Pages

Monday, February 13, 2012

ವಿವೇಕ ಚೂಡಾಮಣಿ-ಭಾಗ-೧೯




मूलम् - ಮೂಲ

दुर्वारसंसारदवाग्नितप्तं दोधूयमानं दुरदृष्टवातैः ।
भीतं प्रसन्नं परिपाहि मृत्योः शरण्यमन्यं यदहं न जाने ॥३८॥

ದುರ್ವಾರ-ಸಂಸಾರ-ದವಾಗ್ನಿತಪ್ತಂ ದೋಧೂಯಮಾನಂ ದುರದೃಷ್ಟವಾತೈಃ |
ಭೀತಂ ಪ್ರಪನ್ನಂ ಪರಿಪಾಹಿ ಮೃತ್ಯೋಃ ಶರಣ್ಯಮನ್ಯಂ ಯದಹಂ ನ ಜಾನೇ ||೩೭||

ಪ್ರತಿಪದಾರ್ಥ :

 (ಯತ್ = ಯಾವ ಕಾರಣದಿಂದ, ಅಹಂ =ನಾನು, ಅನ್ಯಂ ಶರಣ್ಯಂ= ಬೇರೆ ಗುರುವನ್ನು(ಕಾಯುವವನನ್ನು) , ನ ಜಾನೇ=ಅರಿಯೆನೊ , (ಹೀಗಾಗಿ) ದುರ್ವಾರ-ಸಂಸಾರ-ದವಾಗ್ನಿತಪ್ತಂ = ಬಗೆಹರಿಸಲು ಆಗದಿರುವ ಬದುಕಿನ ಜಂಜಡಗಳೆಂಬ ಕಾಳ್ಗಿಚ್ಚಿನಿಂದ ಬೆಂದಿರುವ (ನೊಂದಿರುವ), ದುರದೃಷ್ಟವಾತೈಃ = ದುರದೃಷ್ಟವೆಂಬ ಬಿರುಗಾಳಿಯಿಂದ , ದೋಧೂಯಮಾನಂ = ಅದುರುತ್ತಿರುವ(ಕಂಪಿಸುತ್ತಿರುವ), ಭೀತಂ = ಹೆದರಿರುವ, ಪ್ರಪನ್ನಂ = ಶರಣು ಬಂದಿರುವ, (ನನ್ನನ್ನು) ಮೃತ್ಯೋಃ = ಇಂತಹ ಸಾವಿನಿಂದ, ಪರಿಪಾಹಿ = ಕಾಪಾಡು).

ತಾತ್ಪರ್ಯ:

ಪರಿಹರಿಸಲು ಆಗದಿರುವ ಸಂಸಾರವೆಂಬ ಜಂಜಡಗಳ ಕಾಳ್ಗಿಚ್ಚಿನಿಂದ ಬೆಂದು-ನೊಂದು ದುರದೃಷ್ಟವೆಂಬ ಬಿರುಗಾಳಿಯಿಂದ ಅದುರಿ-ಬೆದರಿ ನಿನ್ನಲ್ಲಿಯೇ ಶರಣು ಬಂದಿರುವ ನನ್ನನ್ನು ಈ ಸಂಸಾರವೆಂಬ ಸಾವಿನ ಮನೆಯಿಂದ ಕಾಪಾಡು; ಏಕೆಂದರೆ ಬೇರೆ ಯಾವ ಗುರುವನ್ನೂ ರಕ್ಷಕನನ್ನೂ ನಾನರಿಯೆನು .

ವಿವರಣೆ:

ಆತ್ಮಜ್ಞಾನವನ್ನು ಅರಸಿ ಬರುವ ಶಿಷ್ಯನು ಗುರುವಿನ ಮುಂದೆ ನಿವೇದಿಸಿಕೊಳ್ಳುತ್ತಾ ’ನಿಮ್ಮನ್ನು ಬಿಟ್ಟರೆ ಬೇರಾರೂ ನನಗೆ ದಾರಿ ತೋರುವವರಿಲ್ಲ’ ಎಂದು ಹೇಳುತ್ತಾನೆ. ಗುರುವು ಯಾವ ಕಾರಣಕ್ಕೂ ತನ್ನನ್ನು ಪಕ್ಕಕ್ಕೆ ಸರಿಸಬಾರದು ಅಥವಾ ಉದಾಸೀನ ಮಾಡಬಾರದು ಎಂದು ತನ್ನ ತೀವ್ರತರವಾದ ಮೋಕ್ಷಾಪೇಕ್ಷೆಯನ್ನು ಶಿಷ್ಯನು ಇಲ್ಲಿ ಪ್ರಕಟಿಸುತ್ತಾನೆ. ಸಂಸಾರವೆಂಬುದು ದಾವಾಗ್ನಿ ಅಥವಾ ಕಾಡಿನಕಿಚ್ಚು. ಇದಕ್ಕೆ ಬಿರುಗಾಳಿಯು ಸೇರಿಕೊಂಡುಬಿಟ್ಟರೆ ಅದು ಎಲ್ಲೆಡೆ ಬಹುಬೇಗ ಹರಡತೊಡಗುತ್ತದೆ. ಮತ್ತೆ-ಮತ್ತೆ ಸಂಸಾರದೊಳಗೆ ಬೀಳುವಂತೆ ಮಾಡುತ್ತಿರುವ ಬಯಕೆಗಳಿಂದ ಅಥವಾ ವಾಸನೆಗಳಿಂದ ಹೆದರಿ ಬೇರೆಲ್ಲೂ ಹೋಗದೆ ನಿಮ್ಮ ಬಳಿಗೆ ಶರಣಾಗಿ ಬಂದಿರುವ ನನ್ನನ್ನು ದುರದೃಷ್ಟಕರವಾದ ವಾಸನೆಗಳೆಂಬ ಬಿರುಗಾಳಿ-ಕಾಳ್ಗಿಚ್ಚಿನಂತಹ ಸಾವಿನಕೂಪದಿಂದ ಪಾರು ಮಾಡಿ ಎಂದು ಶಿಷ್ಯನು ಕೇಳಿಕೊಳ್ಳುತ್ತಾನೆ. ಗುರುವಿನ ಕೃಪಾದೃಷ್ಟಿಯು (ಕಾರುಣ್ಯದ ನೋಟ, ಅನುಗ್ರಹದ ನೋಟ) ತ್ವರಿತವಾಗಿ ಶಿಷ್ಯನ ಮೇಲೆ ಬೀಳಬೇಕೆಂಬುದು ಮೇಲಿನ ಶ್ಲೋಕದ ಆಶಯವಾಗಿದೆ. ತಡವಾದರೆ ವಾಸನೆಗಳು ಮತ್ತೆ ಸಾಧಕನನ್ನು ಮುತ್ತಿಕೊಂಡು ಸಂಸಾರದೊಳಗೆ ಬೀಳುವಂತೆ ಮಾಡಬಹುದು, ಇದರಿಂದ ಲೋಕಕ್ಕೆ ಮತ್ತೊಬ್ಬ ಸಾಧಕನ ಸೇವೆಯು ಸಿಗಲಾರದು ಎಂಬ ಭಾವವು ಕಂಡುಬರುತ್ತದೆ. ಯಾವಾಗ ಹೆದರದಿದ್ದರು ಮನುಷ್ಯನು ಸಾವಿಗೆ ಹೆದರಬೇಕಾಗುತ್ತದೆ. ಸಾವಿನ ಕೊನೆಯ ಕ್ಷಣದಲ್ಲಾದರೂ ’ಮುಗಿಯಿತೇ’ ಎಂಬ ಕರುಣಾಜನಕ ಭಾವವು ಸಾಮಾನ್ಯವಾಗಿ ಹುಟ್ಟದೇ ಇರಲಾರದು. ಇಂತಹ ಭಯವನ್ನು ಹೋಗಲಾಡಿಸಿ ಜನನ-ಮರಣಗಳೆಂಬ ಜಂಜಡದಿಂದ ನನ್ನನ್ನು ಪಾರುಮಾಡಿ ಎಂದು ಶಿಷ್ಯನು ನಿವೇದಿಸಿಕೊಳ್ಳುವುದು ಸಮುಚಿತವಾಗಿ ಕಂಡುಬರುತ್ತದೆ. ’ಶರಣಮನ್ಯಂ ಯದಹಂ ನ ಜಾನೇ - ನಿಮ್ಮನ್ನು ಬಿಟ್ಟರೆ ನನಗೆ ಗತಿಯಿಲ್ಲ’ ಎಂದು ಗುರುವನ್ನು ತನ್ನೆಡೆಗೆ ಸೆಳೆದುಕೊಳ್ಳುವ ತಂತ್ರವನ್ನೂ ಆಚಾರ್ಯರು ಇಲ್ಲಿ ತುಂಬ ಉದಾರತೆಯಿಂದ ಜ್ಞಾನಾರ್ಥಿಗಳಿಗೆ ತಿಳಿಸಿರುತ್ತಾರೆ.

 मूलम्-ಮೂಲ

शान्ता महान्तो निवसन्तिसन्तो वसन्तवल्लोकहितं चरन्तः ।
तीर्णास्स्वयं भीमभवार्णवं जनानहेतुनाऽन्यानपि तारयन्तः॥३९॥

ಶಾಂತಾ ಮಹಾಂತೋ ನಿವಸಂತಿ ಸಂತೋ ವಸಂತವಲ್ಲೋಕಹಿತಂ ಚರಂತಃ |
ತೀರ್ಣಾಃಸ್ವಯಂ ಭೀಮಭವಾರ್ಣವಂ ಜನಾನಹೇತುನಾಽನ್ಯಾನಪಿ ತಾರಯಂತಃ ||೩೮||

ಪ್ರತಿಪದಾರ್ಥ:

( ಭೀಮಭವಾರ್ಣವಂ = ಅಗಾಧವಾದ(ಜಂಜಡಗಳಿಂದ ಕೂಡಿರುವ) ಸಂಸಾರಸಾಗರವನ್ನು , ಸ್ವಯಂ = ತಾವೇ, ತೀರ್ಣಾಃ = ದಾಟಿರುವವರೂ, ಅಹೇತುನಾ = ನಿಮಿತ್ತವಿಲ್ಲದೆ, ಅನ್ಯಾನ್ ಜನಾನ್ ಅಪಿ = ಇತರ ಜನರನ್ನೂ, ತಾರಯಂತಃ = ದಾಟಿಸುವವರೂ, ಶಾಂತಾಃ = ನೆಮ್ಮದಿಯಿಂದಿರುವವರೂ, ಮಹಾಂತಾಃ = ದೊಡ್ಡವರೂ (ಮಹನೀಯರೂ) [ಆದ], ಸಂತಃ= ಸತ್ಪುರುಷರು, ವಸಂತವತ್ = ವಸಂತಋತುವಿನಂತೆ, ಲೋಕಕಲ್ಯಾಣಗಳನ್ನು , ಚರಂತಃ = ಮಾಡುತ್ತಾ, ನಿವಸಂತಿ = ಇರುತ್ತಾರೆ.)

ತಾತ್ಪರ್ಯ :

ಅಗಾಧವಾದ ಮತ್ತು ಜಂಜಡಗಳಿಂದ ಕೂಡಿರುವ ಸಂಸಾರಸಾಗರವನ್ನು ದಾಟಿ ಯಾವ ನಿಮಿತ್ತವೂ  ಇಲ್ಲದೆ ಇತರರನ್ನೂ ದಾಟಿಸುವ ಶಾಂತರೂ ಮಹನೀಯರೂ ಆದ ಸತ್ಪುರುಷರು ವಸಂತಕಾಲದಂತೆ ಯಾವಾಗಲೂ ಲೋಕಕ್ಕೆ ಒಳಿತನ್ನೇ ಮಾಡುತ್ತಿರುತ್ತಾರೆ.

ವಿವರಣೆ:

ಶಿಷ್ಯನು ಗುರುವನ್ನು ಹೊಂದಿ ಸಂಸಾರಸಾಗರವನ್ನು ದಾಟಿಸಿ ಎಂದೇನೋ ಕೇಳಿಕೊಳ್ಳುತ್ತಾನೆ. ಆದರೆ, ದಾಟಿಸಬಲ್ಲವರು ಯಾರು ?!. ಗುರುವು ಯಶಸ್ವಿಯಾಗಿ ದಾಟಿದ್ದರೆ ಶಿಷ್ಯನನ್ನೂ ದಾಟಿಸುತ್ತಾನೆ. ಈಜು ಬಲ್ಲವನು ಮಾತ್ರ ಈಜು ಬಾರದವನಿಗೆ ಕಲಿಸಬಲ್ಲನು. ಕುರುಡನು ಇತರರಿಗೆ ದಾರಿಯನ್ನು ತೋರಿಸಲಾರನು.  ಜೀವನ್ಮುಕ್ತರನ್ನೇ ಶಿಷ್ಯನು ಜ್ಞಾನಪ್ರಾಪ್ತಿಗಾಗಿ ಆಶ್ರಯಿಸಬೇಕು ಎನ್ನುವುದನ್ನು  ಆಚಾರ್ಯರು ಇಲ್ಲಿ ಸೂಕ್ಷ್ಮವಾಗಿ ಹೇಳಿರುತ್ತಾರೆ. ಹೀಗೆ ಸ್ವಾನುಭವವಿರುವ ಗುರುವು ಯಾವ ಅಪೇಕ್ಷೆಯನ್ನೂ ಇಟ್ಟುಕೊಳ್ಳದೆ ಜ್ಞಾನೋಪದೇಶವನ್ನು ಮಾಡುವವನಾಗಬೇಕು ಎಂಬ ವಿಚಾರವೂ ಇಲ್ಲಿ ಬರುತ್ತದೆ. ಹೀಗೆ ಆಚಾರ್ಯರು ಗುರು-ಶಿಷ್ಯರಿಬ್ಬರಿಗೂ ವಿವೇಕವನ್ನು ಉಪದೇಶಿಸುತ್ತಾ ಹೋಗುತ್ತಾರೆ. ಆಚಾರ್ಯರು ವಸಂತಕಾಲವನ್ನು ಅನುಮೋದಿಸಿರುವುದು ಇಲ್ಲಿಯ ವಿಶೇಷ. ಗ್ರೀಷ್ಮವು ಬಿಸಿಲ ಬೇಗೆಯಿಂದ ಕೂಡಿ ಕಂಗೆಡಿಸಿದರೆ ವರ್ಷಕಾಲದಲ್ಲಿ ಮಳೆಯಿಂದ ಹಾನಿಯೂ ಆಗುವುದುಂಟು. ಶರತ್ಕಾಲ ಮತ್ತು ಶಿಶಿರಗಳಲ್ಲಿ ಚಳಿ ಮತ್ತು ಹಿಮಪಾತಗಳಿಂದ ತೊಂದರೆಯಾಗುವುದುಂಟು. ವಸಂತಕಾಲದಲ್ಲಿ ಪ್ರಕೃತಿಯು ಸೊಬಗಿನಿಂದ ಕೂಡಿ ತಂಗಾಳಿಯನ್ನು ತೀಡುತ್ತಾ ಹಿತಕರವಾದ ಸನ್ನಿವೇಷವನ್ನು ಉಂಟುಮಾಡುವುದರಿಂದ ವಸಂತಕಾಲವನ್ನು ಇಲ್ಲಿ ಪ್ರಸ್ತಾವಿಸಿದ್ದಾರೆ ಎನ್ನಬಹುದು. ಸತ್ಪುರುಷರಾದ ಗುರುಗಳು ವಸಂತಕಾಲದಂತೆ ಯಾವಾಗಲೂ ಲೋಕಹಿತವನ್ನೇ ಬಯಸುತ್ತಾ ಒಳಿತನ್ನೇ ಉಂಟುಮಾಡುತ್ತಿರುತ್ತಾರೆ ಎನ್ನುವುದು ತಾತ್ಪರ್ಯ.

 ಮುಂದಿನ ಕಂತಿನಲ್ಲಿ ಇನ್ನಷ್ಟು ತಿಳಿಯೋಣ...

ಧರ್ಮ ನಿರಪೇಕ್ಷತೆ ಬೇಕೇ? -ದಿ|| ರಾಜೀವ್ ದೀಕ್ಷಿತರ ಭಾಷಣ

ಬ್ರಿಟಿಷರಿಂದ ಕಲಿತ ನಮ್ಮ ಶಿಕ್ಷಣ ಪದ್ಧತಿ ಬಗ್ಗೆ

ಸ್ವದೇಶೀ ಚಿನ್ತಕರಾಗಿದ್ದ  ದಿ|| ರಾಜೀವ್ ದೀಕ್ಷಿತ್  ಅವರ ಭಾಷಣದ ವೀಡಿಯೋ ನೋಡುತ್ತಿದ್ದೆ.  ಬ್ರಿಟಿಷರಿಂದ ಕಲಿತ ನಮ್ಮ ಶಿಕ್ಷಣ ಪದ್ಧತಿ ಬಗ್ಗೆ ಒಂದೆರಡು ಉಧಾಹರಣೆ ಕೊಟ್ಟರು.ಅದನ್ನು ಯಥಾವತ್ತಾಗಿ ಇಲ್ಲಿ ನೀಡುವ ಪ್ರಯತ್ನ ಮಾಡುವೆ.

ಉಧಾ: ೧   :-  ಚಿಕ್ಕ ವಯಸ್ಸಿನ ಮಕ್ಕಳಿಗೆ ಶಾಲೆಯಲ್ಲಿ  ಗಣಿತಶಾಸ್ತ್ರ  ಕಲಿಸುವಾಗ  ಕೂಡು, ಕಳೆ, ಗುಣಿಸು, ಭಾಗಿಸು  ಲೆಕ್ಖಗಳನ್ನು ತಾನೇ  ಟೀಚರ್ ಕಲಿಸುತ್ತಾರೆ. ಕೊಡುವ ಉಧಾಹರಣೆಗಳು  ಹೇಗಿರುತ್ತವೆ,  ಇಲ್ಲಿ ಕೇಳಿ,   ಡ್ಯಾಡಿ [ಈ ಪದದ ಅರ್ಥ ತಿಳಿದವರು  ತಂದೆಯನ್ನು ಹಾಗೆ ಕರೆಯಲಾರರು ] ಮಗುವಿಗೆ ಹತ್ತು ರೂಪಾಯಿ ಕೊಡುತ್ತಾನೆ. ಹುಡುಗ ಅದರಲ್ಲಿ ಐದು ರೂಪಾಯಿಯ ಚಾಕಲೇಟ್ ತಿನ್ನುತ್ತಾನೆ. ಉಳಿದ ಹಣವೆಷ್ಟು?  ಉತ್ತರ ಸುಲಭ. ಐದು ರೂಪಾಯಿ. ವಿಷಯ ಅಷ್ಟು ಸುಲಭವಾಗಿ ಮುಗಿಯುವುದಿಲ್ಲ.   ಇದೇ  ಉಧಾಹರಣೆಗಳು ನಿತ್ಯವೂ ಬಳಕೆಯಾದಂತೆ  ಮಗು ತಂದೆಯನ್ನು ಕೇಳುತ್ತದೆ, " ಚಾಕಲೇಟ್  ಕೊಳ್ಳಲು ಹಣ ಕೊಡು" ತಂದೆ ಕೊಡುತ್ತಾನೆ. ಇದೇ   ಚಾಳಿಯನ್ನು ಮಗು ಬೆಳಸಿಕೊಳ್ಳುತ್ತದೆ. ಲೆಕ್ಖದ ಉದ್ಹಾಹರನೆಯಲ್ಲಿ ಮಗು ಕಲಿತಿದ್ದೇನು? ಭೋಗ ಜೀವನ.ಇದು ನಮ್ಮ ಸಂಸ್ಕೃತಿಯಲ್ಲ. 

ಅದೇ ಟೀಚರ್ ಹೀಗೆ  ಉಧಾಹರಣೆ ಕೊಟ್ಟಿದ್ದರೆ .... ಅಪ್ಪ  ಹತ್ತು ರೂಪಾಯಿ ಕೊಡುತ್ತಾರೆ. ಮಗು ಐದು ರೂಪಾಯಿಯನ್ನು  ಬಿಕ್ಷುಕನಿಗೆ ದಾನ ಮಾಡುತ್ತದೆ. ಉಳಿದದ್ದೆಷ್ಟು?  ಬಲು ಸುಲಭ... ಐದು ರೂಪಾಯಿ. ಅಷ್ಟೇ ಅಲ್ಲ.  ಉಳಿದದ್ದು ನಮ್ಮ ಸಂಸ್ಕೃತಿ. ಮಗು ದಿನಕಳೆದಂತೆ ದಾನ ಮಾಡುವ ಪ್ರವೃತ್ತಿಯನ್ನು ಬೆಳಸಿಕೊಳ್ಳುತ್ತದೆ.  ಅಲ್ಲವೇ?

ಉಧಾ-೨ :-   ಟೀಚರ್ ಮಕ್ಕಳಿಗೆ ಹೇಳುತ್ತಾರೆ .ನೀವು ಹೋಗಿಬಂದ ಪಿಕ್ನಿಕ್ ಬಗ್ಗೆ  ಒಂದು ಪುಟ ಬರೆದುಕೊಂಡು ಬನ್ನಿ. ಮಗು ತಾನು  ನೋಡಿದ ಪಾರ್ಕ್, ವಾಟರ್ ಫಾಲ್ಸ್  , ತಿಂದ ಕೇಕ್, ಚಾಕಲೇಟ್, ಇತ್ಯಾದಿ ಎಲ್ಲವನ್ನೂ ಬರೆದುಕೊಂಡು ಬರುತ್ತದೆ. 

ಅದೇ ಟೀಚರ್  ನಿಮ್ಮ ಅಪ್ಪ-ಅಮ್ಮನೊಡನೆ  ಹೋಗಿಬಂದ ಪುಣ್ಯಕ್ಷೇತ್ರಗಳ ಬಗ್ಗೆ, ದೇವಾಲಯಗಳ ಬಗ್ಗೆ, ದರ್ಶನಮಾಡಿದ ಸಾದು ಸಂತರ ಬಗ್ಗೆ ಬರೆದುಕೊಂಡು ಬನ್ನಿ ಎಂದಿದ್ದರೆ, ಮಗು ಬಂದು ಮನೆಯಲ್ಲಿ ಕೇಳುತ್ತಿತ್ತು, ಆಗಲಾದರೂ ಅಪ್ಪ-ಅಮ್ಮ  ಪಿಕ್ ನಿಕ್ ಬದಲು ಪುಣ್ಯಕ್ಷೇತ್ರಗಳಿಗೆ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದರು, ಅಲ್ಲವೇ?  

ಈಗ ರಾಜೀವ್ ದೀಕ್ಷಿತ್ ಕಂಠ ದಿಂದಲೇ ಅವರ ವಿಚಾರ ಕೇಳಿ. ಬಲು ಸೊಗಸಾಗಿದೆ,

ಒಮ್ಮೊಮ್ಮೆ ವೀಡಿಯೋ ಡಿಸ್ಪ್ಲೇ ತಡವಾಗುತ್ತದೆ. ವೀಡಿಯೋ ದಲ್ಲಿರುವ ಧ್ವನಿ ಇಲ್ಲಿದೆ



ಅರಿಷಡ್ವರ್ಗಗಳನ್ನು ಅಧ್ಯಾತ್ಮದ ಉನ್ನತಿಗಾಗಿ ಬಳಸಲು ಸಾಧ್ಯವೇ?

ಶ್ರೀ ರವಿಯವರು ಅಧ್ಯಾತ್ಮ ಪಯಣದ ಬಗ್ಗೆ  ವೇದಸುಧೆಯಲ್ಲಿ   ಇಂದು  ಒಂದು  ಲೇಖನವನ್ನು ಬರೆದಿದ್ದಾರೆ. ಅದರಲ್ಲಿ ಕಾಮ ಕ್ರೋಧಾದಿ ಅರಿ ಷಡ್ವರ್ಗಗಳ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ನನಗೆ ಆಗ ಕೂಡಲೇ ನೆನಪಾದದ್ದು ಶ್ರೀ ಸುಧಾಕರಶರ್ಮರು. ಅಮೆರಿಕೆಯ      ಡಾ.ಜೆಸ್ಸಿ ಎಂಬ ಮಹಿಳೆಯೋರ್ವರು  ಬೆಂಗಳೂರಿಗೆ ಬಂದು ಶ್ರೀ ಶರ್ಮರೊಡನೆ ಅನೇಕ ವಿಚಾರಗಳನ್ನು ಚರ್ಚಿಸಿದರು. ಅದರಲ್ಲಿ ನನಗೆ  ಮುಖ್ಯವೆನಿಸಿದ್ದು  ಆಕೆ ಕೇಳಿದ ಪ್ರಶ್ನೆ ಅರಿ ಷಡ್ವರ್ಗಗಳ ಬಗ್ಗೆ. ಬಲು ಸೊಗಸಾದ ಮಾತುಕತೆ. ಅದರ ಯಥಾಭಾಗವನ್ನು ಈ ಕೆಳಗೆ ಅಳವಡಿಸಿರುವೆ. ಸಮಯಾವಕಾಶ  ಮತ್ತು  ಆಸಕ್ತಿ ಇದ್ದವರು  ಈ ಆಡಿಯೋ ಕೇಳಿ ಅದನ್ನು ಕನ್ನಡಕ್ಕೆ ಅನುವಾದಿಸಿ ಬರಹರೂಪವನ್ನು ಪ್ರಕಟಿಸಲು ಸಹಕರಿಸಿದರೆ ವೇದಸುಧೆಯು ಅವರಿಗೆ ಆಭಾರಿಯಾಗಿರುತ್ತದೆ.

ಅರಿಷಡ್ವರ್ಗಗಳನ್ನು  ಅಧ್ಯಾತ್ಮದ ಉನ್ನತಿಗಾಗಿ ಬಳಸಲು ಸಾಧ್ಯವೇ?  ಶೀರ್ಷಿಕೆ ಅಚ್ಚರಿ ಮೂಡಿಸಿದರೂ ನಿಧಾನವಾಗಿ ಕೇಳಿ ನಿಮ್ಮ ಅಭಿಪ್ರಾಯವನ್ನು ತಿಳಿಸಿ




ಆಧ್ಯಾತ್ಮಿಕ ಪ್ರಯಾಣ - ಒಂದು ಚಿಂತನೆ.


            ಮಾನವನ ಅಧ್ಯಾತ್ಮಿಕ ಪ್ರಯಾಣ ನಿರಂತರವಾದದ್ದು. ಪ್ರತಿ ಜೀವಿಯೂ ಸತತವಾಗಿ ಆಧ್ಯಾತ್ಮಿಕ ಔನ್ನತ್ಯವನ್ನು ಪಡೆಯಲು ಪ್ರಯತ್ನಮಾಡುತ್ತಲೇ ಇರುತ್ತಾನೆ. ಈ ನಿರಂತರ ಪ್ರಯಾಣವನ್ನು ಅವನು ದೇಹವೆಂಬ ಬೇರೆ ಬೇರೆ ವಾಹನಗಳಲ್ಲಿ ಮಾಡುತ್ತಿರುತ್ತಾನೆ. 

                ಮಾನವರಲ್ಲಿ ಯೋಚನೆ ಮಾಡುವ ಪ್ರಕ್ರಿಯೆ ಶುರುವಾದಂದಿನಿಂದ ಈ ಸೃಷ್ಟಿಯ ಪರಮ ಸತ್ಯವನ್ನು ಕಂಡು ಕೊಳ್ಳಲು ಎಲ್ಲಾ  ಕಾಲಕ್ಕೂ ತುಡಿತ ಮತ್ತು ಅದಕ್ಕೆ ಆಯಾಯ ಜೀವಿಯ ಶಕ್ತಿಯ ಪರಿಮಿತಿಯೊಳಗೆ , ತಕ್ಕಂಥ ಪ್ರಯತ್ನ ನಡೆಯುತ್ತಲೇ ಇದೆ. ಆದರೆ ಆ ಪರಮ ಸತ್ಯವನ್ನು ಬೇರೆ ಬೇರೆ ಸಮಯದಲ್ಲಿ ಬೇರೆ ಬೇರೆ ರೀತಿಯಲ್ಲಿ ಉದಾಹರಿಸಲಾಗಿದೆ. ಸಹಸ್ರಾರು ವರ್ಷಗಳಿಂದ ಮಾನವ ಆ ದೇವರನ್ನು ಅರ್ಥಮಾಡಿಕೊಳ್ಳಲು ಪ್ರಯತ್ನ ಪಡುತ್ತಲೇ ಇದ್ದಾನೆ. ಆದರೆ ಇಂದಿಗೂ ಯಾರಿಗೂ ಸಂಪೂರ್ಣವಾಗಿ ಆ ರಹಸ್ಯವನ್ನು ಛೇದಿಸಲು ಸಾಧ್ಯವಾಗಿಲ್ಲ. ಏಕೆಂದರೆ ಪರಮ ಸತ್ಯವನ್ನು ಬೇರೆ ಬೇರೆ ಸಮಯದಲ್ಲಿ ಬೇರೆ ಬೇರೆ ರೀತಿಯಲ್ಲಿ ಉದಾಹರಿಸಿರುವುದರಿಂದ ಕಾಲಕಾಲಕ್ಕೆ ದೇವರ ಕಲ್ಪನೆ ಬದಲಾಗುತ್ತಲೇ ಇರುತ್ತದೆ. ಹಾಗಾಗಿ ನಮ್ಮಲ್ಲಿ ಒಬ್ಬ ದೇವನ ಬದಲಿಗೆ ಸಹಸ್ರಾರು ದೇವತೆಗಳಿದ್ದಾರೆ. ಯಾವುದನ್ನು ನಂಬುವುದು ಯಾವುದನ್ನು ಬಿಡಿವುದು ಎಂಬುದೇ ಮಾನವರ ಪೀಕಲಾಟ. ಋಗ್ವೇದದಲ್ಲಿರುವ ಪುರುಷ ಸೂಕ್ತದಲ್ಲಿ ಆ ಪರಮಾತ್ಮನ  ಸರ್ವ ಸಾಮರ್ಥ್ಯ ಮತ್ತು ಸರ್ವ ವ್ಯಾಪಕತ್ವವನ್ನು ಹೇಳಲ್ಪಟ್ಟಿದೆ. ಈ ಸರ್ವ ಸಮರ್ಥಶಾಲಿ ಮತ್ತು ಸರ್ವವ್ಯಾಪಕನಾಗಿರುವ ಪರಮ ಪುರುಷನು ಈ ಭೂಮಿಯನ್ನೂ ಸೇರಿದಂತೆ ಇಡೀ ವಿಶ್ವವನ್ನೇ ವ್ಯಾಪಿಸಿಕೊಂಡು ಈ ಸೃಷ್ಟಿಯನ್ನು ಮೀರಿ ಹತ್ತು ಅಂಗುಲದಲ್ಲಿ ನಿಂತಿದ್ದಾನೆ ಎನ್ನುತ್ತದೆ "ಪುರುಷ ಸೂಕ್ತ ". ಈ ಇಡೀ ವಿಶ್ವದ ಸೂತ್ರದಾರನಾಗಿರುವ ಆ ಪರಮ ಪುರುಷನನ್ನು ತಿಳಿದುಕೊಳ್ಳುವುದೇ ಅಧ್ಯಾತ್ಮಿಕ ಪಯಣದ ಮತ್ತು ಔನ್ನತ್ಯವನ್ನು ಪಡೆಯುವ ಧ್ಯೇಯ ಮತ್ತು ಗುರಿ. ಈ ಪಯಣ ಆ ಪರಮ ಪುರುಷನನ್ನು ತಿಳಿದುಕೊಳ್ಳುವ ತನಕ ನಿರಂತರವಾದದ್ದು ಮತ್ತು ಪ್ರತಿ ಜೀವಿಯೂ ಈ ಪಯಣದ ಯಾವುದೋ ಒಂದು ಹಂತದಲ್ಲಿರುತ್ತಾನೆ. 


ಇದನ್ನು ನಾನು ಹೀಗೆ ಅರ್ಥ ಮಾಡಿಕೊಂಡಿದ್ದೇನೆ: 

              ಮಕ್ಕಳು ಶಾಲೆಗೆ ಹೋಗಲು ಶುರು ಮಾಡಿದಾಗ, ಅವರಿಗೆ ತಾವು ಏತಕ್ಕಾಗಿ ಶಾಲೆಗೆ ಹೋಗಬೇಕು ಎಂದು ಯೋಚನೆ ಮಾಡುವ ಕ್ಷಮತೆ ಇರುವುದಿಲ್ಲ. ಹೌದಲ್ಲವೇ? ಆದರೆ ಅವರು ಹಲವಾರು ಕಾರಣಗಳಿಗಾಗಿ ಶಾಲೆಗೆ ಹೋಗುತ್ತಾರೆ. ಅಪ್ಪ-ಅಮ್ಮ ಖಡ್ಡಾಯಪಡಿಸುತ್ತಾರೆ, ಪಕ್ಕದ ಮನೆಯ ಹುಡುಗರೂ ಹೋಗುತ್ತಾರೆ, ಒಳ್ಳೆಯ ಯೂನಿಫಾರ್ಮ್ ಹಾಕಿಕೊಳ್ಳಲು ಸಿಗುತ್ತದೆ, ಬಸ್ಸಿನಲ್ಲಿ ಹೋಗುತ್ತೇವೆ, ಆ ಬೀದಿಯ ಮಕ್ಕಳೆಲ್ಲ ಅಲ್ಲಿ  ಸಿಗುತ್ತಾರೆ, ಅಮ್ಮ ಡಬ್ಬಿಯಲ್ಲಿ ಒಳ್ಳೆಯ ತಿಂಡಿ- ತಿನಿಸುಗಳನ್ನು ಹಾಕಿ ಕೊಡುತ್ತಾಳೆ, ಅಪ್ಪ ಬೈತಾರೆ, ಶಾಲೆಯಲ್ಲಿ ಎಲ್ಲಾ ಮಕ್ಕಳ ಜೊತೆಯಲ್ಲಿ ಆಟವಾಡಲು ಸಿಗುತ್ತೆ,  ಹೀಗೆ ಹತ್ತು ಹಲವಾರು ಕಾರಣಗಳಿಗೆ ಮಕ್ಕಳು ಶಾಲೆಗೆ ಹೋಗುತ್ತಾರೆ. ಅವರಿಗೆ ಏನನ್ನು ಓದ ಬೇಕು, ಯಾಕೆ ಓದಬೇಕು, ಅಕ್ಷರವನ್ನು ಹೀಗೇ ಏಕೆ ಬರೆಯಬೇಕು ಎಂದೆಲ್ಲ ಯೋಚಿಸುವ ಬುಧ್ಧಿ ಇರುವುದಿಲ್ಲ. ಅವರಿಗೆ ಪ್ರತಿಯೊಂದನ್ನೂ ಹೇಳಿಕೊಡಬೇಕು, ಓದಲು, ಬೆರೆಯಲು ತಿದ್ದಬೇಕು. ಅವರ ಬಟ್ಟೆ ಬರೆ ಶೂ ಎಲ್ಲವನ್ನೂ ದೊಡ್ಡವರು ನೋಡಿಕೊಳ್ಳ ಬೇಕಾಗುತ್ತದೆ. 

ಸಾಮಾನ್ಯವಾಗಿ ಆಧ್ಯಾತ್ಮ ಪ್ರಯಾಣದಲ್ಲೂ ಬಹಳಷ್ಟುಜನ ಈ ಸ್ಥರದಲ್ಲಿರುತ್ತಾರೆ. ಇದು ಪ್ರಾಥಮಿಕ ಶಾಲೆಯ ಹಂತ. 

ಇಲ್ಲಿಂದ ಮಾಧ್ಯಮಿಕ ಶಾಲೆಯ ಹಂತಕ್ಕೆ ಹೋಗೋಣ. ಇಲ್ಲಿ ಮಕ್ಕಳಿಗೆ ಸ್ವಲ್ಪಮಟ್ಟಿಗೆ ಅರಿವು ಮೂಡಿ ತಮ್ಮ ತಮ್ಮ ಕೆಲಸವನ್ನು ತಾವೇ ಮಾಡಿಕೊಳ್ಳುವ ಸ್ಥಿತಿಯನ್ನು ಮುಟ್ಟಿರುತ್ತಾರೆ. ಇಲ್ಲಿ, ಅವ ಅಥವಾ ಅವಳು ಶಾಲೆಗೆ ಸರಿಯಾಗಿ ಹೋಗುತ್ತಿದ್ದಾರೆಯೇ, ಹೋಂ ವರ್ಕ್ ಸರಿಯಾಗಿ ಮಾಡುತ್ತಿದ್ದಾರೆಯೇ, ಅಕ್ಷರ ಸರಿಯಾಗಿದೆಯೇ ಎಂದು  ಅವರನ್ನು ನೋಡಿ ಸೂಕ್ಷ್ಮ ಮಾರ್ಗದರ್ಶನ ಮಾಡಿದರೆ ಸಾಕು. 

ಇಲ್ಲಿಂದ ಅವರು ಹೈಸ್ಕೂಲ್ ಹಂತಕ್ಕೆ ಬಂದಾಗ ಅವರಿಗೆ ಕಲಿಕೆಯ ವಿಷಯಗಳ ಸ್ವಾತಂತ್ರ್ಯ ಸಿಗುತ್ತೆ. ಆದರೂ ಅದನ್ನು ಆರಿಸಿಕೊಳ್ಳುವಾಗ ಅವರಿಗೆ ಬೇರೆ ಹಿರಿಯರ ಮಾರ್ಗದರ್ಶನ ಬೇಕಾಗುತ್ತದೆ.  ಅವರು ಸ್ವತಂತ್ರರಾಗಿ ಓದುವ ಬರೆಯುವ ಹಂತವನ್ನು ತಲುಪಿರುತ್ತಾರೆ. ಅವರನ್ನು ಗಮನಿಸಿ, ಸೂಕ್ತ ಸಮಯದಲ್ಲಿ ಸೂಕ್ತ ಮಾರ್ಗದರ್ಶನ ಮಾಡಿದರೆ ಸಾಕು.

ನಂತರ ಕಾಲೇಜಿಗೆ  ಸೇರುವಾಗ ಸಂಪೂರ್ಣವಾಗಿ ಅವನ ಇಚ್ಚಾಪ್ರಕಾರ ಓದುವ ವಿಷಯಗಳನ್ನು ಆರಿಸಿಕೊಳ್ಳುವ ಬಹುತೇಕ ಶಕ್ತಿಯನ್ನು ಪಡೆದು ಕೊಂಡಿರುತ್ತಾರೆ ವಿಶೇಷವೇನೆಂದರೆ, ಇಲ್ಲಿ ಅವನು ಓದಬೇಕಾದ ವಿಷಯಗಳ ಸಂಖ್ಯೆ ಕಡಿಮೆಯಾಗುತ್ತಾ ಹೋಗುತ್ತದೆ. ಮೊದಲ ವರ್ಷದಲ್ಲಿದ್ದಂತಹ ಕೆಲವು ವಿಷಯಗಳು ಎರಡನೇ ವರ್ಷಕ್ಕೆ ಇರುವುದಿಲ್ಲ. ಮೇಲೇರುತ್ತಾ ಅವನು ಅಥವಾ ಅವಳು ಕೇವಲ ಆ ವಿಷಯಗಳಲ್ಲಿ ಮಗ್ನರಾಗಿ ಅವುಗಳನ್ನೇ ಆಳವಾದ ಅಭ್ಯಾಸ ಮಾಡುತ್ತಾರೆ.ಮುಂದೆ ಸ್ನಾತಕೋತ್ತರ( Post graduation) ಪದವಿಗಾಗಿ   ಅಭ್ಯಾಸಮಾಡುವಾಗ,  ಎಲ್ಲಾ ಐಚ್ಚಿಕ ವಿಷಯಗಳಲ್ಲಿ ಯಾವುದಾದರೂ ಒಂದು ವಿಷಯವನ್ನು ಆಯ್ಕೆ ಮಾಡಿಕೊಂಡು ಅದರಲ್ಲೇ ಪರಿಣಿತಿ ಮತ್ತು ಪ್ರಾವೀಣ್ಯ ಪಡೆಯಲು ಪ್ರಯತ್ನಿಸುತ್ತಾರೆ. ಇನ್ನೂ ಮುಂದೆ ಹೋಗಿ ಸಂಶೋದನಾ ಪದವಿ( ಪಿ ಹೆಚ್ ಡಿ) ಮಾಡುವಾಗ ಆ ಒಂದು ವಿಷಯದ ಯಾವುದಾದರೂ ಒಂದು ಭಾಗವನ್ನು ಆಯ್ಕೆ ಮಾಡಿ ಮತ್ತಷ್ಟು ಆಳವಾಗಿ ಅದನ್ನೇ ಅಭ್ಯಾಸಮಾಡಿ ಆ ವಿಷಯದಲ್ಲೇ ಪರಿಣಿತಿಯನ್ನು ಪಡೆಯುತ್ತಾರೆ. 

ಆಧ್ಯಾತ್ಮ ಔನ್ನತ್ಯದ ಹಾದಿಯೂ ಹೆಚ್ಚೂ ಕಡಿಮೆ ಇದೇ ರೀತಿಯದು. 

 ತಮ್ಮನ್ನು ತಾವು ನಾಸ್ತಿಕರೆಂದು  ಕರೆದುಕೊಳ್ಳುವ ಬೆರಳೆಣಿಕೆಯಷ್ಟು ಜನರನ್ನು ಸೇರಿಸಿ ಎಲ್ಲರೂ ಆಧ್ಯಾತ್ಮಿಕ ಬೆಳವಣಿಗೆಯ ಯಾವುದೋ ಒಂದು ಹಂತದಲ್ಲಿ ಇರುತ್ತಾರೆ. ಪ್ರೈಮರಿ ಶಾಲೆಗೆ  ಹೋಗಿ ವಿಧ್ಯಾಭ್ಯಾಸದ ಉನ್ನತ ಹಂತಕ್ಕೆ ತಲುಪುವಂತೆಯೇ, ಅಧ್ಯಾತ್ಮಿಕ ಪ್ರಯಾಣವೂ ಸಹ.  ಆದರೆ ವಿಡಂಬನೆ ಏನೆಂದರೆ, ಪ್ರಾಥಮಿಕ ಶಾಲೆಗೆ ಸೇರಿದ 1000 ಜನರಲ್ಲಿ ಪ್ರತಿ ಹಂತದಲ್ಲೂ ಹಲವರು ಉದುರಿಹೊಗುತ್ತಾ, ಕಡೇಗೆ ಪಿ ಹೆಚ್ ಡಿ ಹಂತಕ್ಕೆ 4-5 ಜನ ಮುಟ್ಟಬಹುದು, ಆಧ್ಯಾತ್ಮಿಕ ಪ್ರಯಾಣದಲ್ಲೂ ಸಹ ಹೀಗೇ.  ಪರಮ ಸತ್ಯವನ್ನು ಅರಿಯಲು ಪ್ರಯತ್ನಪಡುವವರಲ್ಲಿ, ಲಕ್ಷಕ್ಕೊಬ್ಬರಿಗೆ ಸಾದನೆಮಾಡಿ ಒಂದು ಹಂತಕ್ಕೆ ತಲುಪುವ ಸಾಧ್ಯತೆ ಇರಬಹುದು. 

ಜಯದ  ಗುಟ್ಟೇನು ? 

ಬಸ್ಸು ಮತ್ತು ರೈಲು ಪ್ರಯಾಣ ಮಾಡುವಾಗ " ಕಡಿಮೆ ಲಗ್ಗೇಜು ಹೆಚ್ಚು ಸುಖ " ಎಂಬ ಬರಹವನ್ನು ಸರ್ವೇ ಸಾಮಾನ್ಯ ನೀವು ಕಂಡಿರಬಹುದು.ಆಧ್ಯಾತ್ಮಿಕ  ವಿಕಾಸ ಮತ್ತು ಆಧ್ಯಾತ್ಮಿಕ ಪ್ರಯಾಣದಲ್ಲೂ ಇದು ಹೆಚ್ಚು ಪ್ರಸ್ತುತ. ಹೆಚ್ಚು ಲಗ್ಗೇಜು ಪ್ರಯಾಣವನ್ನು ಹೆಚ್ಚು ಶ್ರಮಪೂರಿತವಾಗಿಸುತ್ತದೆ. ಬಸ್ಸು ಮತ್ತು ರೈಲು ಪ್ರಯಾಣದಲ್ಲಿ ಹೇಗೋ ಕಷ್ಟಪಟ್ಟಾದರೂ ಗಮ್ಯವನ್ನು ತಲುಪಬಹುದು. ಆದರೆ ಆದ್ಯಾತ್ಮಿಕ ಪ್ರಯಾಣದಲ್ಲಿ ಅದು ಸಾಧ್ಯವೇ ಇಲ್ಲ. ಅಧ್ಯಾತ್ಮಿಕ ಪ್ರಯಾಣದ ಲಗ್ಗೇಜುಗಳೆಂದರೆ "ಅರಿಷಡ್ವರ್ಗಗಳು"  "ಆರು ಮಂದಿ ವೈರಿಗಳನು ಸೇರಲೀಸದಂತೆ ನೂಕಿ, ಧೀರನಾದ ಹರಿಯ ಪಾದ ಸೇರಬೇಕೆನ್ನುವರಿಗೆ, ಒಂದು ಬಾರಿ ಸ್ಮರಣೆ ಸಾಲದೇ"  ಎಂದು ಹರಿದಾಸರು ಹಾಡಿದ್ದಾರೆ. ಈ ಆರು ವೈರಿಗಳೇ, ಕಾಮ, ಕ್ರೋಧ, ಲೋಭ, ಮೋಹ,  ಮದ, ಮತ್ತು ಮಾತ್ಸರ್ಯಗಳು. ನಿರಂತರ ಅಭ್ಯಾಸದಿಂದ, ಬಹಳ ಶ್ರಮದ ಪ್ರಯತ್ನದಿಂದ, ಗುರುವಿನ ಮಾರ್ಗದರ್ಶನ ಮತ್ತು ಕೃಪೆಯಿಂದ ಮಾತ್ರ ಇವುಗಳನ್ನು ಹೋಗಲಾಡಿಸಿಕೊಳ್ಳಲು ಸಾಧ್ಯ.

 " त्यागेनैके अमृतत्वमानाशु:" "ತ್ಯಾಗೇನೈಕೆ  ಅಮೃತತ್ವಮಾನಶು:"  ಎಂಬುದು ವೇದೋಕ್ತಿ. ತ್ಯಾಗದಿಂದ ಮಾತ್ರ ಅಮೃತತ್ವ ಅಥವಾ ಅಮರತ್ವ ದೊರಕುತ್ತದೆ ಎಂಬುದು ಇದರ ಅರ್ಥ. ಯಾವುದರ ತ್ಯಾಗ ಮಾಡಬೇಕೆಂದು ಕೇಳಿದರೆ, ಮೇಲೆ ಹೇಳಿದ ಆರು ಮಂದಿ ವೈರಿಗಳನ್ನು ತ್ಯಾಗ ಮಾಡಬೇಕು. ಮಾಡಿದರೆ ಮಾತ್ರ ಮುಕ್ತಿ. ನಾವು ಸೇರಬೇಕಾದ ಸ್ಥಳವನ್ನು ಸುಲಭವಾಗಿ ಸೇರಬಹುದು. ಇದಕ್ಕೆ ಶುಧ್ಧವಾದ ನಂಬಿಕೆ ಬೇಕು. ಆದರೆ ಈ ನಂಬಿಕೆ ಯಾವ ರೀತಿಯ ನಂಬಿಕೆ ಆಗಿರಬೇಕು ಎನ್ನುವುದನ್ನು ನೋಡೋಣ. 

ಅಂತರಿಕ್ಷಕ್ಕೆ  ಹಾರಿಬಿಡುವ ಉಪಗ್ರಹಗಳನ್ನು ಆಕಾಶಕ್ಕೆ ಕಳುಹಿಸಲು ಒಂದು" ರಾಕೆಟ್ ಲಾಂಚರ್ " ನ್ನು ಉಪಯೋಗಿಸುತ್ತಾರೆ. ಅದನ್ನು ಮುಂದಕ್ಕೆ ತಳ್ಳಲು ಒಂದು cryogenic engine ಅಥವಾ ಉಪಗ್ರಹ ಉಡಾವಣಾ ಯಂತ್ರವನ್ನು ಉಪಯೋಗಿಸಿ ರಾಕೆಟ್ಟು ಮತ್ತು ಅದರ ಮೇಲಿರುವ ಉಪಗ್ರಹ ಎಲ್ಲವನ್ನೂ ನಭೋಮಂಡಲಕ್ಕೆ ತಳ್ಳುತ್ತಾರೆ. ಹಾಗೆ ಭೂಮಿಯಿಂದ ಹೊರಟ ರಾಕೆಟ್ಟಿನ ತಲೆಯ ಮೇಲಿರುವ ಉಪಗ್ರಹ ತನ್ನ ಅಕ್ಷೆಯಲ್ಲಿ ಹೋಗಿ ಕೂಡ ಬೇಕಾದರೆ ಅದನ್ನು ಹೊತ್ತು ಹೋಗುವ ರಾಕೆಟ್ಟು ಹಿಂದಿನಿಂದ  ಸುಟ್ಟು ಕರಗಿ ಒಂದೊಂದೇ ಬಾಗವೂ ಬಿಡಿಬಿಡಿಯಾಗಿ ಬಿದ್ದುಹೋಗಿ,  ಮಾತ್ರ ಉಪಗ್ರಹವನ್ನು ಮೇಲೆ ಹೋಗಲು ಸಹಾಯ ಮಾಡುತ್ತದೆ. ಉಪಗ್ರಹವನ್ನು  ಹೊತ್ತು ಹೋಗುವ ರಾಕೆಟ್ಟು ತಾನು ಸುಟ್ಟು ಕರಕಾಗಿ ನೆಲಕ್ಕೆ ಬಿದ್ದು ಹೋದರೆ ಮಾತ್ರ ಉಪಗ್ರಹ ತನ್ನ ಗಮ್ಯವನ್ನು ಸೇರಲು ಸಾಧ್ಯ. ಆಧ್ಯಾತ್ಮ ಪ್ರಯಾಣವೂ ಸಂಪೂರ್ಣವಾಗಿ ಈ ಉಪಗ್ರಹದ ಪ್ರಯಾಣದಂತೆಯೇ ಅಲ್ಲವೇ? ಆತ್ಮವನ್ನು ಹಿಡಿದು ಹಿಂಡಿ ಹೀರಿಹಿಪ್ಪೆ ಮಾಡುವ ಅರಿಷಡ್ವರ್ಗಗಳೆಂಬ ಆರು ಮಂದಿ ವೈರಿಗಳನ್ನೂ ಸುಟ್ಟು ಹಿಂದಕ್ಕೆ ತಳ್ಳಿ ಕೆಳಕ್ಕೆ ಬೀಳಿಸಿದರೆ ಮಾತ್ರ ಆತ್ಮೋಧ್ಧಾರ  ಸಾಧ್ಯ. 

 ಈ ಅಧ್ಯಾತ್ಮಿಕ ಪ್ರಯಾಣದಲ್ಲಿ ಮಾನವ ಹಂತ ಮಂತವಾಗಿ ಬೆಳೆಯುತ್ತಾನೆ. ಒಂದು  ಜನ್ಮದಿಂದ ಇನ್ನೊಂದು ಜನ್ಮಕ್ಕೆ ಹೋಗುವಾಗ ತನ್ನ ಪೂರ್ವ ಜನ್ಮದ ಸಂಸ್ಕಾರಗಳನ್ನು ತೆಗೆದುಕೊಂಡೆ ಹೋಗುತ್ತಾನೆ ಎನ್ನುತ್ತದೆ, ಸನಾತನ ಧರ್ಮದ ಕೆಲವು ಅಂಗಗಳು. ಇದು ಹೇಗೆ ಎಂದು ನೋಡೋಣ. 
ನಾವು ಮನೆಗೆ ಅಂಗಡಿಯಿಂದ ಹುಣಸೆ ಹಣ್ಣನ್ನು ತರುತ್ತೇವೆ. ಸಾಮಾನ್ಯವಾಗಿ ಅದರೊಟ್ಟಿಗೆ ಕೆಲವು ಹುಣಸೆ ಬೀಜಗಳಿರಬಹುದು. ಅವುಗಳನ್ನು ಹೆಕ್ಕಿ ಹೊರಗೆ ಬಿಸಾಡುತ್ತೇವೆ. ಹಾಗೆ ಬಿಸಾಟ ಬೀಜದಲ್ಲಿ ಯಾವೊದೋ ಒಂದಕ್ಕೆ ನೆಲದ ಆಸರೆ ಸಿಕ್ಕು, ನೀರಿನ ಸಂಪರ್ಕವೂ ಸಿಕ್ಕಾಗ, ಅದು ಮೊಳೆಯುತ್ತದೆ. ಮೊಳೆಕೆ  ಸಸಿಯಾಗಿ, ಸಸಿ ಗಿಡವಾಗಿ, ಗಿಡ ಮರವಾಗಿ ಬೆಳೆಯುತ್ತದೆ. ಬೆಳೆದ ಮರದ ರೆಂಬೆ ಕೊಂಬೆಗಳ ವಿನ್ಯಾಸ, ಎಲೆಗಳ ಬಣ್ಣ, ಆಕಾರ, ವಾಸನೆ ಮತ್ತು ರುಚಿ, ಹೂಗಳ  ಬಣ್ಣ, ಆಕಾರ, ವಾಸನೆ ಮತ್ತು ರುಚಿ, ಕಾಯಿ ಮತ್ತು ಹಣ್ಣಿನ ಬಣ್ಣ, ಆಕಾರ, ವಾಸನೆ ಮತ್ತು ರುಚಿ ಹೀಗೆ ಎಲ್ಲಾ ಗುಣಗಳೂ ಆ ಬೀಜದಲ್ಲಿ ಅಡಕವಾಗಿತ್ತಲ್ಲವೇ? ಈ ಅಡಕವಾಗಿದ್ದ ಗುಣಗಳನ್ನೆಲ್ಲ ಆ ಬೀಜವು ತನ್ನ ತಾಯಿ ಮರದಿಂದ ಹೊತ್ತು ತಂದಿದ್ದಲ್ಲವೇ?  ಹೀಗೆ ಮನುಷ್ಯನೂ ಸಹ ತನ್ನ ಪೂರ್ವಜನ್ಮದಿಂದ ತನ್ನ ಎಲ್ಲ ಗುಣಗಳನ್ನೂ ಹೊತ್ತು ತರುತ್ತಾನೆ. ಆ ಗುಣಗಳನ್ನು ಪ್ರಸ್ತುತ ಜನ್ಮದಲ್ಲಿ ಅಭ್ಯಾಸದಿಂದ ಸಂಸ್ಕರಿಸಿಕೊಂಡು ಉತ್ತಮ ಹಂತಕ್ಕೆ ಹೋಗುವುದೇ ಅಧ್ಯಾತ್ಮಿಕ ಪ್ರಯಾಣದ ಮೂಲ ಉಧ್ಧ್ಯೇಶ. ಮೇಲೆ ಹೇಳಿದ ಬೀಜದ ದೃಷ್ಟಾಂತವನ್ನೇ ಮತ್ತೆ ನೋಡೋಣ. ಆ ಬೀಜವನ್ನು ಬಾಣಲಿಯಲ್ಲಿ ಹಾಕಿ ಹುರಿದು ಬಿಟ್ಟರೆ, ಅದರಲ್ಲಿ ಮತ್ತೆ ಚಿಗುರುವ ಗುಣಗಳು ನಶಿಸಿ ಹೋಗಿ ಮತ್ತೆ ಗಿಡವಾಗಿ ಮರವಾಗಿ ತನ್ನ ಗುಣಗಳನ್ನು ಪ್ರಸ್ತುತ ಪಡಿಸುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ. ಹಾಗೆಯೇ ಮನುಷ್ಯನೂ ಸಹ ತನ್ನನ್ನು ತಾನು ಸಂಸ್ಕರಿಸಿಕೊಂಡು ತನ್ನಲ್ಲಿರುವ ಅರಿಷಡ್ವರ್ಗಗಳಿಗೆ ಸಂಬಂಧಿಸಿದ ಗುಣಗಳನ್ನೆಲ್ಲ ಸುಟ್ಟರೆ, ಅಧ್ಯಾತ್ಮಿಕ ಔನ್ನತ್ಯವನ್ನು ಪಡೆಯ ಬಹುದು.  

ಭಯ ಮತ್ತು ಭಕ್ತಿ 

ಸಾದಾರಣವಾಗಿ ದೇವರನ್ನು ನಂಬುವ ಮತ್ತು ಆತ್ಮೋಧ್ಧಾರದ  ಹಾದಿಯಲ್ಲಿ ಪಯಣಿಸುವವರಲ್ಲಿ ಮೂಲಭೂತವಾದ ವ್ಯತ್ಯಾಸವಿದೆ.  ಸಾಮಾನ್ಯವಾಗಿ " ದೇವರನ್ನು ಭಯ ಭಕ್ತಿಯಿಂದ ಸೇವಿಸು" ಎಂದು  ಹೇಳುತ್ತಾರೆ. ಭಕ್ತಿಯೇನೋ ಸರಿ ಆದರೆ ಭಯವೇಕೆ? ಇದು ಒಂದು ವಿವಾದಾತ್ಮಕವಾದ ವಿಷಯ. ಇದರ ವಿವಾದಕ್ಕೆ ಇಳಿಯುವ ಮೊದಲು ಮಾನವರಿಗಿರುವ ಈ " ಭಯ "ವನ್ನು ಸ್ವಲ್ಪ ವಿಶ್ಲೇಷಣೆ ಮಾಡುವ.  ನಾವೆಲ್ಲರೂ ಈ ಜೀವನಕ್ಕೆ ಮತ್ತು ಜೀವನಕ್ಕೆ ಸಂಭಂಧಪಟ್ಟ ಎಲ್ಲಾ ವಿಷಯ ಮತ್ತು ವಸ್ತುಗಳಿಗೆ ಭಾವನಾತ್ಮಕವಾಗಿ ಅಂಟಿಕೊಂಡಿರುತ್ತೇವೆ.ಅಂದರೆ ನಮಗೇ ಸಂಭಂಧಪಟ್ಟ ಎಲ್ಲಾ ವಿಷಯ -ವಸ್ತುಗಳಿಗೂ ನಾವು ಅಂಟಿಕೊಂಡಿರುತ್ತೇವೆ.  ಈ ಅಂಟೆ ಎಲ್ಲಾ ಭಯಗಳಿಗೂ ಕಾರಣ.ನಮಗೆ ಎರಡು ರೀತಿಯ ಭಯವಿರುತ್ತದೆ. ಒಂದು, ನಮ್ಮಲ್ಲಿರುವ ವಸ್ತು-ವಿಷಯಗಳನ್ನು ನಾವು ಕಳೆದುಕೊಳ್ಳುವ ಭಯ ಅಥವಾ ನಾವು ಆಸೆಪಡುವ ವಸ್ತು-ವಿಷಯಗಳು ನಮಗೆ ಸಿಗುವುದಿಲ್ಲವೇನೋ ಎಂಬ ಭಯ. ನಾವು ಸೂಕ್ಷ್ಮವಾಗಿ ಪರಿಶೀಲಿಸಿದರೆ ಮಾನವನ ಭಯ ಈ ಎರಡರಲ್ಲಿ ಯಾವುದಾದರೂ ಒಂದು ಭಾಗಕ್ಕೆ ಸೇರಲೇಬೇಕು. ಸಾಮಾನ್ಯವಾಗಿ ಎಲ್ಲಾ ಮಾನವರೂ ಮೇಲೆ ಹೇಳಿದ ಭಯದ ಕಾರಣದಿಂದಾಗಿ " ದೇವರನ್ನು" ಮೊರೆ ಹೋಗುತ್ತಾರೆ. ತಾವು ಅಪೇಕ್ಷೆಪಟ್ಟ ಆಸೆಗಳು ಈಡೇರಲೆಂದು ಆ ಭಗವಂತನನ್ನು ಬೇಡುತ್ತಾರೆ, ಹಲುಬುತ್ತಾರೆ, ಗೋಳುತ್ತಾರೆ. 

ಮಹಾಭಾರತದಲ್ಲಿ ಅರ್ಜುನನೂ ಸಹ, ಸಾಕ್ಷಾತ್ ಭಗವಂತನೆಂದೆ ಪರಿಗಣಿಸಲ್ಪಟ್ಟ, ಈ ಪ್ರಪಂಚಕ್ಕೆ ಭಗವದ್ಗೀತೆಯೆಂಥಹ ಅದ್ಭುತ ಕಾವ್ಯವನ್ನು ಕೊಟ್ಟಂತಹ ಶ್ರೀ ಕೃಷ್ಣನೇ ಜೊತೆಯಲ್ಲಿದ್ದರೂ, ಕುರುಕ್ಷೇತ್ರದ ಯುಧ್ಧರಂಗದಲ್ಲಿ ಹೋರಾಡಲು ಸನ್ನಧ್ಧರಾಗಿ ಎಲ್ಲರೂ ನಿಂತಿರುವಾಗ  ಶೋಕಾವಿಷ್ಟನಾಗಿ  " ಅಯ್ಯೋ ಈ ಯುಧ್ಧ ಏಕೆ ಬೇಕು, ಇಷ್ಟು ಜನರ ಹತ್ಯೆಯಿಂದ ಸಿಗುವ ರಾಜ್ಯ ಭೋಗಗಳೇಕೆ" ಎಂದು ಹಲುಬಲಿಲ್ಲವೇ. ಆ ದೈವದ ಸಹವಾಸದಲ್ಲಿದ್ದರೂ ಏನನ್ನೋ ಕಳೆದುಕೊಳ್ಳುವ ಭಯದಿಂದ ಅರ್ಜುನ ಗೋಳಾಡಲಿಲ್ಲವೇ? ಅವನ ಭಯವೂ ಸಹ ಜೀವನದ ವಿಷಯ -ವಸ್ತುಗಳಿಗೆ ಅವನು ಅಂಟಿಕೊಂಡಿದ್ದರ ಕಾರಣದಿಂದಲೇ ಉಧ್ಭವವಾಗಿದ್ದಲ್ಲವೇ?. 

ಆದರೆ ಈ ದೈವ ಭಯವೆಂಬುದು ಒಳ್ಳೆಯದೇ ಅಥವಾ ಕೆಟ್ಟದೇ?  

ಒಂದು ರೀತಿಯ ಸಾಮಾಜಿಕ ವ್ಯವಸ್ತೆ ಮತ್ತು ಸಂಸ್ಕೃತಿಯ ಬೆಳವಣಿಗೆ ಮತ್ತು ಬದಲಾಗುತ್ತಾ ಹೋಗುವ ಈ ಸಂಸ್ಕೃತಿಯ ಹತ್ತು ಹಲವಾರು ಆಯಾಮಗಳಿಗೆ ಈ ಭಯವೇ ಕಾರಣವೆಂದು ನಾವು ಅರಿತಾಗ ಮಾನವನ ಸಾಮಾಜಿಕ ಮತ್ತು ಪ್ರಾಪಂಚಿಕ ಜೀವನಕ್ಕೆ ಈ ಭಯವು ಪೂರಕವಾಗೆ ಇದೆ ಎಂದರೆ ತಪ್ಪಾಗಲಾರದು. "ಹೀಗೆ ಮಾಡಿದರೆ ತಪ್ಪು, ಇದನ್ನು ಮಾಡಿದರೆ ಕೆಟ್ಟ ಕರ್ಮ ಉಂಟಾಗುತ್ತದೆ, ಇದರಿಂದ ದೇವರ ಅವಕೃಪೆಗೆ ಪಾತ್ರನಾಗುತ್ತೀಯೇ ಮತ್ತು ದಂಡನೆಗೆ ಗುರಿಯಾಗುತ್ತೀಯೇ " ಎಂಬ ಭಯವನ್ನು ನಿಮ್ಮಲ್ಲಿ ಹುಟ್ಟಿಸಿದಾಗ, ನೀವು ಸಾಮಾಜಿಕ ಕಟ್ಟಲೆಗಳನ್ನು ಮೀರದೆ ಅವುಗಳ ಚೌಕಟ್ಟಿನಲ್ಲೇ ಇದ್ದಾಗ, ಒಂದು ಸುವ್ಯವಸ್ಥಿತ ಸಮಾಜ ನಿರ್ಮಾಣವಾದಾಗ, ಈ ಭಯವು ಒಳ್ಳೆಯದನ್ನೇ ಮಾಡುವುದಲ್ಲವೇ?  ನಮಗೇ ಅರ್ಥವಾಗದ ರೀತಿಯಲ್ಲಿ ನಮ್ಮ ಬದುಕು ನಡೆಯುತ್ತಿರುವಾಗ ಮತ್ತು ನಮ್ಮ ಜೀವನದಲ್ಲಿ ನಡೆದ ಅಥವಾ ನಡೆಯಬಹುದಾದ ಘಟನೆಗಳಿಗೆ ನಾವು ಸರಿಯಾದ ಕಾರಣಗಳನ್ನು ಕಂಡುಕೊಳ್ಳಲು ಅಸಮರ್ಥರಾದಾಗ, ಅದನ್ನೇ ಮನಸ್ಸಿಗೆ ಅಂಟಿಸಿಕೊಂಡು ಯೋಚನೆ ಮಾಡೀ ಮಾಡೀ ಹಣ್ಣಾಗಿ ಹುಚ್ಚಾಗುವುದರ ಬದಲು, ಅದಕ್ಕೆಲ್ಲ ಆ ದೈವವೇ ಕಾರಣವೆಂದುಕೊಂಡು ನಮ್ಮ ನಮ್ಮ ಮನಸ್ಸುಗಳನ್ನು ತಹಬಂದಿಗೆ ತಂದುಕೊಂಡು ಸಮಾದಾನ ಚಿತ್ತರಾಗುವುದಾದರೆ ತಪ್ಪೇನು? ಈ ರೀತಿಯಲ್ಲಿ ಈ " ದೈವ ಭಯವು"  ನಮಗೇ ಒಳ್ಳೆಯದನ್ನೇ ಮಾಡಿದೆ ಅಲ್ಲವೇ? ಈ ದೈವ ಭಯವು ಸಾಮಾಜಿಕ ವ್ಯವಸ್ತೆಯನ್ನು ಸುಸ್ಥಿತಿಯಲ್ಲಿಡಲು ಸಹಾಯ ಮಾಡಿದೆಯಂದರೆ ತಪ್ಪಾಗಲಾರದು. ಹೀಗೆ ನಮ್ಮ ಹತೋಟಿಯಲ್ಲಿರದ ನಮ್ಮ ಕೆಲಸ ಕಾರ್ಯಗಳು ಮತ್ತು ಅದರಿಂದ ಬರುವ ಫಲಾಫಲಗಳು ಏನಾಗುವುದೋ ಅಥವಾ ಹೇಗಾಗುವುದೋ ಎಂಬ ಭಯವಿರುವ ಎಲ್ಲರೂ "ಮಂಗನ ಮರಿ ಬೀಳುವ ಭಯದಿಂದ ತನ್ನ ತಾಯಿಗೆ ಹೇಗೆ ಅಂಟಿಕೊಳ್ಳುವುದೋ"  ಹಾಗೆ ಈ ದೈವದ ಮೊರೆ ಹೋಗುತ್ತಾರೆ. 

ಆದರೆ ಈ ಭಯವು ನಮ್ಮ ಆಧ್ಯಾತ್ಮಿಕ ಉನ್ನತಿಗೆ ಮಾರಕವಾಗಿರುತ್ತದೆ. ಈ ಭಯವು ಸುಖ-ದು:ಖಗಳನ್ನು ಸಮಭಾವದಿಂದ ತೆಗೆದುಕೊಳ್ಳಲು ಬಿಡುವುದಿಲ್ಲ. ಆಧ್ಯಾತ್ಮಿಕ ಉನ್ನತಿಗೆ ಭಯಕ್ಕಿಂತ ಭಕ್ತಿಯೇ ಮುಖ್ಯ. ಭಯವು ಭಕ್ತಿಯಾಗಿ ಮಾರ್ಪಾಡಾಗುವುದೇ ಆಧ್ಯಾತ್ಮಿಕ  ಪಯಣದ ಮೂಲ ಉಧ್ಧೇಶ. ಆದರೆ ಇದು ಒಂದು  ನಿಧಾನ ಪ್ರಕ್ರಿಯೆ. ಮುಕ್ತಿ ಸಿಗುವವರೆಗೆ ಜನ್ಮ ಜನ್ಮಾಂತರದಲ್ಲಿ ಸಂಸ್ಕಾರವಾಗಿ ಹಂತ ಹಂತವಾಗಿ ಮೇಲೇರುವುದೇ ಆಧ್ಯಾತ್ಮಿಕ ಪಯಣದ ರೀತಿ.   


ಇಲ್ಲಿ ಒಂದು ಉದಾಹರಣೆ ಅಗತ್ಯ. ದೇಹ ಸಂಬಂಧವನ್ನು ಹೊಂದಿದ ಎಲ್ಲಾ ಜೀವಾತ್ಮಗಳೂ ತನ್ನ ಮೂಲವಾದ ಪರಮಾತ್ಮನನ್ನು ಸೇರುವುದೇ ಆಧ್ಯಾತ್ಮಿಕ  ಪಯಣದ ಉಧ್ಧೇಶ . ಸೂರ್ಯನ ಶಾಖದಿಂದ ಕಡಲ ನೀರು ಆವಿಯಾಗಿ ಆಕಾಶ ಸೇರಿ ಮೋಡವಾಗಿ, ಸತ್ವದ( ಮೋಡದ ಸತ್ವವೆಂದರೆ ನೀರು ಎಂಬ ಅರ್ಥದಲ್ಲಿ) ಭಾರವನ್ನು ಹೆಚ್ಚಿಸಿಕೊಂಡು ಮಳೆಯಾಗಿ ಧರೆಗಿಳಿದು, ನದಿಯಾಗಿ ಹರಿದು ಮತ್ತೆ ಕಡಲನ್ನೇ ಸೇರುವ ಆಸೆಯಿಂದ  ಕಡಲ ಮುಖಮಾಡಿ ಹರಿದು ಕಡಲನ್ನೇ ಸೇರುವ ಆ ನೀರ ಹನಿಯಂತೆ, ಪ್ರತಿಯೊಂದು ಜೀವಾತ್ಮನೂ ತನ್ನ ಮೂಲವಾದ ಪರಮಾತ್ಮನನ್ನು ಸೇರಲು ಮಾಡುವ ಪ್ರಯತ್ನವೇ ಆಧ್ಯಾತ್ಮಿಕ  ಪ್ರಯಾಣದ ಗುರಿ. 

ಮೇಲೆ ಹೇಳಿದಂತೆ ಎಲ್ಲಾ ಜೀವಾತ್ಮನೂ ಪರಮಾತ್ಮವನ್ನು ಸೇರುವ ಪಯಣದ ಯಾವುದಾದರೂ ಒಂದು ಹಂತದಲ್ಲಿ  ಇದ್ದೇ ಇರುತ್ತಾನಾದುದರಿಂದ , ಯಾರನ್ನೂ ಹೀಗೆಳೆಯಲಾಗುವುದಿಲ್ಲ. ಸಾಧ್ಯವಾದರೆ ಮೇಲಿರುವವರು ಕೆಳಗಿರುವವರನ್ನು ಮೇಲೆತ್ತಲು ಪ್ರಯತ್ನ ಪಡಬೇಕು.(ಪೈಮರಿ ಶಾಲೆಯ ಹಂತ ದಿಂದಲೇ ಸ್ನಾತಕೋತ್ತರ ಪದವಿಯವರೆಗೆ ಬಂದವನು, ಪ್ರೈಮರಿ ಶಾಲೆಯ ಮಗುವನ್ನು ಕಂಡು ಹೀಗೆಳೆದರೆ ಅದು ಮೂರ್ಖತನವಲ್ಲದೆ ಮತ್ತೇನು ? ಆಧ್ಯಾತ್ಮಿಕವಾಗಿ ಎಲ್ಲರೂ ಬೆಳೆಯಬೇಕು ಎಂದು ಎಲ್ಲರೂ ಅದಕ್ಕೆ ಅವಶ್ಯವಾದ ಪ್ರಯತ್ನದ ಪ್ರಯಾಣವನ್ನು ಮಾಡಿ ಆದ್ಯಾತ್ಮಿಕ ಔನ್ನತ್ತ್ಯವನ್ನು ಪಡೆಯಬೇಕು. 

ಸರ್ವೇ  ಜನಾ: ಸುಜನಾ  ಭವಂತು 

ಸರ್ವೇ ಸುಜನಾಃ  ಸುಖಿನ: ಸಂತು 

ರವಿ ತಿರುಮಲೈ 
14 .5.2011
96322 46255