Pages

Monday, February 20, 2012

ಶೂದ್ರ ಪದ ಎಷ್ಟು ಶ್ರೇಷ್ಠ , ಎಂಬುದು ನಿಮಗೆ ಗೊತ್ತೇ?



ನಮ್ಮ ದೇಶದಲ್ಲಿ ಸಧ್ಯದ ಪರಿಸ್ಥಿತಿಯಲ್ಲಿ ತುಂಬಾ ಚರ್ಚೆಗೆ ಬರುವಂತಹ ಹಾಗೂ ದೇಶದ ಸಾಮರಸ್ಯವನ್ನು ಕಾಡುತ್ತಿರುವಂತಹ  ಸಮಸ್ಯೆ ಎಂದರೆ  ಜಾತಿ ಸಂಘರ್ಷ. ಗಾಂಧೀಜಿ ಮೊದಲ್ಗೊಂಡು ಎಷ್ಟೇ ಜನ ಮಹಾ ಪುರುಷರು ಜಾತಿ ವಿರುದ್ಧ ಹೋರಾಡಿದರೂ ಸಹ ಇಂದೂ ಪರಿಹಾರ ಕಾಣದಿರುವ ಸಮಸ್ಯೆ “ಜಾತಿ” 

ಲೇಖನದ ಆರಂಭದಲ್ಲೇ ಒಂದು ಮಾತು ಸ್ಪಷ್ಟಪಡಿಸಿ  ಸಮಸ್ಯೆಯ ಬಗ್ಗೆ ಚರ್ಚಿಸೋಣ.  ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು ಆರು ದಶಕಗಳು ಕಳೆದಿದ್ದರೂ ಸಹ  ಈ ಸಮಸ್ಯೆ ದಿನೇ ದಿನೇ ಹೆಚ್ಚುತ್ತಿದೆಯೇ ಹೊರತೂ ಕಡಿಮೆಯಾಗುತ್ತಿಲ್ಲ. ಇಂದಿನ ರಾಜಕಾರಣಿಗಳಿಗೆ ಅದು ಒಂದು ವರದಾನ ಕೂಡ. ಜಾತಿ ಸಮಸ್ಯೆಯಲ್ಲಿ ಅತೀ ಪ್ರಮುಖವಾದುದು ಹಾಗೂ ದೇಶದ ಶಾಂತಿಯನ್ನು ಹಾಳುಗೆಡವಿರುವ ಅಂಶವೆಂದರೆ  “ಅಸ್ಪೃಷ್ಯತಾ ಆಚರಣೆ”
ಇದು ಹೇಗೆ ಬಂತೋ ಏಕೆ ಬಂತೋ,  ಬಂದು ನಮ್ಮ ಸಮಾಜದ ನೆಮ್ಮದಿಯನ್ನು ಬಲಿತೆಗೆದುಕೊಂಡಿದ್ದಂತೂ ಸುಳ್ಳಲ್ಲ. ಈಗ್ಗೆ ಒಂದೆರಡು ದಶಕಗಳಿಂದ  “ಅಸ್ಪೃಷ್ಯತಾ ಆಚರಣೆ” ಕಡಿಮೆಯಾಗಿದೆಯಾದರೂ ಪೂರ್ಣ ಪ್ರಮಾಣದಲ್ಲಿ ನಿಂತಿಲ್ಲವೆಂಬುದು ಸತ್ಯ ಸಂಗತಿ. ಆದರೆ ಎರಡು ಮೂರು ದಶಕಗಳ ಪೂರ್ವದಲ್ಲಿದ್ದಷ್ಟು ಕೆಟ್ಟ  ಆಚರಣೆ ಈಗ ಇಲ್ಲ ಎಂಬುದೂ ಅಷ್ಟೇ ಸತ್ಯ. ಇನ್ನೊಂದೆರಡು ದಶಕಗಳಲ್ಲಿ “ಅಸ್ಪೃಷ್ಯತಾ ಆಚರಣೆ”  “ಜಾತಿ ಸಂಘರ್ಷ” ಪದಗಳು ಅರ್ಥವನ್ನು ಕಳೆದುಕೊಳ್ಳುವುದರಲ್ಲಿ ಸಂಶಯವಿಲ್ಲ.  ಈ ಲೇಖನದ ಉದ್ಧೇಶವೆಂದರೆ  ಈ ಸಮಸ್ಯೆಗಳಲ್ಲ. ಆದರೆ  ಇದೇ ಸಮಸ್ಯೆಗೆ ಅಂಟಿಕೊಂಡಿರುವ “ ಶೂದ್ರ” ಎಂಬ ಪದದ ಬಗ್ಗೆ  ಒಂದಿಷ್ಟು ಚಿಂತನ-ಮಂಥನ. ವೇದದ ಕಿಂಚಿತ್ ಪರಿಚಯವಿದ್ದು ,ಪರಿಚಯ ವಿರುವ ಮಂತ್ರಗಳ ಸರಿಯಾದ ಅರ್ಥ ತಿಳಿದುಕೊಳ್ಳುವ ಆಸಕ್ತಿ ಇದ್ದವರಿಗೆ “ ಶೂದ್ರ” ಎಂಬ ಪದಕ್ಕೂ “ಬ್ರಾಹ್ಮಣ”  ಎಂಬ ಪದಕ್ಕೂ ಯಾವ ವೆತ್ಯಾಸ ಕಾಣುವುದಿಲ್ಲ, ಬದಲಿಗೆ  “ ಶೂದ್ರ” ಪದಕ್ಕೆ ವೇದಗಳು ನೀಡಿರುವ ಅರ್ಥ ವಿವರಣೆಯು ನಮಗೆ ಅಚ್ಚರಿಯುಂಟು ಮಾಡುತ್ತದೆ.
ಮೊದಲು ವೇದ ಎಂಬ ಪದದ ಸಾಮಾನ್ಯ ಅರ್ಥವನ್ನು ತಿಳಿದುಕೊಂಡರೆ ಮುಂದಿನದೆಲ್ಲವೂ  ಸುಲಭವಾಗುತ್ತದೆ. ಹಾಗಾದರೆ ವೇದ ಎಂದರೇನು?
ವೇದ ಎಂದರೆ  ಜ್ಞಾನ ಅಥವಾ  ಅರಿವು.ಅದೂ ಎಂತಹ  ಜ್ಞಾನ? ಸುಖವಾದ,ನೆಮ್ಮದಿಯಾದ, ಆನಂದಭರಿತ ಜೀವನ ನಡೆಸುವ ಜ್ಞಾನ. ಇಂತಹ ಜ್ಞಾನ ಯಾರಿಗೆ ಬೇಡ ? ಎಲ್ಲರಿಗೂ ಬೇಕಲ್ಲವೇ? ಆದರೆ ಅದು ಒಂದು ವರ್ಗಕ್ಕೆ ಸೀಮಿತವಾಗಿದ್ದೂ ಸುಳ್ಳಲ್ಲ. ಆಗಿರುವ ಲೋಪಕ್ಕೆ ಕಾರಣ ಹುಡುಕುವುದರಲ್ಲಿ ಕಾಲಹರಣ ಮಾಡಿದರೆ ಪ್ರಯೋಜನ ವಿಲ್ಲ. ಆದರೆ ಇಂತಹ ಅಮೂಲ್ಯ ಜ್ಞಾನವನ್ನು ಅರಿತವರು  ಅರಿಯದವರಿಗೆ ಹಂಚಬೇಕಾದುದು ಅವರ ಧರ್ಮ.
ಭೂಮಿಯಲ್ಲಿ ಅಡಗಿಸಿಟ್ಟಿದ್ದ ನಿಧಿಯೊಂದು ಒಂದು ಕಟ್ಟಡ ಕಟ್ಟಲು ತಳಹದಿ ತೋಡುವಾಗ ಸಿಕ್ಕಿತೆಂದುಕೊಳ್ಳೋಣ. ಆಗ ಕಟ್ಟಡದ ಮಾಲಿಕ  ಏನು ಮಾಡಬೇಕು? ಯಾವ ಪಾಪಿ ಇಂತಹಾ ನಿಧಿಯನ್ನು ಇಲ್ಲಿ ಹೂತಿಟ್ಟಿದ್ದಾನಲ್ಲಾ! ಅವನ ಮೂಲವನ್ನು ಹುಡುಕಿ ಅವನ ತಲೆಮಾರಿನವರನ್ನಾದರೂ ಜೈಲಿಗೆ ಅಟ್ಟಬೇಕು! ಎಂದು ಯೋಚಿಸಬೇಕೇ? ಅಥವಾ  ಹೇಗೂ ನಿಧಿ ಸಿಕ್ಕಿದೆ,  ಇದನ್ನು ಉಪಯೋಗಿಸಿಕೊಂಡು ನನ್ನ ಜೊತೆಗೆ ಸಮಾಜಕ್ಕೂ ಸ್ವಲ್ಪ ಅನುಕೂಲವಾಗುವಂತೆ ಕಟ್ಟದ ಕಟ್ಟೋಣ , ಎಂದು ಚಿಂತಿಸಬೇಕೇ?
ಯಾವ ಕಾಲದಲ್ಲಿ ಯಾರು ಹೂತಿಟ್ಟಿದ್ದರೋ, ಯಾರಿಗೆ ಗೊತ್ತು? ಅವರು ನಮ್ಮ ಮೂಲದವರೇ ಆಗಿರಬಹುದು, ಅಥವಾ ಬೇರೆ ಯಾರೇ ಆಗಿರಬಹುದು. ಅಂತೂ ಕೊನೆಗೂ ನಿಧಿ ಸಿಕ್ಕಿದೆ! ಅದರ ಪ್ರಯೋಜನ ಆಗಬೇಕು, ತಾನೇ?
ವೇದದ ವಿಚಾರದಲ್ಲೂ ಇದೇ ಸಮಸ್ಯೆ ಎದುರಾಗಿದೆ. ಯಾವುದೋ ಕಾಲದಲ್ಲಿ ಯಾವ ಕಾರಣಕ್ಕಾಗಿ ವೇದಾಧ್ಯಯನ ಕೆಲವರಿಗೆ ಸೀಮಿತ ವಾಯ್ತೋ, ಸತ್ಯವನ್ನು ಹೇಳುವವರಾರು?
ನಮ್ಮ ಇತಿಹಾಸವನ್ನು ತಿರುಚಿರುವವರೇ ಹೆಚ್ಚು. ಅದೇನೇ ಇರಲಿ, ಸಧ್ಯದ ಪರಿಸ್ಥಿತಿಯಲ್ಲಿ ಯಾರೋ ಯಾವುದೋ ಕಾಲದಲ್ಲಿ ಮಾಡಿದ ತಪ್ಪಿಗಾಗಿ  ಇಂದಿನ  ಹಲವರು ಅದರ ದುಶ್ಪರಿಣಾಮವನ್ನು ಎದುರಿಸ ಬೇಕಾಗಿದೆ. ಕಾಲಕ್ಕೆ ಶರಣಾಗಲೇ ಬೇಕು. ಸತ್ಯವು  ಜಗಜ್ಜಾಹಿರವಾಗುವ ವರೆಗೂ ಅಸತ್ಯವು  ಜಗತ್ತನ್ನು ಆಳುತ್ತದೆ. ಆದರೆ ಅಸತ್ಯ ,ಅಧರ್ಮಗಳ ಹೊಡೆತಕ್ಕೆ ಸಿಕ್ಕಿಕೊಂಡು ಇಡೀ ಮನುಕುಲವು ಅದರ ದುಶ್ಪರಿಣಾಮವನ್ನು ಎದುರಿಸಬೇಕಾಗುತ್ತದೆ.
ಈಗ ವಿಷಯಕ್ಕೆ ಬರೋಣ.
ವೇದದಲ್ಲಿ ಚಾತುರ್ವರ್ಣ ವಿವರಣೆಯನ್ನು ನೀಡುವಾಗ “ಶೂದ್ರ” ವರ್ಣದ ಬಗ್ಗೆ ಏನು ಹೇಳುತ್ತದೆ?
ಋಗ್ವೇದದ ಈ ಮಂತ್ರವನ್ನು  ನೋಡಿ…..

ತೃದಿಲಾ ಅತೃದಿಲಾಸೋ ಅದ್ರಯೋಶ್ರಮಣಾ ಅಶೃಥಿತಾ ಅಮೃತ್ಯವಃ |
ಅನಾತುರಾ ಅಜರಾಃ ಸ್ಥಾಮವಿಷ್ಣವಃ ಸುಪೀವಸೋ ಅತೃಷಿತಾ ಅತೃಷ್ಣಜಃ || (ಋಕ್.೧೦.೯೪.೧೧.)

     [ತೃದಿಲಾಃ] ಮೋಹಬಂಧರಹಿತರೂ [ಅತೃದಿಲಾಸಃ] ಆದರೂ ಜಗತ್ತಿನಿಂದ ದೂರ ಸರಿಯದವರೂ, [ಆದ್ರಯಃ] ಆದರಣೀಯರೂ, [ಆಶ್ರಮಣಾಃ] ಶ್ರಮಕ್ಕೆ ಹಿಂಜರಿಯದವರೂ [ಅಶೃಥಿತಾಃ] ಸಡಿಲವಾಗದವರೂ, [ಅಮೃತ್ಯವಃ] ಸಾವಿಗೆ ಮಣಿಯದವರೂ [ಅನಾತುರಾಃ] ರೋಗರಹಿತರೂ [ಅಜರಾಃ] ಮುಪ್ಪಿಗೆ ಸೋಲದವರೂ, [ಅಮವಿಷ್ಣವಃ] ರಕ್ಷಣೆಯನ್ನು ಅಪೇಕ್ಷಿಸುವವರೂ, [ಸುಪೀವಸಃ] ಧೃಢಕಾಯರೂ, [ಅತೃಷಿತಾಃ] ಲೋಭರಹಿತರೂ, [ಅತೃಷ್ಣಜಃ] ತಮ್ಮ ನಿರ್ಲೋಭಿತ್ವಕ್ಕೆ ಪ್ರಸಿದ್ಧರೂ ಆದವರು, [ಸ್ಥಃ] ಪರಿಶ್ರಮಿಗಳೂ - ಶೂದ್ರರೂ ಆಗಿರುತ್ತಾರೆ.

    [ ಮೋಹಬಂಧರಹಿತರೂ ಆದರೂ ಜಗತ್ತಿನಿಂದ ದೂರ ಸರಿಯದವರೂ, ಆದರಣೀಯರೂ, ಶ್ರಮಕ್ಕೆ ಹಿಂಜರಿಯದವರೂ  ಸಡಿಲವಾಗದವರೂ, ಸಾವಿಗೆ ಮಣಿಯದವರೂ ರೋಗರಹಿತರೂ ಮುಪ್ಪಿಗೆ ಸೋಲದವರೂ, ರಕ್ಷಣೆಯನ್ನು ಅಪೇಕ್ಷಿಸುವವರೂ, ಧೃಢಕಾಯರೂ, ಲೋಭರಹಿತರೂ,ತಮ್ಮ ನಿರ್ಲೋಭಿತ್ವಕ್ಕೆ ಪ್ರಸಿದ್ಧರೂ ಆದವರು, ಪರಿಶ್ರಮಿಗಳೂ - ಶೂದ್ರರೂ ಆಗಿರುತ್ತಾರೆ]

ಶೂದ್ರ ವರ್ಣದ ವಿವರಣೆ ಹೇಗಿದೆ ನೋಡಿ. ಶೂದ್ರ ಗುಣ ಸ್ವಭಾವಗಳನ್ನುಗಮನಿಸಿದರೆ  ಯಾರಿಗಾದರೂ ತಾನು  ಶೂದ್ರನಾದರೆ ಚೆನ್ನ ಅನ್ನಿಸಲಾರದೇ? ಗುಣ ಸ್ವಭಾವಗಳನ್ನು ವಿಶ್ಲೇಶಿಸೋಣ.

ಮೋಹಬಂಧರಹಿತ:
ಅರಿಷಡ್ವರ್ಗ ಗಳಲ್ಲೊಂದಾದ  “ ಮೋಹ” ಎಂಬ  ಬಂಧನ ಶೂದ್ರನಿಗೆ ಇರುವುದಿಲ್ಲ. ಆದರೂ ಜಗತ್ತಿನಿಂದ ದೂರ ಸರಿಯದವರೂ, ಆದರಣೀಯರೂ, ಆಗಿರುತ್ತಾರೆ. ಜಗತ್ತಿನ  ಸಂಬಂಧದಿಂದ  ದೂರ ಸರಿಯದೆ ಮೋಹ ಬಂಧರಹಿತರಾಗಿರುವ ಸ್ಥಿತಿ ಸಾಮಾನ್ಯ ಸ್ಥಿತಿಯಲ್ಲ. ಆದ್ದರಿಂದ ಸಮಾಜದಲ್ಲಿ ಆದರಣೀಯರಾಗಿರುತ್ತಾರೆ.
ಲೋಭರಹಿತರು:
ಅರಿಷಡ್ವರ್ಗ ಗಳಲ್ಲೊಂದಾದ  ಲೋಭವನ್ನು ಹೊಂದಿರುವುದಿಲ್ಲ.
ಧೃಢಕಾಯನು, ರೋಗರಹಿತನು:
 ಶೂದ್ರನು ಧೃಢಕಾಯನಾಗಿ ರೋಗರಹಿತನಾಗಿರುತ್ತಾನೆ. ಸದಾ ಶ್ರಮಜೀವಿಯಾಗಿರುವ ಇವನು ಧೃಢಕಾಯನಾಗಿಯೂ ರೋಗರಹಿತನಾಗಿಯೂ ಇರುವುದರಲ್ಲಿ ಯಾವ ಸಂದೇಹವೂ ಇಲ್ಲ. ಮನುಷ್ಯನಿಗೆ  ಬೇಕಾದ್ದಾದರೂ ಏನು? ಮಾನಸಿಕ ನೆಮ್ಮದಿ ಹಾಗೂ ಆರೋಗ್ಯ ತಾನೇ?  ಅದು ಶೂದ್ರನ ಸ್ವತ್ತು. ಇನ್ನೇನು ಬೇಕು?
ಅಷ್ಟೇ ಅಲ್ಲ. ಶೂದ್ರ ಕನಿಷ್ಟ ,ಬ್ರಾಹ್ಮಣ ಶ್ರೇಷ್ಟ ವೆಂದು ಯಾವ ವೇದಮಂತ್ರಗಳಲ್ಲೂ ಹೇಳಿಲ್ಲ. ಬದಲಿಗೆ   ನಾಲ್ಕೂ ವರ್ಣಗಳವರೂ ಭಗವಂತನ ಮಕ್ಕಳ, ಇವರು ಸಮಾನರು. ಎಂಬ ಹತ್ತಾರು  ವೇದಮಂತ್ರಗಳನ್ನು ಕಾಣಬಹುದಾಗಿದೆ.
ಈಗ ಹೇಳಿ,  ಮನುಷ್ಯನ ನೆಮ್ಮದಿಯ ಜೀವನಕ್ಕೆ ನೆರವಾಗಬಲ್ಲ ವೇದಗಳನ್ನು ವಿರೋಧಿಸಬೇಕೇ? ಅಥವಾ ಅದರ ಅರಿವು ಪಡೆದು  ನೆಮ್ಮದಿಯಾಗಿ ಬಾಳಬೇಕೇ?
ಅಷ್ಟೇ ಅಲ್ಲ, ವೇದವನ್ನು ಸರಿಯಾಗಿ ಅರ್ಥಮಾಡಿಕೊಂಡರೆ ನಮ್ಮ ದೇಶದಲ್ಲಿರುವ ಹಲವು ಜ್ವಲಂತ ಸಮಸ್ಯೆಗಳು ತಾನೇ ತಾನಾಗಿ ಬುಡಸಮೇತ  ಕಳಚಿಹೋಗುತ್ತವೆ.  ವೇದವನ್ನು ಅರ್ಥ ಮಾಡಿಕೊಳ್ಳಬೇಕು, ಮತ್ತು ಅದರಂತೆ ಬದುಕಬೇಕು.
ವೇದವನ್ನು ಸರಿಯಾಗಿ ಅರ್ಥಮಾಡಿಕೊಂಡಾಗ ಅದು, ಜಾತಿ, ಪ್ರಾಂತ, ಭಾಷೆ ಎಲ್ಲವನ್ನೂ ಮೀರಿ   ಮನುಕುಲದ  ಅಭ್ಯುದಯಕ್ಕಾಗಿ  ಭಗವಂತನೇ ಕೃಪೆಮಾಡಿರುವ  ಗ್ರಂಥ  ಭಂಡಾರ ಎಂಬ ಅರಿವು ಮೂಡುತ್ತದೆ.

ಸರ್ವೇಪಿ ಸುಖಿನ:ಸಂತು|  ಸರ್ವೇ ಸಂತು ನಿರಾಮಯಾ:
ಸರ್ವೇ ಭದ್ರಾಣಿ ಪಶ್ಯಂತು| ಮಾ ಕಶ್ಚಿತ್ ದು:ಖ ಭಾಗ್ಭವೇತ್||

4 comments:

  1. ಸರಿಯಾದ ವಿವರಣೆ ಇಲ್ಲಾ.
    ಹಿಂದೂ ಧರ್ಮ ಒಪ್ಪಬೇಕು ಅಷ್ಟನಾ...?

    ReplyDelete
  2. ನಾನು ಇದನ್ನು ಓದಿ ಬಹಳ ಸಂತೋಷಪಟ್ಟೆ ಸ್ಫೂರ್ತಿದಾಯಕ ಬರವಣಿಗೆ ಧನ್ಯವಾದಗಳು

    ReplyDelete
  3. ತುಂಬಾ ಅದ್ಭುತ ಸಾಲುಗಳು...ಒಂದಂತೂ ಸತ್ಯ ಇಲ್ಲಿ ಧರ್ಮಕ್ಕೆ ಬದುಕಬೇಕೆ ಹೊರತು ಜಾತಿಗಾಗಿ ಅಲ್ಲ...ಸರ್ವೆಜನ ಸುಖಿನೋ ಭವತು🥰🥰 🙏ಕೃಷ್ಣಮ್ ಒಂದೇ ಜಗದ್ಗುರು...🙏🙏🙏

    ReplyDelete