Pages

Friday, December 14, 2012

ವಾನಪ್ರಸ್ಥ - ಹೀಗೊಂದು ಚಿಂತನೆ



      'ಊರು ಹೋಗು ಎನ್ನುತ್ತಿದೆ, ಕಾಡು ಬಾ ಎನ್ನುತ್ತಿದೆ' ಅನ್ನುವ ಮಾತನ್ನು ವಯಸ್ಸಾದವರು ಹೇಳುವುದನ್ನು ಕೇಳುತ್ತಿರುತ್ತೇವೆ. ಆದರೆ ಹೋಗು ಎಂದರೂ ಹೋಗಲೊಲ್ಲದವರೇ ಹೆಚ್ಚು. ಅಷ್ಟಕ್ಕೂ ಒಂದು ವೇಳೆ ಹೋಗಬೇಕೆಂದರೂ ಈಗ ಕಾಡಾದರೂ ಎಲ್ಲಿದೆ? ಇರುವ ಕಾಡುಗಳನ್ನೆಲ್ಲಾ ಮನುಷ್ಯನೇ ಆಕ್ರಮಿಸಿಕೊಂಡು ಕಾಡಿನ ಪ್ರಾಣಿಗಳಿಗೇ ಇರಲು ಜಾಗವಿಲ್ಲದಾಗಿದೆ. ವಿಧಿಯಿಲ್ಲದೆ ನಾಡಿಗೆ ಬರುತ್ತಿರುವ ಆ ಕಾಡುಪ್ರಾಣಿಗಳೂ ಈಗ ನಾಶದ ಅಂಚಿಗೆ ಬರುತ್ತಿವೆ. ಏಕೋ ಏನೋ ಇತ್ತೀಚೆಗೆ ನನ್ನ ಮನಸ್ಸು ವಾನಪ್ರಸ್ಥದ ಕುರಿತು ತಲೆ ಕೆಡಿಸಿಕೊಂಡಿದೆ. ಪ್ರಾಯಶಃ ವಯೋಸಹಜವಿರಬಹುದು. ನನ್ನ 6 ವರ್ಷದ ಮೊಮ್ಮಗಳೊಡನೆ ಆಟವಾಡುತ್ತಾ ನನ್ನಷ್ಟಕ್ಕೆ ನಾನೇ ಸ್ವಗತವೆಂಬಂತೆ ಮಾತನಾಡಿಕೊಳ್ಳುತ್ತಾ, 'ನನಗೆ ಸಾಕಾಗಿದೆ ಕಣಮ್ಮಾ, ವಾನಪ್ರಸ್ಥಕ್ಕೆ ಹೋಗಿಬಿಡ್ತೀನಿ' ಅಂದಿದ್ದೆ. ಪಾಪ, ಅವಳಿಗೆ ವಾನಪ್ರಸ್ಥ ಅಂದರೆ ಏನು ಅರ್ಥವಾದೀತು? ಅವಳು ಆಟ ಆಡುವುದನ್ನು ನಿಲ್ಲಿಸಿ, "ತಾತಾ, ಪ್ಲೀಸ್, ವಾನಾಸ್ಪತ್ರೆಗೆ ಹೋಗಬೇಡ, ಪ್ಲೀಸ್, ಪ್ಲೀಸ್" ಎಂದು ಗೋಗರೆದಿದ್ದಳು. ವಾನಪ್ರಸ್ಥ ಅವಳ ಬಾಯಲ್ಲಿ ವಾನಾಸ್ಪತ್ರೆ ಆಗಿತ್ತು. 'ಹೂಂ, ಆಯಿತು, ಹೋಗಲ್ಲ' ಅಂದ ಮೇಲೆಯೇ ನಮ್ಮ ಆಟ ಮುಂದುವರೆದಿದ್ದು.   ವಾನಪ್ರಸ್ಥ(ವನಪ್ರಸ್ಥ)ವೆಂದರೆ ಕಾಡಿನೆಡೆಗೆ ತೆರಳುವುದು ಎಂಬ ಅರ್ಥವೂ ಇದೆ. ಕಾಡುಗಳು ನಾಶವಾಗಿರುವ, ಆಗುತ್ತಿರುವ ಇಂದಿನ ದಿನಗಳಲ್ಲಿ ಇದು ಅರ್ಥ ಕಳೆದುಕೊಂಡಿದೆ. ಮಾನವಸಹಜ ಆಸೆ, ಆಕಾಂಕ್ಷೆಗಳಿಗೆ ಕಡಿವಾಣ ಹಾಕಿಕೊಂಡು ಪ್ರಾಪಂಚಿಕತೆಯಿಂದ ಕ್ರಮೇಣ ದೂರ ಸರಿಯುವ, ಲೋಕಹಿತ ಬಯಸುವ ಎಡೆಗೆ ಕಾಲಿಡುವುದು ವಾನಪ್ರಸ್ಥದ ಆರಂಭಿಕ ನಡೆರಬಹುದು. ಗೃಹಸ್ಥರಿಗೆ ಈ ಕಾಲ ಕೌಟುಂಬಿಕ ಜವಾಬ್ದಾರಿಗಳನ್ನು ನಿರ್ವಹಿಸಿದ ನಂತರ ಬರುತ್ತದೆ. ಚತುರಾಶ್ರಮಗಳಲ್ಲಿ ಎರಡನೆಯದಾದ ಬ್ರಹ್ಮಚರ್ಯದ ನಂತರವೂ ನೇರವಾಗಿ ಈ ಆಶ್ರಮಕ್ಕೆ ಸಾಗಬಹುದಾಗಿದೆ, ಸಾಗಿದವರಿದ್ದಾರೆ. 
     ಮಾನವನ ಆಯಸ್ಸನ್ನು ಒಂದು ನೂರು ವರ್ಷಗಳು ಎಂದಿಟ್ಟುಕೊಂಡರೆ ಮೊದಲ 25 ವರ್ಷಗಳು ಬ್ರಹ್ಮಚರ್ಯ, ನಂತರದ 25 ವರ್ಷಗಳನ್ನು ಗೃಹಸ್ಥರಾಗಿ ಕಳೆದು, ನಂತರದ 51 ರಿಂದ 75 ವರ್ಷಗಳು ವಾನಪ್ರಸ್ಥದ ಕಾಲ. ಅದರ ನಂತರ ಸಂನ್ಯಾಸಾಶ್ರಮ. ಇರುವ ಬಂಧಗಳು, ಬಂಧನಗಳನ್ನು ಕಳೆದುಕೊಂಡು ಜೀವಿಸಲು ಅತಿ ಅಗತ್ಯವಾದಷ್ಟನ್ನು ಮಾತ್ರ ಹೊಂದಿ ಆಧ್ಯಾತ್ಮಿಕ ಸಾಧನೆಗೆ ತೊಡಗುವ ಕಾಲವೇ ವಾನಪ್ರಸ್ಥವೆನಿಸುವುದು. ಇದು ಪರಿವರ್ತನಾ ಕಾಲ. 
     ಗೃಹಸ್ಥನಿಗೆ ವಯಸ್ಸಾದ ನಂತರ ಅವನ ಚರ್ಮ ಸುಕ್ಕುಗಟ್ಟುತ್ತದೆ, ತಲೆಯ ಕೂದಲು ಬೆಳ್ಳಗಾಗುತ್ತದೆ ಅಥವ ಉದುರಿ ಬೋಳಾಗುತ್ತದೆ. ಮೊಮ್ಮಕ್ಕಳು ಜನಿಸಿರುತ್ತಾರೆ. ಆಗ ವಾನಪ್ರಸ್ಥಕ್ಕೆ ತೆರಳಲು ಸಮಯ ಪ್ರಶಸ್ತವಾಗಿರುತ್ತದೆ. ಕೌಟುಂಬಿಕ ಬಂಧನಗಳನ್ನು ಕಳಚಿಕೊಂಡು ಈ ಹಾದಿಯಲ್ಲಿ ಕ್ರಮಿಸುವ ಸಮಯದಲ್ಲಿ ಪತ್ನಿ ಬಯಸಿದರೆ ಅವನ ಜೊತೆಗೆ ಹೋಗಬಹುದು, ಆದರೆ ಸಹಚಾರಿಣಿಯಾಗಿ ಮತ್ತು ಸಹಸಾಧಕಿಯಾಗಿ ಮಾತ್ರ. ಹಾಗೆ ಹೊರಡುವಾಗ ಮನಸ್ಸು ಶಾಂತವಿರಬೇಕು. ಅತಿ ಕಡಿಮೆ ವಸ್ತ್ರಗಳನ್ನು ಧರಿಸುವುದು, ಕಾಡಿನಲ್ಲಿ ದೊರೆಯುವ ಸೊಪ್ಪು-ಸದೆಗಳು, ಗೆಡ್ಡೆ-ಗೆಣಸುಗಳನ್ನು  ಜೀವಾಧಾರಕ್ಕೆ ಸೇವಿಸುವುದು, ದೈಹಿಕ ಕಾಮನೆಗಳಿಂದ ದೂರವಿರುವುದು ಹಿಂದೆ ವಾನಪ್ರಸ್ಥಿಗಳು ಅನುಸರಿಸುತ್ತಿದ್ದ ಕ್ರಮವೆಂದು ಕೇಳಿದ್ದೇವೆ. ಪುಣ್ಯಕ್ಷೇತ್ರಗಳಿಗೆ ಪ್ರವಾಸವನ್ನೂ ಸಹ ಸಾಧನೆಯ ಅಂಗವಾಗಿ ಮಾಡುತ್ತಾರೆಂದು ಹೇಳುತ್ತಾರೆ. ಈಗಲೂ ಹಿಮಾಲಯದ ತಪ್ಪಲಿನಲ್ಲಿ ಇಂತಹವರು ಸಿಗಬಹುದು. ಆತ್ಮಾನುಸಂಧಾನ, ಆತ್ಮಚಿಂತನೆಗಳನ್ನು ನಡೆಸುತ್ತಾ ಕೊನೆಗೊಮ್ಮೆ ಅವರು ಸಂನ್ಯಾಸಿಯ ಅರ್ಹತೆ ಪಡೆಯುವರು. 
     ವಾನಪ್ರಸ್ಥಿಗಳು ಅನುಸರಿಸಬೇಕಾದ ಕ್ರಮಗಳ ಕುರಿತು ಕೆಲವು ನಿಬಂಧನೆಗಳೂ ಇವೆಯೆನ್ನುತ್ತಾರೆ. ಭೂಮಿಯನ್ನು ಉತ್ತಿ. ಬಿತ್ತಿ ಬೆಳೆದ ಧಾನ್ಯಗಳು, ಪೂರ್ಣ ಕಳಿಯದ ಹಣ್ಣುಗಳು ಮತ್ತು ಬೇಯಿಸಿದ ಪದಾರ್ಥಗಳನ್ನು ಅವರು ಸೇವಿಸಬಾರದೆನ್ನುತ್ತಾರೆ. ತಿನ್ನುವ ಪದಾರ್ಥಗಳನ್ನು ಸಂಗ್ರಹಿಸಿಡಬಾರದು. ಸಮಯ, ಸ್ಥಳ ಮತ್ತು ತನ್ನ ಶಕ್ತಿ ಅನುಸರಿಸಿ ಜೀವಾಧಾರಕ್ಕೆ ಅವಶ್ಯಕ ಸಂಗತಿಗಳನ್ನು ಮಾತ್ರ ಪಡೆಯಬೇಕು. ಯಾವ ಕಾರಣಕ್ಕೂ ಅಗತ್ಯಕ್ಕಿಂತ ಹೆಚ್ಚು ತೆಗೆದುಕೊಳ್ಳಬಾರದು. ಬಿಸಿಲಿನಲ್ಲಿ ಪೂರ್ಣವಾಗಿ ಮಾಗಿದ ಫಲಗಳನ್ನು ಮಾತ್ರ ಸೇವಿಸಬೇಕು. ಒಂದು ಗುಡಿಸಲು ನಿರ್ಮಿಸಿಕೊಂಡು ಅಲ್ಲಿ ಅಥವ ಬೆಟ್ಟದ ಗುಹೆಯಲ್ಲಿ ವಾಸವಿದ್ದು ಪವಿತ್ರಾಗ್ನಿಯನ್ನು ರಕ್ಷಿಸಬೇಕು. ಗಾಳಿ, ಬೆಂಕಿ, ಮಳೆ, ಬಿಸಿಲು, ಹಿಮ, ಇತ್ಯಾದಿಗಳನ್ನು ಸಹಿಸುವುದನ್ನು ರೂಢಿ ಮಾಡಿಕೊಳ್ಳಬೇಕು. ಇದಕ್ಕಾಗಿ ಸುಡುಬೇಸಿಗೆಯಲ್ಲಿ ಸುತ್ತಲೂ ಬೆಂಕಿ ಉರಿಸಿ ಮಧ್ಯದಲ್ಲಿ ಕುಳಿತು ಧ್ಯಾನ(ತಪಸ್ಸು) ಮಾಡಬೇಕು. ಮಳೆಗಾಲದಲ್ಲಿ ಸುರಿಯುವ ಮಳೆಯಲ್ಲಿ ಅದರ ಆರ್ಭಟವನ್ನು ಸಹಿಸಿ ಹೊರಗೆ ಇದ್ದು, ಚಳಿಗಾಲದಲ್ಲಿ ಕೊರೆಯುವ ಹೆಪ್ಪುಗಟ್ಟಿದ ನೀರಿನಲ್ಲಿ ಕತ್ತಿನವರೆಗೆ ನೀರಿನಲ್ಲಿ ಮುಳುಗಿದ್ದು ಧ್ಯಾನಸ್ಥರಾಗಬೇಕು. ಕೂದಲು, ಮೀಸೆ, ಉಗುರುಗಳನ್ನು ಕತ್ತರಿಸಬಾರದು, ಜಟೆಗಟ್ಟಿದ ಕೂದಲನ್ನು ತಲೆಯ ಮೇಲೆ ಎತ್ತಿಕಟ್ಟಬೇಕು. ಅಕಾಲಿಕವಾಗಿ ಮಲ, ಮೂತ್ರ ವಿಸರ್ಜಿಸಬಾರದು. ಮಲಿನವಾದ ಶರೀರದ ಶುದ್ಧತೆ ಬಗ್ಗೆ ಚಿಂತಿಸಬಾರದು. ದಿನಕ್ಕೆ 3 ಸಲ ಸ್ನಾನ ಮಾಡುವುದರಿಂದ ತೃಪ್ತನಾಗಬೇಕು. ನೆಲದ ಮೇಲೆ ಮಲಗಬೇಕು. ಒಂದು ಕುಡಿಯುವ ನೀರಿನ ಮಡಿಕೆ ಮತ್ತು ಒಂದು ದಂಡ ಹಿಡಿದಿರಬೇಕು. ವಾನಪ್ರಸ್ಥಿ 12 ವರ್ಷಗಳು ಅಥವ 8 ವರ್ಷಗಳು ಅಥವ 4 ವರ್ಷಗಳು ಅಥವ 2 ವರ್ಷಗಳು ಅಥವ ಕನಿಷ್ಠ 1 ವರ್ಷವಾದರೂ ಕಾಡಿನಲ್ಲಿ ವಾಸಿಸಬೇಕೆನ್ನುತ್ತಾರೆ. ಅತಿ ಸರಳವಾಗಿ ತೋರಿದರೂ ಕಠಿಣವಾದ ನಿಯಮಗಳಿಂದ ವಿಚಲಿತನಾಗಬಾರದು. ಸಾಮಯಿಕವಾಗಿ ಅಕ್ಕಿ ಅಥವ ಕಾಡಿನಲ್ಲಿ ದೊರೆತ ಧಾನ್ಯಗಳನ್ನು ಅರ್ಪಿಸಿ ಹೋಮ, ಹವನ, ಅಗ್ನಿಹೋತ್ರ ಮಾಡಬೇಕು. ಯಾವ ಕಾರಣಕ್ಕೂ ಪ್ರಾಣಿಬಲಿ ಕೊಡಬಾರದು.  
     ವಯಾಧಿಕ್ಯದಿಂದ ಅಥವ ಕಾಯಿಲೆಗಳಿಂದ ಅನುಷ್ಠಾನ ಕಷ್ಟವೆನಿಸಿದಾಗ ಆಹಾರ ಸೇವಿಸದೆ ಉಪವಾಸವಿರುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಅಂತಹ ಸಂದರ್ಭದಲ್ಲಿ ನಡುಗುವ ಶರೀರದ ಕಾರಣದಿಂದ ಅನುಷ್ಠಾನ ಮಾಡಲಾಗದವರು, ಶರೀರಧಾರಣೆ ಕಷ್ಟವಾದಾಗ ಅಗ್ನಿಯನ್ನು ಧ್ಯಾನದ ಮೂಲಕ ಹೃದಯಸ್ಥ ಮಾಡಿಕೊಂಡು ಅದರೊಳಗೆ ಪ್ರವೇಶಿಸಿ ಶರೀರ ತ್ಯಾಗ ಮಾಡುವರು. ಕೆಲವು ಸಂತ ವಾನಪ್ರಸ್ಥಿಗಳು ಕಠಿಣ ವ್ರತಗಳನ್ನು ಆಚರಿಸುತ್ತಾ ಸೊರಗಿ ಕೇವಲ ಚರ್ಮ ಮತ್ತು ಮೂಳೆಗಳ ಹಂದರದಂತೆ ತೋರುತ್ತಾರೆ. ಇಂತಹ ಕಠಿಣ ಮತ್ತು ದೀರ್ಘವಾದ ಸಾಧನೆ ಮಾಡಿ ಮೋಕ್ಷಕ್ಕೆ ಹಂಬಲಿಸುವ ಬದಲು, ಪ್ರಾಪಂಚಿಕ ಸಂಗತಿಗಳನ್ನು ಪಡೆಯಲು ಹಂಬಲಿಸುವವರು ದೊಡ್ಡ ಮೂರ್ಖರೇ ಸರಿ. ಅಸುರರು ದೀರ್ಘ ತಪಸ್ಸು ಮಾಡಿ ಪಡೆದರೆಂದು ಹೇಳಲಾಗುವ ಅಸುರೀ ಸಾಧನೆಗಳನ್ನು ಈ ಸಾಲಿಗೆ ಸೇರಿಸಬಹುದು. ತಾನು ಯಾವುದಕ್ಕಾಗಿ ಸಾಧನೆ ಮಾಡುತ್ತಿದ್ದಾನೋ ಅದರ ಫಲವನ್ನೂ ಬಯಸದ ಸ್ಥಿತಿ ತಲುಪಿದಾಗ, ಅಂದರೆ ಮನಸ್ಸಿನ ಹಿಡಿತದಿಂದ ಪೂರ್ಣವಾಗಿ ಹೊರಬಂದಾಗ ಸಂನ್ಯಾಸಾಶ್ರಮಕ್ಕೆ ಕಾಲಿಡಬಹುದಾಗಿದೆ. ವಾನಪ್ರಸ್ಥಿ ತನ್ನತನದ ಹಿರಿಮೆಯಿಂದ ಹೊರಬಂದು ವಿನೀತಭಾವ ಹೊಂದಲು ಇತರರ ಕರುಣೆಯಿಂದ, ದೀನ ರೀತಿಯಲ್ಲಿ ಪಡೆದ ಧಾನ್ಯದಿಂದ ಜೀವಿಸುತ್ತಾನೆ. ವಾನಪ್ರಸ್ಥದ ಕುರಿತ ಈ ಕೆಲವು ವಿವರಗಳನ್ನು ಶ್ರೀಮದ್ಭಾಗವತದಲ್ಲಿ ಇರುವ ಅಂಶಗಳನ್ನು ಆಧರಿಸಿ ಬರೆದಿರುವೆ.
     ವೇದದ ನಾಲ್ಕು ಅಂಗಗಳಾದ ಬ್ರಾಹ್ಮಣ, ಸಂಹಿತಾ, ಅರಣ್ಯಕ ಮತ್ತು ಉಪನಿಷತ್ತುಗಳಲ್ಲಿ ಅರಣ್ಯಕವು ವಾನಪ್ರಸ್ಥಕ್ಕೆ ಸಂಬಂಧಿಸಿದೆ. ವಾನಪ್ರಸ್ಥ ಮತ್ತು ಸಂನ್ಯಾಸಗಳು ಎರಡೂ ವೈರಾಗ್ಯ ಪ್ರಾಧಾನ್ಯ ಆಶ್ರಮಗಳು. ವಾನಪ್ರಸ್ಥಿ ಸಮಾಜದ ಸೇವೆ ಮಾಡುತ್ತಾ ಮುಕ್ತಿ ಹೊಂದುವ ಸಿದ್ಧತೆ ಮಾಡಿಕೊಳ್ಳಬೇಕು. ಧರ್ಮ, ಅರ್ಥ, ಕಾಮ, ಮೋಕ್ಷಗಳು ಬ್ರಹ್ಮಚರ್ಯ, ಗಾರ್ಹಸ್ಥ್ಯ, ವಾನಪ್ರಸ್ಥ, ಸಂನ್ಯಾಸಗಳಲ್ಲಿ ಹಾಸುಹೊಕ್ಕಾಗಿವೆ. ಸಂನ್ಯಾಸಿಯು ಬ್ರಹ್ಮಚಾರಿ, ಗೃಹಸ್ಥ ಅಥವ ವಾನಪ್ರಸ್ಥಿಯಿಂದ ಹೊರತಾದವನಲ್ಲ/ ಬೇರ್ಪಟ್ಟವನಲ್ಲ. ಬ್ರಹ್ಮಚರ್ಯವು ಬೀಜರೂಪವಾಗಿದ್ದು ಗೃಹಸ್ಥಾಶ್ರಮದ ವಾಸ್ತವಿಕ ಅನುಭವವಾಗಿ ಬೆಳೆಯುತ್ತದೆ ಮತ್ತು ಅದು ವಾನಪ್ರಸ್ಥದ ವೈರಾಗ್ಯವಾಗಿ ಮುಂದುವರೆಯುತ್ತದೆ. ಹಾಗೂ, ಅದು ಮುಂದುವರೆದು ಸಂನ್ಯಾಸದ ಸಾರವಾಗಿ ಫಲಿತಗೊಳ್ಳುತ್ತದೆ.
     ಸನಾತನ ಧರ್ಮದ ಮಹತ್ವ ಅರಿವಾಗುವುದು ಈ ಆಶ್ರಮಗಳ ಸರಿಯಾದ ಅನುಷ್ಠಾನದಿಂದ. ಬ್ರಹ್ಮಚರ್ಯದಲ್ಲಿ ಒಬ್ಬ ಬಾಲಕ/ಬಾಲಿಕೆ ಗುರುಕುಲಕ್ಕೆ ಸೇರಿ ತನಗೆ ಬೇಕೆನಿಸಿದ ಜ್ಞಾನದ ಅರಿವನ್ನು ತಾನು ಯಾವ ಸಮಾಜಕ್ಕೆ ಸೇರಿದ್ದಾನೋ ಆ ಸಮಾಜದ ಹಿತವನ್ನು ಗಮನದಲ್ಲಿರಿಸಿ ಪಡೆಯುತ್ತಾನೆ/ಳೆ. ಈ ಹಂತದಲ್ಲಿ ಪಡೆಯುವ ಜ್ಞಾನ ಮುಂದಿನ ಗೃಹಸ್ಥ, ವಾನಪ್ರಸ್ಥ ಮತ್ತು ಸಂನ್ಯಾಸಾಶ್ರಮಗಳಿಗೆ ತಳಹದಿಯಂತಿರುತ್ತದೆ. ವಾನಪ್ರಸ್ತವು ಪ್ರಾಪಂಚಿಕ ಆಕರ್ಷಣೆಗಳಿಂದ ದೂರವಿರಲು ಮಾಡುವ ಸಾಧನೆಯ ಅವಧಿಯೆನ್ನಬಹುದು. 
     ಗೃಹಸ್ಥಾಶ್ರಮವು ಸಮಾಜದ ತಳಪಾಯವಿದ್ದಂತೆ. ಇತರ ಮೂರು ಆಶ್ರಮಗಳಿಗೆ ತಾಯಿಬೇರು ಇದೇ ಆಗಿದೆ. ಮಕ್ಕಳು ಬ್ರಹ್ಮಚಾರಿಗಳಾಗುತ್ತಾರೆ, ಪೋಷಕರು ವಾನಪ್ರಸ್ಥಕ್ಕೆ ಪ್ರವೇಶಿಸುತ್ತಾರೆ ಮತ್ತು ಅವರು ಲೋಕಹಿತ ಬಯಸುವ ಸಂನ್ಯಾಸಿಗಳಿಗೆ ಆಶ್ರಯ ಕೊಡುವವರೂ ಆಗಿರುತ್ತಾರೆ. ವಾನಪ್ರಸ್ಥದ ಅವಧಿಯಲ್ಲಿ ಮಕ್ಕಳು ಬೆಳೆದವರಾಗಿರುತ್ತಾರೆ ಮತ್ತು ಕೌಟುಂಬಿಕ ಜವಾಬ್ದಾರಿ ಕಡಿಮೆಯಾಗುತ್ತದೆ. ಸಾಮಾಜಿಕ ಹಿತದ ಕೆಲಸಗಳನ್ನು ಮಾಡಲು ಅವಕಾಶವಿರುತ್ತದೆ. ಈ ಅವದಿಯು ಕಿರಿಯರಿಗೆ, ಗೃಹಸ್ಥರಿಗೆ ಮತ್ತು ಸಂನ್ಯಾಸಿಗಳಿಗೆ ಬಲವಾದ ಆಧಾರರೂಪಿಯಾಗಿರಲು ಸೂಕ್ತವಾಗಿರುತ್ತದೆ. ಜ್ಞಾನವನ್ನು ಸಂಪಾದಿಸಿ ದೇಶಕ್ಕೆ, ಸಮಾಜಕ್ಕೆ ಉಪಕಾರಿಯಾಗಿರಬೇಕಾದ ಹಂತವಿದು. ಕೆಲವರು ನೇರವಾಗಿ ಸಂನ್ಯಾಸಾಶ್ರಮಕ್ಕೆ ಪ್ರವೇಶಿಸಿ ನಂತರದಲ್ಲಿ ಪ್ರಾಪಂಚಿಕ ಆಕರ್ಷಣೆಗಳಿಗೆ ಒಳಗಾಗಿ ಕೆಳಗೆ ಬಿದ್ದಿರುವುದನ್ನೂ ಕಂಡಿದ್ದೇವೆ. ಹಾಗಾಗಿ ಗೃಹಸ್ಥ, ವಾನಪ್ರಸ್ಥದ ಅವಧಿಯನ್ನು ಪೂರ್ಣಗೊಳಿಸಿ ಪ್ರಾಪಂಚಿಕ ಆಕರ್ಷಣೆಗಳಿಂದ ಮುಕ್ತರಾದ ನಂತರವೇ ಸಂನ್ಯಾಸಿಗಳಾಗುವುದು ಸಮಾಜದ ಮತ್ತು ಸ್ವಂತದ ಹಿತದಿಂದ ಒಳ್ಳೆಯದು. ವಾನಪ್ರಸ್ಥಕ್ಕೆ ತೆರಳುವವರಿಂದ ಇನ್ನೊಂದು ಲಾಭವೂ ಇದೆ. ವೃದ್ಧರ ನಿವೃತ್ತಿಯಿಂದ ಯುವಕರಿಗೆ ಸಹಜವಾಗಿ ಅಧಿಕಾರ, ಸಾಧನ ಸೌಲಭ್ಯಗಳು ಸಿಗುತ್ತವೆ. ಅಥರ್ವ ವೇದದ ಈ ಮಂತ್ರ ಹೀಗೆ ಹೇಳುತ್ತದೆ:
ಆ ನಯೈತಮಾ ರಭಸ್ಯ ಸುಕೃತಾಂ ಲೋಕಮಪಿ ಗಚ್ಛತು ಪ್ರಜಾನನ್ |
ತೀರ್ತ್ವಾ ತಮಾಂಸಿ ಬಹುಧಾ ಮಹಾಂತ್ಯಜೋ ನಾಕಮಾ ಕ್ರಮತಾಂ ತೃತೀಯಮ್ || (ಅಥರ್ವ.೯.೫.೧.)
     ಅರ್ಥ: ಓ ಗೃಹಸ್ಥ! ಈ ನಿನ್ನ ಆತ್ಮನನ್ನು ಮುನ್ನಡೆಸು. ಸಾಧನೆಯನ್ನಾರಂಭಿಸು. ನಿನ್ನ ಆತ್ಮನು, ಚೆನ್ನಾಗಿ ಜ್ಞಾನ ಗಳಿಸಿ, ಪುಣ್ಯವಂತರ ಸ್ಥಿತಿಯನ್ನು ಮುಟ್ಟಲಿ. ಆಜನ್ಮನಾದ, ನಿತ್ಯನಾದ ನಿನ್ನ ಅತ್ಮನು ಅನ್ಯ ಸಾಧನೆಗಳಿಂದ, ಮಹಾ ಅಂಧಕಾರಗಳನ್ನು ದಾಟಿ, ಮೂರನೆಯದಾದ ವಾನಪ್ರಸ್ಥದ ಸುಖಮಯ ಆಶ್ರಮವನ್ನು ಆಕ್ರಮಿಸಲಿ.
     ಎಲ್ಲಾ ವಯೋವೃದ್ಧರಿಗೂ ಜೀವನದ ಅಂತಿಮ ದಿನಗಳನ್ನು ಪ್ರಾಪಂಚಿಕ ಆಕರ್ಷಣೆಗಳಿಂದ ದೂರವಾಗಿ ಕಳೆಯುವ ಮನಸ್ಸು ಬರಲಾರದು. ಒಂದು ಹಾಸ್ಯಪ್ರಸಂಗ ಇಲ್ಲಿ ನೆನಪಾಗುತ್ತಿದೆ. ಒಬ್ಬ ವ್ಯಾಪಾರಿ ಇನ್ನೇನು ಆಗಲೋ, ಈಗಲೋ ಎಂಬಂತೆ ಸಾಯುವ ಸ್ಥಿತಿಯಲ್ಲಿದ್ದಾಗ, ಅವನ ಹತ್ತಿರವಿರಲು ಮಗ ಮನೆಗೆ ಧಾವಿಸಿಬರುತ್ತಾನೆ. ಅವನಿಗೆ ಏನೋ ಹೇಳಬೇಕೆಂದು ಆ ವ್ಯಾಪಾರಿ ಬಯಸಿದರೂ ಗಂಟಲಿನಿಂದ ಸ್ವರ ಹೊರಡದೆ ಗೊರಗೊರ ಶಬ್ದ ಬರುತ್ತಿದೆ. ವೈದ್ಯರ ಶತಪ್ರಯತ್ನದಿಂದ ಕೊನೆಗೆ ಮಾತನಾಡಿದ ಅವನು ಮಗನಿಗೆ "ಇಷ್ಟು ಬೇಗ ಏಕೆ ಅಂಗಡಿ ಬಾಗಿಲು ಹಾಕಿದೆ?" ಎಂದು ಕೇಳಿದ್ದೇ ಅವನ ಜೀವನದ ಕೊನೆಯ ಮಾತಾಗಿತ್ತು! ಗೋಂದಾವಲೀ ಮಹಾರಾಜರು ಉಪನ್ಯಾಸವೊಂದರಲ್ಲಿ ಹೇಳಿದ ಪ್ರಸಂಗ (ಧ್ವನಿಮುದ್ರಿಕೆಯಲ್ಲಿ ಕೇಳಿದ್ದು) ಇಲ್ಲಿ ಉಲ್ಲೇಖಿಸಬಹುದು. ಒಬ್ಬ ಭಕ್ತರ ಮನೆಗೆ ಅವರು ಹೋಗಿದ್ದಾಗ ಆ ಮನೆಯಲ್ಲಿದ್ದ 90 ವರ್ಷ ದಾಟಿದ್ದ ವೃದ್ಧೆಯೊಬ್ಬರು ಅವರನ್ನು ಉದ್ದೇಶಿಸಿ, "ಸ್ವಾಮಿ, ನನಗೆ ಇನ್ನು ಯಾವ ಆಸೆಯೂ ಇಲ್ಲ. ನಿಮ್ಮ ಪಾದದ ಕೆಳಗೆ ತಲೆಯಿಟ್ಟು ಈ ಜೀವನ ಮುಗಿಸಬೇಕು ಎಂಬುದೊಂದೇ ಆಸೆ" ಎಂದಳು. ಅದಕ್ಕೆ ಅವರು, "ಆಗಲಿ, ಅದಕ್ಕೇನಂತೆ? ಹಾಗೇ ಮಾಡಿ" ಎಂದು ಚಕ್ಕಳ ಮಕ್ಕಳ ಹಾಕಿಕೊಂಡು ಕುಳಿತಾಗ ಗಾಬರಿಯಾದ ಆ ವೃದ್ಧೆ, "ಅಯ್ಯೋ, ಸ್ವಾಮಿ, ಈಗಲೇ ಅಲ್ಲ. ನನ್ನ ಮೊಮ್ಮಗಳ ಮದುವೆ ಆಗಬೇಕು. ಅವಳ ಮಗುವನ್ನು ಎತ್ತಿ ಮುದ್ದಾಡಬೇಕು. ನಾಮಕರಣ ಆಗಬೇಕು. ನಂತರ ನನ್ನ ಈ ಆಸೆ ಈಡೇರಿಸಿಕೊಳ್ಳುತ್ತೇನೆ" ಅಂದಳಂತೆ! ಸಾಯುವ ಕೊನೆಯ ಕ್ಷಣದವರೆಗೂ ರಾಜಕೀಯ ಮಾಡುತ್ತಾ ಅಧಿಕಾರಕ್ಕಾಗಿ ಹಪಹಪಿಸುವ ಇಂದಿನ ರಾಜಕಾರಣಿಗಳೂ ಇದೇ ವರ್ಗಕ್ಕೆ ಸೇರಿದವರು. ಹಾಗಾಗಿ ಏನು ಬದಲಾವಣೆ ನಿರೀಕ್ಷಿಸಲಾದೀತು? ಇರಲಿ ಬಿಡಿ, ವಾನಪ್ರಸ್ಥ ಬಯಸದವರ ಮಾತನ್ನು ಮುಂದುವರೆಸುವುದಿಲ್ಲ. 
     ಇಂದಿನ ಕಾಲಮಾನದ ಪರಿಸ್ಥಿತಿಯಲ್ಲಿ ವಾನಪ್ರಸ್ಥದ ಮೂಲ ಪರಿಕಲ್ಪನೆಯನ್ನು ಸೂಕ್ತವಾಗಿ ಪರಿವರ್ತಿಸಿ ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ. 45-50ರ ವಯಸ್ಸಿನಲ್ಲಿ ಇರುವವರು ರಚನಾತ್ಮಕ ಕಾರ್ಯಗಳಲ್ಲಿ ತೊಡಗಿಕೊಳ್ಳಲು ಮುಂಚಿತವಾಗಿ ಯೋಜನೆ ಮಾಡಿಕೊಂಡು, ಮಾನಸಿಕವಾಗಿ ಸಿದ್ಧರಾಗಿದ್ದಲ್ಲಿ ನಿವೃತ್ತರಾದ ಕೂಡಲೇ ಉಂಟಾಗಬಹುದಾದ ಶೂನ್ಯಭಾವದಿಂದ ಹೊರಬರಬಹುದು. ನಿವೃತ್ತ ಜೀವನವನ್ನು ಒಳ್ಳೆಯ ರೀತಿಯಲ್ಲಿ ಕಳೆಯುವ ಸಾಧನವಾಗಿ ಮಾಡಿಕೊಳ್ಳುವುದನ್ನು ವಾನಪ್ರಸ್ಥವೆನ್ನೋಣ. ಪ್ರತಿಯೊಂದರಲ್ಲಿ, ಪ್ರತಿಯೊಬ್ಬರಲ್ಲಿ ಒಳಿತನ್ನು ಕಾಣುವ ಮನೋಭಾವ ಬೆಳೆಸಿಕೊಂಡು, ಅಂತರಂಗ, ಬಹಿರಂಗಗಳಲ್ಲಿ ಸಾಮ್ಯತೆ ಸಾಧಿಸುವ ಕ್ರಿಯೆಯಲ್ಲಿ ತೊಡಗುವುದು ಕಡಿಮೆ ಸಾಧನೆಯಲ್ಲ. ಪ್ರಾಪಂಚಿಕ ಆಕರ್ಷಣೆಗಳಿಂದ ವಿಮುಕ್ತರಾಗಿ ಸರಳ ವಸ್ತ್ರಗಳನ್ನು ಧರಿಸಿ, ಸರಳ ಜೀವನವನ್ನು ನಡೆಸಿ ಆತ್ಮಚಿಂತನೆಯಲ್ಲಿ ತೊಡಗಬಹುದಾಗಿದೆ. ತನ್ನ ಚಿಂತನೆ, ಜ್ಞಾನಾಭಿವೃದ್ಧಿಗಳಿಗೆ ಪೂರಕವಾಗುವ ಸತ್ಸಂಗಗಳಲ್ಲಿ ಪಾಲುಗೊಳ್ಳುವುದು, ಅಂತಹ ಆದರ್ಶದ ಜೀವನ ಸಾಗಿಸುತ್ತಿರುವ ಧೀಮಂತರ ಮಾರ್ಗದರ್ಶನ ಪಡೆಯುವುದು ಸಹಕಾರಿಯಾಗುತ್ತದೆ. ಇಂತಹವರು ಸಹಜವಾಗಿ ದೇಶಾತೀತ, ಭಾಷಾತೀತ, ಜನಾಂಗಾತೀತ, ಮತಾತೀತ ಮಾನವರಾಗುತ್ತಾರೆ. ಕೌಟುಂಬಿಕ ಜವಾಬ್ದಾರಿಗಳನ್ನು ಮಕ್ಕಳಿಗೆ ವಹಿಸಿ ನಿರ್ಲಿಪ್ತ, ನಿಶ್ಚಿಂತರಾಗುವುದು ಮೊದಲ ಕ್ರಮವಾಗಬೇಕು. ನಂತರದಲ್ಲಿ ಸಾಧ್ಯವಾದಷ್ಟು ಪ್ರಶಾಂತ ಕೊಠಡಿ ಅಥವ ಸ್ಥಳದಲ್ಲಿ ಇರಬೇಕು. ಕುಟುಂಬದವರು ಕೌಟುಂಬಿಕ ಸಮಸ್ಯೆ ಅಥವ ವಿಚಾರಗಳಿಗೆ ಸಲಹೆ, ಸಹಕಾರ ಬಯಸಿದಲ್ಲಿ ಕೊಡಬೇಕು. ಆದರೆ ಅವುಗಳಲ್ಲಿ ವ್ಯಸ್ತರಾಗಬಾರದು. ಕೌಟುಂಬಿಕ ಸಾಮರಸ್ಯ, ಬಂಧುಗಳ ಸಾಮರಸ್ಯ, ಜನಾಂಗದ ಸಾಮರಸ್ಯ, ಸಕಲ ಜೀವಕೋಟಿಯ ಸಾಮರಸ್ಯದ ಗುರಿಯಿರಬೇಕು. ಈ ದಿಸೆಯಲ್ಲಿ ಎಷ್ಟು ಸಾಧಿಸಲು ಸಾಧ್ಯ, ಸಾಧಿಸಿದೆವು ಎಂಬುದು ಮಹತ್ವದ್ದಲ್ಲ. ಒಂದು ಗಾದೆಯಿದೆ, ಸಾವಿರ ಮೈಲುಗಳ ಪಯಣ ಪ್ರಾರಂಭವಾಗುವುದು ಒಂದು ಹೆಜ್ಜೆ ಮುಂದಿಡುವುದರಿಂದ. ಸಣ್ಣ ಕೌಟುಂಬಿಕ ವ್ಯಾಪ್ತಿಯಿಂದ ಹೊರಬಂದು ವಿಶ್ವವೇ ಒಂದು ಕುಟುಂಬವಾಗಿದ್ದು ತಾನು ಅದರ ಭಾಗವೆಂದು ಭಾವಿಸುವ ಮನೋವೃತ್ತಿ ಬೆಳೆಸಿಕೊಳ್ಳಬೇಕು. ಸರ್ವರ ಹಿತ ಬಯಸುವ ಕೆಲಸ, ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು, ಬೆಂಬಲಿಸಬೇಕು. ಮನೋವಿಕಾರಗಳನ್ನು ನಿಯಂತ್ರಿಸಲು ಸಾಧನೆ ನಡೆಸಬೇಕು. ದುಷ್ಟ ವಿಚಾರಗಳಿಂದ ದೂರವಿದ್ದು, ಸದ್ವಿಚಾರಗಳ ಅನುಸರಣೆ, ಪ್ರಸರಣೆಗೆ ಗಮನ ಕೊಡಬೇಕು. ಒಳಿತನ್ನು, ಒಳ್ಳೆಯ ಸಂಗತಿಗಳನ್ನು ಗುರುತಿಸಿ ಗೌರವಿಸಬೇಕು. ಸಾಧ್ಯವಾದಷ್ಟೂ ಇತರರಿಗೆ ಹೊರೆಯಾಗದಂತೆ ಬಾಳಬೇಕು. 
     ಸಾಮಾನ್ಯವಾಗಿ ಒಬ್ಬೊಬ್ಬರಿಗೆ ಒಂದೊಂದು ವೃತ್ತಿ, ಪ್ರವೃತ್ತಿ, ಹವ್ಯಾಸಗಳು ತೃಪ್ತಿ, ಸಂತೋಷ ಕೊಡುವ ಸಂಗತಿಯಾಗಿರುತ್ತದೆ. ನಿವೃತ್ತಿಯೆಂದರೆ ಅಂತಹ ಹವ್ಯಾಸಗಳನ್ನು ನಿಲ್ಲಿಸುವುದಲ್ಲ. ಬದಲಾಗಿ ಅವುಗಳನ್ನು ಇತರರ ಹಿತಕ್ಕಾಗಿ ಬಳಸುವುದು. ಆದರೆ ಅದು ಹಣಗಳಿಕೆಯ ಸಾಧನವಾಗಬಾರದಷ್ಟೆ. ಒಬ್ಬ ನಿವೃತ್ತ ಶಿಕ್ಷಕ ಬಡ ಮಕ್ಕಳಿಗೆ ಉಚಿತವಾಗಿ ಪಾಠ ಹೇಳಬಹುದು, ಸಂಗೀತಗಾರ ತನ್ನ ಸಾಧನೆಯನ್ನು ಉತ್ತುಂಗಕ್ಕೇರಿಸುವುದರ ಜೊತೆಗೆ ಇತರರಿಗೆ ಸಂಗೀತ ಹೇಳಿಕೊಡಬಹುದು, ಬರಹಗಾರ ತನ್ನ ಅನುಭವದ ಸಾರಗಳನ್ನು ಬರಹದ ಮೂಲಕ ಅಭಿವ್ಯಕ್ತಿಸಬಹುದು ಮತ್ತು ಆ ಮೂಲಕ ಪರಿಣಾಮ ಬೀರಬಹುದು. ಇವೆಲ್ಲಾ ಉದಾಹರಣೆಗಳಷ್ಟೆ. ಕೇವಲ ಆತ್ಮತೃಪ್ತಿ ಮತ್ತು ಇತರರಿಗೆ ಮಾರ್ಗದರ್ಶಿಯಾಗಿರಲು ಮಾತ್ರ ಇವುಗಳ ಬಳಕೆಯಾಗಬೇಕು. ಪಡೆಯುವುದಕ್ಕಿಂತ ಕೊಡುವುದಕ್ಕೆ ಆದ್ಯತೆಯಿರಬೇಕು. ಅಷ್ಟಕ್ಕೂ ನಮ್ಮಲ್ಲಿರುವುದೆಲ್ಲಾ ನಾವು ಪಡೆದಿದ್ದೇ ಅಲ್ಲವೇ? ಬದುಕಿನ ಜಂಜಾಟದಲ್ಲಿ ತನ್ನತನಕ್ಕೆ ಅದುವರೆಗೆ ಸಿಕ್ಕದ ಆದ್ಯತೆಯನ್ನು ಜೀವನದ ಅಂತಿಮ ಘಟ್ಟದಲ್ಲಾದರೂ ಸಿಕ್ಕುವಂತೆ ನೋಡಿಕೊಂಡು 'ತಾನು ತಾನಾಗಿರಬೇಕು', ಅರ್ಥಾತ್ 'ತನಗಾಗಿ' ಬಾಳಬೇಕು. 'ತನಗಾಗಿ' ಬಾಳುವ ಈ ರೀತಿಯ ಬಾಳುವಿಕೆಯಲ್ಲಿ ಸ್ವಾರ್ಥವಿರಲಾರದು. ಏಕೆಂದರೆ, ಅದು ಆತ್ಮತೃಪ್ತಿಯ, ಆತ್ಮ ಚಿಂತನೆಯ, ಆತ್ಮಾನುಸಂಧಾನದ ಮಾರ್ಗ. ಒಂದು ರೀತಿಯಲ್ಲಿ ಅದು ಹಿಂದೆ ಮಾಡಿರಬಹುದಾದ ತಪ್ಪುಗಳಿಗೆ ಪ್ರಾಯಶ್ಚಿತ್ತವೂ ಆದೀತು. ಇಂತಹ ಚಿಂತನೆಗಳನ್ನು ಹೊಂದಿದವರ ಭಾವನೆಯನ್ನು ಗೌರವಿಸಿ ಸಹಕರಿಸುವ ಕುಟುಂಬದ ಇತರ ಸದಸ್ಯರೂ ಅಭಿನಂದನಾರ್ಹರಾಗುತ್ತಾರೆ. ಇಂತಹ ಕ್ರಿಯೆಯಿಂದ ಯುವಕರಿಗೆ ಸಹಜವಾಗಿ ನಾಯಕತ್ವ ಸಿಗುವುದಲ್ಲದೇ, ಅವರಿಗೆ ಸುಯೋಗ್ಯ ಮಾರ್ಗದರ್ಶನ ಸಹ ನೀಡಿದಂತಾಗುತ್ತದೆ. 'ಯಾರಂತೆ ಅಂದರೆ ಊರಂತೆ' ಎಂದುಕೊಂಡು ಅದುವರೆಗೆ ಹೇಗೆ ಹೇಗೋ ಸಾಗಿಸಿದ ಜೀವನವನ್ನು ಮರೆತು, ಮೌಲ್ಯಗಳನ್ನು ಕಡೆಗಣಿಸಿ ಬಾಳಿದ ಹಿಂದಿನ ದಿನಗಳನ್ನು ಮರೆತು, ಕಷ್ಟವಾದರೂ ಸರಿ, ಜೀವನದ ಉಳಿದ ಕೊನೆಯ ದಿನಗಳಲ್ಲಿ ಮೌಲ್ಯಗಳಿಗೆ ಅಂಟಿಕೊಂಡು ಬಾಳಿದರೆ ಅದು ಜೀವಕೋಟಿಗೆ ನೀಡುವ, ಭಗವಂತ ಮೆಚ್ಚುವ ಅತಿ ದೊಡ್ಡ ಕಾಣಿಕೆಯಾಗುತ್ತದೆ.
-ಕ.ವೆಂ.ನಾಗರಾಜ್.
[ಚಿತ್ರಗಳನ್ನು ಅಂತರ್ಜಾಲದಿಂದ ಹೆಕ್ಕಿ ಬಳಸಿರುವೆ. ಇವು ರಾಯಲ್ಟಿ ಮುಕ್ತ ಚಿತ್ರಗಳು.]