Pages

Wednesday, October 22, 2014

ಮಡಿವಂತಿಕೆಯನ್ನು ಮೆಟ್ಟಿನಿಂತಿದ್ದ ಮಹಾನುಭಾವ ಮುಕುಂದೂರು ಸ್ವಾಮೀಜಿ
ಶಿಷ್ಯನೊಬ್ಬ  ಏದುಸಿರು ಬಿಡುತ್ತಾ  ಓಡೋಡಿ ಆಶ್ರಮಕ್ಕೆ ಬಂದು ಗಾಬರಿಯಲ್ಲಿ ಹೇಳುತ್ತಾನೆ  ಸ್ವಾಮೀ, ದೊಡ್ದಬೋರೇಗೌಡ ಸತ್ತೋಗ್ಬುಟ್ಟ.
ಸತ್ತೋಗ್ ಬಿಟ್ನಾ? ಎಲ್ಲಾರೋ ಉಂಟೇ?.. . . . .ಸ್ವಾಮಿಗಳು ಶಾಂತವಾಗಿಯೇ ಕೇಳುತ್ತಾರೆ.
 ನಾನೇ ನೋಡ್ದೇ ಸ್ವಾಮೀ,  ಹೆಣ ನೋಡಿ ಬಂದೇ ಹೇಳ್ತಾ  ಇರೋದು - ಸ್ವಾಮಿಗಳು ತನ್ನ ಮಾತನ್ನು ನಂಬುತ್ತಿಲ್ಲವೆಂದು ಭಾವಿಸಿ ಶಿಷ್ಯನು ವಿಷಯವನ್ನು ಖಚಿತ ಪಡಿಸಲು ಮತ್ತೆ ಮತ್ತೆ ಹೇಳುತ್ತಾನೆ.
ಸರಿ ಬುಡಪ್ಪಾ. ನೀನೇ ಕಂಡೆ ಅಂದ್ಮ್ಯಾಕೆ ಇನ್ನೇನೈತೆ ಎನ್ನುತ್ತಾ  ಸ್ವಾಮಿಗಳು  ಬೆಳೆಗೆರೆಕೃಷ್ಣಶಾಸ್ತ್ರಿಗಳತ್ತ ತಿರುಗಿ  ಸ್ವಾಮಿ ಸತ್ತೋಗೋದು ಎಲ್ಲಾರ ಉಂಟೆ! ಅದು ಬಂದೂ ಇಲ್ಲ. ಓಗೋದೂ ಇಲ್ಲ. ಅದು ಯಾವತ್ತಿಗೂ ಇರೋದು. ಇವನೇನೋ ನೋಡ್ದೇ ಅಂತಾ ಬೇರೆ ಏಳ್ತಾನೆ! ಎಂಗೋಪಾ, ನಾ ಕಾಣೆ. ಇವ್ನಂತೂ  ಸಾಯಕ್ಕಿಲ್ಲ. ಯೆಂಗಪ್ಪಾ ಬಾಳಿ ಬದ್ಕಿ ಸತ್ತು ಓಗೋದು?   ಎಂದು   ಗಟ್ಟಿಯಾಗಿ ನಗ್ತಾರೆ. ಶಿಷ್ಯ ತಬ್ಬಿಬ್ಬಾಗ್ತಾನೆ.
-ಇದು ಮುಕುಂದೂರು ಸ್ವಾಮಿಗಳ ಜೀವನದ ಒಂದು ಪುಟ್ಟ ಘಟನೆ. ಆತ್ಮಕ್ಕೆ ಸಾವಿಲ್ಲ ಎಂಬುದನ್ನು ಸ್ವಾಮಿಗಳು  ಸರಳವಾಗಿ ಗ್ರಾಮೀಣ ಭಾಷೆಯಲ್ಲಿ ಹೇಳಿದ ಪರಿ ಇದು.  ಅದು ಬಂದೂ ಇಲ್ಲ. ಓಗೋದೂ ಇಲ್ಲ. ಅದು ಯಾವತ್ತಿಗೂ ಇರೋದು ಅನ್ನೋ ಅವರ ಮಾತಿನಲ್ಲಿ ಗೀತೆಯ ಸಾರವೇ ಅಡಗಿದೆಯಲ್ಲಾ! ಸ್ವಾಮೀಜಿಯವರ ಈ ಮಾತನ್ನು ಭಗವದ್ಗೀತೆಯಲ್ಲಿ ನೋಡೋಣ.
ಭವದ್ಗೀತೆಯ ಎರಡನೇ ಅಧ್ಯಾಯದ ೨೦ನೇ ಶ್ಲೋಕದಲ್ಲಿ  ಶ್ರೀಕೃಷ್ಣನು ಹೇಳುತ್ತಾನೆ . . . . .

ನಜಾಯತೇ ಮ್ರಿಯತೇ ವಾ ಕದಾಚಿನ್ನಾಯಮ್

ಭೂತ್ವಾ ಭವಿತಾ ವಾ ನ ಭೂಯಃ |
ಅಜೋ ನಿತ್ಯಃ ಶಾಶ್ವತೋಯಂ ಪುರಾಣೋ
ನ ಹನ್ಯತೇ ಹನ್ಯಮಾನೇ ಶರೀರೇ ||

ಭಾವಾರ್ಥ : ಆತ್ಮನು ಯಾವ ಕಾಲದಲ್ಲೂ ಹುಟ್ಟುವವನೂ ಅಲ್ಲ, ಸಾಯುವವನೂ ಅಲ್ಲ, ಹಾಗೂ ಹಿಂದೆ ಉತ್ಪನ್ನವಾಗಿ ಈಗ ಇರುವವನೂ ಅಲ್ಲ, ಏಕೆಂದರೆ ಆತ್ಮನು ಜನ್ಮರಹಿತನು, ನಿತ್ಯನೂ, ಸನಾತನನೂ ಮತ್ತು ಪುರಾತನವೂ ಆಗಿದ್ದು, ಶರೀರವು ನಾಶವಾದರೂ ಆತ್ಮನು ನಾಶವಾಗುವುದಿಲ್ಲ.

ಇಷ್ಟೆಲ್ಲವನ್ನೂ ಗ್ರಾಮೀಣಭಾಷೆಯಲ್ಲಿ  ಅದು ಬಂದೂ ಇಲ್ಲ. ಓಗೋದೂ ಇಲ್ಲ. ಅದು ಯಾವತ್ತಿಗೂ ಇರೋದು ಅಂತಾ ಹೇಳಿ ಬಿಟ್ಟರು.
೧೯೬೬ ರಲ್ಲಿ ದೇಹವನ್ನು ತ್ಯಜಿಸಿದ ಶ್ರೀ ಮುಕುಂದೂರು ಸ್ವಾಮಿಗಳು ೧೫೦ ವರ್ಷಕ್ಕೂ ಹೆಚ್ಚು ಕಾಲ ಬದುಕಿದ್ದ ಅವಧೂತರು. ಪಕ್ಕಾ ಗ್ರಾಮೀಣ  ಮನುಷ್ಯ. ಹೆಚ್ಚು ಓದಿದವರಲ್ಲ. ಆದರೆ ಸಾಧನೆ ಮಾಡಿ ಅಸಾಧ್ಯವಾದುದನ್ನು ಸಾಧಿಸಿಕೊಂಡಿದ್ದವರು. ಇತ್ತೀಚೆಗೆ ನಿಧನರಾದ ಶ್ರೀ ಬೆಳೆಗೆರೆಕೃಷ್ಣಶಾಸ್ತ್ರಿಗಳಿಗೆ ಕೆಲವು ವರ್ಷಗಳು ಈ ಅವಧೂತರ ಸಾನ್ನಿಧ್ಯದಲ್ಲಿ ಇರುವ ಅವಕಾಶವು ದೊರೆತಿತ್ತು. ಮುಕುಂದೂರು ಸ್ವಾಮೀಜಿಯವರ ಪ್ರತ್ಯಕ್ಷ ದರ್ಶಿಗಳಾಗಿದ್ದ  ಶ್ರೀ ಶಾಸ್ತ್ರಿಗಳಿಂದ ಕೇಳಿ ತಿಳಿದುಕೊಂಡ ಮತ್ತು ಅವರೇ ಬರೆದಿರುವ ಯೇಗದಾಗೆಲ್ಲಾ ಐತೆ  ಪುಸ್ತಕದಿಂದ ಆಯ್ದ ಕೆಲವು ಘಟನೆಗಳನ್ನು ಇಲ್ಲಿ ಸ್ಮರಣೆ ಮಾಡಿಕೊಳ್ಳುವೆ.
      ಸೃಷ್ಟಿ ರಹಸ್ಯ:
ಮುಕುಂದೂರು ಸ್ವಾಮಿಗಳು ಅಧ್ಯಾತ್ಮ ವಿಚಾರ ತಿಳಿಸುವ  ಶೈಲಿ    ಬಲು ಸರಳ. ಆದರೆ ಅದ್ಭುತ..........
ಹರಿಯುವ ಝರಿಯ ದಡದಲ್ಲಿ ಶಾಸ್ತ್ರಿಗಳೊಡನೆ ಕುಳಿತಿದ್ದಾರೆ.  ಝರಿಯಲ್ಲಿ ತೇಲಿಹೋಗಿ ಮಾಯವಾಗುವ ಕೆಲವು ಗುಳ್ಳೆಗಳನ್ನು ನೋಡುತ್ತಾ ಅವರ ಬಾಯಲ್ಲಿ ಬಂದ ಮಾತುಗಳನ್ನು ಕೇಳಿ..........

-"ಅಗೋ ನೋಡಪ್ಪಾ ತಮಾಶೆ! ಅದರಪಾಡಿಗೆ ನೀರು ಹರಿದು ಹೋಗ್ತಿದೆ, ಅದೆಲ್ಲಿಂದ ಬಂದ್ವು  ಈ ಗುಳ್ಳೆಗಳು! ಅದೆಷ್ಟೊಂದು ಗುಳ್ಳೆಗಳು ಬಂದ್ವು! ಅಗೋ ಅಲ್ಲಿ ನೋಡು, ಅಷ್ಟು ದೂರ ಹೋಗೋ ಹೊತ್ಗೆ  ಒಂದೂ ಇಲ್ಲಾ! ಇಲ್ ಹುಟ್ಟಿದ್ಯಾಕೇ? ಅಲ್ಲಿ ವರಗೆ ಹೋಗಿದ್ಯಾಕೇ?  ಒಂದೂ ಇಲ್ದಂಗ್  ಹೋಗಿದ್  ಎಲ್ಲಿಗೆ?
‘ಹುಟ್ಟಿದ್ ಯಾವ್ದು?, ಅಲ್ಲಿಗಂಟ ಹೋಗಿದ್ಯಾವ್ದು? ಆಮೇಲ್ ಇಲ್ವಾಗಿದ್ದು  ಯಾವ್ದು? ಎಲ್ಲಾ ನೀರೇ!! ಇಂಗೇ ಅಲ್ವೇ  ನಮ್ ಹುಟ್ಟು?  ಯಾಕೋ ಏನೋ ಹುಟ್ಟೋದು, ಅದರ ಸೆಳವಿನಾಗೇ ಅಷ್ಟು ದೂರ ಹೋಗೋದು, ಮತ್ ಅದರಾಗೇ ಕಾಣದಂಗಾಗೋದು. ಇದೇ ಅಲ್ವೇ ಕೌತುಕ? ಯಾವ್ದೂ ಇಷ್ಟೇ,  ಕೌತುಕ ಅಂದ್ರೆ ಕೌತುಕ,  ಇಲ್ಲಾ ಅಂದ್ರೆ ಏssನೂ ಇಲ್ಲ. ಸೃಷ್ಟಿ ರಹಸ್ಯವನ್ನು ನೀರಿನ ಮೇಲಿನ ಗುಳ್ಳೆಯ ಉಧಾಹರಣೆಯೊಂದಿಗೆ  ಕಣ್ಣಿಗೆ ಕಟ್ಟುವಂತೆ ಬಿಚ್ಚಿಟ್ಟ  ಸ್ವಾಮಿಗಳ  ಈ ಶೈಲಿ  ಅದ್ಭುತ!!

ಹಿಂಗೇ ಬಿಡದಂಗೆ ಹಿಡ್ಕಂದ್ರೆ ಅವಾ ಬಿಡಂಗೇ ಇಲ್ಲಾ!!

ಸ್ವಾಮಿಗಳ ಆಶ್ರಮದ ಮುಂದೆ ನಿಂತು ದೂರಕ್ಕೆ ಕಣ್ಣು ಹಾಯಿಸಿದರೆ ಸಿದ್ಧರ ಬೆಟ್ಟ ಕಾಣುತ್ತೆ. ಆ ಬೆಟ್ಟವನ್ನು ಹತ್ತಲು ಕೃಷ್ಣಶಾಸ್ತ್ರಿಗಳೊಟ್ಟಿಗೆ ಒಮ್ಮೆ ಸ್ವಾಮೀಜಿ ಹೊರಟರು. ಆಶ್ರಮದಿಂದ ೭-೮ ಮೈಲಿ ನಡೆದು ಬೆಟ್ಟದ ಬುಡ ಸೇರಿದರು. ಸ್ವಾಮೀಜಿಗೆ ಬೆಟ್ಟಹತ್ತುವುದೆಂದರೆ ಬಲು ಸಲೀಸು. ಸ್ವಾಮೀಜಿಯಂತೂ ಬಂಡೆಯಿಂದ ಬಂಡೆಗೆ ಜಿಗಿಯುತ್ತಾ ನಿರಾಯಾಸವಾಗಿ ಹತ್ತುತ್ತಾ ಹೊರಟರು, ಆದರೆ ಕೃಷ್ಣಶಾಸ್ತ್ರಿಗಳಿಗೆ ಆಯಾಸವಾಗ್ತಾ ಇದೆ, ಎಷ್ಟು ಪ್ರಯತ್ನ ಪಟ್ಟರೂ ಸ್ವಾಮೀಜಿ ಯವರೊಟ್ಟಿಗೆ ಹೆಜ್ಜೆ ಹಾಕಲು ಶಾಸ್ತ್ರಿಗಳಿಗೆ ಸಾಧ್ಯವಾಗುತ್ತಿಲ್ಲ. ಒಂದು ಕಡೆಯಂತೂ ಎರಡು ಎತ್ತರವಾದ ಬಂಡೆಗಳ ನಡುವೆ ಆಳವಾದ ಕಂದಕ. ಸ್ವಾಮೀಜಿ ಸಲೀಸಾಗಿ ಜಿಗಿದೇ ಬಿಟ್ಟರು. ಆದರೆ ಶಾಸ್ತ್ರಿಗಳಿಗೆ ಸಾಧ್ಯವಾಗುತ್ತಿಲ್ಲ. ಆಗ ಸ್ವಾಮೀಜಿಯು ತಾವು ತಲೆಗೆ ಸುತ್ತಿದ್ದ ರುಮಾಲು ಬಿಚ್ಚಿ ಹಗ್ಗದಂತೆ ಉದ್ದಮಾಡಿ ಅದರ ಒಂದು ತುದಿಯನ್ನು ಶಾಸ್ತ್ರಿಗಳತ್ತ ಎಸೆಯುತ್ತಾರೆ,  " ಈಗ ಹಗ್ಗ ಬಿಗಿಯಾಗಿ ಹಿಡ್ಕಾ ಇವ ನಿನ್ನ ಕರಕೊನ್ಡಾನು! " ಸ್ವಾಮೀಜಿ ನಗುತ್ತಾ ಹೇಳುತ್ತಾರೆ. ಶಾಸ್ತ್ರಿಗಳು ರುಮಾಲಿನ ಸಹಾಯದಿಂದ ಬಂಡೆಯ ಮೇಲೇರುತ್ತಾರೆ. ಸ್ವಾಮೀಜಿ ಮಾರ್ಮಿಕವಾಗಿ ಹೇಳುತ್ತಾರೆ" ನೋಡಪ್ಪಾ ಹಿಂಗೇ ಬಿಗಿಯಾಗಿ ಹಿಡ್ಕಂದ್ರೆ ಇವ ಕೈ ಬಿಡನ್ಗೇ ಇಲ್ಲಾ." ಭಗವಂತನನ್ನು ಕಾಣಲು ಎಷ್ಟು ದೃಢ ವಾದ ನಂಬಿಕೆ ಇರಬೇಕು , ಅನ್ನೋದನ್ನು ಸ್ವಾಮೀಜಿಯವರು ಚಿಕ್ಕ ಚಿಕ್ಕ ಘಟನೆಗಳಲ್ಲೂ ಮನಮುಟ್ಟುವಂತೆ ಹೇಳುತ್ತಿದ್ದ ಪರಿ ಇದು.

"ಎಲ್ಲಾ ರೂಪವು ತಾನಂತೆ ಶಿವ ಎಲ್ಲೆಲ್ಲಿಯೂ ಅವ ಇಹನಂತೆ"

 ಬೆಟ್ಟವನ್ನು ಹತ್ತಿ ಹತ್ತಿ ಶಾಸ್ತ್ರಿಗಳಿಗೆ ಹೊಟ್ಟೆಯಲ್ಲಿ ಹಸಿವು ಜಾಸ್ತಿಯಾಗಿ ಬಿಟ್ಟಿತು. ಆಯಾಸ ಹೆಚ್ಚಾಗಿ ಬಂಡೆಯ ಮೇಲೆ ಮಲಗಿಬಿಟ್ರು, ಸ್ವಾಮೀಜಿಯಾದರೋ ಪ್ರಕೃತಿಯನ್ನೆಲ್ಲಾ ಬಣ್ಣಿಸ್ತಾ ಇದಾರೆ,

-ಯಾರಿಗೆ ಬೇಕು ಸ್ವಾಮೀಜಿ? ನನಗಂತೂ ತುಂಬಾ ಹಸಿವಾಗಿದೆ.
-ಬೆಟ್ಟಕ್ ಬಂದು ಹಸಿವಾಗ್ತದೆ ಅಂದ್ರೆ ಇಕ್ಕೊರ್ ಯಾರು? ಯೇನಾದ್ರ ಬುತ್ತಿ ತರ್ಬೇಕಿತ್ತಪ್ಪಾ!

- ಇಷ್ಟು ತಡವಾಗುತ್ತೆ ಅಂತಾ ನನಗೆ ಗೊತ್ತಾಗ್ಲಿಲ್ಲವಲ್ಲಾ
-ಅಂಗಾದ್ರೆ ಯಾರಾನ ತಂದಾಕಿದ್ರೆ ತಿಂದ ಬುಡ್ತೀಯಾ? ಹಾಸ್ಯಮಾಡಿ ಸ್ವಾಮೀಜಿ ನಕ್ಕರು, ಶಾಸ್ತ್ರಿಗಳೂ ನಕ್ಕರು.

-ಅಗೋ ಅಲ್ಲಿ ಯಾರೋ ಬಂದಂಗಾತು ,ಅವರನ್ನ ಕೇಳಾಣ " ಸ್ವಾಮೀಜಿ ಮಾತು ಕೇಳಿ ಶಾಸ್ತ್ರಿ ತಿರುಗಿ ನೋಡ್ತಾರೆ , ಯಾರೂ ಇಲ್ಲಾ.
-ಅಗೋ ಅಲ್ಲಿ ನೋಡು , ಆಕಾಶದಲ್ಲಿ ಬಹು ಎತ್ತರದಲ್ಲಿ ಹಾರಾಡ್‌ತಿದ್ದ ಎರಡು ಹದ್ದುಗಳನ್ನು ಸ್ವಾಮೀಜಿ ತೋರಿಸಿ ಹೇಳ್ತಾರೆ, " ಎಲೆ ಅಪ್ಪಯ್ಯಗಳಾ ಈ ಹುಡುಗನಿಗೆ ಭಾರಿ ಹಸಿವಾಗೈತೆ, ವಸಿ ಎನಾದರ ಕೊಡ್ರಪ್ಪಾ!
ಸ್ವಾಮೀಜಿ ತಮಾಷೆ ಮಾಡ್ತಾರಲ್ಲಾ ಅಂತಾ ಶಾಸ್ತ್ರಿಗಳಿಗೆ ಬೇಸರವೇ ಆಗುತ್ತೆ,
ಅಷ್ಟರಲ್ಲಿ ಸ್ವಾಮೀಜಿ ಹೇಳ್ತಾರೆ" ಇಗಳಪ್ಪಾ, ಕೊಟ್ಟೆ ಬಿಟ್ರಲ್ಲಾ! ತಕೋ ತಿನ್ನು , ಬಾಳಾ ಹಸ್ದಿದ್ದೀಯಾ ,ಅಂತಾ ಕೈಲಿದ್ದ ಬಾಳೆಹಣ್ಣನ್ನು ಕೊಡ್ತಾರೆ.
-ತಿನ್ನು, ತಿನ್ನು, ಕೇಳಿದ್ರೆ ಇನ್ನೂ ಕೊಡ್ತಾರೆ,
ಶಾಸ್ತ್ರಿಗಳು ಹಣ್ಣನ್ನು ನೋಡ್ತಾರೆ; ಆಗತಾನೆ ಗುಡಾಣದಿಂದ   ತೆಗೆದಂತಿದೆ. ಒಂದಾದ ಮೇಲೊಂದರಂತೆ ಮೂರು ಹಣ್ಣನ್ನು ಕೊಟ್ಟಿದ್ದಲ್ಲದೆ , ಸ್ವಾಮೀಜಿಯವರೂ ಮೂರು ಬಾಳೆ ಹಣ್ಣನ್ನು ತಿನ್ನುತ್ತಾರೆ.
ಆಗ ಶಾಸ್ತ್ರಿಗಳು ಕೇಳ್ತಾರೆ" ಸ್ವಾಮೀಜಿ ಈ ಹಣ್ಣು ಎಲ್ಲಿಂದ ಬಂತು?

-ಆವಾಗ ಬರೋವಾಗ ಅಲ್ಲೊಬ್ಬ ಬಂದಾ ನೋಡು, ಅವಾಕೊಟ್ಟ.
-ಯಾರು ಸ್ವಾಮೀಜಿ ಅವನು? ನಾನು ನೋಡಲೇ ಇಲ್ಲವಲ್ಲಾ?
-ನೀನು ನೋಡ್ಲಿಲ್ಲಾ ಅಂದ್ರೆ ಅವನು ಬಂದೆ ಇಲ್ಲಾ ಅನ್ನು? ಅವನು ಇಲ್ವೆ ಇಲ್ಲಾ ಅನ್ನು?

ಶಾಸ್ತ್ರಿಗಳಿಗೆ ಎಲವೂ ವಿಸ್ಮಯವಾಗಿ ಕಾಣುತ್ತೆ.
ಸ್ವಾಮೀಜಿ ನಗ್ತಾ ಹಾಡ್ತಾರೆ" ಎಲ್ಲಾ ರೂಪವೂ ತಾನಂತೆ ಶಿವಾ, ಎಲ್ಲೆಲ್ಲಿಯೂ ಅವಾ ಇಹನಂತೆ, ಕಾಣಲಾರದವರಿಗೆ ಕಲ್ಲಂತೆ.....ಅವ ಇಲ್ಲಂತೆ...
ಹೀಗೆ ಅದೆಷ್ಟು ಘಟನೆಗಳೋ!

ನಿನ್ನ ಹೃದಯದಲ್ಲಿ ಅವನಿಗೆ ಜಾಗ ಕೊಡು

ಒಂದು ಹೂ ಬುಟ್ಟಿ ಹಿಡಿದು ಸ್ವಾಮಿಗಳು ಆಶ್ರಮದ ಹೊರಗೆ ಹೂ ಗಿಡಗಳ ಹತ್ತಿರ ಹೋಗುತ್ತಾರೆ.ಅವರು ಹೂ ಕೊಯ್ಯುವಾಗ ಹೂಗಿಡಗಳನ್ನು ಮಾತನಾಡಿಸುವ ಪರಿ ಅಚ್ಚರಿ ಮೂಡಿಸುತ್ತದೆ.
ಮೊದಲು ಎಲ್ಲಾ ಗಿಡಗಳಿಗೂ ನೀರುಣಿಸಿ ನಂತರ ಒಂದು ಗಿಡದ ಹತ್ತಿರ ಬರುತ್ತಾರೆ. ಅದು ಸೊರಗಿರುತ್ತದೆ.  ಯಾಕಮ್ಮಾ ಸೊರಗಿದೀಯಾ? ನಿನ್ನೆ ನೀರು ಕುಡಿದಿರಲಿಲ್ವಾ? ತಗೋ ನೀನೊಂದಿಷ್ಟು ಜಾಸ್ತಿ ಕುಡಿ ಎಂದು ಹೇಳುತ್ತಾ ಸಾಕಷ್ಟು ನೀರನ್ನು ಗಿಡಕ್ಕೆ ಹಾಕುತ್ತಾರೆ. ನಂತರ ಹೂ ಕೊಯ್ಯಲು ಆರಂಭಿಸುತ್ತಾರೆ. ಹೆಚ್ಚು ಹೂ ಬಿಟ್ಟಿರುವ ಗಿಡದ ಹತ್ತಿರ ಹೋಗಿ  ನೀ ಸಾವ್ಕಾರ್ತಿ ನಾಲ್ಕು ಹೂವು ಕೊಡವ್ವಾ! ಎಂದು ಹೇಳಿ ಗಿಡಕ್ಕೆ ನೋವಾಗದಂತೆ ಅಲ್ಲೊಂದು ಇಲ್ಲೊಂದು ಹೂವನ್ನು ಬಿಡಿಸಿಕೊಳ್ಳುತ್ತಾರೆ.

ಹೂವು ಕಡಿಮೆ ಇರುವ ಮತ್ತೊಂದು ಗಿಡವನ್ನು ನೋಡಿ  ಯಾಕವ್ವಾ, ನೀ ಬಡವಿ ಆಗಿದ್ದೀಯಾ? ಎಂತಾ ಬಡವರಾದರೂ   ಭಿಕ್ಷೆಗೆ ಬಂದವರಿಗೆ ನಾಸ್ತಿ ಅನ್ನಬಾರದು ಒಂದೇ ಒಂದು ಕೊಡು ಸಾಕು, ಎಂದು ಹೇಳುತ್ತಾ ಒಂದು ಹೂ ಬಿಡಿಸಿಕೊಳ್ಳುತ್ತಾರೆ. ಹೂಬುಟ್ಟಿ ಹಿಡಿದು ಆಶ್ರಮದ ಒಳಗೆ ಹೋಗುತ್ತಾರೆ.
ಶಿವಲಿಂಗದೆದುರು ನಿಂತು  ತಕ್ಕೋ ನಿಂದು ನಿಂಗೇ ಇರಲಿ ಎಂದು ಶಿವಲಿಂಗದ ಮೇಲೆ ಸುರಿಯುತ್ತಾ ಗಟ್ಟಿಯಾಗಿ ನಗುತ್ತಾ ಹೇಳುತ್ತಾರೆ ಅಯ್ಯೋ ಕತೆಯೇ ನೀನೇ ಕೊಟ್ಟಿದ್ದೂ   ಅಂದ್ರೂ ತಗೊಳ್ಳೋನ್  ಒಬ್ಬ ಬ್ಯಾರೇ ಅಂತಾಗುತ್ತೆ. ಮಾತಾಡಿದ್ರೆ ಬಂತು ನೋಡು  ನೀನು-ನಾನು, ಅದು-ಇದು, ಅಲ್ಲಿ-ಇಲ್ಲಿ, ಎಲ್ಲಾ ಸುಳ್ಳು. ಸುಳ್ಳು ಅಂದ್ರೆ ಮೈಲಿಗೆ ಸುಮ್ಕಿದ್ರೆ ಅದೇ ಮಡಿ. ಎಂಗಾನ ಮಾಡೂ ಅಂದ್ರೂ ಅಂಬೋನೇ ಬ್ಯಾರೇ ಅಂತಾಗುತ್ತೆ.. . . . . . . .
ಶಿವನ ಅಭಿಷೇಕಕ್ಕೆ ಮಡಿಉಟ್ಟು ಹೊಸಗಡಿಗೆಯಲ್ಲಿ ಳ್ಳದ  ನೀರು ತರ್ಬೇಕು ಅಂತಾರೆ, ಯಾವ ಮಡಿ, ಯಾವ ಮೈಲಿಗೆ, ಯಾವ ಹೊಸದು,ಯಾವ ಹಳೇದು,ಯಾವ್ದು ಹಳ್ಳದ ನೀರು, ಯಾವ್ದು  ಭಾವಿ ನೀರು,ಯಾವ್ದು ಕೆರೆ ನೀರು, ಎಲ್ಲಾ ಕಕುಲಾತಿ! ಯಡೆ ಇಡಬೇಕೂ ಅಂತಾರೆ, ಅವ್ನು ಎಂದು ಉಪವಾಸ ಇದ್ದ? ಯಡೆ ಅಂದ್ರೆ ಜಾಗ! ನಿನ್ನ ಹೃದಯದಲ್ಲಿ ಅವನಿಗೆ ಜಾಗ ಕೊಡು ಅಂತಾ ಅಲ್ವೇ ಅರ್ಥ?

ನಮ್ಮರಿವೇ ನಮಗೆ ಗುರು

ಕೃಷ್ಣಶಾಸ್ತ್ರಿಗಳು ಸ್ವಾಮೀಜಿಯವರನ್ನು ಕೇಳುತ್ತಾರೆ  ಸ್ವಾಮಿ, ಉಪದೇಶಕೊಟ್ರು,ಉಪದೇಶ ತಗೊಂಡೆ, ಅಂತಾರಲ್ಲಾ, ಹಾಗಂದ್ರೆ ಏನು?
ಸ್ವಾಮೀಜಿ ಹೇಳ್ತಾರೆ-  ದೇಶ ಅಂದ್ರೆ ಜಾಗ, ಉಪ ಅಂದ್ರೆ ಅತ್ರ  ಅಂತ. ಅಂದ್ರೆ ಅವನಿದ್ದಾನಲ್ಲಾ ಅವನ ಅತ್ರ ಇರೋದು ಅಂತಾ ಜೋರಾಗಿ ಸ್ವಾಮೀಜಿ ನಗುತ್ತಾ ಮಾತು ಮುಂದುವರೆಸುತ್ತಾರೆ  ನೋಡಪ್ಪಾ, ಅವನಿಂದಲೇ ಇದೆಲ್ಲಾ ಆದದ್ದು, ಅವನೇ ಇದನ್ನೆಲ್ಲಾ ಆಡಿಸ್ತಿರೋವಾಗ ಅವನ ಪಕ್ಕದಲ್ಲಿ ಅಂದ್ರೆ ಏನು? ಅವನ ಪಕ್ಕಕ್ಕೆ ಹೋಗಿ ಇರೋನು ಆ ಇನ್ನೊಬ್ಬ ಯಾರು? ಅದೆಲ್ಲಾ ಸಟೆ ಕಣೋ [ಅದೆಲ್ಲಾ ಸುಳ್ಳು] ನೀನು ಬ್ಯಾರೇ, ನಾನು ಬ್ಯಾರೇ,ಅವನು ಬ್ಯಾರೇ ಅನ್ನೋ ಹಂಕಾರ. ಅದು ಕೊಡೋದೂ ಅಲ್ಲ. ಉಪದೇಶ ತಗಂಬೋದೂ ಅಲ್ಲ. ಅದೆಲ್ಲಾ ಏನೇನೋ ಕೋತಿ ಚೇಷ್ಟೆ ತೋರಿಸ್ತಾರೆ. ನಾನು ಗುರು ಪುತ್ರ ಅಂತ ನಾಟ್ಕಾ ಆಡ್ತಾರೆ. ತನ್ನ ಅರಿವಿಗಿಂತ ಗುರು ಯಾರು? ಗುರುವಿನ ಉಪದೇಶ ಯಾವುದು? ನೆರೆಹೊರೆ ನೋಡಿ ಗುರ್ ಗುರ್ ಅಂಬೋದು ಬಿಟ್ರೆ ಅವನೇ ಗುರು.
ಅಬ್ಭಾ ಭಗವಂತನ ಸ್ವರೂಪವನ್ನು ಅದೆಷ್ಟು ಸರಳವಾಗಿ ಹೇಳಿದ್ರು! ಎಲ್ಲೆಲ್ಲೂ ಇರುವ ಭಗವಂತನ ಹತ್ತಿರ ಇರೋದು ಅಂದ್ರೆ ಭಗವಂತನನ್ನು ತನ್ನಲ್ಲಿ ಕಾಣೋದು ಎನ್ನೋ ವಿಚಾರವನ್ನು ಅತ್ಯಂತ ಸರಳವಾಗಿ ಸ್ವಾಮೀಜಿ ತನ್ನ ಭಕ್ತರಿಗೆಲ್ಲಾ ಅವಕಾಶ ಒದಗಿದಾಗಲೆಲ್ಲಾ ಹೇಳ್ತಾಇದ್ರು. ಶಂಕರರ ತತ್ ತ್ವಂ ಅಸಿ ಅಹಂ ಬ್ರಂಹಾಸ್ಮಿ - ಈ ವಿಚಾರಗಳನ್ನು ಅತ್ಯಂತ ಸgಳವಾಗಿ ತಮ್ಮದೇ ಆದ ಗ್ರಾಮೀಣ ಶೈಲಿಯಲ್ಲಿ ಜನರಿಗೆ ಹೇಳುತ್ತಿದ್ದ ಸ್ವಾಮೀಜಿಯವರದು ಅದ್ಭುತವಾದ ಶೈಲಿ.

ಕೆಟ್ಟದರಲ್ಲಿ ಒಳ್ಳೆಯದನ್ನು ಹುಡುಕು

ಆಶ್ರಮಕ್ಕೆ ಶಿಶ್ಯರೊಬ್ಬರು ತನ್ನ ಮಗುವನ್ನು ಕರೆದುಕೊಂಡುಬಂದಿದ್ದರು. ಆಶ್ರಮದ ಹೊರಗೆ ಸ್ವಾಮೀಜಿಯವರ ಜೊತೆ ಮಾತನಾಡುತ್ತಾ ನಿಂತಿದ್ದಾಗ ಹತ್ತಿರದಲ್ಲಿದ್ದ ಗುಲಾಬಿ ಗಿಡವನ್ನು ನೋಡಿ ಹೂವಿನಿಂದ ಆಕರ್ಶಿತವಾದ ಮಗು ಗಿಡದ  ಹತ್ತಿರ ಹೋಗುತ್ತದೆ. ಆಗ ತಾಯಿಯು  ಅಯ್ಯೋ ಅಯ್ಯೋ ಮುಳ್ಳು! ಮುಳ್ಳು! ಅಲ್ಲಿ ಹೋಗಬೇಡ. ಎಂದು ಮಗುವನ್ನು ಬಾಚಿ ಎತ್ತಿಕೊಳ್ಳುತ್ತಾಳೆ.ಆಗ ಸ್ವಾಮೀಜಿ ಹೇಳುತ್ತಾರೆ  ಹೂವಿನ ಗಿಡದಾಗೆ ಮುಳ್ಳು ಐತೆ ಅಂತಾ ಏಳಿಕೊಡ್ ಬ್ಯಾಡ. ಮುಳ್ಳಿನ ಗಿಡದಾಗೆ  ಹೂ ಐತೆ  ಅಂತಾ ಹೇಳಿಕೊಡು,ಎಂದು ನಗುತ್ತಾರೆ. ಒಳ್ಳೆಯದರಲ್ಲಿ ಕೆಟ್ಟದನ್ನು ಹುಡುಕುವುದಲ್ಲ, ಕೆಟ್ಟದರಲ್ಲಿ ಒಳ್ಳೆಯದನ್ನು ಹುಡುಕಬೇಕೆಂಬುವ ನೀತಿಯನ್ನು ಸ್ವಾಮೀಜಿಯು ಈ ಪಟ್ಟಘಟನೆಯಲ್ಲೂ ಹೇಳಿದ್ದರು.

ಆದೇವ್ರಿಗೇ  ಮೈಲಿಗೆ ಆಯ್ತು ಅಂದ್ಮ್ಯಾಲೆ  ಈ ಉಡುಗನ ಪವರ್ರೇ ಹೆಚ್ಚು!!

ಆಶ್ರಮದ ಸಮೀಪದ ಊರಲ್ಲೊಂದು ಶಿವಾಲಯ. ಹರಿಜನ ಹುಡುಗನೊಬ್ಬ ಶಿವಾಲಯದೊಳಗೆ ಹೋಗಿ ಬಂದನೆಂಬ ವದಂತಿಯಿಂದ ಊರಿನ ಜನರು ಅವನನ್ನು ಕತ್ತೆಮೇಲೆ ಕೂರಿಸಿ ಊರಿನಲ್ಲೆಲ್ಲಾ ಮೆರವಣಿಗೆ ಮಾಡಿ ದಂಡಹಾಕಿದರೆಂದೂ ,ದೇವರಿಗೆ ಮೈಲಿಗೆ ಆಗಿದೆ ಎಂದು ಶುದ್ಧ ಪುಣ್ಯಾಹ ಮಾಡಿ, ಲಕ್ಷ ಶಿವಜಪ,ರುದ್ರಾಭಿಷೇಕ ಎಲ್ಲಾ ಮಾಡಿ,ಅನ್ನ ಸಂತರ್ಪಣೆ ಮಾಡಿದರೆಂಬ ಸುದ್ಧಿಯನ್ನು ಶಿಶ್ಯನೊಬ್ಬ ಸ್ವಾಮೀಜಿಗೆ ತಿಳಿಸಿದ. ಆಗ ಸ್ವಾಮೀಜಿ ಹೇಳ್ತಾರೆ.. . . . .

ಓಹೋ ಅಂಗಾಯ್ತೇನು? ಅವನು ಹರಿಜನ ಅಂದಮ್ಯಾಲೆ ಹರನ ಗುಡಿಗೆ ಓಗ ಬಹುದಾ? ಹರಿಜನ ಈಸ್ವರನ ಗುಡಿಗೆ ಓದ ಮ್ಯಾಲೆ ಸಿವನಿಗೆ ಸೂತ್ಕ ಆಗೈತೆ ಬಿಡು. ಅಂತೂ ಆ ಉಡುಗನ್ನ ಕತ್ತೆ ಮ್ಯಾಲ್ ಕೂರ್ಸಿ ಮೆರವಣಿಗೆ ಮಾಡಿ ದೇವರನ್ನೆಲ್ಲಾ ತೊಳೆದು , ರುದ್ರಾಭಿಶೇಕ,ಅದೂ ಇದೂ ಮಾಡಿದ ಮ್ಯಾಲೆ ಸುದ್ದಾಯ್ತು ಬಿಡು -ಎಂದು ಜೋರಾಗಿ ನಕ್ಕು ಮಾತು ಮುಂದುವರೆಸುತ್ತಾರೆ  ನೋಡಪ್ಪಾ, ಆ ಹರಿಜನ ಉಡುಗ ಗುಡಿಯೊಳಗೋಗಿದ್ರಿಂದ ದೇವ್ರಿಗೆ ಮೈಲಿಗೆ ಆಯ್ತು ಅಂದ ಮ್ಯಾಕೆ ಆ ಇಂದುಳಿದೋನ್ ಪೌರು ಎಂತಾದ್ದಿರಬೇಕು! ದೇವರ ಪವರ್ ನಿಂದ ಈ ಉಡುಗ ಸುದ್ದ ಆಗಿ ಚೊಕ್ಕವಾಗಬೇಕಿತ್ತಪ್ಪಾ! ಆದ್ರೆ ಈ ಉಡುಗನ   ಪವರ್‌ನಿಂದ ಆದೇವ್ರಿಗೇ ಮೈಲಿಗೆ  ಆಯ್ತು ಅಂದ್ಮ್ಯಾಲೆ  ಈ ಉಡುಗನ ಪವರ್ರೇ ಜಾಸ್ತಿ ಆಯ್ತಪ್ಪಾ! .. . . . .ಹೀಗೆ ಹೇಳುತ್ತಾ ಜೋರಾಗಿ ನಗ್ತಾರೆ.

ಹುಟ್ಟಿದಾಗಿನಿಂದ ಎಲ್ಲರೂ ಉತ್ತಮರು, ಯಾರೂ ಅಧಮರಲ್ಲ ಎಂಬ ಋಗ್ವೇದದ ಮಂತ್ರದ ಕರೆಯನ್ನು ಜೀವನದಲ್ಲಿ ಸ್ವಾಮೀಜಿಯವರು ಅಳವಡಿಸಿಕೊಂಡಿದ್ದ ಪರಿಯನ್ನು ಮೇಲಿನ ಘಟನೆಯಿಂದ ಅರ್ಥಮಾಡಿಕೊಳ್ಳಬಹುದು. ಈ  ವೇದಮಂತ್ರವನ್ನು ಅರ್ಥಮಾಡಿಕೊಂಡರೆ ಸ್ವಾಮೀಜಿಯವರು ವೇದದ ಅರಿವನ್ನು ಹೇಗೆ ಮೈಗೂಡಿಸಿಕೊಂಡಿದ್ದರು! ಎಂಬುದು ನಮಗೆ ಅರ್ಥವಾಗುತ್ತೆ.

ತೇ ಅಜ್ಯೇಷ್ಠಾ ಅಕನಿಷ್ಠಾಸ ಉದ್ಭಿದೋಮಧ್ಯಮಾಸೋ ಮಹಸಾ ವಿ ವಾವೃಧು: |
ಸುಜಾತಾಸೋ ಜನುಷಾ ಪೃಷ್ನಿಮಾತರೋ ದಿವೋ ಮರ್ಯಾ ಆ ನೋ ಅಚ್ಚಾ ಜಿಗಾತನ ||
[ಋಕ್ ೫.೫೯.೬]

ಮನುಷ್ಯರಲ್ಲಿ ಯಾರೂ ದೊಡ್ದವರೂ ಅಲ್ಲ, ಯಾರೂ ಚಿಕ್ಕವರೂ ಅಲ್ಲ, ಮಧ್ಯಮರೂ ಅಲ್ಲ.ಹುಟ್ಟಿದಾಗಿನಿಂದ ಎಲ್ಲರೂ ಉತ್ತಮರು. ಭೂಮಿಯನ್ನು ಸೀಳಿ ಮೇಲೆ ಬಂದ ಇವರು  ಭೂತಾಯಿಯ ಮಕ್ಕಳು.ಅವರು ತಮ್ಮ ಉತ್ತಮ ಗುಣಸ್ವಭಾವ ನಡವಳಿಕೆಯಿಂದ ಅತಿಶಯವಾದ ವೃದ್ಧಿ ಹೊಂದುವರು.

ವೇದಮಂತ್ರವನ್ನು ಕಲಿತು ಪಠಿಸಿದರೆ ಸಾಕೇ? ಸ್ವಾಮೀಜಿಯವರು ವೇದಾಧ್ಯಯನ ಮಾಡಿದ್ದರೋ ಇಲ್ಲವೋ ನನಗೆ ತಿಳಿದಿಲ್ಲ. ಆದರೆ ವೇದದ ಆಶಯದಂತೆ ಅವರ ಜೀವನ ಸಾಗಿತ್ತು. ಅರಸೀಕೆರೆ ತಾಲ್ಲೂಕು ಅರಕೆರೆಗೆ ಸಮೀಪದಲ್ಲಿ ಮುಕುಂದೂರು ಸ್ವಾಮೀಜಿಯವರ ಆಶ್ರಮವಿದೆ. ಚಿಕ್ಕಮಗಳೂರು ಜಿಲ್ಲೆಯ ಕಡೂರು ಸುತ್ತಮುತ್ತ, ಅರಸೀಕೆರೆ ತಾಲ್ಲೂಕು ಬಾಣಾವರ ಸುತ್ತಮುತ್ತ, ತಿಪಟೂರು ಸುತ್ತಮುತ್ತ ಸ್ವಾಮೀಜಿಯವರನ್ನು ನೋಡಿರುವ ಕೆಲವು ಹಿರಿಯರು ಈಗಲೂ ಇದ್ದಾರೆ. ಹೊಳೇನರಸೀಪುರ ತಾಲ್ಲೂಕು ಮುಕುಂದೂರು ಬೆಟ್ಟದಲ್ಲಿ ಕೆಲವು ಕಾಲ ತಪಸ್ಸನ್ನು ಮಾಡಿದ್ದರಿಂದ ಅವರಿಗೆ ಮುಕುಂದೂರು ಸ್ವಾಮಿಗಳೆಂದು ಹೆಸರು ಬಂದಿದೆ.

ಇಂತಹ ಅವಧೂತರು ಬಹಳ ಅಪರೂಪ. ಜಾತಿ-ಮತ ಭೇದವಿಲ್ಲದೆ ಎಲ್ಲರಲ್ಲೂ ಭಗವಂತನನ್ನು ಕಾಣುತ್ತಿದ್ದ  ಮುಕುಂದೂರು ಸ್ವಾಮೀಜಿ ಮಡಿವಂತಿಕೆಯನ್ನು ಮೆಟ್ಟಿನಿಂತಿದ್ದ ಮಹಾನುಭಾವ.

- ಹರಿಹರಪುರಶ್ರೀಧರ್
ಸಂಯೋಜಕ, ವೇದಭಾರತೀ, ಹಾಸನ

ಮೌಢ್ಯದಿಂದ ಜ್ಞಾನದ ಕಡೆ ಸಾಗೋಣ

ಅಸತೋಮ ಸದ್ಗಮಯ| ತಮಸೋಮ ಜ್ಯೋತಿರ್ಗಮಯ|
ಮೃತ್ಯೋರ್ಮಾ ಅಮೃತಂಗಮಯ|  ಓಂ ಶಾಂತಿಃ ಶಾಂತಿಃ ಶಾಂತಿಃ ||