ವೇದಮಂತ್ರಗಳು ಒಂದೊಂದೂ ಅದ್ಭುತ!
ಮೂಷೋ ನ ಶಿಶ್ನಾ ವ್ಯದಂತಿ ಮಾಧ್ಯಃ ಸ್ತೋತಾರಂ ತೇ ಶತಕ್ರತೋ |
ಸಕೃತ್ಸು ನೋ ಮಘವನ್ನಿಂದ್ರ ಮೃಳಯಾಧಾ ಪಿತೇವ ನೋ ಭವ ||
[ ಋಗ್ವೇದ ಮಂಡಲ-೧೦, ಸೂಕ್ತ-೩೩, ಮಂತ್ರ ೩]
ಅರ್ಥ :
ಶತಕೃತೋ ಇಂದ್ರ = ಹೇ ಬಹುಪ್ರಜ್ಞಾವಾನ್ ಇಂದ್ರನೇ, ಪರಮೇಶ್ವರನೇ,
ತೇ = ನಿನ್ನನ್ನು
ಸ್ತೋತಾರಂ = ಸ್ತುತಿಗೈಯ್ಯುವ
ಮಾ = ನನ್ನನ್ನು
ಆಧ್ಯಃ = ಮಾನಸಿಕ ಚಿಂತೆಗಳು
ಮೂಷಃ ನ ಶಿಶ್ನಾ = ಇಲಿಗಳು ಎಣ್ಣೆ ಸವರಿದ ದಾರವನ್ನು ತಿನ್ನುವಂತೆ
ವಿ ಅದಂತಿ = ಬಗೆ ಬಗೆಯಾಗಿ ಕುಕ್ಕಿ ತಿನ್ನುತ್ತಿವೆ
ಮಘವನ್ = ಹೇ ಐಶ್ವರ್ಯಶಾಲಿಯಾದ ಪರಮೇಶ್ವರನೇ
ನಃ = ನಮ್ಮನ್ನು
ಸಕೃತ್ = ಒಂದು ಸಾರಿ
ಸಮೃಳಯ = ಹರ್ಷಗೊಳಿಸಿಬಿಡು
ಅಥಾ = ಹೀಗೆ
ನಃ ಪಿತಾ ಇವ ಭವ = ನೀನು ನಮಗೆ ತಂದೆಯಂತೆ ಆಗು.
ಭಾವಾರ್ಥ :
ಹೇ ಪರಮೇಶ್ವರ, ನಿನ್ನನ್ನು ಸ್ತುತಿಗೈಯ್ಯುವ ನನ್ನನ್ನು ನನ್ನ ಮಾನಸಿಕ ಚಿಂತೆಗಳು ಇಲಿಗಳು ಎಣ್ಣೆ ಸವರಿದ ದಾರವನ್ನು ತಿನ್ನುವಂತೆ ಬಗೆ ಬಗೆಯಾಗಿ ಕುಕ್ಕಿ ತಿನ್ನುತ್ತಿವೆ, ಹೇ ಐಶ್ವರ್ಯಶಾಲಿಯಾದ ಪರಮೇಶ್ವರನೇ ನಮ್ಮನ್ನು ಒಂದು ಸಾರಿ ಹರ್ಷಗೊಳಿಸಿಬಿಡು, ಹೀಗೆ ನೀನು ನಮಗೆ ತಂದೆಯಂತೆ ಆಗು.
ಎಂತಹಾ ವಾಸ್ತವ ಸತ್ಯ ಸಂಗತಿಗಳು! ಇದರಿಂದಲೇ ವೇದವನ್ನು ಸಾರ್ವಕಾಲಿಕ ಎನ್ನುವುದು. ಭಗವಂತನ ಸ್ಮರಣೆಯಲ್ಲಿದ್ದರೂ ಸಹ ನಮ್ಮ ಮಾನಸಿಕ ಚಿಂತೆಗಳು ನಮ್ಮನ್ನು ಕಾದದೆ ಬಿಡದು. ಇಲ್ಲಿ ಹೋಲಿಕೆ ಹೇಗಿದೆ ನೋಡಿ, ಇಲಿಗಳು ಎಣ್ಣೆ ಸವರಿದ ದಾರವನ್ನೋ, ಹಗ್ಗವನ್ನೋ ಅಥವಾ ಮತ್ತಿನ್ನೇನನ್ನೋ ಅದರ ವಾಸನೆಹಿಡಿದು ಅಲ್ಲಿ ಧಾವಿಸಿ ಎಣ್ನೆ ಸವರಿದ ವಸ್ತುವನ್ನು ಕುಕ್ಕಿ ಕುಕ್ಕಿ ತಿನ್ನುವುದು ನಮಗೆ ಗೊತ್ತಿರುವ ಸಂಗತಿಯೇ ಅಲ್ಲವೇ! ಅದರಂತೆಯೇ ನಮ್ಮ ಮಾನಾಸಿಕ ಚಿಂತೆಗಳು ನಮ್ಮನ್ನು ಕುಕ್ಕಿ ಕುಕ್ಕಿ ತಿನ್ನುತ್ತವೆ. ಎಂತಹಾ ಅದ್ಭುತ ಹೋಲಿಕೆ! ಹೌದಲ್ಲವೇ? ಭಗವಂತನ ಸ್ಮರಣೆಯನ್ನು ನಿತ್ಯವೂ ಮಾಡುವ, ನಿತ್ಯವೂ ಅವನ ಅರ್ಚನೆಮಾಡುವ , ಅವನದೇ ಧ್ಯಾನದಲ್ಲಿರುವವನನ್ನೂ ಕೂಡ ಮಾನಸಿಕ ಚಿಂತೆಗಳು ಸುಮ್ಮನೆ ಬಿಡುವುದಿಲ್ಲವಲ್ಲ. ನಮ್ಮ ಮೇಲೆ ದಾಳಿಮಾಡಿ ನಮ್ಮ ಚಿತ್ತವನ್ನು ಹಾಳುಮಾಡುವುದಿಲ್ಲವೇ? ಇಂತಹಾ ನನ್ನ ಮಾನಸಿಕ ಅವಸ್ಥೆಯು ದೂರವಾಗಲು ನೀನು ಒಮ್ಮೆ ನನ್ನತ್ತ ನೋಡಿಬಿಡು. ನನ್ನನ್ನು ಒಮ್ಮೆ ಹರ್ಷಗೊಳಿಸಿಬಿಡು- ಎಂದು ಆ ಶತಕೃತನಾದ ಪರಮಾತ್ಮನಲ್ಲಿ ಪ್ರಾರ್ಥನೆ ಮಾಡುವ ವೇದ ಮಂತ್ರವಿದು.
ವೇದಮಂತ್ರಗಳ ಒಂದೊಂದು ಪದವನ್ನೂ ಪಂಡಿತ್ ಸುಧಾಕರ ಚತುರ್ವೇದಿಗಳು ನಮಗೆ ವಿವರಿಸುವ ರೀತು ಬಲು ಚೆನ್ನ. ಶತಕೃತೋ-ಎನ್ನುವ ಒಂದು ಪದದ ಅರ್ಥ ಬಲು ವಿಸ್ತಾರ. ಸರ್ವಶಕ್ತ ಆ ಭಗವಂತನನ್ನು ಒಂದೊಂದು ಮಂತ್ರದಲ್ಲಿ ಒಂದೊಂದು ಬಗೆಯಲ್ಲಿ ಸ್ತುತಿಸುವುದನ್ನು ವೇದಮಂತ್ರಗಳಲ್ಲಿ ಕಾಣಬಹುದು. ಶತಕೃತೋ ಎಂದರೆ ನೂರಾರು ಕೆಲಸಗಳನ್ನು ಸರಾಗವಾಗಿ ಯಶಸ್ವಿಯಾಗಿ ನಿರ್ವಹಿಸುವ ಸಾಮರ್ಥ್ಯ ಉಳ್ಳ ಪ್ರಭುವೇ! -ಎ೦ದು. ಅಂದರೆ ಆ ಭಗವಚ್ಛಕ್ತಿಯಿಂದ ಯಾವ ಕೆಲಸ ಸಾಧ್ಯವಿಲ್ಲ! ಬ್ರಹ್ಮಾಂಡವನ್ನು ಅಚ್ಚುಕಟ್ಟಾಗಿ ನಡೆಸಿಕೊಂಡು ಹೋಗುತ್ತಿರುವ ಆ ಶಕ್ತಿಯನ್ನು ಎಷ್ಟು ಬಣ್ಣಿಸಿದರೂ ಸಾಲದು. ಆ ಪರಮಾತ್ನನನ್ನು ಬಣ್ಣಿಸುವಾಗ ನಿನ್ನ ಐಶ್ವರ್ಯಕ್ಕೆ ಮಿತಿಯಿಲ್ಲ, ನಿನ್ನ ಕರುಣೆಗೆ ಕೊರತೆ ಇಲ್ಲ, ನಿನ್ನ ದಾನಕ್ಕೂ ಮಿತಿಯಿಲ್ಲ, ನಾನಾದರೋ ನಿನ್ನ ಸ್ತುತಿಯನ್ನು ಮಾಡುತ್ತಿದ್ದರೂ ನನ್ನಲ್ಲಿ ಕೊರಗು ಕಡಿಮೆಯಾಗಲಿಲ್ಲ, ನನ್ನಲ್ಲಿ ಹೊಟ್ಟೆಕಿಚ್ಚು,ಅಹಂಕಾರ,ಕೋಪ, ದುರಾಸೆ,ಕಾಮ, ಮೋಹ-ಇವುಗಳು ನನ್ನನ್ನು ಕುಕ್ಕಿ ಕುಕ್ಕಿ ತಿನ್ನುತ್ತಿವೆ. ಮನಸ್ಸಿಗೆ ನೆಮ್ಮದಿ ಇಲ್ಲ.
ಇವೆಲ್ಲವನ್ನೂ ನೀನು ಒಂದು ಸಾರಿ ಪರಿಹರಿಸಿಬಿಡು, ನಮಗೆ ಸತ್ಯದ ಅರಿವು ಮಾಡಿಬಿಡು. ಹೀಗೆ ಪ್ರಾರ್ಥಿಸುತ್ತಾ ಮಂತ್ರದ ಕೊನೆಯಲ್ಲಿ ನಃ ಪಿತಾ ಇವ ಭವ = ನೀನು ನಮಗೆ ತಂದೆಯಂತೆ ಆಗು ಎಂಬ ಭಾಗವನ್ನು ಗಮನಿಸಿವುದು ಮುಖ್ಯ. ಭಗವಂತನಲ್ಲಿ ಪ್ರಾರ್ಥಿಸುವಾಗ ನನ್ನ ಅವಸ್ಥೆಗಳನ್ನು ಪರಿಹರಿಸು, ಎಂದು ಮಾತ್ರ ಕೋರಲಿಲ್ಲ, ಬದಲಿಗೆ ನಮಗೆ ನೀನು ತಂದೆಯಂತೆ ಇದ್ದು ನಮ್ಮೆಲ್ಲರ ಮಾನಸಿಕ ದು:ಖವನ್ನು ಪರಿಹರಿಸು, ಎಂದು ಪ್ರಾರ್ಥಿಸಲಾಗಿದೆ. ಇದು ವೇದದ ಶ್ರೇಷ್ಠತೆಯಲ್ಲವೇ! ಕೇವಲ ನನಗಾಗಿ ನನ್ನ ಪ್ರಾರ್ಥನೆಯಲ್ಲ, ನನ್ನ ಪ್ರಾರ್ಥನೆ ನಮಗಾಗಿ ಎಂದರೆ ಇಡೀ ಸಮಾಜಕ್ಕಾಗಿ.ಅಲ್ಲವೇ?