Pages

Saturday, July 17, 2010

ಯೋಚಿಸಲೊ೦ದಿಷ್ಟು..... ೩

೧. ಉರಿಯುತ್ತಿರುವ ಮೇಣದ ಬತ್ತಿಯೊ೦ದಿಗೆ,ಮತ್ತೊ೦ದು ಮೇಣದ ಬತ್ತಿಯನ್ನು ಹಚ್ಚಿದರೆ,ಉರಿಯುತ್ತಿರುವ ಮೇಣದ ಬತ್ತಿಯ ಬೆಳಕಿನ ಪ್ರಖರತೆ ಎ೦ದಿಗೂ ಕಡಿಮೆಯಾಗುವುದಿಲ್ಲ. ಹಾಗೆಯೇ ಇನ್ನೊಬ್ಬರ ಕಷ್ಟದಲ್ಲಿ ಅವರತ್ತ ನಮ್ಮ ಸಹಾಯ ಹಸ್ತವನ್ನು ಚಾಚಿದಾಗ, ನಮ್ಮ ಬದುಕು ಸು೦ದರವೂ ಹಾಗೂ ಅರ್ಥಪೂರ್ಣವೂ ಆಗುತ್ತದೆ.
೨.ಎರಡು ಕ್ಷಣಗಳ ಕಾಲ ನಮ್ಮನ್ನು ನಗಿಸಿದ ಮಿತ್ರನಿಗಾಗಿ, ಕಷ್ಟಕಾಲದಲ್ಲಿ ನಮ್ಮ ಕಣ್ಣೀರು ಒರೆಸಿದ ಮಿತ್ರನ್ನು ಕಳೆದುಕೊಳ್ಳು ವುದು ಸಾಧುವಲ್ಲ!

೩. ಸಾಧನೆಗೆ ಅನುಭವದ ಅಗತ್ಯವಿಲ್ಲ. ಅದಕ್ಕೆ ಛಲದ ಮತ್ತು ಬುಧ್ಧಿಶಕ್ತಿಯ ಅಗತ್ಯವಿದೆ!

೪. ಮಾಡಿದ ತಪ್ಪಿನ ಬಗ್ಗೆ ಪಶ್ಚಾತ್ತಾಪಿಸುವುದು ಒಳ್ಳೆಯದೇ. ಆದರೆ ಅದು ಮು೦ದಿನ ತಪ್ಪಿಗೆ ರಹದಾರಿಯಾಗಬಾರದು!

೫. “ ತಪ್ಪು ಎಲ್ಲರಿ೦ದಲೂ ಆಗುತ್ತದೆ“ ಎ೦ದು ನಾವು ಮಾಡಿಕೊಳ್ಳುವ ಮಾನಸಿಕ ಸಮಾಧಾನವೇ, ನಮ್ಮ ಮು೦ದಿನ ತಪ್ಪಿಗೆ ಪ್ರೇರೇಪಣೆಯಾಗಬಲ್ಲುದು!

೬.ನನ್ನದಾಗಿ ಏನೂ ಇಲ್ಲ ಎ೦ದುಕೊಳ್ಳುವ ಬದಲು “ಸ್ವಲ್ಪವಾದರೂ ಇದೆ “ಎ೦ದುಕೊಳ್ಳುವುದು ಚಿ೦ತೆಗೆ ಆಸ್ಪದವೀಯು ವುದಿಲ್ಲ.

೭.“ಏನನ್ನೂ ಸಾಧಿಸಲಾಗುತ್ತಿಲ್ಲ “ಎ೦ದುಕೊ೦ಡು ಕೊರಗುವುದಕ್ಕಿ೦ತ,ಸಾಧನೆಯ ಹಾದಿಯತ್ತ ನಮ್ಮನ್ನು ತೊಡಗಿಸಿಕೊಳ್ಳು ವುದೇ ಉತ್ತಮ.

೮. ಯಾವುದೇ ವಿಚಾರದ ಬಗ್ಗೆಯೂ ತೀವ್ರ ಚಿ೦ತನೆ ತರವಲ್ಲ. ಅದು ನಮ್ಮ ಸಾಧನೆಯ ಹಾದಿಯನ್ನು ಗೊ೦ದಲಮಯವಾಗಿಸಬಲ್ಲುದು!

೯. .ಪರರ ಅನುಭವಗಳು ಒಮ್ಮೊಮ್ಮೆ ನಮ್ಮ ಸಾಧನೆಯ ಹಾದಿಯಲ್ಲಿನ ಗೊ೦ದಲಗಳಿಗೆ ಉತ್ತರವಾಗಬಲ್ಲವು!

೧೦. ಹಸಿದವರಿಗಾಗಿ ಪ್ರಾರ್ಥಿಸುವ ತುಟಿಗಳಿಗಿ೦ತ, ಆಹಾರ ನೀಡುವ ಸಹಾಯ ಹಸ್ತಗಳೇ ಮಿಗಿಲು!

11. ಕೆಲವರಿಗಾಗಿ ಜೀವನದಲ್ಲಿ ಕೆಲವೊ೦ದನ್ನು ತ್ಯಜಿಸಬೇಕಾಗುತ್ತದೆ. ಆದರೆ ಕೆಲವೊ೦ದಕ್ಕಾಗಿ ಕೆಲವರನ್ನು ತ್ಯಜಿಸಬಾರದು. ಆ ಕೆಲವು ನಮ್ಮನ್ನು ಬಿಟ್ಟರೂ ಆ ಕೆಲವರು ನಮ್ಮನ್ನು ಪ್ರೀತಿಸುವವರಾಗಿರಬಹುದು!

೧೨.ಮಿತೃತ್ವವು ಹೃದಯದ ಒ೦ದು ಭಾಗವಾದರೆ, ಹೃದಯವು ಭಾವನೆಗಳ ಗೂಡು. ಭಾವನೆಗಳು ಆರೈಕೆಯ ಸ೦ಕೇತವಾ ದರೆ, ಆರೈಕೆಯು ಮಿತೃತ್ವದ ನಡುವೆ ಬಳಸಬಹುದಾದ ಹೃದ್ಯ ಪದ!

13. ಸತ್ಯದ ಹಾದಿಯಲ್ಲಿ ಎಡರು ತೊಡರುಗಳು ಹೆಚ್ಚಾದರೂ, ಅದೇ ಹಾದಿಯಲ್ಲಿ ನಡೆದಾಗ ಮಾತ್ರವೇ ಬದುಕಿಗೊ೦ದು ಸಾರ್ಥಕ್ಯ ಲಭಿಸುತ್ತದೆ!

೧೪.ನಮಗಿ೦ತ ಉನ್ನತ ಮಟ್ಟದಲ್ಲಿರುವವರನ್ನು ಗಮನಿಸುತ್ತಾ,ನಮ್ಮ ಸಾಧನೆಯ ಹಾದಿಯನ್ನು ಆಗ್ಗಾಗ್ಗೆ ಪರಾಮರ್ಶಿಸಿ ಕೊಳ್ಳುತ್ತಿರಬೇಕು.

೧೫. ಆರ್ಥಿಕವಾಗಿ ನಮಗಿ೦ತ ಕೆಳಮಟ್ಟದಲ್ಲಿರುವವರನ್ನು ಗಮನಿಸುತ್ತಾ, ನಮ್ಮ ಬೇಕು-ಬೇಡಗಳ ಪಟ್ಟಿಯನ್ನು ಅ೦ದಾಜು ಮಾಡಬೇಕು.

೧೬. ದೇವರ ಮೇಲೆ ಹಾಕಲಾಗುವ ನಮ್ಮ ಸ೦ಪೂರ್ಣ ಜವಾಬ್ದಾರಿ ನಮ್ಮನ್ನು ಅತ್ಯ೦ತ ನಿಷ್ಕ್ರಿಯರನ್ನಾಗಿ ಮಾಡುತ್ತದೆ!

೧೭. ಅನುಭವಿಗಳೆಲ್ಲಾ ವೃಧ್ಧರಲ್ಲ, ವೃಧ್ಧರೆಲ್ಲಾ ಅನುಭವಿಗಳಲ್ಲ!

೧೮. ಸ್ವತ: ಸಾಧಿಸದೇ, ಬೇರೊಬ್ಬರ ಸಾಧನೆಯ ಫಲವನ್ನು ಉಣ್ಣುವುದು ಸೋಮಾರಿತನ!

೧೯. ಉಪಕರಿಸಿ, ಫಲ ಅಪೇಕ್ಷಿಸುವುದು ಸಾಧುವಲ್ಲ, ಅದರಲ್ಲಿಯೂ, ಬೇರೊಬ್ಬರಿಗೆ ಸಹಾಯ ಮಾಡದೇ, ಅವರಿ೦ದ ಸಹಾಯ ಅಪೇಕ್ಷಿಸುವುದು ಅಸಾಧುವಾದುದು!

೨೦.ದೀರ್ಘಕಾಲ ಹೊಗೆಯಾಡುತ್ತಿರುವುದಕ್ಕಿ೦ತಲೂ ಕ್ಷಣಕಾಲ ದೇದೀಪ್ಯಮಾನವಾಗಿ ಬೆಳಗುವುದು ಲೇಸು.

ಮೂಕ ರೋದನ !

ವೇದದ ಮಹತ್ವವನ್ನರಿಯುವ ಮತ್ತು ವೇದ ಸಂತುಲಿತ ಜೀವನವನ್ನು ನಡೆಸಲು ಬಯಸುವ ಎಲ್ಲ ದೇಶಬಾಂಧವರ ಆದ್ಯ ಕರ್ತವ್ಯ ವೇದದಷ್ಟೇ ಮಹತ್ವವನ್ನು ಪಡೆದು ನಮ್ಮೆಲ್ಲರ ಜೀವನದ ಅವಿಭಾಜ್ಯ ಅಂಗವಾಗಿರುವ ಗೋಮಾತೆಯ ರಕ್ಷಣೆ. ಅದರಲ್ಲೂ ಭಾರತೀಯ ಗೋ ತಳಿಗಳು ದಿನೇ ದಿನೇ ಕ್ಷೀಣಿಸುತ್ತಿವೆ. ಉತ್ತರಕರ್ನಾಟಕದ ಬಹುಭಾಗಗಳಲ್ಲಿ ದಲ್ಲಾಳಿಗಳಿಗೆ ರಾಸುಗಳ ಮಾರಾಟ್ ನಡೆದೇ ಇದೆ. ಇದೀಗ ಕರ್ನಾಟಕ ಸರಕಾರ ಗೋನಿಷೇಧ ಕಾಯ್ದೆಯನ್ನು ಜಾರಿಗೊಳಿಸುವುದರಿಂದ ಆಕಳುಗಳನ್ನು ಕಾಳಸಂತೆಯಲ್ಲೋ ಅಥವಾ ಹೊರನಾಡಿಗರಿಗೋ, ಪರನಾಡಿಗರಿಗೋ ಮಾರಾಟಮಾಡುತ್ತಾರೆ. ಬದುಕಲು ಗಂಜಿಹುಡುಕುವ ಸ್ಥಿತಿಯಲ್ಲಿರುವ ರೈತ ತನ್ನುಳಿವಿಗಾಗಿ ಇಂತಹ ಮುಗ್ಧ, ಸಾತ್ವಿಕ ಜೀವಿಗಳನ್ನು ಬಲಿಕೊಡುತ್ತಿದ್ದಾನೆ. ಇದನ್ನು ತಪ್ಪಿಸಲು ಮಠ-ಮಾನ್ಯಗಳು ಪಹರೆ ನಡೆಸುತ್ತಿದ್ದರೂ, ಜನ ಜಾಗ್ರತಿ ಹಮ್ಮಿಕೊಂಡಿದ್ದಾರೂ ಇದಿನ್ನೂ ಪೂರ್ತಿಯಾಗಿ ಅಳವಡಿಕೆಯಾಗಿಲ್ಲ.

ದಿನವೂ ಹುಲ್ಲು-ನೀರನ್ನು ಸ್ವೀಕರಿಸುತ್ತ ಅಮೃತತುಲ್ಯ ಹಾಲನ್ನು ನಮಗೀಯುವ ಗೋವು ನಮಗೆಲ್ಲ ಪ್ರಾತಃಸ್ಮರಣೀಯ, ಮಾತ್ರವಲ್ಲ ನೀವೆಲ್ಲ ತಿಳಿದಂತೆ ಗೋವಿನಲ್ಲಿಯೇ ಎಲ್ಲಾ ದೇವತೆಗಳ ವಾಸವಿದೆ ಎಂದು ಭಾವಿಸಿದ್ದೇವೆ ನಾವು. ನಮ್ಮ ಗೃಹಪ್ರವೇಶಕ್ಕಾಗಲೀ ಒಳ್ಳೆಯ ಕಾರ್ಯಕ್ರಮಗಳಲ್ಲಾಗಲೀ ಗೋಪೂಜೆ ಕಡ್ಡಾಯವಾಗಿದೆ -ಇದು ನಮ್ಮ ಆರ್ಷೇಯ ವೇದ ಸಂಸ್ಕೃತಿ. ಉಂಡಮನೆಗೆ ಎರಡು ಬಗೆಯಬೇಡ ಎನ್ನುವುದು ಗಾದೆ, ಆದರೆ ಹಾಲುಂಡ ಮನೆಯನ್ನೇ ನಾವು ಕೆಡವಲು ಹೊರಟಿದ್ದೇವೆ. ವನ್ಯ ಪ್ರಾಣಿಗಳಿಗಾದರೂ ರಕ್ಷಣೆ ಇದೆ ಆದರೆ ನಮ್ಮ ನಡುವೆಯೇ ಇದ್ದು ನಿತ್ಯವೂ ನಮಗೆ ಹಾಲನ್ನು ಸುರಿಸಿ ಬದುಕು ಹಸನಾಗಿಸುವ ಗೋಮಾತೆಯನ್ನು ಮಾತ್ರ ನಾವು ಉಡಾಫೆಮಾತುಗಳಿಂದ ಇನ್ನೂ ಇನ್ನೂ ಇನ್ನೂ ದೂರ ಇಟ್ಟಿದ್ದೇವೆ.

ಕಾಲಘಟ್ಟದಲ್ಲಿ ವೇದದ ತತ್ವ ಸಾರುತ್ತದೆ - ಬೆಳಿಗ್ಗೆ ಎದ್ದು ಶೌಚಾದಿ ನಿತ್ಯಕರ್ಮ ಮುಗಿಸಿ ರಾತ್ರಿ ಕಂಡ ಕೆಟ್ಟ ಕನಸಿನಿಂದ ನೊಂದಿದ್ದರೆ ಅದನ್ನು ಗೋವಿನ ಕಿವಿಯಲ್ಲಿ ಹೇಳಿ ಪ್ರಾರ್ಥಿಸು ! ತಮಗೆಲ್ಲ ಇದು ತಿಳಿದಿರಬಹುದು. ನನ್ನ ತಂದೆಯ ದಿನಚರಿ ಇವತ್ತಿಗೂ ಇದೇ ಇದೆ. ಇದರರ್ಥ ಗೋವು ನಮ್ಮ ಅಹವಾಲನ್ನು ಸ್ವೀಕರಿಸುತ್ತದೆ ಎಂದಲ್ಲವೇ? ಅದೇ ಬಯಲುನಾಡಿನ ಮಠವೊಂದರಲ್ಲಿ ಮೂಕಪ್ಪ ಸ್ವಾಮಿಗಳೆಂಬ ಹೆಸರಿನಲ್ಲಿ ಯಾವ ಒಬ್ಬ ಸನ್ಯಾಸಿಗೂ ಕಡಿಮೆ ಇರದ ಆಚರಣೆ ತೋರುವ ಮೂಕ ಬಸವ ಸ್ವಾಮಿಗಳನ್ನು ನಾವು ನೋಡುತ್ತೇವೆ. ಅಂದಮೇಲೆ ಕೇವಲ ಮಾತು ಬಂದರೆ ಮಾತ್ರ ಎಲ್ಲವೂ ತಿಳಿಯುತ್ತದೆ ಇಲ್ಲದಿದ್ದರೆ ಇಲ್ಲ ಎಂಬ ನಮ್ಮ ಭಾವನೆ ಸಲ್ಲ. ಆದರೂ ದೈವ ಕೊಟ್ಟ ಆ ಶರೀರದಲ್ಲಿ ತನ್ನನ್ನು ತಾನು ಉಳಿಸಿಕೊಳ್ಳಲು ಬೇಕಾಗಿ ಹೋರಾಡುವ ಅನುಕೂಲಗಳಿಲ್ಲ.

ಅನುಭಾವಿಗಳಾದ ತಮಗೆಲ್ಲ ಹೆಚ್ಚಿಗೆ ಹೇಳಿ ಕೇಳಲಾರೆ. ನನ್ನದೊಂದು ಸಣ್ಣ ಕೋರಿಕೆ, ಎಲ್ಲೆಲ್ಲಿ ಇಂತಹ ಅನಾಹುತಗಳು ನಡೆಯುತ್ತವೆಯೋ ಅದನ್ನು ತಡೆಗಟ್ಟಲು ನಾವೆಲ್ಲ ಶ್ರಮಿಸೋಣ ಎಂಬುದು. ಇದಕ್ಕೆ ತಮ್ಮೆಲ್ಲರ ಸಹಮತವನ್ನು ಯಾಚಿಸುತ್ತೇನೆ. ದಯವಿಟ್ಟು ನಾವು ಬದುಕುಪೂರ್ತಿ ಹಾಲುಂಡ ಮನೆಗೆ ಎರಡು ಬಗೆಯುವುದು ಬೇಡ ಅಲ್ಲವೇ?


ಸಚಿತ್ರ ಸುದ್ದಿ ಋಣ -ವಿಜಯಕರ್ನಾಟಕ ದಿನಪತ್ರಿಕೆ


[ಮೇಲಿನ ಚಿತ್ರವನ್ನು ಕ್ಲಿಕ್ಕಿಸಿ ದೊಡ್ಡದು ಮಾಡಿ ಸುದ್ದಿ ತಿಳಿದುಕೊಳ್ಳಬಹುದು]


ಮೂಕ ರೋದನ !

ನನ್ನೊಡೆಯ ಗೆಣೆಕಾರ ನಿನಗೆರಗಿ ಬೇಡುವೆನು
ಮಾರದಿರು ನನ್ನನೀಗ
ಚೆನ್ನಾಗಿ ಬಾಳೆಂದು ಮನಪೂರ್ತಿ ಹರಸಿಹೆನು
ತೂರದಿರು ಕಟುಕಗೀಗ

ಹನ್ನೆರಡು ಮಕ್ಕಳನು ಹೆತ್ತು ಕೊಟ್ಟೆನು ನಿನಗೆ
ಹಾಲುಣಿಸಿ ಬಹಳ ದಿನವು
ಇನ್ನೆರಡು ವರುಷದಲಿ ಆಯುಷ್ಯ ಮುಗಿಯುವುದು
ನೀರುಣಿಸು ಉಳಿದ ದಿನವೂ

ನಿನ್ನ ಮಕ್ಕಳ ಕಂಡೆ ಮಡದಿ ಕೊಟ್ಟುದನುಂಡೆ
ನನ್ನೆಣಿಕೆ ಮೀರಿ ನೆಡೆದು
ಮುನ್ನ ಹಾಲೀವಾಗ ಪ್ರೀತಿ ಸಿಹಿಸಿಹಿಯುಂಡೆ
ಇನ್ನದಕೆ ಜೀವ ಬರದು !

ಒಡೆಯ ಕೈಮುಗಿಯುವೆನು ಕಣ್ಣಲ್ಲೇ ಪ್ರಾರ್ಥಿಪೆನು
ಅಡಿಗಳಿಗೆ ಎರಗಿ ನಾನು
ಬಡವಾಯ್ತು ಈ ಜೀವ ಸಹಿಸಲಾರದು ನೋವ
ಒಡನಾಡಿ ಕ್ಷಮಿಸೆಯೇನು ?

ಹಣದ ಥೈಲಿಯ ಹುಡುಕಿ ಕಣಕಣದಿ ಅದ ನೆನೆದು
ಗುಣಮರೆತು ಹೋದೆಯಲ್ಲಾ?
ಹೆಣಗಾಟವೀ ಬದುಕು ದೈವ ಚಿತ್ರಿತ ತೊಡಕು
ಒಣಗುತಿದೆ ದೇಹವೆಲ್ಲ !

ಹುಲ್ಲು-ಕಸವನು ತಿಂದು ಸಿಗುವಂತ ನೀರ್ಕುಡಿದು
ಹಾಲೆರೆದೆ ಭವದಿ ನಿಮಗೆ
ಕಲ್ಲು-ಮಣ್ಣೊಳಗಿಟ್ಟು ಮುಚ್ಚಿಬಿಡು ದೇಹವನು
ಅಲ್ಲಿಗದು ಸಾಕು ನನಗೆ

ವಿ.ಆರ್.ಭಟ್
---------------------------------------------------------------
ಭಟ್ಟರೇ,
ಕಣ್ ತೇವವಾಗಿದೆ, ಸಂಕಟವಾಗಿದೆ. ಬಾಯ್ ಒಣಗಿದೆ.ಈ ದೃಶ್ಯವನ್ನು ನೋಡಲಾರೆ.
ಹೃದಯಶೂನ್ಯ ರಾಜಕಾರಣಿಗಳ ಕೈಗೆ ನಮ್ಮ ಜುಟ್ಟನ್ನು ಕೊಟ್ಟು ಈಗ ಸಂಕಟಪಡುವ ಸ್ಥಿತಿ ಬಂದೊದಗಿದೆ. ಗೋಹತ್ಯಾ ನಿಷೇಧ ಕಾನೂನಿಗೆ ವಿರುದ್ಧವಾಗಿ ಹೋರಾಟಮಾಡಲು ನಮ್ಮ ಮಾಜಿ ಪ್ರಧಾನಿಗಳು ಹೊರಟಿದ್ದಾರೆ.ಯಾಕೆ ಹೀಗೆ? ಎಲ್ಲಕ್ಕೂ ರಾಜಕೀಯವೇ? ನಮಗೆ ಈ ರಾಜಕಾರಣಿಗಳಿಂದ ಇನ್ನೇನೂ ಬೇಡ, ಪ್ರತ್ಯಕ್ಷ ದೇವತೆಯಾದ ಗೋಮಾತೆಯ ಮೇಲೆ ಇಂತಹಾ ಅತ್ಯಾಚಾರವೆಸಗುವ ರಾಕ್ಷಸರನ್ನು ಬಗ್ಗುಬಡೆಯಬಾರದೇ? ಇಲ್ಲೂ ರಾಜಕೀಯ ಬೇಕೆ? ಕಣ್ಣಲ್ಲಿ ನೀರು ಬರುವುದರ ಜೊತೆಗೆ ರಕ್ತ ಕುದಿಯುತ್ತಿದೆ, ನಮ್ಮ ಯುವಜಜಾಂಗಕ್ಕೇನಾಗಿದೆ? ಶ್ರೀ ರಾಮಚಂದ್ರಾಪುರದ ಮಠದ ರಾಘವೇಶಭಾರತಿಗಳಂತೂ ಗೋರಕ್ಷಣೆಗಾಗಿ ಅದೆಷ್ಟು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದಾರೋ! ಆದರೂ ನಿರಂತರ ಗೋಹತ್ಯೆ ನಡೆಯುತ್ತಿದೆಯಲ್ಲಾ! ಗೋಹತ್ಯಾ ನಿಶೇಧ ಕಾನೂನಿಗೆ ಪ್ರತಿಭಟಿಸುವ ನಮ್ಮ ರಾಜಕಾರಣಿಗಳ ಶೈಲಿ ಹೇಗಿದೆ, ಗೊತ್ತಾ? ಜಿಲ್ಲಾಧಿಕಾರಿಗಳ ಕಛೇರಿಯ ಮುಂದೆ ಗೋಮಾಂಸ ಭಕ್ಷಿಸಿ ಪ್ರತಿಭಟಿಸಿದ ಅಸಹ್ಯಕರ ಪ್ರತಿಭಟನೆ ನಡೆದಿದೆ!
ತಾಯಿಯ ಹಾಲುಂಡು ಬೆಳೆಯುವುದು ಮಗುವಾಗಿದ್ದಾಗ ೧-೨ ವರ್ಷಗಳು. ಇನ್ನು ಜೀವನ ಪರ್ಯಂತ ಗೋಮಾತೆಯ ಹಾಲಿನಿಂದಲೇ ಬೆಳೆವ ನಾವು ಎಂತಹಾ ನೀಚರಾಗಿ ವರ್ತಿಸುತ್ತಿದೇವೆ?!
ಹಾ!! ಈ ನೀಚ ಪ್ರತಿಭಟನೆಯೆಲ್ಲಾ ರಾಜಕೀಯ ಪ್ರೇರಿತ. ವೈಯಕ್ತಿಕವಾಗಿ ನೀವು ರಾಜಕಾರಣಿಗಳನ್ನು ಮಾತನಾಡಿಸಿದರೆ ನೂರಕ್ಕೆ ೯೫ ಜನ ರಾಜಕಾರಣಿಗಳಿಗೆ ಗೋಹತ್ಯೆ ನಿಷೇಧವಾಗಬೇಕೆಂಬ ಮನಸ್ಸು. ಆದರೆ ಇದು ಎಲ್ಲಿ ಬಿ.ಜೆ.ಪಿ ಯವರಿಗೆ ಇದರ ಲಾಭವಾಗುತ್ತದೋ ಎಂದು ಕೆಟ್ಟ ರಾಜಕಾರಣ!
ಜನಸಾಮಾನ್ಯರಾದ ನಮಗೆ ಈ ರಾಜಕಾರಣ ಬೇಕೆ? ಯಾವ ಪಕ್ಷವಾದರೇನು? ಉತ್ತಮ ಆಡಳಿತ ಮಾಡಿದರಾಯ್ತು. ಈಗಿನ ಬಿ.ಜೆ.ಪಿ ಆಡಳಿತದಲ್ಲಿ ಜನರಿಗೆ ಬೇಸರಮೂಡಿಯಾಗಿದೆ.ಮುಂದೆ ವಿರೋಧ ಪಕ್ಷದವರೇ ಆಳಲು ಅವಕಾಶವಿದ್ದೇ ಇದೆ. ಜನ ಜಾಗೃತಿ ಮೂಡಿಸಿ ಬೇರೆ ಸರ್ಕಾರದ ರಚನೆಯಾಗಲಿ. ಆದರೆ ಯಾವ ಪಕ್ಷದ ಸರ್ಕಾರವಾದರೂ ಇರಲಿ, ಇಲ್ಲಿ ನೆಲದ ಸಂಸ್ಕೃತಿಯುಳಿಸುವ ಹೊಣೆ ಎಲ್ಲರದ್ದೂ ಅಲ್ಲವೇ? ಅದು ಯಾವ ಪಕ್ಷದ ಗುತ್ತಿಗೆಯೂ ಅಲ್ಲ. ಹಾಗೆ ನೋಡಿದರೆ ವಿರೋಧ ಪಕ್ಷಗಳು ಗೋಹತ್ಯಾ ನಿಷೇಧಕಾನೂನಿಗೆ ಬೆಂಬಲಿಸಿ ಜನರ ಒಲವು ಪಡೆಯಬಹುದಿತ್ತು. ಈಗಲೂ ಕಾಲ ಮಿಂಚಿಲ್ಲ. ಈ ನೆಲದ ಪರಂಪರೆಗೆ ಮಾರಕವಾಗುವ ಯಾವುದೇ ವಿಷಯದಲ್ಲಿ ಪಕ್ಷಬೇಧಮರೆತು ಹೋರಾಡಿದರೆ ದೇಶಕ್ಕೂ ಒಳ್ಳೆಯದು, ಜನರ ಒಲವನ್ನೂ ವಿರೋಧಪಕ್ಷಗಳು ಜಾಣತನದಿಂದ ಪಡೆಯಲೂಬಹುದು. ರಾಜಕೀಯ ಮಾತು ಬೇಡವೆಂದರೂ ಅದಿಲ್ಲದೆ ಏನೂ ಇಲ್ಲ. ಹಾಗಾಗಿ ಕ್ಷಮೆ ಇರಲಿ.
-ಹರಿಹರಪುರಶ್ರೀಧರ್
------------------------------------------
ಈ ರೀತಿ ಗೋವುಗಳನ್ನು ನಿರ್ದಯವಾಗಿ ಸಾಗಿಸುವುದನ್ನು ನೀವಾರಾದರೂ ಕಂಡರೆ,
ಕಸಾಯಿಖಾನೆಗೆ ಗೋವುಗಳನ್ನು ಕರೆದೊಯ್ಯುತ್ತಿರುವುದನ್ನು ಕಂಡರೆ,
ನಾವೂ ನೀವು ಅವುಗಳನ್ನು ರಕ್ಷಿಸಬಹುದು. ಅಲ್ಲಿಯೇ ಇರುವ ಜನರನ್ನು ಒಂದುಗೂಡಿಸಿ, ಗೋವುಗಳನ್ನು ತಡೆದು, ಅಗತ್ಯಬಿದ್ದರೆ ಪೋಲೀಸರ ಸಹಾಯವನ್ನೂ ಪಡೆಯಬಹುದು ಗೋರಕ್ಷಣಾ ಕೇಂದ್ರಗಳಿಗೆ ಅವುಗಳನ್ನು ಸಾಗಿಸಬಹುದು.
ಅದಕ್ಕಾಗಿ ಸಂಪರ್ಕ ದೂರವಾಣಿಸಂಖ್ಯೆಗಳು -
ಶ್ರೀ ರಾಜು - 98447 48501
ಮತ್ತು
ಗೋಶಾಲೆ - 08182 260947.
ಹೆಚ್ಚಿನ ಮಾಹಿತಿ ಮಾರ್ಗದರ್ಶನಕ್ಕಾಗಿಯೂ ಇವರನ್ನು ಸಂಪರ್ಕಿಸಬಹುದು.
- ಸುಧಾಕರ ಶರ್ಮಾ