Pages

Saturday, July 23, 2011

ಉತ್ತರ ಸಿಕ್ಕಿತು!


      ಅವನ ಪಾಡಿಗೆ ಅವನು ಸುಮ್ಮನೆ ಹೋಗುತ್ತಿದ್ದಾಗ ಎದುರಿಗೆ ಪ್ರಶ್ನೆಯೊಂದು ಅಡ್ಡ ಬಂದಿತು. ಅದನ್ನು ನಿರ್ಲಕ್ಷಿಸಿ ಪಕ್ಕಕ್ಕೆ ಸರಿಸಿ ಹೋಗಲು ಪ್ರಯತ್ನಿಸಿದರೆ ಅದೂ ಪಕ್ಕಕ್ಕೆ ಬಂದು ಉತ್ತರ ಹೇಳಲು ಆಗ್ರಹಿಸಿತು. ಅದನ್ನು ದೂಡಿದಷ್ಟೂ ದೊಡ್ಡದಾಗಿ ಬೆಳೆಯುತ್ತಾ ಹೋಗುತ್ತಿತ್ತು. ಉತ್ತರ ಹೇಳದೆ ಬಿಡುಗಡೆಯಿಲ್ಲವೆಂದು ಅವನಿಗೆ ಮನದಟ್ಟಾಯಿತು. ಅವನಿಗೆ ಉತ್ತರ ಗೊತ್ತಿರಲಿಲ್ಲ. ಅವನು ಉತ್ತರ ಹುಡುಕಲು ಪ್ರಾರಂಭಿಸಿದ. ಪ್ರಶ್ನೆಯೂ ಅವನನ್ನು ನೆರಳಿನಂತೆ ಹಿಂಬಾಲಿಸುತ್ತಲೇ ಇತ್ತು. ಉತ್ತರ ಕಂಡು ಹಿಡಿಯಲು ಅವನು ಹಲವಾರು ವರ್ಷಗಳ ಕಾಲ ಊರೂರು ಅಲೆದ, ಕಾಡು-ಮೇಡುಗಳನ್ನು ಸುತ್ತಿದ. ಎಲ್ಲರನ್ನೂ ವಿಚಾರಿಸಿದ. ಉತ್ತರ ಸಿಗುತ್ತಿರಲಿಲ್ಲ. ಚರ್ಚು, ಮಸೀದಿ, ಮಠ, ಮಂದಿರಗಳಿಗೆ ಭೇಟಿ ಕೊಟ್ಟ. ಉಹುಂ, ಉತ್ತರ ಸಿಗಲಿಲ್ಲ. ಮೌಲ್ವಿ, ಮುಲ್ಲಾ, ಪಾದ್ರಿ, ಅರ್ಚಕರು, ವಿದ್ವಾಂಸರುಗಳು, ಗುರುಗಳು, ಸಾಧು, ಸಂತರನ್ನು ಕಂಡು ಪ್ರಾರ್ಥಿಸಿದ. ಒಬ್ಬೊಬ್ಬರು ಒಂದೊಂದು ರೀತಿ ಹೇಳಿದರು. ಕೆಲವರು ತಾವು ಹೇಳಿದ ದಾರಿಯಲ್ಲಿ ಹೋದರೆ ಮಾತ್ರ ಉತ್ತರ ಸಿಗುತ್ತದೆ, ಇಲ್ಲದಿದ್ದರೆ ಸಿಗಲು ಸಾಧ್ಯವೇ ಇಲ್ಲ ಎಂದರು. ಒಬ್ಬೊಬ್ಬರು ಒಂದೊಂದು ರೀತಿ ಹೇಳುತ್ತಿದ್ದರು. ಅವರು ಹೇಳುವುದನ್ನು ಕೇಳುತ್ತಿದ್ದರೆ ಅದು ಸರಿಯಿರಬಹುದು ಎನ್ನಿಸುತ್ತಿತ್ತು. ಇನ್ನೊಬ್ಬರು ಹೇಳುವುದನ್ನು ಕೇಳಿದಾಗ ಇದೂ ಸರಿಯಿರಬಹುದು ಎನ್ನಿಸುತ್ತಿತ್ತು, ಆದರೆ ಸ್ಪಷ್ಟ ಉತ್ತರ ಸಿಗದೆ ಗೊಂದಲವಾಗಿಬಿಡುತ್ತಿತ್ತು. ಪ್ರಶ್ನೆ ಅವನನ್ನು ನೋಡಿ ಗಹಗಹಿಸಿ ನಗುತ್ತಿತ್ತು. ಕೊನೆಗೆ ಸುಸ್ತಾಗಿ ಒಂದೆಡೆ ಕುಳಿತು ಕಣ್ಣು ಮುಚ್ಚಿ ಯಾವ ಉತ್ತರ ಸರಿ ಎಂದು ಆಲೋಚಿಸತೊಡಗಿದ. ಪ್ರಶ್ನೆಯೂ ಆದಿಶೇಷನಂತೆ ಅವನ ಬೆನ್ನ ಹಿಂದೆಯೇ ಕುಳಿತಿತ್ತು. ಸಿಕ್ಕ ಎಲ್ಲಾ ಉತ್ತರಗಳನ್ನು ಮನಸ್ಸಿನಲ್ಲೇ ವಿಮರ್ಶಿಸತೊಡಗಿದ, ಅಳೆದು ತೂಗಿ ನೋಡತೊಡಗಿದ. ಹೀಗೆ ಆಲೋಚಿಸುತ್ತಾ, ಆಲೋಚಿಸುತ್ತಾ ಅವನು ಒಳಗೆ, ಒಳಗೆ, ತನ್ನ ಒಳಗೆ, ತನ್ನ ಅಂತರಂಗದ ಒಳಗೇ ಸಾಗತೊಡಗಿದ. ಹಾಗೆಯೇ ಸಾಗುತ್ತಿದ್ದಾಗ ಅವನಿಗೆ ಕ್ಷೀಣ ಬೆಳಕೊಂದು ಕಂಡಿತು. ಅದನ್ನು ಅನುಸರಿಸಿ ಮುಂದೆ ಮುಂದೆ ಹೋಗತೊಡಗಿದ. ಕ್ರಮೇಣ ಬೆಳಕು ದೊಡ್ಡದಾಗುತ್ತಾ ಹೋಯಿತು. ಕೊನೆಗೊಮ್ಮೆ ಉಜ್ವಲ ಪ್ರಕಾಶ ಕಂಡಿತು. ಅವನಿಗೆ ತಾನು ಯಾರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಬಿಟ್ಟಿತ್ತು. ಅದುವರೆಗೆ ಉತ್ತರ ಇದ್ದ ಸ್ಥಳ ಬಿಟ್ಟು ಆತ ಬೇರೆಲ್ಲಾ ಕಡೆ ಹುಡುಕಿದ್ದ. ಉತ್ತರ ಸಿಕ್ಕಿದ ಸಂತೋಷದಿಂದ ಪ್ರಶ್ನೆಗೆ ಉತ್ತರ ಹೇಳಲು ಹೊರಪ್ರಪಂಚಕ್ಕೆ ಬಂದರೆ, ಅಲ್ಲಿ ಪ್ರಶ್ನೆಯೇ ಕಾಣುತ್ತಿರಲಿಲ್ಲ. ಅದು ಕಣ್ಣಿಗೆ ಕಾಣದಷ್ಟು ಸಣ್ಣದಾಗಿ ಉತ್ತರದೊಳಗೆ ಐಕ್ಯವಾಗಿಬಿಟ್ಟಿತ್ತು!
(ಚಿತ್ರಕೃಪೆ: ಅಂತರ್ಜಾಲ).
*****************
-ಕ.ವೆಂ.ನಾಗರಾಜ್.