Pages

Wednesday, June 30, 2010

ಜೀವನ ಬುನಾದಿ -೪-


ಯಜುರ್ವೆದದಲ್ಲಿ ನಾವು ಈ ಸ್ಪಷ್ಟವಾದ ಮಂತ್ರವನ್ನು ಕಾಣುತ್ತೇವೆ:
ತಸ್ಮಾದ್ಯಜ್ಞಾತ್ ಸರ್ವಹುತ: ಋಚ: ಸಾಮಾನಿ ಜಜ್ಞಿರೇ|
ಛಂದಾಂಸಿ ಜಜ್ಞಿರೇ ತಸ್ಮಾದ್ಯಜುಸ್ತಸ್ಮಾದಜಾಯತ (ಯಜು.೩೧.೭)
[ತಸ್ಮಾತ್ ಸರ್ವಹುತಃ ಯಜ್ಞಾತ್] ಆ ಸರ್ವದಾತೃವೂ, ಉಪಾಸನೀಯನೂ ಆದ ಭಗವಂತನಿಂದ [ಋಚ ಸಾಮಾನಿ ಜಜ್ಞಿರೇ] ಋಗ್ವೇದ, ಸಾಮವೇದಗಳು ಪ್ರಕಟವಾದವು. [ತಸ್ಮಾತ್ ಛಂದಾಂಸಿ ಜಜ್ಞಿರೇ] ಅವನಿಂದ ಅಥರ್ವ ಮಂತ್ರಗಳು ಪ್ರಕಟವಾದವು. [ತಸ್ಮಾತ್ ಯಜುಃ ಅಜಾಯತ] ಅವನಿಂದ ಯಜುರ್ವೇದವು ಪ್ರಕಾಶಿತವಾಯಿತು. ಪುನಃ ನಾವು ಅಥರ್ವ ವೇದದಲ್ಲಿ ಈ ಸ್ಪಷ್ಟಾರ್ಥ ಬೋಧಕವಾದ ಮಂತ್ರವನ್ನು ನೋಡುತ್ತೇವೆ:
ಯಸ್ಮಾದೃಚೋ ಅಪಾತಕ್ಷನ್ಯಜುರ್ಯಸ್ಮಾದಪಾಕಷನ್
ಸಾಮಾನಿ ಯಸ್ಯ ಲೋಮಾನ್ಯಥರ್ವಾಂಗಿರಸೋ ಮುಖಂ
ಸ್ಕಂಭಂ ತಂ ಬ್ರೂಹಿ ಕತಮ ಸ್ವಿದೇವ ಸಃ || (ಅಥರ್ವ.೧೦.೭.೨೦)
[ಯಸ್ಮಾತ್] ಯಾವನಿಂದ [ಋಚಃ ಅಪಾತಕ್ಷನ್] ಋಗ್ವೇದ ಮಂತ್ರಗಳು ಪ್ರಕಾಶಿತವಾದವೋ [ಯಸ್ಮಾತ್] ಯಾವನಿಂದ [ಯಜುಃ ಅಪಾಕಷನ್] ಯಜುರ್ವೇದ ಪ್ರಕಟವಾಯಿತೋ [ಸಾಮಾನಿ] ಸಾಮ ಮಂತ್ರಗಳು [ಯಸ್ಯ ಲೋಮಾನಿ] ಯಾವನ ಸೂಕ್ಷ್ಮ ನಾಳಗಳಂತಿವೆಯೋ [ಅಥರ್ವಾಂಗಿರಸಃ] ಅಂಗಿರಾ ಋಷಿಯಿಂದ ಹೊರ ಬಂದ ಅಥರ್ವ ವೇದವು [ಮುಖಮ್] ಯಾವನ ಮುಖದಿಂದ ಮುಖ್ಯವಾಗಿದೆಯೋ [ತಂ ಸ್ಕಂಭಂ ಬ್ರೂಹಿ] ಅವನನ್ನು ವಿಶ್ವಾಧಾರನೆಂದು ಹೇಳು. [ಸಃ] ಅವನು [ಕತಮಃ ಸ್ವಿತ್ ಏವ] ಅತ್ಯಂತ ಆನಂದಸ್ವರೂಪನೇ ಆಗಿದ್ದಾನೆ.
ಈ ಎರಡು ಮಂತ್ರಗಳೂ ಸ್ಪಷ್ಟವಾಗಿ ನಾಲ್ಕು ವೇದಗಳ ಪ್ರಕಾಶಕನೂ ಪರಮಾತ್ಮನೇ ಎಂದು ಸಾರುತ್ತಿವೆ. ನಾಲ್ಕು ವೇದಗಳೂ ಅಪೌರುಷೇಯ ಜ್ಞಾನಸಾಗರಗಳಾಗಿವೆ. ಆ ವೇದಗಳು ಪೂರ್ಣತಃ ಬುದ್ಧಿಯುಕ್ತವೂ, ವೈಜ್ಞಾನಿಕವೂ, ಸರ್ವಹಿತಸಾಧಕವೂ ಆದ ದಿವ್ಯಜ್ಞಾನದಿಂದ ಪರಿಪ್ಲುತವಾಗಿವೆ. ಕೇವಲ ಯಾವುದೋ ಒಂದು ಕಾಲದ, ಯಾವುದೋ ಒಂದು ದೇಶದ, ಯಾವುದೋ ಒಂದು ಜನಾಂಗದ ಶಾಸ್ತ್ರಗಳಾಗಿರದೆ, ಸಾರ್ವಕಾಲಿಕವೂ, ಸಾರ್ವಭೌಮವೂ, ಸಮಸ್ತ ಮಾನವಸಮಾಜಕ್ಕೂ ಏಕಪ್ರಕಾರವಾಗಿ ಅನ್ವಯಿಸುವಂತಹುದೂ ಆದ ನಿರ್ಮಲಜ್ಞಾನದ ವಿಶಾಲ ಆಕರಗಳಾಗಿವೆ.
-ಕವಿ ನಾಗರಾಜ್