೂರ್ಯಸ್ಯ = ಹಗಲಿನಲ್ಲಿ ಸೂರ್ಯನಂತೆ
ಸಂದೃಶ: = ಸಮಾನವಾಗಿ ಪ್ರಕಾಶಿಸು

ಭಾವಾರ್ಥ: 
 ಹೇ ಜೀವನೇ, ನೀನು ಈಗಿರುವ ಸ್ಥಾನದಿಂದ ಮೇಲೆದ್ದು ನಡೆ, ಅಧ: ಪತನ ಹೊಂದಬೇಡ. ಸಾವಿನ ಬಂಧವನ್ನು ಬಿಡಿಸಿ ಕೊಳ್ಳುತ್ತಾ ಈ ಲೋಕದಿಂದ ಕಡಿದುಹೋಗಬೇಡ. 
ಉತ್ಕ್ರಾಮಾ, ಮಾ ಅವಪತ್ಥಾ:  , ಈ ಎರಡು ಪದಗಳು ಮನುಷ್ಯನಿಗೆ ಅದೆಷ್ಟು ಆತ್ಮವಿಶ್ವಾಸವನ್ನೂ, ಚೇತನವನ್ನೂ ಕೊಡುತ್ತದೆ! ವೇದಗಳೇ ಹಾಗೆ. ಯಾರನ್ನೂ ಬೀಳಲು ಬಿಡುವುದಿಲ್ಲ. ಮೇಲೆತ್ತುವುದೇ ವೇದದ ಹೆಚ್ಚುಗಾರಿಕೆ. ಒಂದೊಂದು ಮಂತ್ರದಲ್ಲೂ ಮನುಷ್ಯನ ಏಳಿಗೆ,ಉನ್ನತಿಯ ಬಗ್ಗೆ ಸ್ಪೂರ್ಥಿದಾಯಕ ನುಡಿಗಳೇ! ಕಷ್ಟ ಸುಖಗಳನ್ನು ಹೇಗೆ ಸ್ವೀಕರಿಸಬೇಕೆಂಬುದಕ್ಕೆ ಹೇಳುತ್ತ “ ರಾತ್ರಿಯಲ್ಲಿ ಅಗ್ನಿಯಂತೆ, ಹಗಲಿನಲ್ಲಿ ಸೂರ್ಯನ  ಸಮಾನವಾಗಿ ಪ್ರಕಾಶಿಸು.ಅಂದರೆ ಆಧ್ಯಾತ್ಮಿಕ ಜೀವನದ ಗುಂಗಿನಲ್ಲಿ ಈ ಲೋಕದಿಂದ ಕರ್ತವ್ಯಗಳಿಂದ ದೂರ ಓಡಬಾರದು. ಜೀವನದ ರಾತ್ರಿಯಲ್ಲಿ ಅಂದರೆ ದು:ಖಮಯ ಸ್ಥಿತಿಯಲ್ಲಿ ಅಗ್ನಿಯಂತೆ ಉರಿದು ದು:ಖವನ್ನು ದಹಿಸಬೇಕು. ಜೀವನದ ಹಗಲಿನಲ್ಲಿ ಅಂದರೆ ಸುಖಮಯ ಸ್ಥಿತಿಯಲ್ಲಿ ಸೂರ್ಯನಂತೆ ಬೆಳಗಿ ಎಲ್ಲರಿಗೂ ಆ ಸುಖವನ್ನು ಕೊಡಬೇಕು. ವೇದದ ಒಂದೊಂದು ಮಾತೂ ಚೇತೋಹಾರಿ. ಇಲ್ಲಿ ಆಲಸ್ಯಕ್ಕೆ ಆಸ್ಪದವೇ ಇಲ್ಲ. ಹೇಡಿತನಕ್ಕೆ ಜಾಗವಿಲ್ಲ. ಜೀವನದಲ್ಲಿ ಬರುವ ಕಷ್ಟಸುಖಗಳನ್ನು ಸ್ವೀಕರಿಸುವ ಬಗೆಯನ್ನು  ಅದ್ಭುತವಾಗಿ  ಈ ಮಂತ್ರದಲ್ಲಿ ವರ್ಣಿಸಿದೆ. ಈ ಮಂತ್ರವನ್ನು ನೋಡುವಾಗ ಸಹಜವಾಗಿ ಇದೊಂದು ಜೀವನ ಸೂತ್ರವಲ್ಲದೆ ಬೇರೇನೂ ಆಗಿರಲು ಸಾಧ್ಯವಿಲ್ಲ, ಎಂಬುದು ಮನವರಿಕೆಯಾಗದೆ ಇರದು ಅಲ್ಲವೇ? 

ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು ಆರು ದಶಕಗಳು ಕಳೆದು ಏಳನೇ ದಶಕವೂ ಮುಗಿಯುತ್ತಾ ಬಂತು. ಬ್ರಿಟಿಶರೇನೋ ನಮ್ಮನ್ನು ಒಟ್ಟಾಗಿ ಇರಲು ಬಿಡಲಿಲ್ಲ. ಒಡೆದು ಆಳುವ ನೀತಿಯನ್ನು ಅನುಸರಿಸಿ ನಮ್ಮ ಸಮಾಜದಲ್ಲಿ ಮೇಲು-ಕೀಳುವರ್ಗಗಳನ್ನು ಉಳಿಸಿಬಿಟ್ಟರು. ಆದರೆ ನಮ್ಮವರ ಕೈಗೆ ಆಡಳಿತದ ಚುಕ್ಕಾಣಿ ಬಂದಮೇಲೆ ಮಾಡಿದ್ದೇನು? ಮತ್ತೆ ಬ್ರಿಟಿಶರದೇ ನೀತಿ. ಎಲ್ಲವೂ ಗದ್ದುಗೆ ಉಳಿಸಿಕೊಳ್ಳುವ ಉಪಾಯಗಳೇ ಹೊರತೂ ನಮ್ಮ ಜನರ ಕೈಗೇ ಆಡಳಿತದ ಹೊಣೆ ಸಿಕ್ಕಮೇಲೂ ನಮ್ಮ ಋಷಿಮುನಿಗಳು ತಮ್ಮ ತಪಸ್ಸಿನ ಪರಿಣಾಮವಾಗಿ ಕಂಡುಕೊಂಡ ಸತ್ಯದ ಮಾರ್ಗದಲ್ಲಿ ಸರ್ಕಾರ ನಡೆಸುವ ಪ್ರಯತ್ನವನ್ನು ಮಾಡಲೇ ಇಲ್ಲ.

ಒಂದು ಸಮಾಜವು ಉತ್ತಮವಾಗಿರಲು, ಮೇಲು ಕೀಳು ಹೋಗಲಾಡಿಸುವ ಸೂತ್ರಗಳು ವೇದದಲ್ಲಿ ಹೇರಳವಾಗಿ ಕಾಣಬರುತ್ತವೆ. ವೇದವು ಒಬ್ಬ ಮನುಷ್ಯನನ್ನು ಸೋಮಾರಿಯಾಗಿರಲು ಬಿಡುವುದೇ ಇಲ್ಲ. ಬದಲಿಗೆ ಜೀವನದಲ್ಲಿ ಕಷ್ಟಗಳು ಬಂದರೆ ಅದನ್ನು ಹೇಗೆ ಸ್ವೀಕರಿಸಬೇಕು, ಅದನ್ನು ಮೆಟ್ಟಿ ನಿಲ್ಲುವ ಬಗೆ ಹೇಗೆ? ಎಂದು ಎಲ್ಲರಲ್ಲೂ ಉತ್ಸಾಹವನ್ನು ತುಂಬುತ್ತದೆ. ನಮ್ಮ ಸರ್ಕಾರದ ನೀತಿಯಾದರೂ ಇದಕ್ಕೆ ತದ್ವಿರುದ್ಧವಾಗಿರುವುದನ್ನು ನಾವು ನೋಡುತ್ತೇವೆ. ಬಡವರಿಗೆ ಒಂದಿಷ್ಟು ಧನಸಹಾಯ ಮಾಡಿ ತತ್ ಕಾಲಕ್ಕೆ ಬಡವನ ಮೂತಿಗೆ ಬೆಣ್ಣೆ ಹಚ್ಚುವ ಕೆಲಸವನ್ನು ಮಾಡುತ್ತದೆಯೇ ಹೊರತೂ , ಅವನಿಗೆ ದುಡಿಯಲು ಅಗತ್ಯವಾದ ಅವಕಾಶವನ್ನೇ ಮಾಡಿಕೊಡುವುದಿಲ್ಲ. ಅಂತೂ ಸರ್ಕಾರದ ಸಹಾಯಧನ ಪಡೆದು ಅದರ ಹಂಗು ಒಂದು ಕಡೆಯಾದರೆ ಶ್ರಮವಹಿಸಿ ದುಡಿಯುವ ಬದಲು ಸೋಮಾರಿಯಾಗಿ ದೇಶಕ್ಕೆ ದೊಡ್ದ ಸಮಸ್ಯೆಯಾಗುವುದು ಮತ್ತೊಂದು ದುರಂತ.  ಆದರೆ ನಮ್ಮ ವೇದ ಮಂತ್ರಗಳು ಬೀಳುತ್ತಿರುವವನನ್ನು ನೀನು ಬೀಳಬೇಡ, ನಿನ್ನಲ್ಲಿ ಎದ್ದು ನಿಲ್ಲುವ ಸಾಮರ್ಥ್ಯವಿದೆ,ಏಳು ಎಲ್ಲವನ್ನೂ ಎದುರಿಸಿ ಮುಂದೆ ನಡೆಎ॒ಂದು ಪ್ರೇರಣೆಯನ್ನು ತುಂಬುತ್ತವೆ.
ವೇದದ ಮಾತಿಗೆ ಕಿವುಡಾದವರು ಅರ್ಥಾತ್ ಸುವಿಚಾರಗಳನ್ನು ಕೇಳಿಸಿಕೊಳ್ಳದವರ ಪರಿಸ್ಥಿತಿ ಹೇಗಾಗುತ್ತದೆಂಬುದನ್ನೂ ಋಗ್ವೇದದ ಒಂದು ಮಂತ್ರದಿಂದ ತಿಳಿದುಕೊಳ್ಳೋಣ.

ಪ್ರತ್ನಾನ್ಮಾನಾದಧ್ಯಾ ಯೇ  ಸಮಸ್ವರನ್ಛ್ಲೋಕಯಂತ್ರಾಸೋ ರಭಸಸ್ಯ ಮಂತವ: |
ಅಪಾನಕ್ಷಾಸೋ ಬಧಿರಾ ಅಹಾಸತ ಋತಸ್ಯ ಪಂಥಾಂ ನ ತರಂತಿ ದುಷ್ಕೃತ: ||
[ಋಗ್-೯.೭೩.೬]

ಅರ್ಥ:-
ಯೇ = ಯಾರು
ಪ್ರತ್ನಾತ್ ಮಾನಾತ್ ಅಧಿ = ಶಾಶ್ವತ ಪ್ರಮಾಣವಾದ ವೇದ ಜ್ಞಾನದ ಆಶ್ರಯದಲ್ಲಿ 
ಆ ಸಂ ಅಸ್ವರನ್ = ಎಲ್ಲೆಡೆಯಿಂದಲೂ ಒಳಿತಾಗಿ ಜ್ಞಾನ ವನ್ನು ಪಡೆದುಕೊಳ್ಳುತ್ತಾರೋ ಅವರು 
ಶ್ಲೋಕ ಯಂತ್ರಾಸ: = ವೇದ ಮಂತ್ರಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವವರೂ
ರಭಸಸ್ಯ ಮಂತವ: = ಸರ್ವಶಕ್ತಿಮಾನ್ ಪ್ರಭುವನ್ನು ತಿಳಿದವರೂ ಆಗುತ್ತಾರೆ.
ಅನಕ್ಷಾಸ: = ಜ್ಞಾನದೃಷ್ಟಿಯಿಂದ ಕುರುಡುರೂ
ಬಧಿರಾ: = ಕಿವುಡರೂ 
ಋತಸ್ಯ ಪಂಥಾಮ್ = ಧರ್ಮದ ಮಾರ್ಗವನ್ನು
ಅಹಾಸತ = [ವೇದಜ್ಞಾನವನ್ನು] ತ್ಯಜಿಸುತ್ತಾರೆ
ದುಷ್ಕೃತ: = ದುಷ್ಕರ್ಮ ನಿರತರು 
ನ ತರಂತಿ = ಪಾರುಗಾಣುವುದಿಲ್ಲ

ಭಾವಾರ್ಥ:-
ವೇದದ ಸೂತ್ರಗಳು  ಶಾಶ್ವತವೂ, ಸಾರ್ವಕಾಲಿಕವೂ, ಸಾರ್ವಭೌಮವೂ ಆಗಿದೆ ಎಂಬುದನ್ನು ಹಲವು ಮಂತ್ರಗಳಲ್ಲಿ ಈಗಾಗಲೇ ನೋಡಿದ್ದೇವೆ. ಅದು ಬೋಧಿಸುವ ಮಾರ್ಗವು ಧರ್ಮ ಮಾರ್ಗ.ವೇದಗಳ ನಿರ್ಮಲಜ್ಞಾನವನ್ನು ಪಡೆದು , ಜ್ಞಾನದಾಯಕ ಮಂತ್ರಗಳ ಮೇಲೆ ಅಧಿಕಾರ ಪಡೆದು  ಪ್ರಭುಸಾಕ್ಷಾತ್ಕಾರವನ್ನು ಮಾಡಿಕೊಳ್ಳ ಬಹುದು. ಆದರೆ ಜ್ಞಾನದ ಬೆಳಕನ್ನು ನೋಡಲಾರದ, ಜ್ಞಾನದ ಉಪದೇಶವನ್ನು ಕೇಳಲಾರದ ಮೂಢಜನರು ಋತದಮಾರ್ಗವನ್ನು ಅಂದರೆ ಧರ್ಮಮಾರ್ಗವನ್ನು ಬಿಡುತ್ತಾರೆ. ಅಂತಹ ದುಷ್ಕರ್ಮಿಗಳು ಜೀವನದ ಪಥವನ್ನು ಎಂದಿಗೂ ಕಾಣಲಾರರು.ಜೀವನಕ್ಕೆ ಎರಡು ಮುಖಗಳಿವೆ.ಆತ್ಮೋದ್ಧಾರಕ್ಕಾಗಿ ಆಧ್ಯಾತ್ಮಿಕ ಸಾಧನೆ, ದೇಹ ಪೋಷಣೆಗಾಗಿ ಲೌಕಿಕ ಕರ್ಮಗಳು. ಸಾಂಸಾರಿಕ ಅಭ್ಯುದಯ ಮತ್ತು ಪಾರಮಾರ್ಥಿಕ ಉತ್ಕರ್ಷ ?ಈ ಎರಡನ್ನೂ ಸಾಧಿಸಿಕೊಡುವ ಜೀವನ ಪಥವೇ ಧರ್ಮ.

“ವೇದ ಮಂತ್ರಗಳ ಮೇಲೆ ಅಧಿಕಾರ ಪಡೆದು  ಪ್ರಭುಸಾಕ್ಷಾತ್ಕಾರವನ್ನು ಮಾಡಿ ಕೊಳ್ಳ ಬಹುದು. ಅಂದರೆ ಆನಂದಮಯ ಜೀವನ ಮಾಡಬಹುದು ಎಂದು ಅರ್ಥ.  ಆದರೆ ಜ್ಞಾನದ ಬೆಳಕನ್ನು ನೋಡಲಾರದ, ಜ್ಞಾನದ ಉಪದೇಶವನ್ನು ಕೇಳಲಾರದ ಮೂಢಜನರು ಋತ ದಮಾರ್ಗವನ್ನು ಅಂದರೆ ಧರ್ಮಮಾರ್ಗವನ್ನು ಬಿಡುತ್ತಾರೆ. ಅಂತಹ ದುಷ್ಕರ್ಮಿಗಳು ಜೀವನದ ಪಥವನ್ನು ಎಂದಿಗೂ ಕಾಣಲಾರರು, ಅಂದರೆ ಅವರಿಗೆ ಆನಂದಮಯ ಜೀವನ ಲಭ್ಯವಾಗಲು ಅವಕಾಶವೇ ಇಲ್ಲದಂತಾಗುತ್ತದಲ್ಲವೇ?
ಈ ವಿವರಣೆ ನೋಡಿದಾಗ ಇಸ್ಲಾಮ್ ಅಥವಾ ಕ್ರೈಸ್ತಮತಗಳಲ್ಲಿ ಹೇಳುವಂತೆ “ ಈ ಮಾರ್ಗವನ್ನು ನಂಬಿದರೆ ಮಾತ್ರ ನೀನು ಮೋಕ್ಷ ಪಡೆಯಬಲ್ಲೆ” ಎಂಬಂತೆ ಬಾಸವಾಗುತ್ತಲ್ಲಾ! ಎನಿಸದೆ ಇರದು.ಆದರೆ ವೇದವನ್ನು ಸರಿಯಾಗಿ ಅರ್ಥಮಾಡಿಕೊಂಡವರಿಗೆ  ಇಂತಹ ಸಂದೇಹ ಬರಲಾರದು. ಕಾರಣ “ನಿನ್ನನ್ನು ಕಲ್ಯಾಣಮಾರ್ಗದಲ್ಲಿ ಯಾವುದು ಕರೆದುಹೊಂಡು ಹೋಗುತ್ತದೋ ಆ ಮಾರ್ಗದಲ್ಲಿ ನಿನ್ನ ಜೀವನ ರಥ ಸಾಗಲಿ, ಎಂಬ  ಮಂತ್ರದ ವಿವರಣೆಯನ್ನು  ಈಗಾಗಲೇ ನಾವು ನೋಡಿದ್ದೇವೆ.ಹಾಗಾಗಿ ವೇದವು ನೆಮ್ಮದಿಯ ಮತ್ತು ಆರೋಗ್ಯಕರ ಜೀವನ ಸೂತ್ರಗಳನ್ನು ಹೇಳುವುದರಿಂದ ಈ ತಿಳುವಳಿಕೆ ಪಡೆದವನು ಸುಖಿಯಾಗಿರಬಲ್ಲನೆಂದೂ ಈ ಅರಿವನ್ನು ತಿರಸ್ಕರಿಸುವವನು ಸುಖಿಯಾಗಿರಲಾರನೆಂದಷ್ಟೇ ಈ ಮಂತ್ರದ ಅರ್ಥ.  ಪ್ರಭುಸಾಕ್ಷಾತ್ಕಾರವೆಂದರೆ  ಭಗವಚ್ಛಕ್ತಿಯ ಸ್ವರೂಪವನ್ನು ನಮ್ಮ ಅಂತರ್ಯದಲ್ಲಿ ಅನುಭವಿಸುವುದೆಂದು ಅರ್ಥ ಮಾಡಿಕೊಂಡರೂ ತಪ್ಪಿಲ್ಲ.

-ಹರಿಹರಪುರಶ್ರೀಧರ್