Pages

Friday, August 3, 2012

ಚನ್ನರಾಯಪಟ್ಟಣದಲ್ಲಿ ಉಪಾಕರ್ಮದ ವಿಶೇಷ ಅಗ್ನಿಹೋತ್ರ

ಬೇಲೂರಿನ ವೇದಾಧ್ಯಾಯೀ ಶ್ರೀ ವಿಶ್ವನಾಥಶರ್ಮರು ಚನ್ನರಾಯಪಟ್ಟಣದ ಚೈತನ್ಯ ಶಾಲೆಯ ಆವರಣದಲ್ಲಿ ಕಳೆದ ಎರಡು ಮೂರು ವರ್ಷಗಳಿಂದ ವೇದಪಾಠ ಮಾಡುತ್ತಿದ್ದು ಇವರ ವಿದ್ಯಾರ್ಥಿಗಳಿಗಾಗಿ ಶ್ರಾವಣ ಪೂರ್ಣಿಮೆಯ ಸಂಜೆ ವಿಶೇಷ ಅಗ್ನಿಹೋತ್ರವನ್ನು ನೆರವೇರಿಸಿದರು. ಹೋಮದ ಅಂತ್ಯದಲ್ಲಿ ಉಪಾಕರ್ಮದ ವಿಶೇಷವನ್ನು ಶ್ರೀ ಶರ್ಮರು ತಿಳಿಸಿದರು. ಅದರ ಫೋಟೊ ಮತ್ತು ಆಡಿಯೋ ಕ್ಲಿಪ್ ನ್ನು ವೇದಸುಧೆಯ ವಾಚಕರಿಗಾಗಿ ಪ್ರಕಟಿಸಲಾಗಿದೆ.

ಗೃಹಪ್ರವೇಶ


ಒಂದು ಭಾನುವಾರ ನನ್ನ ಗುರುನಾಥರ ಬಳಿಗೆ ಹೋಗಿದ್ದೆವು. ಅಲ್ಲಿ ನಮ್ಮಂತೆಯೇ ಹಲವಾರು ಬಂಧುಗಳು ಬಂದಿದ್ದರು.ಆ ಸಮಯದಲ್ಲಿ ಬೆಂಗಳೂರಿನಿಂದ   ಬಂದ ಗುರು ಬಂಧು ಒಬ್ಬರು ತಮ್ಮ ಮನೆಯ ಗೃಹಪ್ರವೇಶಕ್ಕಾಗಿ ಒಂದು ಒಳ್ಳೆ ದಿನವನ್ನು ನಿಗಧಿ ಮಾಡಿ ಹೋಗಲು ಬಂದಿದ್ದರು.  ಆ ಸಮಯದಲ್ಲಿ ನಡೆದ ಸಂಭಾಷಣೆಯ ಸಾರವಿದು.

ಗುರುನಾಥರು : ಏನ್ಸಾರ್, ಬಂದಿದ್ದು?

ಗುರುಬಂಧು : "ಏನಿಲ್ಲ, ಮನೆಯೆಲ್ಲ ಮುಗಿಯಿತು, ಇನ್ನು ಗೃಹ ಪ್ರವೇಶ ಮಾಡಿದರಾಯಿತು. ಅದಕ್ಕಾಗಿ ತಮ್ಮಲ್ಲಿ ಒಂದು ಒಳ್ಳೆ ದಿನ ನಿಷ್ಕರ್ಷೆ ಮಾಡಿಕೊಂಡು ಹೋಗೋಣ ಎಂದು ಬಂದೆವು." ಎಂದು ಹೇಳಿ ಗಂಡ ಹೆಂಡತಿ ಇಬ್ಬರು ಗುರುನಾಥರ ಪಾದಕ್ಕೆ ನಮಸ್ಕರಿಸಿದರು.

ಗುರುನಾಥರು: " ಗೃಹಪ್ರವೇಶವೇ? ಅದನ್ನು ಈಗಾಗಲೇ ಹಲವಾರು ಜನ ಮಾಡಿದ್ದಾರಲ್ಲ?  ಅಲ್ಲವೇ? " ಎಂದು ನಮ್ಮ ಕಡೆ ನೋಡಿ ಕಣ್ಣು ಮಿಟುಕಿಸಿ ನಸುನಕ್ಕರು.

ಗುರುಬಂಧು   ಪತ್ನಿ : "ಇಲ್ಲ ಗುರುಗಳೇ, ಗೃಹಪ್ರವೇಶ ಇನ್ನು ಆಗಿಲ್ಲಾ." ಎಂದರು ಆತುರದಲ್ಲಿ.

ಗುರುನಾಥರು : " ಏನಮ್ಮಾ ಹೀಗೆ ಹೇಳುತ್ತಾ ಇದ್ದಿಯಾ?  ಗಾರೆ ಕೆಲಸದವನು, ಲೈಟ್   ಕೆಲಸದವನು, ನಲ್ಲಿ ಕೆಲಸದವನು, ಬಣ್ಣ ಬಳಿಯುವವನು, ಇನ್ನು ಪ್ರತಿ ದಿನಾ, ನೀವು ನಿಮ್ಮ ಸ್ನೇಹಿತರು ಎಲ್ಲರು ಆ ಗೃಹದ ಪ್ರವೇಶ ಮಾಡಿದಿರಲ್ಲಾ!  ಇನ್ನ್ಯಾವ ಗೃಹಪ್ರವೇಶನಮ್ಮಾ? " ಎಂದು ಸ್ವಲ್ಪ ನಗೆಯಾಡುತ್ತಲೇ  ಪ್ರಶ್ನೆ ಮಾಡಿದರು.

ಗುರು ಬಂಧು ಮತ್ತು ಪತ್ನಿ : ಏನೂ ಗೊತ್ತಾಗದೆ ಕಕ್ಕಾಬಿಕ್ಕಿಯಾಗಿ ನಿಂತು " ಅವರೆಲ್ಲ ಬರದೆ ಇದ್ದರೆ ಕೆಲಸ ಹೇಗಾಗುತ್ತೆ?"ಎಂದು ನಗುತಂದುಕೊಂಡು  ನಕ್ಕರು.

ಗುರುನಾಥರು : " ಮತ್ತೆ ಇನ್ನು ಯಾರಿಗೆ ಗೃಹಪ್ರವೇಶ? ಎಲ್ಲರು ಬಂದ ಹಾಗೆ ಆಗಿದೆಯಲ್ಲ?" 

ಗುರುಬಂಧು ಪತ್ನಿ : " ನೆಂಟರು ಇಷ್ಟರು, ಬಂಧು ಬಳಗ ಎಲ್ಲರನ್ನು ಒಳ್ಳೆ ದಿನ ಕರೆದು ಊಟ ಹಾಕಬೇಡವೆ?" ಎಂದರು ಆಕೆ.

ಗುರುನಾಥರು  : " ಎಲ್ಲರನ್ನು ಕರೆದು ಊಟ ಹಾಕಬೇಕು!  ಮನೆ ಎಷ್ಟು ದೊಡ್ಡದಾಗಿದೆ, ಎಷ್ಟು ಚಂದವಾಗಿದೆ, ಎಂದು ಎಲ್ಲರಿಗು ತೋರಿಸಿ ಅವರ ಮೆಚ್ಚುಗೆ ಗಳಿಸಬೇಕು. ಅಲ್ಲವೇ ?" ಎಂದು ನಮ್ಮ ಕಡೆ ತಿರುಗಿ ನಗುತ್ತ " ನಿಮ್ಮ ಅತ್ತೆಯವರನ್ನ ಏನು ಮಾಡುತ್ತೀರಿ? " ಎಂದರು. 

ಗುರುಬಂಧು  ಪತ್ನಿ.: " ಅವರನ್ನೂ ಕರೆದುಕೊಂಡು ಬರುತ್ತೇವೆ."

ಗುರುನಾಥರು  " ಅಂದರೆ,  ಅವರು ಈಗ ನಿಮ್ಮ ಜೊತೇಲಿ ಇಲ್ಲವೇ ? " ಎಂದು ಆಶ್ಚರ್ಯ ವ್ಯಕ್ತ ಪಡಿಸಿದರು.

ಗುರುಬಂಧು ಪತ್ನಿ : ಈ ವಿಷಯ ಇವರಿಗೆ ಹೇಗೆ ಗೊತ್ತಾಯಿತು ಎಂದು ಅನುಮಾನಿಸುತ್ತ,   ಸ್ವಲ್ಪ ಮೌನದ ನಂತರ " ಇಲ್ಲ" ಎಂದರು.

ಗುರುನಾಥರು: " ಅಲ್ಲಮ್ಮಾ, ಮನೆದೇವರನ್ನು ಹೊರಗಡೆ ಇಟ್ಟು ಕಲ್ಲಿಗೆ  ಪೂಜೆ ಮಾಡಿದರೆ ಏನು ಭಾಗ್ಯ ಬರುತ್ತಮ್ಮ?  ನಿಮ್ಮ ಅತ್ತೇನ ವೃದ್ಧಾಶ್ರಮಕ್ಕೆ ಸೇರಿಸಿ ನೀವು ತುಂಬಾ ದೊಡ್ಡ ಮನೆ ಗೃಹ ಪ್ರವೇಶ ಮಾಡ್ತೀರಾ? ಹಸು ನಿಮ್ಮ ಮನೆಗೆ ಬಂದರೆ ಒಳ್ಳೇದು, ಆದರೆ ನಿಮ್ಮ ಅತ್ತೆ ?  ಏನು ಅನ್ಯಾಯ? ಮೊದಲು ನಿಮ್ಮ ಅತ್ತೆಯವರನ್ನ ಮನೆಗೆ ಕರೆದುಕೊಂಡು ಬನ್ನಿ. ಅವರಲ್ಲಿ ಕ್ಷಮಾಪಣೆ ಕೇಳಿ ಜೊತೆಯಲ್ಲಿ ಇಟ್ಟು ಕೊಳ್ಳಿ.  ಅವರ ಆಶೀರ್ವಾದ ಮೊದಲು ಪಡೆಯಿರಿ. ಅವರು ನಿಮ್ಮ ಮನಗೆ ಬಂದರೆ ಗೃಹಪ್ರವೇಶ ಆದಂತೆ. ಅದು ಬಿಟ್ಟು ನೀವು ಸಾವಿರ ಜನನ್ನ ಕರೆದು ಊಟ ಹಾಕಿ,ಉಡುಗೊರೆ   ಕೊಟ್ಟರು ಏನೂ ಪ್ರಯೋಜನವಿಲ್ಲ. ನಡೀರಿ, ನಡೀರಿ. " ಎಂದು ಕಟುವಾಗಿ ಹೇಳಿ ಮುಖ ತಿರುಗಿಸಿಬಿಟ್ಟರು.

ಅಲ್ಲಿದ್ದವರಿಗೆಲ್ಲ ಪರಮಾಶ್ಚರ್ಯ ಆಯಿತು.  ಗುರುಬಂಧು ಮತ್ತು ಅವರ ಪತ್ನಿಗೆ ತುಂಬಾ ಅವಮಾನವಾದಂತೆ ಆಯಿತು. ತಲೆ ತಗ್ಗಿಸಿ ನಿಂತು ಬಿಟ್ಟರು.  ಮತ್ತೇನಾದರೂ ಹೇಳಬಹುದೆಂದು ಅವರು ಸ್ವಲ್ಪ ಸಮಯ ಕಾದರು. ಗುರುನಾಥರು ಅವರಕಡೆ ನೋಡಲೇ ಇಲ್ಲ.  ಸ್ವಲ್ಪ ಸಮಯದ ನಂತರ " ಇನ್ನು ಯಾಕೆ ಇಲ್ಲೇ ಇದ್ದೀರಾ? ಹೋಗಿ ಮೊದಲು ಆಕೆಯನ್ನ ಮನೆಗೆ ಕರೆದು ತನ್ನಿ, ಆಮೇಲೆ ಬನ್ನಿ." ಎಂದು ಕಡ್ಡಿ ಎರಡು ತುಂಡು ಮಾಡಿದವರಂತೆ ಹೇಳಿಬಿಟ್ಟರು. ಅವರು ತಲೆ ತಗ್ಗಿಸಿ ಅಲ್ಲಿಂದ  ಹೊರಟರು.

 "ತಂದೆ ತಾಯಿಯ ಸೇವೆ ಮಾಡದೆ, ಏನು ಮಾಡಿದರು ಅದು ಕೇವಲ ಜನ ಮೆಚ್ಚಿಸಲು ಮಾತ್ರ. ಅವರ ಸೇವೆಯನ್ನು ಪ್ರಾಮಾಣಿಕವಾಗಿ ಮಾಡಿದರೆ , ದೇವರನ್ನು ಮೆಚ್ಚಿಸಬಹುದು.  ಅಲ್ಲವೇ ಸಾರ್? " ಎಂದರು ಗುರುನಾಥರು.

ಈಗ್ಗೆ ನಾಲ್ಕಾರು ವರ್ಷಗಳ ಹಿಂದೆ ಹೇಳಿದ ಆ ಮಾತು ಇಂದಿಗೂ ನನ್ನನ್ನು ಯಾವಾಗಲು ಎಚ್ಚರಿಸುತ್ತಲೇ ಇರುತ್ತದೆ.  ಯಾರಾದರು ಗೃಹಪ್ರವೇಶದ ಆಮಂತ್ರಣ ನೀಡಲು ಬಂದಾಗ ಈ ಘಟನೆ ತಟ್ಟನೆ ಜ್ಞಾಪಕಕ್ಕೆ ಬರುತ್ತದೆ.

ಆರ್ಯ ಸಮಾಜದಲ್ಲಿ ಉಪಾಕರ್ಮ

  ಈ ವರ್ಷದ ನನ್ನ    ಉಪಾಕರ್ಮ  ಬೆಂಗಳೂರಿನ ಆರ್ಯ ಸಮಾಜದಲ್ಲಿ ಮಾಡಿಕೊಳ್ಲಬೇಕೆಂದು ನಿರ್ಧರಿಸಿ ಅಲ್ಲಿ ಆಚರಿಸಿಕೊಂಡೆ. ಅಗ್ನಿಹೋತ್ರವನ್ನು ಈಗಾಗಲೇ ನಾನು ಮಾಡುತ್ತಿದ್ದುದರಿಂದ ನನಗೆ ಅಲ್ಲಿನ ವಿಧಿಗಳು ಆಪ್ಯಾಯಮಾನವಾಗಿ ಸಂತಸ ನೀಡಿದವು. ಉಪಾಕರ್ಮ ಸಂದರ್ಭದಲ್ಲಿ  ಉಪಾಕರ್ಮದ ಔಚಿತ್ಯವನ್ನು ಕುರಿತು ವೇದ ತರಂಗದ ಸಂಪಾದಕರಾದ ಶ್ರೀ ಶೃತಿಪ್ರಿಯರು ಮಾತನಾಡಿದರು. ಕೊನೆಯಲ್ಲಿ ವಯೋವೃದ್ಧರೂ ಜ್ಞಾನವೃದ್ಧರೂ ಆದ ಪಂಡಿತ್ ಸುಧಾಕರ ಚತುರ್ವೇದಿಯರಿಂದ ಆಶೀರ್ವಾದದದ ನುಡಿಗಳು.ಸುಮಾರು 120 ವರ್ಷದ ಪ್ರಾಯದಲ್ಲೂ  ಪಂಡಿತಜಿಯವರ ನೆನಪಿನ ಶಕ್ತಿ, ಸಮಾಜದ ಬಗ್ಗೆ ಅವರ ಕಳಕಳಿ ನಮಗೆಲ್ಲಾ ಸ್ಪೂರ್ತಿದಾಯಕವಾಗಿತ್ತು.  ವೃದ್ಧಾಪ್ಯದ ಸಹಜಕಾರಣದಿಂದ ಮಾತು ಸ್ವಲ್ಪ ಅಸ್ಪಷ್ತವಾಗಿದೆ ಎನಿಸ ಬಹುದು, ಆದರೆ ಅವರ ನೆನಪಿನ ಶಕ್ತಿ, ವಾಚಾರಿಕ ನೆಲೆ ನಮ್ಮೆಲ್ಲರಿಗೂ ಪ್ರೇರಣಾದಾಯಕವಾಗಿದೆ. ವೇದಸುಧೆಯ ಓದುಗರು  ಕೇವಲ ಹತ್ತು ನಿಮಿಷಗಳ ಎರಡು ಆಡಿಯೊ ಕ್ಲಿಪ್ ಗಳನ್ನು ಕೇಳಬೇಕೆಂದು ಕೋರುವೆ.