Pages

Thursday, March 8, 2012

ಮಾನಸಿಕಬಲ ನೀಡು ಪ್ರಭುವೆ

     ಇತ್ತೀಚೆಗೆ ಬೆಂಗಳೂರಿಗೆ ಹೋಗಿದ್ದಾಗ ಪಂ. ಸುಧಾಕರ ಚತುರ್ವೇದಿಯವರ ಸತ್ಸಂಗದಲ್ಲಿ ಪಾಲುಗೊಂಡು ಅಲ್ಲಿ ನಡೆದ ಅಗ್ನಿಹೋತ್ರ, ಭಜನೆಗಳು, ಪಂಡಿತಜಿಯವರ ವಿಚಾರಧಾರೆಗಳನ್ನು ಕಣ್ಮನಗಳಲ್ಲಿ ತುಂಬಿಕೊಂಡ ಸೌಭಾಗ್ಯ ನನ್ನದಾಯಿತು. ಆ ಸಂದರ್ಭದಲ್ಲಿ ನಡೆದ ಎಲ್ಲಾ ಕಾರ್ಯಕ್ರಮದ ವಿಡಿಯೋ ಚಿತ್ರಣ ಮಾಡಿಕೊಂಡಿದ್ದೇನೆ. ಅಗ್ನಿಹೋತ್ರ ನಡೆದ ನಂತರದಲ್ಲಿ ಹೇಳಿದ ಭಜನೆಯ ವಿಡಿಯೋ ಚಿತ್ರಣವನ್ನು ನಿಮಗಾಗಿ ಇಲ್ಲಿ ಪ್ರಸ್ತುತ ಪಡಿಸಿರುವೆ. ಅಗ್ನಿಹೋತ್ರ, ಯಜ್ಞಗಳ ಹಿರಿಮೆ ಸಾರುವ ಈ ಭಜನೆ ಮನನೀಯವಾಗಿದೆ, ಅರ್ಥಪೂರ್ಣವಾಗಿದೆ.


     ಪದಶಃ ಅಲ್ಲದಿದ್ದರೂ ಮೂಲ ಭಾವಾರ್ಥ ಮೂಡಿಸುವ ಭಜನೆಯ ಕನ್ನಡ ಅನುವಾದ ಮಾಡಿದ್ದೇನೆ. ಆಸಕ್ತರು ಇದನ್ನು ಹಾಡಿ ಧ್ವನಿಮುದ್ರಿಸಿ ಪ್ರಕಟಿಸಲು ವಿನಂತಿಸುವೆ. ಅಂದು ಹೇಳಲಾದ ಇನ್ನೊಂದು ಭಜನೆ 'ತಲೆ ಮಾತ್ರ ಬಾಗದಿರಲಿ'ಗೆ ಲಿಂಕ್: http://kavimana.blogspot.in/2012/03/blog-post_08.html
-.ಕವೆಂ.ನಾಗರಾಜ್.

ಮಾನಸಿಕಬಲ ನೀಡು ಪ್ರಭುವೆ

ಪೂಜನೀಯ ಪ್ರಭುವೆ ನಮ್ಮಯ ಭಾವ ಉಜ್ವಲ ಮಾಡಿರಿ |
ದೂರಗೊಳಿಸಿ ಛಲ ಕಪಟಗಳ ಮಾನಸಿಕ ಬಲ ನೀಡಿರಿ || ೧ ||


ವೇದ ತೋರಿದ ಮಾರ್ಗ ತಿಳಿಸಿ ಸತ್ಯ ಧಾರಣೆ ಮಾಡಿಸಿ |
ಹರ್ಷದಿರಲಿ ಸಕಲರೆಲ್ಲರು ಶೋಕಸಾಗರ ದಾಟಲಿ || ೨ ||


ವಾಸನಾತೀತರಾಗುವ ಯಜ್ಞಕಾರ್ಯವ ಮಾಡುವಾ |
ಧರ್ಮಪಥದಲಿ ಸಾಗಿ ನಾವು ಲೋಕ ಹಿತವನೆ ಸಾರುವಾ || ೩ ||


ನಿತ್ಯ ಶ್ರದ್ಧಾ ಭಕ್ತಿಯಲಿ ಯಜ್ಞಾದಿಗಳ ನಾವ್ ಮಾಡುವಾ |
ರೋಗ ಪೀಡಿತ ಲೋಕದಿರುವ ಸಕಲ ಸಂಕಟ ಕಳೆಯವಾ || ೪ ||


ಪಾಪ ಅತ್ಯಾಚಾರ ಭಾವ ಮನದ ಮೂಲದೆ ಅಳಿಯಲಿ |

ಯಜ್ಞದಿಂದಲಿ ನರರು ಸಕಲರ ಆಸೆಗಳು ಈಡೇರಲಿ || ೫ ||


ಸಕಲಜೀವಿಗೆ ಶುಭವ ತರಲಿ ಹವನ ಸುಖಕರವೆನಿಸಲಿ |
ವಾಯುಜಲ ಶುಭಗಂಧ ಕೂಡಿ ಲೋಕದೆಲ್ಲೆಡೆ ಹರಡಲಿ || ೬ ||


ಸ್ವಾರ್ಥಭಾವವು ಅಳಿದು ಹೋಗಿ ಪ್ರೇಮಪಥದಲಿ ಸಾಗುವಾ |
ನನಗಲ್ಲವಿದು ಎಂಬ ಭಾವದಿ ಸಾರ್ಥಕತೆ ನಾವ್ ಕಾಣುವಾ || ೭ ||


ಪ್ರೇಮರಸದಲಿ ತೃಪ್ತರಾಗಿ ನಾವು ವಂದನೆ ಸಲಿಪೆವು |
ಕರುಣಾನಿಧಿಯೇ ನಿಮ್ಮ ಕರುಣೆ ಸಿಗಲು ಎಲ್ಲರು ಧನ್ಯರು || ೮ ||

ಉದ್ದನೆಯ ಗಡ್ಡದ ತೇಜಸ್ವೀ ವ್ಯಕ್ತಿ

                 ಬಲು ಎತ್ತರದ ನೀಳಶರೀರದ ಉದ್ದನೆಯ ಗಡ್ಡದ ,ಫಳ  ಫಳ  ಹೊಳೆಯುವ ಕಣ್ಣಿನ ತೇಜಸ್ವೀ ವ್ಯಕ್ತಿಯೊಬ್ಬರು ನಿಂತಿದ್ದಾರೆ. ಮಾಸಿದ  ಕಾವಿ ಬಟ್ಟೆ  ಧರಿಸಿದ್ದರೂ  ಅವರ ತೇಜಸ್ಸಿನಿಂದ ಆಕರ್ಶಿತನಾಗುತ್ತೇನೆ. ಅಭಯ ಹಸ್ತ ತೋರಿಸುತ್ತಾ  ನಿಂತಿದ್ದಾರೆ. 


-ಯಾರು ಸ್ವಾಮಿ ನೀವು?


-ಅಯ್ಯೋ ದಡ್ಡ ಗೊತ್ತಾಗಲಿಲ್ಲವೇ?     


-ದಡ್ಡ ನೆಂಬ  ಅರಿವಿದೆ. ನನ್ನ ಮಕ್ಕಳು, ನನ್ನ ಬಂಧುಗಳೆಲ್ಲಾ  ಹೇಳುತ್ತಿರುತ್ತಾರೆ.


-ಅವರು ಹೇಳಲಿ ಬಿಡು. ನಾನು ನಿನಗೆ ಮಾತ್ರ  ದರ್ಶನ ಕೊಟ್ಟೆನೆಂದ ಮೇಲೆ  ನೀನು  ದಡ್ಡ ನೋ    ಬುದ್ಧಿವಂತನೂ, ಏನಾದರಾಗಲಿ, ನೀನು ಪುಣ್ಯವಂತ ನೆನಸಿಲ್ಲವೇ? 


-ಹೌದು ಸ್ವಾಮಿ, ನಾನು  ಪುಣ್ಯ ವಂತನೇ  ಹೌದು. ಜೀವನದಲ್ಲಿ ಕಾಣಬೇಕಾಗಿದ್ದ ಹಲವು ಕಷ್ಟಗಳನ್ನು  ಕಂಡು ಅನುಭವಿಸಿ , ಸುಖವನ್ನೂ ಕಂಡು ಅನುಭವಿಸಿ  ಈಗ  ನಿಮ್ಮಂತವರ  ಸಹವಾಸ ಸಿಗುತ್ತಿದೆ, ಇದಕ್ಕಿಂತ ಇನ್ನೇನು ಬೇಕು? ನಾನು  ಪುಣ್ಯ ವಂತನೇ  ಹೌದು.


- ಹೌದು, ಅದೇನು ಹೀಗೆ ಈ ಹೊತ್ತಿನಲ್ಲಿ ಬಂದಿರಿ?


-ನಿನ್ನ ತೊಳಲಾಟ ನೋಡಲಾರದೆ ಬಂದೆ. ಅದೇನೋ " ಗೊಂದಲ ಗೊಂದಲ " ಎಂದು ಹಲಬುತ್ತಿದ್ದೆಯಲ್ಲಾ!  ಆ ಬಗ್ಗೆ  ನಿನಗೆ ಸತ್ಯ ತಿಳಿಸಲು ಬಂದೆ.


-ಸತ್ಯವನ್ನು ತಿಳಿಸುವಿರಾ? ಯಾರು ಸ್ವಾಮಿ ನೀವು?-ನಿನಗೆ ನಾನ್ಯಾರೆಂಬುದು ಮುಖ್ಯವೋ? ಅಥವಾ ಸತ್ಯ ದ ವಿಚಾರ ಮುಖ್ಯವೋ?


-ಸತ್ಯ ತಿಳಿಯಬೇಕೆಂಬ ಇಚ್ಛೆ,  ನೀವ್ಯಾರು ತಿಳಿಯಬೇಕೆಂಬ ಕುತೂಹಲ!


-ನೋಡು ನಿನ್ನ ಮನಸ್ಸಿನಲ್ಲಿ  ಎದ್ದಿರುವ  ವಿಚಾರಗಳೆಲ್ಲಾ ಸರಿಯಾಗಿಯೇ ಇದೆ.  ಸತ್ಯ ಎಂಬುದು ಒಂದೆ. ಅದೇ ವೇದ. ವೇದದಲ್ಲಿ  ಹೇಳಿರುವುದೇ ಸತ್ಯ!


-ವೇದದಲ್ಲಿ  ಸಮಾನತೆ ಇದೆ ಎಂದು  ಸುಧಾಕರ ಶರ್ಮರು ವೇದ  ಮಂತ್ರವನ್ನು ಉಧಾಹರಿಸಿ  ಹೇಳುತ್ತಾರೆ. ಆದರೆ  ಆಚರಣೆಯಲ್ಲಿ  ಪ್ರತಿಶತ 99   ಪುರೋಹಿತರು ಹೇಳುವ ಮಾತು ಇದಕ್ಕೆ ಹೊರತಾಗಿಯೇ ಇದೆಯಲ್ಲಾ!  ನಾವು ಮಾಡುತ್ತಿರುವ ಆಚರಣೆಗಳಲ್ಲಿ ಪ್ರತಿಶತ 90 ಕ್ಕಿಂತ ಹೆಚ್ಚು  ವೇದ ಭಾಹಿರವೇ ಎಂದು ಶರ್ಮರು ಹೇಳುತ್ತಾರಲ್ಲಾ!


-ನೋಡು ವೇದವಿರುವುದು  ಸಮಸ್ತ  ಮನುಕುಲದ ಉದ್ಧಾರಕ್ಕಾಗಿ , ಒಂದು ಸುಂದರ ಸಮಾಜಕ್ಕಾಗಿ! ನಿನ್ನ ಅಂತರಂಗದಲ್ಲಿ ಎದ್ದಿರುವ ಪ್ರಶ್ನೆಗಳು ಸರಿಯಾಗಿಯೇ ಇವೆ. ನಿನ್ನ ಅರಿವೇ ನಿನಗೆ ಗುರು ಎಂಬ ಮಾತನ್ನು ನೀನು ಕೇಳಿದ್ದೀಯಾ ತಾನೇ? ಹಾಗಿದ್ದಮೇಲೆ  ನಿನಗೆ ಸತ್ಯವೆಂದು ಕಂಡಿದ್ದನ್ನು  ಆಚರಿಸು, ಅಸತ್ಯವೆಂದು  ಅರಿವಾದದ್ದನ್ನು  ನಿನ್ನ ಅಂತ:ಸ್ಸಾಕ್ಷಿ ಗೆ ವಿರುದ್ಧ ವಾಗಿ  ಅನುಸರಿಸಬೇಡ.


- ನಾನು ಅನುಸರಿಸದಿದ್ದರೆ  ನನ್ನ ಪತ್ನಿ ಪುತ್ರರು  ಬೇಸರ ವ್ಯಕ್ತ ಪಡಿಸುತ್ತಾರಲ್ಲಾ! 


- ಮತ್ತೊಮ್ಮೆ ನಿನ್ನನ್ನು ದಡ್ಡ ನೆಂದೇ ಕರೆಯಬೇಕಾಗಿದೆಯಲ್ಲಾ!


-ಯಾರ್ಯಾರೋ   ಹಾಗೆ  ಕರೆಯುತ್ತಿರುವಾಗ  ನಿಮ್ಮಂತ ಮಹಾನುಭಾವರೆದುರು   ದಡ್ಡ ನೆಂದು ಕರೆಸಿಕೊಳ್ಳಲು ನನಗೆ ಬೇಸರವೆನಿಲ್ಲ.


---------------- ಅರೇ, ಎಲ್ಲಿ ಹೋದಿರಿ ಸ್ವಾಮೀ, ಕಾಣುತ್ತಲೇ ಇಲ್ಲವಲ್ಲಾ? 


" ಯಾಕ್ರೀ ಹೀಗೆ  ಕೂಗುತ್ತಿದ್ದೀರಿ? .....ಪತ್ನಿ  ನನ್ನನ್ನು  ಅಲ್ಲಾಡಿಸಿದಾಗ ಎಚ್ಚೆತ್ತು  ಕಣ್ ಬಿಡುತ್ತೇನೆ, ಪಕ್ಕದಲ್ಲಿ ಪತ್ನಿಯನ್ನು ಬಿಟ್ಟು ಬೇರೆ ಯಾರೂ ಇಲ್ಲ. ಹಾಗಾದರೆ ನಾನು ಕಂಡಿದ್ದು!................... ಎತ್ತರದ ನೀಳಶರೀರದ ಉದ್ದನೆಯ ಗಡ್ಡದ ,ಫಳ  ಫಳ  ಹೊಳೆಯುವ ಕಣ್ಣಿನ,ಮಾಸಿದ  ಕಾವಿ ಬಟ್ಟೆ  ಧರಿಸಿದ್ದ    ತೇಜಸ್ವೀ ವ್ಯಕ್ತಿ ????