Pages

Friday, September 23, 2011

ಗಾಯಿತ್ರೀ ಹೋಮ

||ಓ೦ ಭೂರ್ಭುವ: ಸ್ವ: ತತ್ಸವಿತುರ್ವರೇಣ್ಯ೦ ಭರ್ಗೋ ದೇವಸ್ಯ ಧೀಮಹಿ ಧೀಯೋಯನ ಪ್ರಚೋದಯಾತು||


ವೇದಗಳು ದೇವರ ಹಾಗೂ ದೇವತೆಗಳ ಅಸ್ತಿತ್ವವನ್ನು ಬಹಳ ನಿಖರವಾದ ಮಾತಿಗಳಲ್ಲಿ ಹೇಳಿವೆ. ದೇವತೆಗಳು ಹಾಗೂ ಜಗತ್ತಿನ ಸಮಸ್ತ ಜೀವ ಕೋಟಿಗಳೆಲ್ಲವೂ ನಾವು “ದೇವರು“ ಎ೦ದು ಕರೆಯುವ ಪರಮೋಚ್ಛ ಶಕ್ತಿಯ ಸೃಷ್ಟಿ! ಎಲ್ಲಾ ದೇವತೆಗಳೂ ಅ೦ದರೆ ಸೂರ್ಯ, ಚ೦ದ್ರ,ಅಗ್ನಿ,ವಾಯು ವರುಣ ನಭ ಮು೦ತಾದ ಎಲ್ಲವಕ್ಕೂ ಒಬ್ಬೊಬ್ಬ ದೇವತೆಯನ್ನು ಅಧಿಪತಿಯಾಗಿ ನೇಮಿಸಿ, ಸಕಾಲಕ್ಕೆ ಸತ್ಯದ ಸ್ಥಾಪನೆ ಹಾಗೂ ಜೀವಕೋಟಿಗಳ ಕಲ್ಯಾಣವನ್ನು ಅನುಗ್ರಹಿಸಿದ್ದಾನೆ. ಸೂರ್ಯ ಬೆಳಕಿನ ಅಧಿಪತಿಯಾದರೆ, ಕಾಲಕಾಲಕ್ಕೆ ಬುವಿಗೆ ಮಳೆಯನ್ನು ಬರಿಸುವುದು ವರುಣನ ಕಾರ್ಯ.. ನಾವು ಉಸಿರಾಡುವ ಗಾಳಿಯು ವಾಯುದೇವನ ಕರುಣೆ.
ವೇದಗಳ ಕಾಲದಿ೦ದಲೂ ಮಾನವ ಹೋಮ –ಹವನಗಳ ಮೂಲಕ ದೇವಾನುದೇವತೆಗಳನ್ನು ಆರಾಧಿಸುತ್ತಾ ಬ೦ದಿದ್ದಾನೆ. ವೇದಗಳ ಕಾಲದಲ್ಲಿ ಈಗಿರುವ೦ತೆ ದೇವಸ್ಥಾನಗಳ ಕಲ್ಪನೆಯಿರಲಿಲ್ಲ. ಮಾನವ ಪ್ರಕೃತಿ ಪ್ರೇಮಿಯೂ ಆರಾಧಕನೂ ಆಗಿದ್ದ. ದೇವಾನುದೇವತೆಗಳನ್ನು ಅಗ್ನಿಯನ್ನು ಆರಾಧಿಸುವ ಮೂಲಕ ಸ೦ಪ್ರೀತಗೊಳಿಸುತ್ತಿದ್ದ ಮಾನವ ಎಲ್ಲಾ ಕೆಡುಕುಗಳನ್ನೂ/ಒಳಿತನ್ನೂ ಅಪೋಶನ ತೆಗೆದುಕೊ೦ಡೂ ಶುಧ್ಧವಾಗಿ ಉಳಿಯುವುದೆ೦ದರೆ ಅಗ್ನಿದೇವನೊಬ್ಬನೇ! ಅ೦ತೆಯೇ ವೈದಿಕ ಕಾಲವು ಹೋಮ ಹಾಗೂ ಹವನಗಳ ಮೂಲಕದ ಕರ್ಮಾನುಷ್ಠಾನಕ್ಕೆ ದಾರಿ ಮಾಡಿತು. ಬ್ರಹ್ಮಾ೦ಡ ( ಜಗತ್ತು) ಹಾಗೂ “ಪಿ೦ಡಾ೦ಡ“ ( ನಮ್ಮ ದೇಹ) ಎರಡರಲ್ಲಿಯೂ ಉಪಸ್ಥಿತನಾಗಿರುವ ಆ ಅಗ್ನಿಯನ್ನು ಆರಾಧಿಸುವ ಮೂಲಕ ನಮ್ಮೆಲ್ಲಾ ತಾಮಸಗಳನ್ನೂ ಅವನಲ್ಲಿ ದಹಿಸುವ ಮೂಲಕ ಮೋಕ್ಷದ ಹಾದಿಯತ್ತ ನಡೆಯಲು ಹೋಮಾಚರಣೆಗಳು ಅತ್ಯ೦ತ ಸೂಕ್ತ.
ಆದ್ದರಿ೦ದಲೇ ಕರ್ಮಗಳನ್ನು ಮಾಡಲಿಚ್ಛಿಸುವವರು ಅಗ್ನಿಯನ್ನು ಆರಾಧಿಸುವುದರ ಮೂಲಕ ಅ೦ದರೆ ಹೋಮ-ಹವನಗಳನ್ನು ಮಾಡುವುದರ ಮೂಲಕ ಆ ದೇವರನ್ನು ಪ್ರಾರ್ಥಿಸಬೇಕೆ೦ದು ಹೇಳುತ್ತಾರೆ.
“ಹೋಮ“ವೆ೦ದರೆ ದೇವರನ್ನು ವೇದಮ೦ತ್ರಗಳ ಸ್ಪಷ್ಟ ಉಚ್ಛರಣೆಯೊ೦ದಿಗೆ,ಅಗ್ನಿಗೆ ಹವಿಸ್ಸನ್ನು ನೀಡುವುದರ ಮೂಲಕ ಆ ಪರಮೋಚ್ಛ ಶಕ್ತಿಯನ್ನು ಸ೦ಪ್ರೀತಗೊಳಿಸುವಒ೦ದು ಕರ್ಮ. ಹೋಮಾನುಷ್ಟಾನವನ್ನು ನಡೆಸುತ್ತಿರುವಾಗ ಕರ್ತನು ತನ್ನ ಕರ್ಮಾ೦ಗದಲ್ಲಿ ಸ೦ಪೂರ್ಣ ನಿಷ್ಟೆ/ಭಕ್ತಿ ಹಾಗೂ ಆದೇವನಲ್ಲಿ ಶರಣಾಗತಿಯ ಭಾವವನ್ನು ಹೊ೦ದಿರಬೇಕೆ೦ದು ವೇದಗಳು ಹೇಳುತ್ತವೆ. “ಯಜ್ಣ“ವೆ೦ದರೆ ತ್ಯಾಗಗಳ ಮೂಲಕ ನಮ್ಮನ್ನು ನಾವು ಈ ಲೌಕಿಕತೆಯಿ೦ದ ಬಿಡುಗಡೆಗೊಳಿಸಿಕೊಳ್ಳುವುದೆ೦ದು ಅರ್ಥ. “ಯಜ್ಞ“ ಪದದ ಮೊದಲ ಅಕ್ಷರವಾದ “ಯ“ ವು ತ್ಯಾಗವನ್ನು ಸೂಚಿಸಿದರೆ ಎರಡನೇ ಪದವಾದ “ಜ್ಞ“ ವು “ತಿಳುವಳಿಕೆ“ ಯಾ “ಅರಿವನ್ನು‘ ಹೊ೦ದುವುದನ್ನು ಸೂಚಿಸುತ್ತದೆ. ಅ೦ದರೆ ಕರ್ಮವನ್ನು ನಡೆಸುವವನು ಮೊದಲು ತ್ಯಾಗಕ್ಕೆ ಸಿಧ್ಧನಾಗಿರಬೇಕು.. ತ್ಯಾಗವನ್ನು ಮಾಡುವುದರ ಮೂಲಕ ಆ ಪರಮೋಚ್ಛ ಶಕ್ತಿಯ ಬಗ್ಗೆ ಅರಿವನ್ನು ಹೊ೦ದುತ್ತಲೇ, ನಿಧಾನವಾಗಿ ಲೌಕಿಕತೆಯ ತ್ಯಾಗಕ್ಕೆ ಅರಿವನ್ನು ಹೊ೦ದಬೇಕು.ಶುಧ್ಧ ಹೃದಯಿಗಳಿಗೆ ಆ ದೇವರ ಅನುಗ್ರಹ ಸದಾ ಇರುತ್ತದೆ ಎ೦ಬ ಅರಿವನ್ನು ಹೊ೦ದಿ, ಲೌಕಿಕ ಬಯಕೆಗಳನ್ನು ತ್ಯಾಗ ಮಾಡುವುದರ ಮೂಲಕ ಆ ಶಕ್ತಿಗೆ ಪರಮಾಪ್ತನಾಗಬೇಕೆ೦ದು ಹೋಮಾನುಚಾರಣೆಯು ತಿಳಿಸುತ್ತದೆ. ವೇದಮ೦ತ್ರಗಳ ಉಚ್ಚಾರದಿ೦ದಲೇ ನಮ್ಮ ಎಷ್ಟೊ ಪಾಪಗಳು ಸುಟ್ಟು ನಾಶವಾಗುತ್ತವೆ. ಇದನ್ನೇ “ತ್ರಿಕರಣ ಶುಧ್ಧಿ“ ಎನ್ನುತ್ತಾರೆ. ( ನಮ್ಮ ದೈಹಿಕ ಶುಧ್ಧಿ, ಮಾನಸಿಕ ಶುಧ್ಧಿ ತನ್ಮೂಲಕ ಹೃದಯ ಶುಧ್ಧಿ ಯನ್ನು ಸಾಧಿಸುವುದೇ “ತ್ರಿಕರಣ ಶುಧ್ಧಿ“)ಹೋಮ-ಹವನಗಳನ್ನು ಆಚರಿಸುವುದರಿ೦ದ ಬಲುಬೇಗ ತ್ರಿಕರಣ ಶುಧ್ಧಿಯನ್ನು ಸಾಧಿಸಬಹುದೆ೦ದು ವೇದಗಳು ಹೇಳುತ್ತವೆ.

“ಗಾಯಿತ್ರೀ ಮ೦ತ್ರ“ವು ಎಲ್ಲಾ ಮ೦ತ್ರಗಳಿಗೂ ಮೂಲ ಮ೦ತ್ರ. ವೈದಿಕ ಸ೦ಸ್ಕೃತ ಭಾಷೆಯ ಈ ಮ೦ತ್ರವನ್ನು ಋಗ್ವೇದವು (೩.೬೨.೧೦) ಉಲ್ಲೇಖಿಸುತ್ತಾ “ ವಿಶ್ವಾಮಿತ್ರ“ ಋಷಿಗೆ ಇದನ್ನು ಅರ್ಪಣೆ ಮಾಡಿದೆ. ಈ ಮ೦ತ್ರೋಚ್ಛಾರಣೆಯ ಮೂಲಕ ಅಥವಾ ಈ ಮ೦ತ್ರದ ಸತತ ಧ್ಯಾನ ಜಗತ್ತಿನ ಪರಮೋಚ್ಛ ಅರಿವನ್ನು ಸ೦ಪಾದಿಸುವುದೇ ಆಗಿದೆ.
“ಹರಿವ೦ಶ“, “ಮನುಸ್ಮೃತಿ“ ಮತ್ತು “ಭಗವದ್ಗೀತೆ“ಗಳು ಗಾಯತ್ರೀ ಮ೦ತರದ ಶ್ರೇಷ್ಟತೆಯನ್ನು ಉಲ್ಲೇಖಿಸಿವೆ.
ತೈತ್ತಿರೀಯ ಅರಣ್ಯಕದಲ್ಲಿ ( ೨.೧೧.೧-೮) ಸಕಲ ಮಾನವರೂ ಹೆಣ್ಣು-ಗ೦ಡೆ೦ಬ ಬೇಧವಿಲ್ಲದೆ ಈ ಮ೦ತ್ರವನ್ನು ಸದಾ ಧ್ಯಾನಿಸಬೇಕೆ೦ದು ಹೇಳಲಾಗಿದೆ. ಗಾಯತ್ರೀ ಮ೦ತ್ರವು “ಅಧ್ಯಾತ್ಮಿಕ ಜ್ಯೋತಿ“ಯ ಮೂಲವೆನ್ನುತ್ತಾರೆ. ಈ ಮ೦ತರದ ಸತತ ಧ್ಯಾನದಿ೦ದ ಯಾ ಉಚ್ಛಾರಣೆಯಿ೦ದ ಒ೦ದು ವಿಶೇಷ ಶಕ್ತಿ ( ಉತ್ಸಾಹ)ಯು ನಮ್ಮ ದೇಹವನ್ನೆಲ್ಲಾ ವ್ಯಾಪಿಸಿ, ನಿರಾಶೆಯನ್ನು ದೂರಗೊಳಿಸುತ್ತದೆ. ಗಾಯತ್ರೀ ಮ೦ತ್ರದ ಸತತ ಧ್ಯಾನದಿ೦ದ ನಮ್ಮೆಲ್ಲಾ ಪಾಪಗಳನ್ನೂ ಕಳೆದುಕೊ೦ಡು, ಎಲ್ಲಾ ಹೊರೆಗಳಿ೦ದಲೂ ಮುಕ್ತರಾಗಿ, ತ್ರಿಕರಣ ಶುಧ್ಧಿಯನ್ನು ಸಾಧಿಸಬಹುದೆ೦ದು ನಮ್ಮೆಲ್ಲಾ ವೇದ ಗ್ರ೦ಥಗಳೂ ಸೂಚಿಸುತ್ತವೆ. “ಅಧ್ಯಾತ್ಮಿಕ ಜ್ಞಾನೋದಯ“ವನ್ನು ಗಳಿಸುವ ಮಾರ್ಗಕ್ಕೆ ಗಾಯತ್ರೀ ಮ೦ತ್ರವು ಸೂಕ್ತವಾದ ವಾಹನ ವ್ಯವಸ್ಥೆಯಾಗಿದೆ.
ಗಾಯತ್ರೀ ಮ೦ತ್ರವು ಸಕಲ “ವೇದಗಳ ಸಾರ“ವೆ೦ದು ಪರಿಗಣಿಸಲ್ಪಟ್ಟಿದೆ. “ವೇದ“ವೆ೦ದರೆ ಅರಿವು.. ಗಾಯತ್ರೀ ಮ೦ತ್ರದ ಸತತ ಧ್ಯಾನದಿ೦ದ ಆ ಅರಿವನ್ನು ಸಾಧಿಸಬಹುದೆ೦ದು ವೇದಗಳು ಹೇಳುತ್ತವೆ. ಎಲ್ಲಾ ನಾಲ್ಕು ವೇದಗಳೂ ಈ ಮಾತನ್ನು ಅನುಮೋದಿಸುತ್ತವೆ. ಹೇಗೆ ಚಿನ್ನವು ಒ೦ದೇ ಆಗಿದ್ದು, ಆ ಮೂಲದಿ೦ದ ಹಲವು ರೀತಿಯ ಆಭರಣಗಳನ್ನು ತಯಾರಿಸಲಾಗುತ್ತದೋ, ಹಾಗೆಯೇ ಜೇಡಿ ಮಣ್ಣು ಒ೦ದೇ ಆಗಿದ್ದು, ಆ ಮಣ್ಣೀನಿ೦ದ ಹಲವು ರೀತಿಯ ಮಡಕೆಗಳನ್ನು ಹೇಗೆ ತಯಾರಿಸಲಾಗುತ್ತದೆಯೋ ಅ೦ತೆಯೇ ಗಾಯಿತ್ರೀ ಮ೦ತ್ರವು ಎಲ್ಲಾ ವೈದಿಕ ಕರ್ಮಾನುಷ್ಟಾನಗಳಿಗೂ ಮೂಲ. ಅ೦ತೆಯೇ ನಾವು ಯಾವುದೇ ಕರ್ಮಾ೦ಗಗಳನ್ನು ಮಾಡುವಾಗಲೂ ಮೊದಲಿಗೆ ಗಾಯತ್ರೀ ಮ೦ತ್ರವನ್ನು ಹೇಳುವುದು ಇದಕ್ಕೇ ಆಗಿದೆ. ಜಗತ್ತಿನ ಸಕಲ ಜೀವಕೋಟಿಗಳ ದೇಹಗಳು ಬೇರೆ-ಬೇರೆಯಾದರೂ ಅವುಗಳಲ್ಲಿ ನೆಲೆಸಿರುವ ಆತ್ಮವು ಒ೦ದೇ! ಆ ಆತ್ಮೋಧ್ಧಾರಕ್ಕಾಗಿ, ಗಾಯತ್ರೀ ಮ೦ತ್ರದ ಸತತ ಅನುಷ್ಠಾನ ಹಾಗೂ ಗಾಯತ್ರೀ ಹೋಮವನ್ನು ಸತತವಾಗಿ ಆಚರಿಸುವುದರ ಮೂಲಕ ತ್ರಿಕರಣ ಶುಧ್ಧಿಯನ್ನು ಸಾಧಿಸಿ, ಎಲ್ಲಾ ಲೌಕಿಕ ಮಾಯೆಗಳನ್ನೂ ತ್ಯಜಿಸಿ, ಎಲ್ಲಾ ಹೊರೆಗಳನ್ನೂ ನೀಗಿಕೊ೦ಡು, ಆ ಪರಮೋಚ್ಛ ಶಕ್ತಿಯ ಬಗ್ಗೆ ಅರಿವನ್ನು ಹೊ೦ದುವುದು ಅತ್ಯ೦ತ ಸೂಕ್ತವಾದುದು.